ಗುರುವಾರ , ಆಗಸ್ಟ್ 18, 2022
22 °C

ಅನುಭವ ಮಂಟಪ| ಸಹಕಾರ ಸಚಿವಾಲಯ ರಚನೆ: ‘ಸಹಕಾರ’ದ ಹೊಸ ಮನ್ವಂತರ

ಶ್ರೀಕಾಂತ್ ಬರುವೆ Updated:

ಅಕ್ಷರ ಗಾತ್ರ : | |

ಸಹಕಾರ ಕ್ಷೇತ್ರ ನಿಂತ ನೀರಲ್ಲ, ಸದಾ ಅಗ್ನಿಪರೀಕ್ಷೆಗೆ ಒಳಗಾಗಿದೆ. ಆದ್ದರಿಂದಲೇ ಇಂದು ಸಹ ಸಹಕಾರವು ವ್ಯವಸ್ಥೆಯಾಗದೇ ಚಳವಳಿಯಾಗಿಯೇ ಉಳಿದಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟವನ್ನು ಇತ್ತೀಚೆಗೆ ಪುನರ್‌ರಚಿಸಿದ ಸಂದರ್ಭದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸೃಷ್ಟಿಸಿ ಕೇಂದ್ರದ ಗೃಹ ಸಚಿವರನ್ನೇ ನೂತನ ಸಹಕಾರ ಸಚಿವರನ್ನಾಗಿ ನೇಮಕ ಮಾಡಿದೆ. ಅಮಿತ್ ಶಾ ಅವರನ್ನು ಕೇಂದ್ರ ಸಹಕಾರ ಸಚಿವರನ್ನಾಗಿ ನೇಮಕ ಮಾಡಿದ ನಂತರ ಸಹಕಾರ ಕ್ಷೇತ್ರಕ್ಕೆ ಏನೋ ಮಾಡಿಬಿಡುತ್ತಾರೆ ಎಂಬಂತೆ ಪ್ರತಿಕ್ರಿಯಿಸಿದವರು ಅನೇಕ. ಆದರೆ ಒಂದನ್ನು ಮರೆಯಬಾರದು ನೂತನ ಸಹಕಾರ ಸಚಿವಾಲಯದ ಸೃಷ್ಟಿಯ ಉದ್ದೇಶ ನಾವು ಅಂದುಕೊಂಡಿದ್ದಕ್ಕಿಂತ ಭಿನ್ನವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅರ್ಥವ್ಯವಸ್ಥೆಯನ್ನು 5 ಟ್ರಿಲಿಯನ್ ಡಾಲರ್ (ಸುಮಾರು ₹375 ಲಕ್ಷ ಕೋಟಿ) ಅರ್ಥವ್ಯವಸ್ಥೆಯನ್ನಾಗಿ ರೂಪಿಸುವ ಪಣ ತೊಟ್ಟಿದ್ದಾರೆ. ಆದರೆ ಸಹಕಾರ ಕ್ಷೇತ್ರವನ್ನು ಹೊರಗೆ ಇರಿಸಿ ಇದನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಅರಿತೇ ಹೊಸ ಸಹಕಾರ ಸಚಿವಾಲಯವನ್ನು ಸೃಷ್ಟಿಸಿದ್ದಾರೆ.

ದೇಶದಲ್ಲಿ ಅಮೂಲ್, ಇಫ್ಕೊ, ಕ್ರಿಭ್ಕೊ, ಕ್ಯಾಂಪ್ಕೊ ಸೇರಿದಂತೆ ಸದಸ್ಯ ಕೇಂದ್ರಿತ ಸೇವೆ ನೀಡುತ್ತಿರುವ 8.5 ಲಕ್ಷಕ್ಕೂ ವಿವಿಧ ರೀತಿಯ ಸಹಕಾರ ಸಂಸ್ಥೆಗಳಿವೆ. 30 ಕೋಟಿಗೂ ಹೆಚ್ಚು ಸದಸ್ಯರನ್ನು ಒಳಗೊಂಡಿರುತ್ತದೆ. ₹ 38.32 ಲಕ್ಷ ಕೋಟಿಯಷ್ಟು ಷೇರು ಬಂಡವಾಳವನ್ನು ಸಹಕಾರಿ ಕ್ಷೇತ್ರ ಹೊಂದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿನ ಮಾತ್ರ ಇರುವ ಠೇವಣಿಯೇ ₹84.61 ಲಕ್ಷ ಕೋಟಿಯಷ್ಟಾಗುತ್ತದೆ. ಸಹಕಾರಿ ಬ್ಯಾಂಕುಗಳು, ಇನ್ನಿತರ ಸಹಕಾರ ಸಂಸ್ಥೆಗಳ ಹಣಕಾಸು ವಿವರಗಳನ್ನು ಪರಿಗಣಿಸಿದರೆ ಆರ್ಥಿಕವಾಗಿ ಸಹಕಾರಿ ಕ್ಷೇತ್ರ ಎಷ್ಟು ವಿಸ್ತಾರವಾಗಿ ಹರಡಿದೆ ಎನ್ನುವುದು ಅರಿವಾಗುತ್ತದೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರವನ್ನು ಒಳಗೊಳ್ಳುವುದರಿಂದ ಮೋದಿಯವರ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯ ಕನಸಿಗೆ ಬಲ ದೊರೆಯಲಿದೆ. ದೇಶದ ಶೇ 95ರಷ್ಟು ಗ್ರಾಮಗಳನ್ನು ಅಂದರೆ ಸುಮಾರು 6.30 ಲಕ್ಷ ಗ್ರಾಮಗಳನ್ನು ಸಹಕಾರ ಕ್ಷೇತ್ರವು ವ್ಯಾಪಿಸಿದೆ. ದೇಶದ ಕಾನೂನಾತ್ಮಕ ಚೌಕಟ್ಟಿನ ಸಹಕಾರ ಚಳವಳಿಗೆ 117 ವರ್ಷಗಳ ಸುದೀರ್ಘ ಇತಿಹಾಸವಿದ್ದರೂ, ಈ ಕ್ಷೇತ್ರ ಇಷ್ಟೊಂದು ಬೃಹದಾಕಾರವಾಗಿ ಬೆಳೆದಿದ್ದರೂ, ಅನೇಕ ಸಾಧನೆಗಳನ್ನು ಮಾಡಿದ್ದರೂ ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಇದುವರೆಗೂ ಇರಲಿಲ್ಲ ಎನ್ನುವುದೇ ಖೇದಕರ ವಿಷಯ.

ಸಹಕಾರ ಕ್ಷೇತ್ರದ ತೊಂದರೆಗಳ ನಿವಾರಣೆಗೆ ಕೇಂದ್ರದ ಕೃಷಿ ಸಚಿವರನ್ನು ವಿನಂತಿಸಬೇಕಾಗಿತ್ತು. ದೇಶದ ಕೃಷಿ ಕ್ಷೇತ್ರ ಅತ್ಯಂತ ದೊಡ್ಡದಾಗಿರುವುದರಿಂದ ಕೃಷಿ ಸಚಿವಾಲಯವು ಸಹಕಾರ ಕ್ಷೇತ್ರದ ಕಡೆ ಗಮನಹರಿಸುವುದು ಸಾಧ್ಯವಾಗುತ್ತಿರಲಿಲ್ಲ. ಹೊಸ ಸಚಿವಾಲಯವು ನಿಜವಾದ ಜನಾಧಾರಿತ ಚಳವಳಿಯಾಗಿ ಸಮುದಾಯ ಆಧರಿತ ಅಭಿವೃದ್ಧಿ
ಸಹಭಾಗಿತ್ವಕ್ಕೆ ಕಾರಣವಾಗುತ್ತದೆ ಎಂಬ ಆಶಾಭಾವನೆ ಹೊಂದಬಹುದಾಗಿದೆ.

ಸಹಕಾರ ಭಾರತಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಇವರುಗಳ ಪ್ರಮುಖ ಒತ್ತಾಸೆಯ ಮೇರೆಗೆ ಹೊಸ ಸಹಕಾರ ಸಚಿವಾಲಯದ ರಚನೆಯಾಗಿರುತ್ತದೆ. ಕೇಂದ್ರ ಸರ್ಕಾರವು ನೂತನ ಸಹಕಾರ ಸಚಿವಾಲಯವನ್ನು ಸಹಕಾರ ಚಳವಳಿಯನ್ನು ಬಲಪಡಿಸಲು ಅಗತ್ಯವಾದ ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ನಿರೂಪಣೆ ನಿರ್ಧರಿಸಲು ರಚಿಸಲಾಗಿದೆ ಎಂದು ತಿಳಿಸಲಾಗಿದೆ.

ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯ ಅಗತ್ಯ ಇದೆ. ಕೇಂದ್ರದ ನೂತನ ಸಚಿವಾಲಯವು ಸಹಕಾರಿ ಮನೋಭಾವವನ್ನು ಬೆಳೆಸುವ ಮೂಲಕ ಸಹಕಾರ ಕ್ಷೇತ್ರದ ವೇಗವರ್ಧಿಸುವ ಕಾರ್ಯವಾಗಬೇಕಿದೆ. ಸಹಕಾರ ಸಂಸ್ಥೆಗಳು ಲಾಭವನ್ನು ಗಳಿಸುವ ಮಾರುಕಟ್ಟೆ ತರ್ಕದಿಂದ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲ. ಆದರೆ, ಸಹಕಾರ ಸಂಸ್ಥೆಯು ಎಲ್ಲಾ ಸದಸ್ಯರಿಗೆ ಪ್ರಯೋಜನಗಳನ್ನು ಸಮನಾಗಿ ಹಂಚುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ. ಆದರೆ ಈ ವ್ಯವಸ್ಥೆಯ ಬಗ್ಗೆ ಇರುವ ಗುರುತರ ಅಪಾದನೆಯೆಂದರೆ ಕೆಲವು ರಾಜ್ಯಗಳಲ್ಲಿ ವ್ಯವಸ್ಥೆಯ ದುರುಪಯೋಗ ಮತ್ತು ಭ್ರಷ್ಟಾಚಾರ ಇದೆ ಎಂಬುದಾಗಿದೆ; ಸ್ವಹಿತಾಸಕ್ತಿಯ ಪಾರಮ್ಯವಿದೆ ಎಂಬ ಆರೋಪವು ಈ ವಲಯದ ಮೇಲಿನ ನಂಬಿಕೆಯನ್ನು ಕಡಿಮೆಗೊಳಿಸಿದೆ.

ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಿಂದಾಗಿ, ಈ ದೇಶದ ಬೃಹತ್ ಪ್ರಮಾಣದ ಸಹಕಾರ ಚಳವಳಿಯ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆಯೊಂದು ದೊರೆತಂತಾಗುತ್ತದೆ. ಸಹಕಾರ ಕ್ಷೇತ್ರವನ್ನು ಆರೋಗ್ಯಕರವಾಗಿ ಮತ್ತು ಬಲಯುತವಾಗಿ ಬೆಳಸಲು ಒಬ್ಬರು ಸಚಿವರು, ಪ್ರತ್ಯೇಕ ಸಚಿವಾಲಯ ಇರುವುದರಿಂದ ಸಹಕಾರ ಕ್ಷೇತ್ರವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಸಹಕಾರಿಗಳ ಆಶಯವಾಗಿದೆ.

ಸಹಕಾರ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯು ನಮ್ಮ ದೇಶಕ್ಕೆ ಬಹಳ ಪ್ರಸ್ತುತವಾಗಿದೆ. ಸಹಕಾರ ಆರ್ಥಿಕ ವ್ಯವಸ್ಥೆಗೆ ಪರ್ಯಾಯವಾದ ವ್ಯವಸ್ಥೆ ಇಲ್ಲದಿರುವುದು ಗಮನಾರ್ಹ. ಸಹಕಾರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತ ಮನೋಭಾವದಿಂದ ಕೆಲಸ ಮಾಡುತ್ತಾರೆ. ಸಹಕಾರ ಸಂಸ್ಥೆಗಳ ವ್ಯವಹಾರವನ್ನು ಸುಲಭಗೊಳಿಸಲು ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಬಹು-ರಾಜ್ಯ ಸಹಕಾರಿ ಸಂಸ್ಥೆಗಳ (ಎಂಎಸ್‍ಸಿಎಸ್) ಅಭಿವೃದ್ಧಿಗೆ ಅನುವು ಮಾಡಿಕೊಡಲು ಸಚಿವಾಲಯವು ಕೆಲಸ ಮಾಡುತ್ತದೆ ಎಂಬುದು ಕೇಂದ್ರ ಸರ್ಕಾರದ ನೂತನ ಸಹಕಾರ ಸಚಿವಾಲಯದ ಸೃಷ್ಟಿಯ ಹಿಂದಿನ ಉದ್ದೇಶವಾಗಿದೆ.

ನೂತನ ಪ್ರತ್ಯೇಕ ಸಚಿವಾಲಯದ ರಚನೆಯು ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರದ ಆಳವಾದ ಬದ್ಧತೆಯನ್ನು ಸೂಚಿಸುತ್ತದೆ. ಸಹಕಾರಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು ಹಣಕಾಸು ಸಚಿವರು ಮಾಡಿದ ಬಜೆಟ್ ಪ್ರಕಟಣೆಯನ್ನು ಸಹ ಪೂರೈಸುತ್ತದೆ. ಆದರೆ ಇದು ಸ್ವತಃ ಆಜ್ಞಾ ಪ್ರಾಧಿಕಾರವಾಗಿ ರೂಪುಗೊಳ್ಳದಿರಲಿ ಎಂಬುದು ಸಹಕಾರ ಕ್ಷೇತ್ರದ ಗಣ್ಯರ ಆಶಯ.

ಲೇಖಕ: ಉಪ ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು