ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ದನಿಯೆತ್ತಿ ಕಠಿಣ ಪ್ರಶ್ನೆ ಕೇಳಿ

ಜನರ ಜೀವಕ್ಕಿಂತ ನಿಮ್ಮ ನಾಯಕರ ವರ್ಚಸ್ಸು ಕಾಪಾಡುವುದೇ ನಿಮಗೆ ಮುಖ್ಯವೇ?
Last Updated 16 ಮೇ 2021, 19:30 IST
ಅಕ್ಷರ ಗಾತ್ರ

ಪ್ರಿಯ ಬಿಜೆಪಿ ಸದಸ್ಯರೇ,

ನಾನು ಈ ದೇಶದ ಪ್ರಜೆಯಾಗಿ ನಿಮಗೆ ಪತ್ರ ಬರೆಯುತ್ತಿದ್ದೇನೆ. ನಿಮಗಿಂತ ಭಿನ್ನವಾದ ಸಮಾಜೋ-ರಾಜಕೀಯ ನಿಲುವುಗಳ ವ್ಯಕ್ತಿಯಾಗಿ ಇದನ್ನು ಬರೆಯುತ್ತಿರುವೆ. ನಾನು ಮತ್ತು ನೀವು ರಾಜಿಯಾಗಲು ಸಾಧ್ಯವೇ ಇಲ್ಲದಂತೆ ವಾಗ್ವಾದ ನಡೆಸಿದರೂ, ನಾವು ಪರಸ್ಪರ ಗೌರವದಿಂದ ಇರಲು ಸಾಧ್ಯವಾಗಬೇಕು. ಏಕೆಂದರೆ, ಮಾನವತೆ ಎನ್ನುವುದು ನನ್ನ–ನಿಮ್ಮ ಆದರ್ಶವಾಗಿರಬೇಕು. ನಾನು ಈ ಬಗೆಯ ಸಹ-ಪೌರತ್ವದ ನೆಲೆಯಲ್ಲಿ, ನಾವೆಲ್ಲರೂ ಭಾರತವೆಂಬ ನಮ್ಮ ಈ ದೇಶವನ್ನು ಪ್ರೀತಿಸುತ್ತೇವೆ ಎಂಬ ನಂಬುಗೆಯಲ್ಲಿ ಬರೆಯುತ್ತಿರುವೆ.

ದೇಶವೀಗ ಪ್ರಪಾತದ ಅಂಚಿನಲ್ಲಿದೆ. ಪ್ರತಿದಿನ ಸಾವಿರಾರು ಜನ ಸಾಯುತ್ತಿದ್ದಾರೆ; ನಮ್ಮ ಕಣ್ಣೋಟದ ಆಚೆ ಸತ್ತವರು ಲೆಕ್ಕಕ್ಕೇ ಸಿಗದೆ ಇನ್ನೆಷ್ಟಿದ್ದಾರೋ. ಆರೋಗ್ಯವಂತರನ್ನು ಸುರಕ್ಷಿತವಾಗಿ ಇರಿಸಲೂ ನಾವು ಹೆಣಗುತ್ತಿದ್ದೇವೆ. ಹಿಂದೆಂದೂ ಕಂಡಿರದ ಈ ಕತ್ತಲಕೂಪದಿಂದ ಹೊರಬರುವ ದಾರಿಯನ್ನು ಹುಡುಕಬೇಕಿದೆ. ಅಂದರೆ ನಾವು ನಮ್ಮ ಮೂರ್ಖತನಗಳನ್ನು ಗುರುತಿಸಿ, ಸನ್ನಿವೇಶವನ್ನು ಇನ್ನಷ್ಟು ಹದಗೆಡಿಸಿದ ನಮ್ಮ ನಿಸ್ಸೀಮ ನಿರ್ಲಕ್ಷ್ಯವನ್ನು ಗುರುತಿಸಬೇಕಿದೆ. ಕೋವಿಡ್ ಇಲ್ಲವಾದ ನಂತರ ವಿಶ್ಲೇಷಣೆ ಮಾಡೋಣವೆಂದು ಕಾಯಲಾಗದು. ಆಗಿರುವ ಲೋಪಗಳನ್ನು ತಿದ್ದುವ ಕೆಲಸವನ್ನು ಈಗಿಂದೀಗಲೇ, ಈ ಕ್ಷಣದಲ್ಲಿ ಮಾಡಬೇಕಿದೆ. ಈ ಮಹಾಮಾರಿಯೊಂದಿಗೆ ಸೆಣಸಲು ವೈಜ್ಞಾನಿಕವಾದ, ಕಾಳಜಿಪೂರ್ವಕವಾದ ರೀತಿಯಲ್ಲಿ ಕಾರ್ಯೋನ್ಮುಖವಾಗುವುದು ನಮ್ಮ ಕೈಯಲ್ಲಿಯೇ ಇತ್ತು ಮತ್ತು ಈಗಲೂ ಇದೆ. ಜನರ ಜೀವ ಅತೀವ ಗಂಡಾಂತರದಲ್ಲಿದೆ.

