ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮಕ್ಕಳ ಒಲ್ಲದ ಚೀನಾ ಯುವಜನ

ಮೂವರು ಮಕ್ಕಳನ್ನು ಹೊಂದಬಹುದು ಎಂಬ ಸರ್ಕಾರದ ನೀತಿಯನ್ನು ಕೇಳುವವರೇ ಇಲ್ಲ
Last Updated 13 ಜೂನ್ 2021, 19:31 IST
ಅಕ್ಷರ ಗಾತ್ರ

ಮಗು ಬೇಕು ಎಂದು ಹುವಾಂಗ್‌ ಯುಲಾಂಗ್‌ಗೆ ಅನಿಸಿದ್ದೇ ಇಲ್ಲ. ಹುವಾಂಗ್‌ ಮಗುವಾಗಿದ್ದಾಗ ಆತನನ್ನು ಹೆತ್ತವರು, ಸಂಬಂಧಿಕರ ಮನೆಯಲ್ಲಿ ಬಿಟ್ಟು ದೂರದ ಊರಿನ ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮಗುವನ್ನು ನೋಡಲು ಬರುತ್ತಿದ್ದುದು ವರ್ಷಕ್ಕೆ ಒಮ್ಮೆ ಮಾತ್ರ. ಇದು ಹುವಾಂಗ್‌ನಲ್ಲಿ ಮುನಿಸು ಮೂಡಲು ಕಾರಣವಾಗಿತ್ತು. ಈಗ, ಕುಟುಂಬದ ಹೆಸರು ಉಳಿಯಬೇಕು, ಮಗು ಬೇಕು ಎಂಬ ಯಾವ ಭಾವನೆಯೂ ಹುವಾಂಗ್‌ ಅವರಲ್ಲಿ ಇಲ್ಲ. ಹಾಗಾಗಿಯೇ 26ನೇ ವಯಸ್ಸಿನಲ್ಲಿ ಅವರು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.

‘ನಮ್ಮ ತಲೆಮಾರಿಗೆ ಮಕ್ಕಳ ಅಗತ್ಯ ಇಲ್ಲ. ಈಗ ನಾವು ಯಾವುದೇ ಹೊರೆ ಇಲ್ಲದೆ ಬದುಕಬಹುದು. ನಮ್ಮ ಸಂಪನ್ಮೂಲವನ್ನು ನಮ್ಮದೇ ಬದುಕಿಗಾಗಿ ಏಕೆ ಬಳಸಿಕೊಳ್ಳಬಾರದು’ ಎಂದು ದಕ್ಷಿಣ ಚೀನಾದ ಗುವಾಂಗ್‌ಝು ನಗರದ ನಿವಾಸಿಯಾಗಿರುವ ಅವಿವಾಹಿತ ಹುವಾಂಗ್‌ ಕೇಳುತ್ತಾರೆ.

‘ದುಪ್ಪಟ್ಟು ಆದಾಯ, ಮಕ್ಕಳು ಇಲ್ಲ’ (ಡಿಂಕ್‌– ಡಬಲ್‌ ಇನ್‌ಕಮ್‌, ನೋ ಚಿಲ್ಡ್ರನ್‌) ಎಂಬ ಜೀವನ ಶೈಲಿಗಾಗಿ ಹುವಾಂಗ್‌ ಯತ್ನಿಸುತ್ತಿದ್ದಾರೆ. ಈ ಪರಿಕಲ್ಪನೆ ದಶಕಗಳಿಂದ ಇದ್ದರೂ ಚೀನಾದಲ್ಲಿ ಇದು ಈಗ ಮುಖ್ಯವಾಹಿನಿಗೆ ಬಂದಿದೆ. ಜೀವನವೆಚ್ಚ ಹೆಚ್ಚಳ ಮತ್ತು ಇತರ ಆರ್ಥಿಕ ಹೊರೆಗಳಿಂದಾಗಿ ಮಕ್ಕಳನ್ನು ಪಡೆಯಲು ಯುವಜನ ಬಯಸುತ್ತಿಲ್ಲ. ಶಾಲೆ ಮತ್ತು ಅಪಾರ್ಟ್‌
ಮೆಂಟ್‌ಗಳಿಗಾಗಿ ಸ್ಪರ್ಧೆ ಹೆಚ್ಚಾಗಿದೆ. ಒಂದೇ ಮಗು ಸಾಕು ಎಂದು ಕೆಲವು ದಂಪತಿ ಹೇಳಿದರೆ, ಕೆಲವರಿಗೆ ಒಂದು ಮಗುವೂ ಬೇಡ.

ಜನಸಂಖ್ಯೆಗೆ ಸಂಬಂಧಿಸಿ ಎದುರಾಗಬಹುದಾದ ಬಿಕ್ಕಟ್ಟು ತಪ್ಪಿಸಲು ಚೀನಾ ಸರ್ಕಾರ ನಡೆಸುತ್ತಿರುವ ಪ್ರಯತ್ನ ಮತ್ತು ಜನರ ಜೀವನಶೈಲಿಯ ನಡುವೆ ಸಂಘರ್ಷ ಇದೆ. ಚೀನಾ ತನ್ನ ಕುಟುಂಬ ಯೋಜನೆ ನೀತಿಯನ್ನು ಪರಿಷ್ಕರಿಸಿ, ದಂಪತಿಯು ಇಬ್ಬರು ಮಕ್ಕಳ ಬದಲು ಮೂವರು ಮಕ್ಕಳನ್ನು ಹೊಂದಬಹುದು ಎಂದಿದೆ. ದಂಪತಿ ಮೂವರು ಮಕ್ಕಳನ್ನು ಹೊಂದಲು ಉತ್ತೇಜನ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ, ಹುವಾಂಗ್‌ನಂಥವರು ಮಕ್ಕಳೇ ಬೇಡ ಎನ್ನುತ್ತಿದ್ದಾರೆ. ಅದನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಶಸ್ತ್ರಕ್ರಿಯೆಗೂ ಒಳಗಾಗುತ್ತಿದ್ದಾರೆ.

ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಮಾಡಿಸಿಕೊಳ್ಳುವ ಹುವಾಂಗ್‌ನ ನಿರ್ಧಾರ ಅತಿರೇಕ ಅನಿಸಬಹುದು. ಆದರೆ, ಮಕ್ಕಳು ಬೇಡ ಎಂದು ಜನರು ನಿರ್ಧರಿಸು ತ್ತಿರುವುದೇ ದೇಶದ ಜನಸಂಖ್ಯೆ ಕುಗ್ಗಲು ಮುಖ್ಯ ಕಾರಣ ಎಂದು ಜನಸಂಖ್ಯಾಶಾಸ್ತ್ರಜ್ಞರು ಹಿಂದೆಯೇ
ಎಚ್ಚರಿಸಿದ್ದರು. ಇಲ್ಲಿ ಈಗ ಕುಟುಂಬದ ಸರಾಸರಿ ಗಾತ್ರವು 2.62 ಜನ. 2010ರಲ್ಲಿ ಇದು 3.1 ಇತ್ತು.

ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಮಾಡಿಸಿಕೊಂಡ ವಿಚಾರವನ್ನು ಬಹಿರಂಗಪಡಿಸಲು ಬಯಸದ ಜನರೂ ಇದ್ದಾರೆ. ಈ ಲೇಖನಕ್ಕಾಗಿ ಮಾತನಾಡಿಸಿದ ಇಬ್ಬರು ತಮ್ಮ ಪೂರ್ಣ ಹೆಸರು ಬರೆಯಬೇಡಿ ಎಂದು ವಿನಂತಿಸಿ ದ್ದಾರೆ. ಶಸ್ತ್ರಕ್ರಿಯೆ ಮಾಡಿಸಿಕೊಂಡ ಬಗ್ಗೆ ಕುಟುಂಬದ ಕೆಲವರು ಮತ್ತು ಗೆಳೆಯರಿಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಅವಿವಾಹಿತ ಯುವಕರು ಇಂತಹ ಶಸ್ತ್ರಕ್ರಿಯೆ ಮಾಡಿಸಿ ಕೊಳ್ಳುವುದನ್ನು ಚೀನಾದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕಳಂಕ ಎಂದೇ ಭಾವಿಸಲಾಗುತ್ತದೆ. ಇಂತಹ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಬೇಕಾದರೆ ಕೆಲವು ನಗರಗಳಲ್ಲಿ ವೈದ್ಯರು ಮದುವೆ ಪ್ರಮಾಣಪತ್ರ ಮತ್ತು ಸಂಗಾತಿಯ ಸಮ್ಮತಿಪತ್ರ ಕೇಳುತ್ತಿದ್ದಾರೆ. ಮದುವೆ ಆಗಿದೆಯೇ ಎಂದು ವೈದ್ಯರು ಹುವಾಂಗ್‌ಗೂ ಕೇಳಿದ್ದರು. ಮದುವೆ ಆಗಿ ಮಕ್ಕಳು ಇವೆ ಎಂದು ಹುವಾಂಗ್‌ ಸುಳ್ಳು ಹೇಳಿದ್ದರು.

ತೀವ್ರ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಹಾಕಲು ಸರ್ಕಾರವು ನಿರ್ಧರಿಸಿ ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ ಜಾರಿಗೆ ತಂದಾಗಲೇ ಸಂತಾನಶಕ್ತಿಹರಣ ಶಸ್ತ್ರಕ್ರಿಯೆ ಬಗ್ಗೆ ಜನರು ತಿಳಿದುಕೊಂಡಿದ್ದರು. ಒಂದು ಮಗು ನೀತಿಯ ಕಾರಣಕ್ಕೆ ಹಲವು ಮಹಿಳೆಯರನ್ನು ಬಲವಂತವಾಗಿ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿತ್ತು. ಆಗಲೂ ಪುರುಷರನ್ನು ಶಸ್ತ್ರಕ್ರಿಯೆಗೆ ಒಳಪಡಿಸಿದ ಪ್ರಮಾಣ ಕಡಿಮೆಯೇ ಇತ್ತು.

ಮೂವರು ಮಕ್ಕಳ ನೀತಿಯ ಮೂಲಕ ಸಂತಾನ ಶಕ್ತಿಹರಣ ಶಸ್ತ್ರಕ್ರಿಯೆಗೆ ತಡೆ ಒಡ್ಡಲು ಸರ್ಕಾರ ಬಯಸಿದೆ. ಆದರೆ, ಜನರೇ ಸ್ವಯಂಪ್ರೇರಣೆಯಿಂದ ಶಸ್ತ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.

ಫ್ಯುಜಿಯನ್‌ ಪ್ರಾಂತ್ಯದ ಜಿಯಾಂಗ್‌ (29) ಅವರ ಶಸ್ತ್ರಕ್ರಿಯೆಯ ಕೋರಿಕೆಯನ್ನು ಆರು ಆಸ್ಪತ್ರೆಗಳು ತಿರಸ್ಕರಿಸಿವೆ. ಕುಟುಂಬ ಯೋಜನೆ ಪ್ರಮಾಣಪತ್ರ ಕೊಟ್ಟಿಲ್ಲ ಎಂಬುದು ಕಾರಣ. ಈ ಪ್ರಮಾಣಪತ್ರದಲ್ಲಿ ವೈವಾಹಿಕ ಸ್ಥಿತಿ ಮತ್ತು ಮಕ್ಕಳೆಷ್ಟು ಎಂಬ ಮಾಹಿತಿ ಇರುತ್ತದೆ.

‘ನಿನಗೆ ಮದುವೆ ಆಗಿಲ್ಲ ಮತ್ತು ಮಕ್ಕಳು ಇಲ್ಲ. ನೀನು ದೇಶದ ಜನಸಂಖ್ಯಾ ನೀತಿಗೆ ವಿರುದ್ಧ ಹೋಗುತ್ತಿದ್ದಿ’ ಎಂದು ಜಿಯಾಂಗ್‌ಗೆ ಹೇಳಲಾಗಿತ್ತು. ಕೊನೆಗೂ ಚೆಂಗ್ಡು ಪ್ರಾಂತ್ಯದ ಒಂದು ಆಸ್ಪತ್ರೆಯು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿತು.

ಪರಂಪರೆ, ವಂಶ ಮುಂದುವರಿಕೆ ಮತ್ತು ಅಂತಿಮವಾಗಿ ನಿವೃತ್ತ ಜೀವನದಲ್ಲಿ ಆಸರೆಯ ಕಾರಣಗಳಿಗಾಗಿ ಮಕ್ಕಳು ಬೇಕು ಎಂಬುದಕ್ಕೆ ಚೀನಾದ ಜನರು ಹೊಂದಿಕೊಂಡಿದ್ದರು. ಸಾಮಾಜಿಕ ಭದ್ರತೆ ಯೋಜನೆಗಳ ವಿಸ್ತರಣೆ, ವಿಮಾ ಸೌಲಭ್ಯಗಳು ಜನರಿಗೆ ಈಗ ಹೆಚ್ಚಿನ ಆಯ್ಕೆಗಳನ್ನು ನೀಡಿವೆ.

ಜಗತ್ತಿನಲ್ಲಿಯೇ ಅತಿಹೆಚ್ಚು ಅವಿವಾಹಿತರು ಇರುವ ದೇಶ ಚೀನಾ. 2018ರಲ್ಲಿ 24 ಕೋಟಿ ಜನರು ಅವಿವಾಹಿತರಿದ್ದರು. ಇದು ಒಟ್ಟು ಜನಸಂಖ್ಯೆಯ ಶೇ 17ರಷ್ಟು. ಅಮೆರಿಕಕ್ಕೆ ಹೋಲಿಸಿದರೆ ಈ ಪ್ರಮಾಣವು ಕಡಿಮೆಯೇ. ಆದರೆ, 2010ರ ಬಳಿಕ ಈ ಸಂಖ್ಯೆ ಮೂರನೇ ಒಂದರಷ್ಟು ಹೆಚ್ಚಳವಾಗಿದೆ.

‘ಈಗಿನ ತಲೆಮಾರಿನ ಯುವಜನ, ಹಿಂದಿನ ತಲೆಮಾರಿನವರ ಹಾಗೆ ಕಷ್ಟಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ವಯಸ್ಸಾದಾಗ ಮಕ್ಕಳು ನೋಡಿಕೊಳ್ಳುವುದಿಲ್ಲ ಮಾತ್ರವಲ್ಲ, ತಮ್ಮ ಮೇಲೆಯೇ ಅವಲಂಬಿತರಾಗಬಹುದು ಎಂದು ಯೋಚಿಸುವವರು ಬಹಳ ಜನ ಇದ್ದಾರೆ. ಹಾಗಾಗಿಯೇ, ಹೆಚ್ಚು ಹಣ ಉಳಿತಾಯ ಮಾಡಿ ವೃದ್ಧಾಶ್ರಮ ಸೇರಿಕೊಳ್ಳುವುದು ಅಥವಾ ವಿಮಾ ಪಾಲಿಸಿ ಖರೀದಿಸುವುದು ಉತ್ತಮ ಎಂದು ಜನರು ಭಾವಿಸಿದ್ದಾರೆ’ ಎಂದು ಝೆನ್‌ಜಿಯಾಂಗ್‌ನ ಹೆ ಫು ಹೇಳುತ್ತಾರೆ.

ಜರ್ನಲ್‌ ಆಫ್‌ ಚೈನೀಸ್‌ ವಿಮೆನ್ಸ್‌ ಸ್ಟಡೀಸ್‌ 2018ರಲ್ಲಿ ಪ್ರಕಟಿಸಿದ ವರದಿಯೊಂದರ ಪ್ರಕಾರ, ಹುಟ್ಟಿನಿಂದ 17 ವರ್ಷದವರೆಗೆ ಮಗುವನ್ನು ಬೆಳೆಸಲು ನೇರವಾಗಿ ಆಗುವ ವೆಚ್ಚವು 30 ಸಾವಿರ ಡಾಲರ್‌ (ಸುಮಾರು ₹ 22 ಲಕ್ಷ). ಇದು ಚೀನಾದ ಪೌರರ ವಾರ್ಷಿಕ ಸರಾಸರಿ ಸಂಬಳಕ್ಕಿಂತ ಏಳು ಪಟ್ಟು ಹೆಚ್ಚು.

ವುಕ್ಸಿ ನಗರದಲ್ಲಿ ನೆಲೆಸಿರುವ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಹುವಾಂಗ್‌ (24), ತಮ್ಮ ಭಾವಿ ಸಂಗಾತಿ 28 ವರ್ಷದ ಯುವತಿಯನ್ನು ಡಿಂಕ್‌ ವೇದಿಕೆಯೊಂದರಲ್ಲಿ ಭೇಟಿಯಾದರು. ‘ಮಗುವನ್ನು ಹೊಂದುವುದರ ವೆಚ್ಚವು ಎಷ್ಟು ಹೆಚ್ಚು, ಅದನ್ನು ನೆನೆಸಿಕೊಂಡರೆ ಭಯವಾಗುತ್ತದೆ ಎಂಬುದನ್ನು ಆಕೆಗೆ ನಾನು ನಿರಂತರವಾಗಿ ವಿವರಿಸುತ್ತಿದ್ದೇನೆ’ ಎಂದು ಹುವಾಂಗ್‌ ಹೇಳುತ್ತಾರೆ.

ಮಕ್ಕಳನ್ನು ಹೊಂದುವ ವಿಚಾರದಲ್ಲಿ ತಮಗೆ ಇರುವ ಭಯವನ್ನು ಸಹಪಾಠಿ ಗೆಳೆಯರಿಗೆ ಹುವಾಂಗ್‌ ಹೇಳಿದ್ದಾರೆ. ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯ ಸಲಹೆಯು ಅವರಿಂದ ಬಂತು.‌ ಸುಝೌ ನಗರದಲ್ಲಿ ಕಳೆದ ನವೆಂಬರ್‌ನಲ್ಲಿ ಹುವಾಂಗ್‌ ಶಸ್ತ್ರಚಿಕಿತ್ಸೆ ಮಾಡಿಸಿ
ಕೊಂಡಿದ್ದಾರೆ. ಇಲ್ಲಿನ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪುವ ಮುನ್ನ ಆರು ಆಸ್ಪತ್ರೆಗಳನ್ನು ಹುವಾಂಗ್‌ ಸಂಪರ್ಕಿಸಿದ್ದರು.

ಹೆಚ್ಚು ಪ್ರಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆ ಇರುವ ಐಸ್‌ಲ್ಯಾಂಡ್‌ ಅಥವಾ ನ್ಯೂಜಿಲೆಂಡ್‌ಗೆ ವಲಸೆ ಹೋಗುವುದು ಹುವಾಂಗ್ ಅವರ ನಿವೃತ್ತಿಯ ಯೋಜನೆ. ‘ಮಗ ಅಥವಾ ಮಗಳು ಹೆತ್ತವರ ಸೇವೆ ನಡೆಸುವ ಅವಧಿಯು ಸುಮಾರು 10 ವರ್ಷ ಎಂಬುದನ್ನು ಲೆಕ್ಕ ಹಾಕಿದ್ದೇನೆ. ಅದಕ್ಕಾಗಿ ಮಕ್ಕಳನ್ನು ಹೊಂದುವುದು ಫಲಪ್ರದವಲ್ಲ’ ಎಂದು ಹುವಾಂಗ್‌ ಹೇಳುತ್ತಾರೆ.

ಮಗುವೊಂದನ್ನು ಬೆಳೆಸುವುದು ಭಾರಿ ವೆಚ್ಚದಾಯಕ ಮತ್ತು ಪ್ರತಿಫಲ ಅಲ್ಪ‍. ಒಂದು ಮಗುವನ್ನು ಹೊಂದುವುದು ಭಾರಿ ತ್ರಾಸದಾಯಕ ಎಂಬುದು ಹುವಾಂಗ್ಅವರ ಅಭಿಪ್ರಾಯ.

–ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT