ಸೋಮವಾರ, ಡಿಸೆಂಬರ್ 6, 2021
25 °C
ಅ.29 ಮಾರ್ಜಾಲ ದಿನ

PV Web Exclusive | ಮುದ್ದು ಮಾರ್ಜಾಲದ ಮೋಹಕ ವೃತ್ತಾಂತ

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಅಕ್ಟೋಬರ್‌ 29, ಅಮೆರಿಕನ್ನರ ‘ರಾಷ್ಟ್ರೀಯ ಮಾರ್ಜಾಲ ದಿನ’. ಕಳೆದ ಒಂದೂವರೆ ದಶಕದಿಂದ ಅಮೆರಿಕ ಸೇರಿದಂತೆ ಕೆಲ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ‘ಮಾರ್ಜಾಲ ದಿನ’ವನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ನಮ್ಮಲ್ಲಿಯೂ ಸಹ ಬೆಕ್ಕು ಮುದ್ದಿನ ಸಾಕುಪ್ರಾಣಿ ಹೌದು. ಅದರ ಬಗೆಗಿನ ಎಲ್ಲಾ ಮೂಢನಂಬಿಕೆಗಳು, ತಪ್ಪು ಗ್ರಹಿಕೆಗಳ ನಡೆವೆಯೂ ಭಾರತದ ಮನ-ಮನೆಗಳಲ್ಲಿ ಬೆಕ್ಕಿಗೊಂದು ವಿಶೇಷ ಸ್ಥಾನ ಇದ್ದೇ ಇದೆ. ಹೀಗಾಗಿ ತನ್ನ ಹೆಸರಿಗಂಟಿರುವ  ಮೂಢಾಚರಣೆಗಳ ನಡುವೆಯೂ ಇತಿಹಾಸದಿಂದಲೂ ಮಾನವನ ಅಚ್ಚುಮೆಚ್ಚಿನ ಸಹಚರನಾಗಿಯೇ ಬಂದಿರುವ ಬೆಕ್ಕಿನ ಬಗೆಗೆ ಕಲೆಹಾಕಿರುವ  ಒಂದಿಷ್ಟು ರೋಚಕ ಸಂಗತಿಗಳು ಇಲ್ಲಿವೆ...

***

ಮನುಷ್ಯನೊಂದಿಗಿನ ಬೆಕ್ಕಿನ ಒಡನಾಟಕ್ಕೆ ಸುದೀರ್ಘ ಇತಿಹಾಸವಿದೆ. ಸುಮಾರು 10 ಸಾವಿರ ವರ್ಷಗಳ ಹಿಂದೆಯೇ ಬೆಕ್ಕು ಮನುಷ್ಯನ ಸಹಚರನಾಗಿತ್ತು ಎನ್ನುವುದಕ್ಕೆ ಪುರಾವೆಗಳಿವೆ. ಈಗ ಟರ್ಕಿ ಎಂದು ಕರೆಯಲಾಗುವ ಪ್ರದೇಶದಲ್ಲಿ ಮೊದಲ ಬಾರಿಗೆ ಬೆಕ್ಕನ್ನು ಮನೆಗಳಲ್ಲಿ ಸಾಕಲಾಯಿತು. ಅನಂತರ ಬೆಕ್ಕನ್ನು ಸಾಕುಪ್ರಾಣಿಯಾಗಿ ಬೆಳೆಸಿದವರು ಈಜಿಪ್ಟಿಯನ್ನರು. ಈ ಬೆಕ್ಕುಗಳು ಹೆಚ್ಚಾಗಿ ಕಾಡುಬೆಕ್ಕುಗಳ ನೋಟ–ಗುಣಸ್ವಭಾವವನ್ನೇ ಹೋಲುತ್ತಿದ್ದವು. ಮನುಷ್ಯರೊಂದಿಗೆ ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಬೆಕ್ಕು ಯುರೋಪ್‌, ಆಫ್ರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೂ ತಲುಪಿದವು. ಈಗ ಕಂಡುಬರುವ ಸುಧಾರಿತ ತಳಿಗಳನ್ನು 19ನೇ ಶತಮಾನದಲ್ಲಿ ಇಂಗ್ಲೆಂಡಿನವರು ಅಭಿವೃದ್ಧಿ ಪಡಿಸಿದ್ದರು. ಆದರೆ ಬೆಕ್ಕನ್ನು ಸಾಕುವ ಸಂಸ್ಕೃತಿ ನಮ್ಮದಲ್ಲ, ಭಾರತಕ್ಕೆ ಬೆಕ್ಕನ್ನು ತಂದವರು ಬ್ರಿಟಿಷರು ಎನ್ನುವ ವಾದವಿದೆ. ಬೆಕ್ಕುಗಳು ಕ್ರಿ.ಶ 1 ಮತ್ತು 2 ನೇ ಶತಮಾನಗಳ ನಡುವೆಯೇ, ಸಮುದ್ರದ ಮೂಲಕ ಭಾರತ ಪ್ರವೇಶಿಸಿದವು ಎನ್ನುವುದೂ ಇದೆ. ಏನೇ ಆದರೂ ಬೆಕ್ಕು ಈಗ ನಮ್ಮ ನೆಚ್ಚಿನ ಒಡನಾಡಿ ಎನ್ನುವುದಂತೂ ಸತ್ಯ.

ಎಷ್ಟು ವಿಧ…

ಬೆಕ್ಕುಗಳಲ್ಲಿ 40ಕ್ಕೂ ಹೆಚ್ಚಿನ ತಳಿಗಳಿವೆ. ಅದರಲ್ಲಿ ಪರ್ಷಿಯನ್‌ ಬೆಕ್ಕು ಹೆಚ್ಚು ಪ್ರಚಲಿತ. ಆದರೆ ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಕಂಡುಬರುವುದು ‘ಡೊಮೆಸ್ಟಿಕ್‌ ಶಾರ್ಟ್‌ ಹೇರ್‌’ ಎನ್ನುವ ದೇಶೀ ತಳಿ. ಇದು ಯಾವುದೇ ಪರಿಸರದಲ್ಲಿಯೂ ಬಾಳಬಲ್ಲ, ಸಹಜೀವನ ನಡೆಸಬಲ್ಲ ಬೆಕ್ಕು. ಇತ್ತೀಚೆಗೆ ಹೆಚ್ಚು ಜನ ಸಾಕುತ್ತಿರುವುದು ಸಿಯಾಮಿಸ್‌. ಇದು ದುಬಾರಿ ಬೆಲೆಯ ಬೆಕ್ಕು. ಅತ್ಯಂತ ಸುಂದರ ಬೆಕ್ಕು ಎಂದರೆ ನಾರ್ವೆಜಿಯನ್‌ ಫಾರೆಸ್ಟ್‌ ಕ್ಯಾಟ್‌. ನಾರ್ವೆಯಿಂದ ಭಾರತಕ್ಕೆ ಬಂದ ಈ ಬೆಕ್ಕು ಬಹಳ ಆಕರ್ಷಕವಾಗಿದ್ದು, ಮನುಷ್ಯನೊಂದಿಗೆ ಬಹಳ ಬೇಗ ಹೊಂದಿಕೊಳ್ಳುತ್ತದೆ. ಇನ್ನು ಚಿರತೆಯಂತಹ ವ್ಯಗ್ರ ನೋಟವಿರುವ ಬೆಂಗಾಲ್‌ ಕ್ಯಾಟ್‌ ಸಹ ಅನೇಕರ ನೆಚ್ಚಿನ ಪ್ರಾಣಿ. ಇದು ಗಾತ್ರದಲ್ಲಿಯೂ ದೊಡ್ಡದು, ನೋಟವೂ ವ್ಯಗ್ರವಾಗಿರುತ್ತದೆ. ಮೈತುಂಬಾ ಬಿಳಿ ಕೂದಲಿರುವ ರ‍್ಯಾಗ್‌ಡಾಲ್‌ ಬೆಕ್ಕು ತುಂಬಾ ಸುಂದರವಾದ ಬೆಕ್ಕುಗಳಲ್ಲಿ ಒಂದು. ನೀಲಿ ಕಣ್ಣುಗಳಿಂದ ಎಲ್ಲರನ್ನು ಆಕರ್ಷಿಸುತ್ತದೆ, ನೋಡಲು ಗೊಂಬೆಯಂತಿರುವ ಈ ಬೆಕ್ಕಿಗೆ ವಿಶೇಷ ಆರೈಕೆ ಅತ್ಯಗತ್ಯ. ಮಕ್ಕಳಿಗಂತೂ ಇದು ಹೆಚ್ಚು ಪ್ರಿಯ. ಕೊರಾಟ್ ‌ ಸಹ ಮಕ್ಕಳ ಅಚ್ಚುಮೆಚ್ಚಿನ ಬೆಕ್ಕು. ಸಿ೦ಗಾಪುರಾ ಎನ್ನುವ ಬೆಕ್ಕು ಅತಿ ಕಿರಿಯ ಗಾತ್ರದ ಬೆಕ್ಕು ಎ೦ಬ ಕೀರ್ತಿ ಪಡೆದಿದೆ. ಪುಟ್ಟ ದೇಹ, ದೊಡ್ಡ ಕಿವಿಗಳು, ದೊಡ್ಡ ಕಣ್ಣುಗಳಿ೦ದ ಇದು ಮುದ್ದಾಗಿ ಕಾಣುತ್ತದೆ. ಮ೦ಚ್‌ಕಿನ್ ಬೆಕ್ಕು ಸಹ ಗಾತ್ರದಲ್ಲಿ ಬಹಳ ಚಿಕ್ಕದು. ಇದರ ಕಾಲುಗಳು ಕೂಡ ಚಿಕ್ಕದಾಗಿದ್ದು, ಕುಬ್ಜನ೦ತೆ ಕಾಣಿಸುತ್ತದೆ. ಗಾತ್ರದಲ್ಲಿ ಪುಟಾಣಿಯಾಗಿದ್ದರೂ ಬುದ್ಧಿವ೦ತಿಕೆಯಲ್ಲಿ ಇದನ್ನು ಮೀರಿಸುವವರಿಲ್ಲ. ಇವೆಲ್ಲವೂ ‘ಫೆಲಿಸ್ ಡೊಮೆಸ್ಟಿಕ್‌’ ಎನ್ನುವ ಜಾತಿಗೆ ಸೇರಿದ ಬೆಕ್ಕುಗಳು. ಒಂದೊಂದು ತಳಿ, ಒಂದೊಂದು ಜಾತಿಯ ಗುಣಲಕ್ಷಣಗಳು, ಸ್ವಭಾವ, ಜೀವನಶೈಲಿ ಬೇರೆ ಬೇರೆಯೇ ಆಗಿರುತ್ತದೆ.

ಪ್ರಾಯ–ಪ್ರಣಯ

ನಾಯಿಗಳಂತೆ ಬೆಕ್ಕುಗಳ ಪ್ರಣಯಕ್ಕೆ ನಿರ್ದಿಷ್ಟ ಋತುಗಳಿಲ್ಲ. ಹಾಗೆಯೇ ಬೆಕ್ಕುಗಳ ಪ್ರಣಯವೂ ಬಹಳ ಖಾಸಗಿಯಾಗಿದ್ದು, ಯಾರ ಕಣ್ಣಿಗೂ ಬೀಳದು. ಬೆಕ್ಕುಗಳು ಯಾವಾಗ, ಹೇಗೆ ಮಿಲನ ಹೊಂದುತ್ತವೆ ಎನ್ನುವುದನ್ನು ಕಂಡವರೇ ಇಲ್ಲವೆಂದೂ ಹೇಳಬಹುದು. ಗಂಡುಬೆಕ್ಕು ಹುಟ್ಟಿದ 7–8 ತಿಂಗಳಿಗೆ ಪ್ರಾಯಕ್ಕೆ ಬಂದರೆ, ಹೆಣ್ಣುಬೆಕ್ಕು ಐದೇ ತಿಂಗಳಿಗೆ ಪ್ರೌಢಾವಸ್ಥೆ ತಲುಪುತ್ತವೆ. ಪ್ರಾಯಕ್ಕೆ ಬಂದ ಆರಂಭದಲ್ಲಿ ಬೆಕ್ಕು, ಅದರಲ್ಲೂ ಹೆಣ್ಣು ಬೆಕ್ಕು ಅತಿಹೆಚ್ಚು ಚಟುವಟಿಕೆಯಿಂದ ಇರುತ್ತದೆ, ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೇ ಓಡಾಡುತ್ತದೆ. ವಿಚಿತ್ರವಾಗಿ ಕೂಗುವ ಮೂಲಕ ಅದು ಸಂಗಾತಿ ಬಾವುಗನನ್ನು (ಗಂಡುಬೆಕ್ಕು) ಸೆಳೆಯುತ್ತದೆ. ಅದರ ಕೂಗುವ ದನಿಯ ಏರಿಳಿತವೇ ಅದರ ‘ಪ್ರಣಯ ಸಂಕೇತ’. ಅದರ ಮನದಾಸೆಯನ್ನು ಅರಿತು ಗಂಡುಬೆಕ್ಕು ಬಳಿಸಾರುವವರೆಗೆ ಕೂಗುತ್ತಲೇ ಇರುತ್ತದೆ. ಸಾಮಾನ್ಯವಾಗಿ ಪ್ರಣಯಕ್ಕೆ ಸಜ್ಜಾಗುವ ಗಂಡು ಬೆಕ್ಕು ಆಕ್ರಮಣಶೀಲ ಪ್ರವೃತ್ತಿಯನ್ನು ತೋರ್ಪಡಿಸುವುದಿಲ್ಲ. ಬಹಳ ವಿನಯಶೀಲವಾಗಿರುತ್ತದೆ.

ಹುಟ್ಟಿದ ಐದೇ ತಿಂಗಳಿಗೆ ಪ್ರಾಯಕ್ಕೆ ಬರುವ ಹೆಣ್ಣುಬೆಕ್ಕು ಅದೇ ವೇಳೆ ಗರ್ಭ ಧರಿಸಬಹುದು. ಗರ್ಭದ ಅವಧಿ 60 ರಿಂದ 65 ದಿನಗಳು. ಮರಿ ಜನಿಸುವುದಕ್ಕೆ ಮೊದಲು ಬೆಕ್ಕು ಹಲವು ಕಡೆ ಸುರಕ್ಷಿತ ಜಾಗಕ್ಕಾಗಿ ಹುಡುಕಾಡುತ್ತದೆ. ನಿರ್ದಿಷ್ಟ ಜಾಗವನ್ನು ಆಯ್ಕೆ ಮಾಡಿಕೊಂಡು ಮರಿ ಹಾಕಲು ಸಜ್ಜು ಮಾಡಿಕೊಳ್ಳುತ್ತದೆ. ಒಮ್ಮೆಲೇ ಐದಾರು ಮರಿಗಳಿಗೆ ಜನ್ಮ ನೀಡಬಹುದು.

ಬೆಕ್ಕು ಕಚ್ಚಿದರೆ…

ಬೆಕ್ಕು ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ. ಇಲಿ, ಜಿರಳೆ, ಹಲ್ಲಿಗಳ ಕಾಟದಿಂದ ಮನೆಗೆ ರಕ್ಷಣೆ ಒದಗಿಸುವ ಕಾರಣಕ್ಕೆ ಮನೆಯೊಡತಿಗೂ ಪ್ರೀತಿ, ಮಕ್ಕಳಿಗೂ ಅಕ್ಕರೆ. ಆದರೆ ಮನುಷ್ಯರಂತೆ ಕೆಲವೊಮ್ಮೆ ಬೆಕ್ಕು ಸಹ ‘ಮೂಡ್‌ ಸ್ವಿಂಗ್‌’ಗೆ ಒಳಗಾಗುತ್ತದೆ. ಒಮ್ಮೆ ಇದ್ದಂತೆ ಒಮ್ಮೆ ಇರುವುದಿಲ್ಲ. ಅದರಲ್ಲೂ ಗರ್ಭಾವಸ್ಥೆ ಮತ್ತು ಮರಿ ಹಾಕುವ ಅವಧಿ ಹತ್ತಿದರಲ್ಲಿದ್ದಾಗ ಅದು ಬಹಳ ವ್ಯಗ್ರವಾಗಿರುತ್ತದೆ. ಹೀಗಾಗಿ ಕೆಲವೊಮ್ಮೆ ಮನೆಯ ಸದಸ್ಯರಿಗೆ ಅಥವಾ ಮಕ್ಕಳಿಗೆ ಪರಚುವ ಮೂಲಕ ಗಾಯ ಮಾಡಬಹುದು.

ಅಂತಹ ಸಂದರ್ಭದಲ್ಲಿ ತಕ್ಷಣ ಕೆಲವೊಂದು ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಬೆಕ್ಕುಗಳ ಬಾಯಿಯಲ್ಲಿ ಮತ್ತು ಹಲ್ಲುಗಳಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ಇರುತ್ತವೆ. ಬೆಕ್ಕು ಕಚ್ಚಿದಾಗ ಇದೇ ಕಾರಣಕ್ಕೆ ವ್ಯಕ್ತಿ ಸೋಂಕಿಗೆ ಒಳಗಾಗುತ್ತಾನೆ. ಕಚ್ಚಿದ ಜಾಗವನ್ನು ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು. ಆಳವಾದ ಗಾಯವಾದಲ್ಲಿ ವೈದ್ಯರನ್ನು ಕಂಡು ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ.

ನೆನಪಿಡಿ, ಬೆಕ್ಕು ಮೂಲತಃ ಮಾಂಸಾಹಾರಿ. ಕೆಲವು ತರಕಾರಿಗಳಂತೂ ಅದಕ್ಕೆ ವಿಷಕಾರಿಯಾಗುವ ಸಾಧ್ಯತೆ ಇರುತ್ತದೆ. ದ್ರಾಕ್ಷಿ ಮತ್ತು ಒಣದ್ರಾಕ್ಷಿ, ಈರುಳ್ಳಿ, ಬೆಳ್ಳುಳ್ಳಿ ಬೆಕ್ಕುಗಳಿಗೆ ಅತ್ಯಂತ ಹಾನಿಕಾರಕ ಆಹಾರಗಳಾಗಿವೆ. ದ್ರಾಕ್ಷಿ ಮತ್ತು ಒಣದ್ರಾಕ್ಷಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಈರುಳ್ಳಿ, ಬೆಳ್ಳುಳ್ಳಿ ಬೆಕ್ಕಿನ ಜಠರಗರುಳಿನ ವ್ಯವಸ್ಥೆಯನ್ನು ಹಾಳುಮಾಡಬಹುದು. ಇಂತಹ ಆಹಾರದಿಂದ ರಕ್ತಹೀನತೆ ಉಂಟಾಗಬಹುದು. ಅಲ್ಲದೇ ಕಾಫಿ–ಚಹಾ, ಚಾಕೋಲೇಟ್‌ ಕೂಡ ಬೆಕ್ಕಿಗೆ ಒಗ್ಗುವುದಿಲ್ಲ.


ಡಾ. ಅಜೀಮ್‌ ಉಲ್ಲಾ

ಗರ್ಭಿಣಿಯರೇ ಹುಷಾರು

ಬೆಕ್ಕು ನಿಮಗೆ ಎಷ್ಟೇ ಪ್ರಿಯವಾಗಿರಲಿ, ಗರ್ಭಿಣಿಯರು ಬೆಕ್ಕಿನಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿ ಬೆಕ್ಕು ಇರುವವರು ಕನಿಷ್ಠ ಬೆಕ್ಕಿನೊಂದಿಗಿನ ಒಡನಾಟದಿಂದ ಆದರೂ ದೂರವಿರಬೇಕು. ಬೆಕ್ಕಿನಿಂದ ಉಂಟಾಗುವ ಅಲರ್ಜಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಅಪಾಯಕಾರಿ. ಬೆಕ್ಕಿನಿಂದ ’ಟಾಕ್ಸೊಪ್ಲಾಸ್ಮಾ‘ ಎನ್ನುವ ಪ್ಯಾರಾಸೈಟ್‌ ಉತ್ಪತ್ತಿಯಾಗುತ್ತದೆ. ಅದರಿಂದ ಗರ್ಭಪಾತ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಬೆಕ್ಕಿನ ತುಪ್ಪಳ ಸಹ ಅಲರ್ಜಿಗೆ ಕಾರಣವಾಗಬಹುದು. ಹಾಗೆಯೇ ಅಸ್ತಮಾ ತೊಂದರೆ ಇರುವವರೂ ಸಹ ಬೆಕ್ಕಿನಿಂದ ದೂರವಿರುವುದು ಒಳ್ಳೆಯದು ಎನ್ನುತ್ತಾರೆ ಪಶುವೈದ್ಯ ಡಾ. ಅಜೀಮ್‌ ಉಲ್ಲಾ.


ಕೊಲೀನ್ ಪೈಜ್

ಮಾರ್ಜಾಲ ದಿನ; ಜಾಗೃತಿ ದಿನ

ಅಕ್ಟೋಬರ್ 29, 2005ರಂದು ಸಾಕು ಪ್ರಾಣಿಗಳ ಜೀವನಶೈಲಿ ತಜ್ಞೆ, ಲೇಖಕಿ, ಕಲಾವಿದೆ, ಛಾಯಾಗ್ರಾಹಕಿ, ಸಂರಕ್ಷಣಾವಾದಿ, ವಕೀಲೆ ಕೊಲೀನ್ ಪೈಜ್ ಮೊದಲ ಬಾರಿಗೆ ‘ರಾಷ್ಟ್ರೀಯ ಮಾರ್ಜಾಲ ದಿನ’ವನ್ನು ಆರಂಭಿಸಿದರು. ಬೆಕ್ಕುಗಳ ಬಗೆಗೆ, ಅವುಗಳ ಜೀವನ ಪದ್ಧತಿ, ಆಹಾರ, ಲೈಂಗಿಕ ಜೀವನದ ಬಗ್ಗೆ ಜಾಗೃತಿ ಮೂಡಿಸುವುದು ಅವರ ಉದ್ದೇಶ. ಪ್ರಾಣಿಗಳ ಬಗೆಗೆ ವಿಶೇಷ ಪ್ರೀತಿ ಹೊಂದಿರುವ ಕೊಲೀನ್‌, ಅನೇಕ ಸಾಕು ಪ್ರಾಣಿಗಳ ಜಾಗೃತಿ ದಿನಗಳಿಗೆ ನಾಂದಿ ಹಾಡಿದ್ದಾರೆ. ಪ್ರಾಣಿಗಳನ್ನು ಸಾಕುವುದು ಪ್ರತಿಷ್ಠೆಯ ಸಂಗತಿ ಮಾತ್ರ ಅಲ್ಲ, ಅದೊಂದು ದೊಡ್ಡ ಜವಾಬ್ದಾರಿಯಾಗಿದ್ದು, ಅದನ್ನು ಅಕ್ಕರೆಯಿಂದ ನಿಭಾಯಿಸುವವರು ಮಾತ್ರ ಪ್ರಾಣಿಗಳನ್ನು ಸಾಕಬೇಕು ಎನ್ನುವುದು ಕೊಲೀನ್‌ ಕೋರಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು