ಸೋಮವಾರ, ಮಾರ್ಚ್ 1, 2021
28 °C
ಅನನ್ಯತೆ ಉಳಿಸಿಕೊಂಡ ಸಾಮುದಾಯಿಕತೆಯೆಡೆಗೆ ಹೆಜ್ಜೆ ಹಾಕುವುದೊಂದೇ ಉಳಿದಿರುವ ದಾರಿ

ಅಧಿಕಾರದ ಹುಲಿ ಸವಾರಿ

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

Prajavani

ಸಾಲ ಮಾಡಿ ತುಪ್ಪ ತಿನ್ನಬೇಕೋ? ತುಪ್ಪ ಮಾರಿ ಸಾಲ ತೀರಿಸಬೇಕೋ? ಈ ಪ್ರಶ್ನೆಗಳ ಹಿಂದೆಯೇ ಇದರ ಇನ್ನೊಂದು ಮುಖವೂ ಕಾಣಿಸುತ್ತದೆ. ಅದೆಂದರೆ, ಸಾಲ ಕೊಡುವವರೂ ಇದ್ದಾರೆ, ಮಾರಿದರೆ ತುಪ್ಪ ಕೊಳ್ಳುವವರೂ ಇದ್ದಾರೆ. ಸಾಲದಿಂದ ತತ್ತರಿಸಿದವರೂ ಇದ್ದಾರೆ. ಇದು ಸದ್ಯಕ್ಕೆ ಭಾರತದೊಳಗಣ ಸ್ಥಿತಿಯೂ ಹೌದು. ಭಾರತದ ಸ್ಥಿತಿಯೂ ಹೌದು.

ಈಚೆಗೆ ಸರ್ಕಾರವೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಭಾರತದ ಸಾಲ ಈ ವರ್ಷ ₹ 107 ಲಕ್ಷ ಕೋಟಿಗೆ ತಲುಪಿದೆ! ಏಳು ವರ್ಷಗಳ ಹಿಂದೆ ಇದು ₹ 40 ಲಕ್ಷ ಕೋಟಿ ಇತ್ತು. ಹಿಂದೆಲ್ಲಾ ದೇಶದ ಸಾಲವನ್ನು ತಲಾವಾರು ಲೆಕ್ಕ ಹಾಕಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ತಲೆಬಿಸಿಯನ್ನು ದೇಶದ ಜನ ಮರೆತುಬಿಟ್ಟಿದ್ದಾರೆ.

ಬಹಳ ವಿಚಿತ್ರ ಸ್ಥಿತಿಯ ಕಾಲಘಟ್ಟವೊಂದರಲ್ಲಿ ನಾವಿದ್ದೇವೆ. ಜಗತ್ತಿನಲ್ಲೇ ಅತಿ ಸಿರಿವಂತರಾದವರು ಈಗ ನಮ್ಮ ದೇಶದಲ್ಲಿದ್ದಾರೆ. ಆರೂವರೆ ಲಕ್ಷ ಕೋಟಿ ರೂಪಾಯಿ ವಾರ್ಷಿಕ ಆದಾಯವಿರುವವರೂ ತಿಂಗಳಿಗೆ ಆರೂವರೆ ಸಾವಿರ ರೂಪಾಯಿಯೂ ಇಲ್ಲದ ಕಡು ಬಡವರೂ ಒಟ್ಟಿಗೇ ಇರುವ ಈ ದೇಶದಲ್ಲಿ ಕಳೆದ ವರ್ಷದ ಕೋವಿಡ್ ಸಂಕಟ ಇನ್ನಷ್ಟು ಕಟು ಸತ್ಯಗಳನ್ನು ನಮಗೆ ತೆರೆದು ತೋರುತ್ತಿದೆ. ಒಂದೆಡೆ, ಕೆಲಸ ಕಳೆದುಕೊಂಡವರಿಗಾಗಿ ಸಹಾಯ ಕೋರುವ ಮನವಿಗಳು ಬರುತ್ತಲೇ ಇವೆ. ಇನ್ನೊಂದೆಡೆ, ಇದೇ ವರ್ಷವೇ ನಾವು ಬೃಹತ್ ಕಟ್ಟಡಗಳನ್ನು ಕಟ್ಟುವವರಿದ್ದು ಅದಕ್ಕಾಗಿ ವಿಜೃಂಭಣೆಯಿಂದ ಶಂಕುಸ್ಥಾಪನೆಗಳನ್ನು ಮಾಡುತ್ತಿದ್ದೇವೆ.

ಒಂದೆಡೆ, ಪ್ರವಾಹ, ಭೂಕುಸಿತಗಳಿಂದ ಮನೆ ಕಳೆದುಕೊಂಡವರು ಪರಿಹಾರಕ್ಕಾಗಿ, ಮನೆಗಾಗಿ ಕಾಯುತ್ತಲೇ ಇದ್ದಾರೆ. ಇನ್ನೊಂದೆಡೆ, ಭವ್ಯ ಮಂದಿರಕ್ಕಾಗಿ ದೇಶದಾದ್ಯಂತ ಹಣ ಸಂಗ್ರಹಿಸಲು ಅಭಿಯಾನಗಳು ನಡೆಯುತ್ತಿವೆ. ಒಂದೆಡೆ, ಕೋವಿಡ್‍ನ ಸಾವುಗಳನ್ನು ತಡೆಯಲು ಯುದ್ಧದೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಇನ್ನೊಂದೆಡೆ, ಚಳವಳಿ ಮಾಡುತ್ತಿರುವ ರೈತರು ಚಳಿಯಲ್ಲಿ ಸಾಯುತ್ತಿದ್ದರೂ ಕಣ್ಣೀರಿನ ಪಸೆಯೂ ಇಲ್ಲ. ಒಂದೆಡೆ, ಯಾವುದೋ ಒಂದು ಆತ್ಮಹತ್ಯೆಯ ಪ್ರಕರಣವನ್ನು ತಿಂಗಳಾನುಗಟ್ಟಲೆ ಜೀವಂತವಾಗಿಟ್ಟು ಜನರನ್ನು ವಿಭಜಿಸುವ ಕೆಲಸ ಹಲವು ಮಾಧ್ಯಮಗಳಲ್ಲಿ ನಡೆದರೆ, ಇನ್ನೊಂದೆಡೆ, ನೂರಾರು ರೈತರ ಸಾವಿನ ಕುರಿತು ಒಂದು ಸಾಲಿನ ಸುದ್ದಿಯೂ ಪ್ರಕಟವಾಗುವುದಿಲ್ಲ.

ಇವೆಲ್ಲ ರೀತಿ ನೀತಿಗಳು ನೈಸರ್ಗಿಕವೋ? ಕೃತಕವೋ? ಸರಿಯಾಗಿ ಯೋಚಿಸಿ ನೋಡಿದರೆ ಎಲ್ಲವೂ ಕೃತಕ. ಕೃತಕವಾದ ಈ ಟೊಳ್ಳು ಬುನಾದಿಯ ವ್ಯವಸ್ಥೆಯನ್ನು ಕೆಲವೇ ಕೆಲವರ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ ಮತ್ತು ಅದೇ ಬದುಕಿನ ಪರಿ ಎಂದು ಎಲ್ಲರನ್ನೂ ಒಪ್ಪಿಸಲಾಗಿದೆ. ಪರಿಸರ ಚಿಂತಕಿ ವಂದನಾ ಶಿವ, ಇದು ಮಾನವ ಕೇಂದ್ರಿತ ಚಿಂತನೆಯೊಂದಿಗೆ ಆರಂಭವಾಯಿತು ಎನ್ನುತ್ತಾರೆ. ಪರಿಸರದ ಜೊತೆಗೆ ಮನುಷ್ಯನಿದ್ದಾಗ ಅಪಾರ ಜೀವಿವೈವಿಧ್ಯ ಮತ್ತು ಮನುಷ್ಯನಿಗೆ ಅಪಾರವಾದ ಆಂತರಿಕ ಸ್ವಾತಂತ್ರ್ಯವಿತ್ತು. ಆದರೆ ಪರಿಸರ ಇರುವುದೇ ಮನುಷ್ಯನಿಗಾಗಿ ಎಂಬ ಚಿಂತನೆ ಮುನ್ನೆಲೆಗೆ ತಂದ ಮೇಲೆ ಕೆಲವೇ ಕೆಲವರು ಸಂಪತ್ತಿನ ಮೇಲೆ ಹಿಡಿತ ಸಾಧಿಸಿ ಉಳಿದವರನ್ನು, ಉಳಿದ ಜೀವಜಾಲಗಳನ್ನು ತಮ್ಮ ಕೈವಶ ಮಾಡಿಕೊಂಡು ಎಲ್ಲರ ಸ್ವಾತಂತ್ರ್ಯಹರಣ
ಮಾಡುತ್ತಾ ಕೊನೆಯಿಲ್ಲದ ಜೈತ್ರಯಾತ್ರೆ ಮಾಡತೊಡಗಿದರು. ಅದಕ್ಕಾಗಿ ಹಲವು ಪ್ರತ್ಯೇಕತೆಗಳನ್ನು ಬಿತ್ತಲಾಗುತ್ತದೆ. ವಸಾಹತುಗಳನ್ನು ಆಕ್ರಮಣ ಮಾಡಿಕೊಂಡ ಬಿಳಿಯರಿಂದಾಗಿ ಈ ಮಾದರಿ ಜಗತ್ತಿನಾದ್ಯಂತ ಪಸರಿಸಿದೆ. ಅದೀಗ ಹಲವು ಶ್ರೇಣಿ ಒಳಶ್ರೇಣಿಗಳಲ್ಲಿ ಹಲವು ರೂಪಗಳಲ್ಲಿ ಕೆಲಸ ಮಾಡುತ್ತಿದೆ.

ಮೊದಲು ಅವರು ತಾವು ಹೇಳಿದ್ದು ಮಾತ್ರ ಜ್ಞಾನ ಎಂದು ಉಳಿದವರನ್ನು ಪ್ರತ್ಯೇಕಿಸಿ ಆಳಿದರು. ಅದಕ್ಕೂ ಮೊದಲೇ ನಮ್ಮಲ್ಲೇ ಕೆಲವರು ತಾವು ಮಾತ್ರ ಶ್ರೇಷ್ಠ ಎಂದು ಸ್ಥಾಪಿಸಿ ಬೌದ್ಧಿಕವಾಗಿ ಆಳುತ್ತಿದ್ದರು. ಬುಡಕಟ್ಟು ಜನರು, ತಳಜಾತಿಗಳವರು, ಹೆಂಗಸರು ಹೀಗೆ ಹಲವು ಒಡಕುಗಳನ್ನು ಮಾಡಿ ಆಳ್ವಿಕೆ ಸಲೀಸುಗೊಳಿಸಿಕೊಳ್ಳಲಾಗುತ್ತದೆ. ಕಾಲಾಂತರದಲ್ಲಿ ಹಲವು ಹೋರಾಟ, ಚಿಂತನೆಗಳಿಂದ ಇದನ್ನು ಬದಲಿಸಿದರೂ ಈ ಆಳ್ವಿಕೆ ಎಂಬುದು ಮೌಲ್ಯವಾಗಿ ಬದಲಾದಾಗ ಆಳಿಸಿಕೊಂಡವರೂ ಆಳುವವರಂತಾಗಲು ಹಪಹಪಿಸುತ್ತಾರೆ. ಅವರನ್ನು ಆರಾಧಿಸತೊಡಗುತ್ತಾರೆ. ಇಂದಿನ ಲಾಭಕೋರತನದ ದಾಹ ಇಂತಹುದೇ. ಇನ್ನಷ್ಟು ಮತ್ತಷ್ಟು ದೊಡ್ಡ ಸಾಮ್ರಾಜ್ಯ ಸ್ಥಾಪಿಸುವ ಭರದಲ್ಲಿ ಹಲವರ ಸಾವು, ನೋವು, ಅವಮಾನಗಳು ಅವರಿಗೆ ಕಾಣಿಸುವುದೇ ಇಲ್ಲ.

ಕೋವಿಡ್‍ಗಿಂತಲೂ ಅದರಿಂದಾದ ಆರ್ಥಿಕ ಏರುಪೇರಿನ ಕಷ್ಟದಲ್ಲಿ ಮತ್ತು ಸಾರ್ವಜನಿಕವಾಗಿ ಸೇರುವುದಕ್ಕೆ ಅವಕಾಶ ಇಲ್ಲದಿದ್ದಾಗಲೇ ಕೆಲವು ಕಾರ್ಪೊರೇಟ್‍ ಕಂಪನಿಗಳು ತಮ್ಮ ಹಿತ ಸಾಧಿಸಲು ಸರ್ಕಾರಗಳ ಮೇಲೆ ನಿಷ್ಕರುಣೆಯಿಂದ ಒತ್ತಡ ಹಾಕಬಲ್ಲವು ಮತ್ತು ಅವುಗಳ ಒಡೆತನದ ಕೆಲವು ಮಾಧ್ಯಮಗಳು ನಿರ್ಲಜ್ಜೆಯಿಂದ ಅದನ್ನು ಬೆಂಬಲಿಸಬಲ್ಲವು. ಇಂತಹದ್ದೇ ಸನ್ನಿವೇಶವನ್ನು ನೆನಪಿಸುವಂತಿದೆ, ಬಂಗಾಳಿ ಬರಹಗಾರ ಭವಾನಿ ಭಟ್ಟಾಚಾರ್ಯ ಅವರು 1955ರಲ್ಲಿ ಬರೆದ ‘ಹುಲಿ ಸವಾರಿ’ ಎಂಬ ಕಾದಂಬರಿ.

ಕಷ್ಟಪಟ್ಟು ದುಡಿಯುವ ಅತ್ಯಂತ ಪ್ರಾಮಾಣಿಕ ಕಮ್ಮಾರ ಕಾಳು, ಬರಗಾಲ ಬಂದಾಗ ಬಾಳೆಹಣ್ಣು ಕದ್ದು ತಿಂದಿದ್ದಕ್ಕಾಗಿ ಮೂರು ತಿಂಗಳ ಜೈಲುಶಿಕ್ಷೆ ಅನುಭವಿಸುತ್ತಾನೆ. ಅದೇ ಬರಗಾಲ, ಶ್ರೀಮಂತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುತ್ತದೆ. ಬಡವರು ಹೆಚ್ಚಾದಷ್ಟೂ ಅವರ ಮೋಜು ಮಸ್ತಿಗೆ ಅಗ್ಗದ ಜನ ಸಿಗುತ್ತಾರೆ. ವೇಶ್ಯಾವಾಟಿಕೆ ತುಂಬಿ ತುಳುಕುತ್ತದೆ. ಜೈಲಿನ ನರಕಸದೃಶ ಅನುಭವ ಕಾಳುವಿಗೆ ಶ್ರೀಮಂತರ ಮೇಲೆ ದ್ವೇಷ ಹುಟ್ಟಿಸುತ್ತದೆ. ಹೊರಬಂದವನು ಮಗಳ ಜೊತೆ ಸೇರಿ ಉದ್ಭವಲಿಂಗದ ಪವಾಡ ಮಾಡುತ್ತಾನೆ. ನೆಲದಾಳದ ಮಣ್ಣುತುಂಬಿದ ಡಬ್ಬದಲ್ಲಿ ಕಡಲೆಕಾಳು ತುಂಬಿಸಿ, ಅದರ ಮೇಲೆ ಸುಟ್ಟ ಕಲ್ಲೊಂದನ್ನಿಟ್ಟು, ಸತತ ನೀರೆರೆದು ಅದು ಮಣ್ಣಿನಿಂದ ಮೇಲೆ ಬಂದಾಗ ಲಿಂಗ ಉದ್ಭವಿಸಿದೆ ಎಂದಾಗ ಜನ ಮರುಳಾಗುತ್ತಾರೆ. ಬಡತನದಲ್ಲಿ ಬೆಂದ ಜನರೂ ಸಮೀಪದಲ್ಲೇ ಮಂದಿರವಾಗುವುದು ತಮ್ಮ ಭಾಗ್ಯಚಕ್ರ ಎಂದು ಭಾವಿಸುತ್ತಾರೆ. ಮಂದಿರ ಆದೀತೇ ಎಂಬ ಸಂಶಯಕ್ಕೆ ಬಡ ಹೆಂಗಸೊಬ್ಬಳು ‘ಇಡೀ ಕಲ್ಕತ್ತಾ ನಗರದಲ್ಲಿ ನಮ್ಮದೇ ಭವ್ಯಮಂದಿರ ಆಗುವುದು. ಇಲ್ಲವಾದರೆ, ಊರಿನ ತುದಿಯಲ್ಲಿದ್ದ ಈ ಜಾಗವನ್ನೇ ಏಕೆ ಶಿವ ಆಯ್ಕೆ ಮಾಡಿದ್ದು? ಆಕಾಶದಿಂದ ಹಣ ಸುರಿಯುವುದು. ಮಳೆಯ ಹಾಗೆ. ಸ್ವಲ್ಪ ತಡೆ, ನೋಡುವಿಯಂತೆ!’ ಎಂದ ಮಾತು ನಿಜವಾಗಿ, ಕಾಳು, ಮಂಗಲ ಅಧಿಕಾರಿ ಎಂಬ ಬ್ರಾಹ್ಮಣ ವೇಷ ಧರಿಸಿ ಶ್ರೀಮಂತನಾಗುತ್ತಾನೆ.

ಮುಂದೊಂದು ದಿನ ಒಬ್ಬ ಹಸಿದ ಬಡವ ಕಾಳುವಿನ ಹತ್ತಿರ ಊಟ ಯಾಚಿಸುವಾಗ, ಅವನ ಕೈ ಇವನಿಗೆ ತಗುಲಿದ ಕೂಡಲೇ ಸಿಟ್ಟಿಗೆದ್ದು, ಕೀಳು ಜಾತಿಯ ನೀನು ಬ್ರಾಹ್ಮಣನಾದ ನನ್ನನ್ನು ಮುಟ್ಟಿ ಅಪವಿತ್ರಗೊಳಿಸುವೆಯಾ ಎಂದು ಅವನನ್ನು ಅಟ್ಟುತ್ತಾನೆ. ಆ ಕ್ಷಣದಲ್ಲಿ ಅವನ ಮಗಳ ವಿವೇಕ ಅವನನ್ನು ಎಚ್ಚರಿಸದೇ ಹೋಗಿದ್ದರೆ, ಅವನೂ ತನ್ನ ಗತ ಮರೆತು ಇನ್ನಷ್ಟು ಅಧಿಕಾರ ಹಿಡಿಯುವಲ್ಲಿ ಮಗ್ನನಾಗುತ್ತಿದ್ದ. ಆತ ಹಾಗೆ ಆಗುವಂತೆ ಪ್ರೇರೇಪಿಸುವುದು ಅವನಿಗೆ ಸಿಕ್ಕ ವರ್ತಮಾನದ ಗೌರವದ ಸ್ಥಾನ. ಅದು ಹೇಗೆ ಸಿಕ್ಕಿತು ಎಂಬುದು ಮುಖ್ಯವಾಗದ ಸಮಾಜದಲ್ಲಿ ಅದನ್ನು ಹೇಗೆ ಉಳಿಸಿಕೊಳ್ಳಬೇಕೆಂದರೆ, ಆಳುವುದಕ್ಕಾಗಿ ಭಕ್ತರ ಸಮೂಹ ಸೃಷ್ಟಿಸಿ, ಭೇದಭಾವಗಳನ್ನು ಉಳಿಸಿ, ಬಣಗಳನ್ನು ಬೆಳೆಸಿ, ಕಲ್ಪಿತ ಶತ್ರುಗಳನ್ನು ನಿರ್ಮಿಸಿ, ತನ್ನ ಪರವಾದ ಪಡೆಗಳನ್ನು ದಾಳಿಗೆ ಸದಾ ಸಜ್ಜುಗೊಳಿಸಿ ಇಡುವ ಮೂಲಕ. ಇದೊಂದು ಬಹಳ ಗೋಜಲಾದ ಸಂಗತಿ. ಇದರ ಗೋಜಲು ಬಿಡಿಸಿ ಈ ಸ್ಥಿತಿಯನ್ನು ಬದಲಿಸಲಾಗದು ಅಂದುಕೊಂಡೇ ಬುದ್ಧ, ಬಸವನಂತಹವರು ಅದರಿಂದ ಹೊರಬಂದು ಅಧಿಕಾರ ಕೇಂದ್ರವಿಲ್ಲದ, ಪ್ರತೀ ವ್ಯಕ್ತಿಯೂ ಅನನ್ಯತೆಯನ್ನು ಉಳಿಸಿಕೊಂಡೂ ಸಮುದಾಯದ ಭಾಗವಾಗುವ, ಬಾಹ್ಯ ಕಟ್ಟಡಗಳಿಂದ ಹೊರಬಂದು ಬಯಲಾಗುವ ದಾರಿಯನ್ನು ಸೂಚಿಸಿದರು. ಸಾಲದ ಹುಲಿಯನ್ನೇರಿದ್ದರೂ ನಮಗಿನ್ನೂ ಆ ಸೂಚನೆಗಳು ಸಿಕ್ಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.