ನರೇಂದ್ರ ಮೋದಿ ಅವರು ನಿಮ್ಮ ಪಕ್ಷದ ನಾಯಕರಷ್ಟೇ ಅಲ್ಲ; ಅವರು ನಮ್ಮ ಪ್ರಧಾನಮಂತ್ರಿ. ಈ ಸಾಂವಿಧಾನಿಕ ಹುದ್ದೆಗೆ ಮಹತ್ವವಿರಬೇಕು. ನೀವು ಅವರನ್ನು ನಿಮ್ಮ ಪಕ್ಷದ ರಾಜಕೀಯ ತತ್ವಗಳ ಸಂರಕ್ಷಕ ಎಂದಷ್ಟೇ ನೋಡದೆ, ಇಡೀ ದೇಶದ ನಾಯಕರೆಂದು ಕಾಣಬೇಕಿದೆ. ಮೋದಿಯವರು ಇತ್ತೀಚಿನ ದಶಕಗಳಲ್ಲಿ ನಿಮ್ಮ ಪಕ್ಷ ಕಂಡ ಅತ್ಯಂತ ಪ್ರಭಾವಿ ನಾಯಕ ಎಂಬುದನ್ನಾಗಲೀ ಅಥವಾ ಸಂಸತ್ತಿನಲ್ಲಿ ನಿಮ್ಮ ಪಕ್ಷಕ್ಕೆ ಎರಡು ಸಲ ಪೂರ್ಣ ಬಹುಮತ ತಂದುಕೊಟ್ಟವರು ಎಂಬುದನ್ನಾಗಲೀ ಸದ್ಯಕ್ಕೆ ಪಕ್ಕಕ್ಕೆ ಇಡಿ.

ಮೋದಿಯವರು ಬೇರಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೆ, ಸಾವಿರಾರು ವಲಸೆ ಕಾರ್ಮಿಕರು ಕುಡಿಯುವ ನೀರಿಗೂ ಗತಿಯಿಲ್ಲದೆ, ಹುಟ್ಟೂರು ತಲುಪಿದರೆ ಸಾಕೆಂದು ವಾರಗಟ್ಟಲೆ ಬರಿಗಾಲಿನಲ್ಲಿ, ಸೈಕಲಿನಲ್ಲಿ ಹೋಗುವ ಪರಿಸ್ಥಿತಿಯನ್ನು ಪ್ರಧಾನಿಯವರು ತಂದಿಟ್ಟಾಗ, ನೀವು ತಣ್ಣಗೆ ನಿಂತಿರುತ್ತಿದ್ದಿರಾ? ಇಷ್ಟು ಹದಗೆಟ್ಟ ನಿರ್ವಹಣೆ, ಅವಿವೇಕದ ನಿರ್ಧಾರಗಳಿಗೆ ಪ್ರಧಾನಿ ಮತ್ತು ಅವರ ನೇತೃತ್ವದ ಸರ್ಕಾರವನ್ನು ದೂಷಿಸುತ್ತಿರಲಿಲ್ಲವೇ? ಜನರು ಕೆಲವೇ ಖಾಸಗಿ ಕಂಪನಿಗಳ ಕೃಪೆಗಾಗಿ ಕಾಯುವಂತಾಗಿದ್ದು, ಲಸಿಕೆ ಕಾರ್ಯಕ್ರಮವು ಹೀಗೆ ಎಡವುತ್ತಿರುವುದು ಯಾರ ಉಸ್ತುವಾರಿಯಲ್ಲಿ ಎಂದು ಪ್ರಶ್ನಿಸುತ್ತಿರಲಿಲ್ಲವೇ? ಆಮ್ಲಜನಕ ಪೂರೈಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಬೇಕಾಗಿದೆ ಎಂದು ತಿಳಿದು ನಿಮಗೆ ಆಘಾತವಾಗುತ್ತಿರಲಿಲ್ಲವೇ?

ಕೆಲವು ರಾಜ್ಯಗಳ ಕೋವಿಡ್ ಅಂಕಿ–ಅಂಶದಲ್ಲಿನ ಏರುಪೇರು ಕುರಿತು ಸರ್ಕಾರವು ತನಿಖೆ ನಡೆಸಬೇಕೆಂದು ನೀವು ಆಗ್ರಹಿಸುತ್ತಿರಲಿಲ್ಲವೇ? ತಜ್ಞರು ನೀಡಿದ ಅತಿಮುಖ್ಯವಾದ ವೈಜ್ಞಾನಿಕ ಸಲಹೆಗಳನ್ನೇ ಆಡಳಿತದಲ್ಲಿನ ಅವೈಜ್ಞಾನಿಕ ಧೋರಣೆಯು ಬದಿಗೆ ಸರಿಸಿತು ಎಂದು ಹಳಿಯುತ್ತಿರಲಿಲ್ಲವೇ? ಇಂತಹ ಮಹಾ ವಿಪತ್ತಿನ ಸಮಯದಲ್ಲಿ, ಸಚಿವರು ಸಾಮಾಜಿಕ ಮಾಧ್ಯಮಗಳ ಟೀಕಾಕಾರರ ಬಾಯಿ ಮುಚ್ಚಿಸಲೆತ್ನಿಸುತ್ತ, ತಮ್ಮ ವರ್ಚಸ್ಸು ನಿರ್ವಹಣೆಯ ಸರ್ಕಸ್ಸಿನಲ್ಲಿ ಮುಳುಗಿದ್ದರೆ, ಕೇಂದ್ರ ಸರ್ಕಾರವು ಸೆಂಟ್ರಲ್ ವಿಸ್ತಾದ ನಿರ್ಮಾಣದಲ್ಲಿ ಮಗ್ನವಾಗಿದೆ.

ವಿವಾದಾತ್ಮಕ ರೀತಿಯಲ್ಲಿ ವಿಧಾನಸಭೆ ಚುನಾವಣೆಗಳನ್ನು ನಡೆಸಿದ ಬಗೆಯನ್ನು ಬದಿಗಿಡೋಣ. ಸೋಂಕಿತರ ಸಂಖ್ಯೆ ದಿನೇದಿನೇ ಏರುಮುಖವಾಗಿದ್ದಾಗ, ಖುದ್ದು ಪ್ರಧಾನಿಯೇ ತಮ್ಮ ಚುನಾವಣಾ ಪ್ರಚಾರ ಭಾಷಣಕ್ಕೆ ಸಾವಿರಾರು ಜನರು ಸೇರಿದ್ದಾರೆಂದು ಸಂಭ್ರಮಿಸಿದ್ದು ಆಘಾತ ತರಲಿಲ್ಲವೇ? ಪ್ರಧಾನಿಯವರೇ ಹೀಗೆ ನಡೆದುಕೊಂಡಾಗ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ದೇಶದ ಜನರನ್ನು ನಾವು ದೂಷಿಸಬಹುದೇ?

ಅಂತರರಾಷ್ಟ್ರೀಯ ಮಾಧ್ಯಮಗಳು ನಮ್ಮ ಘನತೆಗೆ ಮಸಿ ಬಳಿಯಲು ಮಾತ್ರ ಆಸಕ್ತಿ ತೋರುತ್ತವೆ ಎಂಬ ವಾದವನ್ನು ನೀವು ಒಪ್ಪುತ್ತೀರಿ ಎಂಬುದನ್ನು ನನಗೆ ನಂಬುವುದಕ್ಕೆ ನಿಜಕ್ಕೂ ಆಗುತ್ತಿಲ್ಲ. ನೂರಾರು ಚಿತ್ರಗಳು, ದತ್ತಾಂಶಗಳು, ಜನರ ಸಾವುನೋವಿನ ಕಥೆಗಳು ಎಲ್ಲವೂ ನಿಜವೇ; ಅಲ್ಲಿ ಚಿತೆಯ ಮೇಲೆ ಉರಿಯುತ್ತಿರುವುವು ನಿಜವಾದ ದೇಹಗಳೇ. ಜನರು ಉಸಿರಾಡುವುದಕ್ಕೆ ಒದ್ದಾಡುತ್ತಿದ್ದಾರೆ, ಸಹಾಯಕ್ಕಾಗಿ ಸರ್ಕಾರವನ್ನಲ್ಲ, ಇನ್ನುಳಿದ ಸಹನಾಗರಿಕರಿಗೆ ಮೊರೆಯಿಡುತ್ತಿದ್ದಾರೆ. ಈ ಯಾವುದೂ ನಿಮ್ಮನ್ನು ಕಿಂಚಿತ್ತೂ ತಟ್ಟುತ್ತಿಲ್ಲವೇ? ಈ ಮಹಾಮಾರಿಯ ಹೊಡೆತದಲ್ಲಿ ನೀವು ಮತ್ತು ನಾನು ಹಲವಾರು ಗೆಳೆಯರನ್ನು ಕಳೆದುಕೊಂಡಿದ್ದೇವೆ; ಇಷ್ಟಾಗಿಯೂ ಈ ಕಟುವಾಸ್ತವಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದು ಒಪ್ಪಿಕೊಳ್ಳಲು ನೀವು ಸಿದ್ಧರಿಲ್ಲ. ಜನರ ಜೀವ ಉಳಿಸುವುದಕ್ಕಿಂತ ನಿಮ್ಮ ನಾಯಕರ ವರ್ಚಸ್ಸು ಕಾಪಾಡುವುದೇ ನಿಮಗೆ ಮುಖ್ಯವೇ? ನಿಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತದೆ, ಆದರೆ ಅದು ಈಗ ಕ್ರಿಯೆಯಲ್ಲಿ ಏಕೆ ಕಾಣಿಸುತ್ತಿಲ್ಲ?

ರಾಜ್ಯ ಸರ್ಕಾರಗಳು ಕರ್ತವ್ಯಲೋಪ ಎಸಗಿವೆ ನಿಜ. ಆದರೆ ಕೋವಿಡ್ ಪಿಡುಗನ್ನು ನಿಭಾಯಿಸುವ ಜವಾಬ್ದಾರಿ ಕೇಂದ್ರದ್ದಾಗಿದೆ. 2020ರ ಮಾರ್ಚ್‌ನಲ್ಲಿ ವಿಕೋಪ ನಿರ್ವಹಣಾ ಕಾಯ್ದೆಯನ್ನು ಬಳಸಿಕೊಂಡಿತು. ನಂತರದ ತಿಂಗಳುಗಳಲ್ಲಿ, ಸಹಕಾರ ಒಕ್ಕೂಟ ವ್ಯವಸ್ಥೆಯ ತತ್ವಗಳು ಎಲ್ಲಿಯೂ ಕಾಣಲಿಲ್ಲ; ಯಾವುದೇ ರಾಜ್ಯಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿರುವ ಕೇಂದ್ರವು ಸೇತುವೆಯಾಗುವ ಜವಾಬ್ದಾರಿ ಹೊರಬೇಕಿದೆ. ಆದರೆ ಪ್ರಧಾನಿಯವರು ಈ ದಿಸೆಯಲ್ಲಿ ಮಾತನಾಡಿದ್ದನ್ನು ನಾವು ಕೇಳಲಿಲ್ಲ.

ದೇಶದ ಪ್ರತಿಯೋರ್ವ ಪ್ರಜೆಯನ್ನೂ ರಕ್ಷಿಸಲಾಗುವುದು, ತಮ್ಮೆಲ್ಲ ಕ್ರಮಗಳಿಗೆ ತಾವೇ ಜವಾಬ್ದಾರಿ ಹೊರುವುದಾಗಿ ಪ್ರಧಾನಿಯವರು ಪದೇಪದೇ ಹೇಳಿದ್ದಾರೆ. ಮಧ್ಯಮವರ್ಗದ ಹಿನ್ನೆಲೆಯಿಂದ ಬಂದ ತಮಗೆ ದೇಶದ ಸಾಮಾಜಿಕ ಸ್ತರದಲ್ಲಿ ಅತ್ಯಂತ ಕೆಳಮೆಟ್ಟಿಲಿನಲ್ಲಿರುವವರು ಅನುಭವಿಸುವ ಕಷ್ಟಗಳ ಅರಿವಿದೆ ಎಂದವರು ಎದೆ ತಟ್ಟಿಕೊಂಡಿದ್ದರು. ಆದರೆ ನಮ್ಮೊಂದಿಗೆ ಬಾಲಿಶವಾಗಿ ವರ್ತಿಸುತ್ತಿರುವ ವ್ಯಕ್ತಿಯ ಮಾತನ್ನು ನಾವೀಗ ಕೇಳುತ್ತಿದ್ದೇವೆ. ಅವರ ‘ಮನ್ ಕಿ ಬಾತ್’ನಲ್ಲಿ ಮೊದಲೇ ಅನುಮೋದನೆ ಪಡೆದ ಪ್ರಶ್ನೆಗಳಿಗೆ ಮಾತ್ರವೇ ಉತ್ತರಿಸುತ್ತಾರೆ ಹಾಗೂ ಪೂರ್ವಯೋಜಿತ ಪ್ರಶ್ನೋತ್ತರದ ಮಾಧ್ಯಮ ಸಂದರ್ಶನಗಳಲ್ಲಿ ಮಾತ್ರವೇ ಭಾಗವಹಿಸುತ್ತಾರೆ. ಮುಕ್ತವಾದ ಪತ್ರಿಕಾಗೋಷ್ಠಿಯನ್ನು ನಡೆಸಿರಿ ಎಂದು ನೀವು ಏಕೆ ಅವರನ್ನು ಕೇಳುವುದಿಲ್ಲ? ಮೋದಿಯವರನ್ನು ಹೊರತುಪಡಿಸಿದರೆ, ವಿಶ್ವದ ಬೇರೆಲ್ಲ ನಾಯಕರು ಮಾಧ್ಯಮವನ್ನು ಮುಕ್ತವಾಗಿ ಎದುರಿಸುತ್ತಾರೆ.

ಕೋವಿಡ್ ಕಾಯಿಲೆಯು ದೇಶದ ಹೊಸ್ತಿಲಿನಲ್ಲಿ ಇದ್ದಾಗಲೇ ಮೋದಿಯವರು ಎಲ್ಲ ರಾಜಕೀಯ ಪಕ್ಷಗಳನ್ನು ಸೇರಿಸಿ, ನಿರ್ಧಾರ ಮತ್ತು ಕ್ರಮ ಕೈಗೊಳ್ಳುವ ಹೊರೆಯನ್ನು ಹಂಚಿಕೊಳ್ಳಬಹುದಿತ್ತು. ಶತಮಾನದಲ್ಲೊಮ್ಮೆ ಬರಬಹುದಾದ ಮಹಾಮಾರಿಯನ್ನು ನಿಭಾಯಿಸಲು ಯಾರೂ ಪೂರ್ವಸಿದ್ಧತೆ ಮಾಡಿಕೊಂಡಿರುವುದಿಲ್ಲ ನಿಜ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಇದನ್ನು ಎದುರಿಸಬಹುದಿತ್ತು. ನಾವು ಚುನಾಯಿಸುವುದು ಸಂಸತ್ತಿನ ಸದಸ್ಯರನ್ನೇ ವಿನಾ ರಾಜಕೀಯ ಪಕ್ಷಗಳನ್ನಲ್ಲ ಎಂಬುದನ್ನು ನಾಗರಿಕರಾದ ನಾವೂ ಮರೆತೆವು. ಓರ್ವ ಪ್ರಧಾನಿಯಲ್ಲಿ ಕಾಣಬೇಕು ಎಂದು ನೀವು ಹೇಳುವ ಮುತ್ಸದ್ದಿತನವನ್ನು ಮೋದಿಯವರು ಪ್ರದರ್ಶಿಸಬಹುದಿತ್ತು.

ಕಠಿಣ ಪ್ರಶ್ನೆಗಳನ್ನು ಕೇಳಲು ಸರಿಯಾದ ಸಮಯ ಎಂಬುದಿಲ್ಲ. ನೀವು ಮೌನವಾಗಿರುವ ಪ್ರತಿದಿನವೂ ಇನ್ನಷ್ಟು ಜನರು ಸಾಯುತ್ತಾರೆ. ಇನ್ನಾದರೂ ಅತ್ಯಂತ ತುರ್ತಾಗಿ, ಸಕಾರಾತ್ಮಕವಾದ, ವೈಜ್ಞಾನಿಕವಾದ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ನಮಗೆ ಅತ್ಯಂತ ಕರಾಳ, ದುರ್ದಿನಗಳು ಕಾದಿವೆ.

ನಿಮಗೆ ಭಾರತದ ಕುರಿತು ಕಾಳಜಿ ಇದ್ದರೆ, ನೀವೀಗ ಗಟ್ಟಿ ದನಿಯಲ್ಲಿ ಮಾತನಾಡುವಿರಿ...

ಲೇಖಕ: ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ, ಚಿಂತಕ (ಲೇಖನದ ಇಂಗ್ಲಿಷ್ ಅವತರಣಿಕೆಯು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT