ಮಂಗಳವಾರ, ಏಪ್ರಿಲ್ 20, 2021
27 °C
‘ಮೊದಲು ರಾಮ, ನಂತರ ಬಾಮ’ ಎನ್ನುತ್ತಿವೆ ಸಿಪಿಎಂ ಬಣಗಳು

ವಿಶ್ಲೇಷಣೆ: ಮಮತಾ; ಕೋಮುವಾದ, ಕಮ್ಯುನಿಸಂ ದ್ವೇಷಿ

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಈ ಪ್ರಸಂಗ ನಡೆದಿದ್ದು ಇಪ್ಪತ್ತು ವರ್ಷಗಳ ಹಿಂದೆ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಾನು ಪ್ರಧಾನಮಂತ್ರಿಯವರ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ. ಅಂದಿನ ಎನ್‌ಡಿಎ ಮೈತ್ರಿಕೂಟದ ಮುಖ್ಯ ‍ಪಾಲುದಾರ ಆಗಿದ್ದ ಟಿಎಂಸಿ ಜೊತೆ ಸಮನ್ವಯ ಸಾಧಿಸಲು ನಾನು ವಾಜಪೇಯಿ ಅವರ ಮುಖ್ಯ ದೂತ ಆಗಿದ್ದೆ. ಕೆಲಸದ ಭಾಗವಾಗಿ ಕೋಲ್ಕತ್ತಕ್ಕೆ ಆಗಾಗ ಹೋಗಿಬರುತ್ತಿದ್ದೆ.

‘ಕೋಲ್ಕತ್ತದಲ್ಲಿನ ಕಾಳಿ ಮಂದಿರಕ್ಕೆ ಹೋಗಿದ್ದೀರಾ?’ ಎಂದು ಅವರು ನನ್ನಲ್ಲಿ ಕೇಳಿದರು. ‘ಇಲ್ಲ’ ಎಂದೆ. ‘ಕಾಳಿ ದರ್ಶನ ಇಲ್ಲದೆ ವಾಪಸ್ ಹೇಗೆ ಹೋಗುತ್ತೀರಿ? ನಾನು ನಿಮ್ಮನ್ನು ನಾಳೆ ಅಲ್ಲಿಗೆ ಕರೆದೊಯ್ಯುವೆ’ ಎಂದು ಅವರು ತಿಳಿಸಿದರು. ಆ ಸಂದರ್ಭದಲ್ಲಿ ದೇಶದ ರೈಲ್ವೆ ಸಚಿವೆ ಆಗಿದ್ದ ಅವರು ಮಾರನೆಯ ದಿನ ಬೆಳಿಗ್ಗೆ 4 ಗಂಟೆಗೆ ನನ್ನನ್ನು ಕಾಳಿ ಮಂದಿರಕ್ಕೆ ಕರೆದೊಯ್ದರು. ‘ಕಾಳಿ ಮಾತೆಗೆ ಪೂಜೆ ಸಲ್ಲಿಸಲು ಇದು ಪ್ರಶಸ್ತ ಸಮಯ’ ಎಂದು ಹೇಳಿದರು. ಪಶ್ಚಿಮ ಬಂಗಾಳದ ಬಹುದೊಡ್ಡ ನಾಯಕಿಯೂ ಆಗಿರುವ ಅವರ ಹೆಸರು ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಇದೇ ಮಮತಾ ಅವರನ್ನು ವಾಜಪೇಯಿ ಅವರ ಪಕ್ಷವೇ ಹಿಂದೂ ವಿರೋಧಿ ಎಂದು ಕರೆಯುತ್ತಿದೆ.

ಬಿಜೆಪಿಯಲ್ಲಿದ್ದ ಅವಧಿಯಲ್ಲಿ (2012ರಲ್ಲಿ ಬಿಜೆಪಿ ತೊರೆದೆ) ನಾನು ಬೇರೆ ಯಾವ ನಾಯಕರಿಗಿಂತಲೂ ಹೆಚ್ಚು ನಿಕಟವಾಗಿ ಮಮತಾ ಜೊತೆ ಒಡನಾಡಿದ್ದೇನೆ. ಆಕೆ ಶ್ರದ್ಧಾವಂತ ಹಿಂದೂ, ಬಂಗಾಳ ಕಂಡ ಅತ್ಯುನ್ನತ ಆಧ್ಯಾತ್ಮಿಕ ನಾಯಕರಾದ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಪರಂಪರೆಯಲ್ಲಿ ಬೆಳೆದಿರುವವರು ಎಂಬ ಮಾತನ್ನು ಅಳುಕಿಲ್ಲದೆ ಹೇಳಬಲ್ಲೆ. ಅವಿಭಜಿತ ಬಂಗಾಳದ ಅತ್ಯುನ್ನತ ಕವಿಗಳಾದ ಗುರುದೇವ ರವೀಂದ್ರನಾಥ ಟ್ಯಾಗೋರ್‌ ಮತ್ತು ವಿದ್ರೋಹಿ ಕವಿ ಕಾಜಿ ನಜರುಲ್ ಇಸ್ಲಾಂ ಅವರ ಸರ್ವಧರ್ಮ ಸಮನ್ವಯದ, ಧರ್ಮನಿರಪೇಕ್ಷ ಪರಂಪರೆಯವರು ಕೂಡ ಹೌದು ಮಮತಾ.

ಬಂಗಾಳದ ರಾಜಕೀಯ ವಾತಾವರಣವನ್ನು ತಿಳಿಯಲು ಇಲ್ಲಿಗೆ ಬಂದಿರುವ ಕಾರಣ ನಾನು ಮಮತಾ ಅವರ ಬಗ್ಗೆ ಬರೆಯಲು ತೀರ್ಮಾನಿಸಿದೆ. ಇದು ನನ್ನ ಅಂದಾಜು: ಮುಂದಿನ ಎರಡು ತಿಂಗಳುಗಳಲ್ಲಿ ಊಹಿಸಲಾಗದ್ದು ಏನೂ ನಡೆಯದಿದ್ದರೆ ಜನ ಮಮತಾ ಅವರನ್ನು ಸತತ ಮೂರನೆಯ ಬಾರಿಗೆ ಅಧಿಕಾರಕ್ಕೆ ತರುತ್ತಾರೆ. ಆಕ್ರಮಣಕಾರಿ ಅಭಿಯಾನದ ಕಾರಣದಿಂದಾಗಿ ಬಿಜೆಪಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲಿದೆ.

ಬಂಗಾಳದ ಕೋಟೆಯನ್ನು ಒಡೆದು ಮುನ್ನುಗ್ಗುವ ಬಯಕೆ ಬಹುಕಾಲದಿಂದ ಬಿಜೆಪಿಯಲ್ಲಿದೆ. ಅಷ್ಟಕ್ಕೂ, ಭಾರತೀಯ ಜನಸಂಘದ (ಬಿಜೆಪಿಯ ಹಿಂದಿನ ಅವತಾರ) ಸಂಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ಜನಿಸಿದ್ದು ಬಂಗಾಳದಲ್ಲಿ. 2014ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳದಲ್ಲಿ ಎರಡು ಸ್ಥಾನ ಗಳಿಸಿದ್ದ ಬಿಜೆಪಿ 2019ರಲ್ಲಿ 18 ಸ್ಥಾನ ಪಡೆಯಿತು. ಆಗ ಬಂಗಾಳದಲ್ಲಿ ತಾನು ಸರ್ಕಾರ ರಚಿಸಬಹುದು ಎಂಬ ವಿಶ್ವಾಸ ಬಿಜೆಪಿಯಲ್ಲಿ ಹೆಚ್ಚಿತು. ಬಿಜೆಪಿಯ ಮತಗಳಿಕೆ ಪ್ರಮಾಣ (ಶೇ 40ರಷ್ಟು) ಟಿಎಂಸಿಯ (ಶೇ 43ರಷ್ಟು) ಮತಗಳಿಕೆ ಪ್ರಮಾಣಕ್ಕೆ ಹತ್ತಿರವಾಗಿತ್ತು. ಇದಾದ ನಂತರ, ಮಮತಾ ಅವರನ್ನು ಅಧಿಕಾರದಿಂದ ಇಳಿಸಲು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆ ಪಣಕ್ಕಿಟ್ಟರು.

ಆದರೆ, ನಾಲ್ಕು ಕಾರಣಗಳಿಂದಾಗಿ ಅವರು ಇದರಲ್ಲಿ ಯಶಸ್ಸು ಕಾಣಲಾರರು. ಮೊದಲನೆಯದು, ಬಂಗಾಳದ ಜನ ಕೋಲ್ಕತ್ತದಲ್ಲಿ ಸರ್ಕಾರದ ಮುಖ್ಯಸ್ಥರು ಯಾರಾಗಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆಯೇ ವಿನಾ ಭಾರತದ ಪ್ರಧಾನಿ ಯಾರಾಗಬೇಕು ಎಂಬುದನ್ನಲ್ಲ. ವಿಧಾನಸಭೆ ಹಾಗೂ ಲೋಕಸಭೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವಷ್ಟು ಮತದಾರರು ಪ್ರಬುದ್ಧರಿದ್ದಾರೆ. ಮಮತಾ ಅವರ ಜನಪ್ರಿಯತೆ, ಚರಿಷ್ಮಾದ ಹತ್ತಿರಕ್ಕೆ ಬರುವ ನಾಯಕರು ಬಿಜೆಪಿಗೆ ಬಂಗಾಳದಲ್ಲಿ ಇಲ್ಲ. ಮಮತಾ ಅವರ ಸರಳತೆ, ವೈಯಕ್ತಿಕವಾಗಿ ಭ್ರಷ್ಟಾಚಾರದಿಂದ ದೂರ ಇರುವುದು, ಸಾಮಾನ್ಯರ ನಡುವೆ ದಣಿವರಿಯದೆ ದುಡಿಯುವ ಅವರ ಗುಣವನ್ನು ಟೀಕಾಕಾರರೂ ಮೆಚ್ಚುತ್ತಾರೆ.

ಎರಡನೆಯದು, ಶೇ 27ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದಲ್ಲಿ ಹಿಂದೂ ಮತಬ್ಯಾಂಕ್ ಗಟ್ಟಿಗೊಳಿಸುವ ಹಿಂದುತ್ವದ ಅಜೆಂಡಾ ಮೇಲೆ ಬಿಜೆಪಿಯ ಅಭಿಯಾನ ಕೇಂದ್ರೀಕೃತ ಆಗಿದೆ. ಹಾಗಾಗಿ, ‘ಜೈ ಶ್ರೀರಾಮ್‌’ ಘೋಷಣೆಯನ್ನು ಬಿಜೆಪಿ ತನ್ನ ಅಭಿಯಾನದ ಮುಖ್ಯ ಘೋಷಣೆಯಾಗಿಸಿಕೊಂಡಿದೆ. ಟಿಎಂಸಿ ಕುರಿತ ವಿರೋಧದ ಕಾರಣದಿಂದಾಗಿ ಸಿಪಿಎಂನ ಕೆಲವು ಬಣಗಳು ಬಿಜೆಪಿಯನ್ನು ಬೆಂಬಲಿಸುತ್ತಿವೆ. ಅವರ ತರ್ಕ ಹೀಗಿದೆ: ‘ಮೊದಲು ರಾಮ, ನಂತರ ಬಾಮ’ (‘ಬಾಮ’ ಅಂದರೆ ಇಲ್ಲಿ ‘ವಾಮ’, ಅಂದರೆ ಎಡಪಂಥ ಎಂಬ ಅರ್ಥವಿದೆ). ‘ಮಮತಾ ಅವರು ಹಿಂದೂ ವಿರೋಧಿ ಹಾಗೂ ಮುಸ್ಲಿಂ ಪರ ಎಂದು ಬಿಂಬಿಸಲು, ಮಮತಾ ನೇತೃತ್ವದ ಸರ್ಕಾರವು ದುರ್ಗಾ ಪೂಜೆ ಮತ್ತು ಸರಸ್ವತಿ ಪೂಜೆಗೆ ರಾಜ್ಯದಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಅಮಿತ್ ಶಾ ಆರೋಪಿಸುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು’ ಎಂದು ಪ್ರೊ. ಸುಗತ ಬೋಸ್ ನನ್ನಲ್ಲಿ ಹೇಳಿದರು. ಬೋಸ್ ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಹೆಸರಾಂತ ಇತಿಹಾಸಕಾರ.

ಅದೇ ರೀತಿ ಮೋದಿ ಅವರು ಈಚೆಗೆ ಒಂದು ರ್‍ಯಾಲಿಯಲ್ಲಿ, ‘ಬಂಕಿಮ ಚಂದ್ರ ಚಟರ್ಜಿ ಅವರು ವಂದೇ ಮಾತರಂ ಗೀತೆ ಬರೆದ ಮನೆ ಈಗ ಶೋಚನೀಯ ಸ್ಥಿತಿಯಲ್ಲಿದೆ’ ಎಂದು ಅಸತ್ಯ ನುಡಿದರು. ಅವರು ಇದನ್ನು ಮಮತಾ ಅವರ ಮುಸ್ಲಿಂ ತುಷ್ಟೀಕರಣ ನೀತಿಗೆ ಉದಾಹರಣೆ ಎಂಬಂತೆ ಹೇಳಿದರು. ಆದರೆ, ಬಂಕಿಮ ಚಂದ್ರ ಅವರ ಮನೆಯನ್ನು ವಸ್ತುಸಂಗ್ರಹಾಲಯವಾಗಿಸಿ, ಅತ್ಯುತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಹೇಳುವ ಚಿತ್ರಗಳನ್ನು ಬಂಗಾಳದ ಪತ್ರಿಕೆಗಳು ಪ್ರಕಟಿಸಿದವು.

ಮೂರನೆಯದು, ಬಿಜೆಪಿಯು ಅಭಿಯಾನದಲ್ಲಿ ಜನರ ಮುಂದೆ ತೋರಿಸುತ್ತಿರುವುದು ಶಾ ಮತ್ತು ಮೋದಿ ಅವರನ್ನು ಮಾತ್ರ. ಬಿಜೆಪಿ ಜಯ ಗಳಿಸಿದರೆ ರಾಜ್ಯವನ್ನು ‘ಹೊರಗಿನವರು ಆಳುತ್ತಾರೆ, ಪ್ರಧಾನಿ ಕಚೇರಿಯಲ್ಲಿ ಹಾಗೂ ಗೃಹ ಸಚಿವಾಲಯದಲ್ಲಿ ಅದರ ರಿಮೋಟ್ ಕಂಟ್ರೋಲ್ ಇರುತ್ತದೆ ಎಂಬ ಭಾವನೆ ಬಂಗಾಳಿಗರಲ್ಲಿ ಬೆಳೆಯುತ್ತಿದೆ. ‘ಇದು ಬಂಗಾಳದ ಹೆಮ್ಮೆಯ ಪ್ರಶ್ನೆ. ಬಂಗಾಳಿ ಜನ ದೆಹಲಿಯ ಜೀತದಾಳುಗಳಾಗಲು ನಾನು ಬಿಡಲಾರೆ’ ಎಂದು ಮಮತಾ ಅವರು ನನ್ನಲ್ಲಿ ಹೇಳಿದರು. ‘ಸಂವಿಧಾನವು ರಾಜ್ಯಗಳಿಗೆ ನೀಡಿರುವ ಅಧಿಕಾರವನ್ನು ಕಿತ್ತುಕೊಂಡು, ತನ್ನಲ್ಲಿ ಅವುಗಳನ್ನೆಲ್ಲ ಇರಿಸಿಕೊಂಡ ಇಂತಹ ಕೇಂದ್ರ ಸರ್ಕಾರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹಿಂದೆಲ್ಲೂ ಇರಲಿಲ್ಲ. ನಾನು ಅಟಲ್‌ಜಿ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದಾಗ ಪರಿಸ್ಥಿತಿ ಹೀಗಿರಲಿಲ್ಲ. ಟಿಎಂಸಿಯಂತಹ ಸಣ್ಣ ಪಕ್ಷಗಳನ್ನೂ ಅಟಲ್‌ಜಿ ಗೌರವಿಸುತ್ತಿದ್ದರು. ಹಾಗಾಗಿ ನಾವು ಕೂಡ ಅವರನ್ನು ಗೌರವಿಸುತ್ತೇವೆ. ಮೋದಿ ಮತ್ತು ಶಾ ಅವರು ಬಿಜೆಪಿಯನ್ನು ಪೂರ್ತಿಯಾಗಿ ಬದಲಾಯಿಸಿದ್ದಾರೆ’ ಎಂದೂ ಮಮತಾ ಹೇಳಿದರು.

ನಾಲ್ಕನೆಯದು, ದೊಡ್ಡ ಉದ್ದಿಮೆಗಳು ಬಂಗಾಳದಲ್ಲಿ ಹೂಡಿಕೆ ಮಾಡುವಂತೆ ಮಾಡುವಲ್ಲಿ ಟಿಎಂಸಿ ವಿಫಲವಾಗಿದ್ದರೂ, ಆ ಪಕ್ಷ ಬಡವರ ಪರವಾಗಿ ಕೈಗೊಂಡ ಅನೇಕ ಯೋಜನೆಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲೂ, ಗ್ರಾಮೀಣ ಭಾಗದ ಬಂಗಾಳಿಗಳು ಮೆಚ್ಚಿಕೊಂಡಿದ್ದಾರೆ.

ಆದರೆ ಮಮತಾ ವಿರುದ್ಧ ಒಂದು ಅಂಶ ಕೆಲಸ ಮಾಡುತ್ತದೆ. ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಟಿಎಂಸಿ ಕಾರ್ಯಕರ್ತರ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ರಾಜ್ಯದೆಲ್ಲೆಡೆ ಇದೆ. ‘ಮಮತಾ ಅವರು ತಮ್ಮ ಜೊತೆಗಾರರನ್ನು ನಿಯಂತ್ರಿಸದೆ ಅಪರಾಧ ಎಸಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಇರುವವರೆಲ್ಲ ಧರ್ಮಪುತ್ರರೆಂದೇನೂ ಅಲ್ಲ. ಚುನಾವಣೆ ಅಭಿಯಾನಕ್ಕೆ ಸಹಸ್ರಾರು ಕೋಟಿ ರೂಪಾಯಿ ಬಿಜೆಪಿಗೆ ಎಲ್ಲಿಂದ ಬರುತ್ತಿದೆ?’ ಎಂದು ತಟಸ್ಥ ರಾಜಕೀಯ ವಿಶ್ಲೇಷಕ
ರೊಬ್ಬರು ನನ್ನಲ್ಲಿ ಹೇಳಿದರು.

ಮಮತಾ ಅವರು 34 ವರ್ಷಗಳ ಕಮ್ಯುನಿಸ್ಟ್‌ ಆಡಳಿತವನ್ನು ಬಂಗಾಳದಲ್ಲಿ ಏಕಾಂಗಿಯಾಗಿ ಕೊನೆಗಾಣಿಸಿದರು. ಕಮ್ಯುನಿಸಂ ಬಗ್ಗೆ ಅವರು ತೋರಿದ ವಿರೋಧದ ಕಾರಣದಿಂದಾಗಿ ಅವರು ಬಿಜೆಪಿ, ಆರ್‌ಎಸ್‌ಎಸ್‌ಗೆ ಸಹಜವಾಗಿಯೇ ಜೊತೆಗಾರ್ತಿ ಆಗಬೇಕಿತ್ತು. ಆದರೆ, ಕಮ್ಯುನಿಸಂ ಮಾತ್ರವಲ್ಲದೆ ಕೋಮುವಾದವನ್ನೂ ಅವರು ವಿರೋಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಂಘಪರಿವಾರ ಅವರನ್ನು ದ್ವೇಷಿಸುತ್ತಿದೆ. 2021ರಲ್ಲಿ ಬಂಗಾಳದ ಹೆಣ್ಣುಹುಲಿಯನ್ನು ಸೋಲಿಸಲು ಅವರಿಂದ ಸಾಧ್ಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು