ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಎಂಬುದು ವಾಸ್ತವ, ಗಣತಿ?

Last Updated 2 ಅಕ್ಟೋಬರ್ 2020, 19:36 IST
ಅಕ್ಷರ ಗಾತ್ರ

‘ಜಾತಿ ಜನಗಣತಿ’ ವರದಿಯು ರಾಜ್ಯದ ಮೂರೂ ಮುಖ್ಯ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳ ನೀತಿ ನಿರ್ಣಯ ಸ್ಥಾನಗಳಲ್ಲಿ ಕುಳಿತಿರುವ ನಾಯಕರಿಗೆ ಬೇಡವಾಗಿರುವುದು ಏಕೆ? ಈ ಎಲ್ಲರಿಗೂ ಅಪಥ್ಯವಾಗುವಂತಹ ಅಂಶಗಳು ವರದಿಯಲ್ಲಿ ಏನಿರಬಹುದು? ಈ ಗಣತಿಯಿಂದ ರಾಜ್ಯದಲ್ಲಿನ ವಿವಿಧ ಸಮುದಾಯಗಳ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಸ್ಥಿತಿಗತಿ ಕುರಿತು ನಿಖರ, ಉಪಯುಕ್ತ ಮತ್ತು ಆಕರವಾಗಬಹುದಾದ ಮಾಹಿತಿ ನಿರೀಕ್ಷಿಸಿದ್ದವರಲ್ಲಿ ಇಂತಹ ಹಲವು ಪ್ರಶ್ನೆಗಳುಕೊರೆಯುತ್ತಿವೆ.

ಈ ಗಣತಿಯ ಚಾಲಕಶಕ್ತಿ ಸಿದ್ದರಾಮಯ್ಯ. ಅವರ ನೇತೃತ್ವದ ಸರ್ಕಾರದ ನಿರ್ಧಾರದಂತೆ ಈ ಗಣತಿ ನಡೆಯಿತು. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಹೆಸರಿನಲ್ಲಿ 2015ರಲ್ಲಿ ಅಂಕಿಅಂಶ ಸಂಗ್ರಹ ಕಾರ್ಯ ನೆರವೇರಿತು. ಆ ಬಳಿಕ ಸಂಕಲನದ ಕೆಲಸ ಪೂರ್ಣಗೊಂಡು, ವರದಿಯೂ ಸಿದ್ಧವಾಯಿತು. ಆದರೆ, ವರದಿಗೆ ಬೆಳಕು ಕಾಣುವ ‘ಭಾಗ್ಯ’ವನ್ನು ಮಾತ್ರ ನಮ್ಮ ಅಧಿಕಾರಸ್ಥರು ಈವರೆಗೆ ದೊರಕಿಸಿಕೊಟ್ಟಿಲ್ಲ.

ಈ ಗಣತಿಗೆ ರಾಜ್ಯ ಬೊಕ್ಕಸದಿಂದ ₹ 158.47 ಕೋಟಿ ವ್ಯಯ ಆಗಿದೆ. ಜನರ ತೆರಿಗೆ ಹಣವನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಯಿಸಿದ ಸರ್ಕಾರವು ವರದಿಯನ್ನು ಸ್ವೀಕರಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ. ಅದರ ಬದಲಿಗೆ ‘ವರದಿ ಕೈಸೇರಿಲ್ಲ’ ಎಂಬ ನೆಪದಡಿ ಜಾರಿಕೊಳ್ಳುತ್ತಿದೆ. ವರದಿಯು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಹುಮಟ್ಟಿಗೆ ಸಿದ್ಧಗೊಂಡಿತ್ತು. ಅದಾದ ನಂತರ ಜೆಡಿಎಸ್– ಕಾಂಗ್ರೆಸ್‌ ಮತ್ತು ಬಿಜೆಪಿ ಆಳ್ವಿಕೆಯನ್ನು ರಾಜ್ಯ ಕಂಡಿದೆ. ಈ ಅವಧಿಯಲ್ಲಿ ರಾಜಕೀಯವಾಗಿ ಪ್ರಬಲರೆನಿಸಿದ ಕುರುಬ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಸೇರಿದವರು ಮುಖ್ಯಮಂತ್ರಿಯಾಗಿದ್ದಾರೆ. ವರದಿಯನ್ನು ಪಡೆದು, ಅದನ್ನು ವಿಧಾನಮಂಡಲದ ಮುಂದಿಡಬೇಕೆಂಬ ಇಚ್ಛಾಶಕ್ತಿ ಯಾರಿಂದಲೂ ವ್ಯಕ್ತವಾಗಿಲ್ಲ. ಇದರ ಹಿಂದಿನ ಮರ್ಮ ಏನಿರಬಹುದು?

ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಅವರು ರಾಜ್ಯದ ಮಟ್ಟಿಗೆ ಎಲ್ಲ ಜನವರ್ಗಗಳ ನಾಯಕರೆಂಬ ವರ್ಚಸ್ಸು ಹೊಂದಿದ್ದಾರೆ. ಆದರೆ, ಅದನ್ನೂ ಮೀರುವ ರೀತಿಯಲ್ಲಿ ತಾವು ಪ್ರತಿನಿಧಿಸುವ ಸಮುದಾಯಗಳ ಬಲಾಢ್ಯ ನಾಯಕರೂ ಆಗಿದ್ದಾರೆ. ವರದಿ ಅಪಥ್ಯವಾಗಿರುವ ವಿದ್ಯಮಾನವನ್ನು, ಜಾತಿಪ್ರಭಾವದ ಸುಳಿಗೆ ಸಿಲುಕಿರುವ ಇಂದಿನ ರಾಜಕೀಯದ ನೆಲೆಯಲ್ಲಿಟ್ಟು ನೋಡಿದವರಿಗೆ ವರದಿಯನ್ನು ಅತಂತ್ರ ಸ್ಥಿತಿಗೆ ದೂಡಿರುವುದರೊಂದಿಗೆ ಇವರು ಪ್ರತಿನಿಧಿಸುವ ಮೂರು ಪ್ರಬಲ ಸಮುದಾಯಗಳ ಹಿತಾಸಕ್ತಿಯ ಪ್ರಶ್ನೆ ತಳುಕು ಹಾಕಿಕೊಂಡಿರಬಹುದು ಎಂಬ ಅನುಮಾನ ಬರುವುದು ನಿಶ್ಚಿತ. ಈ ಅವಧಿಯಲ್ಲಿ ಸಿದ್ದರಾಮಯ್ಯ ಅವರದು ತ್ರಿಪಾತ್ರ. ಅವರು ಮುಖ್ಯಮಂತ್ರಿಯಾಗಿದ್ದಾಗ ವರದಿ ಸಿದ್ಧವಾಗಿತ್ತು. ಆನಂತರದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರೂ ಅವರೇ ಆಗಿದ್ದರು. ಈಗ ವಿರೋಧ ಪಕ್ಷದ ನಾಯಕ. ತಾವೇ ಒತ್ತಾಸೆಯಾಗಿ ನಿಂತು ಮಾಡಿಸಿದ ಗಣತಿಯ ವರದಿಗೆ ಮುಕ್ತಿ ದೊರಕಿಸಿಕೊಡುವ ಹೊಣೆಗಾರಿಕೆ ಅವರ ಮೇಲೆ ಹೆಚ್ಚು. ಲಿಂಗಾಯತ ಧರ್ಮಸೂಕ್ಷ್ಮದಂತಹ ವಿಚಾರದಲ್ಲಿ ವ್ಯಕ್ತವಾದ ದಿಟ್ಟ ನಿಲುವು ಈ ವರದಿಗೆ ಬೆಳಕು ಕಾಣಿಸುವ ವಿಚಾರದಲ್ಲಿ ಏಕೆ ವ್ಯಕ್ತವಾಗುತ್ತಿಲ್ಲ ಎಂದು ಕೇಳುವಂತಾಗಿದೆ.

ಈ ಗಣತಿಯು ಬಹಳ ಮಹತ್ವವನ್ನು ಹೊಂದಿದೆ. ಇದು, ಯಾವುದೋ ಯಃಕಶ್ಚಿತ್‌ ಸಮೀಕ್ಷೆ ಅಲ್ಲ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನದಂತೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿರುವ ಗಣತಿ. ಹಿಂದುಳಿದ ವರ್ಗಗಳನ್ನು ಗುರುತಿಸಲು ಜಾತಿ ಆಧಾರಿತ ಜನಗಣತಿಯ ಅಗತ್ಯವಿದೆ ಎಂಬುದನ್ನು ಈ ಆಯೋಗದ ಸ್ಥಾಪನೆಗೆ ಅನುವಾಗಿಸಿರುವ ಕಾಯ್ದೆಯೇ ಹೇಳುತ್ತದೆ. ಹಿಂದುಳಿದ ವರ್ಗಗಳ ಮರುವರ್ಗೀಕರಣಕ್ಕೆ ಮತ್ತು ಮೀಸಲಾತಿಯ ಪ್ರಯೋಜನವು ಎಲ್ಲ ಅರ್ಹ ಸಮುದಾಯಗಳಿಗೆ ದಕ್ಕಿದೆಯೇ ಎಂಬುದನ್ನು ಅರಿಯಲು ಈ ಬಗೆಯ ಗಣತಿ ಸಹಾಯಕ. ಆದರೆ, ಇಂತಹ ಗಣತಿಯ ಮೂಲಕ ಕಂಡುಕೊಳ್ಳುವ ಸತ್ಯವೇ ಆಳುವ ವರ್ಗದ ಪಾಲಿಗೆ ‘ಕಹಿ’ಯಾಗಿರುವಂತೆ ತೋರುತ್ತಿದೆ.

ಈ ಹಿಂದಿನ ಮುಖ್ಯಮಂತ್ರಿಗಾಗಲೀ ಈಗಿನ ಸರ್ಕಾರಕ್ಕಾಗಲೀ ವರದಿ ಒಪ್ಪಿಸಲು ಮಾಡಿದ ಪ್ರಯತ್ನ ಫಲಿಸಿಲ್ಲ ಎಂಬುದು ಆಯೋಗದ ಮೂಲಗಳ ಹೇಳಿಕೆ. ಆದಕಾರಣ, ಆಯೋಗದ ಅಧ್ಯಕ್ಷರಾಗಿದ್ದವರು ತಮ್ಮ ಅವಧಿ ಮುಗಿದಿದ್ದರಿಂದ ಸದಸ್ಯ ಕಾರ್ಯದರ್ಶಿ ಕೈಗೆ ವರದಿ ಒಪ್ಪಿಸಿ ಹೋಗಿದ್ದಾರೆ.ಈ ತಾಂತ್ರಿಕ ವಿಷಯ ಏನಾದರೂ ಇರಲಿ, ವರದಿಯಲ್ಲಿ ಮುಚ್ಚಿಡುವಂತಹುದು ಏನು ಇದೆ ಎಂಬುದು ಪ್ರಶ್ನೆ. ವರದಿಯು ತೆರೆದ ಪುಸ್ತಕವಾದರೆ ಯಾವ ಜಾತಿಯ ಜನರ ಸಂಖ್ಯೆ ಎಷ್ಟು, ವಿವಿಧ ಪ್ರವರ್ಗಗಳಲ್ಲಿನ ಜಾತಿಗಳ ನಡುವೆ ಮೀಸಲಾತಿಯು ಹೇಗೆ ಹಂಚಿಕೆ ಆಗಿದೆ, ಸಂಖ್ಯಾದೃಷ್ಟಿಯಿಂದ ನಗಣ್ಯವೆನಿಸಿರುವ ಸಣ್ಣ ಜಾತಿಗಳಿಗೆ ಮೀಸಲಾತಿಯ ಪ್ರಯೋಜನ ದೊರೆತಿದೆಯೇ, ಸರ್ಕಾರಿ ಉದ್ಯೋಗಗಳಲ್ಲಿ ಯಾವ ಸಮುದಾಯದ ಪಾಲು ಎಷ್ಟು, ಶೈಕ್ಷಣಿಕ ಸ್ಥಿತಿಗತಿ ಹೇಗಿದೆ... ಎಂಬಿತ್ಯಾದಿ ಅಂಶಗಳು ಗೋಡೆ ಬರಹದಷ್ಟು ಸ್ಫುಟವಾಗುತ್ತವೆ. ವರದಿ ಬೆಳಕು ಕಾಣದಿರುವುದಕ್ಕೆ ಇವು ಕೂಡ ಕಾರಣ ಆಗಿರಬಹುದೇ?

ಜಾತಿ ಸಮುದಾಯಗಳ ಜನಸಂಖ್ಯೆ ಪ್ರಮಾಣಕ್ಕೂ ರಾಜಕೀಯ ಪ್ರಾತಿನಿಧ್ಯಕ್ಕೂ ನಂಟು ಇದೆ. ಎಂದೋ ಮಾಡಿದ ಗಣತಿಯನ್ನೋ, ಸಮೀಕ್ಷೆಯನ್ನೋ ಆಧಾರವಾಗಿ ಇಟ್ಟುಕೊಂಡು ಜಾತಿಗಳ ಜನರ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತಿದೆ. ಈ ಬಿಂಬಿತ ಸಂಖ್ಯೆಯನ್ನು ಮುಂದಿಟ್ಟುಕೊಂಡು ಮೂರು– ನಾಲ್ಕು ಜಾತಿಗಳು ಹೆಚ್ಚಿನ ಪ್ರಾತಿನಿಧ್ಯ ಕಬಳಿಸುತ್ತಿವೆ ಎಂಬ ಆರೋಪ ಇದೆ. ನಿಖರ ಅಂಕಿಅಂಶ ಹೊರಬಿದ್ದರೆ, ಪ್ರಬಲ ಜಾತಿಗಳ ರಾಜಕೀಯ ಹಿತಾಸಕ್ತಿಗೆ ಮಾರಕ ಆಗಬಹುದು ಎಂಬ ಅಂಶವೂ ವರದಿ ದೂಳು ತಿನ್ನಲು ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ವರದಿಯಲ್ಲಿನ ಕೆಲವು ಅಂಶಗಳು ಸೋರಿಕೆ ಆಗಿದ್ದವು (ಅದನ್ನು ಆಯೋಗ ನಿರಾಕರಿಸಿತ್ತು).ಸೋರಿಕೆಯಾಗಿದ್ದವು ಎಂಬುದಕ್ಕಿಂತ ‘ಸೋರಿಕೆ ಮಾಡಿಸಿದ್ದರು’ ಎಂಬ ಮಾತೇ ರಾಜಕೀಯ ವಲಯದಲ್ಲಿ ಹೆಚ್ಚು ಚಲಾವಣೆಯಲ್ಲಿತ್ತು. ಸೋರಿಕೆಯಾಗಿದ್ದ ಅಂಕಿಅಂಶಗಳನ್ನು ನಂಬುವುದಾದರೆ, ಕೆಲವು ಜಾತಿಗಳ ಬಿಂಬಿತ ಜನಸಂಖ್ಯೆ ಪ್ರಮಾಣ ಮತ್ತು ವರದಿಯಲ್ಲಿ ದಾಖಲಾಗಿರುವ ಪ್ರಮಾಣದ ನಡುವೆ ವ್ಯತ್ಯಾಸ ಇದೆ. ಇಂತಹ ಕಹಿಸತ್ಯಗಳು ವರದಿಗೆ ಉರುಳಾಗಿರಬಹುದು ಎಂಬ ಮಾತಿಗೆ ದನಿಗೂಡಿಸುವವರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT