ಬುಧವಾರ, ಡಿಸೆಂಬರ್ 2, 2020
19 °C
ಅಧಿಕಾರಿಗಳ ಹೆಚ್ಚುವರಿ ತೆರಿಗೆ ಅಂದಾಜಿಲ್ಲಿ ಶೇ 76.54ರಷ್ಟು ಲೋಪ: ಸಿಎಜಿ ವರದಿಯಲ್ಲಿ ತೀವ್ರ ಅಸಮಾಧಾನ

PV Web Exclusive: ದೂರು ಪರಿಶೀಲಿಸದೆಯೇ ಐ.ಟಿ. ಅಧಿಕಾರಿಗಳ ದಾಳಿ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಆದಾಯ ತೆರಿಗೆ ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ಆದಾಯ ತೆರಿಗೆಯ ಅಧಿಕಾರಿಗಳು ಆಗಾಗ್ಗೆ ಶೋಧಕಾರ್ಯ ನಡೆಸುತ್ತಾರೆ. ಇದು ಐ.ಟಿ ರೇಡ್ ಎಂದೇ ಜನಜನಿತವಾಗಿದೆ. ರಾಜಕಾರಣಿಗಳು, ಉದ್ಯಮಿಗಳ ಮನೆ-ಕಚೇರಿಗಳ ಮೇಲೆ ಇಂತಹ ಶೋಧಕಾರ್ಯ ನಡೆದಾಗಲೆಲ್ಲಾ, ‘ಇದು ರಾಜಕೀಯ ದುರುದ್ದೇಶ/ದ್ವೇಷದ ದಾಳಿ’ ಎಂಬ ಆರೋಪ ಕೇಳಿಬರುತ್ತದೆ. ಆದರೆ ಇಂತಹ ದಾಳಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅಂದಾಜಿಸಿದ ಹೆಚ್ಚುವರಿ ತೆರಿಗೆಯಲ್ಲಿ ಶೇ 75ಕ್ಕೂ ಹೆಚ್ಚು ಮೊತ್ತವು ತಪ್ಪು ಅಂದಾಜಾಗಿರುತ್ತದೆ. ದೂರುಗಳನ್ನು ಪರಿಶೀಲಿಸದೆಯೇ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಾರೆ ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ.

ಹೀಗೆ ಶೋಧ ಕಾರ್ಯ ನಡೆಸಿದಾಗ ಪತ್ತೆಯಾದ ಹಣ/ಸಂಪತ್ತನ್ನು ತೆರಿಗೆ ವ್ಯಾಪ್ತಿಗೆ ತಂದರೆ, ಬರಬಹುದಾದ ತೆರಿಗೆಯನ್ನು ಅಂದಾಜಿಸಲಾಗುತ್ತದೆ. 2014-15ರಿಂದ 2017-18ರ ಅವಧಿಯಲ್ಲಿ ದೇಶದಲ್ಲಿ ಹೀಗೆ ಶೋಧ ಕಾರ್ಯ ನಡೆಸಿ, ಅಂದಾಜಿಸಲಾದ ತೆರಿಗೆ ಹಣದಲ್ಲಿ ಶೇ 75ಕ್ಕೂ ಹೆಚ್ಚು ಮೊತ್ತವು ತೆರಿಗೆ ವ್ಯಾಪ್ತಿಗೆ ಬರುವುದೇ ಇಲ್ಲ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶೋಧಕಾರ್ಯದ ನಂತರ ತೆರಿಗೆ ಅಂದಾಜಿಸುವಲ್ಲಿ ಆದಾಯ ತೆರಿಗೆ ಇಲಾಖೆ ಎಡವಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.

ಆದಾಯ ತೆರಿಗೆ ಇಲಾಖೆಯ ಶೋಧಕಾರ್ಯಗಳು ಮತ್ತು ತೆರಿಗೆ ಅಂದಾಜಿನ ಕಾರ್ಯಕ್ಷಮತೆಯ ಬಗ್ಗೆ ಸಿಎಜಿ ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.

