ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ವಿವಾಹದ ವಯಸ್ಸು: ವಿಶ್ಲೇಷಿಸುವ ಸಮಯ

ಮಹಿಳೆಯರ ವಿವಾಹದ ಕನಿಷ್ಠ ವಯಸ್ಸಿನ ಮಿತಿ ಏರಿಕೆ ನಿಲುವು ಗಮನಾರ್ಹ
Last Updated 19 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

‘ದೇರ್‌ ಈಸ್‌ ನೋ ರಾಂಗ್‌ ಟೈಮ್‌ ಟು ಡು ದ ರೈಟ್‌ ಥಿಂಗ್‌’ (ಸರಿಯಾದುದನ್ನು ಮಾಡಲು ಸರಿಯಲ್ಲದ ಸಮಯ ಎಂಬುದಿಲ್ಲ) ಎಂಬುದೊಂದು ಪ್ರಸಿದ್ಧ ಹೇಳಿಕೆ. ಮದುವೆ ಎನ್ನುವುದೂ ಒಂದು ಸರಿಯಾದ, ಎಲ್ಲರ ಜೀವನದಲ್ಲಿ ಆಗಬೇಕಾದ ‘ಒಳ್ಳೆಯ’ ಸಂಗತಿ ಎನ್ನುವುದನ್ನು ನಮ್ಮಲ್ಲಿ ಹೆಚ್ಚಿನವರು ಒಪ್ಪುತ್ತಾರೆ. ಆದರೆ ಅದಕ್ಕೆ ಮಾತ್ರ ಮುಹೂರ್ತ- ಒಳ್ಳೆಯ ದಿನ ಹುಡುಕುವಂತೆ, ಸರಿಯಾದ ವಯಸ್ಸಿಗೆ ಮದುವೆಯಾಗುವುದು ಕೂಡ ಅಗತ್ಯ ಎಂಬುದನ್ನು ದೇಹ- ಮನಸ್ಸುಗಳೆರಡಕ್ಕೂ ಸಂಬಂಧಿಸಿದ ಆರೋಗ್ಯ ಕ್ಷೇತ್ರ ಒತ್ತಿ ಹೇಳುತ್ತದೆ.

‘ಸರಿಯಾದ ವಯಸ್ಸು’ ಅಂದರೆ ಯಾವುದು? ಭಾರತದ ಕಾನೂನು ವ್ಯವಸ್ಥೆಯಲ್ಲಿ ವಿವಾಹದ ಕನಿಷ್ಠ ವಯಸ್ಸಿನ ಮಿತಿ ಬದಲಾಗುವ ಹಂತದಲ್ಲಿರುವುದೇ ಈ ಪ್ರಶ್ನೆಗೆ ವೈಜ್ಞಾನಿಕವಾಗಿ ಇರುವ ಆಧಾರವನ್ನು ಶೋಧಿಸಿ ನೋಡುವುದಕ್ಕೆ ಸ್ಫೂರ್ತಿಯಾಗಬೇಕು.

ಮನೋವಿಜ್ಞಾನ ಮತ್ತು ನರಮಂಡಲ ವಿಜ್ಞಾನಗಳೆರಡೂ ಈ ಬಗ್ಗೆ ವಿವರಿಸಿವೆ. ಮೊದಲು ಮಿದುಳಿನ ಕಡೆ ನೋಡೋಣ. ಮಿದುಳಿನ ‘ಫ್ರಾಂಟಲ್ ಲೋಬ್’ ಎಂಬ ಮುಂಭಾಗವು ಪ್ರಬುದ್ಧತೆಗೆ ಮುಖ್ಯ ಕಾರಣ. ನೈತಿಕತೆ- ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಭಾವನಾತ್ಮಕವಾಗಿ ಸಂಬಂಧಗಳಲ್ಲಿ ಎಷ್ಟು ತೊಡಗಿಸಿಕೊಳ್ಳಬೇಕು- ಬೇಡ ಇವುಗಳನ್ನು ನಿರ್ದೇಶಿಸುವುದು ಮಿದುಳಿನ ಈ ಭಾಗವೇ. ಇದು ಸರಿಯಾಗಿ ಬೆಳವಣಿಗೆಯಾಗುವುದು 24- 25 ವರ್ಷಗಳ ಹೊತ್ತಿಗೇ. ಹಾಗಾಗಿ ಜೀವನದ ಯಾವುದೇ ಮುಖ್ಯ ದೀರ್ಘಕಾಲಿಕ ನಿರ್ಧಾರಗಳಿಗೆ ಈ ವಯಸ್ಸಿನ ಮಿದುಳು ಸರಿಯಾಗಿ ಕೆಲಸ ಮಾಡುವ ಸಾಧ್ಯತೆ ಹೆಚ್ಚು.

ಗೋಲ್ಡಿಲಾಕ್ಸ್ ಎಂಬುದು ಮನೋವಿಜ್ಞಾನದ ಒಂದು ಸಿದ್ಧಾಂತ. ಇದರ ಪ್ರಕಾರ, ತೀರಾ ಚಿಕ್ಕ ವಯಸ್ಸು ಅಥವಾ ತೀರಾ ‘ವಯಸ್ಸಾಗುವಿಕೆ’ ಎರಡರಿಂದಲೂ ಮದುವೆಯ ಬಂಧ ಗಟ್ಟಿಯಾಗಿ ಉಳಿಯುವುದಿಲ್ಲ. ಅಂದರೆ ನಿಜವಾದ ಸಾಂಗತ್ಯ ಮತ್ತು ಆ ಕ್ಷಣದ ಆಕರ್ಷಣೆಯ ಪ್ರೇಮದ ನಡುವೆ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸು- ಬುದ್ಧಿ- ಮನಸ್ಸುಗಳು ಪ್ರಬುದ್ಧವಾಗಿರಬೇಕು.

ಅದೇ ಜೀವನಶೈಲಿ, ದೈನಂದಿನ ಅಭ್ಯಾಸಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇ ಆಗದಷ್ಟು ವಯಸ್ಸು ಮುಂದೆ ಸಹ ಹೋಗಿರಬಾರದು! ವಿಚ್ಛೇದನಗಳು ಸುಲಭವಾಗಿ ಸಿಕ್ಕುವ ಅಮೆರಿಕ- ಬ್ರಿಟನ್‍ನಲ್ಲಿ ನಡೆದ ಒಂದು ಅಧ್ಯಯನದಲ್ಲಿ, 25 ವರ್ಷಕ್ಕೆ ಮದುವೆಯಾದ ವ್ಯಕ್ತಿಗಳಲ್ಲಿ 20 ವರ್ಷಕ್ಕೆ ಮದುವೆಯಾದ ವ್ಯಕ್ತಿಗಳಿಗೆ ಹೋಲಿಸಿದರೆ ವಿಚ್ಛೇದನದ ಪ್ರಮಾಣ ಶೇ 50ರಷ್ಟು ಕಡಿಮೆ ಎಂಬುದು ಕಂಡುಬಂದಿದೆ.

ಮಿದುಳು ಪೂರ್ತಿ ಬೆಳವಣಿಗೆಯಾಗಿದೆ ಎಂಬುದೂ ಒಳಗೊಂಡಂತೆ ಹಲವು ಕಾರಣಗಳನ್ನು ಇಲ್ಲಿ ಊಹಿಸಬಹುದು. ಇಬ್ಬರೂ ಕೆಲಸದಲ್ಲಿ ನೆಲೆ ನಿಂತಿರುವುದು, ಆರ್ಥಿಕ ಸಬಲತೆ, ‘ಪ್ರೀತಿ’ ಎಂಬುದರ ಬಗ್ಗೆ ಅತಿ ಆದರ್ಶದ ಪರಿಕಲ್ಪನೆ ಕಡಿಮೆಯಾಗಿ, ಸಂಗಾತಿಯಿಂದ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿರುವುದು, ಇವೆಲ್ಲ ಆ ಕಾರಣಗಳು. ಆದರೆ ‘ಮದುವೆ’ ಎನ್ನುವುದು ಬರೀ ಇಂತಹ ವೈಜ್ಞಾನಿಕ ಸಂಗತಿ- ಅಧ್ಯಯನ- ಅಂಕಿ ಅಂಶಗಳಿಗಷ್ಟೇ ಸಂಬಂಧಿಸಿಲ್ಲ ಎನ್ನುವುದು ಗಮನಾರ್ಹ. ಧಾರ್ಮಿಕ- ಸಾಮಾಜಿಕ ಅಂಶಗಳು, ನಮ್ಮ ರೂಢಿಗತ ಧೋರಣೆಗಳು, ಹೆಣ್ಣು ಮಕ್ಕಳ ಸ್ಥಿತಿ ಇವೆಲ್ಲಕ್ಕೂ ‘ಮದುವೆ’ ಸಂಬಂಧಿಸಿದೆ. ಮದುವೆಯಲ್ಲಿ ಸರಿ- ತಪ್ಪು, ಒಪ್ಪು- ಬಿಡುಗಳ ವಿಶ್ಲೇಷಣೆಗೆ ನಿಲುಕದ, ‘ಇದಮಿತ್ಥಂ’ ಎಂದು ಹೇಳಲಾಗದ ಹಲವು ವಿಷಯಗಳೂ ಇವೆ.

ಹುಡುಗ– ಹುಡುಗಿಯ ವಯಸ್ಸಿನ ಅಂತರ, ಇಬ್ಬರ ನಡುವಿನ ದುಡಿಮೆಯ ಅಂತರ (ಹುಡುಗಿಗೆ ಹೆಚ್ಚು ಸಂಬಳ-ಹುಡುಗನಿಗೆ ಕಡಿಮೆ ಸಂಬಳ), ಹುಡುಗಿ ಹೊರಗೆ ಕೆಲಸ ಮಾಡುವ ‘ಅವಶ್ಯಕತೆ’ ಇರದಿರುವುದು (ಹೆಂಡತಿ ಮನೆಯಲ್ಲಿ ಜವಾಬ್ದಾರಿ ನೋಡಿಕೊಂಡರೆ ಸಾಕೇ ಸಾಕು) ಎಂಬಂತಹ ಮನೋಭಾವಗಳು ಎಲ್ಲೆಡೆ ವ್ಯಾಪಕವಾಗಿವೆ. ಇವೆಲ್ಲಕ್ಕೂ ಕೆಳಮಧ್ಯಮ ವರ್ಗ, ಕೆಳ ವರ್ಗಗಳ ಕುಟುಂಬಗಳು ಕಂಡುಕೊಳ್ಳುವ ಸುಲಭ ಉತ್ತರ ‘ಆದಷ್ಟು ಬೇಗ, ಅಂದರೆ ಪಿಯು ಮುಗಿದ ತಕ್ಷಣ ಮನೆಯ ಮಗಳಿಗೆ ಮದುವೆ ಮಾಡುವುದು’. ಕೆಲವು ಸಮುದಾಯಗಳಲ್ಲಂತೂ ಹತ್ತನೇ ತರಗತಿಯ ನಂತರ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಅವಶ್ಯಕತೆಯೇ ಅಪ್ಪ- ಅಮ್ಮಂದಿರಿಗೆ ಕಾಣಿಸುವುದಿಲ್ಲ. ಇಂತಹ ಬಾಲಕಿಯರು ದೈಹಿಕವಾಗಿ ಪ್ರಬುದ್ಧವಾಗುವುದಷ್ಟೇ ಅವರಿಗೆ ಬೇಕಾದ ರಹದಾರಿಯಾಗಿಬಿಡುತ್ತದೆ.

ಹಾಗೆ 16 ವರ್ಷಕ್ಕೆ ಮಕ್ಕಳನ್ನು ಹೆರಲು ಮಾತ್ರ ಸಾಧ್ಯವಾಗುವ, ಉಳಿದ ಯಾವ ಪ್ರಬುದ್ಧತೆಯನ್ನೂ ಪಡೆಯದ, ಆದರೂ ಮದುವೆಯಾಗುವ ಎಷ್ಟು ಪ್ರಕರಣಗಳು ಪ್ರತಿದಿನ ತೆರೆಮರೆಯಲ್ಲಿ ನಡೆಯುತ್ತಿರಬಹುದು?! ಇವುಗಳಲ್ಲೆಲ್ಲ ಶಿಕ್ಷೆ ಸಾಧ್ಯವಾಗಿದೆಯೇ? ವಿವಾಹಕ್ಕೆಂದು ಕಾನೂನು ಕನಿಷ್ಠ ವಯಸ್ಸನ್ನು ನಿಗದಿಪಡಿಸುವುದರ ಹಿಂದೆ ಬಾಲ್ಯವಿವಾಹಗಳನ್ನು ತಡೆಯುವ ಮತ್ತು ಅಪ್ರಬುದ್ಧ ವಯಸ್ಕರ ಮೇಲಿನ ದೌರ್ಜನ್ಯವನ್ನು ತಡೆಯುವ ಮುಖ್ಯ ಉದ್ದೇಶಗಳಿವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಆದರೆ ಜನರಲ್ಲಿ ಅರಿವಿಲ್ಲದೆ ಬರೀ ಕಾನೂನಿನಿಂದ ಯಾವ ಬದಲಾವಣೆಯನ್ನೂ ತರಲಾಗದು.

ಪ್ರಸ್ತುತ ಆಡಳಿತ ವ್ಯವಸ್ಥೆಯು ಮದುವೆಯ ವಯಸ್ಸಿನ ಕನಿಷ್ಠ ಮಿತಿಯನ್ನು ಪುನರ್ ಪರಿಶೀಲಿಸುತ್ತಿರುವುದು ಸ್ವಾಗತಾರ್ಹವೇ. ಆದರೆ ನಿರೀಕ್ಷೆಯಂತೆ ಇದು ಪರಿಣಾಮ ಬೀರದಿರುವ ಸಾಧ್ಯತೆಗಳನ್ನೂ ನಾವು ಗಮನಿಸಬೇಕು. ‘ಬೇಗ ಮದುವೆ- ಬೇಗ ಮಕ್ಕಳು’ ಎಂಬ ಪರಿಸ್ಥಿತಿ ರೂಢಿಗತ ಧೋರಣೆಯಿಂದಲೂ ಚಾಲ್ತಿಯಲ್ಲಿ ಇರುವಂಥದ್ದೇ. ಈ ಧೋರಣೆ ಬದಲಾಗದೆ ಶಿಶುಮರಣ, ಮಾತೃಮರಣಗಳಲ್ಲಿ ಮದುವೆಯ ವಯಸ್ಸು ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಹಾಗಾಗಿಯೇ ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು ಏರಿಸುವಂತೆ ಶಿಫಾರಸು ಮಾಡಿರುವ ಜಯಾ ಜೇಟ್ಲಿ ನೇತೃತ್ವದ ಕಾರ್ಯಪಡೆಯು ಹೆಣ್ಣು ಮಕ್ಕಳಿಗೆ ಶಾಲಾ ಕಾಲೇಜುಗಳ ಮುಕ್ತ ಲಭ್ಯತೆ, ಕೌಶಲ ಮತ್ತು ವಾಣಿಜ್ಯ ತರಬೇತಿ, ಶಾಲೆಗಳಲ್ಲಿ ಕೌಟುಂಬಿಕ ಜೀವನ ಮತ್ತು ಲೈಂಗಿಕ ಶಿಕ್ಷಣ ನೀಡುವುದು- ಇವು ಮೊದಲು ನಡೆಯದಿದ್ದರೆ, ಕಾನೂನು ವಿಫಲವಾಗುವ ಮುನ್ಸೂಚನೆಯನ್ನೂ ನೀಡಿದೆ.

ಕಾನೂನನ್ನು ಹೇಗಾದರೂ ಮಾಡಿ ಹೇರುವ ಬದಲು, ಮದುವೆಯ ವಯಸ್ಸನ್ನು ಏರಿಸುವುದರಿಂದ ಮಹಿಳೆಗೆ, ಎಲ್ಲರ ಜೀವನಕ್ಕೆ, ಇಡೀ ಸಮಾಜಕ್ಕೆ ಇರುವ ಉಪಯೋಗಗಳ ಬಗೆಗೆ ದೊಡ್ಡ ಮಟ್ಟದಲ್ಲಿ ಅರಿವು ಹೆಚ್ಚಿಸಬೇಕೆಂದು ಕಾರ್ಯಪಡೆಯು ಸೂಚಿಸಿರುವುದು ಪ್ರಶಂಸನೀಯ. ಆಗ ಈ ಸಂಬಂಧದ ಕಾನೂನಿನ ಒಪ್ಪುವಿಕೆ- ಪಾಲಿಸುವಿಕೆ ವಿಶೇಷವಾಗಿ ಕೆಳವರ್ಗ, ಕೆಳ ಮಧ್ಯಮ ವರ್ಗಗಳಲ್ಲಿ ಸಾಧ್ಯವಾಗಬಹುದು. ತತ್‍ಕ್ಷಣಕ್ಕೆ ಇದನ್ನು ವಿರೋಧಿಸಬಹುದಾದ ಯಾರೂ ಮೊದಲು ಕಾರ್ಯಪಡೆಯು ಯಾವ ಆಧಾರದ ಮೇಲೆ ಈ ಶಿಫಾರಸನ್ನು ಮಾಡಿದೆ ಎಂಬುದನ್ನೂ ಗಮನಿಸಬೇಕು.

ದೇಶದಾದ್ಯಂತ 16 ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನರ ಸಮೀಕ್ಷೆ, 15ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳಿಂದ ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಗ್ರಾಮೀಣ ಪ್ರದೇಶಗಳ ಸಮೀಕ್ಷೆ ನಡೆಸಿ ಕಾರ್ಯಪಡೆ ಈ ಶಿಫಾರಸು ಮಾಡಿದೆ. ಮುಖ್ಯವಾಗಿ ನಗರ- ಗ್ರಾಮೀಣ ಪ್ರದೇಶಗಳು ಮತ್ತು ಎಲ್ಲಾ ಧರ್ಮಗಳ ಅಭಿಪ್ರಾಯವನ್ನು ಸಮಾನವಾಗಿ ಪರಿಗಣಿಸಲಾಗಿದೆ ಎನ್ನುವುದು ವಿಶೇಷ. ಹಾಗಾಗಿ ಕೇವಲ ರಾಜಕೀಯ ಭೇದದಿಂದ, ಎಡ- ಬಲ ಎಂಬ ವ್ಯತ್ಯಾಸದಿಂದ ಇದನ್ನು ತಳ್ಳಿಹಾಕುವಂತಿಲ್ಲ ಅಥವಾ ಕಾನೂನು ಉಲ್ಲಂಘಿಸುವುದು ಹೆಚ್ಚಾದೀತೆಂಬ ಭಯದಿಂದ ಕಾಲಕ್ಕೆ ಸರಿಯಾಗಿ, ವೈಜ್ಞಾನಿಕ ಆಧಾರವಿರುವ ಸಂಗತಿಗಾಗಿ ಕಾನೂನನ್ನು ಮಾರ್ಪಡಿಸುವ, ಅರಿವು ಮೂಡಿಸುವ ಪ್ರಯತ್ನವನ್ನೇ ಮಾಡದಿರುವುದೂ ನೈತಿಕತೆಯ ಪ್ರಶ್ನೆಯಿಂದ ವಿದ್ಯಾವಂತರಾದ ನಾವು ಮಾಡುವ ಅಪರಾಧವೇ!

ಹುಡುಗಿಯರ ಹೆಚ್ಚಿದ ವಿದ್ಯಾಭ್ಯಾಸವನ್ನು, ಆರ್ಥಿಕ ಸಬಲತೆಯನ್ನು ಇಂದು ವಿವಾಹ ವಿಚ್ಛೇದನಗಳ ಪ್ರಮುಖ ಕಾರಣವಾಗಿ ನೋಡುವವರು ಬಹಳಷ್ಟು ಮಂದಿ. ಆದರೆ ವಿಚ್ಛೇದನವಾಗದ ಮಾತ್ರಕ್ಕೆ, ಮೂಕವಾಗಿ ನರಳುವ ಮದುವೆಗಳು ಅದೆಷ್ಟೋ! ಅಂತಹ ಪರಿಸ್ಥಿತಿಗಳಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮಿತಿ ಏರುವಿಕೆ ಉಪಯುಕ್ತ ಎನಿಸುತ್ತದೆ. ಸಹಾಯ ಪಡೆಯಲು, ಸ್ವಾವಲಂಬಿಯಾಗಲು, ಆರೋಗ್ಯದ ಅರಿವು ಪಡೆಯಲು ಮಹಿಳೆಯ ವಿವಾಹಕ್ಕೆ 21 ವರ್ಷಗಳ ವಯಸ್ಸಿನ ಕನಿಷ್ಠ ಮಿತಿ ಅತ್ಯಗತ್ಯ. ಇದು ಕೇವಲ ಮಹಿಳೆಗಷ್ಟೇ ಅಲ್ಲ, ಮಕ್ಕಳ ಆರೋಗ್ಯಕ್ಕೆ, ಕೌಟುಂಬಿಕ ಸುಭದ್ರತೆಗೆ ಅವಶ್ಯಕ. ಹಾಗಾಗಿ ಮಾಡಬೇಕಾದ ಕೆಲಸ ಬೇಕಾದಷ್ಟಿದ್ದರೂ ಕ್ರಮಿಸಬೇಕಾದ ಹಾದಿ ಬಹಳವಿದ್ದರೂ ಬಹುದಿನಗಳಿಂದ ಕಾಲಕ್ಕನುಗುಣವಾಗಿ ಬದಲಾಗಲೇಬೇಕಿದ್ದ ವಿವಾಹದ ಕನಿಷ್ಠ ವಯಸ್ಸಿನ ಮಿತಿಯ ಕಾನೂನು, ಬದಲಾವಣೆಯತ್ತ ಹೆಜ್ಜೆ ಇಟ್ಟಿರುವುದನ್ನು ಅರಿವಿನಿಂದ ಸ್ವಾಗತಿಸೋಣ. ಅರಿವು ಹೆಚ್ಚಿಸಲು ದುಡಿಯೋಣ.

-ಡಾ. ಕೆ.ಎಸ್.ಪವಿತ್ರ, ಮನೋವೈದ್ಯೆ
-ಡಾ. ಕೆ.ಎಸ್.ಪವಿತ್ರ, ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT