ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರು ರಾಮಚಂದ್ರಪ್ಪ ಬರಹ: ಶಿಕ್ಷಣ ಕ್ಷೇತ್ರದ ಕಾರ್ಪೊರೇಟೀಕರಣ

ಡಿಜಿಟಲ್ ಜ್ಞಾನದ ಯಜಮಾನಿಕೆಯಲ್ಲಿ ಮನುಷ್ಯಜ್ಞಾನ ಅಡಿಯಾಳಾಗಬಾರದು
Last Updated 4 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ನನ್ನ ಹುಟ್ಟೂರು ಬರಗೂರಿಗೆ ಐದಾರು ಕಿಲೊ ಮೀಟರ್ ದೂರದಲ್ಲಿ ಹಾರೋಗೆರೆಯೆಂಬ ಹಳ್ಳಿಯಿದೆ. ಈ ಹಳ್ಳಿ ಯನ್ನು ದಾಟಿದರೆ ಆಂಧ್ರಪ್ರದೇಶ ಆರಂಭ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದರು. ‘ನಮ್ಮ ಶಾಲೆಗೆಂದು ಆರು ಕೊಠಡಿಗಳಿವೆ. ಐದು ಶಿಥಿಲಗೊಂಡಿವೆ. ಬಯಲಲ್ಲಿ ತರಗತಿ ಮಾಡುತ್ತಿದ್ದೇವೆ. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ನೆರವು ಕೊಡಿಸಿ’ ಎಂದು ಕೇಳಿದ್ದಲ್ಲದೆ, ಬಯಲು ತರಗತಿಯ ಚಿತ್ರಗಳನ್ನು ಕಳಿಸಿದರು.

ಅವರು ನನ್ನನ್ನೇ ಕೇಳಲು ಕಾರಣವಿತ್ತು. ನಾನು ಅದೇ ಊರಿಗೆ ಒಂದು ಹಾಸ್ಟೆಲ್, ಹುಟ್ಟೂರಿಗೆ ಎರಡು ಹಾಸ್ಟೆಲ್, ಸಾಂಸ್ಕೃತಿಕ ಭವನ, ಆಸ್ಪತ್ರೆ ಕಟ್ಟಡಕ್ಕೆ ಕಾರಣನಾಗಿದ್ದೆ. ಇದು ಬೇರೆ ವಿಷಯ. ಮುಖ್ಯ ವಿಷಯವೆಂದರೆ, ಸರ್ಕಾರಿ ಶಾಲೆಗಳ ದುಃಸ್ಥಿತಿ. ಹಾರೋಗೆರೆಯೆಂಬ ಗಡಿಗ್ರಾಮದ್ದು ಒಂದು ಸಾಂಕೇತಿಕ ಸಾಕ್ಷಿ.

ಒಂದು ಮಾಹಿತಿಯಂತೆ, ನಮ್ಮ ದೇಶದಲ್ಲಿ 10,83,678 ಸರ್ಕಾರಿ ಶಾಲೆಗಳು, ನಮ್ಮ ರಾಜ್ಯದಲ್ಲಿ 44,615 ಪ್ರಾಥಮಿಕ ಮತ್ತು 5,240 ಪ್ರೌಢಶಾಲೆಗಳು ಇವೆ. ಇವುಗಳಲ್ಲಿ ಅನೇಕ ಶಾಲೆಗಳು ಹಾರೋಗೆರೆ ಶಾಲೆಯ ಸ್ಥಿತಿಯಲ್ಲಿವೆ.

ಹೀಗೆ ಅನೇಕ ಶಾಲೆಗಳು ಸೌಕರ್ಯವಿಲ್ಲದೆ ಉಪವಾಸ ಅನುಭವಿಸುತ್ತಿರುವಾಗ ಸರ್ಕಾರಗಳು ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ‘ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಹಳ್ಳಿ ಗಾದೆಯನ್ನು ನಿಜ ಮಾಡುತ್ತಿವೆ. ಇತ್ತೀಚಿನ ಸಾಕ್ಷಿಯಾಗಿ ಒಕ್ಕೂಟ (ಕೇಂದ್ರ) ಸರ್ಕಾರದ ಬಜೆಟ್ ಅನ್ನು ನೋಡಬಹುದು.