‘ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸುವ ಶೋಧಕಾರ್ಯಗಳು, ಅಸೆಸ್ ಅಧಿಕಾರಿಗಳು ಮಾಡುವ ತೆರಿಗೆ ಅಂದಾಜಿನಲ್ಲಿ ಹಲವು ಲೋಪಗಳಿವೆ. ಆದಾಯ ತೆರಿಗೆ ಇಲಾಖೆಗೆ ಬರಬಹುದಾದ ತೆರಿಗೆ ಈ ಸ್ವರೂಪದ ಕಾರ್ಯಲೋಪಗಳಿಂದ ವಂಚಿತವಾಗುತ್ತಿದೆ. 2006-07ರಲ್ಲಿ ನಡೆಸಲಾಗಿದ್ದ ಲೆಕ್ಕಪರಿಶೋಧನೆಯಲ್ಲೂ ಇದೇ ಸ್ವರೂಪದ ಲೋಪಗಳು ಪತ್ತೆಯಾಗಿದ್ದವು. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಶಿಫಾರಸುಗಳನ್ನು ನೀಡಲಾಗಿತ್ತು. ಆದರೆ ಈಗಲೂ ಆ ಲೋಪಗಳು ಮುಂದುವರಿದಿವೆ’ ಎಂದು ಸಿಎಜಿ ತನ್ನ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.

2014-15ರಿಂದ 2017-18ರ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳ ವಿವಿಧ ತಂಡಗಳು ನಡೆಸಿರುವ ಶೋಧಕಾರ್ಯ ಮತ್ತು ಹೆಚ್ಚುವರಿ ತೆರಿಗೆ ಅಂದಾಜು ಪ್ರಕರಣಗಳಲ್ಲಿ, ನ್ಯಾಯಾಲಯಕ್ಕೆ ಬಂದ ಪ್ರಕರಣಗಳನ್ನು ಲೆಕ್ಕಪರಿಶೋಧನೆಗೆ ತೆಗೆದುಕೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ₹ 24,965 ಕೋಟಿ ಹೆಚ್ಚುವರಿ ತೆರಿಗೆಯನ್ನು ಅಂದಾಜು ಮಾಡಲಾಗಿತ್ತು. ಆದರೆ ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪಿನ ನಂತರ ₹ 5,857 ಕೋಟಿ ಹೆಚ್ಚುವರಿ ಅಂದಾಜು ತೆರಿಗೆಯಷ್ಟೇ ಆದಾಯ ತೆರಿಗೆ ಇಲಾಖೆಗೆ ಬಂತು. ₹ 19,108 ಕೋಟಿಯಷ್ಟು ಹೆಚ್ಚುವರಿ ಅಂದಾಜು ತೆರಿಗೆಯು ಅಸೆಸ್ ಅಧಿಕಾರಿಗಳ ಕಲ್ಪನೆಯ ಪ್ರತಿಫಲ ಎಂದು ಸಿಎಜಿ ತನ್ನ ವರದಿಯಲ್ಲಿ ಖಾರವಾಗಿ ಹೇಳಿದೆ.

ತೆರಿಗೆ ಅಧಿಕಾರಿಗಳ ಹೆಚ್ಚುವರಿ ಅಂದಾಜಿನಲ್ಲಿ ಶೇ 23.46ರಷ್ಟು ಮೊತ್ತವು ಮಾತ್ರವೇ ನಿಜವಾದ ತೆರಿಗೆಯಾಗಿದೆ. ಶೇ 76.54ರಷ್ಟು ಹೆಚ್ಚುವರಿ ಅಂದಾಜಿಗೆ ಯಾವುದೇ ಆಧಾರಗಳಿಲ್ಲ. ಲೆಕ್ಕಪರಿಶೋಧನೆಗೆ ಆಯ್ಕೆ ಮಾಡಿಕೊಂಡ ಸಣ್ಣ ಪ್ರಮಾಣದ ಪ್ರಕರಣಗಳಲ್ಲೇ ಇಷ್ಟು ಲೋಪವಾಗಿದ್ದರೆ, ಇನ್ನು ಎಲ್ಲಾ ಪ್ರಕರಣಗಳ ಲೆಕ್ಕಪರಿಶೋಧನೆ ನಡೆಸಿದರೆ ಎಷ್ಟು ಲೋಪಗಳು ಪತ್ತೆಯಾಗಬಹುದು ಎಂದು ಸಿಎಜಿ ಕಳವಳ ವ್ಯಕ್ತಪಡಿಸಿದೆ.

ಈ ಅವಧಿಯಲ್ಲಿ ಕರ್ನಾಟಕದಲ್ಲಿ ನಡೆಸಲಾದ ಶೋಧಕಾರ್ಯಗಳಲ್ಲಿ ಕೆಲವು ಪ್ರಕರಣಗಳಲ್ಲಿ, ತೆರಿಗೆ ವಂಚನೆ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗೆ ನ್ಯಾಯಾಲಯದ ಮೊರೆ ಹೋದ ಪ್ರಕರಣಗಳಲ್ಲಿ ಶೇ 100ರಷ್ಟು ಪ್ರಕರಣಗಳಲ್ಲೂ ತೆರಿಗೆ ವಂಚನೆ ಮಾಡಿರುವುದನ್ನು ಸಾಬೀತುಮಾಡುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಇಂತಹ ಪ್ರಕರಣಗಳಲ್ಲಿ ತೆರಿಗೆ ಇಲಾಖೆಯ ಅಧಿಕಾರಿಗಳ ಸಫಲತೆಯ ಪ್ರಮಾಣ ಶೇ 0. ಇಂತಹ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ₹ 417 ಕೋಟಿ ಹೆಚ್ಚುವರಿ ತೆರಿಗೆಯನ್ನು ಅಂದಾಜಿಸಲಾಗಿತ್ತು. ಆದರೆ ನ್ಯಾಯಾಲಯಗಳ ತೀರ್ಪಿನ ನಂತರ ಈ ಪ್ರಕರಣಗಳಲ್ಲಿ ಒಂದು ರೂಪಾಯಿಯೂ ತೆರಿಗೆ ಬರಬೇಕಿಲ್ಲ ಎಂಬುದು ಸಾಬೀತಾಯಿತು.

ತೆರಿಗೆ ವಂಚಿಸಲಾಗಿದೆ ಎಂದು ಬರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸದೆ ಸುಖಾಸುಮ್ಮನೆ ಶೋಧಕಾರ್ಯ ನಡೆಸುವುದೇ ಇಂತಹ ವೈಫಲ್ಯಗಳಿಗೆ ಕಾರಣ ಎಂದು ಸಿಎಜಿ ಹೇಳಿದೆ. ಇಂತಹ ಮಾಹಿತಿ ಬಂದಾಗ, ಅದರ ಸತ್ಯಾಂಶ ಎಷ್ಟು ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ದೂರುಗಳು ಬಂದಿದ್ದಲ್ಲಿ, ದೂರು ನೀಡಿದವರ ಹಿಂದಿನ ಉದ್ದೇಶ ಏನು ಎಂಬುದನ್ನು ಪತ್ತೆ ಮಾಡಬೇಕು. ತೆರಿಗೆ ವಂಚಿಸಲಾಗಿದೆ ಎಂಬುದರ ಬಗ್ಗೆ ಸಂದೇಹಗಳು ಮೂಡಿದರೆ ಮಾತ್ರವೇ ಶೋಧಕಾರ್ಯ ನಡೆಸಬೇಕು. ಆದರೆ ಇವುಗಳನ್ನು ಪಾಲಿಸದೇ ಶೋಧಕಾರ್ಯ ನಡೆಸಿರುವುದು ಪತ್ತೆಯಾಗಿದೆ. ಈ ಸ್ವರೂಪದ ಲೋಪಗಳಿಂದಲೇ ಇಲಾಖೆಯ ಅಧಿಕಾರಿಗಳ ಸಮಯ, ಶ್ರಮ ಮತ್ತು ಇಲಾಖೆಯ ಹಣ ವ್ಯರ್ಥವಾಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. 

ಶೋಧಕಾರ್ಯದ ನಂತರ ಅಸೆಸ್ ಅಧಿಕಾರಿಗಳು ಹೆಚ್ಚುವರಿ ಅಂದಾಜನ್ನು ವೈಜ್ಞಾನಿಕವಾಗಿ ಮಾಡುತ್ತಿಲ್ಲ ಎಂಬುದು ಲೆಕ್ಕಪರಿಶೋಧನೆ ವೇಳೆ ಗೊತ್ತಾಗಿದೆ. ಬಹುತೇಕ ಪ್ರಕರಣಗಳಲ್ಲಿ ಈಗಾಗಲೇ ಘೋಷಿಸಿಕೊಂಡಿರುವ ಮತ್ತು ತೆರಿಗೆ ಪಾವತಿಸಿರುವ ಹಣ/ಸಂಪತ್ತನ್ನು ಹೆಚ್ಚುವರಿ ಅಂದಾಜು ವ್ಯಾಪ್ತಿಗೆ ತರಲಾಗಿದೆ. ಶೋಧಕಾರ್ಯದ ವೇಳೆ ಪತ್ತೆಯಾದ ದಾಖಲೆಗಳ ಆಧಾರದಲ್ಲಿ ತೆರಿಗೆಯನ್ನು ಅಂದಾಜಿಸದೆ, ಕಲ್ಪನೆಗೆ ಬಂದಷ್ಟು ತೆರಿಗೆ ಬರಬೇಕು ಎಂದು ಅಂದಾಜು ಬರೆದು ವರದಿ ಸಲ್ಲಿಸಲಾಗಿದೆ. ಇದು ಅಸೆಸ್ ಅಧಿಕಾರಿಗಳಿಂದ ಆಗಿರುವ ಗುರುತರ ಲೋಪ ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.

ಅಸೆಸ್ ಅಧಿಕಾರಿಗಳು ಸಲ್ಲಿಸಿರುವ ಹೆಚ್ಚುವರಿ ಅಂದಾಜು ವರದಿಯಲ್ಲಿ, ಯಾವ ನಿಯಮಗಳ ಅಡಿ ತೆರಿಗೆ ಅಂದಾಜಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಇದನ್ನು ನಮೂದಿಸದೆಯೇ ತೆರಿಗೆ ಬರಬೇಕೆಂದು ಹೇಳಿದ್ದಾರೆ. ತೆರಿಗೆ ಹೇಗೆ ಬರಬೇಕು ಎಂಬುದನ್ನು ಸ್ಪಷ್ಟಪಡಿಸದೆ, ತೆರಿಗೆ ಮಾತ್ರ ಬರಬೇಕು ಎಂದು ಅಂದಾಜಿಸಲಾಗಿದೆ. ಇಂತಹ ಲೋಪಗಳು ಬಹುತೇಕ ಎಲ್ಲಾ ಪ್ರಕರಣಗಳಲ್ಲೂ ಆಗಿವೆ. ಹೀಗಾಗಿಯೇ ಅಧಿಕಾರಿಗಳು ಅಂದಾಜಿಸಿದಷ್ಟು ತೆರಿಗೆಯು ಬರಬೇಕಿಲ್ಲ ಎಂಬುದು ನ್ಯಾಯಾಲಯಗಳಲ್ಲಿ ಸಾಬೀತಾಗಿದೆ ಎಂದು ಸಿಎಜಿ ವಿವರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು