ಸೋಮವಾರ, ಅಕ್ಟೋಬರ್ 18, 2021
26 °C
ಪೆಗಾಸಸ್‌ ಬೇಹುಗಾರಿಕೆ ಪ್ರಕರಣ ಮಾಹಿತಿ ಬಹಿರಂಗಪಡಿಸದಿರುವ ಕೇಂದ್ರದ ಕ್ರಮ ಸರಿಯೇ?

ಪೆಗಾಸಸ್‌| ಖಾಸಗಿತನದ ಹಕ್ಕು ಮೊಟಕು

ಜೈನಾ ಕೊಠಾರಿ Updated:

ಅಕ್ಷರ ಗಾತ್ರ : | |

Prajavani

ಪೆಗಾಸಸ್‌ ಗೂಢಚರ್ಯೆ ಪ್ರಕರಣವು ಕುತೂಹಲಕರ ತಿರುವು ಪಡೆದುಕೊಂಡಿದೆ!

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿದ ಪೆಗಾಸಸ್‌ ಎಂಬ ಕುತಂತ್ರಾಂಶ ಬಳಸಿ  ವಿರೋಧ ಪಕ್ಷಗಳ ರಾಜಕಾರಣಿಗಳು, ಪತ್ರಕರ್ತರು, ವಕೀಲರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಸೇರಿ ಭಾರತದ 142ಕ್ಕೂ ಹೆಚ್ಚು ಜನರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಯು ಮಾಧ್ಯಮದಲ್ಲಿ ಪ್ರಕಟವಾದ ಬಳಿಕ ಪೆಗಾಸಸ್‌ ಪ್ರಕರಣವು ಬಯಲಾಯಿತು. ತಾನು ಅಭಿವೃದ್ಧಿಪಡಿಸಿದ ಕುತಂತ್ರಾಂಶವನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿಯೂ ಅದು ಖಾಸಗಿ ಬಳಕೆಗೆ ಲಭ್ಯವಿಲ್ಲ ಎಂದೂ ಎನ್‌ಎಸ್‌ಒ ಗ್ರೂಪ್‌ ಹೇಳಿದೆ. ಪ್ರಕರಣವು ಬಯಲಿಗೆ ಬಂದ ಬಳಿಕ, ಹಿರಿಯ ಪತ್ರಕರ್ತರೂ ಸೇರಿ ಹಲವು ವ್ಯಕ್ತಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ; ಆರೋಪಗಳ ಬಗ್ಗೆ ವಿಶೇಷ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ; ಈ ಕುತಂತ್ರಾಂಶದ ಪರವಾನಗಿಯನ್ನು ಪಡೆದುಕೊಳ್ಳಲಾಗಿದೆಯೇ, ಈ ಕುತಂತ್ರಾಂಶವನ್ನು ಯಾವುದೇ ವ್ಯಕ್ತಿಯ ಮೇಲೆ ನಿಗಾ ಇರಿಸಲು ಬಳಸಲಾಗಿದೆಯೇ ಎಂಬುದನ್ನು ಬಹಿರಂಗಪಡಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಲಾಗಿದೆ. 

ಪೆಗಾಸಸ್‌ ಕುತಂತ್ರಾಂಶವನ್ನು ಖರೀದಿಸಲಾಗಿದೆಯೇ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈಗ ಪ್ರಕರಣವು ವಿಚಿತ್ರ ತಿರುವು ಪಡೆದುಕೊಂಡಿದೆ. ಯಾವುದೇ ಹೆಚ್ಚಿನ ಮಾಹಿತಿಯನ್ನು ಸರ್ಕಾರವು ಬಹಿರಂಗಪಡಿಸುವುದಿಲ್ಲ, ಪ್ರಮಾಣಪತ್ರವನ್ನೂ ಸಲ್ಲಿಸುವುದಿಲ್ಲ ಎಂದು ಸಾಲಿಸಿಟರ್‌ ಜನರಲ್‌ ಹೇಳಿದ್ದಾರೆ. ಅಲ್ಲದೆ, ಸರ್ಕಾರವು ಗೂಢಚರ್ಯೆಗಾಗಿ ಯಾವ ತಂತ್ರಾಂಶ ಬಳಸಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವುದು ದೇಶದ ಭದ್ರತೆಗೆ ಮಾರಕ ಎಂದು ಅವರು ವಾದಿಸಿದ್ದಾರೆ. ಕುತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಿದ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಪರಿಣತರ ಸ್ವತಂತ್ರ ಸಮಿತಿ ರಚಿಸಬಹುದು ಎಂಬ ಸಲಹೆಯನ್ನೂ ಅವರು ಕೊಟ್ಟಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಮಾಹಿತಿಯನ್ನು ಕೇಳುತ್ತಿಲ್ಲ, ಬದಲಿಗೆ, ಬೇಹುಗಾರಿಕೆಗಾಗಿ ಕಾನೂನುಬದ್ಧವಲ್ಲದ ವಿಧಾನಗಳನ್ನು ಬಳಸಲಾಗಿದೆಯೇ ಎಂಬ ಮಾಹಿತಿಯಷ್ಟೇ ಬೇಕಾಗಿದೆ ಎಂದು ನ್ಯಾಯಾಲಯ ಹೇಳಿತ್ತು. ಈಗ, ಸರ್ಕಾರವು ಯಾವುದೇ ಪ್ರಮಾಣಪತ್ರ ಸಲ್ಲಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ಸೂಕ್ತ ಆದೇಶವನ್ನು ನೀಡಬೇಕಿದೆ. 

ಸಾರ್ವಜನಿಕ ಮಹತ್ವದ ಹಲವು ವಿಚಾರಗಳನ್ನು ಈ ಪ್ರಕರಣವು ಮುನ್ನೆಲೆಗೆ ತಂದಿದೆ. ಈ ವಿಚಾರವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಎಂದು ಬಿಂಬಿಸಲಾಗಿದೆ. ಆದರೆ, ಜನರ ಖಾಸಗಿತನದ ಹಕ್ಕುಗಳ ಗಂಭೀರ ಉಲ್ಲಂಘನೆಯೇ ಇಲ್ಲಿ ಇರುವ ನಿಜವಾದ ವಿಚಾರವಾಗಿದೆ ಎಂಬುದು ನನ್ನ ವಾದವಾಗಿದೆ. ಪೆಗಾಸಸ್‌ ಕುತಂತ್ರಾಂಶವನ್ನು ವ್ಯಕ್ತಿಯೊಬ್ಬರ ಫೋನ್‌ಗೆ ಒಮ್ಮೆ ಸೇರಿಸಿಬಿಟ್ಟರೆ, ಬಳಿಕ ಅವರ ಸಂದೇಶಗಳು, ಕರೆಗಳು, ಫೋಟೊಗಳು, ಇ–ಮೇಲ್‌ಗಳು ಎಲ್ಲವನ್ನೂ ಪಡೆದುಕೊಳ್ಳಬಹುದು. ಕ್ಯಾಮೆರಾ ಅಥವಾ ಮೈಕ್ರೊಫೋನ್‌ಗೆ ರಹಸ್ಯವಾಗಿಯೇ ಚಾಲನೆ ಕೊಡಬಹುದು. ವಾಟ್ಸ್‌ಆ್ಯಪ್‌, ಸಿಗ್ನಲ್ ಮತ್ತು ಟೆಲಿಗ್ರಾಂನಂತಹ ಗೂಢಲಿಪಿಯಲ್ಲಿರುವ ಸಂದೇಶಗಳನ್ನೂ ಓದಬಹುದು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಯಾವುದೇ ಅಂಶವು ಈ ರೀತಿ ನಿಗಾ ಇರಿಸುವುದಕ್ಕೆ ಅವಕಾಶ ಕೊಡುವುದಿಲ್ಲ. ಭಾರತೀಯ ಟೆಲಿಗ್ರಾಫ್‌ ಕಾಯ್ದೆಯ ಸೆಕ್ಷನ್‌ 5 (2) ಮಾತ್ರ ಸಾರ್ವಜನಿಕ ತುರ್ತು ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆಗಾಗಿ ಮಾತ್ರ ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರವು ಆದೇಶ ಹೊರಡಿಸಿದ ಬಳಿಕ ದೂರವಾಣಿ ಕದ್ದಾಲಿಕೆ ಅಥವಾ ಬೇಹುಗಾರಿಕೆ ನಡೆಸಲು ಅವಕಾಶ ನೀಡುತ್ತದೆ. ಇಂತಹ ಸಂದರ್ಭವಲ್ಲದೇ ಇದ್ದರೆ, ಯಾವುದೇ ರೀತಿಯ ಗೂಢಚರ್ಯೆ ತಂತ್ರಾಂಶ ಬಳಕೆಯು ಗಂಭೀರವಾಗಿ ಕಾನೂನುಬಾಹಿರವಾದುದಾಗಿದೆ. 

ಈಗಿನ ಪ್ರಕರಣದಲ್ಲಿ ಸರ್ಕಾರವು ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ;  ಸೂಕ್ತ ಪ್ರಕ್ರಿಯೆಗಳನ್ನು ನಡೆಸದೆ ವ್ಯಕ್ತಿಗಳ ಮೇಲೆ ಬೇಹುಗಾರಿಕೆಗಾಗಿ ಪೆಗಾಸಸ್‌ ಕುತಂತ್ರಾಂಶ ಬಳಕೆಯು ಖಾಸಗಿತನದ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಖಾಸಗಿತನವು ಸಂವಿಧಾನವು ಕೊಟ್ಟಿರುವ ಮೂಲಭೂತ ಹಕ್ಕುಗಳ ಭಾಗ ಎಂದು ನ್ಯಾಯಮೂರ್ತಿ ಕೆ.ಎಸ್‌. ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರ ಹಾಗೂ ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಖಾಸಗಿತನದ ಹಕ್ಕಿನಲ್ಲಿ ಮಾಹಿತಿಯೂ ಸೇರುತ್ತದೆ. ಹೇಗೆ ಕಾಣಿಸಿಕೊಳ್ಳಬೇಕು ಮತ್ತು ಹೇಗೆ ದಿರಿಸು ಧರಿಸಬೇಕು ಎಂಬ ಆಯ್ಕೆಯ ರೀತಿಯಲ್ಲಿಯೇ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ದತ್ತಾಂಶವು ಖಾಸಗಿಯಾದುದಾಗಿದೆ. ಸರ್ಕಾರವು ದೂರವಾಣಿ ಕದ್ದಾಲಿಕೆ ಮತ್ತು ಅಂತರ್ಜಾಲವನ್ನು ಹ್ಯಾಕ್‌ ಮಾಡುವುದು ಖಾಸಗಿತನದ ವ್ಯಾಪ್ತಿಯ ಒಳಗೇ ಬರುತ್ತದೆ. ಇಂತಹ ವೈಯಕ್ತಿಕ ಮಾಹಿತಿಯ ಅನಧಿಕೃತ ಬಳಕೆಯು ವ್ಯಕ್ತಿಯ ಖಾಸಗಿತನದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಇಂತಹ ಮೊಟಕುಗೊಳಿಸುವಿಕೆಯು ವಾಕ್‌ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯೂ ಹೌದು. ಏಕೆಂದರೆ, ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬುದು ಜನರಲ್ಲಿ ಭೀತಿ ಮೂಡಿಸಿ, ಅವರ ಮುಕ್ತ ಅಭಿವ್ಯಕ್ತಿಗೆ ಧಕ್ಕೆ ಉಂಟು ಮಾಡುತ್ತದೆ. 

ವ್ಯಕ್ತಿಯ ಮನೆ ಅಥವಾ ಕಚೇರಿಯ ಖಾಸಗಿ ಸ್ಥಳದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲದೆ ದೂರವಾಣಿ ಮೂಲಕ ಸಂಭಾಷಣೆ ನಡೆಸುವುದು ಖಾಸಗಿತನದ ಹಕ್ಕಿನ ಅವಿಭಾಜ್ಯ ಅಂಗವಾಗಿದೆ. ಏಕೆಂದರೆ, ದೂರವಾಣಿಯ ಮೂಲಕ ನಡೆಸುವ ಸಂಭಾಷಣೆಯು ಸಾಮಾನ್ಯವಾಗಿ ಆತ್ಮೀಯವಾದುದು ಮತ್ತು ಗೋಪ್ಯ ಸ್ವರೂಪದ್ದು ಆಗಿರುತ್ತದೆ ಎಂದು ಪಿಯುಸಿಎಲ್‌ ಮತ್ತು ಕೇಂದ್ರ ಸರ್ಕಾರ ಹಾಗೂ ಇತರರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿ ಇದೊಂದು ಮಹತ್ವದ ಪ್ರಕರಣವಾಗಿತ್ತು. 

ಕಾನೂನಿನ ಅನ್ವಯ ಸ್ಥಾಪಿಸಲಾದ ಪ್ರಕ್ರಿಯೆಗಳ ಅಡಿಯಲ್ಲಿ ಅನುಮೋದನೆ ಪಡೆದುಕೊಳ್ಳದೆಯೇ ದೂರವಾಣಿ ಕದ್ದಾಲಿಕೆ ಮಾಡುವುದು ಬದುಕುವ ಹಕ್ಕನ್ನು ಖಾತರಿಪಡಿಸುವ ಭಾರತದ ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಹಾಗೆಯೇ, ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿನ ಅಭಿವ್ಯಕ್ತಿ ಮತ್ತು ವಾಕ್‌ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಯಾವುದೇ ಸಾರ್ವಜನಿಕ ತುರ್ತಿನ ಸಂದರ್ಭ ಇದ್ಧಾಗ ಅಥವಾ ಸಾರ್ವಜನಿಕ ಸುರಕ್ಷತೆಯ ಪ್ರಶ್ನೆ ಇದ್ದಾಗ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಸರ್ಕಾರಗಳ ಗೃಹ ಕಾರ್ಯದರ್ಶಿಯವರ ಆದೇಶದ ಮೂಲಕವಷ್ಟೇ ಕದ್ದಾಲಿಕೆಗೆ ಅವಕಾಶ ಲಭ್ಯವಾಗುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. 

ದೊಡ್ಡ ಸಂಖ್ಯೆಯಲ್ಲಿ ವ್ಯಕ್ತಿಗಳ ಮೇಲೆ ಬೇಹುಗಾರಿಕೆ ನಡೆಸಬೇಕಾದಂತಹ ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸುರಕ್ಷತೆಯ ವಿಚಾರ ಇದ್ದರೆ, ಅಗತ್ಯ ಕಾನೂನು ಪ್ರಕ್ರಿಯೆ ಮೂಲಕ ದೂರವಾಣಿ ಕದ್ದಾಲಿಕೆ ನಡೆಸಲು ಅವಕಾಶ ಇದೆ. ಹಾಗೆ ಮಾಡಿದ್ದಿದ್ದರೆ, ಅದನ್ನು ಪ್ರಮಾಣಪತ್ರದ ಮೂಲಕ ತಿಳಿಸುವುದಕ್ಕೆ ಸರ್ಕಾರಕ್ಕೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಇಂತಹ ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು ಮತ್ತು ತಡೆ ಹಿಡಿಯುವುದು ಕೂಡ ಜನರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದಂತೆಯೇ ಆಗುತ್ತದೆ. ಜನರ ಖಾಸಗಿತನ ಮತ್ತು ವಾಕ್‌ ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದು ಬಯಲಾದ ಬಳಿಕ ರಾಷ್ಟ್ರೀಯ ಭದ್ರತೆಯನ್ನು ಒಂದು ನೆಪವಾಗಿ ಮುಂದಕ್ಕೆ ತರಲಾಗಿದೆ. 

ಲೇಖಕಿ: ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು