ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಗ.ಜಗದೀಶ್ ಬರಹ | ಅಣ್ಣಾ ಬಸವಣ್ಣ: ಕೆಟ್ಟಿತ್ತು ಕಲ್ಯಾಣ

12ನೇ ಶತಮಾನದಲ್ಲಿ ಕಲ್ಯಾಣವನ್ನು ಕುಟ್ಟಿ ಕೆಡವಿದ ವಿಕೃತಿ ಈಗ ಮರುಕಳಿಸುತ್ತಿದೆಯೇ?
Last Updated 16 ಏಪ್ರಿಲ್ 2022, 16:16 IST
ಅಕ್ಷರ ಗಾತ್ರ

ಅಕ್ಷರ ದೇವತೆ ಶೃಂಗೇರಿ ಶಾರದಾಂಬೆಯ ದೇಗುಲದ ಪಕ್ಕದಲ್ಲಿ ತುಂಗೆ ಹರಿಯುತ್ತಾಳೆ. ಸುಡುವ ಬಿಸಿಲಿನಲ್ಲಿ ಪರಿತಪಿಸುತ್ತಿದ್ದ ಗರ್ಭಿಣಿ ಕಪ್ಪೆಯೊಂದಕ್ಕೆ ಹಾವೊಂದು ಹೆಡೆಯನ್ನೇ ಬಿಚ್ಚಿ ನೆರಳು ನೀಡಿದ ಕತೆಯೊಂದನ್ನು ಹೇಳುವ ಶಿಲ್ಪವೊಂದು ನದಿ ತಟದಲ್ಲಿದೆ. ಇದು ಸತ್ಯವೋ ಕಲ್ಪಿತವೋ; ತನ್ನ ಆಹಾರವನ್ನೇ ತಾಯ್ತನದಿಂದ ಪೊರೆಯುವ ಔದಾರ್ಯವೊಂದನ್ನು ಇದು ಬಿಂಬಿಸುತ್ತದೆ. ಬುದ್ಧಿ ಇಲ್ಲದ ಜೀವಜಂತುಗಳೇ ತಮ್ಮ ಮಾತೃವಾತ್ಸಲ್ಯದ ನಡೆಯನ್ನು ತೋರಿದ ನಾಡಿನೊಳಗೆ ಬುದ್ಧಿಗೇಡಿಗಳಂತಿರುವ ನರರು ಕೇಡಿನ ಕಡೆಗೆ ಓಡುತ್ತಿರುವ ದಾರುಣ ಸನ್ನಿವೇಶ ಇವತ್ತು ಸೃಷ್ಟಿಯಾಗಿದೆ.

ಹಿಜಾಬ್‌ಗೆ ಶುರುವಾದ ವಿರೋಧವು ಹಲಾಲ್‌ಗೆ ಬಹಿಷ್ಕಾರ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಣೆ, ಮುಸ್ಲಿಮರ ಆಟೊ ಬಳಸಬೇಡಿ, ಅಂಗಡಿಗಳಿಗೆ ಹೋಗಬೇಡಿ ಎಂದು ಕರೆ ಕೊಡುವಷ್ಟರ ಮಟ್ಟಿಗಿನ ದುರ್ದಿನಗಳನ್ನು ನಾಡು ನೋಡಿತು. ಇಂತಹ ಕ್ಷುದ್ರರು ದಿನಕ್ಕೊಂದರಂತೆ ಹೊರಡಿಸುತ್ತಿದ್ದ ಫರ್ಮಾನುಗಳನ್ನು ಕಾನೂನಿನ ಮೂಲಕ ಹತ್ತಿಕ್ಕಬೇಕಾದ ಸರ್ಕಾರ ಸತ್ತಂತೆ ನಟಿಸಿತು. ಸಂವಿಧಾನದ ಆಶಯದಂತೆ ನಡೆಯಬೇಕಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಕ್ಕೆ ಏರಿದ ಕೆಲವೇ ದಿನಗಳಲ್ಲಿ, ಮತೀಯ ಗೂಂಡಾಗಿರಿಗೆ ಬೆಂಬಲ ಕೊಡುವ ರೀತಿಯೊಳಗೆ ‘ಕ್ರಿಯೆಗೆ–ಪ್ರತಿಕ್ರಿಯೆ ಸಹಜ’ ಎಂದಿದ್ದರು. ಇದು ವಿಘಟನಾ ಶಕ್ತಿಗಳಿಗೆ ಕುಮ್ಮಕ್ಕು ನೀಡಿತು.

ದುರುಳರನ್ನು ಮಟ್ಟಹಾಕಿ, ಸಜ್ಜನರನ್ನು ರಕ್ಷಿಸಬೇಕಾದ ಹೊಣೆ ಆಳುವವರದ್ದು. ಅವರೇ ಖೂಳರಾಗತೊಡಗಿದರೆ ಖೂಳರು ಖಳರಾಗುತ್ತಾರೆ. ನಾಡು ಕೊಲೆಗಡುಕರ ಬೀಡಾಗುತ್ತದೆ. ಕಳೆದ ಎರಡು ತಿಂಗಳಿಂದೀಚೆಗಿನ ವಿದ್ಯಮಾನಗಳನ್ನು ನೋಡಿದರೆ, ಘಾತುಕ ಶಕ್ತಿಗಳೇ ವಿಜೃಂಭಿಸುತ್ತಿದ್ದು, ಅರಾಜಕತೆಯ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾಗಿದೆಯೇ ಎಂಬ ಅನುಮಾನ ಮೂಡುತ್ತದೆ. ಇದನ್ನು ನಿಭಾಯಿಸಿ, ಜನರಲ್ಲಿ ಭರವಸೆ ತುಂಬಬೇಕಾದ ಬೊಮ್ಮಾಯಿ, ಧೃತರಾಷ್ಟ್ರ ಮೌನಕ್ಕೆ ಶರಣಾಗಿರುವುದು ಅವರ ಹುದ್ದೆಗೆ ತಕ್ಕ ನಡವಳಿಕೆಯಲ್ಲ.

ಈ ಎಲ್ಲದರ ಪರಿಣಾಮವೇ, ಧಾರವಾಡದ ನುಗ್ಗಿಕೇರಿಯ ಆಂಜನೇಯ ದೇವಸ್ಥಾನದ ಎದುರು 15 ವರ್ಷಗಳಿಂದ ಹಿರೀಕರಾದ ನಬೀಸಾಬರು ಮಾರುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನು ಪುಡಿಗಟ್ಟಿದ್ದು. ಬೊಮ್ಮಾಯಿ ಅವರ ಕರ್ಮಭೂಮಿಯಲ್ಲಿ ನಡೆದ ಈ ದುಷ್ಕೃತ್ಯ ಅಮಾನವೀಯ. ಅದನ್ನು ನೋಡಿದಾಗ, ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಚಿಲಿಯ ಕವಿ ಪಾಬ್ಲೋ ನೆರೂದನ ‘ನೀವು ಕೇಳುತ್ತೀರಿ ನಾನೇಕೆ ಬರೆಯುವುದಿಲ್ಲ, ಕನಸುಗಳ ಬಗ್ಗೆ; ನೋಡಿ ಬೀದಿಯ ಮೇಲೆ ರಕ್ತವಿದೆ, ರಕ್ತವಿದೆ ಬೀದಿಯ ಮೇಲೆ’ ಎಂಬ ವಿಷಾದದ ಪ್ರಶ್ನೆಯಷ್ಟೇ ಉಳಿಯುತ್ತದೆ.

ಈ ಥರದ ಕೇಡುಗಳು ನಾಡಿನುದ್ದಕ್ಕೂ ನಡೆಯುತ್ತಲೇ ಇವೆ. ಮತಾಂಧ ಗೂಂಡಾಗಳಿಂದ ಕೊಲೆಯಾದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕವು ಬಸವಣ್ಣನವರ ಸಾಮಾಜಿಕ ತತ್ವಜ್ಞಾನವನ್ನು, ಕಲ್ಯಾಣದ ಅವಸಾನವನ್ನು ಕಟ್ಟಿಕೊಡುತ್ತದೆ. ‘ವಿಪ್ರ ಕುಲದಲ್ಲಿ ಹುಟ್ಟಿದನೆಂಬ ಹೊರೆಯ ಹೊರಿಸದಿರಯ್ಯ’ ಎನ್ನುವ ಬಸವಣ್ಣನವರು ಅಗ್ರಹಾರ ಸಂಸ್ಕೃತಿಯನ್ನು ಧಿಕ್ಕರಿಸಿ, ಶರಣ ಸಂಸ್ಕೃತಿಯನ್ನು ರೂಪಿಸಿದ ಕಥಾನಕವನ್ನು ಮರುನಿರೂಪಿಸುತ್ತದೆ. ಅಗ್ರಹಾರ ಸಂಸ್ಕೃತಿಯನ್ನು ತೊರೆದ ಬಸವಣ್ಣ ಕಾಯಕಜೀವಿಗಳ ಚಳವಳಿ ಕಟ್ಟಿ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯೂ ಆದರು. ಪ್ರಭುತ್ವವನ್ನು ನಿಯಂತ್ರಿಸುವ ಶಕ್ತಿ ಇಟ್ಟುಕೊಂಡಿದ್ದ ಅಗ್ರಹಾರ ಸಂಸ್ಕೃತಿ, ಬಿಜ್ಜಳನ ಮನಸ್ಸು ಕೆಡಿಸುತ್ತದೆ. ‘ಕಲ್ಯಾಣ’ ಕರಗಿ ಹೋಗುತ್ತದೆ. ಇದು ನಾಟಕದ ಜೀವಾಳ. ಬಸವಣ್ಣನವರು ಕೂಡ, ‘ಅರಸು– ವಿಚಾರ, ಸಿರಿಯು– ಶೃಂಗಾರ, ಸ್ಥಿರವಲ್ಲ ಮಾನವ! ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ!...’ ಎಂದು ಅಂದೇ ಹೇಳಿದ್ದರು.

ಈ ಹೊತ್ತಿನ ವಿದ್ಯಮಾನಗಳನ್ನು ನೋಡಿದರೆ, 12ನೇ ಶತಮಾನದಲ್ಲಿ ಕಲ್ಯಾಣವನ್ನು ಕುಟ್ಟಿ ಕೆಡವಿದ ವಿಕೃತಿ 21ನೇ ಶತಮಾನದಲ್ಲಿ ಮರುಕಳಿಸುತ್ತಿದೆಯೇ ಎಂದು ಭಾಸವಾಗುತ್ತಿದೆ. ಹಿಂದೂ ರಾಷ್ಟ್ರ ಕಟ್ಟುವ ಶಪಥ ಹೊತ್ತ ಆಳುವವರು, ಇಂದು ‘ಅಗ್ರಹಾರ ಸಂಸ್ಕೃತಿ’ಯ ದಾಸರಾಗಿದ್ದಾರೆ. ಸಂವಿಧಾನದತ್ತ ಹಕ್ಕನ್ನು ಪಡೆಯುವವರೆಗೆ ಶೂದ್ರರು, ಪಂಚಮರೆಂದು ಹೊರದಬ್ಬಿಸಿಕೊಂಡಿದ್ದ ಮಂದಿಯನ್ನೇ ಈ ‘ಅಗ್ರಹಾರ’ದ ಮಂದಿ ಹುರಿಗಟ್ಟಿ ಹಿಂಸೆಗೆ ದೂಡುತ್ತಿದ್ದಾರೆ. ಇತಿಹಾಸದ ಪ್ರಮಾದಗಳಿಗೆ ಪ್ರತಿಯಾಗಿ ವರ್ತಮಾನವನ್ನು ಕೊಚ್ಚಿ ಆಸ್ವಾದಿಸುತ್ತಾ ಭವಿಷ್ಯವನ್ನು ಬರ್ಬರಗೊಳಿಸುವುದು ದುಷ್ಟತನ. ಸಾವಿನ ಹೆಸರಿನಲ್ಲಿ ರಾಜಕಾರಣ ಮಾಡುವುದು ಮನುಷ್ಯತ್ವಕ್ಕೆ ಮಾಡುವ ಅಪಚಾರ. ಕೋಮು ಸಂಘರ್ಷ, ರಾಜಕಾರಣಕ್ಕಾಗಿನ ಹಿಂಸೆಗಳು ನಡೆದಾಗ ಅದನ್ನು ತಡೆಯುವ ಇಚ್ಛಾಶಕ್ತಿ ಪ್ರದರ್ಶಿಸುವುದು ಸರ್ಕಾರ ನಡೆಸುವವರಿಗೆ ಸಂವಿಧಾನ ಕೊಟ್ಟ ಬಾಧ್ಯತೆ. ಅದರ ಬದಲು ಮೌನ ವಹಿಸುವುದು ಸಂವಿಧಾನಕ್ಕೆ ಮಾಡುವ ಅಪಮಾನ.ಮಸಣದ ಮೇಲೆ ‘ಸೌಧ’ ನಿಲ್ಲಿಸುವ ಹಪಹಪಿ ಬದಲು ಮನಸ್ಸುಗಳಲ್ಲಿ ಹೂವರಳಿಸುವ ಹಂಬಲ ಆಳುವವರಿಗೆ ಬೇಕಿದೆ.

ಹೀಗೆ ಕೋಮು ವಿಷಜ್ವಾಲೆಯನ್ನು ನಾಡಿನ ಜನರ ಭಾವಕೋಶಗಳಲ್ಲಿ ತುಂಬಿ, ರಕ್ತ ಕುದಿಯುವಂತೆ ಉದ್ವಿಗ್ನಗೊಳಿಸುತ್ತಿರುವ ಮಧ್ಯೆಯೇ, ಭ್ರಷ್ಟಾಚಾರ ಕೂಡ ಕ್ಯಾನ್ಸರ್‌ನಂತೆ ವ್ಯಾಪಿಸುತ್ತಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚದ ಆರೋಪ ಸರ್ಕಾರವನ್ನು ಸುತ್ತಿಕೊಂಡಿದೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆಯೇ ಆರೋಪ‍ ಮಾಡಿದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ‘ಡಬಲ್ ಎಂಜಿನ್‌’ ಸರ್ಕಾರವನ್ನು ಮುಜುಗರಕ್ಕೆ ದೂಡಿದೆ. ಸಾಮರಸ್ಯ ಹುಡಿ ಮಾಡುವ ಕೋಮು ಸಂಘರ್ಷ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಮತ್ತೊಂದೆಡೆ, ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡುವಲ್ಲಿ ಮುತುವರ್ಜಿ ಇಲ್ಲವೆಂಬುದನ್ನು ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ತೋರಿಸಿದೆ. ಆಡಳಿತಾತ್ಮಕವಾಗಿ ಎಷ್ಟೇ ಯೋಜನೆಗಳನ್ನು ಘೋಷಿಸಿದರೂ ಇಂತಹ ಘಟನೆಗಳು ಸರ್ಕಾರದ ವರ್ಚಸ್ಸನ್ನು ಕುಗ್ಗಿಸುತ್ತಲೇ ಹೋಗುತ್ತವೆ. ‘ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ/ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ/ನುಡಿಯಲೂ ಬಾರದು, ನಡೆಯಲೂ ಬಾರದು/ಲಿಂಗದೇವನೆ ದಿಬ್ಯವೊ ಅಯ್ಯಾ’ ಎಂಬ ಬಸವಣ್ಣನವರ ನುಡಿ ಬೊಮ್ಮಾಯಿ ಅವರಿಗೆ ನೆನಪಾಗಲಿ.

ಕುರುಕ್ಷೇತ್ರ ಯುದ್ಧ ಮುಗಿದು, ಧರ್ಮರಾಯ ಸಿಂಹಾಸನಕ್ಕೆ ಏರುವ ಮುನ್ನ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರನ್ನು ಭೇಟಿ ಮಾಡಲು ಹೋದಾಗಿನ ಪ್ರಸಂಗ ಮಹಾಭಾರತದ ಶಾಂತಿಪರ್ವದಲ್ಲಿದೆ. ‘ಧರ್ಮದ ನಡವಳಿಕೆ ಹೇಗೆ’ ಎಂದು ಧರ್ಮರಾಯ ಕೇಳಿದ್ದಕ್ಕೆ ಭೀಷ್ಮ ಹೇಳಿದ್ದು ಹೀಗಿದೆ: ‘ಜನಾನುರಾಗಿ ರಾಜನಾಗಿದ್ದ ಭಕ್ತ ಪ್ರಹ್ಲಾದ ಅತ್ಯಂತ ಸುಭಿಕ್ಷ, ನೆಮ್ಮದಿಯ ಆಡಳಿತ ನೀಡುತ್ತಿದ್ದ. ಹಾಗೆಯೇ ಆತ ಮುಂದುವರಿದಿದ್ದರೆ ಒಳ್ಳೆಯ ಆಡಳಿತ ನೀಡುವವರಿಗೆ ಸಿಗುವ ‘ಇಂದ್ರ’ ಪದವಿ ದಕ್ಕುತ್ತಿತ್ತು. ತನ್ನ ಸ್ಥಾನಕ್ಕೆ ಕುತ್ತು ಬಂದೀತೆಂಬ ಭಯ ಇಂದ್ರನಿಗೆ ಶುರುವಾಯಿತು. ಹೇಗಾದರೂ ಮಾಡಿ ಪ್ರಹ್ಲಾದನ ಹೆಸರು ಹಾಳು ಮಾಡಲು ಮುಂದಾದ ಇಂದ್ರ, ಬ್ರಾಹ್ಮಣ ವೇಷ ಧರಿಸಿ ರಾಜನ ಬಳಿ ಹೋದ. ‘ಮೂರುಲೋಕದ ಒಡೆಯನಾಗಿ ಇಷ್ಟು ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದ. ‘ಧರ್ಮದ ನಡವಳಿಕೆ, ಸತ್ಯ, ಆತ್ಮಸಂಯಮ, ಇಂದ್ರಿಯ ನಿಗ್ರಹದ ಜತೆಗೆ ಜನದ್ವೇಷ ಇಲ್ಲದ ಆಡಳಿತವೇ ಕಾರಣ’ ಎಂದು ಪ್ರಹ್ಲಾದ ಹೇಳಿದ. ನಿನ್ನ ಋಜುತ್ವವನ್ನು (ಸತ್ಯ) ಕಾಪಿಟ್ಟಿರುವ ‘ಶೀಲಲಕ್ಷ್ಮಿ’ಯನ್ನು ವರವಾಗಿ ಕೊಡು ಎಂದು ಬ್ರಾಹ್ಮಣ ಕೇಳಿದ. ಅಷ್ಟೇತಾನೆ ಎಂದ ಪ್ರಹ್ಲಾದ ಅದನ್ನು ಕೊಟ್ಟ. ತಕ್ಷಣವೇ ಆತನ ದೇಹದೊಳಗಿದ್ದ ಒಂದೊಂದೇ ಪ್ರಭೆಯು ಹೊರಹೋಗತೊಡಗಿತು. ಅವನ್ನು ಕೇಳಿದಾಗ, ನಾನು ಧಾನ್ಯಲಕ್ಷ್ಮಿ, ಧೈರ್ಯಲಕ್ಷ್ಮಿ, ಗಜಲಕ್ಷ್ಮಿ, ಐಶ್ವರ್ಯಲಕ್ಷ್ಮಿ, ಜ್ಞಾನಲಕ್ಷ್ಮಿ, ವಿಜಯಲಕ್ಷ್ಮಿ ಎಂದು ಹೇಳಿ ಹೋದವು. ಎಲ್ಲವೂ ಹೋದ ಮೇಲೆ ಪ್ರಹ್ಲಾದ ಇದ್ದಿಲಿನ ರೀತಿ ಬಿದ್ದುಬಿಟ್ಟ. ‘ಸದ್ಗುಣ, ಸದ್ಭಾವ, ಸಚ್ಚಾರಿತ್ರ್ಯವನ್ನು ಪ್ರತಿನಿಧಿಸುವ ಶೀಲಲಕ್ಷ್ಮಿ ಇರುವವರೆಗಷ್ಟೇ ಉಳಿದ ಲಕ್ಷ್ಮಿಯರು ಇರುತ್ತಾರೆ. ಇದರ ಬಗ್ಗೆ ಜಾಗರೂಕನಾಗಿರು’ ಎಂದು ಭೀಷ್ಮ ಹೇಳುತ್ತಾರೆ.

ದೇಶ, ರಾಜ್ಯವನ್ನು ಆಳುತ್ತಿರುವ ಬಿಜೆಪಿಯ ಹಿಂದೆ ಸಂಘ ಪರಿವಾರದ ಸೂತ್ರವಿದೆ. ಭ್ರಷ್ಟಾಚಾರ ವಿರೋಧಿ, ಜನಕಲ್ಯಾಣ, ಸಚ್ಚಾರಿತ್ರ್ಯವೇ ನಮ್ಮ ಧ್ಯೇಯ ಎಂದು ಸಂಘದವರು ಮಧ್ಯಮ ವರ್ಗದವರನ್ನು ನಂಬಿಸಿದ್ದರು. ಈಗ ದೇಶ ನಡೆಯುತ್ತಿರುವುದನ್ನು ನೋಡಿದರೆ ಅಧಿಕಾರಾರೂಢರು, ಸಂಘದ ಕಟ್ಟಾಳುಗಳು ಶೀಲಲಕ್ಷ್ಮಿಯನ್ನು ಹೊರಗಟ್ಟಿದಂತೆ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT