ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ: ಖಾಸಗೀಕರಣ ಮತ್ತು ನಿಯಂತ್ರಣ

ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತಲೇ ಅದರ ಮೇಲಿನ ನಿಯಂತ್ರಣವನ್ನೂ ಹೆಚ್ಚಿಸುವುದು ಅನಿವಾರ್ಯ
Last Updated 24 ಫೆಬ್ರುವರಿ 2021, 19:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಜಟಾಪಟಿ ಮುಂದುವರಿಯುತ್ತಲೇ ಇದೆ. ಹೊಸದಾಗಿ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳಲ್ಲಿ ಇರುವ ತೊಂದರೆಗಳನ್ನು ಬಿಂದುವಾರು ತೋರಿಸಿಕೊಡಬೇಕೆಂದು ಸರ್ಕಾರ ಪಟ್ಟುಹಿಡಿದಿದೆ. ಈ ಮೂರು ಕಾಯ್ದೆ ಗಳಲ್ಲಿ ಮೊದಲನೇ ಕಾಯ್ದೆಯನ್ನು ‘ರೈತರ ಉತ್ಪತ್ತಿಯ ವ್ಯಾಪಾರ ಮತ್ತು ವ್ಯವಹಾರ (ಸುಗಮಗೊಳಿಸುವ, ಪ್ರೋತ್ಸಾಹಿಸುವ) ಕಾಯ್ದೆ– 2020’ (The Farmers’ Produce Trade and Commerce (Promotion and Facilitation) Bill, 2020) ಪರಿಶೀಲಿಸೋಣ.

ಈ ಕಾಯ್ದೆ ಎರಡು ಮುಖ್ಯ ವಿಷಯಗಳನ್ನು ಕೈಗೆತ್ತಿಕೊಂಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವಿಧಿಸುವ ಮಾರುಕಟ್ಟೆ ಶುಲ್ಕ, ಸೆಸ್ ಮತ್ತು ಅದರ ನಿಯಮಾವಳಿಯು ಈವರೆಗೂ ಮಾರುಕಟ್ಟೆಯ ಪರಿಸರದಲ್ಲಿ ಅಲ್ಲದೇ ಎಪಿಎಂಸಿಯ ಅಧಿಕಾರ ಕ್ಷೇತ್ರವಾದ ಇಡೀ ಜಿಲ್ಲೆಯಲ್ಲಿ ಜಾರಿಯಾಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಈ ವ್ಯಾಪ್ತಿಯನ್ನು ಮಾರುಕಟ್ಟೆ ಪರಿಸರಕ್ಕೆ ಸೀಮಿತಗೊಳಿಸ ಲಾಗಿದೆ. ಮಾರುಕಟ್ಟೆ ಪರಿಸರದಲ್ಲಿ ನೋಂದಾಯಿತ ಮತ್ತು ಅಧಿಕೃತ ವರ್ತಕರು ಮಾತ್ರ ಖರೀದಿಸಬಹುದಾದರೆ, ಹೊರಗಿನ ಪರಿಸರದಲ್ಲಿ ಇನ್‌ಕಂ ಟ್ಯಾಕ್ಸ್ ಪ್ಯಾನ್ ‌ಕಾರ್ಡಿರುವ ಯಾರೇ ಆದರೂ ಉತ್ಪನ್ನಗಳನ್ನು ಖರೀದಿಸಬಹುದು. ಹೀಗಾಗಿ ಆ ವರ್ತಕರ ಮೇಲೆ ಯಾವುದೇ ನಿಯಂತ್ರಣ ಮತ್ತು ಲಗಾಮಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೆ ಈ ವ್ಯವಹಾರದಲ್ಲಿ ಯಾವುದೇ ತಕರಾರು ಉಂಟಾದರೂ ನ್ಯಾಯಾಲಯಗಳ ಬಾಗಿಲನ್ನು ತಟ್ಟುವುದಕ್ಕೆ ಸಾಧ್ಯವಿಲ್ಲ. ಬದಲಿಗೆ, ಅಧಿಕಾರವರ್ಗದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಬಳಿ ಇತ್ಯರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ.

ಎಪಿಎಂಸಿಯ ಅಧಿಕಾರ ವಲಯವನ್ನು ವ್ಯಾಪಕ ವಾಗಿಸಿ, ಮಾರುಕಟ್ಟೆ ಪರಿಸರದಾಚೆ ನಡೆಯುವ ವ್ಯವಹಾರದ ಮೇಲೂ ನಿಯಂತ್ರಣವನ್ನು ಹಿಗ್ಗಿಸಿ, ತೆರಿಗೆಗಳನ್ನು ಹೇರುವ ಅಧಿಕಾರವನ್ನು ಕೊಡುತ್ತಾ ಕಾನೂನನ್ನು ಬದಲಾಯಿಸಲು, ತಕರಾರುಗಳನ್ನು ನ್ಯಾಯ ವ್ಯವಸ್ಥೆಯತ್ತ ಒಯ್ಯಲು ಅನುವಾಗುವಂತೆ ತಿದ್ದುಪಡಿಯನ್ನು ಪರಿಗಣಿಸಲು ಸರ್ಕಾರ ತಯಾರಿದೆ ಎನ್ನುವ ಸುದ್ದಿಗಳು ಬಂದಿವೆ. ಈ ಬದಲಾವಣೆಗಳನ್ನು ಕೈಗೊಂಡರೆ ಈ ಕಾಯ್ದೆಯಲ್ಲಿ ಏನೂ ಉಳಿಯುವುದಿಲ್ಲ. ಅದು ಟೊಳ್ಳುಟೊಳ್ಳಾಗುತ್ತದೆ. ಆ ನಂತರ ಈ ಕಾನೂನು ಇದ್ದರೂ ಇಲ್ಲದಂತೆಯೇ. ಈ ದೃಷ್ಟಿಯಿಂದ ಸರ್ಕಾರದ ಈ ಪ್ರಸ್ತಾವವನ್ನು ರೈತ ಸಂಘಗಳು ಒಪ್ಪಬೇಕು ಎಂದು ವಾದಿಸಬಹುದಾದರೂ ತಾತ್ವಿಕ ನೆಲೆಯಲ್ಲಿ ಈ ಕಾನೂನು ಯಾಕೆ ಇರಬೇಕೆಂಬ ಪ್ರಶ್ನೆಯನ್ನು ಹಿಡಿದು, ಅದು ರದ್ದಾಗಲು ಜಿದ್ದು ಹಿಡಿಯುವುದು ಸರಿಯೆಂದೇ ಹೇಳಬಹುದು.

ಆದರೆ ಈ ಚರ್ಚೆಯಲ್ಲಿ ನಾವು ಮೂಲ ವಿಷಯವನ್ನು ಮರೆಯುತ್ತಿದ್ದೇವೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯ ಆದ್ಯತೆಗಳಿಂದ ತಪ್ಪಿಸಿಕೊಳ್ಳುತ್ತಿದೆ. ಮೂಲ ವಿಷಯ ವೆಂದರೆ– ಮೊದಲಿಗೆ ರೈತರಿಗೆ ತಮ್ಮ ಉತ್ಪನ್ನಗಳ ಮೇಲೆ ಕನಿಷ್ಠ ಬೆಂಬಲ ಬೆಲೆಯಂತೂ ಗಿಟ್ಟಲೇಬೇಕೆನ್ನುವುದು. ಇದನ್ನು ಖಾತರಿಪಡಿಸಲು ಸರ್ಕಾರ ಕಾನೂನಿನ ಏರ್ಪಾಟು ಮಾಡಬೇಕು.ಈ ಭದ್ರ ಬುನಾದಿಯನ್ನು ಮೊದಲಿಗೆ ನಿರ್ಮಿಸಿದರೆ ನಂತರ ಮಾರುಕಟ್ಟೆಯು ಈ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಕೊಡಲು ಸಾಧ್ಯವಾಗಬಹುದಾದ ಸಂಸ್ಥಾಗತ ಏರ್ಪಾಟನ್ನು ಸರ್ಕಾರ ಹೇಗೆ ಮಾಡಬಹುದು ಎನ್ನುವುದನ್ನು ನೋಡಬಹುದು.

ಈ ವ್ಯವಹಾರದಲ್ಲಿ ಎಪಿಎಂಸಿಗಳು ಈವ ರೆಗೂ ಎರಡು ಸ್ತರಗಳಲ್ಲಿ ರೈತರಿಗಾಗಿ ಕೆಲಸ ಮಾಡುತ್ತಿದ್ದವು. ಒಂದು, ರೈತರು ತಮ್ಮ ಉತ್ಪನ್ನಗಳನ್ನು ಮಾರಲು ಅನುವಾಗುವ ಮಾರುಕಟ್ಟೆ ಪರಿಸರಗಳ (ಮಂಡಿ) ನಿರ್ಮಾಣ. ಎರಡು, ತಮ್ಮ ಉತ್ಪನ್ನಗಳಿಗೆ ಹರಾಜು ಅಥವಾ ಟೆಂಡರ್ ಮೂಲಕ ಅತ್ಯಧಿಕ ಬೆಲೆ ಕಂಡುಕೊಳ್ಳಬಹುದಾದ ಸಾಂಸ್ಥಿಕ ಏರ್ಪಾಟು. ಇಷ್ಟರ ಮೇಲೆ ನೋಂದಾಯಿತ ವರ್ತಕ ಮತ್ತು ರೈತರ ನಡುವಿನ (ಮುಖ್ಯವಾಗಿ ಉತ್ಪನ್ನದ ಬೆಲೆಯ ಪಾವತಿಗೆ ಸಂಬಂಧಿಸಿದ) ಕರಾರು ಸಮಯಕ್ಕೆ ಜಾರಿಯಾಗುವಂತೆ ನೋಡಿಕೊಳ್ಳುವುದೂ ಅದರ ಕೆಲಸವಾಗಿತ್ತು. ಎಪಿಎಂಸಿಗಳು ಪಡೆದ ಶುಲ್ಕದಿಂದ ಮಾರುಕಟ್ಟೆ ಪರಿಸರದಲ್ಲಿ ಬೇಕಾದ ಮೂಲಾಧಾರ ಸವಲತ್ತುಗಳನ್ನು ನಿರ್ಮಿಸುವ ಕೆಲಸಗಳನ್ನೂ ಅವು ಕೈಗೊಳ್ಳುತ್ತಿದ್ದವು.

ಈಗಿರುವ ಈ ಪರಿಸ್ಥಿತಿಯಿಂದ ಆಗಬೇಕಾದ ಪ್ರಗತಿ ಯಾವ ದಿಕ್ಕಿನಲ್ಲಿದೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡಾಗ ನಮಗೆ ಸಿಗುವ ಉತ್ತರಗಳು ಹೀಗಿವೆ: ಮೊದಲಿಗೆ ನಮಗೆ ಉತ್ಪನ್ನಗಳನ್ನು ಒಣಗಿಸುವುದಕ್ಕೆ, ಅವುಗಳ ಗುಣಮಟ್ಟ ವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ವಿಂಗಡಿಸುವುದಕ್ಕೆ ಮತ್ತು ದಾಸ್ತಾನು ಮಾಡುವುದಕ್ಕೆ ಸವಲತ್ತುಗಳು ಬೇಕು.

ಸ್ವಾಮಿನಾಥನ್ ಆಯೋಗ ಸೂಚಿಸಿದಂತೆ ಹೊಸ ಮಾರುಕಟ್ಟೆ ಪರಿಸರ, ಅನೇಕ ಮಂಡಿಗಳ ನಿರ್ಮಾಣದ ಕೆಲಸವನ್ನು ಸರ್ಕಾರ ಕೈಗೊಳ್ಳಬೇಕಿದೆ. ಈ ಕೆಲಸವು ಖಾಸಗಿ ಕ್ಷೇತ್ರದಿಂದ ಆಗುತ್ತದೆಯೇ ಅಥವಾ ಸರ್ಕಾರವೇ ಅದನ್ನು ಕೈಗೊಳ್ಳುತ್ತದೆಯೇ ಅನ್ನುವುದು ಅಷ್ಟು ಮುಖ್ಯವಲ್ಲ. ಇಲ್ಲಿ ಖಾಸಗಿ ಹೂಡಿಕೆಯನ್ನು ನಾವು ಸ್ವಾಗತಿಸಬಹುದು. ಈ ಹೂಡಿಕೆಯು ಖಾಸಗಿ ಕ್ಷೇತ್ರಕ್ಕೆ ಲಾಭದಾಯಕವಾಗಲು ಸರ್ಕಾರ ವಿಶೇಷ ಸವಲತ್ತುಗಳನ್ನೂ ಕೊಡಬಹುದು. ನಿಯಂತ್ರಣಮುಕ್ತ ವಾತಾವರಣ ವಿದ್ದರೆ ಖಾಸಗಿ ಹೂಡಿಕೆಗಳು ಬರುತ್ತವೆಂದು ಕೇಂದ್ರ ಸರ್ಕಾರ ನಂಬಿದೆ. ಆದರೆ ಹೀಗೆ ಖಾಸಗಿ ಹೂಡಿಕೆಗಳು ಬಂದಾಗ ರೈತರ ಹಿತದೃಷ್ಟಿಯನ್ನು ಕಾಪಾಡಬೇಕಾದರೆ ಸರ್ಕಾರದ ನಿಯಂತ್ರಣ ಹೆಚ್ಚಬೇಕಾಗುತ್ತದೆಯೇ ಹೊರತು ಈಗಿನ ಕಾಯ್ದೆ ಯೋಚಿಸುತ್ತಿರುವಂತೆ ನಿಯಂತ್ರಣಮುಕ್ತತೆಯತ್ತ ಸಾಗುವುದು ಅಪಾಯದ ಮಾತು. ಮಾರುಕಟ್ಟೆಗೆ ಎಷ್ಟು ಮಾಲು ಬರುತ್ತಿದೆ, ಆ ಮಾಹಿತಿಯ ವಿಶ್ವಾಸಾರ್ಹತೆಯೇನು, ಬೆಲೆಗಳ ಏರುಪೇರಿನ ಮೇಲೆ ನಿಯಂತ್ರಣ ಮತ್ತು ರೈತರಿಗೆ ದಕ್ಕಬೇಕಾದ ಬೆಲೆ– ಮತ್ತು ಆ ಬೆಲೆಯ ಮೇಲೆ ಖರೀದಿಸಿದ್ದಕ್ಕೆ ಆಗಬೇಕಾದ ಪಾವತಿ– ಈ ಎಲ್ಲದರಲ್ಲೂ ರೈತರ ಹಿತದೃಷ್ಟಿಯನ್ನು ಕಾಪಾಡಬೇಕಾದರೆ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತಲೇ ನಿಯಂತ್ರಣವನ್ನೂ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಮಾರುಕಟ್ಟೆಗೆ ಉತ್ಪನ್ನವನ್ನು ನೀಡುವ ಮತ್ತು ಅದನ್ನು ಮಾರುವ ಎರಡು ಘಟ್ಟಗಳಲ್ಲಿ ಈ ವ್ಯವಹಾರ ವನ್ನು ವಿಭಜಿಸಬಹುದು. ಉತ್ಪನ್ನಗಳ ಗುಣಮಟ್ಟ ಮತ್ತು ತೂಕವನ್ನು ನಿಶ್ಚಯಿಸಿ ದಾಸ್ತಾನು ಕೇಂದ್ರಕ್ಕೆ ಒಪ್ಪಿಸಿ ದರೆ, ಅದಕ್ಕೆ ತಕ್ಕ ಒಂದು ವೇರ್‌ಹೌಸ್ ರಸೀತಿಯನ್ನು ಸೃಷ್ಟಿಸಿ ಅದನ್ನು ಎಲೆಕ್ಟ್ರಾನಿಕ್ ವಿನಿಮಯ ಕೇಂದ್ರದಲ್ಲಿ ವ್ಯವಹರಿಸುವ ಏರ್ಪಾಟು ಮಾಡಬಹುದು. ಆಗ, ಮಾಲನ್ನು ದಾಸ್ತಾನು ಕೇಂದ್ರಕ್ಕೆ ನೀಡುವ ಮತ್ತು ಮಾರಾಟ ಕೈಗೊಳ್ಳುವ ಪ್ರಕ್ರಿಯೆಯನ್ನು ಬೇರ್ಪಡಿಸಿದಂತಾಗುತ್ತದೆ. ಇದು ನಿಜಕ್ಕೂ ಚಾಲನೆಗೆ ಬರಬೇಕಾದರೆ ಆಧುನಿಕ ಎಲೆಕ್ಟ್ರಾನಿಕ್ ವಿನಿಮಯ ಕೇಂದ್ರಗಳನ್ನು ನಿರ್ಮಿಸಬೇಕಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ನಾವು ಈ ನಿರ್ಮಾಣವನ್ನು ಕೈಗೊಂಡು ಅದರ ಸಾಧ್ಯತೆಯನ್ನು ನಿರೂಪಿಸಿದ್ದೇವೆ. ಈ ವಿನಿಮಯ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ವ್ಯಾಪಾರ ಆಗದಂತೆ, ಬೆಲೆಗಳಲ್ಲಿ ವಿಪರೀತ ಏರುಪೇರಾದಾಗ ಸರ್ಕಿಟ್ ಬ್ರೇಕರ್‌ಗಳನ್ನು ಹೇರುವ– ನಿಯಂತ್ರಣ ಸಾಧನಗಳನ್ನು ರೂಪಿಸಬಹುದು. ಸರ್ಕಾರ ಮತ್ತು ಎಫ್‌ಸಿಐ ವಿಕೇಂದ್ರಿತವಾಗಿ ಭಿನ್ನ ವಿನಿಮಯ ಕೇಂದ್ರಗಳಿಂದ ಕನಿಷ್ಠ ಬೆಂಬಲ ಬೆಲೆಯ ಖರೀದಿಯನ್ನು ಕೈಗೊಳ್ಳಬಹುದು. ಸಣ್ಣ ಮತ್ತು ಅತಿಸಣ್ಣ ರೈತರು ಪೂರೈಸಿದ ಉತ್ಪನ್ನಗಳನ್ನು ಗುರುತಿಸಲು ಸಾಧ್ಯವಾಗುತ್ತದಾದ್ದರಿಂದ, ಕೇವಲ ಆ ಮೂಲದಿಂದ ಬಂದ ಮಾಲನ್ನು ಮಾತ್ರ ಎಫ್‌ಸಿಐ ಖರೀದಿಸಬಹುದು.

ಈ ವ್ಯವಸ್ಥೆಯಲ್ಲಿ ಎದುರಾಗುವ ಸವಾಲೆಂದರೆ– ದಾಸ್ತಾನು ಕೇಂದ್ರಕ್ಕೆ ಉತ್ಪನ್ನ ಪೂರೈಸಿದ ನಂತರ, ಅದರ ಮಾರಾಟ ಮತ್ತು ಅಲ್ಲಿಂದ ಸಾಗಣೆ ಮಾಡುವ ಕಾಲದ ಬಾಡಿಗೆ ವಸೂಲು ಮಾಡುವ ಸಬಲವಾದ ಏರ್ಪಾಟನ್ನು ನಿರ್ಮಿಸುವುದು. ಇದು ಪಾರದರ್ಶಕವಾಗೂ ಸರಳವಾಗೂ ಇರಬೇಕು. ಈ ಕಾರ್ಯ ಸ್ಥಿರವಾಗಿ ನಡೆಯಬೇಕಾದರೆ ಇದರಲ್ಲಿ ಒಂದು ದಶಕದಷ್ಟು ಕಾಲದ- ಸಮಯದ ಹೂಡಿಕೆಯೂ ಅಗತ್ಯ. ಇದಕ್ಕೆ ಸಮಾನಾಂತರವಾಗಿ ರೈತರ ಹಿತದೃಷ್ಟಿ ಕಾಪಾಡುವ ನಿಯಮಾವಳಿಯೂ ವಿಕಸಿತಗೊಳ್ಳುತ್ತದೆ.

ಗಟ್ಟಿಯಾದ ಮೂಲ ಸೌಕರ್ಯದ ನಿರ್ಮಾಣ, ಆಧುನಿಕ ಯಂತ್ರೋಪಕರಣಗಳು, ತಾಂತ್ರಿಕತೆ, ಮಾರುಕಟ್ಟೆ ಪರಿಸರದ ನಿರ್ಮಾಣಕ್ಕೂ – ಮಾರುಕಟ್ಟೆಯ ಖಾಸಗೀಕರಣಕ್ಕೂ ಮೂಲಭೂತ ವ್ಯತ್ಯಾಸವಿದೆ. ಖಾಸಗೀಕರಣವೇ ಆಧುನಿಕತೆ ಎಂದು ನಂಬುವ ಈ ಕಾನೂನು, ಸದ್ಯ ನಮ್ಮೆದುರಿಗೆ ದೈತ್ಯಾಕಾರವಾಗಿ ನಿಂತಿರುವ ಮೂಲಭೂತ ಸಮಸ್ಯೆಯತ್ತ ನೋಡಲು ಅಡ್ಡವಾಗಿ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT