ಶನಿವಾರ, ಮೇ 21, 2022
25 °C
ಮಾಲಿನ್ಯದ ತಾಪ ಎಲ್ಲರಿಗೂ ತಟ್ಟುತ್ತಿದೆ, ಪರಿಹಾರ ಮಾತ್ರ ಕಾಣದಾಗಿದೆ

ವಿಶ್ಲೇಷಣೆ: ನಗರಗಳಿಗೆ ವಾಯುಮಾಲಿನ್ಯದ ‘ಕಿರೀಟ’

ಟಿ.ಆರ್.‌ಅನಂತರಾಮು Updated:

ಅಕ್ಷರ ಗಾತ್ರ : | |

ಯಾವುದಾದರೂ ಪ್ರತಿಷ್ಠಿತ ಪ್ರಶಸ್ತಿ ಘೋಷಣೆ ಆದೊಡನೆ ಸಾಮಾನ್ಯವಾಗಿ ನಮ್ಮ ಕಣ್ಣುಗಳು ಚುರುಕಾಗುತ್ತವೆ. ನಮ್ಮ ನಟರಿಗೋ ಸಿನಿಮಾಕ್ಕೋ ನಮ್ಮ ಸಾಹಿತಿಗಳಿಗೋ ವಿಜ್ಞಾನಿಗಳಿಗೋ ಈ ಪಟ್ಟಿಯಲ್ಲಿ ಸ್ಥಾನ ಇರಬಹುದೇ ಎಂದು ಕುತೂಹಲ ತಳೆಯುತ್ತೇವೆ. ಅಲ್ಲಿ ಕಾತರವಿರುತ್ತದೆ, ನಿರೀಕ್ಷೆ ಇರುತ್ತದೆ.

ಪ್ರತಿವರ್ಷವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗುವ ಬೇರೊಂದು ಪಟ್ಟಿ ಇದೆ. ಅದನ್ನು ನೋಡುವಾಗ ಕಾತರವಿರುವುದಿಲ್ಲ, ಕುತೂಹಲವಿರುವುದಿಲ್ಲ, ಬದಲು ಭಯ, ಆತಂಕ, ದುಮ್ಮಾನವಿರುತ್ತದೆ. ಎಲ್ಲಿ ನಮ್ಮ ದೇಶದ ಅಥವಾ ನಗರಗಳ ಹೆಸರು ಬಂದುಬಿಟ್ಟಿದೆಯೋ ಎಂಬ ಆತಂಕ ಕಾಡುತ್ತದೆ. ಈ ಆತಂಕವನ್ನು ನಿಜಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ನಮ್ಮ ದೇಶದ ಹೆಸರು ಇದ್ದೇ ಇರುತ್ತದೆ. ಹಾಗೆಯೇ ನಮ್ಮ ನಗರಗಳೂ ಸ್ಥಾನ ಗಿಟ್ಟಿಸಿರುತ್ತವೆ. ಏನಿಲ್ಲದಿದ್ದರೂ ನಮ್ಮ ರಾಜಧಾನಿ ದೆಹಲಿ ಹೆಸರಂತೂ ಗ್ಯಾರಂಟಿ.

ಈ ವರದಿಯನ್ನು ಬಿಡುಗಡೆ ಮಾಡುವುದು ಒಂದು ಜವಾಬ್ದಾರಿಯುತ ಸಂಸ್ಥೆ. ಅದರ ಹೆಸರು ಐಕ್ಯುಏರ್. ಸ್ವಿಟ್ಜರ್ಲೆಂಡಿನ ಈ ಸಂಸ್ಥೆಯು ವಾಯುಮಾಲಿನ್ಯದಲ್ಲಿ ಹೈ ಜಂಪ್‌ ಮಾಡುತ್ತಲೇ ಬಂದಿರುವ ಜಗತ್ತಿನ ದೇಶಗಳು, ನಗರಗಳ ಪಟ್ಟಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಬಿಡುಗಡೆ ಮಾಡಿದೆ. ಈಗಲೂ ರಾಜಧಾನಿಗಳ ಪೈಕಿ ದೆಹಲಿಗೇ ಮಾಲಿನ್ಯದ ‘ಕಿರೀಟ’. ದೇಶಗಳ ಶ್ರೇಯಾಂಕ ಪಟ್ಟಿಯಲ್ಲಿ ಬಾಂಗ್ಲಾ ದೇಶ, ಛಾಡ್‌, ಪಾಕಿಸ್ತಾನ, ಕಜಕಿಸ್ತಾನ ಆನಂತರ ಭಾರತ ವಿಜೃಂಭಿಸುತ್ತಿವೆ. ನಗರಗಳ ಪ್ರಶ್ನೆ ಬಂದಾಗ, ಮೊದಲ 50 ಅತಿ ವಾಯು ಕಲುಷಿತ ನಗರಗಳಲ್ಲಿ 35  ಭಾರತದಲ್ಲೇ ಇವೆ. ಇದೂ ಒಂದು ‘ರೆಕಾರ್ಡ್‌’. ರಾಜಸ್ಥಾನದ ಭಿವಾಡದಲ್ಲಿ ನಿಗದಿತ ಪ್ರಮಾಣಕ್ಕಿಂತ 38 ಪಟ್ಟು ಹೆಚ್ಚು ದೂಳುಮಾಲಿನ್ಯ. ವಾಯುಮಾಲಿನ್ಯದಲ್ಲಿ ಇದಕ್ಕೆ ‘ಚಿನ್ನದ ಪ್ರಶಸ್ತಿ’.

ಜಗತ್ತಿನ ವಾಯುಮಾಲಿನ್ಯ ಎಷ್ಟು ಅಧ್ವಾನವಾಗಿದೆಯೆಂದರೆ, ಕಳೆದ ವರ್ಷ ವಿಶ್ವಸಂಸ್ಥೆ ಒಂದು ಸೂಚಿಯನ್ನು ಬಿಡುಗಡೆ ಮಾಡಿ ಎಲ್ಲ ದೇಶಗಳಿಗೂ ರವಾನೆ ಮಾಡಿತ್ತು. ನಿಮ್ಮ ನಗರದ ಗಾಳಿಯಲ್ಲಿ ಪ್ರತಿ ಘನ ಮೀಟರು ಗಾಳಿಯಲ್ಲಿ 5 ಮೈಕ್ರೊ ಗ್ರಾಂಗಿಂತ ಹೆಚ್ಚು ಮಾಲಿನ್ಯ ಕಣಗಳು ಇಲ್ಲದಂತೆ ನೋಡಿಕೊಳ್ಳಿ. ಎಚ್ಚರವಿರಲಿ, 2.5 ಮೈಕ್ರೊ ಮೀಟರ್‌ ಗಾತ್ರಕ್ಕಿಂತ ಸಣ್ಣ ಕಣ್ಣಗಳು ದಟ್ಟೈಸದಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ ಎಂದಿತ್ತು. ಆದರೆ ಯಾವ ದೇಶವೂ ಇದಕ್ಕೆ ಕವಡೆ ಕಿಮ್ಮತ್ತನ್ನೂ ಕೊಟ್ಟಂತೆ ಕಾಣುವುದಿಲ್ಲ. ನಮ್ಮ ದೇಶದ 35 ನಗರಗಳಲ್ಲಿ ವಿಶ್ವಸಂಸ್ಥೆ ನಿಗದಿಪಡಿಸಿದ್ದಕ್ಕಿಂತ 10 ಪಟ್ಟು ಹೆಚ್ಚು ಮಾಲಿನ್ಯಕಾರಕಗಳು ದಟ್ಟೈಸಿವೆ. ಐಕ್ಯುಏರ್‌ ಸಂಸ್ಥೆ ಈ ಫಲಿತಾಂಶವನ್ನೇ ನಮ್ಮ ಮುಖದ ಮೇಲೆ ಹಿಡಿದಿರುವುದು.

ಈ ಸಂಸ್ಥೆ ಬೇಕಾಬಿಟ್ಟಿಯಾಗಿ, ಯಾವುದೋ ದೇಶವನ್ನು ಹೀಗಳೆಯಲು ಮಾಡಿದ ಹುನ್ನಾರ ಇದಲ್ಲ. ಜಗತ್ತಿನಾದ್ಯಂತ 117 ದೇಶಗಳಲ್ಲಿ ಸ್ಥಾಪಿಸಿರುವ 6,475 ಮಾಲಿನ್ಯ ನಿಗಾ ಕೇಂದ್ರಗಳ ಮಾಹಿತಿಗಳನ್ನು ಹೆಕ್ಕಿ ಈ ಫಲಿತಾಂಶವನ್ನು ಪ್ರಕಟಿಸಿದೆ. ಅನೇಕ ನಗರಗಳ ಮೇಲೆ ದೂಳಿನ ಕಣಗಳ ಜೊತೆ ಹೊಗೆ, ಮಂಜು ಬೆರೆತು ಇಡೀ ನಗರಗಳೇ ಮಸುಕಾಗಿರುವುದನ್ನು ಉಪಗ್ರಹಗಳ ಛಾಯಾಚಿತ್ರಗಳ ಸಮೇತ ಇದು ಮುಂದಿಟ್ಟಿದೆ.

ವಿಶ್ವಸಂಸ್ಥೆಯ ಪರಿಸರ ವಿಭಾಗದಲ್ಲಿ ಪ್ರತೀ ಕ್ಷಣದಲ್ಲೂ ಯಾವ ನಗರದ ವಾಯುಮಾಲಿನ್ಯ ಎಷ್ಟು ಹದಗೆಟ್ಟಿದೆ ಎಂಬುದನ್ನು ವಿವರಿಸುವ ನಕ್ಷೆಗಳನ್ನು ಪ್ರದರ್ಶಿಸಲಾಗಿದೆ. ಈಗಲೂ‌ ಕಂಪ್ಯೂಟರ್‌ನಲ್ಲಿ ಆ ನಕ್ಷೆಯ ಮೇಲೆ ಕರ್ಸರ್‌ (ಬಾಣ) ಇಟ್ಟರೆ ನಮ್ಮ ನಗರಗಳ ಬಂಡವಾಳವೆಲ್ಲ ಬಯಲು.

ಈ ಸಮೀಕ್ಷಾ ಸಂಸ್ಥೆಯು 2021ರ ವರದಿ ಬಿಡುಗಡೆ ಮಾಡುವಾಗ, ಅತ್ಯಂತ ಬೇಸರಪಟ್ಟಿತ್ತು. ಏಕೆಂದರೆ ಜಗತ್ತಿನ ಯಾವೊಂದು ದೇಶವೂ ವಿಶ್ವಸಂಸ್ಥೆ ನಿಗದಿಪಡಿಸಿದ ಮಿತಿಯನ್ನು ಅನುಸರಿಸಿಲ್ಲ ಎಂದು. 2.5 ಮೈಕ್ರೊ ಮೀಟರ್‌ ಗಾತ್ರದ ತೇಲುಕಣಗಳ ಬಗ್ಗೆ ಏಕೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕು? ಕಾರಣವಿದೆ. ಈ ಕಣಗಳು ನಮ್ಮ ಕೂದಲಿನ ಗಾತ್ರಕ್ಕಿಂತಲೂ 70 ಪಟ್ಟು ಸಣ್ಣ; ಕಣ್ಣಿಗೆ ಕಾಣಿಸುವುದಿಲ್ಲ. ಸೂಕ್ಷ್ಮದರ್ಶಕ ಗಳಿಂದ ಮಾತ್ರ ನೋಡಬಹುದು. ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶಕ್ಕೆ ‘ಎಂಟ್ರಿ’ ಕೊಡುತ್ತವೆ. ಇದಕ್ಕಿಂತ ದೊಡ್ಡ ಗಾತ್ರದ ಕಣಗಳನ್ನು ಮೂಗಿನ ರೋಮ ಮತ್ತು ಲೋಳೆ ಪಟ್ಟೆಂದು ಹಿಡಿದು ಕೂಡಿಸುತ್ತವೆ ಒಳ
ಪ್ರವೇಶಿಸದಂತೆ. ಒಂದರ್ಥದಲ್ಲಿ ಸೆಕ್ಯೂರಿಟಿ ಗಾರ್ಡ್‌ ಕೆಲಸ. ಸೀನಿದರಾಯಿತು, ಹೊರಕ್ಕೆ ಅಟ್ಟಬಹುದು. ಸಣ್ಣ ಕಣಗಳು ಶ್ವಾಸಕೋಶಕ್ಕೆ ಹೋಗಿ ಕೆಮ್ಮು, ದಮ್ಮು ಸೃಷ್ಟಿಸುತ್ತವೆ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದರೆ ಸೀದಾ ನಮ್ಮ ರಕ್ತನಾಳಗಳಲ್ಲಿ ತೂರಿಬಿಡುತ್ತವೆ. ಮಿದುಳನ್ನು ಹಾನಿಗೊಳಿಸಿದರೂ ಆಶ್ಚರ್ಯವಿಲ್ಲ. ಹೀಗಾಗಿಯೇ 2.5 ಮೈಕ್ರೊ ಮೀಟರ್‌ ಗಾತ್ರದ ಕಣಗಳು ಅತ್ಯಂತ ಅಪಾಯಕಾರಿ.

ವಾಯುಮಾಲಿನ್ಯದಿಂದಾಗುವ ಸಾವು ನೋವು ಬೇಗ ಜಗತ್ತಿನ ಗಮನಕ್ಕೆ ಬರುವುದಿಲ್ಲ. ಆದರೂ ವಿಶ್ವ ಆರೋಗ್ಯ ಸಂಸ್ಥೆ ಲೆಕ್ಕ ಇಟ್ಟಿದೆ. ಜಗತ್ತಿನಲ್ಲಿ ಪ್ರತಿವರ್ಷ ಏಳು ಲಕ್ಷ ಮಂದಿ ಅಶುದ್ಧ ಗಾಳಿ ಸೇವಿಸಿ ಸಾಯುತ್ತಿದ್ದಾರೆ. ಕೋವಿಡ್‌ ಬಂದ ಸಮಯದಲ್ಲೂ ವಿಶೇಷವಾಗಿ, 2021ರಲ್ಲಿ 40,000 ಮಕ್ಕಳು ಮಾಲಿನ್ಯಕಾರಕ ಗಾಳಿ ಸೇವಿಸಿಯೇ ಸತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ಏಕೆ ಇಡೀ ಜಗತ್ತು ಗಾಳಿಮಾಲಿನ್ಯದಿಂದ ಬಸವಳಿದಿದೆ ಎಂಬುದನ್ನು ಹೊಸದಾಗಿ ಸಂಶೋಧನೆ ಮಾಡಿ ಹೇಳಬೇಕಾದ್ದೇನೂ ಇಲ್ಲ. ವಿಶೇಷವಾಗಿ ಶ್ವಾಸಕೋಶ ಸೇರುವ ಸಣ್ಣ ಕಣಗಳು ಡೀಸೆಲ್‌ ಎಂಜಿನ್ನಿನಿಂದ ಹೊರಬೀಳುತ್ತವೆ. ಮನೆ ಕಟ್ಟುವಾಗ ಏಳುವ ದೂಳು ವಾಯುಗೋಳ ಸೇರುತ್ತದೆ. ಫ್ಯಾಕ್ಟರಿ ಹೊಗೆ, ಗಿಡಗಳ ಸೂಕ್ಷ್ಮ ಬೀಜಗಳು, ಇದ್ದಕ್ಕಿದ್ದಂತೆ ಸಣ್ಣ ಕಣಗಳನ್ನು ಮರಳುಗಾಡಿನಿಂದ ಎತ್ತಿ ತರುವ ಗಾಳಿ, ಕಾಳ್ಗಿಚ್ಚು ಇಲ್ಲೆಲ್ಲ ಕೆಲಸ ಮಾಡುತ್ತವೆ.

ಇವೆರಡಕ್ಕಿಂತ ಹೆಚ್ಚು ಅಪಾಯಕಾರಿಯಾದ ಎರಡು ಮೂಲಗಳಿವೆ. ಕೃಷಿ ತ್ಯಾಜ್ಯವನ್ನು ಹೊಲ, ಗದ್ದೆಗಳಲ್ಲೇ ಉರಿಸುವುದು ಮತ್ತು ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಉರಿಸುವ ಕಲ್ಲಿದ್ದಲು. ಭಾರತದಲ್ಲಿ ವಾರ್ಷಿಕ 6,000 ಲಕ್ಷ ಟನ್ನು ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ಪೈಕಿ ಉತ್ತರಪ್ರದೇಶದ ಕೊಡುಗೆಯೇ 1,300 ಲಕ್ಷ ಟನ್ನು. ಮಸಿ ಸಮೇತ ಈ ಕಣಗಳು ದೆಹಲಿಯನ್ನು ಕಂಗೆಡಿಸಿರುವುದು ಹೊಸ ಸುದ್ದಿಯೇ ಅಲ್ಲ. ಇನ್ನು ಶಕ್ತಿಯ ಮೂಲವಾಗಿ ಭಾರತದಲ್ಲಿ ಶೇ 60ರಷ್ಟು ಭಾಗ ಅವಲಂಬನೆ ಉಷ್ಣ ಸ್ಥಾವರದ ಮೇಲಿದೆ. 2030ರ ಹೊತ್ತಿಗೆ ಈ ಅವಲಂಬನೆ ಶೇ 50 ಭಾಗ ಇಳಿಯಬಹುದು ಎಂಬುದು ನೀತಿ ಆಯೋಗದ ಅಂದಾಜು. ಅಲ್ಲಿಯವರೆಗೆ ಕಲ್ಲಿದ್ದಲ ವ್ಯಾಪಕ ದಹನ ನಡೆದೇ ಇರುತ್ತದೆ. ಕಾರ್ಬನ್‌ ಕಣಗಳ ತೇಲಾಟ– ಮೇಲಾಟ– ಉಸಿರಾಟ ಅನಿವಾರ್ಯ.

ಹಾಗೆಂದು ಸಂಶೋಧನಾ ಸಂಸ್ಥೆಗಳೇನೂ ಕೈಕಟ್ಟಿ ಕುಳಿತಿಲ್ಲ. ರಾಷ್ಟ್ರೀಯ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿ.ಎಸ್.‌ಐ.ಆರ್‌. ಮುಂಬೈನ ಐ.ಐ.ಟಿ.ಯು ಮಾಲಿನ್ಯ ಹೀರುವ ಯಂತ್ರಗಳನ್ನು ಸೃಷ್ಟಿಸಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ‘ವಾಯು’ ಎಂಬ ಉಪಕರಣವನ್ನು ದೆಹಲಿಯಲ್ಲಿ ಅಳವಡಿಸಿದೆ. ಆದರೆ ಉತ್ಸರ್ಜಿಸುವ ಮಾಲಿನ್ಯವನ್ನು ಸಂಪೂರ್ಣವಾಗಿ ಹೀರುವ ಸಾಮರ್ಥ್ಯ ಇದಕ್ಕಿಲ್ಲ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎರಡು ವರ್ಷಗಳ ಹಿಂದೆ, ಇಡೀ ನಗರದಲ್ಲಿ ವಾಯುಮಾಲಿನ್ಯ ಹೀರುವ ಸುಮಾರು 500 ಉಪಕರಣಗಳ ಸ್ಥಾಪನೆಗೆ ಮುಂದಾಗಿತ್ತು. ಅದು ಸುದ್ದಿಯಾಯಿತು ಅಷ್ಟೇ. ಈಗಲೂ ದೇಶದಾದ್ಯಂತ 804 ವಾಯುಮಾಲಿನ್ಯ ವೀಕ್ಷಣಾ ಕೇಂದ್ರಗಳು ಸತತ 24 ಗಂಟೆಯೂ ಕೆಲಸ ಮಾಡುತ್ತಿವೆ. ಇವು ನಮ್ಮ ಮಾಲಿನ್ಯದ ಪಾಪವನ್ನು ಕರಾರುವಾಕ್ಕಾಗಿ ಬೊಟ್ಟು ಮಾಡಿ ತೋರಿಸುತ್ತವೆ ಅಷ್ಟೇ. ಪರಿಹಾರಕ್ಕಾಗಿ ಹುಡುಕಾಟ ಇನ್ನೂ ನಡೆದೇ ಇದೆ.

– ಟಿ.ಆರ್.‌ಅನಂತರಾಮು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು