ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಂಶೋಧನೆಗೂ ತಟ್ಟುತ್ತಿದೆ ಜಿಎಸ್‍ಟಿ ಬಿಸಿ !

ಸಂಶೋಧನಾ ಚಟುವಟಿಕೆಗೆ ಹಿನ್ನಡೆ ಆಗದಂತೆ ನೋಡಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ
Last Updated 23 ನವೆಂಬರ್ 2022, 19:30 IST
ಅಕ್ಷರ ಗಾತ್ರ

ರಾಜ್ಯದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯೊಂದರ ಭೌತವಿಜ್ಞಾನ ವಿಭಾಗದಲ್ಲಿ ಸಂಶೋಧನೆಯಲ್ಲಿ ನಿರತನಾಗಿರುವ ನನ್ನ ಗೆಳೆಯನೊಬ್ಬ ಫೋನ್ ಮಾಡಿ, ‘ಇನ್ನಾರು ತಿಂಗಳು ನನಗೆ ಯಾವುದೇ ರಿಸರ್ಚ್ ಕೆಲಸವಿಲ್ಲ. ಯಾವುದಾದರೂ ಪಾರ್ಟ್‌ಟೈಮ್‌ ಟೀಚಿಂಗ್ ಜಾಬ್ ಸಿಗುತ್ತದೆಯೇ?’ ಎಂದು ವಿಚಾರಿಸಿದ. ‘ಯಾಕಪ್ಪ, ಏನಾಯಿತು? ರಿಸರ್ಚ್ ಮುಗೀತಾ ಇದೆ ಎಂದಿದ್ದೆಯಲ್ಲ, ಈಗೇನಾಯಿತು’ ಎಂದದ್ದಕ್ಕೆ, ‘ನಮ್ಮ ಡಿಪಾರ್ಟ್‌ಮೆಂಟಿ ನಿಂದ ಕೆಲವು ಉಪಕರಣಗಳಿಗೆ ಜೂನ್‌ ತಿಂಗಳಲ್ಲಿ ಆರ್ಡರ್ ಮಾಡಿದ್ದೆವು, ಈ ತಿಂಗಳಲ್ಲಿ ಬರಬೇಕಿತ್ತು. ಸರ್ಕಾರವು ಉಪಕರಣಗಳ ಮೇಲಿನ ಜಿಎಸ್‍ಟಿಯನ್ನು ಹೆಚ್ಚುಮಾಡಿದೆ. ಡಿಫರೆನ್ಸ್ ಹಣ ಕೊಡುವವರೆಗೂ ಎಕ್ವಿಪ್‍ಮೆಂಟ್ ಡೆಲಿವರಿ ಇಲ್ಲ ಎಂದಿದ್ದಾರೆ. ಆದ್ದರಿಂದ ನನ್ನ ರಿಸರ್ಚ್‌ ವರ್ಕ್ ತಡವಾಗಬಹುದು, ಅದಕ್ಕಾಗಿ ಈ ರಿಕ್ವೆಸ್ಟ್’ ಎಂದ. ‘ನಿಮಗೆ ಸರ್ಕಾರವೇ ಫಂಡ್ ಮಾಡುತ್ತ ದಲ್ಲವಾ? ಏನು ಯೋಚನೆ, ನಿಮ್ಮ ವಿಭಾಗ ಮುಖ್ಯಸ್ಥ ರನ್ನು ಕೇಳಿದರಾಯಿತು’ ಎಂದೆ. ‘ಅದನ್ನು ಮಾಡದೆ ಇರುತ್ತೇನೆಯೇ? ಹೆಚ್ಚಿನ ಗ್ರ್ಯಾಂಟ್ ಈಗಲೇ ಸಿಗುವುದಿಲ್ಲ, ಸ್ವಲ್ಪ ಕಾಯಬೇಕು ಎಂದರು’ ಎಂದು ವಿವರಿಸಿದ.

ಹೌದು, ಮೊದಲೇ ತಮ್ಮ ಸಂಶೋಧನಾ ಕೆಲಸಗಳಿಗೆ ಬೇಕಾಗುವಷ್ಟು ಅನುದಾನ ದೊರೆಯುತ್ತಿಲ್ಲ ಎಂದು ಕೊರಗುತ್ತಿದ್ದ ದೇಶದ ವಿಜ್ಞಾನಿಗಳು ಈಗ ಜಿಎಸ್‍ಟಿ ಮಂಡಳಿಯ ತೀರ್ಮಾನದಿಂದಾಗಿ ಕಂಗಾಲಾಗಿದ್ದಾರೆ. ಜೂನ್‌ನಲ್ಲಿ ನಡೆದ ಜಿಎಸ್‍ಟಿ ಮಂಡಳಿಯ ಸಭೆಯಲ್ಲಿ, ಲ್ಯಾಬ್‍ಗಳಲ್ಲಿ ಬಳಸುವ ಉಪಕರಣ, ಸಲಕರಣೆ,
ರಾಸಾಯನಿಕಗಳನ್ನು ಕೊಳ್ಳುವಾಗ ಅವುಗಳ ಮೇಲೆ ವಿಧಿಸಲಾಗುತ್ತಿದ್ದ ಶೇಕಡ 5ರಷ್ಟು ಜಿಎಸ್‍ಟಿ ಬದಲು ಹೆಚ್ಚಿನ ಪ್ರಮಾಣದ ತೆರಿಗೆಯನ್ನು ವಿಧಿಸಬೇಕೆಂದು ನಿರ್ಧರಿಸಲಾಯಿತು. ಅದು ಜುಲೈ ತಿಂಗಳಿನಿಂದಲೇ ಜಾರಿಯಾಗಿದೆ. ಈ ತೀರ್ಮಾನದಿಂದ ತಮ್ಮ ಸಂಶೋಧನಾ ಕೆಲಸಗಳಿಗೆ ಹಿನ್ನಡೆ ಉಂಟಾಗಿದೆ ಎಂಬುದು ವಿಜ್ಞಾನಿಗಳ ಪ್ರತಿಪಾದನೆ.

ಹೊಸ ತೀರ್ಮಾನ ಜಾರಿಗೆ ಬರುವವರೆಗೂ ವೈಜ್ಞಾನಿಕ ಉಪಕರಣಗಳ ಮೇಲೆ ಶೇ 5ರಷ್ಟು ಜಿಎಸ್‍ಟಿ ಇತ್ತು. ಹೊಸ ನಿಯಮದಂತೆ ಅದು ಶೇ 18ಕ್ಕೆ ಏರಿದೆ. ಹೊಸ ದರದಿಂದಾಗಿ ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಗಳಿಗೆ ಕೊಡಮಾಡಿದ ಅನುದಾನದಲ್ಲಿ ಗಣನೀಯ ಮೊತ್ತವು ತೆರಿಗೆ ಪಾವತಿಗೆ ಹೋಗುವಂತಾಗಿದೆ. ಸಂಶೋಧನಾ ಚಟುವಟಿಕೆಗಳಿಗೆ ಗೊತ್ತುಮಾಡಿದ್ದ ಮೊತ್ತದಲ್ಲಿ ಆ ಮಟ್ಟಿಗೆ ಹಣದ ಲಭ್ಯತೆ ಕಡಿಮೆ ಆಗಿದೆ ಎನ್ನುತ್ತಾರೆ ವಿಜ್ಞಾನಿಗಳು.

ದೆಹಲಿಯ ಸಿಎಸ್‍ಐಆರ್‌ನ ಮೈಕ್ರೊಬಿಯಲ್ ಟೆಕ್ನಾಲಜಿ ವಿಭಾಗದ ಹಿರಿಯ ವಿಜ್ಞಾನಿ ಡಾ. ಅಮಿತ್ ಟುಲಿ ‘ನಮಗೆ ಸರ್ಕಾರದ ಅನುದಾನದ ಜೊತೆ ಹಲವು ಉದ್ಯಮ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದಲೂ ಧನಸಹಾಯ ಬರುತ್ತದೆ. ತೆರಿಗೆ ಏರಿಕೆ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಅವರೆಲ್ಲ ಒತ್ತಾಯಿಸಬೇಕು’ ಎಂದಿದ್ದಾರೆ. ಇನ್ನೂ ಹಲವು ಹಿರಿಯ ವಿಜ್ಞಾನಿಗಳು ‘ಈಗಿರುವ ಅನುದಾನವೇ ಕಡಿಮೆ, ಅದರಲ್ಲಿ ತೆರಿಗೆಗಾಗಿ ಎರಡು–ಮೂರು ಪಟ್ಟು ಹೆಚ್ಚಿಗೆ ವ್ಯಯ ಮಾಡುವುದರಿಂದ ಸಂಶೋಧನೆಗಳಿಗೆ ಹಣದ ತೀವ್ರ ಕೊರತೆ ಆಗುತ್ತದೆ. ಸಂಶೋಧನೆಗಳು ಸರಾಗವಾಗಿ ಸಾಗಬೇಕೆಂದರೆ ಅನುದಾನದ ಮೊತ್ತವನ್ನು ಹೆಚ್ಚಿಸುವುದಷ್ಟೇ ಪರಿಹಾರ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಧನಸಹಾಯ ಸಿಗಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಅದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಯಾಗುತ್ತಿದೆ, ಹೆಚ್ಚಿನ ತೆರಿಗೆಯಿಂದ ಸಂಶೋಧನಾ ಕೆಲಸಗಳು ಅಂದುಕೊಂಡ ವೇಗದಲ್ಲಿ ನಡೆಯುವುದಿಲ್ಲ ಮತ್ತು ವಿಜ್ಞಾನಿಗಳಲ್ಲಿ ಉತ್ಸಾಹ ಕಡಿಮೆಯಾಗುತ್ತಿದೆ ಎಂಬ ಮಾತು ಸಂಶೋಧನಾ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಜಿಎಸ್‍ಟಿ ಇರಲಿ, ಇಲ್ಲದಿರಲಿ, ವೈದ್ಯಕೀಯ ಸಂಶೋಧನೆಗಳಿಗೆ ಹೆಚ್ಚಿನ ಅನುದಾನ ಬೇಕೇ ಬೇಕು ಎಂದಿರುವ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‌ನ (ಐಸಿಎಂಆರ್‌) ಹಿರಿಯ ವಿಜ್ಞಾನಿಯೊಬ್ಬರು ‘ಸಂಶೋಧನೆಗಳಿಗೆ ಸಂಬಂಧಿಸಿದ ಉಪಕರಣ ಕೊಳ್ಳಲು ಈಗಾಗಲೇ ಆರ್ಡರ್ ನೀಡಲಾಗಿದೆ. ಆದರೆ ಸರಬರಾಜು ಕಂಪನಿಗಳು ನೂತನ ತೆರಿಗೆ ದರವನ್ನು ಸೇರಿಸಿ ಹಣ ಸಂದಾಯ ಮಾಡಿದರೆ ಮಾತ್ರ ಸಲಕರಣೆ ನೀಡುವುದಾಗಿ ಪಟ್ಟು ಹಿಡಿದಿವೆ. ನಮಗೆ ಬಂದಿರುವ ಅನುದಾನದಲ್ಲಿ ಇದಕ್ಕೆ ಖರ್ಚು ಮಾಡಲು ಅವಕಾಶವಿಲ್ಲ’ ಎಂದಿದ್ದಾರೆ.

2017ರ ನವೆಂಬರ್‌ನಲ್ಲಿ ಸಂಶೋಧನಾ ಉಪಕರಣ, ಸಾಮಗ್ರಿಗಳ ಮೇಲಿನ ತೆರಿಗೆಯನ್ನು ಶೇ 5ಕ್ಕೆ ನಿಗದಿಪಡಿಸಿದ್ದ ಸರ್ಕಾರ ಈಗ ಏಕಾಏಕಿ 18ಕ್ಕೆ ಏರಿಸಿದೆ. ಸಂಶೋಧನಾ ಉಪಕರಣಗಳಿಗೆ ತೆರಿಗೆಯ ಹೊರೆಯನ್ನು ಈ ಪರಿ ಹೊರಿಸುವುದು ಯಾವ ನ್ಯಾಯ? ಸೈಕಲ್‍ಗೆ ಬಳಸುವ ಟ್ಯೂಬಿಗೂ ಕೆಮಿಕಲ್ ಲ್ಯಾಬೊರೇಟರಿಯ ಮೈಕ್ರೊಪಿಪೆಟ್‍ಗೂ ವ್ಯತ್ಯಾಸವಿಲ್ಲವೆ? ಎಲ್ಲದಕ್ಕೂ ಒಂದೇ ಪ್ರಮಾಣದ ತೆರಿಗೆ ಎಂದಾದರೆ ದೇಶದ ವಿಜ್ಞಾನ ರಂಗ ತತ್ತರಿಸಿ ಹೋಗಲಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‍ಸಿ) ವಿಜ್ಞಾನಿ ಅರಿಂದಮ್ ಘೋಷ್, ‘ನಮಗೆ ಸಿಗುತ್ತಿರುವ ಅನುದಾನವೇ ಕಡಿಮೆ, ಅಂಥದ್ದರಲ್ಲಿ ಹೆಚ್ಚಿನ ತೆರಿಗೆಯಿಂದಾಗಿ ಸಂಶೋಧನಾ ವಲಯಕ್ಕೆ ತೀವ್ರ ಪೆಟ್ಟು ಬೀಳಲಿದೆ’ ಎಂದು ಟೀಕಿಸಿದ್ದಾರೆ. ‘ಒಂದು ವೇಳೆ ಧನಸಹಾಯ ಹೆಚ್ಚಿಸಬೇಕೆಂದು ನಿರ್ಧರಿಸಿದರೂ, ನಮಗೆ ಬೇಕಾದ ಸಮಯಕ್ಕೆ ಅದು ಸಿಗುವುದು ಅನುಮಾನ’ ಎನ್ನುವುದು ವಿಜ್ಞಾನಿಗಳ ನಿರಾಶೆಯ ನುಡಿ. ವಿಜ್ಞಾನಿಗಳ ಈ ಮಾತಿಗೆ ಪ್ರತಿಕ್ರಿಯಿಸಿರುವ ಐಸಿಎಂಆರ್‌ನ ನಿರ್ದೇಶಕ ರೊಬ್ಬರು, ‘ಬಹುತೇಕ ಉಪಕರಣಗಳಿಗೆ ಸರ್ಕಾರವೇ ದುಡ್ಡು ಕೊಡುವುದರಿಂದ ತೆರಿಗೆ ಹೆಚ್ಚಾದರೆ ಅದನ್ನು ಸರ್ಕಾರವೇ ನೋಡಿಕೊಳ್ಳುತ್ತದೆ, ಅದಕ್ಕೆ ವಿಜ್ಞಾನಿಗಳೇಕೆ ತಲೆಕೆಡಿಸಿಕೊಳ್ಳಬೇಕು, ಅವರ ಕೆಲಸ ಅವರು
ಮಾಡಿಕೊಂಡಿದ್ದರಾಯಿತು’ ಎಂದಿದ್ದಾರೆ.

ಸಂಶೋಧನೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮಾತ್ರ ನಡೆಯುವುದಿಲ್ಲ. ಸಾವಿರಾರು ಖಾಸಗಿ ಸಂಸ್ಥೆ, ಉದ್ದಿಮೆ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ತೆರಿಗೆ ಹೆಚ್ಚಳವು ಅವರನ್ನೂ ಬಾಧಿಸುತ್ತದೆ. ಅಲ್ಲಿಯೂ ನಿಯಮಿತ ಅನುದಾನ ಇರುತ್ತದೆ. ಏಕಾಏಕಿ ಹೆಚ್ಚಿನ ಹಣ ಹೊಂದಿಸುವುದು ಅವರಿಗೂ ಸಾಧ್ಯವಿಲ್ಲ. ಖಾಸಗಿ ಸಂಶೋಧನಾ ವಲಯಗಳಿಂದಲೂ ವಿಜ್ಞಾನಕ್ಕೆ ಬಹಳಷ್ಟು ಕೊಡುಗೆ ಸಿಗುತ್ತಿದೆ. ಕೋವಿಡ್‍ಗೆ ಲಸಿಕೆ ತಯಾರಿಸಿದ ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್, ಹೈದರಾಬಾದ್‍ನ ಭಾರತ್ ಬಯೊಟೆಕ್, ಅಹಮದಾಬಾದ್‍ನ ಕ್ಯಾಡಿಲಾ ಹೆಲ್ತ್‌ ಕೇರ್‌ನಂತಹವು ಖಾಸಗಿ ಸ್ವಾಮ್ಯದವು.

ವಿದೇಶಗಳ ಸಂಶೋಧನಾ ಸಂಸ್ಥೆಗಳಲ್ಲಿ ಪ್ರತೀ ಸಂಶೋಧನೆಗೂ ಹೆಚ್ಚುವರಿ ಹಣವನ್ನು ಮೀಸಲಾಗಿ ಇರಿಸಿರುತ್ತಾರೆ. ಹಣಕಾಸು ಮುಗ್ಗಟ್ಟಿನಿಂದ ಸಂಶೋಧನಾ ಕೆಲಸಕ್ಕೆ ಹಿನ್ನಡೆಯಾಗಬಾರದು ಎಂಬ ಕಾಳಜಿ ಅದರ ಹಿಂದೆ ಇರುತ್ತದೆ. ನಮ್ಮಲ್ಲಿ ಅಂತಹ ಪದ್ಧತಿ ಇಲ್ಲ. ಅಲ್ಲದೆ, ಒಂದು ಪ್ರಾಜೆಕ್ಟ್‌ಗೆ ಮಂಜೂರಾದ ಅನುದಾನದ ಮೊತ್ತವನ್ನು ಬ್ಯಾಂಕಿನಲ್ಲಿ ಇಟ್ಟಾಗ ದೊರೆಯುವ ಬಡ್ಡಿ ಹಣವನ್ನು ಸಂಶೋಧನೆಗೆ ಬಳಸಿಕೊಳ್ಳಲು ಅವಕಾಶವಿತ್ತು, ಈಗ ಅದೂ ರದ್ದಾಗಿದೆ. ಬಡ್ಡಿ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗಿದೆ ಎಂದು ನೊಂದು ನುಡಿಯುವ ಸಂಶೋಧನಾನಿರತರು, ಮುಂಬರುವ ದಿನಗಳಲ್ಲಿ ಸಂಶೋಧನಾ ಕ್ಷೇತ್ರದ ಪ್ರತಿಭಾಪಲಾಯನ ದೊಡ್ಡ ರೀತಿಯಲ್ಲಿ ನಡೆದರೆ ಆಶ್ಚರ್ಯವಿಲ್ಲ ಎಂದಿದ್ದಾರೆ.

ಸಮಸ್ಯೆಯು ಹೆಚ್ಚಿನ ಪ್ರಮಾಣದಲ್ಲಿ ವಿಧಿಸುವ ಜಿಎಸ್‍ಟಿಯದಷ್ಟೇ ಅಲ್ಲ. ಭಾರತದಲ್ಲಿ ತಯಾರಾಗುವ ಉಪಕರಣಗಳನ್ನೇ ಸಂಶೋಧನೆಗೆ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಎಷ್ಟೋ ಸಲ ಜೆಮ್ (ಜಿಇಎಮ್– ಗವರ್ನಮೆಂಟ್ ಇ ಮಾರ್ಕೆಟ್ ಪ್ಲೇಸ್) ಮೂಲಕ ಖರೀದಿಸಿದ ಉಪಕರಣಗಳ ಗುಣಮಟ್ಟ ಉತ್ತಮವಾಗಿ ಇರುವುದಿಲ್ಲ, ಅವುಗಳಿಂದ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂಬ ದೂರುಗಳಿವೆ. ನಮ್ಮಲ್ಲಿ ಸಂಶೋಧನೆಗಳಿಗೆ ಬೇಕಾದ ಉನ್ನತ ಕಾರ್ಯಕ್ಷಮತೆಯ ಉಪಕರಣಗಳು ತಯಾರಾಗುವುದೇ ಇಲ್ಲ, ಹೀಗಾಗಿ ಹೊರಗಿನವರ ಉಪಕರಣ ಅವಲಂಬಿಸದೇ ವಿಧಿಯಿಲ್ಲ ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT