ಗುರುವಾರ , ಫೆಬ್ರವರಿ 9, 2023
30 °C
ಕೆಲವರ ಇಂಗದ ದಾಹಕ್ಕಾಗಿ ಜನಸಮೂಹದ ಸ್ನೇಹಭಾವಗಳನ್ನು ಆಪೋಶನ ತೆಗೆದುಕೊಳ್ಳಲಾಗುತ್ತಿದೆ

ವಿಶ್ಲೇಷಣೆ: ನಮ್ಮ ವಿರುದ್ಧ ನಮ್ಮದೇ ಚಿತ್ತ

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

Prajavani

‘ಹಸಿದ ನಾಯಿಗಳು ಹಸಿವು ನೀಗದಿದ್ದರೂ ಮೂಳೆಯ ಚೂರನ್ನು ಕಡಿಯುವಂತೆ ಮನುಷ್ಯನು ಈ ಲೌಕಿಕ ಭೋಗಗಳಿಂದ ತೃಪ್ತಿ ದೊರೆಯದಿದ್ದರೂ ಅವುಗಳನ್ನು ಅನುಭವಿಸ ಬಯಸುತ್ತಾನೆ’ ಎನ್ನುತ್ತಾನೆ ಬುದ್ಧ. ‘ಎಂದೂ ದಾನ ಮಾಡದೆ ಸದಾ ಸಂಪತ್ತಿನ ಸಂಗ್ರಹಣೆ ಮತ್ತು ಹೊಸ ಸುಖಗಳಿಗೆ ಹಾತೊರೆಯುವ ಶ್ರೀಮಂತರನ್ನು ಹಾಗೂ ರಾಜ್ಯದ ಜನತೆ ಸಾಯುತ್ತಿದ್ದರೂ ದಿಗ್ವಿಜಯ
ಗಳಿಗೆ ಹಾತೊರೆಯುತ್ತಾ, ಸಮುದ್ರದಾಚೆಗಿನ ಸಾಮ್ರಾಜ್ಯಗಳ ಮೇಲಿನ ಅಧಿಕಾರಕ್ಕಾಗಿ ಆಸೆಪಡುವ ರಾಜರುಗಳನ್ನು ಮತ್ತು ಏನೆಲ್ಲಾ ಇದ್ದರೂ ಕೊರತೆಯಿಂದ ಬಳಲುವವರನ್ನು ನಾನು ನೋಡಿದ್ದೇನೆ. ಈ ಲೋಕದಲ್ಲಿ ಸುಖದ ಪಾತ್ರೆ ಎಂದೂ ತುಂಬುವುದಿಲ್ಲ’ ಎಂದು ಬುದ್ಧನ ಶಿಷ್ಯ ಭಿಕ್ಕು ರಥಪಾಲನು ಹೇಳುತ್ತಾನೆ (ಬುದ್ಧ ಮತ್ತು ಆತನ ಧಮ್ಮ; ಡಾ. ಬಿ.ಆರ್.ಅಂಬೇಡ್ಕರ್; ಅನು:
ಡಾ. ಎನ್.ಜಗದೀಶ ಕೊಪ್ಪ).

ಸಂದರ್ಭ ಮತ್ತು ಆಸೆಗಳ ಸ್ವರೂಪ ಬದಲಾಗಿದ್ದರೂ ಮನುಷ್ಯರಲ್ಲಿ ಯಾವ ಬದಲಾವಣೆಯೂ ಆಗದೆ ವಸ್ತು
ಪ್ರಪಂಚವೇ ಆರ್ಥಿಕ ನೀತಿಯ ಕೇಂದ್ರವಾಗಿರುವ ಇಂದಿನ ಕಾಲದಲ್ಲಿ, ಯಾವುದೇ ರೂಪದಲ್ಲಿ ಅತಿ ಶ್ರೀಮಂತರಾಗು ವುದು, ಸಮುದ್ರದಾಚೆಗೆ ಮಾತ್ರವಲ್ಲ ದೇಶದೊಳಗೇ ಶತ್ರುಗಳನ್ನು ಸೃಷ್ಟಿಸಿ ದಿಗ್ವಿಜಯ ಸಾಧಿಸುವುದು- ಒಟ್ಟಿನಲ್ಲಿ ಹಸಿದ ನಾಯಿಗಳಾಗುವುದೇ ಪರಮ ಮೌಲ್ಯವೆಂದು ಹಸಿದ ನಾಯಿಗಳೇ ಸಾರುವುದು ಎಲ್ಲೆಡೆ ನಡೆಯುತ್ತಿದೆ. ಹೀಗೆ ಮಾಡಲು ಬೇಕಾದ ಎಲ್ಲಾ ಸುಳ್ಳುಗಳನ್ನು ಸೃಷ್ಟಿಸಿ ಆಕ್ರಮಣ ಮಾಡಲು, ನಮ್ಮ ಅತ್ಯಾಧುನಿಕ ತಂತ್ರಜ್ಞಾನವು ರಸಗೊಬ್ಬರವಾಗಿದೆ. ಇದು ಸಂಪತ್ತು ಮತ್ತು ಅಧಿಕಾರ
ಇರುವವರ ಆಡುಂಬೊಲವಾಗಿದೆ.

ಕೆಲವು ದೈತ್ಯ ತಂತ್ರಜ್ಞಾನ ಕಂಪನಿಗಳ ಬಳಿ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅಪಾರ ಮಾಹಿತಿ ಇದೆ. ಅದನ್ನು ಅವುಗಳು ನಮ್ಮ ಕೈಯಲ್ಲಿನ ಮೊಬೈಲ್ ಫೋನ್‌ ಮೂಲಕವೇ ಪಡೆದಿವೆ. ನಮ್ಮನ್ನು ಗಮನಿಸುತ್ತಾ, ಹಿಂಬಾಲಿಸುತ್ತಾ, ಅಳೆಯುತ್ತಾ, ಗೂಢಚಾರಿಕೆ ಮಾಡುತ್ತಾ, ಅದನ್ನೆಲ್ಲಾ ದಾಖಲಿಸುತ್ತಾ ನಮ್ಮೆಲ್ಲರದೂ ಒಂದೊಂದು ಮಾದರಿ ಶಿಲ್ಪವನ್ನು ಮಾಡಿಟ್ಟುಕೊಂಡಿವೆ. ನಾವು ಎಷ್ಟು ಹೊತ್ತು ಯಾವುದನ್ನು ನೋಡುತ್ತೇವೆ, ಕೇಳುತ್ತೇವೆ ಎಂಬುದನ್ನೆಲ್ಲಾ ತಿಳಿದು ಅದಕ್ಕೆ ಸಂಬಂಧಿಸಿದಂತೆ ನೋಟಿಫಿಕೇಷನ್ ಕಳಿಸುತ್ತವೆ. ಹೀಗೆ ಮಾಡುವುದಕ್ಕೆ ಅಲ್ಗಾರಿದಂನ ಒಂದಿಷ್ಟು ನೆರವನ್ನು ಅವು ಪಡೆದುಕೊಳ್ಳುತ್ತವೆ. ತಮ್ಮ ವ್ಯಾಪಾರವನ್ನು ಹೇಗಾದರೂ ವೃದ್ಧಿಸಿಕೊಳ್ಳುವುದಷ್ಟೇ ಇಂತಹ ಕಂಪನಿಗಳ ಉದ್ದೇಶ ವಿರಬಹುದು. ಇದರ ಪರಿಣಾಮಗಳನ್ನು ಹೇಳುವ ಅತ್ಯುತ್ತಮ ವಾದ ಡಾಕ್ಯುಮೆಂಟರಿ ‘ದಿ ಸೋಷಲ್ ಡೈಲೆಮಾ’ (ನೆಟ್‍ಫ್ಲಿಕ್ಸ್‌ನಲ್ಲಿ ಇದು ಲಭ್ಯ).

ಇದರಲ್ಲಿ ಭಾಗವಹಿಸಿದವರೆಲ್ಲರೂ ಗೂಗಲ್, ಟ್ವಿಟರ್, ಫೇಸ್‍ಬುಕ್, ಇನ್‌ಸ್ಟಾಗ್ರಾಂ, ಯುಟ್ಯೂಬ್‌ನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ದೊಡ್ಡ ತಂತ್ರಜ್ಞಾನಿಗಳು. ತಾವು ಮಾಡುತ್ತಿರುವ ಕೆಲಸ ಅನೈತಿಕವಾದುದು ಎಂಬ ಪ್ರಜ್ಞೆಯಿಂದ ಅದನ್ನು ಜನರಿಗೆ ಅರುಹಲು ಮತ್ತು ಏನಾದರೂ ಮಾಡಿ ಇವುಗಳೆಲ್ಲವನ್ನೂ ಮನುಕುಲದ ಒಳಿತಿನೆಡೆಗೆ ಒಯ್ಯಬೇಕು ಎಂಬ ತಹತಹದಿಂದ ಆ ಕೆಲಸಗಳನ್ನು ಬಿಟ್ಟು ಹೊರಬಂದು ಪರ್ಯಾಯವನ್ನು ಹುಡುಕಲು ಹೊರಟಿರುವವರು. ಯಾಕೆಂದರೆ, ಮೊದಲನೆಯದಾಗಿ, ಭಾರತವೂ ಸೇರಿ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯ ಚಟದಿಂದಾಗಿ ಹದಿಹರೆಯದವರು ಖಿನ್ನತೆಗೆ ಒಳಗಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ. ತಜ್ಞರ ಪ್ರಕಾರ, ಹೈಸ್ಕೂಲು ಹಂತದಲ್ಲಿ ಮೊಬೈಲ್ ಬಳಕೆಗೆ ಅವಕಾಶ ದೊರಕಿದ ತಲೆಮಾರು ಅತಿ ಹೆಚ್ಚು ಖಿನ್ನತೆಗೆ ಒಳಗಾಗಿದೆ. ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲದೆ ಎಲ್ಲಾ ವಯಸ್ಸಿನವರೂ ಸತ್ಯೋತ್ತರ ಯುಗದ ಸಾಮಾಜಿಕ ಜಾಲತಾಣಗಳ ಮೂಲಕ ಸಿಗುವ ಸುಳ್ಳು ಮಾಹಿತಿಗಳನ್ನೇ ಆತ್ಯಂತಿಕ ಸತ್ಯವೆಂದು ಭಾವಿಸಿ, ತಮ್ಮ ಸುತ್ತಲಿನವರನ್ನು ಒಂದೋ ಆರಾಧಿಸುವ ಇಲ್ಲವೇ ಅನುಮಾನಿಸುವ, ದ್ವೇಷಿಸುವ ಕುದಿಬಿಂದುಗಳಾಗಿ ಪರಿವರ್ತನೆಯಾಗುತ್ತಿದ್ದಾರೆ.

ಇನ್ನೊಂದೆಡೆ, ರಾಜಕೀಯವಾಗಿ ಇದರ ದುರ್ಬಳಕೆ ಅಂಕೆ ಮೀರಿದೆ. ಸುಳ್ಳು ಸುದ್ದಿಗಳನ್ನು ಅಪ್‍ಲೋಡ್ ಮಾಡಲಾಗುತ್ತದೆ. ಅಧ್ಯಯನ
ವೊಂದರ ಪ್ರಕಾರ, ನಿಜಸುದ್ದಿಗಳಿಗಿಂತ ಸುಳ್ಳುಸುದ್ದಿ ಗಳು ಆರು ಪಟ್ಟು ವೇಗವಾಗಿ ಹಬ್ಬುತ್ತವೆ. ನಿಜ, ಸುಳ್ಳುಗಳ ಭೇದ ಅರಿಯದ ಕೃತಕ ಬುದ್ಧಿಮತ್ತೆಯು ಅದನ್ನು ನೋಡುವವರಿಗೆ ಅಂಥದೇ ಸುದ್ದಿಗಳನ್ನು ಬೆಂಬಿಡದೆ ಕಳಿಸತೊಡಗುತ್ತದೆ. ಇದರಿಂದಾಗಿ ಜನರ ನಡುವೆ ಧ್ರುವೀಕರಣವನ್ನು ಹುಟ್ಟುಹಾಕುವ, ನಿರ್ದಿಷ್ಟ ಗುರಿ ಇಟ್ಟು ಪ್ರಚಾರ (ಅಪಪ್ರಚಾರ!) ಮಾಡುವ ಕೆಲಸಗಳಿಗೆ ಇದು ಪೂರಕವಾಗಿ ಒದಗಿ ಬರುತ್ತದೆ. ತಮ್ಮ ಅಧಿಕಾರವನ್ನು ಅನಿರ್ಬಂಧಿತವಾಗಿ ಉಳಿಸಿಕೊಳ್ಳುವುದೊಂದೇ ಧ್ಯೇಯವಾಗಿರುವ ಕೂಟಗಳು ಮತ್ತು ವ್ಯಕ್ತಿಗಳು ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಗ್ಗಿಸಲು ಒಂದೆಡೆ ಹೊಗಳುಭಟರ ಪಡೆಯನ್ನೂ ಇನ್ನೊಂದೆಡೆ ವಿರೋಧಿಗಳನ್ನು ಹಣಿಯುವ ಪಡೆಯನ್ನೂ ನಿರ್ಮಿಸಿಕೊಂಡು ಸುಳ್ಳು ಕತೆ ಹರಡುವ ಸೈನ್ಯವನ್ನು ತೊಡಗಿಸಿ ಹುಸಿ ಯುದ್ಧವನ್ನು ತಮ್ಮದೇ ಪ್ರಜೆಗಳ ನಡುವೆ ಯೋಜಿಸುತ್ತಾರೆ. ಇದಕ್ಕಾಗಿ ಹೆಚ್ಚು ಹೆಚ್ಚು ದುಡ್ಡು ಮಾಡಬೇಕು ಅಥವಾ ದುಡ್ಡಿರುವವರನ್ನು ಸಾಕಬೇಕು. ಇವೆಲ್ಲವೂ ಒಂದು ವಿಷವರ್ತುಲ. ನಾವೆಲ್ಲರೂ ಇದರಲ್ಲಿ ಬಂದಿಗಳು.

ಹಾಗಾದರೆ ನಮಗೆ ಇದರಿಂದ ಬಿಡುಗಡೆಯೇ ಇಲ್ಲವೆ? ‘ನಿನ್ನ ಮಾನಸಿಕತೆಯನ್ನು ನಿನ್ನ ವಿರುದ್ಧವೇ ಬಳಸುವ’ ಗುರಿ ಮತ್ತು ದಾರಿಯನ್ನು ಇಂಟರ್ನೆಟ್ ಮೂಲಕ ಸಾಧಿಸಲಾಗುತ್ತಿದ್ದು, ಮೊದಲು ಇದರಿಂದ ಬಿಡಿಸಿಕೊಂಡರೆ ಮಾತ್ರ ಯಾವುದೇ ಬಿಡುಗಡೆ ಸಾಧ್ಯ. ಆಳುವ ಸರ್ಕಾರಗಳು, ಪ್ರಜೆಗಳು ಯಾವ ಕಾರಣಕ್ಕೂ ಸ್ಮಾರ್ಟ್‌ಫೋನ್‌ ಬಿಟ್ಟಿರದಂತೆ ಮಾಡಲು ಡಿಜಿಟಲ್ ಯೋಜನೆಗಳನ್ನು ರೂಪಿಸಿ ಅನಿವಾರ್ಯವಾಗಿಸುತ್ತವೆ. ತಮ್ಮ ಪರವಾದ ಡಿಬೆಟ್‍ಗಳು ನಿರಂತರ ಪ್ರಸಾರವಾಗುವಂತೆ ಟಿ.ವಿ. ಮಾಧ್ಯಮಗಳನ್ನು ‘ತನ್ನವರ’ ಒಡೆತನ ದಲ್ಲಿರಿಸುತ್ತವೆ. ಅಲ್ಗಾರಿದಂ ನೆರವಿನಿಂದ ಇವುಗಳನ್ನೇ ಜನ ನೋಡುವಂತೆ ಪ್ರಚೋದಿಸುವ ‘ಕುತಂತ್ರ’ ಹಗಲು– ರಾತ್ರಿ ಕೆಲಸ ಮಾಡುತ್ತದೆ. ಇದೆಲ್ಲಾ ಬಿಟ್ಟು ಜನ ಮಾನವ ಒಳಿತಿನ ಸಮಗ್ರತೆಯೆಡೆಗೆ ಮನಸ್ಸು ಹೊರಳಿಸುವ ಕೆಲಸ ಮಾಡುವುದೊಂದೇ ಸದ್ಯಕ್ಕೆ ಇರುವ ಬಿಡುಗಡೆಯ ದಾರಿ. ಪ್ರಾಜ್ಞರ ಚಿಂತನೆಗಳನ್ನು ಅದರ ಮೂಲರೂಪದಲ್ಲಿ ಅರಿತುಕೊಳ್ಳುವಂತೆ ಪ್ರೋತ್ಸಾಹಿಸುವ ಕಠಿಣ ದಾರಿ ಮಾತ್ರ ನಮ್ಮ ಮಕ್ಕಳ ಭವಿಷ್ಯವನ್ನು ಉಳಿಸುವುದಕ್ಕೆ ಸಾಧ್ಯ ಎಂದು ಈ ಡಾಕ್ಯುಮೆಂಟರಿಯ ತಜ್ಞರು ಹೇಳುತ್ತಾರೆ.

ಬಹುಶಃ ಎಪ್ಪತ್ತರ ದಶಕದ ನಂತರ ವಿಕೇಂದ್ರೀಕರಣ ತತ್ವಗಳು ಮುನ್ನೆಲೆಗೆ ಬಂದವು ಮತ್ತು ಸಾಧಿಸಬೇಕಾದ ಆದರ್ಶಗಳೆನಿಸಿದವು. ಸಂವಿಧಾನವು ಆಸರೆಯಾಗಿ ಸಮುದಾಯಗಳು ಅಸ್ಮಿತೆಗಳಾಗಿ, ಸ್ವಾವಲಂಬನೆ, ಸ್ವಾತಂತ್ರ್ಯ, ಸ್ವಾಭಿಮಾನದ ನೆಲೆಯಲ್ಲಿ ಪ್ರಜ್ಞಾವಂತ ಪ್ರಜೆಗಳು ದೇಶ ಕಟ್ಟುವವರಾಗಿ, ಬಹುತ್ವದ ನೇಯ್ಗೆಯೊಳಗೆ ಸದೃಢ ಭಾರತ ನಿರ್ಮಾಣವಾಗಬೇಕಿತ್ತು. ಆದರೆ ಅವು ಇದ್ದಕ್ಕಿದ್ದಂತೆ ವಿಭಜನೆಯ ವೋಟ್‍ಬ್ಯಾಂಕ್ ರಾಜಕಾರಣವಾಗಿ ತಮ್ಮ ಕೊನೆಯಿಲ್ಲದ ಓಟದಲ್ಲಿ ತೊಡಗಿಸಿಕೊಂಡಿವೆ. ಹಿಂದೆಲ್ಲಾ, ಕೊನೆಯಪಕ್ಷ ಅಧಿಕಾರ ಕೇಂದ್ರದ ಹೊರಗಿರುವ ಅಸಂಖ್ಯ ಪ್ರಜೆಗಳು ಶ್ರೇಣೀಕರಣದ ಎಲ್ಲ ಮಿತಿಗಳ ನಡುವೆಯೇ ಸ್ನೇಹದ ಒಡಲ ನೂಲು ನೇಯ್ದುಕೊಂಡು ಬದುಕು ತ್ತಿದ್ದರು. ಆದರೆ ಈಗ ಅಧಿಕಾರಹೀನರೂ ಕಲ್ಪಿತ ಕತೆಗಳಿಂದ ಪ್ರಭಾವಿತರಾಗಿ ಪರಸ್ಪರ ಹಲ್ಲುಮಸೆಯುವ ಹಂತಕ್ಕೆ ತಲುಪಿದ್ದಾರೆ. ಇದರಿಂದಾಗಿ ತಾವೆಲ್ಲರೂ ತಮ್ಮ ಹಕ್ಕಿನ ಅಧಿಕಾರವನ್ನೂ ಕಳೆದುಕೊಳ್ಳು
ತ್ತೇವೆ ಎಂಬ ಪ್ರಜ್ಞೆಯನ್ನೂ ಕಳೆದುಕೊಂಡಿದ್ದಾರೆ. ‘ಈ ಜಗತ್ತಿನ ಮನುಷ್ಯನಿಗೆ ಪ್ರೀತಿಯೊಂದೇ ಸಾಲದು. ನಿಜವಾಗಿ ಅವಶ್ಯಕತೆ ಇರುವುದು ಮೈತ್ರಿ. ಅದು ಪ್ರೀತಿಗಿಂತಲೂ ಹೆಚ್ಚು ವಿಶಾಲವಾದುದು. ಇದರರ್ಥ, ಮನುಷ್ಯರೊಂದಿಗೆ ಮಾತ್ರವಲ್ಲ, ಎಲ್ಲ ಜೀವಿಗಳೊಂದಿಗೂ ಸಹಬಾಳ್ವೆ ಎಂಬುದಾಗಿದೆ. ಎಲ್ಲ ಜೀವಿಗಳಿಗೂ ಸುಖ ಕೊಡಬಲ್ಲಂತಹ, ನಮ್ಮ ಮನಸ್ಸುಗಳನ್ನು ನಿಷ್ಪಕ್ಷಪಾತ ವಾಗಿ ಇಡಬಲ್ಲಂತಹ, ಎಲ್ಲರಿಗೂ ಮುಕ್ತವಾಗಿರುವ, ಎಲ್ಲರನ್ನೂ ಪ್ರೀತಿಯಿಂದ ಕಾಣುವಂತೆ ಮಾಡುವ, ಯಾರನ್ನೂ ದ್ವೇಷಿಸದಂತೆ ಮಾಡುವ ಶಕ್ತಿಯು ಮೈತ್ರಿಯಲ್ಲಿ ಇದೆ’ ಎನ್ನುವ ಬುದ್ಧನ ಮಾತು ಅರಿಯುವ ಪ್ರಬುದ್ಧರು ಹೆಚ್ಚಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು