ದೇಶಕ್ಕೇ ಮಾದರಿಯಾದ ರೈತ ಚಳವಳಿಯನ್ನು ರೂಪಿಸಿದ ಹಿರಿಮೆ ನಮ್ಮ ರಾಜ್ಯದ್ದು. ಆದರೆ, ದೇಶದ ರೈತರೆಲ್ಲ ಮೈಕೊಡವಿ ಎದ್ದು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಈ ಹೊತ್ತಿನಲ್ಲಿ ನಮ್ಮ ರಾಜ್ಯದ ರೈತ ಚಳವಳಿ ಧ್ವನಿ ಕಳೆದುಕೊಂಡಿದೆಯಲ್ಲ, ಯಾಕೋ?

ಚಳವಳಿಗಳ ಯಶಸ್ಸು ಅಡಗಿರುವುದು ಚುಕ್ಕಾಣಿ ಹಿಡಿದ ನಾಯಕರ ಯಶಸ್ಸಿನಲ್ಲಲ್ಲ; ಅದರಲ್ಲಿ ತೊಡಗಿರುವ ಕಟ್ಟಕಡೆಯ ವ್ಯಕ್ತಿಯ ಏಳಿಗೆಯಲ್ಲಿ. ಆದರೆ ಬಹುತೇಕ ಚಳವಳಿಗಳು ಈ ಮೂಲ ಆಶಯವನ್ನೇ ಮರೆತಿರುತ್ತವೆ. ಇದಕ್ಕೆ ಹಲವು ನಿದರ್ಶನಗಳೇ ಸಿಗುತ್ತವೆ. ಕರ್ನಾಟಕದಲ್ಲಿ ನಡೆದ ರೈತ ಚಳವಳಿಯನ್ನೂ ಈ ಸಾಲಿನಲ್ಲಿ ಹೆಸರಿಸಬಹುದು.

ಇಲ್ಲಿನ ರೈತ ಚಳವಳಿಗೆ ಅಲ್ಲೊಂದು ಇಲ್ಲೊಂದು ಯಶಸ್ಸು ಸಿಕ್ಕಿರಬಹುದು. ಅದರಿಂದ ಚುಕ್ಕಾಣಿ ಹಿಡಿದವರು ಏಳಿಗೆ ಆಗಿರಲೂಬಹುದು. ಆದರೆ ಚಳವಳಿಯಲ್ಲಿ ನಡೆನಡೆದು ಕಾಲು-ಕಾಲ ಸವೆಸಿಕೊಂಡ ಕಟ್ಟಕಡೆಯ ರೈತನಿಗೆ ಏಳಿಗೆಯ ಸವಿ ದೊರೆತಿದೆಯೇ ಎಂದು ಪ್ರಶ್ನಿಸಿಕೊಂಡರೆ ನೇರ ಉತ್ತರ ಕೊಡುವುದು ಕಷ್ಟ. ಏಕೆಂದರೆ ಇಡೀ ರೈತ ಸಮೂಹ ಇಂದಿಗೂ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಗಿಲ್ಲ.

ಹೀಗೆ ಹೇಳಿದಾಕ್ಷಣ ಚಳವಳಿಯ ನೇತಾರರಿಗೆ ಸಿಟ್ಟು ನೆತ್ತಿಗೇರಬಹುದು; ಈ ಮಾತು ಅಪಥ್ಯ ಎನಿಸಬಹುದು. ಮಾತ್ರವಲ್ಲ ಚಳವಳಿಗೆ ಪ್ರೇರಣೆಯಾಗುವ ಸಂಘಟನೆಯ ದಿಕ್ಕು ತಪ್ಪಿಸುವ ಯತ್ನವಿದು ಎನ್ನಿಸಲೂಬಹುದು! ಆದರೆ ಈ ಮಾತನ್ನು ಹೇಳದೇ ವಿಧಿಯಿಲ್ಲ. ಅಲ್ಲದೇ ರೈತ ನಾಯಕರು ಮತ್ತು ಸಂಘಟನೆ -ಎಷ್ಟೇ ಕಿತ್ತೆಸೆದರೂ ಮತ್ತೆ ಮತ್ತೆ ಹುಟ್ಟಿಕೊಳ್ಳುವ ಕಳೆಗಿಡಗಳಂತೆ ಆಗದೇ- ಇಂತಹ ಕಟು ಮಾತುಗಳನ್ನು ಅರಗಿಸಿಕೊಂಡು ತನ್ನನ್ನು ತಾನು ಸರಿಪಡಿಸಿಕೊಂಡು ದಿಕ್ಕು ತಪ್ಪಿದಂತಾಗಿರುವ ರೈತವರ್ಗದ ಏಳಿಗೆಗೆ ದುಡಿಯುವ ಗುಣ ರೂಢಿಸಿಕೊಳ್ಳಬೇಕು.

ಇದೀಗ ದೇಶದಾದ್ಯಂತ ರೈತರು ಬೀದಿಗೆ ಇಳಿದು ಚಳವಳಿಯ ಹಾದಿ ಹಿಡಿದಿದ್ದಾರೆ, ಅದೂ ತಮ್ಮನ್ನು ತಾವು `ಮುಂಬರುವ ಆತ್ಮಹತ್ಯಾತ್ಮಕ ಪರಿಸ್ಥಿತಿ’ಯಿಂದ ರಕ್ಷಿಸಿಕೊಳ್ಳಲು. ದೇಶದ ರಾಜಧಾನಿ ದೆಹಲಿಯನ್ನು ಸುತ್ತುವರಿದಿರುವ ಉತ್ತರ ಭಾರತದ ರೈತರೊಡನೆ ಉಳಿದೆಡೆಯ ಅನ್ನದಾತರೂ ಚಳವಳಿಗೆ ಕೈಗೂಡಿಸುವ ಉಮೇದಿನಲ್ಲಿದ್ದಾರೆ.

ಮತ್ತೆ ಕಾಲ ಬಂದಿದೆ
ಕರ್ನಾಟಕದ ರೈತರೂ ಆತ್ಮಾವಲೋಕನ ಮಾಡಿಕೊಂಡು, ಸಶಕ್ತ ಚಳವಳಿ ಕಟ್ಟಲು ಇದು ಸಕಾಲ. ನಮ್ಮಲ್ಲಿನ ರೈತ ಸಂಘಟನೆಗಳು ಒಂದೇ ಛಾವಣಿ ಅಡಿಯಲ್ಲಿ ಬಂದು ಮತ್ತೆ ಒಗ್ಗೂಡುವ ನಿಟ್ಟಿನತ್ತ ಈಗಲಾದರೂ ಹೆಜ್ಜೆ ಹಾಕಬೇಕು. ಏಕೆಂದರೆ, ನಮ್ಮಲ್ಲಿಯೂ ಕೆಲವು ವಿವಾದಾತ್ಮಕ ಕಾಯ್ದೆಗಳ ರೂಪದಲ್ಲಿ ರೈತರ ಹಿತವನ್ನು ಬಲಿ ಕೊಡಲಾಗಿದೆ. ಇದರಿಂದ ಕೃಷಿ ಭೂಮಿ ಉಳ್ಳವರ ಪಾಲಾಗುವ ಎಲ್ಲ ಲಕ್ಷಣಗಳಿವೆ; ಮತ್ತು ಇಲ್ಲಿನ ರೈತರು ಮುಂದಿನೊಂದು ದಶಕದಲ್ಲಿ ಉಳ್ಳವರ ಕೈಯಾಳುಗಳಾಗುವ ಇಲ್ಲವೇ ಪರಿಸ್ಥಿತಿಯನ್ನು ನಿಭಾಯಿಸಲಾಗದೇ ಕೃಷಿಯನ್ನೇ ತೊರೆಯುವ ಅಪಾಯವಿದೆ. ಈ ಕಾರಣಗಳಿಂದಾಗಿ ಕರ್ನಾಟಕದ ರೈತ ಸಂಘಟನೆಗಳೂ ತಮ್ಮೆಲ್ಲ ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಲು ಮುಂದಾಗುವುದು ಸೂಕ್ತ ಎನ್ನಿಸುತ್ತದೆ.

ಈಗ ಎದುರಾದಂಥದೇ ಸ್ಥಿತಿ ಈಗ್ಗೆ ಮೂರು ದಶಕಗಳ ಹಿಂದೆ, ಅಂದರೆ ಕೇಂದ್ರ ಸರ್ಕಾರ ಗ್ಯಾಟ್ ಮತ್ತು ಡಂಕೆಲ್ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲೂ ಎದುರಾಗಿತ್ತು. ಅದರ ಪರಿಣಾಮವಾಗಿ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಾವಿಂದು ನೋಡಬೇಕಾಗಿ ಬಂದಿದೆ.

ಈಗ ತರಲಾಗಿರುವ ತಿದ್ದುಪಡಿಗಳು ಮೇಲ್ನೋಟಕ್ಕೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅತ್ಯಾಕರ್ಷಕವಾಗಿ ಕಾಣಬಹುದು. ಒಮ್ಮೆ ಇರುವ ಭೂಮಿಯಿಂದ ಹೊರಬಿದ್ದರೆ `ನೆಲ ಕಳೆದುಕೊಂಡು ನೆಲೆ ಕಳೆದುಕೊಂಡಂತೆ’ ಎಂಬಂತಾಗುತ್ತದೆ. ನೆಲದ ರೂಪದಲ್ಲಿ ನೆಲೆ ಕಳೆದುಕೊಂಡು ಹತ್ತಿರದ ಪಟ್ಟಣಕ್ಕೋ, ನಗರಕ್ಕೋ ತಲುಪಿದ ನಂತರ ಅಲ್ಲಿನ ಬೇಡಿಕೆಗಳಿಗೆ ತಕ್ಕಂತೆ ತಮ್ಮನ್ನು ತಾವು ರೂಪಿಸಿಕೊಳ್ಳುವ ಪರಿಸ್ಥಿತಿ ನೆಲ ಕಳೆದುಕೊಂಡವರಿಗೆ ಎದುರಾಗುತ್ತದೆ. ಆದರೆ ಇವರು ತಲುಪಿದ ನೆಲದ ಬೇಡಿಕೆಗಳಿಗೆ ಬೇಕಿರುವ ನೈಪುಣ್ಯ ಇವರಲ್ಲಿ ಇಲ್ಲದುದರಿಂದ ಇವರು ತಮಗೆ ಗೊತ್ತಿರುವ ಉದ್ಯೋಗದಲ್ಲೇ ಜೀವನ ಕಟ್ಟಿಕೊಳ್ಳಬೇಕಾಗುತ್ತದೆ. ಇದು ಇವರ ಜೀವನವನ್ನು ಮೊದಲಿದ್ದುದಕ್ಕಿಂತ ದಯನೀಯ ಮಾಡುವುದರಲ್ಲಿ ಅನುಮಾನವೇ ಇಲ್ಲ- ಇದಕ್ಕೆ ಅಪವಾದಗಳೂ ಇರಬಹುದು, ಅದು ಬೇರೆ ಮಾತು.

ಹೀಗೆ ನೆಲ-ನೆಲೆ ಕಳೆದುಕೊಂಡು ದೊಡ್ಡೂರಿಗೆ ಸೇರಿದವರಿಗೆ ಈಗ ಎದುರಾಗಿರುವಂಥದೇ ಸಾಂಕ್ರಾಮಿಕದ ಪರಿಸ್ಥಿತಿ ಧುತ್ತೆಂದು ವಕ್ಕರಿಸಿದರೆ ಮುಂದೆ ತೆರಳುವುದೆಲ್ಲಿಗೆ ಎಂಬ ಪರಿಸ್ಥಿತಿ ಎದುರಾಗದೇ ಇರಲಾರದು. ಆಗ ಇವರು ತಮ್ಮ ಮೂಲ ನೆಲೆಗಳತ್ತಲೇ ತೆರಳಬೇಕಾಗುತ್ತದೆ. ಏಕೆಂದರೆ ದೊಡ್ಡೂರುಗಳು ಇವರನ್ನು ತಮ್ಮ ಒಡಲಲ್ಲಿ ಇಟ್ಟುಕೊಳ್ಳದೇ ದಯಾಹೀನವಾಗಿ ಹೊರಗೆ ಬಿಸಾಡುತ್ತವೆ. ಇದಕ್ಕೆ ಕಾರಣವೇ ದೊಡ್ಡೂರುಗಳು ಹೊಂದಿರುವ ಹೃದಯದಾರಿದ್ರ್ಯ. ಇವಕ್ಕೆ ತಮ್ಮ ಬೇಕು ಬೇಡಗಳನ್ನು ಈಡೇರಿಸಿಕೊಂಡು ಗೊತ್ತೇ ಹೊರತು ತಮ್ಮ ಒಡಲಲ್ಲಿರುವವರ ಬೇಕು ಬೇಡಗಳನ್ನು ಕಕ್ಕುಲಾತಿಯಿಂದ ಈಡೇರಿಸಿದ್ದೇ ಕಡಿಮೆ. ಏಕೆಂದರೆ ಆ ತೆರನಾದ ಗುಣಗಳೇ ಇವುಗಳಿಗೆ ಇರುವುದು ಅತ್ಯಲ್ಪ.

ರೈತವರ್ಗ ಇದ್ದರೆಷ್ಟು ಬಿಟ್ಟರೆಷ್ಟು! ಅವರಿಗಾಗಿ ನಾವೇಕೆ ಅಳಬೇಕು, ಅವರಿಗೆ ನಾವೇಕೆ ಜೋತು ಬೀಳಬೇಕು. ನಾವೇಕೆ ರೈತವರ್ಗ ನಾಶವಾಗುತ್ತದೆಂದು ಕಳವಳ ಪಡಬೇಕು ಎಂದೆಲ್ಲ ಯೋಚಿಸುವವರ ಸಂಖ್ಯೆ ಇಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆದು ನಿಂತಿರುವುದಂತೂ ನಿಜ. ಇಂತಹ ಸಂದರ್ಭದಲ್ಲಿ ರೈತ ವರ್ಗಕ್ಕೆ ಮಾರ್ಗದರ್ಶನ ಮಾಡಬಹುದಾದ ಸಂದರ್ಭವನ್ನಂತೂ ಕೊರೊನಾ ಕಾಲ ರೈತ ಸಂಘಕ್ಕೆ ಒದಗಿಸಿತ್ತು. ಆದರೆ ಅದನ್ನೂ ರೈತ ಸಂಘ ಕಳೆದುಕೊಂಡಿತು. ಕೊರೊನಾ ಕಾಲದಲ್ಲಿ ದೊಡ್ಡ ನಗರಗಳಿಂದ ತಮ್ಮ ಹಳ್ಳಿಗಳತ್ತ ವಾಪಸಾಗುತ್ತಿದ್ದವರಿಗೆ ರೈತ ನೇತಾರರು ಎನ್ನಿಸಿಕೊಂಡವರು ಸಹಾಯ ಹಸ್ತ ಚಾಚುವಲ್ಲಿ ಸೋತಿದ್ದು (ಅಪವಾದಗಳನ್ನು ಹೊರತುಪಡಿಸಿ) ಗೋಚರಿಸಿತು.

ಪರಿಸ್ಥಿತಿ ಈ ಹಂತಕ್ಕೆ ತಲುಪಲು ರೈತ ಸಂಘ ಸೂಕ್ತ ಜಾಲವನ್ನು (ನೆಟ್ ವರ್ಕ್) ತನ್ನೊಳಗೆ ಹೆಣೆದುಕೊಳ್ಳದೆ ಇರುವುದೇ ಕಾರಣ ಎಂದು ವ್ಯಾಖ್ಯಾನಿಸಬಹುದು. ಒಂದೊಮ್ಮೆ ಇಂತಹ ಜಾಲವನ್ನು ರೈತ ಸಂಘ ತನ್ನೊಳಗೆ ಹೆಣೆದುಕೊಂಡಿದ್ದರೆ ಹೊಲಗಳಲ್ಲಿ ಬೆಳೆದುನಿಂತ ಫಸಲನ್ನು ಲಾಕ್ಡೌನ್ ಸಂದರ್ಭದಲ್ಲಿಯೂ ಪರಿಣಾಮಕಾರಿಯಾಗಿ ಮಾರುಕಟ್ಟೆಗಳಿಗೆ ತಲುಪಿಸಿ ಹಾಳಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿತ್ತು ಎಂದೇ ಹೇಳಬೇಕು.

ಇವರಂತೆ ಮಾಡಬಹುದಿತ್ತು
ಇದಕ್ಕೆ ರಾಜ್ಯದಲ್ಲಿಯೇ ಕೆಲವರು ಮಾಡಿದ ಪ್ರಯತ್ನಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದು ಅವನ್ನು ಉದಾಹರಿಸಬಹುದು. ಇದಕ್ಕೊಂದು ಉದಾಹರಣೆಯೆಂದರೆ- ಲಾಕ್ಡೌನ್ ಘೋಷಣೆ ಆಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ಗ್ರಾಮವೊಂದರ (ಹೆಸರು ನೆನಪಿನಲ್ಲಿಲ್ಲ) ಮಹಿಳೆಯರು ತಮ್ಮದೇ ಗುಂಪು ಕಟ್ಟಿಕೊಂಡು ಅಂಜೀರ ಹಣ್ಣಿನ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಿದ್ದರು. ಇದೇ ಸಂದರ್ಭದಲ್ಲಿ ಅಂಜೀರ ಹಣ್ಣಿನ ಕೊಯ್ಲು ಹಂಗಾಮಿತ್ತು. ಇದನ್ನು ಅರಿತಿದ್ದ ಮಹಿಳೆಯರು ಅದನ್ನು ತಮ್ಮಲ್ಲಿಗೆ ತರಿಸಿಕೊಂಡು ಒಣಗಿಸಿ ಮಾರುಕಟ್ಟೆಗೆ ಕಳುಹಿಸಿ ಆದಾಯ ಗಳಿಸಿದರು.

ಒಂದೊಮ್ಮೆ ರೈತ ಸಂಘಗಳು ತಮ್ಮಲ್ಲಿಯೇ ಮೌಲ್ಯವರ್ಧನೆಯ ತರಬೇತಿ ಪಡೆದ ಗುಂಪನ್ನು ತಯಾರು ಮಾಡಿಕೊಂಡಿದ್ದರೆ ಇಂತಹ ವಿಭಿನ್ನ ಪ್ರಯತ್ನ ಮಾಡಬಹುದಿತ್ತು. ಇದರಿಂದ ಬೆಳೆದು ನಿಂತ ಫಸಲು ರೈತರ ಕಣ್ಣೆದುರೇ ಹಾನಿಗೆ ಈಡಾಗುವುದಾದರೂ ತಪ್ಪುತ್ತಿತ್ತು; ಮತ್ತು ಹೊಲದಿಂದ ನೇರ ಗ್ರಾಹಕರ ಹೊಟ್ಟೆಗೆ ತಲುಪಿಸುವ ವಿಸ್ತೃತ ಜಾಲವೊಂದನ್ನು ಸಿದ್ಧಪಡಿಸಿಕೊಳ್ಳಬಹುದಿತ್ತು ಎಂಬುದು ಆ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಸಂಘಟನೆಗಳ ಅನಿಸಿಕೆ.

ವಿ.ವಿ.ಗಳು ಮಾಡಿದ್ದೇನು?
ಕೃಷಿಕರ ಉದ್ಧಾರಕ್ಕೆಂದೇ ನಾವಿದ್ದೇವೆ ಎಂದೇನೋ ರಾಜ್ಯದ ಎಲ್ಲ ಕೃಷಿ ವಿಶ್ವವಿದ್ಯಾಲಯಗಳು ಹೇಳಿಕೊಳ್ಳುತ್ತವಾದರೂ ಇವು ಕೇವಲ ಉದ್ಯಮಗಳಿಗಾಗಿ ಕೆಲಸ ಮಾಡುವುದು ಈಗಾಗಲೇ ಜಗಜ್ಜಾಹೀರಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ತಮ್ಮಲ್ಲಿನ ಸಂಪರ್ಕ ಜಾಲವನ್ನು ಬಳಸಿಕೊಂಡು ರೈತರಿಗೆ ಇವು ಸಹಾಯ ಮಾಡಬಹುದಿತ್ತು. ಆದರೆ ಇವೂ ರೈತರ ಸ್ಥಿತಿ ಏನಾದರಾಗಲಿ ನಮಗೇನು ಎನ್ನುವಂತೆ ವರ್ತಿಸಿದವು ಎನ್ನುವುದರಲ್ಲಿ ಅನುಮಾನವೇ ಇಲ್ಲ.

ತಪ್ಪಿದ ಅವಕಾಶ
ಅದು 1980ರ ದಶಕ. ವೃತ್ತಿ ರಾಜಕಾರಣವೆಂಬ `ವಾಮನ’ ಕಾಲೂರುತ್ತಿದ್ದ ಸಮಯ. ಕರ್ನಾಟಕವೂ ಹೊಸತಿಗಾಗಿ ತುಡಿಯುತ್ತಿದ್ದ ಸಂದರ್ಭ. ತುರ್ತು ಪರಿಸ್ಥಿತಿ ನಂತರದ ದಿನಗಳಾದ್ದರಿಂದ ದಕ್ಷಿಣ ಕರ್ನಾಟಕ ಒಂದು ರೀತಿಯಲ್ಲಿ ಯೋಚಿಸುತ್ತಿದ್ದರೆ, ಉತ್ತರ ಕರ್ನಾಟಕ ಮತ್ತೊಂದು ರೀತಿಯಲ್ಲಿ ಯೋಚಿಸುತ್ತಿತ್ತು. ಇಕ್ಕೆಲದವರೂ ಪರ್ಯಾಯಕ್ಕಾಗಿ ಅರಸುತ್ತಿದ್ದರು.

ಅಂತಹ ಸಂದರ್ಭದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಎಚ್.ಎಸ್. ರುದ್ರಪ್ಪ, ಕಡಿದಾಳು ಶಾಮಣ್ಣ, ಬಾಬಾಗೌಡ ಪಾಟೀಲರಂಥವರ ನೇತೃತ್ವದಲ್ಲಿ ರೈತ ಸಂಘ ಅನ್ನದಾತರ ಹಕ್ಕುಗಳಿಗಾಗಿ ಹೋರಾಡುತ್ತಿತ್ತು. ಸಾಮಾಜಿಕ ಸಮಾನತೆಗಾಗಿ ದಲಿತ ಸಂಘರ್ಷ ಸಮಿತಿ ರಾಜ್ಯದಾದ್ಯಂತ ಸಮರಕ್ಕಿಳಿದಿತ್ತು. ಪತ್ರಕರ್ತ ಪಿ. ಲಂಕೇಶ ನೇತೃತ್ವದ ಪ್ರಗತಿ ರಂಗ ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿಯ ನೀಲನಕ್ಷೆ ತಯಾರಿಸಿತ್ತು. ಈ ಮೂರಕ್ಕೂ ಅವುಗಳದ್ದೇ ಆದ ಪಡೆಯಿತ್ತು. ಇಂದು ದೆಹಲಿಯಲ್ಲಿ ಎ.ಎ.ಪಿ. ಸಾಧಿಸಿದ್ದನ್ನು ಈ ಮೂರೂ ಸಂಘಟನೆಗಳು ಒಂದುಗೂಡಿದ್ದರೆ ಅಂದೇ ಸಾಧಿಸಬಹುದಿತ್ತು. ಆದರೆ ಮೂರೂ ಸಂಘಟನೆಗಳಲ್ಲಿನ ನೇತಾರರ ಅಹಂಕಾರ(?)ದ ಕಾರಣದಿಂದಾಗಿ ರಾಜ್ಯದ ಜನತೆ ಕೇವಲ ಟೀಕೆ, ಕಟಕಿ, ವ್ಯಂಗ್ಯ, ವಿಡಂಬನೆ, ಕಾಲೆಳೆಯುವಿಕೆ, ಗೇಲಿಗಳಂಥದ್ದನ್ನೇ ನೋಡಬೇಕಾಯಿತು. ಈಗಿನಷ್ಟು ಮತಿಭ್ರಷ್ಟವಲ್ಲದ ಮಾಧ್ಯಮ ಇದ್ದಾಗಲೂ ಎದುರಿದ್ದ ಅವಕಾಶವನ್ನು ರಾಜ್ಯ ಕಳೆದುಕೊಳ್ಳಬೇಕಾಯಿತು.

ಇದೇ ಸುಸಮಯ ಎಂದರಿತ ಬಿಜೆಪಿ ಸತತ ಒಂದೂವರೆ ದಶಕದವರೆಗೆ ರಾಜ್ಯದ ನೆಲವನ್ನು, ಅದರಲ್ಲೂ ಉತ್ತರ ಕರ್ನಾಟಕವನ್ನು ತನ್ನ ಕೋಟೆಯನ್ನಾಗಿ ಪರಿವರ್ತಿಸಿಕೊಳ್ಳಲು ಗೇಯ್ದು ತನಗೆ ಒಗ್ಗುವಂತೆ ಮೈದಾನ ಸಿದ್ಧಪಡಿಸಿಕೊಂಡಿತು. 1996ರ ವೇಳೆಗೆ ಉತ್ತರದಲ್ಲಿ ಚದುರಿದಂತೆ ಬೆಳೆ ತೆಗೆದುಕೊಂಡಿತು. 2004ರ ವೇಳೆಗೆ ಈ ನೆಲೆ ಗಟ್ಟಿಗೊಂಡು ಮುಂದೆ ಆದದ್ದೆಲ್ಲ ಮತ್ತೊಂದು ಕಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.