ಸಮಗ್ರ ಶಿಕ್ಷಣಕ್ಕೆ ಸ್ವಲ್ಪ ಹೆಚ್ಚು ಹಣ ನೀಡಿರುವುದು ಸ್ವಾಗತಾರ್ಹವಾದರೂ ಡಿಜಿಟಲ್ ಆದ್ಯತೆಯ ದಿಕ್ಸೂಚಿ ದಿಗಿಲು ಹುಟ್ಟಿಸುತ್ತದೆ. ಯಾಕೆಂದರೆ ಈಗಾಗಲೇ ದೊಡ್ಡ ಪ್ರಮಾಣದಲ್ಲಿರುವ ಶೈಕ್ಷಣಿಕ ಅಸಮಾನತೆಗೆ ಡಿಜಿಟಲ್ ಆದ್ಯತೆಯ ಅಸಮಾನತೆಯೂ ಸೇರಿಕೊಂಡು ದೇಶದ ಗ್ರಾಮೀಣರನ್ನು, ಬಡವರನ್ನು ಅಣಕಿಸುತ್ತದೆ. 200 ಟಿ.ವಿ. ಚಾನೆಲ್‍ಗಳನ್ನು ಸ್ಥಾಪಿಸಿ ಪೂರಕ ಶಿಕ್ಷಣ ಕೊಡಲಾ ಗುತ್ತದೆ. ‘ಪೂರಕ’ ಎನ್ನುವುದು ಸಮಾಧಾನದ ಸಂಗತಿ ಯಾದರೂ ಇ-ಕಂಟೆಂಟ್ ಸಿದ್ಧಪಡಿಸುವಿಕೆ, ವೃತ್ತಿಪರ ಕೋರ್ಸುಗಳಿಗೆ 750 ವರ್ಚುವಲ್ ಲ್ಯಾಬ್ ಮತ್ತು 75 ಇ-ಲ್ಯಾಬ್ ನಿರ್ಮಾಣ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆಯಂತಹ ವಿಷಯಗಳಿಗೆ ನೀಡಿರುವ ‘ಆದ್ಯತೆ’ಯು ಸರ್ಕಾರದ ಶೈಕ್ಷಣಿಕ ನೀತಿಯ ದಿಕ್ಕನ್ನು ತೋರುತ್ತದೆ.

ಪ್ರಾದೇಶಿಕ ಭಾಷೆಗಳಲ್ಲಿ ಇ-ಕಂಟೆಂಟ್ ಸಿದ್ಧಮಾಡಿ, ಇಂಟರ್‌ನೆಟ್, ಮೊಬೈಲ್, ಟಿ.ವಿ., ರೇಡಿಯೊ ಮೂಲಕ ವಿದ್ಯಾರ್ಥಿಗಳಿಗೆ ದೊರಕಿಸುವ ಪ್ರಸ್ತಾಪವನ್ನು ಬಜೆಟ್‍ನಲ್ಲಿ ಮಾಡಲಾಗಿದೆ. ಡಿಜಿಟಲ್ ವಿಶ್ವವಿದ್ಯಾಲಯವು ಮನೆ ಬಾಗಿಲಲ್ಲೇ ಕಲಿಕೆಯ ಅನುಭವ ನೀಡುತ್ತದೆಯೆಂಬ ಆಕರ್ಷಕ ಮಾತನ್ನೂ ಹೇಳಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶೇ 40ರಷ್ಟು ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ನೀಡುವ ಅಂಶವಿದ್ದು ಅದಕ್ಕೆ ಪೂರಕವಾಗಿಯೇ ಬಜೆಟ್ ಪ್ರಸ್ತಾಪಗಳೂ ಬಂದಿವೆಯೆಂಬುದು ಸ್ಪಷ್ಟವಾಗಿದೆ.

ಹೊಸ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಪೂರಕ ಸಾಧನವಾಗಿ ಮಾತ್ರ ಬಳಸಿಕೊಳ್ಳುವುದು ಸರಿ. ಆದರೆ ಅದೇ ಆದ್ಯತೆಯಾದರೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಒಟ್ಟಿಗೆ ಸೇರುವ ತರಗತಿ ಶಿಕ್ಷಣಕ್ಕೆ ಧಕ್ಕೆಯಾಗುತ್ತದೆ. ನೇರ ತರಗತಿ ಶಿಕ್ಷಣಕ್ಕೆ ಮತ್ತಾವುದೂ ಪರ್ಯಾಯವಲ್ಲ. ತಂತ್ರಜ್ಞಾನಾಧಾರಿತ ಶೈಕ್ಷಣಿಕ ಪದ್ಧತಿಯು ವಿದ್ಯಾರ್ಥಿಗಳನ್ನು ಏಕಾಕಿತನಕ್ಕೆ ದೂಡುತ್ತದೆ, ಪೋಷಕರಿಂದ, ಅಧ್ಯಾಪಕರಿಂದ, ಸಹಪಾಠಿಗಳಿಂದ ಬಹಳಷ್ಟು ದೂರ ಮಾಡುತ್ತದೆ. ಮನುಷ್ಯ ಸಂಬಂಧಗಳ ಸುಖ ಮೂಕವಾಗುತ್ತದೆ.

ತಂತ್ರಜ್ಞಾನವು ಎಷ್ಟು ಬೇಕೋ ಅಷ್ಟು ಇರಬೇಕೇ ವಿನಾ ಮನುಷ್ಯನ ಮನಸ್ಸಿನ ಮೇಲೆ ಸವಾರಿ ಮಾಡಿ ಸಂವೇದನಾಶೀಲತೆಯನ್ನು ಕುಗ್ಗಿಸಬಾರದು. ಸಂವೇದನಾ ಶೀಲತೆ ಕುಗ್ಗಿದರೆ, ಸೃಜನಶೀಲತೆಯೂ ಮಗ್ಗಿಯ ಮಟ್ಟಕ್ಕೆ ಇಳಿಯುತ್ತದೆ. ಯಾಂತ್ರಿಕ ಲೆಕ್ಕ ಮುಖ್ಯವಾಗುತ್ತದೆ. ನಿಜ, ಕೋವಿಡ್ ಕಾಲದಲ್ಲಿ ಆನ್‍ಲೈನ್ ಅನಿವಾರ್ಯವು ಅನುಕೂಲಕರವಾಗಿತ್ತೆಂಬ ವಾಸ್ತವವನ್ನು ಒಪ್ಪೋಣ. ಆದರೆ, ಆನ್‍ಲೈನ್ ವಿಧಾನವೇ ಅವಿಭಾಜ್ಯ ಅಂಗವಾಗಿ ಆದ್ಯತೆಯಾಗುವುದನ್ನು ಒಪ್ಪದಿರೋಣ.

ಇಲ್ಲಿಯೇ ಇನ್ನೊಂದು ಅಂಶವನ್ನು ಗಮನಿಸಬೇಕು. ತಂತ್ರಜ್ಞಾನದ ಸಲಕರಣೆಗಳು ಶಿಕ್ಷಣ ಕ್ಷೇತ್ರದ ಅವಿಭಾಜ್ಯ ಅಂಗವಾಗುವುದೆಂದರೆ ಶಿಕ್ಷಣವು ಉದ್ಯಮದ ಒಂದು ಅಂಗವಾಗುತ್ತದೆ. ಈ ಸಲಕರಣೆಗಳನ್ನು ಉತ್ಪಾದಿಸುವ ಉದ್ಯಮಗಳಿಗೆ ಪೂರಕವೂ ಲಾಭ ತರುವ ಸಾಧನವೂ ಆಗಿ ಶಿಕ್ಷಣ ಕ್ಷೇತ್ರವು ಬಳಕೆಯಾಗುತ್ತದೆ. ಹೈಟೆಕ್ ಹಾಗೂ ಆಧುನಿಕತೆಯ ಹೆಸರಿನಲ್ಲಿ ಶಿಕ್ಷಣವು ಕಾರ್ಪೊರೇಟ್ ಉದ್ಯಮೀಕರಣವಾಗುತ್ತದೆ.

ಹಾಗಾದರೆ ಆಧುನೀಕರಣ ಬೇಡವೇ ಎಂದು ಪ್ರಶ್ನಿಸಬಹುದು. ಆಧುನೀಕರಣ ಬೇಕು. ಆದರೆ, ಆಧುನೀಕರಣವೆಂದರೆ ಕಾರ್ಪೊರೇಟೀಕರಣವಲ್ಲ, ಕಾರ್ಪೊರೇಟ್ ಕಲ್ಪನಾ ವಿಲಾಸ ಇಲ್ಲದೆ ಇದ್ದಾಗಲೂ ಶತಶತಮಾನಗಳಿಂದ ಆಧುನೀಕರಣಗೊಳ್ಳುತ್ತಲೇ ಬಂದ ಸಮಾಜ ಮತ್ತು ಸಂಸ್ಕೃತಿಯ ಪರಂಪರೆ ನಮ್ಮದು. ಆಧುನಿಕತೆ ಎನ್ನುವುದು ಆಯಾ ಸಂದರ್ಭದ ಸಮಕಾಲೀನ ಹಂತ. ಜಡತೆಯಿಂದ ಬಿಡಿಸಿಕೊಂಡ ಚಲನಶೀಲ ಪ್ರಕ್ರಿಯೆ. ಆದ್ದರಿಂದ ಆಧುನಿಕತೆಯೆನ್ನುವುದು ಯಾಂತ್ರಿಕವಲ್ಲ, ತಾಂತ್ರಿಕವಲ್ಲ. ಅದು ತಾತ್ವಿಕ. ನಮ್ಮ ಮನೋಧರ್ಮದ ಭಾಗ.

ಈ ದೃಷ್ಟಿಯಿಂದ ನೋಡಿದಾಗ ವೈಜ್ಞಾನಿಕ ಮನೋ ಧರ್ಮವಿಲ್ಲದ ವಿಜ್ಞಾನಿಗಳನ್ನು ‘ತಂತ್ರಜ್ಞಾನ’ದ ಕಾರಣ ಕ್ಕಾಗಿ ಆಧುನಿಕ ಎನ್ನಲಾದೀತೆ? ಬುದ್ಧ, ಬಸವಣ್ಣ, ಪಂಪ, ಕುಮಾರವ್ಯಾಸ, ಕನಕದಾಸ, ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್, ಮೌಲಾನಾ ಆಜಾದ್, ಕುವೆಂಪು ಮುಂತಾದವರು ಇವತ್ತಿಗೂ ಆಧುನಿಕ ವಿಚಾರದವರಲ್ಲವೇ? ಅಕ್ಕ ಮಹಾದೇವಿ, ಸಾವಿತ್ರಿಬಾಯಿ ಫುಲೆಯವರಿಗಿಂತ ಆಧುನಿಕರು ಬೇಕೆ? ಇಂಥ ಅಸಂಖ್ಯಾತ ‘ಆಧುನಿಕ’ ಚೇತನಗಳ ಸಾಕ್ಷಿ ಕೊಡಬಹುದು.

ಹಾಗೆಂದು ಹಿಂದಿನ ಕಾಲದಲ್ಲಿದ್ದಂತೆಯೇ ಎಲ್ಲವೂ ಇರಬೇಕೆಂದು ನಾನು ಹೇಳುವುದಿಲ್ಲ. ಹಳೆಯ ಪ್ರತಿ ಯೊಂದೂ ಪ್ರಸ್ತುತ ಎಂದರೆ ನಾವು ಬದುಕಿಲ್ಲ ಎಂದು ಅರ್ಥ. ಹಳೆಯ ಪ್ರತಿಯೊಂದೂ ಅಪ್ರಸ್ತುತ ಎಂದರೆ ನಾವು ಬೆಳೆದಿಲ್ಲ ಎಂದು ಅರ್ಥ. ಪರಂಪರೆಯ ಪ್ರಜ್ಞೆ ಇಲ್ಲದೆ ಪ್ರಗತಿ ಪ್ರಜ್ಞೆ ಅರ್ಥಪೂರ್ಣವಾಗುವುದಿಲ್ಲ. ಈ ವಿವೇಕವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಗತ್ಯ. ಡಿಜಿಟಲ್ ಜ್ಞಾನದ ಯಜಮಾನಿಕೆಯಲ್ಲಿ ಮನುಷ್ಯಜ್ಞಾನ ಅಡಿಯಾಳಾಗಬಾರದು. ಅಸಮಾನತೆಯನ್ನು ಕಾಯಂ ಗೊಳಿಸಬಾರದು.

ನಮ್ಮ ಸಮಾಜವು ಈಗಾಗಲೇ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯಿಂದ ನರಳುತ್ತಿದೆ. ಒಂದು ಮಾಹಿತಿಯ ಪ್ರಕಾರ, ದೇಶದ ಶೇ 10ರಷ್ಟು ಶ್ರೀಮಂತರು ಶೇ 75ರಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ರೈತ, ಕೂಲಿಕಾರ, ದಲಿತ ಮುಂತಾದವರು ತಮ್ಮ ಮಕ್ಕಳಿಗೆ ಪೂರ್ಣ ಶಿಕ್ಷಣ ಕೊಡಿಸಲಾಗದ ಸುಳಿಯಲ್ಲಿ ಸಿಕ್ಕಿರುವಾಗ ಡಿಜಿಟಲ್ ಆದ್ಯತೆಯ ಶಿಕ್ಷಣವು ಅಸಮಾನತೆಯ ದೊಡ್ಡ ಕಂದಕ ನಿರ್ಮಾಣ ಮಾಡುತ್ತದೆ.

ನಿಜ, ಡಿಜಿಟಲ್‌ರಹಿತ ಶಿಕ್ಷಣ ವ್ಯವಸ್ಥೆಯಲ್ಲೂ ಅಸಮಾನತೆಯಿದೆ. ಈ ಅಸಮಾನತೆಯು ಮಕ್ಕಳಲ್ಲಿ ಮೇಲರಿಮೆ, ಕೀಳರಿಮೆಗಳಿಗೆ ಕಾರಣವಾಗುತ್ತ ಬಂದಿದೆ. ಒಂದೇ ವಯಸ್ಸಿನ ಮಕ್ಕಳು ವಿವಿಧ ಮಾದರಿಯ ಶಾಲಾ ಪದ್ಧತಿಯಲ್ಲಿ ವಿಭಜನೆಗೊಳ್ಳುವ ಶಿಕ್ಷಣ ನಮ್ಮದಾಗಿದೆ. ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳ ಸಾಮಾಜಿಕ- ಆರ್ಥಿಕ ಸ್ವರೂಪದಲ್ಲೇ ವಿಭಜಕತೆಯ ಸಾಕ್ಷಿಯಿದೆ.

ನಮ್ಮ ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಂಸ್ಥೆಗಳಿಗೆ 53 ಸಾವಿರಕ್ಕೂ ಹೆಚ್ಚು ಶಿಕ್ಷಕರ ಅಗತ್ಯವಿದೆಯೆಂದು ಸಚಿವರೇ ಹೇಳಿದ್ದಾರೆ. ಈಗ ಅರ್ಧದಷ್ಟು ಅತಿಥಿ ಬೋಧಕರನ್ನು ನೇಮಿಸಲಾಗಿದೆ. ಅತ್ತ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ಬಹುಪಾಲು ನಡೆಯುತ್ತಿವೆ. ಆದ್ದರಿಂದ ಶಿಕ್ಷಣ ಕ್ಷೇತ್ರದ ಅಸಮಾನತೆಯನ್ನು ತೊಡೆದುಹಾಕುವ ಪ್ರಾಥಮಿಕ ಪ್ರಯತ್ನವಾಗಿ ಸರ್ಕಾರಿ ಶಾಲೆ, ಕಾಲೇಜುಗಳ ಮೂಲ ಸೌಕರ್ಯಗಳ ಹಸಿವನ್ನು ಮೊದಲು ಹಿಂಗಿಸಬೇಕು.

ನೇರ ತರಗತಿ ಶಿಕ್ಷಣವೇ ಆದಿ ಮತ್ತು ಅಂತಿಮ ಆದ್ಯತೆಯಾಗಬೇಕು. ಡಿಜಿಟಲ್ ಶಿಕ್ಷಣವು ನೇರ ತರಗತಿಯ ಕಲಿಕೆಗೆ ಪರ್ಯಾಯವಲ್ಲ ಎಂದು ಶೈಕ್ಷಣಿಕ ಸಂಶೋಧನೆಗಳೆಲ್ಲ ಹೇಳಿರುವುದನ್ನು ಅರ್ಥಮಾಡಿ ಕೊಳ್ಳಬೇಕು. ಶೈಕ್ಷಣಿಕ ಅಸಮಾನತೆ ಇಲ್ಲವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT