ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕಾಯ್ದೆಯ ಆಶಯ ಮತ್ತು ಅನುಷ್ಠಾನ ವೈಫಲ್ಯ

ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪರಿತಪಿಸುತ್ತಿರುವುದೇಕೆ ಶಿಕ್ಷಣ ಇಲಾಖೆ?
Last Updated 16 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಸಂವಿಧಾನದಲ್ಲಿನ ಶಿಕ್ಷಣದ ಹಕ್ಕನ್ನು ಸಾಕಾರಗೊಳಿಸುವ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯ್ದೆಯನ್ನು (2009) ರೂಪಿಸಲಾಗಿದೆ. ಸಮಾನತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಮಾನವೀಯ ನೆಲೆಯಲ್ಲಿ ಸಮ ಸಮಾಜವನ್ನು ಕಟ್ಟುವ ಕೆಲಸ ಎಲ್ಲರನ್ನೂ ಒಳಗೊಳ್ಳುವ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸುವ ಅವಕಾಶದಿಂದ ಮಾತ್ರ ಸಾಧ್ಯ ಎಂಬ ಬಲವಾದ ನಂಬಿಕೆಯಿಂದ ಈ ಕಾನೂನನ್ನು ತರಲಾಗುತ್ತಿದೆ ಎಂಬ ಅಂಶ ಕಾಯ್ದೆಯಲ್ಲಿಯೇ ಉಲ್ಲೇಖವಾಗಿದೆ. ಗುಣಾತ್ಮಕವಾದ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುವುದು ಸರ್ಕಾರ ನಡೆಸುವ ಅಥವಾ ಅನುದಾನ ನೀಡುವ ಶಾಲೆಗಳ ಜವಾಬ್ದಾರಿ ಮಾತ್ರವಾಗಿರದೆ, ಸರ್ಕಾರದಿಂದ ಅನುದಾನವನ್ನು ಅವಲಂಬಿಸದ ಶಾಲೆಗಳ ಕರ್ತವ್ಯವೂ ಆಗಿದೆ ಎಂಬ ಅಂಶವನ್ನು ಒತ್ತಿ ಹೇಳಲಾಗಿದೆ.

ಮಹತ್ವಾಕಾಂಕ್ಷೆಯ ಈ ಕಾಯ್ದೆಯ ಅನುಷ್ಠಾನವು ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಯನ್ನು ತರಬಹುದೆಂಬ ನಿರೀಕ್ಷೆಗಳು ಮೂಡಿದ್ದವು. ಆದರೆ, ರಾಜ್ಯದ ಶಾಲಾ ಶಿಕ್ಷಣದಲ್ಲಿನ ಆಡಳಿತ ವೈಫಲ್ಯ, ಭ್ರಷ್ಟಾಚಾರದಂತಹ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಯ್ದೆಯಲ್ಲಿರುವ ಮಹತ್ವದ ಅವಕಾಶ ಗಳನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದೇ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮೊದಲಿಗೆ, ‘ಶಾಲೆ’ಯನ್ನು ವ್ಯಾಖ್ಯಾನಿಸುವ ಮೂಲಕ, ಎಲ್ಲಾ ಬಗೆಯ ಶಾಲೆಗಳನ್ನು ರಾಜ್ಯ ಆಡಳಿತ ವ್ಯಾಪ್ತಿಗೆ ಒಳಪಡಿಸುವ ಅವಕಾಶವನ್ನು ಈ ಕಾಯ್ದೆ ಅಡಿ ಕಲ್ಪಿಸಲಾಗಿದೆ. ಅದರಂತೆ, ‘ಶಾಲೆ’ ಎಂದರೆ, ಸರ್ಕಾರಿ, ಸರ್ಕಾರಿ ಅನುದಾನಿತ, ನಿರ್ದಿಷ್ಟ ಪ್ರವರ್ಗ ಮತ್ತು ಅನುದಾನರಹಿತ ಶಾಲೆಗಳು. ಯಾವುದೇ ಶಾಲೆಯು ರಾಜ್ಯ, ಸಿಬಿಎಸ್ಇ, ಐಸಿಎಸ್ಇ ಇತ್ಯಾದಿ ಪಠ್ಯಕ್ರಮಗಳಿಗೆ ಸಂಯೋಜನೆಗೊಂಡಿದ್ದು, ತನ್ನ ವೆಚ್ಚ ಭರಿಸಲು ಸರ್ಕಾರದಿಂದ ಯಾವುದೇ ತೆರನಾದ ಹಣಕಾಸು ನೆರವು ಅಥವಾ ಅನುದಾನವನ್ನು ಪಡೆಯದಿದ್ದಲ್ಲಿ ಅಂತಹ ಶಾಲೆಯನ್ನು ಅನುದಾನರಹಿತ ಶಾಲೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಎಲ್ಲಾ ಶಾಲೆಗಳು ಆಡಳಿತಾ
ತ್ಮಕವಾಗಿ ರಾಜ್ಯವ್ಯಾಪ್ತಿಗೆ ಒಳಪಡುತ್ತವೆ. ಆದರೆ, ಇಲಾಖೆಯಲ್ಲಿ ಇಂದಿಗೂ ಈ ವಿಷಯದಲ್ಲಿ ಅಧಿಕಾರಿ
ಗಳಲ್ಲಿ ಸ್ಪಷ್ಟತೆ ಇಲ್ಲ. ಇಂದಿನ ಬಹುತೇಕ ಸಮಸ್ಯೆಗಳಿಗೆ ಈ ಗೊಂದಲವೇ ಕಾರಣವಾಗಿದೆ.

ಎರಡನೆಯದಾಗಿ, ಕಾಯ್ದೆಯು ಶಾಲಾ ಶಿಕ್ಷಣದಲ್ಲಿ ವಂತಿಗೆ ಹಾಗೂ ಮಕ್ಕಳ ಪ್ರವೇಶಕ್ಕೆ ಸ್ಕ್ರೀನಿಂಗ್‌ ಕ್ರಮವನ್ನು ನಿಷೇಧಿಸಿದೆ. ಕಾಯ್ದೆಯ ಅನ್ವಯ, ಅಧಿಸೂಚಿತ ಶುಲ್ಕ ಹೊರತುಪಡಿಸಿ ಉಳಿದ ಯಾವುದೇ ಬಗೆಯ ಹಣ ವಸೂಲಿಯು ದೇಣಿಗೆ ಅಥವಾ ವಂತಿಗೆ ಆಗುತ್ತದೆ. ಸ್ಕ್ರೀನಿಂಗ್‌ ಕಾರ್ಯವಿಧಾನ ಎಂದರೆ, ಶಾಲೆಯಲ್ಲಿ ಒಂದು ಮಗುವಿಗೆ ಪ್ರವೇಶಾವಕಾಶ ನೀಡುವಾಗ, ಸಮಾನ ಅವಕಾಶದ ವಿನಾ ಮಗುವಿಗೆ ಆದ್ಯತೆ ಮೇಲೆ ಪ್ರವೇಶ ನೀಡಲು ನಿರ್ಧರಿಸುವುದಕ್ಕಾಗಿ ಪಾಲಿಸುವ ಆಯ್ಕೆಯ ವಿಧಾನ. ಯಾವುದೇ ಶಾಲೆಯು ಮಗುವಿನ ಪ್ರವೇಶಕ್ಕಾಗಿ ವಂತಿಗೆ ವಸೂಲು ಮಾಡುವಂತಿಲ್ಲ ಮತ್ತು ಮಗುವನ್ನು ಅಥವಾ ಪೋಷಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸುವಂತಿಲ್ಲ. ಇದನ್ನು ಉಲ್ಲಂಘಿಸಿ ವಂತಿಗೆ ಸ್ವೀಕರಿಸಿದರೆ, ಹಾಗೆ ಪಡೆದ ವಂತಿಗೆಯ ಹತ್ತು ಪಟ್ಟಿನವರೆಗೆ ವಿಸ್ತರಿಸ ಬಹುದಾಗಿರುವ ಜುಲ್ಮಾನೆ ವಿಧಿಸಬಹುದು.

ಪ್ರವೇಶಕ್ಕಾಗಿ ಮಗುವನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿದರೆ, ಮೊದಲ ಉಲ್ಲಂಘನೆಗಾಗಿ ₹ 25 ಸಾವಿರ ಮತ್ತು ಆ ನಂತರದ ಪ್ರತಿಯೊಂದು ಉಲ್ಲಂಘನೆಗಾಗಿ ತಲಾ ₹ 50 ಸಾವಿರ ಜುಲ್ಮಾನೆ ವಿಧಿಸಬಹುದಾಗಿದೆ. ಆದರೆ, ಈ ಕಾನೂನಿನ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾದ ಕೆಳಹಂತದ ಅಧಿಕಾರಿಗಳು, ಖಾಸಗಿ ಶಾಲೆಗಳ ಜೊತೆ ಶಾಮೀಲಾಗಿ ಕಾನೂನನ್ನು ಗಾಳಿಗೆ ತೂರಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಪ್ರಮುಖ ಜಿಲ್ಲೆಗಳಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಹುದ್ದೆಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅತಿಹೆಚ್ಚು ಲಂಚ ನೀಡಿದವರಿಗೆ ಅಂತಹ ಕಡೆ ಅವಕಾಶ ಲಭಿಸುತ್ತದೆ. ಪರಿಣಾಮವಾಗಿ ಶಾಲೆಗಳು ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲೇ ಎಲ್ಲಾ ಪ್ರವೇಶ ಪ್ರಕ್ರಿಯೆಗಳನ್ನು ಕಾನೂನುಬಾಹಿರವಾಗಿ ನಡೆಸುವುದು ಇಂದಿಗೂ ನಿರಂತರವಾಗಿ ಮುಂದುವರಿದಿದೆ. ವಾಸ್ತವದಲ್ಲಿ, ಕಾಯ್ದೆ ಬಂದ ನಂತರ ಉಲ್ಲಂಘನೆಗಳು ನಾಲ್ಕೈದು ಪಟ್ಟು ಹೆಚ್ಚಿವೆ.

ಕಾಯ್ದೆಯ ಮತ್ತೊಂದು ಆಶಯದಂತೆ, ಅನು ದಾನರಹಿತ ಶಾಲೆಗಳು ಒಂದನೇ ತರಗತಿಯಲ್ಲಿ ಕನಿಷ್ಠ
ಶೇ 25ರಷ್ಟು ಸೀಟುಗಳನ್ನು ನೆರೆಹೊರೆಯ ಅವಕಾಶವಂಚಿತ, ದುರ್ಬಲ ವರ್ಗದ ಮಕ್ಕಳಿಗೆ ನೀಡಬೇಕು. ಅದರಲ್ಲೂ ಶಿಕ್ಷಣವನ್ನು ಉಚಿತವಾಗಿ ಒದಗಿಸಬೇಕು. ಇಂತಹ ಶಾಲೆಗಳಲ್ಲಿನ ಶಾಲಾಪೂರ್ವ ಶಿಕ್ಷಣಕ್ಕೆ ಕೂಡ ಈ ನಿಯಮ ಅನ್ವಯಿಸುತ್ತದೆ.

ಕಾಯ್ದೆಯಲ್ಲಿನ ಈ ಅಂಶವು ವ್ಯಾಪಕ ಟೀಕೆಗೆ ಒಳಗಾಗಿತ್ತು. ಕಾರಣ, ಮೂಲಭೂತ ಹಕ್ಕಿನ ಅನ್ವಯ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ರೀತಿಯಲ್ಲಿ ಸರ್ಕಾರ ತನ್ನ ಶಾಲೆಗಳನ್ನು ಬಲವರ್ಧನೆಗೊಳಿಸಿದಲ್ಲಿ, ಪಾಲಕರಿಗೆ ತಮ್ಮ ಮಕ್ಕಳನ್ನು ಖಾಸಗಿ ಅನುದಾನರಹಿತ ಶಾಲೆಗಳಿಗೆ ಕಳಿಸುವ ಪ್ರಮೇಯವೇ ಬರುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಕೇಂದ್ರ ಸರ್ಕಾರ ನಡೆಸುವ ಕೇಂದ್ರೀಯ ವಿದ್ಯಾಲಯಗಳು. ಸರ್ಕಾರ ತನ್ನ ಶಾಲೆಗಳನ್ನು ಬಲವರ್ಧನೆಗೊಳಿಸುವ ಜೊತೆ ಜೊತೆಗೆ ಈ ಅವಕಾಶವನ್ನು ಕಲ್ಪಿಸಬೇಕೇ ವಿನಾ ಸರ್ಕಾರವೇ ಹಣ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವುದು ರಾಜ್ಯ ಪ್ರಾಯೋಜಿತ ಖಾಸಗೀಕರಣವಾಗುತ್ತದೆ ಎಂಬ ಟೀಕೆಗಳು ವ್ಯಕ್ತವಾದವು. ಅದರ ನಡುವೆಯೂ ಈ ಅವಕಾಶವನ್ನು ಸರ್ಕಾರವು ಆರಂಭಿಕ ವರ್ಷಗಳಲ್ಲಿ ಅತ್ಯಂತ ಉತ್ಸಾಹದಿಂದ ಜಾರಿಗೊಳಿಸಿತು. ಅದು ಎಷ್ಟರಮಟ್ಟಿಗೆ ಎಂದರೆ, ಕಾಯ್ದೆಯಲ್ಲಿ ಸರ್ಕಾರಿ ಶಾಲೆಗಳನ್ನು ಬಲಗೊಳಿಸುವ ಹತ್ತು ಹಲವು ಅವಕಾಶಗಳಿದ್ದಾಗ್ಯೂ ಅವೆಲ್ಲವನ್ನೂ ನಿರ್ಲಕ್ಷಿಸಿ, ಇದೊಂದೇ ಮಾರ್ಗೋಪಾಯ ಎನ್ನುವ ರೀತಿಯಲ್ಲಿ ಜಾರಿಗೊಳಿಸಲಾಯಿತು. ಇದಕ್ಕೆ ಮೂಲ ಕಾರಣ, ಇದರ ಹಿಂದೆ ಇರುವ ಹಣಕಾಸಿನ ವ್ಯವಹಾರ. ಇದು ಶಿಕ್ಷಣ ಇಲಾಖೆಯಲ್ಲಿ ಪರಮ ಭ್ರಷ್ಟಾಚಾರಕ್ಕೆ ನಾಂದಿಯಾಯಿತು.

ಇಲ್ಲೊಂದು ಗಮನಿಸಬೇಕಾದ ಸಂಗತಿ ಇದೆ. ಕಾಯ್ದೆಯ ಅನ್ವಯ ಶೇ 25ರಷ್ಟು ಮಕ್ಕಳಿಗೆ ಉಚಿತವಾದ ಕಡ್ಡಾಯ ಶಿಕ್ಷಣ ಒದಗಿಸಬೇಕಾದ ಖಾಸಗಿ ಅನುದಾನರಹಿತ ಶಾಲೆಗಳು, ಸರ್ಕಾರದಿಂದ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಭೂಮಿ, ಕಟ್ಟಡ, ಸಾಧನ ಸಾಮಗ್ರಿ ಅಥವಾ ಇನ್ನಿತರ ಸೌಲಭ್ಯಗಳನ್ನು ಪಡೆದಿದ್ದಲ್ಲಿ, ಆ ಸೌಲಭ್ಯ ಅಥವಾ ರಿಯಾಯಿತಿ ಪ್ರಮಾಣಕ್ಕೆ ಅನುಗುಣವಾಗಿ ಶಾಲೆಗಳು ಪಡೆಯಬಹುದಾದ ಶುಲ್ಕ ಮರುಪಾವತಿಗೆ ಸಂಬಂಧಿಸಿದ ಮಾನದಂಡ ನಿರ್ಧಾರವಾಗುತ್ತದೆ. ವಿಪರ್ಯಾಸವೆಂದರೆ, ಅಧಿಕಾರಿಗಳು ಇಂತಹ ಶಾಲೆಗಳು ಸರ್ಕಾರದಿಂದ ಯಾವ ಸೌಲಭ್ಯವನ್ನು ಹೀಗೆ ಪಡೆದಿವೆ ಎಂಬುದನ್ನು ಮ್ಯಾಪಿಂಗ್ ಮಾಡುವ ಗೋಜಿಗೇ ಹೋಗಿಲ್ಲ. ಬದಲಿಗೆ, ಎಲ್ಲಾ ಶಾಲೆಗಳಿಗೂ ಆರ್‌ಟಿಇ ಕಾಯ್ದೆಯ ಅನ್ವಯ ನಿಗದಿತ ಹಣವನ್ನು ಬಿಡುಗಡೆ ಮಾಡಿದರು. ಕಾರಣ, ಅದರಲ್ಲಿ ಅಧಿಕಾರಿಗಳ ಹಿತಾಸಕ್ತಿಯೂ ಅಡಗಿತ್ತು.

ಕಾಯ್ದೆಯ ನಿಯಮಾನುಸಾರ ಶಾಲೆಗಳು ಕಡ್ಡಾಯವಾಗಿ ಮಾನ್ಯತಾ ಪ್ರಮಾಣಪತ್ರವನ್ನು ಪಡೆಯಬೇಕು. ಅದಿಲ್ಲದೆ ಶಾಲೆಯನ್ನು ಆರಂಭಿಸು ವಂತಿಲ್ಲ ಮತ್ತು ನಡೆಸುವಂತಿಲ್ಲ. ಕಾಯ್ದೆಯಲ್ಲಿ ನಿರ್ದಿಷ್ಟ
ಪಡಿಸಿದ ನಿಯಮ ಮತ್ತು ಮಾನಕ ಗುಣಮಟ್ಟಗಳನ್ನು ಪೂರೈಸದ ವಿನಾ ಶಾಲೆಗೆ ಮಾನ್ಯತೆ ನೀಡುವಂತಿಲ್ಲ. ಷರತ್ತುಗಳನ್ನು ಉಲ್ಲಂಘಿಸಿದಾಗ, ಸಂಬಂಧಿಸಿದ ಪ್ರಾಧಿಕಾರವು ಲಿಖಿತ ಆದೇಶದ ಮೂಲಕ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬಹುದು. ಆ ನಂತರವೂ ಶಾಲೆ ನಡೆಸುವುದನ್ನು ಮುಂದುವರಿಸಿದರೆ ಒಂದು ಲಕ್ಷ ರೂಪಾಯಿಗೆ ವಿಸ್ತರಿಸಬಹುದಾದ ಜುಲ್ಮಾನೆಗೆ
ಗುರಿಪಡಿಸಬಹುದಾಗಿದೆ.

ಕಾನೂನಿನಲ್ಲಿ ಇಷ್ಟೆಲ್ಲಾ ಕಠಿಣ ನಿಬಂಧನೆಗಳಿದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಪಾರದರ್ಶಕ ಆಡಳಿತ ವ್ಯವಸ್ಥೆಯ ಜಾರಿಗೆ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿಲ್ಲ. ವೈಫಲ್ಯದ ಫಲವಾಗಿ, ಇಂದು ಶಿಕ್ಷಣ ಇಲಾಖೆಯು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪರಿತಪಿಸು ವಂತಾಗಿದೆ. ಇಲಾಖೆಯ ನೇತೃತ್ವ ವಹಿಸಿರುವ ಸಚಿವರು ಈ ಎಲ್ಲಾ ಅವಾಂತರಗಳ ಜವಾಬ್ದಾರಿ ಹೊರಬೇಕಾಗು ತ್ತದೆ. ‘ಒಳ್ಳೆಯದು ಮಾತ್ರ ನನಗಿರಲಿ, ಆಡಳಿತ ವೈಫಲ್ಯ, ಗೊಂದಲ, ಭ್ರಷ್ಟಾಚಾರದ ಆರೋಪಗಳಿಗೆ ನಾನು ಹೊಣೆಯಲ್ಲ’ ಎನ್ನುವುದು ಪಲಾಯನವಾದ ಆಗುತ್ತದೆ.

⇒ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT