ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖನ| ಮತಾಂತರ ನಿಷೇಧಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯ

Last Updated 1 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಭಾರತದ ಸಂವಿಧಾನ ‘ರಿಲಿಜನ್‌’ ಸ್ವಾತಂತ್ರ್ಯ ನೀಡಿದೆ. ರಿಲಿಜನ್‌ ಮೂಲ ಉದ್ದೇಶವೇ ಶುಭ ಸಂದೇಶ ಪ್ರಸಾರ ಮಾಡುವುದು. ಆ ಮೂಲಕ ಸ್ವರ್ಗವನ್ನು ಖಾತ್ರಿ ಪಡಿಸಿಕೊಳ್ಳುವುದು. ಆದ್ದರಿಂದ ರಿಲಿಜನ್‌ ಸ್ವಾತಂತ್ರ್ಯವೆಂದರೆ ಮತಾಂತರ ಮಾಡಲು ಇರುವ ಸ್ವಾತಂತ್ರ್ಯ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಂವಿಧಾನ ತಿದ್ದುಪಡಿ ಆಗದೇ ಮತಾಂತರ ನಿಷೇಧ ಮಾಡುವುದು ಸಾಧ್ಯವಿಲ್ಲ ಎಂಬುದೇ ನನ್ನ ಅನಿಸಿಕೆ

***

ಇತ್ತೀಚೆಗೆ ಮತಾಂತರದ ಬಗ್ಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಶತಮಾನಗಳಷ್ಟು ಹಳೆಯದಾದರೂ ಆಗಾಗ ಸದ್ದು ಮಾಡಿ ಮತ್ತು ಸ್ವಲ್ಪ ಸಮಯದ ನಂತರ ತಣ್ಣಗಾಗುತ್ತದೆ. ಆದರೆ, ಇನ್ನೊಂದೆಡೆ ಮತಾಂತರ ಪ್ರಕ್ರಿಯೆ ಮಾತ್ರ ಅವ್ಯಾಹತವಾಗಿ ಹಂತ ಹಂತವಾಗಿ ನಿರಂತರವಾಗಿ ನಡೆಯುತ್ತಾ ಬಂದಿದೆ. ಕಾಲಾಂತರದಲ್ಲಿ ಅದರ ಸ್ವರೂಪ ಬದಲಾಗಿರಬಹುದು. ಆದರೆ ಪ್ರಕ್ರಿಯೆ ಎಂದೂ ನಿಂತಿಲ್ಲ. ಕಾಲಕ್ಕೆ ತಕ್ಕಂತೆ ಅದರ ನೀತಿಗಳು ಬದಲಾಗಿವೆ. ಒಂದು ಕಾಲದಲ್ಲಿ ಹಿಂಸೆಯ ಮೂಲಕ ಬಲವಂತವಾಗಿ ಮತಾಂತರಿಸಿದ್ದರೆ ಕಾಲಕ್ರಮೇಣ ರಾಜಕೀಯ ಸನ್ನಿವೇಶಗಳು ಬದಲಾದಂತೆ ವಿಧಾನಗಳು ಬದಲಾದವು. ಬಲಪ್ರಯೋಗ, ಹಿಂಸೆಯ ಬದಲು ಸೇವೆಯ ಸೋಗಿನಲ್ಲಿ ಆಮಿಷ–ಲಾಲಸೆ ಒಡ್ಡಿ ಮತಾಂತರಗೊಳಿಸುವ ವಿಧಾನ ಜಾರಿಗೆ ಬಂತು ಮತ್ತು ಈ ವಿಧಾನ ಸಫಲವೂ ಆಯಿತು. ಆದರೆ ಆಗೀಗ ಸಂಘರ್ಷಗಳು ಏರ್ಪಟ್ಟಾಗ ಮಾತ್ರ ಮಾಧ್ಯಮಗಳಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಬರುತ್ತವೆಯೇ ಹೊರತು ಈ ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಕೆಲಸ ಆಗಲೇ ಇಲ್ಲ. ಇದೊಂದು ರಾಜಕೀಯ ಕೆಸರೆರಚಾಟಕ್ಕೆ ಸೀಮಿತವಾಗಿರುವ ವಿಷಯವಾಗಿಯೇ ಉಳಿಯಿತು. ರಾಜಕೀಯ ಸಮಸ್ಯೆಗಿಂತ ಇದೊಂದು ಸಾಮಾಜಿಕ, ನೈತಿಕ, ಮೌಲಿಕ ಮಾತ್ರವಲ್ಲದೆ ಅತ್ಯಂತ ಪುರಾತನ ನಾಗರಿಕತೆಯಾಗಿರುವ ಭಾರತದ ಅಡಿಪಾಯವನ್ನೇ ಅಲುಗಾಡಿಸುವಂತಹ ಗಂಭೀರ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರವನ್ನು ಅಷ್ಟೇ ಗಂಭೀರವಾಗಿ ಯೋಚಿಸಿ ಕ್ರಮಬದ್ಧವಾಗಿ ಕೈಗೊಳ್ಳುವ ಅಗತ್ಯವಿದೆ.

ಈಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ಸೀಮಿತ ವಿಷಯವೆಂದರೆ, ಮತಾಂತರ ನಿಷೇಧ ಕಾಯ್ದೆ ಬೇಕೆ, ಬೇಡವೇ? ಎಂಬುದಾಗಿದೆ. ಆದರೆ ಈ ಸಮಸ್ಯೆಯ ಗಂಭೀರತೆ ಆಳ ಅಗಲಗಳ ಬಗ್ಗೆ ಚರ್ಚೆಯಾಗುವುದು ಕಂಡುಬರುತ್ತಿಲ್ಲ. ಮತಾಂತರ ಯಾಕಾಗಿ ನಡೆಯುತ್ತಿದೆ? ಇದರ ಉದ್ದೇಶವೇನು? ಎಂಬುದರ ಬಗ್ಗೆ ಚರ್ಚೆಗಳು ಕೇಳಿ ಬರುತ್ತಿಲ್ಲ. ಸಮಸ್ಯೆಯ ಮೂಲವನ್ನೇ ಅರಿಯದೇ ಅದಕ್ಕೆ ಪರಿಹಾರ ಹುಡುಕಲು ಹೊರಟರೆ ಲಾಭಕ್ಕಿಂತ ನಷ್ಟವಾಗುವುದೇ ಹೆಚ್ಚು ಎಂಬುದು ನನ್ನ ಖಚಿತ ಅಭಿಪ್ರಾಯ.

ಒಂದೆಡೆ ಹಿಂದೂ ಪರ ಸಂಘಟನೆಗಳು ಮತಾಂತರದ ಪಿಡುಗು ತಡೆಗಟ್ಟಲು ಕಾನೂನು ತರಬೇಕೆಂದು ಒತ್ತಾಯಿಸುತ್ತಿವೆ. ಇನ್ನೊಂದೆಡೆ ಚರ್ಚ್‌ ಪರ ವ್ಯಕ್ತಿಗಳು ಸಂವಿಧಾನವನ್ನು ಉಲ್ಲೇಖಿಸಿ ವಾದ ಮಂಡಿಸುತ್ತಾರೆ. ಸಂವಿಧಾನ ನೀಡಿರುವ ಹಕ್ಕು ಸ್ವಾತಂತ್ರ್ಯ ಉಲ್ಲೇಖಿಸಿ, ಮತಾಂತರ ನಿಷೇಧ ಮೂಲಭೂತ ಹಕ್ಕುಗಳ ವಿರುದ್ಧ ಎಂದು ವಾದಿಸುತ್ತಾರೆ.

ಇಲ್ಲಿ ಮೂಲಭೂತ ಸಮಸ್ಯೆ ಇರುವುದೇ ‘ಧರ್ಮ’ ಮತ್ತು ‘ರಿಲಿಜನ್‌’ಗಳ ಸಾಮ್ಯತೆ ಅಥವಾ ವ್ಯತ್ಯಾಸ ತಿಳಿಯದೆ ಆಂಗ್ಲ ಪದ ‘ರಿಲಿಜನ್‌’ಗೆ ಕನ್ನಡದಲ್ಲಿ ಧರ್ಮ ಎಂಬ ಪದ ಬಳಕೆ ಮಾಡುವುದು. ಹಾಗೂ ‘ಧರ್ಮ’ಕ್ಕೆ ಆಂಗ್ಲದಲ್ಲಿ ರಿಲಿಜನ್‌ ಎಂದು ಕರೆಯುವುದು. ‘ಧರ್ಮ’ ಎಂದರೆ, ಶತಮಾನ – ಸಹಸ್ರಮಾನಗಳ ಅವಧಿಯಲ್ಲಿ ನಿರಂತರ ಅಭಿವೃದ್ಧಿ ಹೊಂದಿ ಜಾರಿಗೆ ಬಂದಿರುವ ಒಂದು ಮೌಲ್ಯಾಧಾರಿತ ವ್ಯವಸ್ಥೆ. ಇದು ಮನುಷ್ಯ ಜೀವನದ ಎಲ್ಲಾ ಆಯಾಮಗಳಿಗೆ ಸಂಬಂಧಿಸಿದ್ದು. ಸುಸೂತ್ರ ಕುಟುಂಬ, ಸಮಾಜ, ಮತ್ತು ರಾಷ್ಟ್ರ ನಿರ್ಮಾಣ ಆಗುವಲ್ಲಿ ಧರ್ಮ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ‘ರಿಲಿಜನ್‌’ ಎಂಬುದು ಒಂದು ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟಿದ್ದು, ನೇರ ದೇವರ ಮಾತುಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದು. ಅದನ್ನು ‘ದೇವರ ವಾಕ್ಯ’ ಎಂದು ಕರೆದಿರುವುದು. ‘ರಿಲಿಜನ್‌’ನ ಮೂಲ ತತ್ವವೇ ಈ ದೇವರ ವಾಕ್ಯವನ್ನು ಶುಭ ಸಂದೇಶದ ರೂಪದಲ್ಲಿ ಸಮಸ್ತ ಜಗತ್ತಿಗೆ ಪಸರಿಸಿ, ಎಲ್ಲಾ ಜನರನ್ನು ಅನುಯಾಯಿಗಳಾಗಿ ಮಾಡುವುದು ಮತ್ತು ಈ ಮೂಲಕ ಅವರಿಗೆ ಸ್ವರ್ಗ ಪ್ರವೇಶವನ್ನು ಖಾತ್ರಿಗೊಳಿಸುವುದು. ಈ ದೇವರ ವಾಕ್ಯ ಅಥವಾ ಶುಭ ಸಂದೇಶದಲ್ಲಿ ದೇವರು ಕಟ್ಟಪ್ಪಣೆ ಮಾಡಿ ತಾನೊಬ್ಬನೇ ಇರುವುದು. ನನ್ನನ್ನು ಬಿಟ್ಟು ಬೇರೆ ದೇವರು ಇಲ್ಲ. ನನ್ನನ್ನು ಒಪ್ಪಿಕೊಳ್ಳಲು ನಿರಾಕರಿಸಿದವನು ನಕಲಿ ದೇವರ ಆರಾಧಕನಾಗಿರುತ್ತಾನೆ ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಅನುಯಾಯಿಗಳು ಇದನ್ನು ಕಡ್ಡಾಯವಾಗಿ ಪಾಲಿಸುವುದು ಮತ್ತು ನಿಜವಾದ ದೇವರಿಂದ ದೂರವಿದ್ದು, ಮೂರ್ತಿಪೂಜೆಯಲ್ಲಿ ತೊಡಗಿರುವವರನ್ನು ಖಂಡಿಸುವುದು, ಅವಹೇಳನ ಮಾಡುವುದು ರಿಲಿಜನ್‌ ಪ್ರಕಾರ ಕರ್ತವ್ಯ ಆಗಿರುತ್ತದೆ. ಆದರೆ ಭಾರತದಂತಹ ಒಂದು ನಾಗರಿಕ ಸಮಾಜದಲ್ಲಿ ಇಂತಹ ನಂಬಿಕೆ ಸಂಘರ್ಷಕ್ಕೆ ಕಾರಣವಾಗುತ್ತದೆ.

ಮತಾಂತರವನ್ನು ವಿರೋಧಿಸುವ ಹಿಂದೂ ಪರ ಸಂಘಟನೆಗಳು ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಒತ್ತಾಯಿಸುತ್ತಿವೆ. ಒಂದು ರೀತಿಯಲ್ಲಿ ಇದು ಕಿವಿಗೆ ಇಂಪಾಗಿ ಕೇಳಿಸಬಹುದು. ಆದರೆ, ಇನ್ನೊಂದೆಡೆ ಎದುರಾಗುವ ಪ್ರಶ್ನೆಯೆಂದರೆ ಇಂತಹ ಕಾನೂನಿನಿಂದಾಗಿ ಮತಾಂತರ ತಡೆಯುವುದು ಸಾಧ್ಯವೇ?

ಇದು ಬಹಳ ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ. ಬಲವಂತದ ಮತಾಂತರವನ್ನು ತಡೆಗಟ್ಟಲಾಗುವುದು ಎಂಬುದಾಗಿ ಗೃಹಮಂತ್ರಿಗಳು ಹೇಳಿಕೆಯನ್ನು ನೀಡಿದ್ದಾರೆ. ಬಲವಂತ ಆಗದೆ ಇರುವಾಗ ಆಮಿಷಗಳ ಮೂಲಕ ಮತಾಂತರ ಆಗುತ್ತಿರುವಾಗ ಇಂತಹ ಕಾನೂನುಗಳು ಅಪ್ರಸ್ತುತ, ಅಸಂಬದ್ಧ ಎನಿಸುತ್ತವೆ. ಮತಾಂತರ ಆಗುವವನೂ, ಮಾಡುವವನೂ ಒಂದೇ ಪಕ್ಷದಲ್ಲಿದ್ದು ಹೊರಗಿನಿಂದ ವಿರೋಧಿಸುವವನು ಎದುರಾಳಿ ಆದಾಗ ಕಾನೂನಿನಿಂದ ಏನು ಮಾಡಲು ಸಾಧ್ಯ? ಯಾರೊಬ್ಬನೂ ತಾನು ನೊಂದಿದ್ದೇನೆ, ಬಾಧಿತನಾಗಿದ್ದೇನೆ, ಬಲಿಪಶು ಆಗಿದ್ದೇನೆ ಎಂದು ದೂರು ಕೊಡದ ಹೊರತು ಕಾನೂನು ಏನೂ ಮಾಡಲು ಸಾಧ್ಯವಿಲ್ಲ. ಆಮಿಷದಿಂದ ಮತಾಂತರಗೊಂಡವನು ಮತಾಂತರಗೊಳಿಸಿದವನ ವಿರುದ್ಧ ದೂರು ಸಲ್ಲಿಸುವುದು ಸಾಧ್ಯವಿಲ್ಲದ ಮಾತು. ಆದ್ದರಿಂದ ಕಾನೂನಿನಿಂದ ಸಾಧಿಸಹೊರಟಿರುವುದು ಏನು? ಇದೊಂದು ತಾತ್ಕಾಲಿಕ ಆಕ್ರೋಶ ಶಮನ ಮಾಡಲು ಕಣ್ಣು ಒರೆಸುವ ತಂತ್ರ ಎಂದೇ ಹೇಳಬೇಕಾಗುತ್ತದೆ ವಿನಹ ಸಮಸ್ಯೆಗೆ ಪರಿಹಾರ ಅಲ್ಲ.

ಸಂವಿಧಾನದಲ್ಲೇ ಎಡವಟ್ಟು?: ಭಾರತದ ಸಂವಿಧಾನ ‘ರಿಲಿಜನ್‌’ ಸ್ವಾತಂತ್ರ್ಯ ನೀಡಿದೆ. ರಿಲಿಜನ್‌ ಮೂಲ ಉದ್ದೇಶವೇ ಶುಭ ಸಂದೇಶ ಪ್ರಸಾರ ಮಾಡುವುದು. ಆ ಮೂಲಕ ಸ್ವರ್ಗವನ್ನು ಖಾತ್ರಿ ಪಡಿಸಿಕೊಳ್ಳುವುದು. ಆದ್ದರಿಂದ ರಿಲಿಜನ್‌ ಸ್ವಾತಂತ್ರ್ಯವೆಂದರೆ ಮತಾಂತರ ಮಾಡಲು ಇರುವ ಸ್ವಾತಂತ್ರ್ಯ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಸಂವಿಧಾನ ತಿದ್ದುಪಡಿ ಆಗದೇ ಮತಾಂತರ ನಿಷೇಧ ಮಾಡುವುದು ಸಾಧ್ಯವಿಲ್ಲ ಎಂಬುದೇ ನನ್ನ ಅನಿಸಿಕೆ.

ಲೇಖಕ: ಮಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT