ಶನಿವಾರ, ಡಿಸೆಂಬರ್ 5, 2020
23 °C
ನಾಗರಿಕ ಸಂಘಟನೆಗಳನ್ನು ನಿಯಂತ್ರಿಸುವ ಯತ್ನವನ್ನು ಎಚ್ಚರಿಕೆಯಿಂದ ಗಮನಿಸಬೇಕಿದೆ

ವಿಶ್ಲೇಷಣೆ: ವಿದೇಶಿ ಅನುದಾನ ಮತ್ತು ಅನುಮಾನ

ಎಂ.ಎಸ್.ಶ್ರೀರಾಮ್ Updated:

ಅಕ್ಷರ ಗಾತ್ರ : | |

prajavani

ನಾಗರಿಕ ಸಂಘಟನೆಗಳಿಗೂ (ಸಿವಿಲ್ ಸೊಸೈಟಿ ಆರ್ಗನೈಸೇಶನ್ಸ್) ಸರ್ಕಾರಕ್ಕೂ ನಡುವೆ ಅನಾದಿ ಕಾಲದ ತಿಕ್ಕಾಟವಿದೆ. ಅದೇ ಸಮಯಕ್ಕೆ ಸರ್ಕಾರಗಳು ಈ ಸಂಸ್ಥೆಗಳ ಸೇವೆಗಳನ್ನು ಬಳಸಿಕೊಳ್ಳುವುದನ್ನೂ ಕಂಡಿದ್ದೇವೆ. ಸರ್ಕಾರದ ಕಾರ್ಯಕ್ಷೇತ್ರದಲ್ಲಿ ಇರಬಹುದಾದ ಕೆಲಸವನ್ನು ಇನ್ನಷ್ಟು ದಕ್ಷವಾಗಿ ಮುಂದುವರಿಸುತ್ತಲೇ ಸರ್ಕಾರವನ್ನು ಪ್ರಶ್ನಿಸಿ ನಾಗರಿಕರ ಹಕ್ಕಿಗಾಗಿ ಈ ಸಂಸ್ಥೆಗಳು ಹೋರಾಡುತ್ತವೆ. ಹೀಗಾಗಿಯೇ ಪ್ರತೀ ಸರ್ಕಾರವೂ ಈ ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ರೂಪಿಸುತ್ತಲೇ ಬಂದಿದೆ.

ನುಂಗಲಾರದ ಬಿಸಿ ತುಪ್ಪದಂತಾಗಿರುವ ಈ ಸಂಸ್ಥೆಗಳನ್ನು ಉಗುಳಲು ಕೇಂದ್ರ ಸರ್ಕಾರ ನಿರ್ಧರಿಸಿದೆಯೇ? ಅಥವಾ ಇನ್ನಷ್ಟು ಕಠಿಣ ನಿಯಂತ್ರಣದತ್ತ ಹೆಜ್ಜೆಯಿಟ್ಟಿದೆಯೇ ಎನ್ನುವುದು ಕುತೂಹಲದ ಪ್ರಶ್ನೆ.‌ ಈ ಕ್ಷೇತ್ರವನ್ನು ಅರ್ಥಮಾಡಿಕೊಳ್ಳಲು ಅವುಗಳ
ಆರ್ಥಿಕತೆಯನ್ನು ಅರಿಯುವುದು ಮುಖ್ಯ.

ನಾಗರಿಕ ಸಂಸ್ಥೆಗಳು ದಾನ (donation) ಮತ್ತು ಅನುದಾನದ (grants) ಮೇಲೆ ತಮ್ಮ ಆರ್ಥಿಕತೆಯನ್ನು
ಕಟ್ಟಿಕೊಳ್ಳುತ್ತವೆ. ಅವು ಪ್ರತಿಪಾದಿಸುವ ಸಿದ್ಧಾಂತ, ನಿಲುವು ಮತ್ತು ಜಾರಿಗೊಳಿಸುವ ಕಾರ್ಯಕ್ರಮಗಳ ಆಧಾರದ ಮೇಲೆ ಆರ್ಥಿಕ ನೆರವನ್ನು ಪಡೆಯುತ್ತವೆ. ನಿಲುವು ಮತ್ತು ಸಿದ್ಧಾಂತಗಳು ವಿಶ್ವವ್ಯಾಪಿ ವಿಚಾರಗಳಾದ್ದರಿಂದ ಈ ಸಂಘಟನೆಗಳಿಗೆ ನೆರವು ವಿದೇಶಿ ಮೂಲಗಳಿಂದಲೂ ಬರಬಹುದು.

ಇಂತಹ ಸಂಸ್ಥೆಗಳನ್ನು ಹದ್ದುಬಸ್ತಿನಲ್ಲಿಡುವುದು ಹೇಗೆ? ಇದು ಸರಳವಲ್ಲ. ಯುಪಿಎ ಸರ್ಕಾರವು ಇದಕ್ಕೊಂದು ಉಪಾಯವನ್ನು ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ರೂಪಿಸಿದ್ದ ರಾಷ್ಟ್ರೀಯ ಸಲಹಾ ಮಂಡಲಿಯ ಮೂಲಕ ಕಂಡುಕೊಂಡಿತ್ತು. ಆ
ಮಂಡಲಿಯಲ್ಲಿ ಸರ್ಕಾರವನ್ನು ವಿರೋಧಿಸುತ್ತಿದ್ದನಾಗರಿಕ ಸಂಘಟನೆಗಳನ್ನು ರಚನಾತ್ಮಕವಾಗಿ ಒಳಗೊಂಡು, ಅವುಗಳ ಪಾಲುದಾರಿಕೆಯಲ್ಲೇ ಕೆಲಸ ಮಾಡುವ ಪ್ರಯತ್ನವನ್ನು ಮಾಡಿತ್ತು. ಸರ್ಕಾರದ ಕಾನೂನು ರಚಿಸುವಲ್ಲಿ ಮಂಡಲಿಯ ಪಾತ್ರಕ್ಕೆ ಹೆಚ್ಚು ಒತ್ತು ಕೊಟ್ಟ ಬಗ್ಗೆ ಚರ್ಚೆಗಳಾಗಿದ್ದವು. ಆದರೂ ಅವುಗಳ ಜೊತೆ ಕೆಲಸ ಮಾಡಿದ್ದರಿಂದ ನಷ್ಟವೇನೂ ಆಗಲಿಲ್ಲ. ಆ ಸಂಸ್ಥೆಗಳು ಸಹ ಸರ್ಕಾರದೊಂದಿಗೆ ರಾಜಿಯಾಗಿ ಅದನ್ನು ಪ್ರಶ್ನಿಸುವ ಅಧಿಕಾರವನ್ನೂ ಬಿಟ್ಟುಕೊಡಲಿಲ್ಲ.
ಈ ಸಂಘಟನೆಗಳೇ ಮಾಹಿತಿ ಹಕ್ಕು ಕಾಯ್ದೆ, ಮನರೇಗಾ, ಆಹಾರ ಹಕ್ಕು, ಶಿಕ್ಷಣ ಹಕ್ಕಿಗೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಲೋಕಪಾಲ್ ಕಾಯ್ದೆ ಜಾರಿಗೆ ಒತ್ತಾಯಿಸಿದ ಅಣ್ಣಾ ಆಂದೋಲನದ ಮೂಲವೂ ಈ ಸಂಘಟನೆಗಳಲ್ಲಿಯೇ ಇದೆ. ಹೀಗಾಗಿ ಇವುಗಳು ಸರ್ಕಾರಗಳಿಗೆ ತಲೆನೋವಾಗುವುದು ಸಹಜವೇ.

ಅದೇ ರೀತಿ, ಮಹಿಳೆಯರ ಸ್ವಸಹಾಯ ಗುಂಪುಗಳನ್ನು ರಚಿಸಿ ಬೆಳೆಸುವಲ್ಲೂ ನಾಗರಿಕ ಸಂಘಟನೆಗಳ ಪಾತ್ರವಿದೆ. ಸರ್ಕಾರಗಳನ್ನು ಪ್ರಶ್ನಿಸುತ್ತಲೇ ಬಡವರು, ದಲಿತರು, ವಂಚಿತರ ಹಕ್ಕುಗಳಿಗಾಗಿ ಹೋರಾಡುತ್ತ, ರಚನಾತ್ಮಕ ಕಾರ್ಯಕ್ರಮಗಳನ್ನೂ ಸಂಘಟನೆಗಳು ಮಾಡುತ್ತಿವೆ. ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ಸರ್ಕಾರದ ಏಕಾಧಿಪತ್ಯವನ್ನು ಮುರಿಯಲು, ಜನರ ನಡುವಿನಿಂದ ಸರ್ಕಾರಗಳನ್ನು ಪ್ರಶ್ನಿಸುವಲ್ಲಿ ಇವುಗಳ ಪಾತ್ರ ಮಹತ್ವದ್ದು. ಆದರೀಗ ಹಿಂದಿಗಿಂತಲೂ ಹೆಚ್ಚಾಗಿ ಈ ಸಂಸ್ಥೆಗಳನ್ನು ನಿಯಂತ್ರಿಸಿ ದಮನಗೊಳಿಸುವ ಯತ್ನಗಳಾಗುತ್ತಿವೆ ಎನ್ನುವುದನ್ನು ನಾವು ಎಚ್ಚರಿಕೆಯಿಂದ ನೋಡಬೇಕಾಗಿದೆ.

ನಾಗರಿಕ ಸಂಘಟನೆಗಳು ಮುಂದುವರಿಯಲು ಬೇಕಾದ ಆಮ್ಲಜನಕವೆಂದರೆ ಅವುಗಳಿಗೆ ಸಿಗುವ ಆರ್ಥಿಕ ಅನುದಾನ. ಕಳೆದ ಹಲವು ವರ್ಷಗಳಲ್ಲಿ ನವಶ್ರೀಮಂತರು ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ. ಟಾಟಾ ಸಂಸ್ಥೆ ಮೊದಲಿನಿಂದಲೂ ಅನುದಾನ ನೀಡುತ್ತಾ ಬಂದಿದೆ. ಇದಲ್ಲದೆ ಈ ಕ್ಷೇತ್ರಕ್ಕೆ ವಿದೇಶಿ ಮೂಲದಿಂದಲೂ ಧನಸಹಾಯ ಹರಿದು ಬರುತ್ತಲೇ ಇದೆ. ಫೋರ್ಡ್ ಫೌಂಡೇಶನ್, ಸ್ವಾತಂತ್ರ್ಯಾನಂತರ ಬಂದ ಮುಖ್ಯ ವಿದೇಶಿ ಪ್ರತಿಷ್ಠಾನ. ಅಹಮದಾಬಾದಿನ ಐಐಎಂನಿಂದ ಹಿಡಿದು ರಾಷ್ಟ್ರ ಮಟ್ಟದ ಅನೇಕ ಸಂಸ್ಥೆಗಳು ರೂಪುಗೊಳ್ಳಲು ಫೋರ್ಡ್ ಫೌಂಡೇಶನ್ ಅನುದಾನ ನೀಡಿತ್ತು. ಅನೇಕ ಪಾಶ್ಚಿಮಾತ್ಯ ಅನುದಾನ ಸಂಸ್ಥೆಗಳು ನಮ್ಮ ಅಭಿವೃದ್ಧಿಗಾಗಿ ಹಿಂದೆ ಧನ ಮತ್ತು ಸಾಮಗ್ರಿಗಳ ಸಹಾಯವನ್ನು ಒದಗಿಸಿವೆ. ಗುಜರಾತಿನ ‘ಆಣಂದ’ದಿಂದ ಪ್ರಾರಂಭವಾದ ಹೈನುಗಾರಿಕೆ ವಿಭಾಗದ ಶ್ವೇತಕ್ರಾಂತಿಯೂ ಈ ರೀತಿಯ ಅನುದಾನದಿಂದ ಬಂದದ್ದೇ.

2005ರಲ್ಲಿ ಸರ್ಕಾರವು ಜಿ-8 ರಾಷ್ಟ್ರಗಳನ್ನು ಬಿಟ್ಟು ಬೇರೆಲ್ಲಿಂದಲೂ ಆರ್ಥಿಕ ಸಹಾಯ ಸ್ವೀಕರಿಸುವುದಿಲ್ಲವೆಂದು ಘೋಷಿಸಿತು. ಆದರೆ ನಾಗರಿಕ ಸಂಘಟನೆಗಳು ಅನುದಾನ ಸ್ವೀಕರಿಸುವುದರ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಈಗ ಆ ಅನುದಾನಗಳನ್ನು ಪಡೆಯುವುದೂ ಕಷ್ಟದ ಮಾತಾಗುತ್ತಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ನಮ್ಮ ಆಂತರಿಕ ರಾಜಕೀಯದಲ್ಲಿ ವಿದೇಶಗಳ ಕೈವಾಡ ಇರಬಾರದೆಂಬ ಕಾರಣಕ್ಕೆ  ವಿದೇಶಿ ಅನುದಾನ ನಿಯಮಗಳನ್ನು ಸರ್ಕಾರಗಳು ಕಠಿಣಗೊಳಿಸುತ್ತಲೇ ಹೋಗುತ್ತಿವೆ.

ಆರ್ಥಿಕ ಮುಗ್ಗಟ್ಟಿನ ಈ ಸಂದರ್ಭದಲ್ಲಿ ನಾಗರಿಕ ಸಂಸ್ಥೆಗಳು ಅನೇಕ ಕಷ್ಟಗಳನ್ನು ಎದುರಿಸುತ್ತಿವೆ. ಸರ್ಕಾರದ ಹದ್ದುಬಸ್ತಿನಲ್ಲಿರುವ ವಿಭಾಗೀಯ ಅನುದಾನಗಳು ಕಡಿಮೆ ಯಾಗುತ್ತಿವೆ, ಕಾರ್ಪೊರೇಟ್ ಸಂಸ್ಥೆಗಳಿಂದ ಬರಬಹುದಾದ ಅನುದಾನಗಳು ಮತ್ತು ಸಿಎಸ್ಆರ್ ದುಡ್ಡು ಸರ್ಕಾರದ ಬೊಕ್ಕಸಕ್ಕೆ (ಆದರೆ ಸಾರ್ವಜನಿಕವಲ್ಲದ) ಪಿ.ಎಂ. ಕೇರ್ಸ್ ನಿಧಿಗೆ ಹೋಗುತ್ತಿದೆ.

ವಿದೇಶಿ ಅನುದಾನವನ್ನು ಸಂಶಯದ ಕಣ್ಣುಗಳಿಂದ ನೋಡುವುದು ಸಹಜವೇ. ಇದಕ್ಕೆ ಎರಡು ಬಗೆಯ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯ. ಮೊದಲನೆಯದ್ದು, ಪಿತೂರಿಯ ಸಿದ್ಧಾಂತ. ಅಂದರೆ ವಿದೇಶಿ ಅನುದಾನ ಪಡೆಯುವ ಸಂಘಟನೆಗಳು ದೀರ್ಘಕಾಲೀನವಾಗಿ ರಾಷ್ಟ್ರದ ಹಿತಕ್ಕೆ ಮಾರಕವಾಗಬಹುದಾದ ಕೆಲಸಗಳನ್ನು ಮಾಡುತ್ತವೆ ಎಂದು ಸಂಶಯಿ
ಸುವುದು. ಎರಡನೆಯದು, ಹೆಚ್ಚು ಆತ್ಮವಿಶ್ವಾಸದ್ದು.ಅನುದಾನದ ಸದ್ಬಳಕೆಯನ್ನು ಖಾತರಿಪಡಿಸಿದರೆ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುವುದಿಲ್ಲ ಎಂಬ ನಿಲುವು. ದುರದೃಷ್ಟವಶಾತ್‌ ಸರ್ಕಾರ ಪಿತೂರಿಯ ಸಿದ್ಧಾಂತದ ಮಾರ್ಗವನ್ನು ಆರಿಸಿಕೊಂಡಿದೆ.

ಸರ್ಕಾರದ ವಿತ್ತೀಯ ಪರಿಸ್ಥಿತಿಯ ಮೇಲೆ ಹೆಚ್ಚಿನ ಒತ್ತಡವನ್ನು ಹೇರದೆ ನೇರವಾಗಿ ವಿದೇಶಿ ಸಂಸ್ಥೆಗಳಿಂದ ಅನುದಾನ ಪಡೆದು ಬಡವರಿಗೆ ಸೇವೆಯೊದಗಿಸಲು ಈ ಸಂಸ್ಥೆಗಳಿಗೆ ಸಾಧ್ಯವಿದೆ. ಆದರೆ ವಿದೇಶದಿಂದ ಬರುವ ಎಲ್ಲ ಅನುದಾನಗಳೂ ಭಾರತೀಯ ಸ್ಟೇಟ್ ಬ್ಯಾಂಕಿನ ಒಂದೇ ಶಾಖೆಯಲ್ಲಿ ತೆರೆದ ಖಾತೆಗೆ ಬರಬೇಕು, ಅದರಲ್ಲಿ ಶೇ 20ಕ್ಕಿಂತ ಹೆಚ್ಚು ಆಡಳಿತಾತ್ಮಕ ಖರ್ಚುಗಳಿರಬಾರದು, ಅನುದಾನಗಳನ್ನು ಇತರ ಸಂಸ್ಥೆಗಳಿಗೆ ಸಣ್ಣ ಮಟ್ಟದ ಅನುದಾನವಾಗಿ ನೀಡಬಾರದು ಎನ್ನುವ ಹೊಸ ನಿಯಮಗಳು ಈ ಸಂಸ್ಥೆಗಳಿಗೆ ಮಾರಕವಾಗುವುದರಲ್ಲಿ ಅನುಮಾನವಿಲ್ಲ. ಕಳೆದ ಹಲವು ವರ್ಷಗಳಲ್ಲಿ ಬಂದ ಅನುದಾನದ ಮಟ್ಟ ಸುಮಾರು ₹ 20,000 ಕೋಟಿಗಳಷ್ಟಿದೆ. ಸರ್ಕಾರವೇ ಮಾಡಬೇಕಿರುವ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವ ಅನೇಕ ಸಂಸ್ಥೆಗಳಿಗೆ ಈ ಆರ್ಥಿಕ ಸಹಾಯವನ್ನು ಇಲ್ಲವಾಗಿಸಿ ಸರ್ಕಾರವು ರಾಷ್ಟ್ರಹಿತವನ್ನು ಕಾಪಾಡುತ್ತಿದ್ದೇವೆಂದು ಎದೆ ತಟ್ಟಿಕೊಂಡರೂ ಜನರನ್ನು ಕಾಪಾಡುತ್ತಿರುವ ಸಂಸ್ಥೆಗಳಿಗೆ ಇದು ಮಾರಕವಾಗಿದೆ.

ಐರೋಪ್ಯ ದೇಶಗಳಿಂದ ಆಹಾರದ ರೂಪದಲ್ಲಿ ಅನುದಾನ ಬಂದಾಗ ಹೈನು ಪಿತಾಮಹ ಡಾ. ಕುರಿಯನ್ ಅವರನ್ನು ಜನ ಪ್ರಶ್ನಿಸಿದ್ದರು. ಈ ಅನುದಾನದ ಹಿಂದಿನ ಪಿತೂರಿ ನಮ್ಮ ಮಾರುಕಟ್ಟೆಗಳನ್ನು ಆಕ್ರಮಿಸಿಕೊಳ್ಳುವುದು, ಈ ಸಂಸ್ಥೆಗಳು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಿವೆ ಎನ್ನುವ ಮಾತಿಗೆ ಕುರಿಯನ್, ‘ವಿದೇಶಿಯರು ನಮ್ಮನ್ನು ಉಪಯೋಗಿಸಿ ಬಿಸಾಕುತ್ತಾರೆ ಎನ್ನುವ ಮಾತಿನಲ್ಲಿ ನಮ್ಮ ಹಿತರಕ್ಷಣೆಯನ್ನು ಕಾಪಾಡಿಕೊಳ್ಳುವ ಕ್ಷಮತೆ ನಮ್ಮಲ್ಲಿಲ್ಲ ಎನ್ನುವ ಭಾವನೆಯಿದೆ. ನಾವು ಮೂರ್ಖರಲ್ಲ. ನಾವೇ ವಿದೇಶಿಯರನ್ನು ಉಪಯೋಗಿಸಿಕೊಳ್ಳಲು ಏಕೆ ಸಾಧ್ಯವಿಲ್ಲ ಎಂದೇಕೆ ಯೋಚಿಸಬಾರದು?’ ಸರ್ಕಾರವೂ ಈ ಮನೋಧರ್ಮವನ್ನು ತನ್ನದಾಗಿಸಿಕೊಳ್ಳಬೇಕು.

‘ದೇಶವೆಂದರೆ ಮಣ್ಣಲ್ಲವೋ, ದೇಶವೆಂದರೆ ಮನುಷ್ಯರೋ’ ಎಂದು ತೆಲುಗು ಕವಿ ಗುರಜಾಡ ಅಪ್ಪಾರಾವು ಬರೆದಿದ್ದರು. ಈ ಕವಿತೆಯನ್ನು ಸರ್ಕಾರಕ್ಕೆ ಓದಿ ತಿಳಿಹೇಳುವವರು ಯಾರು?


ಎಂ.ಎಸ್.ಶ್ರೀರಾಮ್

ಲೇಖಕ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು