ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಬೀಸಿದ ಹೊಸಗಾಳಿ

Last Updated 2 ಜನವರಿ 2021, 19:30 IST
ಅಕ್ಷರ ಗಾತ್ರ

ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ರಾಜಕಾರಣದಲ್ಲಿ ಯುವಜನತೆಯ ಭಾಗವಹಿಸುವಿಕೆ ತುಂಬಾ ಕಡಿಮೆ. ಭಾರತದ ರಾಜಕೀಯ ಕ್ಷೇತ್ರದಲ್ಲಿರುವವರ ಸರಾಸರಿ ಪ್ರಾಯ ಐವತ್ತರ ಆಸುಪಾಸಿನಲ್ಲಿದೆ. ಪ್ರಪಂಚದಲ್ಲಿಯೇ ಬಲಿಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಡೆದ -ಅದರಲ್ಲೂ ಅತೀ ಹೆಚ್ಚು ಯುವಜನತೆಯನ್ನು ಹೊಂದಿದ– ಭಾರತದಂತಹ ರಾಷ್ಟ್ರದ ರಾಜಕಾರಣದಲ್ಲಿ ಯುವಶಕ್ತಿಯನ್ನು ತೊಡಗಿಸಬೇಕಿರುವುದು ಅತಿ ತುರ್ತುಗಳಲ್ಲಿ ಒಂದು.

ಸ್ವಾತಂತ್ರ್ಯಾನಂತರದ ಭಾರತೀಯ ರಾಜಕಾರಣ ವ್ಯವಸ್ಥೆಯತ್ತ ಕಣ್ಣಾಡಿಸಿದಾಗ ಅಥವಾ ರಾಜಕೀಯ ಮುತ್ಸದ್ದಿಗಳ ವಿಮರ್ಶೆಯನ್ನು ನೋಡಿದಾಗ ಇಲ್ಲವೆ ಯುವ ಚರ್ಚೆಗಳನ್ನು ಗಮನಿಸಿದಾಗ, ರಾಜಕಾರಣದಲ್ಲಿ ವಿದ್ಯಾವಂತ ಯುವ ಮನಸ್ಸುಗಳ ಸಹಭಾಗಿತ್ವದ ಕೊರತೆ ಯಾಕೆ ಉಂಟಾಯಿತು ಎಂಬುದನ್ನು ಈ ಕೆಳಗಿನಂತೆ ಗುರುತಿಸಬಹುದು.

ದೇಶದ ಆಡಳಿತ ವ್ಯವಸ್ಥೆಯಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರ ಪ್ರಕರಣ, ಎಲ್ಲೆಡೆ ಕಾಣುವ ಜಾತಿ ರಾಜಕೀಯದ ಹುನ್ನಾರ, ರಾಜಕೀಯ ಕ್ಷೇತ್ರದಲ್ಲಿ ಕಂಡುಬರುವ ಅಪರಾಧ ಪ್ರವೃತ್ತಿ, ಕುಟುಂಬ ರಾಜಕಾರಣ ಹಾಗೂ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸುವವರಿಗೆ ಮೂಲ ವಿದ್ಯಾರ್ಹತೆ ನಿಗದಿಪಡಿಸದಿರುವುದು – ಈ ಮುಂತಾದ ವಿಷಯಗಳನ್ನು ವಿದ್ಯಾವಂತ ಯುವಸಮೂಹವು ನೇತ್ಯಾತ್ಮಕವಾಗಿಯೇ ಕಾಣುತ್ತಿದೆ.

ಸ್ವಾತಂತ್ರ್ಯವನ್ನು ಬದುಕಿನ ಒಂದು ಮೂಲಭೂತ ಅನಿವಾರ್ಯವಾಗಿ ಅಂದಿನ ಯುವಜನ ಕಂಡದ್ದರಿಂದ ಸ್ವಾತಂತ್ರ್ಯಪೂರ್ವದಲ್ಲಿ ಯುವಕರ ಸಹಭಾಗಿತ್ವ ಪ್ರಬಲವಾಗಿತ್ತು. ಆದರೆ, ಸ್ವಾತಂತ್ರ್ಯದ ಬಳಿಕ ಭಾರತೀಯ ಯುವಜನ –ಅದರಲ್ಲೂ ವಿದ್ಯಾವಂತರಾದವರು– ತಮ್ಮ ಔದ್ಯೋಗಿಕ ಜೀವನಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟರು. ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ಅವರಿಗೆ ರಾಜಕಾರಣಕ್ಕಿಂತಲೂ ಔದ್ಯೋಗಿಕ ಕ್ಷೇತ್ರದ ಒಲವು ಹೆಚ್ಚು ಆಪ್ತವೆನಿಸಿತು. ಈ ಮನೋಭಾವವು ಸಹಜವಾಗಿ ಅವರನ್ನು ರಾಜಕೀಯ ವಲಯದಿಂದ ದೂರವಿಡಲು ಕಾರಣವಾಯಿತು.

ಪ್ರತಿಭಾವಂತ ಯುವಪಡೆಯು ರಾಜಕೀಯ ಕ್ಷೇತ್ರದ ತಾತ್ಕಾಲಿಕ ಗೌರವ ಪ್ರತಿಷ್ಠೆಗಳಿಗಿಂತ ಹೊರತಾದ ಒಂದು ಸುರಕ್ಷಿತ ವಲಯವನ್ನು ಸರ್ಕಾರದ ಉನ್ನತ ಉದ್ಯೋಗದಲ್ಲಿಯೋ ಜಾಗತೀಕರಣದ ಪ್ರಭಾವದಿಂದ ಉಂಟಾದ ಖಾಸಗಿ ವಲಯದ ಹುದ್ದೆಗಳಲ್ಲಿಯೋ ವ್ಯಾಪಾರ ವಹಿವಾಟುಗಳಲ್ಲಿಯೋ ಕಂಡುಕೊಳ್ಳುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದೂ ರಾಜಕೀಯ ಕ್ಷೇತ್ರದಲ್ಲಿ ಯುವಕರ ಪಾತ್ರವನ್ನು ಕಡಿಮೆಗೊಳಿಸಿತು. ಭಾರತೀಯ ರಾಜಕಾರಣದಲ್ಲಿ ಹಿರಿಯರ ಪಾತ್ರವೇ ಬಹುಮುಖ್ಯವಾಗಿ ತಲೆತಲಾಂತರದಿಂದ ಕಂಡುಬರುತ್ತಿರುವ ಕಾರಣ ಆ ಒಂದು ಸಿದ್ಧ ವ್ಯವಸ್ಥೆಯನ್ನು ಮೀರಿನಿಲ್ಲುವ ಮನೋಬಲದ ಕೊರತೆಯ ಕಾರಣವನ್ನೂ ಅಲ್ಲಗಳೆಯುವಂತಿಲ್ಲ.

ನಮ್ಮ ಸಂವಿಧಾನದ ಪ್ರಕಾರ, ಸ್ಥಳೀಯಾಡಳಿತದ ಚುನಾವಣೆಗೆ ಸ್ಪರ್ಧಿಸಲು 21 ವರ್ಷ ಆಗಿರಬೇಕು. ಅದೇ ವಿಧಾನಸಭೆ, ಲೋಕಸಭೆಯ ಉಮೇದುದಾರನಾಗಲು ಕನಿಷ್ಠ ಪ್ರಾಯ 25 ವರ್ಷ. ಅದೇ ರೀತಿ ರಾಜ್ಯಸಭೆ ಸದಸ್ಯನಾಗಲು, ಪ್ರಧಾನಿಯಾಗಲು 30 ವರ್ಷವಾಗಿರಬೇಕು. ರಾಷ್ಟ್ರಪತಿಯಾಗಲು 35 ವರ್ಷ ತುಂಬಿರಲೇಬೇಕು. ಸ್ವಾತಂತ್ರ್ಯ ಕಾಲಘಟ್ಟದ ಈ ಕಾನೂನುಗಳು ಅಥವಾ ನೀತಿ ನಿಯಮಗಳು ಭಾರತೀಯ ರಾಜಕಾರಣದಲ್ಲಿ ಯುವಜನತೆಯ ನಾಯಕತ್ವಕ್ಕೆ ಸಮಸ್ಯೆಗಳಾಗಿ ಕಂಡುಬರುತ್ತವೆ. ದಶಕಗಳ ಹಿಂದಿನ ಈ ನಿಯಮಗಳು ಇಂದು ಬದಲಾಗಬೇಕಿವೆ.

ಜಾಗತಿಕ ಮಟ್ಟದಲ್ಲುಂಟಾದ ಹಲವಾರು ಕ್ಷಿಪ್ರ ವೈಜ್ಞಾನಿಕ ಬದಲಾವಣೆಗಳು, ಸಾಹಿತ್ಯಕ, ಸಾಂಸ್ಕೃತಿಕ ಚಿಂತನೆಗಳು ಇಂದು ಬಲುಬೇಗನೇ ಮನುಷ್ಯನ ಜ್ಞಾನಶಾಖೆಗಳನ್ನು ವಿಸ್ತರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನ ವ್ಯವಸ್ಥೆಯಲ್ಲಿಯೂ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿಯೂ ಬದಲಾವಣೆಗಳು ಆಗಬೇಕಾದ ತುರ್ತು ಇದೆ. ಜರ್ಮನಿ, ಆಸ್ಟ್ರೇಲಿಯಾ, ಇಂಗ್ಲೆಂಡ್, ಬ್ರೆಜಿಲ್ ಈ ಮುಂತಾದ ದೇಶಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಜೆಯ ಕನಿಷ್ಠ ಪ್ರಾಯ 18 ವರ್ಷ ಎಂಬುದನ್ನು ನಾವಿಲ್ಲಿ ಗಮನಿಸಲೇಬೇಕು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಾ ಬಂದ ಈ ಸಂದರ್ಭದಲ್ಲಿ ನಾವು ಈ ಮೇಲಿನ ವಿಚಾರಗಳಲ್ಲಿ ಬದಲಾವಣೆಯನ್ನು ತರುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.

ದೇಶದ ಇತ್ತೀಚೆಗಿನ ಕೆಲವು ವರ್ಷಗಳ ರಾಜಕೀಯ ಆಗುಹೋಗುಗಳನ್ನು ಗಮನಿಸಿದರೆ ಈ ಮೇಲೆ ಹೇಳಿದ ವಿಷಯಕ್ಕೆ ಹೆಚ್ಚು ಮಹತ್ವ ಬಂದಿರುವುದು ಅತ್ಯಂತ ಅಭಿಮಾನದ ವಿಷಯ. ಭಾರತೀಯ ರಾಜಕಾರಣದಲ್ಲಿ ಯುವಮನಸ್ಸುಗಳ ಸಾಧನೆ ಹಾಗೂ ನಾಯಕತ್ವವು ಪ್ರಜಾಪ್ರಭುತ್ವದ ಹೊಸರೀತಿಯ ಚಿಂತನೆಗೆ ಕಾರಣವಾಗಿರುವುದನ್ನು ಕಾಣುತ್ತೇವೆ. ದೇಶದ ರಾಷ್ಟ್ರೀಯ ಅಥವಾ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಯುವಜನತೆಯ ಸಹಭಾಗಿತ್ವ ಹಾಗೂ ನಾಯಕತ್ವವು ದೇಶದ ಒಟ್ಟು ರಾಜಕೀಯ ಕ್ಷೇತ್ರದಲ್ಲಿ ಸಂಚಲನವನ್ನು ಉಂಟುಮಾಡಿರುವುದು ಸ್ವಾತಂತ್ರ್ಯಾನಂತರದ ಗುರುತಿಸಲೇಬೇಕಾದ ಹೊಸ ಬೆಳವಣಿಗೆಯೂ ಹೌದು.

ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್

ಭಾರತೀಯ ರಾಜಕೀಯ ಕ್ಷೇತ್ರವೆಂದರೆ ಅರವತ್ತು ವರ್ಷ ದಾಟಿದವರಿಗೆ ಮಾತ್ರ ಸೀಮಿತ; ಅಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವೇನೂ ಬೇಕಾಗಿಲ್ಲ ಎಂಬ ಕುಹಕದ ಮಾತುಗಳಿಗೆ ಉತ್ತರವೆಂಬಂತೆ ಈಗ ರಾಜಕೀಯ ವಾತಾವರಣದಲ್ಲಿ ನಿಧಾನವಾದ ಬದಲಾವಣೆ ಗಾಳಿ ಬೀಸುತ್ತಿದೆ. ಬೇರೆ ಬೇರೆ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದ ಯುವಕ ಯುವತಿಯರ ನಾಯಕತ್ವವು ದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಸದೃಢತೆಗೆ ಹೊಸ ಭಾಷ್ಯವನ್ನು ಬರೆಯುವ ಎಲ್ಲಾ ಸಾಧ್ಯತೆಯೂ ಇದೆ.

ಅರವಿಂದ ಕೇಜ್ರಿವಾಲ್, ಆದಿತ್ಯ ಠಾಕ್ರೆ, ದುಷ್ಯಂತ್ ಚೌಟಾಲ, ಪ್ರೀತಂ ಗೋಪಿನಾಥ್ ಮುಂಡೆ, ವಿಕ್ರಮಾದಿತ್ಯ ಸಿಂಗ್, ದೀಪೇಂದರ್ ಸಿಂಗ್ ಹೂಡ, ಜೈವೀರ್ ಶೇರ್ಗಿಲ್, ನಸ್ರತ್ ಜಹಾನ್ ಜೈನ್, ಜಾಮ್ಯಂಗ್ ತ್ಸೇರಿಂಗ್ ನಮ್ಗ್ಯಾಲ್, ಪೂನಮ್ ಮಹಾಜನ್, ಚಂದ್ರಾಣಿ ಮುರ್ಮು, ಪ್ರತಾಪ ಸಿಂಹ, ರಾಘವ್ ಚದ್ಧ, ಮಹುವಾ ಮೊಯಿತ್ರ, ಕನ್ಹಯ್ಯ ಕುಮಾರ್, ತೇಜಸ್ವಿ ಸೂರ್ಯ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಪ್ರಿಯಾಂಕ್‌ ಖರ್ಗೆ, ಪ್ರಜ್ವಲ್ ರೇವಣ್ಣ ಮುಂತಾದವರು ಈಗಾಗಲೇ ಭಾರತೀಯ ರಾಜಕಾರಣದಲ್ಲಿ ನಿಚ್ಚಳವಾದ ಛಾಪನ್ನು ಮೂಡಿಸಿದ್ದಾರೆ. ಇವರ ರಾಜಕೀಯ ಹಿನ್ನೆಲೆಗಳು ಅಥವಾ ತಾತ್ವಿಕ ವಿಷಯ ವಿಚಾರಗಳು ವಿಭಿನ್ನವಾದರೂ ಹೊಸರೀತಿಯ ರಾಜಕೀಯ ಚಿಂತನೆಗೆ, ದೇಶದ ಸಮಕಾಲೀನ ಆಶೋತ್ತರಗಳಿಗೆ, ಪ್ರಜೆಗಳ ಸಕಾಲಿಕ ಬೇಡಿಕೆಗಳಿಗೆ ಇವರ ನಾಯಕತ್ವ ಗುಣ ಹಾಗೂ ಕ್ರಿಯಾಶೀಲ ವ್ಯಕ್ತಿತ್ವವು ಕಾರಣವಾಗಿರುವುದನ್ನು ಕಾಣಬಹುದು.

ಇಲ್ಲಿ ಒತ್ತಿ ಹೇಳಲೇಬೇಕಾದ ಮತ್ತೊಂದು ಮಹತ್ವದ ವಿಷಯವಿದೆ. ಈ ಯುವನಾಯಕರೆಲ್ಲರೂ ಉನ್ನತ ಶಿಕ್ಷಣ ಪಡೆದವರು. ಅವರ ಜ್ಞಾನಶಾಖೆಗಳು ವಿಸ್ತಾರವಾದುವೂ ವಿಭಿನ್ನ ಸ್ತರಗಳಲ್ಲಿ ಇರುವಂತಹವೂ ಹೌದು. ಅವುಗಳು ವೈದ್ಯಕೀಯದಿಂದ ತೊಡಗಿ ತಂತ್ರಜ್ಞಾನ, ನ್ಯಾಯಶಾಸ್ತ್ರ, ಇತಿಹಾಸ, ವಾಣಿಜ್ಯಶಾಸ್ತ್ರ ಹಾಗೂ ಭಾಷೆ, ಸಾಹಿತ್ಯ ಕ್ಷೇತ್ರದಲ್ಲೂ ವಿಸ್ತರಿಸಿಕೊಂಡಿವೆ. ಜಗತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿರುವ ಈ ಕಾಲದಲ್ಲಿ, ಶ್ರೀಸಾಮಾನ್ಯನಿಗೂ ಕೃಷಿಕನಿಗೂ ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಂತ್ರಜ್ಞಾನದ ಆಗುಹೋಗುಗಳ ಕುರಿತು ಜ್ಞಾನವಿರಲೇಬೇಕಾಗುತ್ತದೆ. ಜನನಾಯಕರು ಇಂತಹ ವಿಷಯಗಳಲ್ಲಿ ವಿಶೇಷ ಪರಿಣತರಾಗಿರುವುದು, ವ್ಯವಸ್ಥೆಯ ಅಚ್ಚುಕಟ್ಟುತನಕ್ಕೆ ಶೋಭೆ ತರುವುದು. ಮಾತ್ರವಲ್ಲ ಯುವ ನಾಯಕರ ಅಧಿಕಾರಾವಧಿಯ ಸಾಧನೆಯು ಹೊಸತಲೆಮಾರಿಗೆ ಸ್ಫೂರ್ತಿ ಪ್ರೇರಣೆಯೂ ಆಗಬಲ್ಲುದು.

ಈ ಮೇಲೆ ಸೂಚಿಸಲಾದ ಯುವನಾಯಕರ ಸ್ವಸಾಮರ್ಥ್ಯವನ್ನು ಅಲ್ಲಗಳೆಯಲಾಗದು. ಆದರೆ ಇವರಲ್ಲಿ ಕೆಲವರನ್ನು ಹೊರತುಪಡಿಸಿದರೆ, ಬಹುಮಂದಿ ರಾಜಕೀಯ ಹಿನ್ನೆಲೆಯಿರುವ ಕುಟುಂಬದಲ್ಲಿ ಅಥವಾ ರಾಜಕೀಯ ಪರಂಪರೆಯಿರುವ ಮನೆಯಲ್ಲಿಯೇ ಹುಟ್ಟಿದವರು. ದೇಶದ ಶ್ರೀಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವ, ಕೂಲಿ ಕಾರ್ಮಿಕ, ಕೃಷಿಕ... ಹೀಗೆ ಭಿನ್ನ ಸ್ತರಗಳ ವ್ಯಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಚುಕ್ಕಾಣಿ ಹಿಡಿಯುವ ಸಂದರ್ಭ ಗಣನೀಯವಾಗಿ ಹೆಚ್ಚಾಗಬೇಕಾಗಿದೆ. ಹಾಗಾದಾಗ ಪ್ರಜಾಪ್ರಭುತ್ವದ ಮೂಲಕಲ್ಪನೆಗೆ ನಿಜವಾದ ನ್ಯಾಯ ದೊರಕುತ್ತದೆ.

ಐಪಿಎಸ್ ಆಗಿ ಕೆಲವು ವರ್ಷಗಳ ಕಾಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಕೆ. ಅಣ್ಣಾಮಲೈ ಹಾಗೂ ಐಎಎಸ್ ಆಗಿ ಜಿಲ್ಲಾಧಿಕಾರಿ ಹೊಣೆ ನಿಭಾಯಿಸಿದ ಸಸಿಕಾಂತ್‌ ಸೆಂಥಿಲ್, ಕರ್ನಾಟಕ ಪೊಲೀಸ್ ಸೇವೆಗೆ ಸೇರಿ, ಬಳಿಕ ಹುದ್ದೆಗೆ ರಾಜೀನಾಮೆ ನೀಡಿ, ಈಗ ಶಾಸಕರಾಗಿರುವ ಪಿ. ರಾಜೀವ್ ಅವರಂತಹ ಯುವತರುಣರು ಉನ್ನತವಾದ ಔದ್ಯೋಗಿಕ ಬದುಕಿಗೆ ರಾಜೀನಾಮೆಯನ್ನಿತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡಿರುವುದು ಇತ್ತೀಚೆಗಿನ ಹೊಸ ಬೆಳವಣಿಗೆಗಳು. ದೇಶದ ರಾಜಕಾರಣದ, ಆಡಳಿತದ ಆರೋಗ್ಯಪೂರ್ಣ ನಡೆಗೆ ಇಂತಹ ವ್ಯಕ್ತಿಗಳಿಂದ ಕೊಡುಗೆಗಳನ್ನು ನಿರೀಕ್ಷಿಸಬಹುದು. ಮಾತ್ರವಲ್ಲ ರಾಜಕೀಯ ಕ್ಷೇತ್ರವನ್ನು ಅಪವಿತ್ರವೆಂದು ಕಾಣುವ ಯುವ ಪ್ರತಿಭೆಗಳ ಮನಃಪರಿವರ್ತನೆಗೆ ಇವರಂಥವರು ಸ್ಫೂರ್ತಿಯಾಗಬಲ್ಲರು.

ಕೆ.ಅಣ್ಣಾಮಲೈ
ಕೆ.ಅಣ್ಣಾಮಲೈ

ಕಳೆದ ಡಿಸೆಂಬರ್‌ನಲ್ಲಿ ಕೇರಳದಲ್ಲಿ ನಡೆದ ಸ್ಥಳೀಯಾಡಳಿತ ಚುನಾವಣೆಯಲ್ಲಿ ತಿರುವನಂತಪುರದ ಮೇಯರ್ ಆಗಿ ಆಯ್ಕೆಯಾದವರು ಕೇವಲ 21 ವರ್ಷದ ಆರ್ಯ ರಾಜೇಂದ್ರನ್. ಇವರು ಈಗ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಆರ್ಥಿಕವಾಗಿ ಬಲಾಢ್ಯವಾದ ಕೌಟುಂಬಿಕ ಹಿನ್ನೆಲೆಯಿರುವವರಲ್ಲ. ಇವರ ತಂದೆ ಇಲೆಕ್ಟ್ರಿಶಿಯನ್ ಆಗಿ ದುಡಿಯುವವರು. ಕೇರಳ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ರಾಷ್ಟ್ರರಾಜಕಾರಣದಲ್ಲಿ 21 ವರ್ಷದ ಯುವತಿಯೊಬ್ಬಳು ರಾಜ್ಯದ ರಾಜಧಾನಿಯೊಂದರ ಮೇಯರ್ ಆಗಿ ಆಯ್ಕೆಯಾಗುವುದು ಒಂದು ಉತ್ತಮ ಹಾಗೂ ಅಪೂರ್ವ ಬೆಳವಣಿಗೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಒಂದು ಪಂಚಾಯಿತಿಗೆ ರೇಷ್ಮಾ ಮರಿಯಂ ರೋಯ್ (21 ವರ್ಷ) ಎಂಬ ಯುವತಿ ಅಧ್ಯಕ್ಷೆ. ಕಳೆದ ವಾರವಷ್ಟೇ ನಡೆದ ಕರ್ನಾಟಕದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಿದ್ದಾಗ ಗೆದ್ದು ಬಂದವರಲ್ಲಿ ಶೇ 50ರಷ್ಟು ಮಂದಿ ಯುವನಾಯಕರೆನ್ನುವುದು ಗಮನಾರ್ಹ ವಿಷಯ. ಇಂತಹ ಅಪೂರ್ವ ಬೆಳವಣಿಗೆಗಳಿಂದ ಅಥವಾ ಮುಖ್ಯವಾಗಿ ವಿದ್ಯಾವಂತರಾದ ಯುವತಿಯರು ಆಡಳಿತದ ಚುಕ್ಕಾಣಿ ಹಿಡಿಯುವುದರ ಮೂಲಕ ದೇಶದ ಸ್ತ್ರೀಸಶಕ್ತಿಕರಣ ಹಾದಿಗಳು ಸುಗಮಗೊಳ್ಳಬಹುದು.

2020 ಕೋವಿಡ್–19ರ ಕೆಲವು ಅನಿರೀಕ್ಷಿತ ಬೆಳವಣಿಗೆ ಹಾಗೂ ಅನಿವಾರ್ಯತೆ ಈ ಕಾಲಘಟ್ಟದ ಚುನಾವಣೆಯಲ್ಲಿ ಯುವ ಪ್ರಾತಿನಿಧ್ಯಕ್ಕೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂಬುದನ್ನೂ ಈ ಸಂದರ್ಭದಲ್ಲಿ ಹೇಳಬೇಕಾಗುತ್ತದೆ. ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಉಳಿಯುವ ಯುವ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆಯೆಂಬ ಕೂಗು ದೇಶದ ಕೆಲವು ಭಾಗಗಳಿಂದ ಕೇಳಿಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಅಸಡ್ಡೆ ತೋರುವ ಈ ಮನೋಭಾವ ಇಲ್ಲವಾಗಬೇಕು.

ದೇಶದ ಭವ್ಯವಾದ ಪರಂಪರೆಯ ಅರಿವು, ಚರಿತ್ರೆಯ ಆಳವಾದ ಪರಿಜ್ಞಾನ, ಹಿರಿಯರ ಮಾರ್ಗದರ್ಶನ, ಸಾಮಾಜಿಕ, ಆಧುನಿಕ ತಂತ್ರಜ್ಞಾನದ ತಿಳಿವು ಹಾಗೂ ತಳಮಟ್ಟದ ಸಮಕಾಲೀನ ಸ್ಥಿತಿಗತಿಗಳನ್ನು ಸಕಾಲಿಕವಾಗಿ ತಿಳಿಯುವ ಆಸಕ್ತಿ ಇತ್ಯಾದಿಗಳು ಇಂದಿನ ರಾಷ್ಟ್ರ ರಾಜಕಾರಣಿಗಳಿಗೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ಹಿರಿಯರ ಜತೆಗೆ ವಿದ್ಯಾವಂತರಾದ, ಪ್ರಜ್ಞಾವಂತರಾದ ಯುವಕರು ಸಮಪ್ರಮಾಣದಲ್ಲಿ ಬೆರೆತು ಪ್ರಜಾಪ್ರಭುತ್ವ ವ್ಯವಸ್ಥೆಯ ಊರುಗೋಲಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಪಕ್ಷದ ಏಕಮುಖಿ ಸಿದ್ಧಾಂತಗಳಿಗೆ ಮಣಿಯದೆ, ಕುಟುಂಬ ರಾಜಕೀಯ, ಜಾತಿರಾಜಕೀಯಗಳಿಗೆ ಬಲಿ
ಯಾಗದೆ, ಸ್ವಾರ್ಥ ಮನೋಭಾವ, ಕ್ಷಣಿಕ ಆಶೋತ್ತರಗಳಿಗೆ ಶರಣಾಗದೆ, ಜಾಗತಿಕ ಸೂಕ್ಷ್ಮ ಸಂಗತಿಗಳನ್ನು ಅವಲೋಕಿಸುತ್ತ, ದೇಶದ ಆಯಾ ಕಾಲದ ಆಶೋತ್ತರಗಳನ್ನು ಅರ್ಥೈಸಿ ಮುಂದುವರಿಯುವ, ಜನರ ನಾಡಿಮಿಡಿತವನ್ನು ಅರಿತು ಮುನ್ನಡೆಸಬಲ್ಲ ಒಂದು ಯುವಪಡೆ ನಾಳೆಯ ಭಾರತಕ್ಕೆ ದೀಪಧಾರಿಯಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT