ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಜೋಶಿಮಠ ಕುಸಿತ: ಎಚ್ಚರಿಕೆಯ ನಿರ್ಲಕ್ಷ್ಯ

ಈ ಭಾಗದಲ್ಲಿ ಭೂಮಿಯನ್ನಳೆಯುವ ಅಳತೆಗೋಲೇ ಮುರಿದುಹೋಗಿದೆ!
Last Updated 31 ಜನವರಿ 2023, 19:31 IST
ಅಕ್ಷರ ಗಾತ್ರ

ಉತ್ತರಪ್ರದೇಶದಿಂದ 2000ದಲ್ಲಿ ಉತ್ತರಾಖಂಡವನ್ನು ಪ್ರತ್ಯೇಕಗೊಳಿಸಿ ಹೊಸ ರಾಜ್ಯ ಸೃಷ್ಟಿಸುವಾಗ, ಈ ರಾಜ್ಯಕ್ಕೆ ಭೂಕುಸಿತ, ಭೂಕಂಪನ, ಮೇಘಸ್ಫೋಟ, ಪ್ರವಾಹಭೀತಿ ಒಡ್ಡುತ್ತಿದ್ದ ಭಾಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡದ್ದು ಅರಿವೇ ಆಗಲಿಲ್ಲ. ಬ್ರಹ್ಮಪುತ್ರ ನದಿಯಿಂದ ಪ್ರವಾಹ ಭೀತಿ ಎದುರಿಸುತ್ತಿರುವ ಅಸ್ಸಾಂ ಮೇಲುಭಾಗದಲ್ಲಿ ಟೀ ತೋಟ, ಜನವಸತಿಯನ್ನು ಖಾಲಿ ಮಾಡಲು ಹೇಗೆ ಸಾಧ್ಯವಿಲ್ಲವೋ, ಅದೇ ಸ್ಥಿತಿ ಹೆಚ್ಚು ಕಡಿಮೆ ಉತ್ತರಾಖಂಡದಲ್ಲೂ ಇದೆ. ಜೋಶಿಮಠದ ಪರಿಸ್ಥಿತಿಯೂ ಅದೇ. ಯಾವುದೋ ಕಾಲದಲ್ಲಿ ಭೂಕಂಪನಕ್ಕೆ ತುತ್ತಾಗಿ ಭಾರಿ ಭೂಕುಸಿತವಾಗಿ, ಅದರ ಅವಶೇಷಗಳ ಮೇಲೆ ಈ ಯಾತ್ರಾಸ್ಥಳ ತಲೆ ಎತ್ತಿತು. ಅದು ಬಲು ಇಕ್ಕಟ್ಟಾದ ಜಾಗ. ಎರಡೂವರೆ ಚದರ ಕಿಲೊಮೀಟರ್‌ ವಿಸ್ತೀರ್ಣ. ಕಟ್ಟಿರುವುದು 4,500 ವಸತಿಗಳನ್ನು, ವಾಸಿಸುತ್ತಿರುವವರು ಬರೀ 25,000 ಮಂದಿ. ಆಗಾಗ ಭೂಮಿ ಇಲ್ಲಿ ಮೈಕೊಡವಿಕೊಳ್ಳುತ್ತದೆ.

ಎಂದಿನಂತೆ ಈ ನೆಲ ಈಗಲೂ ಅಸ್ಥಿರತೆ ತೋರಿದೆ. ಇಲ್ಲಿನ ಮಿಲಿಟರಿ ನೆಲೆ ಸೇರಿದಂತೆ 800 ಕಟ್ಟಡಗಳಲ್ಲಿ ಬಿರುಕು ಕಾಣಿಸಿದೆ. ಹಾಗೆಯೇ ಇಡೀ ನಗರ ಮೆಲ್ಲನೆ ಕೆಳಕ್ಕೆ ಇಳಿಯುತ್ತಿದೆ. ಈ ಪಟ್ಟಣವಾಸಿಗಳನ್ನು ಕನಿಷ್ಠ 10 ಕಿ.ಮೀ. ದೂರವಿರುವ ನಾಲ್ಕು ಕ್ಯಾಂಪುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮುಂದುವರಿದಿದೆ. ವಿಷಾದವೆಂದರೆ, ರಾತ್ರಿ ಮಲಗುವುದನ್ನು ಬಿಟ್ಟರೆ ಉಳಿದಂತೆ ಬಿರುಕುಬಿಟ್ಟ ಮನೆಗಳಿಗೇ ಹಿಂತಿರುಗುತ್ತಿದ್ದಾರೆ; ಬೆಳಗಿನ ಹೊತ್ತು ಈಗಲೂ ಊಟ, ವಸತಿ, ಶೌಚಕ್ಕೆ ಅದೇ ಗತಿ. ಕಳೆದ ಜನವರಿ 12ರಂದು ಇಸ್ರೊ ಸಂಸ್ಥೆ ಅತ್ಯಂತ ಸೂಕ್ಷ್ಮವಾಗಿ ಉಪಗ್ರಹಗಳ ಛಾಯಾಚಿತ್ರಗಳನ್ನು ಅಧ್ಯಯನ ಮಾಡಿ, ಈವರೆಗೆ ಎಂಟು ಸೆಂ.ಮೀ. ಕುಸಿದಿದೆ ಎಂದು ವರದಿ ನೀಡಿದಾಗ ರಾಜ್ಯದ ಆಡಳಿತವೇ ನಡುಗಿಹೋಗಿತ್ತು. ಮರುದಿನವೇ ಕೇಂದ್ರ ಸರ್ಕಾರದ ವಿಕೋಪ ನಿರ್ವಹಣಾ ವಿಭಾಗ ಸುತ್ತೋಲೆಯನ್ನು ಹೊರಡಿಸಿ, ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳೊಂದಿಗೆ ಇದನ್ನು ಚರ್ಚಿಸಬಾರ ದೆಂದು ಎಚ್ಚರಿಕೆ ಕೊಟ್ಟಿತ್ತು. ಜನ ಭಯಭೀತರಾಗುತ್ತಾರೆ ಎಂಬುದು ಇದರ ಹಿಂದಿರುವ ತರ್ಕ.

ಇಡೀ ಉತ್ತರಾಖಂಡವೇ ಹಿಮಾಲಯದ ಅಸ್ಥಿರ ಭಾಗದ ಮೇಲೆ ನಿಂತಿದೆ ಎಂಬ ಸಂಗತಿ ಹೊಸತಾಗಿ ಬೆಳಕಿಗೆ ಬಂದದ್ದಲ್ಲ. ಭಾರತೀಯ ಭೂವೈಜ್ಞಾನಿಕ ಸರ್ವೆ ಸಂಸ್ಥೆ 1935ರಲ್ಲೇ ದೇಶದ ಭೂಕಂಪನ ನಕ್ಷೆ ತಯಾರಿಸಿದಾಗ, ಹಿಮಾಲಯದ ಈ ಭಾಗ ಅತಿ ಅಪಾಯಕಾರಿ ವಲಯ- 5ಕ್ಕೆ ಬರುತ್ತದೆ ಎಂದು ಸೂಚಿಸಿತ್ತು. ಮುಂದೆ ರಾಜ್ಯದ ಜನತೆ ಇದನ್ನು ಕಣ್ಣಾರೆ ಕಾಣಬೇಕಾಯಿತು. ಉತ್ತರಕಾಶಿ ಭೂಕಂಪನ (1991, 2022), ಚಮೋಲಿ ಭೂಕಂಪನ (1999), ಗಢವಾಲ್‌ ಭೂಕಂಪನ (1991), ರುದ್ರಪ್ರಯಾಗ ಭೂಕಂಪನ (2017), ಸಾಲದೆಂಬಂತೆ ನಂದಾದೇವಿಯಿಂದ ಹಿಮನದಿ ಕರಗಿ ನದಿಗಳನ್ನು ಉಕ್ಕುವಂತೆ ಮಾಡಿದ್ದು (2021), ಈ ಒಂದೊಂದೂ ಆರ್ಥಿಕವಾಗಿಯೂ ಉತ್ತರಾಖಂಡವನ್ನು ಅಲುಗಾಡಿಸಿದವು. ಇದಕ್ಕೆ ಯಾರನ್ನು ದೂಷಿಸಬೇಕು?

ಮಹಾಕವಿ ಕಾಳಿದಾಸ ಇಡೀ ಹಿಮಾಲಯವನ್ನು ‘ಭೂಮಿಯನ್ನಳೆಯುವ ಅಳತೆಗೋಲು’ ಎಂದು ‘ಕುಮಾರಸಂಭವ’ ಕಾವ್ಯದಲ್ಲಿ ವರ್ಣಿಸಿದ. ಆದರೆ ಜೋಶಿಮಠದ ಈ ಭಾಗದಲ್ಲಿ ಈ ಅಳತೆಗೋಲೇ ಮುರಿದುಹೋಗಿರುವುದು ಈಗ ಸ್ಪಷ್ಟ. ಸರ್ಕಾರ ಈ ಅವಘಡವನ್ನು ಗಂಭೀರವಾಗಿ ತೆಗೆದುಕೊಂಡು ಈ ಜನವರಿ 8ರಂದು ಜೋಶಿಮಠವನ್ನು ‘ಭೂಕುಸಿತದ ವಲಯ’ ಎಂದು ಘೋಷಿಸಿದೆ. ಈ ಹಿಂದೆ ನೀಡಿದ ಯಾವ ಸರ್ಕಾರಿ ವರದಿಯೂ ನಗರದ ಅಭಿವೃದ್ಧಿಯ ಪರವಾಗಿರಲಿಲ್ಲ. ಜೋಶಿಮಠ ಕುಸಿತದ ಕಥೆ ಇವತ್ತಿನದಲ್ಲ.
ಸರ್ಕಾರವು ಗಢವಾಲ್‌ನ ಜಿಲ್ಲಾಧಿಕಾರಿ ಎನ್.‌ಸಿ.ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಹದಿನೆಂಟು ಸದಸ್ಯರ ಸಮಿತಿಯನ್ನು ನೇಮಿಸಿ, 1976ರಲ್ಲಿ ಜೋಶಿಮಠದ ಅನೇಕ ವಸತಿಗಳಲ್ಲಿ ಬಿರುಕುಬಿಟ್ಟಿರುವುದರ ಬಗ್ಗೆ ಅಧ್ಯಯನ ಮಾಡಿ ವರದಿಯನ್ನು ಕೇಳಿತ್ತು. ಜೋಶಿಮಠ ಹಳೆಯ ಭೂಕುಸಿತದಿಂದಾಗಿ ಉಂಟಾದ ಕಲ್ಲು ಮಣ್ಣುಗಳ ಮೇಲೆ ನಿಂತಿದೆ ಎಂದು ಆಗಲೇ ವರದಿ ಹೇಳಿತ್ತು. ಹೊಸದಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದು ಅಪಾಯಕರ ಎಂದು ಎಚ್ಚರಿಕೆ ನೀಡಿತ್ತು.

2006ರಲ್ಲಿ ಹಿಮಾಲಯದ ಈ ಭಾಗ ಮತ್ತೊಮ್ಮೆ ಮುನಿದಿತ್ತು. ನಗರದ ಇನ್ನಷ್ಟು ಮನೆಗಳು ಬಿರುಕುಬಿಟ್ಟವು. ಆಗ ಸರ್ವೆ ಮಾಡುವ ಕೆಲಸ ವಿಕೋಪ ನಿರ್ವಹಣೆ ಮಾಡುವ ಸಂಸ್ಥೆಯ ಮೇಲೆ ಬಿತ್ತು. ಜೋಶಿಮಠದ ಕೆಳಗೆ ಒಂಬತ್ತು ಸಣ್ಣ ಸಣ್ಣ ಹಳ್ಳ, ಝರಿಗಳು ನಿಶ್ಶಬ್ದವಾಗಿ ನೆಲವನ್ನು ಕೊರೆದುಬಿಟ್ಟಿವೆ, ಇದು ಅಪಾಯಕಾರಿ ಎಂದು ವರದಿ ಹೇಳಿತು. ಆಗ ವರ್ಷಕ್ಕೆ ಈ ಪಟ್ಟಣ ಒಂದು ಸೆಂಟಿ ಮೀಟರಿನಷ್ಟು ಕುಸಿಯಬಹುದು ಎಂದು ಅಂದಾಜು ಮಾಡಿತ್ತು. ಬಹುಶಃ ಇದು ಲೆಕ್ಕಕ್ಕೆ ಬಾರದಷ್ಟು ಎಂದು ಸರ್ಕಾರ ಮತ್ತೊಮ್ಮೆ ತಜ್ಞರ ವರದಿಯನ್ನು ಬದಿಗಿಟ್ಟಿತು. ಈಗ ಇನ್ನೂ ಒಂದು ವರದಿ ಅರಣ್ಯ ಇಲಾಖೆಯಿಂದ ಬಂದಿದೆ. ಜೋಶಿಮಠದ ಸುತ್ತಮುತ್ತಲ ಅರಣ್ಯ ಸೇರಿದಂತೆ ಕಳೆದ 20 ವರ್ಷಗಳಲ್ಲಿ 50,000 ಹೆಕ್ಟೇರ್‌ ಕಾಡು ಚಮೋಲಿ ಜಿಲ್ಲೆಯಲ್ಲಿ ಬಹು ತ್ವರಿತಗತಿಯಲ್ಲಿ ನಾಶವಾಗಿದೆ. ಸಣ್ಣ ಮಳೆ ಬಂದರೂ ಸಾಕು, ನೀರು ಒಳಕ್ಕೂ ಇಳಿಯುತ್ತದೆ. ಮೊದಲೇ ಸಡಿಲವಾಗಿದ್ದ ನೆಲ ಇನ್ನಷ್ಟು ಸಡಿಲವಾಗುತ್ತದೆ.

ಪಟ್ಟಣವಾಸಿಗಳು ಎಚ್ಚೆತ್ತು ನಮಗೆ ಬೇರೆ ಸ್ಥಳ ಒದಗಿಸಿಕೊಡಿ ಎಂದು ದುಂಬಾಲು ಬಿದ್ದರು. 2011ರಲ್ಲಿ ಸರ್ಕಾರವು ಅಪಾಯಕಾರಿ ಜಾಗದಲ್ಲಿರುವ ವಸತಿಗಳನ್ನು ಖಾಲಿ ಮಾಡಿಸಿ ಪುನರ್ವಸತಿ ಕಲ್ಪಿಸುವ ಕುರಿತು ತೀರ್ಮಾನಿಸಿತ್ತು. ಆ ಮಟ್ಟಿಗೆ ಇಂಥ ತೀರ್ಮಾನ ತೆಗೆದುಕೊಂಡ ರಾಜ್ಯಗಳಲ್ಲಿ ಉತ್ತರಾಖಂಡವೇ ಮೊದಲು ಎಂದು ಕೊಚ್ಚಿಕೊಂಡಿತು. ಆದರೆ ಆದದ್ದೇನು? 2000ನೇ ಇಸವಿಯಲ್ಲಿ ಉತ್ತರಾಖಂಡದಲ್ಲಿ ಇದ್ದದ್ದು 8,000 ಕಿಲೊಮೀಟರ್‌ ಉದ್ದದ ರಸ್ತೆಗಳು. ಇಂದು ಅದು 40,000 ಕಿ.ಮೀ.ನಷ್ಟು ಹಬ್ಬಿದೆ ಎಂದು ಗಢವಾಲ್‌ ವಿಶ್ವವಿದ್ಯಾಲಯ ಸಮೀಕ್ಷಾ ವರದಿ ನೀಡಿದೆ. ಪ್ರತೀ ಕಿಲೊಮೀಟರ್‌ ರಸ್ತೆ ನಿರ್ಮಿಸುವಾಗಲೂ ಗರಿಷ್ಠ 60,000 ಘನ ಮೀಟರ್‌ ಕಲ್ಲು ಮಣ್ಣು ರಾಶಿ ಬಿದ್ದು ನದಿಗಳು ಅವನ್ನು ಸಲೀಸಾಗಿ ಹೊತ್ತು ಸಾಗುತ್ತವೆ. ಜಲಮೂಲಗಳನ್ನು ತುಂಬುತ್ತವೆ, ನೀರು ಮತ್ತಷ್ಟು ಒಳಕ್ಕೆ ಇಳಿಯಲು ಅನುಕೂಲವಾಗುತ್ತದೆ. ಚಾರ್‌ಧಾಮ್‌ ಯೋಜನೆಯ ಸಾಧಕ ಬಾಧಕಗಳ ಕುರಿತು ವರದಿ ಮಾಡಲು ಸುಪ್ರೀಂ ಕೋರ್ಟ್‌ ಒಂದು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಿತು. ರವಿ ಚೋಪ್ರಾ ಅದರ ಅಧ್ಯಕ್ಷರಾಗಿದ್ದರು, ಕೊನೆಗೆ ಉತ್ತರಾಖಂಡ ಸರ್ಕಾರ ತನ್ನ ಈ ಭಾಗದ ಅಭಿವೃದ್ಧಿಯನ್ನು ಎಗ್ಗಿಲ್ಲದೆ ಮಾಡುತ್ತಿದೆ ಎಂದು ಬೇಸರಿಸಿ ಅವರು 2022ರ ಮಾರ್ಚ್‌ ತಿಂಗಳಲ್ಲಿ ರಾಜೀನಾಮೆಯನ್ನೇ ಕೊಟ್ಟರು.

ಇಲ್ಲಿ ಇನ್ನೂ ಒಂದು ಸಂಗತಿಯ ಪ್ರಸ್ತಾಪ ಅತ್ಯಗತ್ಯ. ನ್ಯಾಷನಲ್‌ ಥರ್ಮಲ್‌ ಪವರ್‌ ಕಾರ್ಪೊರೇಷನ್, ಅದು ನಿರ್ಮಾಣ ಮಾಡುತ್ತಿರುವ ಜಲ ವಿದ್ಯುತ್‌ ಸ್ಥಾವರಕ್ಕಾಗಿ ತಪೋವನ್‌- ವಿಷ್ಣುಗಡ ಭಾಗದಲ್ಲಿ ಸುರಂಗ ಕೊರೆದಿದೆ. ಸುರಂಗದ ಮೇಲುಭಾಗದಲ್ಲಿ ನೀರು ಚಿಮ್ಮಿ ಕೆಳಭಾಗಕ್ಕೆ ಹರಿದುಬಂದಿರುವುದೇ ಈ ಅವಘಡಕ್ಕೆ ಕಾರಣ ಎಂದು ಪರಿಸರವಾದಿಗಳು, ಭೂವಿಜ್ಞಾನಿಗಳೂ ಒಟ್ಟಿಗೇ ದನಿ ಎತ್ತಿದ್ದಾರೆ. ಇಡೀ ಭಾರತವು ಗಣರಾಜ್ಯೋತ್ಸವ ಆಚರಣೆಯಲ್ಲಿ ಸಂಭ್ರಮಿಸುತ್ತಿದ್ದಾಗ, ಜೋಶಿಮಠದ ನಿವಾಸಿಗಳು ‘ಗೋಬ್ಯಾಕ್‌ ಎಂ.ಟಿ.ಪಿ.ಸಿ.’ ಎಂದು ಪ್ರತಿಭಟಿಸುತ್ತಿದ್ದರು. ‘ಮೊದಲು ಜೋಶಿಮಠದ ಚರಂಡಿಗಳನ್ನು ದುರಸ್ತಿ ಮಾಡಿ, ಇಲ್ಲದಿದ್ದರೆ ಇದರಲ್ಲಿ ನಿಂತ ನೀರೇ ಇಡೀ ಪಟ್ಟಣಕ್ಕೆ ಸಂಚಕಾರ ತರಬಹುದು’ ಎಂದು ಕೆಲವು ಪ್ರಜ್ಞಾವಂತ ನಾಗರಿಕರು ಸಿಡಿದೆದ್ದಿದ್ದಾರೆ.

ಈಗ ಐ.ಐ.ಟಿ. ರೂರ್ಕಿ ಸೇರಿದಂತೆ ಸುಮಾರು ಆರು ಪ್ರಮುಖ ಸಂಸ್ಥೆಗಳ ವಿಜ್ಞಾನಿಗಳು ಜೋಶಿಮಠದ ಯಾತ್ರೆಯನ್ನು ಮುಗಿಸಿದ್ದಾರೆ. ಈ ತಂಡ ಇನ್ನಷ್ಟು ಅಧ್ಯಯನ ಮಾಡಿ ವಿವರವಾದ ವರದಿಯನ್ನು ಸಲ್ಲಿಸ ಬೇಕೆಂದು ಸರ್ಕಾರ ಬಯಸಿದೆ. ಸದ್ಯ ವರದಿಗಳ ಮೇಲೆ ವರದಿ ಕೂರುತ್ತಿವೆ. ಅವೂ ಒಂದು ದಿನ ಜಾರಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT