ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗಳಿಗೆ ವೇಗದ ಇಂಟರ್‌ನೆಟ್‌: ತೆವಳುತ್ತಿದೆ ‘ಭಾರತ್‌ನೆಟ್’ ಸಂಪರ್ಕ!

ಗ್ರಾಮ ಪಂಚಾಯಿತಿಗಳಿಗೆ ವೇಗದ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸುವ ಯೋಜನೆಯ ವೇಗ ಆಮೆಗತಿಯದು!
Last Updated 22 ಆಗಸ್ಟ್ 2022, 10:20 IST
ಅಕ್ಷರ ಗಾತ್ರ

ದೇಶದ ಪ್ರತೀ ಹಳ್ಳಿಯನ್ನು ಇಂಟರ್‌ನೆಟ್‌ ಸಂಪರ್ಕದಲ್ಲಿ ಇರಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಿರೀಕ್ಷಿಸಿದಷ್ಟು ಪ್ರಗತಿ ಕಂಡಿಲ್ಲ. ಎರಡೂವರೆ ಲಕ್ಷಕ್ಕೂ ಹೆಚ್ಚು ಪಂಚಾಯಿತಿಗಳ ಮೂಲಕ ದೇಶದ ಆರು ಲಕ್ಷ ಹಳ್ಳಿಗಳನ್ನು ಇಂಟರ್‌ನೆಟ್‌ ಜಾಲಕ್ಕೆ ತರುವ ಕೇಂದ್ರ ಸರ್ಕಾರದ ಪ್ರಯತ್ನ ಮೊದಲು 2011ರಲ್ಲಿ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‍ವರ್ಕ್ (ಎನ್‌ಒಎಫ್‌ಎನ್‌) ಹೆಸರಿನಲ್ಲಿ ಪ್ರಾರಂಭವಾಯಿತು.

ಗ್ರಾಮೀಣ ಆರ್ಥಿಕತೆಯನ್ನು ಬಲಗೊಳಿಸಲು, ಉದ್ಯೋಗ ಸೃಷ್ಟಿಸಲು ಮತ್ತು ಹಳ್ಳಿಯ ಜನ ನಗರಗಳಿಗೆ ವಲಸೆ ಬರುವುದನ್ನು ತಡೆಯಲು ರೂಪಿಸಿದ ಯೋಜನೆ ಇದಾಗಿತ್ತು. 2012ರಲ್ಲಿ ಭಾರತ್ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್ ಲಿಮಿಟೆಡ್ (ಬಿಬಿಎನ್‌ಎಲ್‌) ಎಂಬ ಸರ್ಕಾರಿ ಸ್ವಾಮ್ಯದ ಕಂಪನಿಯನ್ನು ಪ್ರಾರಂಭಿಸಿದ ಕೇಂದ್ರ ಸರ್ಕಾರವು ದೇಶದ ಎಲ್ಲ ಪಂಚಾಯಿತಿಗಳಿಗೆ 2013ರ ವೇಳೆಗೆ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವ ನೀಲನಕ್ಷೆ ತಯಾರಿಸಿತ್ತು.

ಅತ್ಯಂತ ಉತ್ಸಾಹದಿಂದ ಶುರುವಾದ ಕೆಲಸದ ಫಲವಾಗಿ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಪಂಚಾಯಿತಿಗಳು ಇಂಟರ್‌ನೆಟ್‌ ಸಂಪರ್ಕ ಪಡೆದವು. ನಂತರ ಅದೇ ವೇಗ ಉಳಿಯಲಿಲ್ಲ. 2014ರಲ್ಲಿ ಅಧಿಕಾರಕ್ಕೆ ಬಂದ ಎನ್‍ಡಿಎ ನೇತೃತ್ವದ ಸರ್ಕಾರವು ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಅನ್ನು ‘ಭಾರತ್‍ನೆಟ್’ ಎಂದು ಕರೆದು, ನ್ಯಾಷನಲ್ ಡಿಜಿಟಲ್ ಕಮ್ಯುನಿಕೇಷನ್ ಪಾಲಿಸಿಯಂತೆ ಪ್ರತೀ ಗ್ರಾಮ ಪಂಚಾಯಿತಿಗೆ ಪ್ರತೀ ಸೆಕೆಂಡಿಗೆ 1 ಜಿಬಿ ಮಾಹಿತಿ ರವಾನಿಸುವ ಇಲ್ಲವೇ ಪಡೆಯುವ ವೇಗದ ಇಂಟರ್‌ನೆಟ್‌ ಕೊಡಬೇಕೆಂದು ಯೋಜನೆ ರೂಪಿಸಿತು. ಗ್ರಾಮ ಪಂಚಾಯಿತಿಗಳಿಗೆ ವೇಗದ ಇಂಟರ್‌ನೆಟ್‌ ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ಈ ಹಿಂದಿನ ಯುಪಿಎ ನೇತೃತ್ವದ ಸರ್ಕಾರ ಹಾಗೂ ಇಂದಿನ ಎನ್‌ಡಿಎ ನೇತೃತ್ವದ ಸರ್ಕಾರವು ಅದೆಷ್ಟೇ ಪ್ರಯತ್ನಿಸಿದರೂ ಆಗಿರುವ ಕೆಲಸ ಶೇ 55ರಷ್ಟು ಮಾತ್ರ.

ಯೋಜನೆ ಪ್ರಾರಂಭವಾದಾಗ ಅಂದಾಜುವೆಚ್ಚ ₹ 20,100 ಕೋಟಿ ಇತ್ತು. ಈಗ ಅದು ₹ 60,100 ಕೋಟಿಗೆ ತಲುಪಿದೆ. ಬಿಬಿಎನ್‍ಎಲ್‍ನ ಅಸಮರ್ಥ ಕಾರ್ಯವೈಖರಿಯಿಂದಾಗಿ ವೆಚ್ಚ ಮೂರು ಪಟ್ಟು ಹೆಚ್ಚಾಗಿದ್ದು, ಜನರ ತೆರಿಗೆಯ ಹಣ ಅನವಶ್ಯಕ
ವಾಗಿ ಖರ್ಚಾಗುತ್ತಿದೆ. ಈಗಾಗಲೇ ಏಳು ಗಡುವುಗಳನ್ನು ನೀಡಲಾಗಿದ್ದರೂ ಕೆಲಸ ಪೂರ್ತಿಯಾಗಿಲ್ಲ. ಆರ್ಥಿಕತೆಯ ಜೊತೆಗೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಇದರಿಂದ ಭಾರಿ ಹಿನ್ನಡೆಯಾಗಿದೆ.

ಕೋವಿಡ್ ಉಲ್ಬಣಿಸಿದ ಸಂದರ್ಭದಲ್ಲಿ ದೇಶದ 24.7 ಕೋಟಿ ಮಕ್ಕಳು ಆನ್‍ಲೈನ್ ಪಾಠ ಕೇಳಿಸಿಕೊಳ್ಳಲು, ನೋಡಲು ಪಡಬಾರದ ಪಾಡುಪಟ್ಟರು. ಜನವರಿ ತಿಂಗಳಿನಲ್ಲಿ ಯುನಿಸೆಫ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಗ್ರಾಮೀಣ ಪ್ರದೇಶಗಳ ಶೇ 76ರಷ್ಟು ಮನೆಗಳಿಗೆ ಇಂಟರ್‌ನೆಟ್‌ ಸಂಪರ್ಕ ಇರಲಿಲ್ಲ. ಅಂಥ ಮನೆಗಳ ಮಕ್ಕಳೆಲ್ಲ ಯಾವುದೇ ಶಿಕ್ಷಣ ಇಲ್ಲದೆ ಕಾಲ ದೂಡುವಂತಾಗಿತ್ತು. ಇಂಟರ್‌ನೆಟ್‌ ಸಂಪರ್ಕವಿರದ ಹಳ್ಳಿಗಳಿಗೆ ಕೋವಿಡ್ ಲಸಿಕೆ ವಿತರಣೆಯ ಕೆಲಸಕ್ಕೂ ಅಡ್ಡಿಯಾಗಿತ್ತು. ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಲೋಕಸಭೆಗೆ ತಿಳಿಸಿದ್ದರು. ಹಳ್ಳಿಯ ಮಕ್ಕಳಿಗೆ ಇಂಟರ್‌ನೆಟ್‌ ಆಧಾರಿತ ಶಿಕ್ಷಣ ಮತ್ತು ಎಲ್ಲ ಗ್ರಾಮ ಪಂಚಾಯಿತಿಗಳ ಡಿಜಿಟಲೀಕರಣ ಯಶಸ್ವಿಯಾಗದಿರುವುದು ಸರ್ಕಾರಕ್ಕೆ ಆತಂಕ ಮೂಡಿಸಿದೆ.

ಮೊದಲ ಹಂತದಲ್ಲಿ ದೇಶದ 2,64,176 ಗ್ರಾಮ ಪಂಚಾಯಿತಿ ಹಾಗೂ ಬ್ಲಾಕ್‍ಲೆವೆಲ್ ವಿತರಣಾ ಕೇಂದ್ರಗಳ ನಡುವೆ ನೆಲದಡಿ ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನು ಹಾಕಬೇಕಿತ್ತು. ಇದುವರೆಗೂ 1,70,463 ಗ್ರಾಮ ಪಂಚಾಯಿತಿಗಳು ಸೌಲಭ್ಯ ಪಡೆದುಕೊಳ್ಳಲು ಯಶಸ್ವಿಯಾಗಿವೆಯಾದರೂ ಪೂರ್ಣ ಪ್ರಮಾಣದ ಕಾರ್ಯಚಟುವಟಿಕೆ ನಡೆಯುತ್ತಿಲ್ಲ. ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಕುರಿತಾದ 29ನೇ ಸ್ಥಾಯಿ ಸಮಿತಿಯ ವರದಿ ಸಹ ಭಾರತ್‍ನೆಟ್‍ನ ಕೆಲಸದ ವೇಗವು ಅಂದುಕೊಂಡ ಗುರಿ ಸಾಧನೆಗೆ ಸಾಲದು ಎಂದು ಹೇಳಿರುವು
ದಲ್ಲದೆ, 65,000 ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ಯನ್ನು ರಾಜ್ಯ ಸರ್ಕಾರಗಳೇ ವಹಿಸಿಕೊಂಡಿರುವುದು ಮತ್ತೊಂದು ಅಡ್ಡಿ ಎಂದಿದೆ.

ಶೇ 55ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಬಿಬಿಎನ್‍ಎಲ್ ವರದಿ ಹೇಳುತ್ತದೆ. ಆದರೆ ವಾಸ್ತವ ಬೇರೆಯೇ ಇದೆ ಎಂದು ಫಲಾನುಭವಿಗಳು ಹೇಳುತ್ತಾರೆ. ಸಿಕ್ಕಿಂ, ಮೇಘಾಲಯ, ಮಿಜೊರಾಂ, ನಾಗಾಲ್ಯಾಂಡ್, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ಅತೀ ಕಡಿಮೆ ಸಂಖ್ಯೆಯ ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾತ್ಮಕ ಇಂಟರ್‌ನೆಟ್‌ ಸೇವಾ ಸೌಲಭ್ಯವಿದೆ. ಉತ್ತರಪ್ರದೇಶದ ಪ್ರತೀ ನಾಲ್ಕು ಪಂಚಾಯಿತಿಗಳ ಪೈಕಿ ಮೂರರಲ್ಲಿ ಕ್ರಿಯಾತ್ಮಕ ಇಂಟರ್‌ನೆಟ್‌ ಸೌಲಭ್ಯ ಇಲ್ಲ. ದೇಶದ 12 ರಾಜ್ಯಗಳಲ್ಲಿ ಅರ್ಧದಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇದೇ ಪರಿಸ್ಥಿತಿ ಇದೆ. ನೀಡಲಾದ ಮೂಲ ಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪಂಚಾಯಿತಿಗಳು ಶ್ರಮವಹಿಸಬೇಕು ಎಂಬ ಅಭಿಪ್ರಾಯ ಸ್ಥಾಯಿ ಸಮಿತಿಯ ವರದಿಯಲ್ಲಿ ವ್ಯಕ್ತವಾಗಿದೆ.

ಭಾರತ್‍ನೆಟ್ ಪ್ರಾರಂಭವಾದ ವರ್ಷ ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ, ಇಂಟರ್‌ನೆಟ್‌ ಬಳಸುವವರ ಸಂಖ್ಯೆ ಶೇ 10ರಷ್ಟು ಹೆಚ್ಚಾದರೆ ದೇಶದ ಜಿಡಿಪಿ ಶೇ 1.5ರಷ್ಟು ಹೆಚ್ಚುತ್ತದೆ ಎಂದಿತ್ತು. ಅಂದುಕೊಂಡ ಗುರಿ ಸಾಧನೆಯಾಗದ ಕಾರಣ ಯೋಜನೆಯ ಗಡುವನ್ನು ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ ಎಂದು ಏಳು ಬಾರಿ ವಿಸ್ತರಿಸಲಾಗಿದೆ. 2025ಕ್ಕೆ ಕೆಲಸ ಮುಗಿಸಲೇಬೇಕು, ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಪ್ರತೀ ಸೆಕೆಂಡಿಗೆ 10 ಜಿಬಿ ವೇಗದ ಇಂಟರ್‌ನೆಟ್‌ ಇರಲೇಬೇಕು ಎಂಬ ಕಟ್ಟುನಿಟ್ಟಿನ ಆದೇಶವೂ ಹೊರಬಿದ್ದಿದೆ.

ಯೋಜನೆಯ ಅನುಷ್ಠಾನವು ಬಿಬಿಎನ್‍ಎಲ್ ಒಂದರಿಂದಲೇ ಸಾಧ್ಯವಿಲ್ಲ ಎಂದು ಅರಿತ ಕೇಂದ್ರ, ಬಿಬಿಎನ್‍ಎಲ್‍ ಅನ್ನು ಬಿಎಸ್‍ಎನ್‍ಎಲ್‌
ನೊಂದಿಗೆ ವಿಲೀನಗೊಳಿಸಲಾಗುವುದು ಎಂದು ಮಾರ್ಚ್‌ ತಿಂಗಳಲ್ಲಿ ಪ್ರಕಟಿಸಿತು. ಇದರಿಂದ ಕ್ರಾಂತಿಕಾರಕ ಬದಲಾವಣೆಯೇನೂ ಆಗದು ಎಂಬ ಅಭಿಪ್ರಾಯ ತಜ್ಞರದ್ದು. ಸ್ಥಾಯಿ ಸಮಿತಿ ಸಹ ಇದರಿಂದ ಹೆಚ್ಚಿನ ಸಾಧನೆಯೇನೂ ಆಗದು, ಬಿಎಸ್‍ಎನ್‍ಎಲ್‍ನ ಇದುವರೆಗಿನ ಕಾರ್ಯವೈಖರಿಯಿಂದ ಇದು ನಮಗೆ ತಿಳಿದಿದೆ ಎಂದು ಹೇಳಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

ಭಾರತ್‍ನೆಟ್‍ನ ಸೇವಾ ಗುಣಮಟ್ಟದ ಕುರಿತು ದೇಶದಾದ್ಯಂತ ದೂರುಗಳು ಕೇಳಿಬಂದಿವೆ. ಸಂಪರ್ಕ ಕಡಿತ, ದೂರುಗಳನ್ನು ಬಗೆಹರಿಸದಿರುವುದು, ರಿಪೇರಿ ಕೆಲಸ ಸರಿಯಾದ ಸಮಯದಲ್ಲಿ ಆಗದಿರುವುದು ಪಂಚಾಯಿತಿಗಳ ನೆಮ್ಮದಿ ಕೆಡಿಸಿದೆ. ಪ್ರತೀ ಕೆಲಸಕ್ಕೂ ಖಾಸಗಿ ಕಂಪನಿಗಳನ್ನು ನೆನಪು ಮಾಡಿಕೊಳ್ಳುತ್ತಿದ್ದ ಸರ್ಕಾರ, ಹಲವರನ್ನು ಸಂಪರ್ಕಿಸಿತ್ತು. ಈಗಾಗಲೇ ಬಿಬಿಎನ್‍ಎಲ್ ಮಾಡಿರುವ ಅರ್ಧ ಕೆಲಸವನ್ನು ಮುಂದುವರಿಸಲು ಇಷ್ಟಪಡದ ಕಂಪನಿಗಳು ಟೆಂಡರ್‌ಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ.

ಬಿಎಸ್‍ಎನ್‍ಎಲ್ ಮತ್ತು ಬಿಬಿಎನ್‍ಎಲ್ ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಪರಿಣಾಮಕಾರಿ ಕೆಲಸ ಮಾಡಿದ ಪುರಾವೆಗಳಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಪಂಚಾಯಿತಿಗಳಿಗೆ ಒಎಫ್‌ಸಿ ಹಾಕಿಕೊಡುವ ಕೆಲಸವನ್ನು ಬಿಎಸ್‍ಎನ್‍ಎಲ್‍ಗೆ ಒಪ್ಪಿಸಿದ್ದ ಬಿಬಿಎನ್‍ಎಲ್,ಬಿಎಸ್‍ಎನ್‍ಎಲ್‍ನ ನಿಧಾನಗತಿಯ ಕಾರ್ಯವೈಖರಿಯಿಂದ ಬೇಸತ್ತು ಗುತ್ತಿಗೆಯನ್ನು ಹಿಂಪಡೆದಿತ್ತು. ನಿಧಾನವಾದರೂ ಈಗಾಗಲೇ 20 ಲಕ್ಷ ಗ್ರಾಹಕರಿಗೆ ಎಫ್‌ಟಿಟಿಎಚ್‌ (ಫೈಬರ್ ಟು ದ ಹೋಮ್‌) ಇಂಟರ್‌ನೆಟ್‌ ಸೇವೆ ನೀಡುತ್ತಿರುವ ಬಿಎಸ್‍ಎನ್‍ಎಲ್, ಭಾರತ್‍ನೆಟ್‍ ಅನ್ನು ಹಳ್ಳಿಹಳ್ಳಿಗೂ ತಲುಪಿಸಬಹುದು ಎಂಬ ಆಶಾಭಾವದಿಂದ ಮತ್ತೆ ಎರಡನ್ನೂ ಸೇರಿಸಲಾಗಿದೆ.

ಭಾರತದ ಆರ್ಥಿಕತೆಗೆ ಮುಳುವಾಗಿರುವ ಐದು ಪ್ರಮುಖ ಅಂಶಗಳ ಪೈಕಿ ಡಿಜಿಟಲ್ ಅಸಮಾನತೆ ಮತ್ತು ಡಿಜಿಟಲ್ ಆಡಳಿತ ಕೊರತೆಗಳೂ ಪ್ರಮುಖವಾಗಿವೆ ಎಂಬ ಅಂಶ ‘ವರ್ಲ್ಡ್‌ ಎಕನಾಮಿಕ್ ಫೋರಂ’ನ ಈ ವರ್ಷದ ಗ್ಲೋಬಲ್ ರಿಸ್ಕ್ ರಿಪೋರ್ಟ್‌ನಲ್ಲಿ ಇದೆ. 2025ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧನೆಗೆ ಇದು ದೊಡ್ಡ ಅಡ್ಡಿಯಾಗಲಿದೆ ಎಂಬ ಮಾತು ದೇಶದ ಆರ್ಥಿಕ ತಜ್ಞರ ಚರ್ಚೆಗಳಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT