ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬದುಕು ಭಕ್ಷಿಸುವ ಅಭಿವೃದ್ಧಿ ಮಾಯೆ

ಪಾರಂಪರಿಕ ವಿವೇಕದ ಮರೆವು, ವಿಜ್ಞಾನದ ಅವಗಣನೆ ಹಾಗೂ ಧ್ವಂಸಗೊಳ್ಳುತ್ತಿರುವ ಸಂವಿಧಾನದ ಆಶಯ
Last Updated 8 ಅಕ್ಟೋಬರ್ 2021, 21:00 IST
ಅಕ್ಷರ ಗಾತ್ರ

ಗೋಡೆಯ ಮೇಲಣ ಬರಹ ಸ್ಪಷ್ಟವಾಗಿದೆ. ಪರಿಸರ ವಿಜ್ಞಾನಿಗಳು ಹಾಗೂ ಸಮಾಜಮುಖಿ ಚಿಂತಕರು ಈವರೆಗೆ ಹೇಳುತ್ತಿದ್ದ ‘ಪರಿಸರನಾಶವು ನಮ್ಮನ್ನು ವಿನಾಶಕ್ಕೆ ಒಯ್ಯುತ್ತಲಿದೆ’ ಎಂಬ ಮಾತನ್ನು, ಇದೀಗ ಅರ್ಥಶಾಸ್ತ್ರಜ್ಞರೇ ಖಚಿತವಾಗಿ ಹೇಳುತ್ತಿದ್ದಾರೆ. ಅಂತರ ರಾಷ್ಟ್ರೀಯ ಮಾನ್ಯತೆಯ ‘ಕಾರ್ಬನ್ ಡಿಸ್‌ಕ್ಲೋಸರ್ ಪ್ರಾಜೆಕ್ಟ್’ (ಸಿ.ಡಿ.ಪಿ.) ಸಂಸ್ಥೆಯ ಅರ್ಥಶಾಸ್ತ್ರಜ್ಞರ ಅಧ್ಯಯನ ವರದಿಯು ಇತ್ತೀಚೆಗೆ ಪ್ರಕಟವಾಗಿದೆ. ಅದರ ಪ್ರಕಾರ, ನಮ್ಮ ದೇಶದ ಒಟ್ಟೂ ತಲಾದಾಯದ ಶೇ 12.7ರಷ್ಟು ಹವಾಮಾನ ಬದಲಾವಣೆಯ ಪರಿಣಾಮ ವಾಗಿ ಈಗಾಗಲೇ ನಷ್ಟವಾಗುತ್ತಿದೆ ಹಾಗೂ ಪ್ರಕೃತಿ ವಿಕೋಪದಿಂದಾಗಿ ಮುಂದಿನ ಐದು ದಶಕಗಳ ಕಾಲ ಒಟ್ಟೂ ಆದಾಯದ ಕನಿಷ್ಠ ಶೇ 5.5ರಷ್ಟು ಪ್ರತಿವರ್ಷ ಕುಸಿಯಲಿದೆ.

ನಮ್ಮ ಆರ್ಥಿಕತೆಯ ಮೂಲಸ್ತಂಭಗಳಾದ ಕೃಷಿ (ಶೇ 20), ಕೈಗಾರಿಕೆ (ಶೇ 26) ಹಾಗೂ ಸೇವಾಕ್ಷೇತ್ರ (ಶೇ 54) ಎಲ್ಲವೂ ನಷ್ಟ ಅನುಭವಿಸಲಿವೆ ಎಂಬುದನ್ನು ನೀತಿ ಆಯೋಗವೂ ಒಪ್ಪಿದೆ. ಅಂದರೆ, ಸರ್ಕಾರವು ಸಾಧಿಸಲು ಯತ್ನಿಸುತ್ತಿರುವ ವೇಗದ ಆರ್ಥಿಕ ಅಭಿವೃದ್ಧಿ ದರದ ಆಶಯಗಳೆಲ್ಲವೂ ನೆರೆ-ಬರ, ಭೂಕುಸಿತ, ಸಾಂಕ್ರಾಮಿಕಗಳು, ಸಿಹಿನೀರಿನ ಕೊರತೆ, ತಾಪಮಾನ ಹೆಚ್ಚಳ, ಬಿಸಿಗಾಳಿಯಂತಹ ಪ್ರಾಕೃತಿಕ ವಿಕೋಪಗಳೆದುರು ಕರಗಿಹೋಗುತ್ತಿವೆ. ನಿಸರ್ಗನಾಶದ ಪರಿಣಾಮವನ್ನು ದಕ್ಕಿಸಿಕೊಂಡೂ ಆರ್ಥಿಕವಾಗಿ ಬೆಳೆಯಬಹುದೆಂಬ ಭ್ರಮೆಯ ಬಲೂನುಗಳು ಒಡೆಯುತ್ತಿವೆ!

ಕಳೆದ ಮೂರು ದಶಕಗಳಲ್ಲಾದ ಸಾಮಾಜಿಕ- ಆರ್ಥಿಕ ವಿಪ್ಲವಗಳನ್ನು ಬಲ್ಲ ಯಾರಿಗೂ ಅರ್ಥ
ಶಾಸ್ತ್ರಜ್ಞರ ಈ ಎಚ್ಚರ ಆಶ್ಚರ್ಯ ಉಂಟುಮಾಡುತ್ತಿಲ್ಲ. ನೈಸರ್ಗಿಕ ಸಂಪನ್ಮೂಲಗಳ ಚಲನೆಯ ಚಕ್ರೀಯ ವ್ಯವಸ್ಥೆಗಳನ್ನು ಮುರಿಯುತ್ತ, ನಿಸರ್ಗದ ಧಾರಣಾ ಸಾಮರ್ಥ್ಯವನ್ನೂ ಮೀರಿ ಆರ್ಥಿಕತೆ ಬೆಳೆಯತೊಡಗಿ ದಶಕಗಳೇ ಕಳೆದಿವೆ. ಬಹು ಆಯಾಮಗಳ ಸಂಶೋಧನೆಗಳು ಇವನ್ನು ದಾಖಲಿಸುತ್ತಲೇ ಇವೆ. ಅವುಗಳ ಆಧಾರದಲ್ಲಿ, ಪರಿಸರನಾಶವನ್ನು ತಗ್ಗಿಸುವ ಹಲವು ಜಾಗತಿಕ ಒಪ್ಪಂದ ಗಳು ಹಾಗೂ ರಾಷ್ಟ್ರೀಯ ಕಾನೂನುಗಳು ಜಾರಿಗೆ ಬಂದಿವೆ. ಆದರೆ, ಆ ಸುಸ್ಥಿರ ಅಭಿವೃದ್ಧಿ ಆಶಯಗಳ ನ್ನೆಲ್ಲ ಯೋಜನೆಗಳ ತಳಮಟ್ಟದ ಅನುಷ್ಠಾನದಲ್ಲಿ ಅಳವಡಿಸಲು ಬೇಕಾದ ಶ್ರದ್ಧೆ ಹಾಗೂ ಕಾರ್ಯತಂತ್ರ
ಗಳು ಸರ್ಕಾರಿ ಯಂತ್ರದಲ್ಲಿ ಕಳೆದುಹೋಗಿವೆ. ಅದನ್ನು ಎಚ್ಚರಿಸಲು ಪ್ರಯತ್ನಿಸಬೇಕಿದ್ದ ನಾಗರಿಕ ಜಗತ್ತು ಹಾಗೂ ಮಾಧ್ಯಮಗಳ ನೈಜ ಧ್ವನಿಗಳು ಸಹ, ಆರ್ಥಿಕ ಉದಾರೀಕರಣ ತಂದಿಡುತ್ತಿರುವ ಭೋಗಸಂಸ್ಕೃತಿಯಲ್ಲಿ ಉಡುಗಿಹೋಗುತ್ತಿವೆ. ಜನಸಾಮಾನ್ಯರಾದರೋ ಅತ್ತ ನಿಸರ್ಗಸ್ನೇಹಿ ಜೀವನದ ಪಾರಂಪರಿಕ ಮೌಲ್ಯಗಳನ್ನೂ ಕಳೆದುಕೊಂಡು, ಇತ್ತ ವಾಸ್ತವ ಎದುರಿಸಲು ಬೇಕಿರುವ ಹೊಸ ಜ್ಞಾನಶಿಸ್ತಿಗೂ ತೆರೆದುಕೊಳ್ಳದೆ ತ್ರಿಶಂಕುಗಳಾ
ಗುತ್ತಿದ್ದಾರೆ.

ಸಮಾಜ, ಶೈಕ್ಷಣಿಕ ಜಗತ್ತು ಹಾಗೂ ಸರ್ಕಾರ- ಈ ಮೂರೂ ಬೆಪ್ಪುಬಡಿದಂತೆ ಏಕಮುಖಿ ಮಾರುಕಟ್ಟೆ ಆರ್ಥಿಕತೆ ಪ್ರವಾಹದಲ್ಲಿ ತೇಲಿಹೋಗುತ್ತಿರುವುದರ ಕುರಿತು ಚಿಂತಿಸಲೇಬೇಕಾದ ಜರೂರತ್ತಿದೆ ಈಗ.

ಭಾರತೀಯ ಸಮಾಜವನ್ನು ಸಹಸ್ರಾರು ವರ್ಷಗಳಿಂದ ಪೊರೆದಿರುವುದು, ನಿಸರ್ಗವನ್ನು ಹಿತಮಿತವಾಗಿ ಬಳಸಿ ಬದುಕು ಕಟ್ಟಿಕೊಳ್ಳುವ ಪ್ರಕೃತಿ ಆರಾಧನೆಯ ಪಾರಂಪರಿಕ ಮೌಲ್ಯ ಹಾಗೂ ವಿವೇಕ. ಆದರೆ, ಆರ್ಥಿಕತೆಯ ಉದಾರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಈವರೆಗಿದ್ದ ಕೌಟುಂಬಿಕ- ಸಾಮಾಜಿಕ ನಿಸರ್ಗಸ್ನೇಹಿ ಮೌಲ್ಯಗಳು ವೇಗವಾಗಿ ಕರಗುತ್ತಿವೆ. ಇಲ್ಲವಾದಲ್ಲಿ, ಕರಾವಳಿಯ ಅಳಿವೆ-ಸಮುದ್ರಗಳಲ್ಲಿ ಬೃಹತ್ ಯಾಂತ್ರೀಕೃತ ದೋಣಿ ಬಳಸಿ ಮೀನುಗಳನ್ನೆಲ್ಲ ಒಮ್ಮೆಲೇ ಹಿಡಿಯುವ ದುರಾಸೆಗೆ ಉದ್ಯಮಿಗಳು ಮುಂದಾ ಗುತ್ತಿದ್ದರೆ? ಮಲೆನಾಡಿನ ದೇವರಕಾಡನ್ನು ಅತಿಕ್ರಮಿಸಿ ಮರ ಕಡಿದು ನೆಡುತೋಪು ಬೆಳೆಸುವ ವಿದ್ಯಮಾನ ವ್ಯಾಪಕವಾಗುತ್ತಿತ್ತೇ? ಬಯಲುನಾಡಿನ ನೀರಿನ ಕಣಜ ಗಳಾದ ಕೆರಯಂಗಳಗಳು ವಾಣಿಜ್ಯ ಸೈಟುಗಳಾಗುತ್ತಿದ್ದವೇ? ನದಿ-ಕೆರೆ, ಗಿಡ-ಮರ, ನೆಲ-ಕಾಡನ್ನೆಲ್ಲ ಪೂಜಿಸು ತ್ತಿದ್ದ ಪರಂಪರೆಯ ವಿವೇಕವೆಲ್ಲ, ಹೊಸ ತಲೆಮಾರಿನಲ್ಲಿ ವಿಸ್ಮೃತಿಗೆ ಜಾರುತ್ತಿರುವುದರ ಪರಿಣಾಮವಿದು.

ಹಳೆಯ ಮೌಲ್ಯಗಳೇನೋ ಮರೆಯಾದವು. ಆದರೆ, ವಿಜ್ಞಾನ ಕಟ್ಟಿಕೊಡುತ್ತಿರುವ ಆಧುನಿಕ ಜ್ಞಾನವಾದರೂ ಬದುಕನ್ನು ಪುನರ್‌ಕಟ್ಟಿಕೊಳ್ಳಲು ದಾರಿ ತೋರಬೇಕಿತ್ತು. ಜನಸಾಮಾನ್ಯರ ಬದುಕು ಹಾಗೂ ಆಡಳಿತ ನೀತಿಗೆ ಅವನ್ನು ತಲುಪಿಸುವ ಕಾರ್ಯವನ್ನು ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರಗಳು ಮಾಡಬೇಕಿತ್ತು. ಆದರೆ, ಈ ಕುರಿತ ಬಹುತೇಕ ಸಂಶೋಧನೆಗಳೆಲ್ಲ ಸೀಮಿತ ವೈಜ್ಞಾನಿಕ ವಲಯಗಳಲ್ಲಿ ಅಥವಾ ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸು
ಗಳಲ್ಲಿ ಬಂದಿಯಾಗುತ್ತಿವೆ.

ನಿಷೇಧಿತ ಕ್ರಿಮಿನಾಶಕಗಳನ್ನು ಬಳಸಬಾರದೆಂದೋ ಅಂತರ್ಜಲ ಕುಸಿದ ಪ್ರದೇಶಗಳಲ್ಲಿ ಕೊಳವೆಬಾವಿಗಳಿಗೆ ಮಿತಿಯಿರಬೇಕೆಂದೋ ಮಲೆನಾಡಿನಂಚಿನ ಕಣಿವೆಗಳಲ್ಲಿ ಕಾಡು ಕಡಿದು, ಲಂಬವಾಗಿ ಗುಡ್ಡ ಕಡಿದು ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಿಸಬಾರದೆಂದೋ ಗಟ್ಟಿ ದನಿಯಲ್ಲಿ ಎಚ್ಚರಿಸಬೇಕಿದ್ದ ಸ್ವತಂತ್ರ ಶೈಕ್ಷಣಿಕ ವಲಯವೇ ಇಲ್ಲವಾಗು ತ್ತಿದೆ. ಅರಣ್ಯ ಹಾಗೂ ಪರಿಸರದ ಸುಸ್ಥಿರ ನಿರ್ವಹಣೆ ಸಾಧಿಸುವ ಉದ್ದೇಶದ ವಿವಿಧ ಸರ್ಕಾರಿ ತಜ್ಞ ಸಮಿತಿಗಳು, ಕಾರ್ಯಪಡೆಗಳು, ಸಲಹಾ ಸಮಿತಿಗಳೆಲ್ಲ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ವೈಜ್ಞಾನಿಕ ತತ್ವಗಳ ಆಧಾರದಲ್ಲಿಯೇ ಹಲವು ಹಂತಗಳಲ್ಲಿ ರೂಪಿತವಾಗಿರುವ ಸರ್ಕಾರಿ ನಿಯಮಗಳನ್ನೆಲ್ಲ ನುಸುಳಿ, ಮಾಲಿನ್ಯಕಾರಕ ಕೈಗಾರಿಕೆ ಗಳು ಹಾಗೂ ಉದ್ದಿಮೆಗಳು ಹೆಚ್ಚುತ್ತಲೇ ಇವೆಯೆಂದರೆ, ಏನರ್ಥ? ಸರ್ಕಾರ ಹಾಗೂ ಸಮಾಜದ ವಿವೇಕ ಕಾಯಬೇಕಿದ್ದ ದೇಶದ ಬೌದ್ಧಿಕಲೋಕಕ್ಕೇ ಮಂಕು ಬಡಿಯುತ್ತಿದೆ!

ಇನ್ನು ಸಂವಿಧಾನದ ತತ್ವಗಳ ಆಧಾರದಲ್ಲಿ ಭವಿಷ್ಯದ ನೀತಿ-ನಿಯಮ ರೂಪಿಸಬೇಕಾದ ಸರ್ಕಾರದ ಶಾಸಕಾಂಗ ಹಾಗೂ ಕಾರ್ಯಾಂಗ. ಪ್ರತಿಯೋರ್ವರಿಗೂ ಶುದ್ಧ ಗಾಳಿ, ಶುಚಿಯಾದ ಕುಡಿಯುವ ನೀರು, ಸುಸ್ಥಿರ ನೆಲೆಯನ್ನು ಒದಗಿಸುವ ಹಾಗೂ ಪರಿಸರ ಸುರಕ್ಷತೆ ಕಾಪಾಡುವ ಹೊಣೆಯನ್ನು ಮೂಲಭೂತ ಹಕ್ಕು ಹಾಗೂ ಕರ್ತವ್ಯ
ಗಳಲ್ಲಿ ಸಂವಿಧಾನವೇ ಗುರುತಿಸಿದೆ. ಯೋಜನೆಯೊಂದರ ಅನುಷ್ಠಾನದಲ್ಲಿ ಅದರ ಭವಿಷ್ಯದ ಪರಿಣಾಮದ ಕುರಿತು ಮುನ್ನೆಚ್ಚರಿಕೆ ವಹಿಸುವುದು, ಅಪಾಯ ತಡೆಗಟ್ಟುವುದು, ಮಾಲಿನ್ಯ ಉಂಟುಮಾಡುವವರೇ ಅದನ್ನು ತಡೆಗಟ್ಟಲೂ ಪ್ರಯತ್ನಿಸುವುದು, ಸುಸ್ಥಿರ ಅಭಿವೃದ್ಧಿ ಸಾಧಿಸುವುದು- ಈ ಎಲ್ಲ ತತ್ವಗಳ ಆಧಾರದಲ್ಲಿಯೇ ನಮ್ಮೆಲ್ಲ ಕಾನೂನುಗಳು ಹಾಗೂ ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಸಂವಿಧಾನದಡಿಯಲ್ಲಿ ಕೆಲಸ ಮಾಡುವ ಶಾಸಕಾಂಗ ಮತ್ತು ಕಾರ್ಯಾಂಗ ಮಾತ್ರ ತಮ್ಮ ಹೊಣೆಗಾರಿಕೆ ಕೈಬಿಡುವ ಸಂದರ್ಭಗಳೇ ಹೆಚ್ಚುತ್ತಿವೆ.

ಇಂದಿನ ವಿದ್ಯಮಾನಗಳನ್ನೇ ಒಮ್ಮೆ ಗಮನಿಸಿ. ಕಾರವಾರದಲ್ಲಿ ಉಳಿದಿರುವ ಏಕೈಕ ಸಮುದ್ರತೀರವನ್ನು ಮೀನುಗಾರರು ಹಾಗೂ ಸ್ಥಳೀಯರ ಒಕ್ಕೊರಲ ವಿರೋಧದ ಹೊರತಾಗಿಯೂ ವಾಣಿಜ್ಯ ಬಂದರಿನ ನಿರ್ಮಾಣಕ್ಕಾಗಿ ಸರ್ಕಾರ ನೀಡುತ್ತಿದೆ.ರಾಜ್ಯದೆಲ್ಲೆಡೆ ಬಹಳಷ್ಟು ಕ್ವಾರಿಗಳು ಸಂಪೂರ್ಣವಾಗಿ ಅಕ್ರಮವೆಂದು ನಿರೂಪಿತವಾಗಿದ್ದರೂ ಸರ್ಕಾರ ಅವನ್ನು ನಿಲ್ಲಿಸುತ್ತಿಲ್ಲ. ಕಾಡು ಹಾಗೂ ಸಾಮೂಹಿಕ ಭೂಮಿಗಳನ್ನು ಬಲಾಢ್ಯರು ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದರೂ ಅಧಿಕಾರ ರಾಜಕಾರಣ ಅದನ್ನು ತಡೆಯುತ್ತಿಲ್ಲ. ಹೊಳೆ-ಕೆರೆ, ಅರಣ್ಯ, ಗೋಮಾಳ ಇತ್ಯಾದಿ ಸಾಮೂಹಿಕ ಆಸ್ತಿಯನ್ನು ಸ್ಥಳೀಯರ ಸಹಭಾಗಿತ್ವದಲ್ಲಿ ನಿರ್ವಹಿಸುವ ತಳಮಟ್ಟದ ಆಡಳಿತ ವ್ಯವಸ್ಥೆಯನ್ನು ಪೋಷಿಸಲು ಚುನಾವಣಾ ರಾಜಕೀಯ ಬಿಡುತ್ತಿಲ್ಲ!

ಸೌರ ವಿದ್ಯುತ್, ಸುಸ್ಥಿರ ತ್ಯಾಜ್ಯ ನಿರ್ವಹಣೆ, ಜಲಾ ನಯನ ಅಭಿವೃದ್ಧಿ, ಮಳೆನೀರು ಸಂಗ್ರಹ, ಕೃಷಿಅರಣ್ಯ, ಸಾವಯವ ಕೃಷಿ- ಇತ್ಯಾದಿ ಹಲವು ಬಗೆಯ ವಿಕೇಂದ್ರೀಕೃತ ಮತ್ತು ಪರಿಸರಸ್ನೇಹಿ ಅಭಿವೃದ್ಧಿ ಮಾರ್ಗಗಳು ಲಭ್ಯವಿದ್ದಾಗ್ಯೂ ಕೇಂದ್ರೀಕೃತ ಹಾಗೂ ಗುತ್ತಿಗೆದಾರರನ್ನು ಓಲೈಸುವ ಬೃಹತ್ ಕಾಮಗಾರಿ ಯೋಜನೆಗಳಿಗೇ ಸರ್ಕಾರ ಮಣೆಹಾಕುತ್ತಿದೆ. ಈ ಕುರಿತು ಧ್ವನಿಯೆತ್ತುವವರನ್ನೆಲ್ಲ ‘ಪರಿಸರವ್ಯಾಧಿಗಳು’ ಎಂದು ಸಾರ್ವಜನಿಕವಾಗಿ ದೂಷಿಸುವ ಹಂತಕ್ಕೂ ಜನರಿಂದಲೇ ಆಯ್ಕೆಯಾದ ಕೆಲವು ಅಧಿಕಾರಸ್ಥರು ಬೆಳೆದು ನಿಂತಿದ್ದಾರೆ! ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನಾಡು ತಲುಪಿರುವ ಅವಸ್ಥೆ ತೋರಬಲ್ಲ ಕೈಗನ್ನಡಿಯಿದು.

ಅರಣ್ಯ ಮತ್ತು ಪರಿಸರದ ಸುಸ್ಥಿರ ನಿರ್ವಹಣೆಯು ಈ ಕಾಲದ ತುರ್ತು ಅಗತ್ಯ. ಇದನ್ನೇ ಹೀಗಳೆಯುವ ‘ಅಭಿವೃದ್ಧಿ ಮಾಯೆ’ಯ ಹಿಂದಿನ ಅಧಿಕಾರ ರಾಜಕಾರಣ ಹಾಗೂ ಮಾರುಕಟ್ಟೆ ಆರ್ಥಿಕತೆಯ ಆಮಿಷಗಳನ್ನು ಗುರುತಿಸತೊಡಗಿದರೆ, ಮುಂದಣ ದಾರಿ ತೋರೀತು.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ
ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT