ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಜನ ಹಿತಾಯ, ಬಹುಜನ ಸುಖಾಯ: ಶಿಕ್ಷಣ ಸಚಿವರ ಲೇಖನ

Last Updated 14 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಆತನನ್ನು ಇತರ ವಿದ್ಯಾರ್ಥಿಗಳ ಎದುರಿಗೆ ಅಪಮಾನಿಸಿ, ಪರೀಕ್ಷೆ ಬರೆಯಲು ಅವಕಾಶ ಕೊಡದೆ ಪ್ರಾಂಶುಪಾಲರು ಹೊರಗೆ ಕಳುಹಿಸಿದ ಪ್ರಕರಣ ವರದಿಯಾಗಿದೆ. ಇದರಿಂದ ಆ ವಿದ್ಯಾರ್ಥಿ ನೊಂದು ಆತ್ಮಹತ್ಯೆಗೂ ಯತ್ನಿಸಿದ ವಿಷಯ ಮನಕಲಕಿತು.

ಈ ರೀತಿಯ ಅಮಾನವೀಯ ನಡವಳಿಕೆ ಅಕ್ಷಮ್ಯ. ಆ ವಿದ್ಯಾರ್ಥಿಯ ಮನೆಗೇ ಹೋಗಿ ನಾನು ಧೈರ್ಯ ತುಂಬಿದ್ದೇನೆ. ಪೋಷಕರನ್ನು ಸಂತೈಸಿದ್ದೇನೆ. ಈ ಶಾಲೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲು ಅಧಿಕಾರಿಗಳಿಗೆ ಸೂಚಿಸಿದ್ದೇನಾದರೂ ಇಂದಿನ ಸಾಮಾಜಿಕ ಪರಿಸ್ಥಿತಿ ಮನುಷ್ಯತ್ವವನ್ನೇ ಕಳೆದುಕೊಳ್ಳುವಂತಹ ಹಂತಕ್ಕೆ ದಾಟಿರುವುದು ವೇದನೆಯ ಸಂಗತಿ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಎಷ್ಟೋ ಕುಟುಂಬಗಳು ಮಕ್ಕಳ ಶುಲ್ಕವನ್ನು ಪಾವತಿಸುವ ಸಲುವಾಗಿ ತಮ್ಮ ಮೈಮೇಲಿದ್ದ ಒಡವೆಗಳನ್ನೂ ಮಾರಾಟ ಮಾಡಿವೆ, ಸಾಲಸೋಲದ ಸುಳಿಗೂ ಸಿಲುಕಿವೆ. ಹಲವಾರು ಮಕ್ಕಳು ಬಾಲಕಾರ್ಮಿಕರಾಗಿದ್ದಾರೆ, ಬಾಲ್ಯವಿವಾಹ ಪಿಡುಗುಗಳಿಗೆ ಸಿಲುಕಿದ್ದಾರೆ.

ಮನೆಕೆಲಸ ಮಾಡುವ ಒಬ್ಬಾಕೆ ದಯನೀಯ ಸ್ಥಿತಿಯಲ್ಲಿ ಕೈಜೋಡಿಸಿ ನನ್ನ ಮನೆ ಮುಂದೆ ಇತ್ತೀಚೆಗೆ ನಿಂತಿದ್ದಳು. ಆಕೆಯ ಗಂಡ ಔಷಧ ಕಂಪನಿಯೊಂದರಲ್ಲಿ ಕಾರ್ಮಿಕ. ಕೋವಿಡ್ ಕಾರಣ ಆ ಕೆಲಸಕ್ಕೂ ಸಂಚಕಾರ ಬಂದು, ಹೊಟ್ಟೆ ಪಾಡಿಗೂ ಆ ಕುಟುಂಬ ಪರಿತಪಿಸುತ್ತಿದೆ. ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಮಗನ ಶುಲ್ಕ ಪಾವತಿಸದ ಕಾರಣ, ಆತನನ್ನು ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ. ಸರ್ಕಾರಿ ಶಾಲೆಗೆ ಸೇರಿಸೋಣವೆಂದರೆ ವರ್ಗಾವಣೆ ಪತ್ರವನ್ನೂ ನೀಡಿಲ್ಲ. ಈ ಪ್ರಕರಣದಲ್ಲಿ ನಾನು ಈ ಪೋಷಕರ ಪರ ನಿರ್ಧಾರ ಕೈಗೊಂಡೆ. ಹಾಗಿದ್ದರೂ, ಈ ಸಮಸ್ಯೆಯ ಸಾರ್ವತ್ರೀಕರಣ ತೀವ್ರ ಕಳವಳಕಾರಿ.

ಖಾಸಗಿ ಶಾಲೆಗಳಲ್ಲಿನ ಪರಿಸ್ಥಿತಿಯೂ ಬಹಳ ಕಷ್ಟವಿದೆ. ಎಷ್ಟೋ ಶಾಲೆಗಳ ಶಿಕ್ಷಕರು ಸಂಬಳವಿಲ್ಲದೇ ಕನಿಷ್ಠ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನರೇಗಾದಲ್ಲಿ ಹಾರೆ-ಪಿಕಾಸಿ ಹಿಡಿದು ದುಡಿಯುತ್ತಿವುದು ಕೂಡಾ ತುಂಬಾ ಸಂಕಟ ತರುವ ವಿಷಯ. ಇದು ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳ ಶಿಕ್ಷಕರ ಪರಿಸ್ಥಿತಿಯಾದರೂ ನಗರಗಳ ಶಿಕ್ಷಕರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ.

ಎರಡು ದಿನಗಳ ಹಿಂದೆ ಖಾಸಗಿ ಶಾಲಾ ಸಂಘಟನೆಗಳ ಒಂದು ತಂಡ ನನ್ನನ್ನು ಭೇಟಿ ಮಾಡಿತ್ತು. ಅದರಲ್ಲಿ ಅಂತಹ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರೂ ಇದ್ದರು. ಕೋವಿಡ್ ಕಾರಣದಿಂದಾಗಿ ಪೋಷಕರು ಶುಲ್ಕ ಪಾವತಿಸದ ಕಾರಣ ತಾವು ಎಂತಹ ದಾರುಣವಾದ ಪರಿಸ್ಥಿತಿಯಲ್ಲಿದ್ದೇವೆ ಎಂದು ಶಿಕ್ಷಕಿಯೊಬ್ಬರು ವಿವರಿಸಿ ಸರ್ಕಾರದ ಶುಲ್ಕ ಕಡಿತದ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಅದೂ ಮಾನವೀಯ ವೇದನೆಯಾಗಿಯೇ ಕಂಡಿತು.

ಇಂತಹ ಒಂದು ಸಂದರ್ಭಕ್ಕೆ ನಾವೆಲ್ಲರೂ ದೂಷಿಸಬೇಕಾದುದು ಕೋವಿಡ್ ಸೃಷ್ಟಿಸಿರುವ ಸಾಮಾಜಿಕ ತಲ್ಲಣವನ್ನೆ. ಸರ್ಕಾರ, ವಿಶೇಷವಾಗಿ ಶಿಕ್ಷಣ ಇಲಾಖೆ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಎದುರಿಸಿದ ಸವಾಲುಗಳು, ನಾವು ಈ ಪರಿಸ್ಥಿತಿಯನ್ನು ದಾಟಿದ/ದಾಟುತ್ತಿರುವ ರೀತಿಯನ್ನು ನೆನೆದರೆ ಮೈಜುಮ್ಮೆನಿಸುತ್ತದೆ. ಹಾಗಾಗಿ ಶುಲ್ಕ ಪಾವತಿಯ ಸಮಸ್ಯೆಯನ್ನು ಪರಿಹರಿಸಲು ನಾವು ಪಟ್ಟ ಪ್ರಾಮಾಣಿಕ ಪ್ರಯತ್ನ ಕೂಡ ಸಣ್ಣದೇನಲ್ಲ. ಖಾಸಗಿ ಶಾಲಾ ಸಂಘಟನೆಗಳು, ಪೋಷಕರ ಸಂಘಟನೆಗಳೊಂದಿಗೆ ಹಲವು ಸುತ್ತಿನ ಸಭೆಗಳ ಬಳಿಕ ನಾವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡೆವು. ಒಂದು ನಿರ್ದಿಷ್ಟ ಪ್ರಮಾಣದ ಶುಲ್ಕ ಕಡಿತಕ್ಕೆ ನಾವು ಮುಂದಾದೆವು. ಇದು ಇಂದಿನ ಅಸಾಧಾರಣ ಸನ್ನಿವೇಶದಲ್ಲಿ ಪೋಷಕ ಹಾಗೂ ಶಾಲಾ ಸಮುದಾಯಗಳ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸುವ ಬಹುಜನ ಹಿತದ ಬಹುಜನ ಸುಖದ ಪ್ರಾಮಾಣಿಕ ನಿರ್ಧಾರವೇ ಆಗಿತ್ತು. ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ತಮ್ಮ ಮಕ್ಕಳ ಭವಿಷ್ಯಕ್ಕೆ ಇಬ್ಬರೂ ಅದನ್ನು ಮುಕ್ತಮನಸ್ಸಿನಿಂದ ಸಮ್ಮತಿಸಬಹುದಿತ್ತು.

ನಾನು ಮತ್ತೆ ಮತ್ತೆ ಈ ವಿಷಯವನ್ನು ಒತ್ತಿ ಹೇಳುತ್ತಿದ್ದೇನೆ: ಶಾಲೆ ಮತ್ತು ಪೋಷಕರ ನಡುವೆ ಅನ್ಯೋನ್ಯತೆ ಇದ್ದಾಗ ಮಾತ್ರ ಮಕ್ಕಳ ಭವಿಷ್ಯ, ಕಲಿಕೆ ಹಸನಾಗಿರುತ್ತದೆ. ಹಾಗಾದಾಗಲಷ್ಟೇ ಶಾಲೆ ಹಾಗೂ ಪೋಷಕರು ಇಬ್ಬರಿಗೂ ಅನುಕೂಲಕರ ಸನ್ನಿವೇಶದ ಸಂತೃಪ್ತಿ. ಅದರೊಂದಿಗೆ ನಮ್ಮ ಮಕ್ಕಳ ಭವಿಷ್ಯವೂ ಅರಳುತ್ತದೆ. ದುರದೃಷ್ಟವಶಾತ್ ಹಾಗೆ ಆಗಿಲ್ಲ.

ಇಂದು ಶಾಲೆಗಳ ಹಾಗೂ ಪೋಷಕರ ನಡುವಿನ ನಂಬಿಕೆ ಕುಸಿದು, ಹಲವಾರು ಶಾಲೆಗಳ ಮುಂದೆ ಪೋಷಕರು ಪ್ರತಿಭಟನೆ ನಡೆಸಿರುವುದನ್ನು ಕೇಳಿದ್ದೇವೆ. ಶುಲ್ಕ ಕಟ್ಟಿಲ್ಲವೆಂಬ ಕಾರಣಕ್ಕೆ ಆನ್‌ಲೈನ್ ತರಗತಿಗಳಿಂದ ಕೈಬಿಟ್ಟಿರುವುದು, ಪರೀಕ್ಷೆಗಳಿಗೆ ನಿರಾಕರಣೆ ಮಾಡಿರುವುದನ್ನು ನೋಡಿದ್ದೇವೆ. ಆ ಮೊದಲಿನ ನಂಬಿಕೆಯನ್ನು ಮರುಸ್ಥಾಪಿಸುವುದು ಇಂದು ನಮ್ಮೆಲ್ಲರ ಮುಂದೆ ಬೃಹದಾಕಾರದ ಪ್ರಶ್ನೆಯಾಗಿ ನಿಂತಿದೆ. ಅದೇ ಕಾರಣಕ್ಕೆ ಸರ್ಕಾರವು ಅನಿವಾರ್ಯವಾಗಿ ಮಧ್ಯಪ್ರವೇಶಿಸಬೇಕಾಯಿತು.

ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಇನ್ನು ಮೂರ್ನಾಲ್ಕು ತಿಂಗಳಷ್ಟೇ ಉಳಿದಿರುವ ಈ ಸಂದರ್ಭದಲ್ಲಿ ಪರಸ್ಪರ ಹೊಂದಾಣಿಕೆ ಅನಿವಾರ್ಯ ಎಂಬುದನ್ನು ಹೋರಾಟದ ಹಾದಿ ಹಿಡಿದಿರುವ ಸಂಘಟನೆಗಳು ಅರ್ಥೈಸಿಕೊಳ್ಳಬೇಕು. ತನ್ನ ಭವಿಷ್ಯ ರೂಪಿಸಿಕೊಳ್ಳಲು ಪುಸ್ತಕ-ಪೆನ್ನು ಹಿಡಿದು ಬರುವ ವಿದ್ಯಾರ್ಥಿ, ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಕೈಗೆತ್ತಿಕೊಂಡ ಅಕ್ಕರೆಯ ಮೇಷ್ಟ್ರನ್ನು ನಾವೆಲ್ಲರೂ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಸತ್ಯದ ಅರಿವಾಗಬೇಕು. ಒಬ್ಬ ವಿದ್ಯಾರ್ಥಿಗೆ ಮಾಡುವ ಅವಮಾನವೂ ಇಡೀ ಸಮಾಜದ ಭವಿಷ್ಯದ ಮೇಲಿನ ಹೊಡೆತ ಎನ್ನುವುದನ್ನು ನಾವೆಲ್ಲ ಜ್ಞಾಪಿಸಿಕೊಳ್ಳಬೇಕಿದೆ. ಅದು ಹಾಗಾಗಬಾರದೆನ್ನುವ ಧೋರಣೆ ನಮ್ಮ ಸಾಮಾಜಿಕ ಜವಾಬ್ದಾರಿಯೆನ್ನುವುದು ಅರ್ಥವಾದಾಗ ಮಾತ್ರ ಈ ಸಂಕೀರ್ಣ ಸಮಸ್ಯೆಗೆ ಸರಳವಾದ ಪರಿಹಾರ ದೊರೆಯುತ್ತದೆ. ಈ ಎರಡೂ ಧ್ರುವಗಳ ನಡುವೆ ಸಮನ್ವಯದ ಜವಾಬ್ದಾರಿಯನ್ನು ಸರ್ಕಾರ ಪ್ರಾಮಾಣಿಕವಾಗಿ ನಿರ್ವಹಿಸುತ್ತದೆ ಎಂಬ ವಿಶ್ವಾಸವನ್ನು ಮಾತ್ರ ನಾನು ನೀಡಬಲ್ಲೆ.

ಮುಗಿಸುವ ಮುನ್ನ: ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಮತ್ತು ಹುಬ್ಬಳ್ಳಿಯ ವರೂರಿನಲ್ಲಿ ಶಾಲೆ ನಡೆಸುತ್ತಿರುವ ಚಂದ್ರಶೇಖರ ಮರೋಳ ಅವರು ಕೊರೊನಾ ಕಾಲಘಟ್ಟದಲ್ಲಿ ನನಗೆ ಪತ್ರ ಬರೆದು ಕೋವಿಡ್ ವೀರರಾದ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಯ ಮಕ್ಕಳಿಗೆ ತಮ್ಮ ಶಾಲೆಗಳಲ್ಲಿ ಮುಂದಿನ ಎರಡು ವರ್ಷಗಳವರೆಗೆ ಉಚಿತ ಶಿಕ್ಷಣ ನೀಡುತ್ತೇವೆಂದು ಹೇಳಿದ್ದಾರೆ. ಶಾಲೆಗಳ ಕಟ್ಟಡ ಹಾಗೂ ವಾಹನಗಳನ್ನು ಕೋವಿಡ್ ಕಾರ್ಯಕ್ಕಾಗಿ ಬಳಸಿಕೊಳ್ಳಬೇಕೆಂದೂ ಅವರು ಹೇಳಿದ್ದರು. ಈ ಮಾನವೀಯ ನಿಲುವು ಇಂದಿನ ಸಂದರ್ಭದಲ್ಲಿ ಅತ್ಯಂತ ಗಮನಾರ್ಹ.

(ಲೇಖಕರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮತ್ತು ಸಕಾಲ ಸಚಿವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT