ಶುಕ್ರವಾರ, ಮೇ 27, 2022
21 °C
ಮಹಿಳೆಯರು ತಾಯಂದಿರಾದ ನಂತರವೂ ಕ್ರೀಡೆಯಲ್ಲಿ ಮಾಡುತ್ತಿರುವ ಸಾಧನೆ ಪ್ರೇರಣಾದಾಯಿ

ಗಿರೀಶ ದೊಡ್ಡಮನಿ ಬರಹ: ಅಮ್ಮಂದಿರ ಆಟ– ಕ್ರೀಡೆಗೆ ಕಿರೀಟ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಆರು ತಿಂಗಳ ಹಿಂದಿನ ಮಾತು. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ದಂಪತಿ ಮುದ್ದಾದ ಅವಳಿ ಮಕ್ಕಳೊಂದಿಗೆ ಸಂಭ್ರಮಿಸುವ ಚಿತ್ರಗಳು ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸಿದ್ದವು. ಈಗ ಅದೇ ದೀಪಿಕಾ, ಗ್ಲಾಸ್ಗೊದಲ್ಲಿ ನಡೆದ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ತಾವು ಮತ್ತೆ ಅಂಕಣಕ್ಕೆ ಮರಳಿದ ಕ್ಷಣವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿಯಾದ ನಂತರವೂ ದೊಡ್ಡ ಸಾಧನೆ ಮಾಡಲು ಹೆಣ್ಣಿಗೆ ಸಾಧ್ಯವಿದೆ ಎಂಬ ಸಂದೇಶವನ್ನು ಕ್ರೀಡಾಲೋಕಕ್ಕೆ ನೀಡಿದ್ದಾರೆ.

ದಶಕಗಳ ಹಿಂದೆ ಮಹಿಳಾ ಅಥ್ಲೀಟ್‌ಗಳು ಮದುವೆ, ಮಕ್ಕಳು ಎಂದಾದ ಕೂಡಲೇ ಕ್ರೀಡೆಯಿಂದ ವಿಮುಖರಾಗುತ್ತಿದ್ದರು. ಇದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದರೆ ಅದಕ್ಕೆ ಅಪವಾದವೆಂಬಂತೆ ಅಲ್ಲೊಬ್ಬರು, ಇಲ್ಲೊಬ್ಬರು ಅಂಗಳಕ್ಕೆ ಮರಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚುತ್ತಿರುವುದು ಮಹಿಳಾ ಕ್ರೀಡೆಯ ಮಟ್ಟಿಗೆ ಆಶಾದಾಯಕ ಬೆಳವಣಿಗೆ. ಒಲಿಂಪಿಯನ್ ಬಾಕ್ಸರ್, ಮೂವರು ಮಕ್ಕಳ ತಾಯಿ ಮೇರಿ ಕೋಮ್, ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಸಾಮರ್ಥ್ಯವನ್ನು ಮೆರೆದಿದ್ದಾರೆ. ಮೂಗು ಮುರಿದವರೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಮೇರಿ ಕೋಮ್ ಮೂರನೇ ಮಗುವಿನ ತಾಯಿಯಾದ ನಂತರವೇ ಎರಡು ಒಲಿಂಪಿಕ್ಸ್‌ಗಳಲ್ಲಿ ಆಡಿದ್ದಾರೆ. ಒಂದು ಬಾರಿ ವಿಶ್ವ ಚಾಂಪಿಯನ್‌ಷಿಪ್ ಚಿನ್ನ ಗೆದ್ದಿದ್ದಾರೆ. ಅದರಲ್ಲೂ ಬಾಕ್ಸಿಂಗ್‌ನಂತಹ ದೇಹದಂಡನೆ ಮತ್ತು ಅಪಾರ ಶಕ್ತಿ ಬೇಡುವ ಕ್ರೀಡೆಯಲ್ಲಿ ಈ ಸಾಧನೆ ಮಾಡಿದ್ದು ಸಣ್ಣ ವಿಷಯವಲ್ಲ. ಇದೇ ವರ್ಷ ನಡೆಯುವ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಅಭ್ಯಾಸ ಕೂಡ ಆರಂಭಿಸಿದ್ದಾರೆ. ಈ ಋತುವಿನ ನಂತರ ನಿವೃತ್ತರಾಗುವುದಾಗಿ ಸಾನಿಯಾ ಘೋಷಿಸಿದ್ದಾರೆ.

ಮೂರು ದಶಕಗಳ ಹಿಂದೆ, ಓಟದ ರಾಣಿ ಪಿ.ಟಿ.ಉಷಾ, ಕನ್ನಡತಿ ಪ್ರಮೀಳಾ ಅಯ್ಯಪ್ಪ ಮತ್ತು  ಹೈಜಂಪ್ ಅಥ್ಲೀಟ್  ಸಹನಾಕುಮಾರಿ ಕೂಡ ತಾಯಂದಿರಾದ ನಂತರವೇ ಕಣಕ್ಕಿಳಿದು ಸಾಮರ್ಥ್ಯ ತೋರಿದ್ದರು. ಆದರೆ ಇಂದಿಗೂ ಮಹಿಳಾ ಕ್ರೀಡಾಪಟುಗಳಿಗೆ ಮದುವೆ ಮತ್ತು ಮಾತೃತ್ವವು ವೃತ್ತಿ ಮುಂದುವರಿಸಲು ಅಡೆತಡೆಗಳೇ ಆಗಿ ಉಳಿದಿರುವುದು ವಿಪರ್ಯಾಸ. ಇದಕ್ಕೆ ಕಾರಣಗಳು ಹಲವಾರಿವೆ. 

ಮೊತ್ತಮೊದಲನೆಯದಾಗಿ, ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳುವುದು ಪ್ರಮುಖ ಸವಾಲು. ಸುಮಾರು ಒಂದೂವರೆ, ಎರಡು ವರ್ಷ ಕ್ರೀಡಾಂಗಣದಿಂದ ದೂರ ಉಳಿದೂ ದೇಹ ಮತ್ತು ಮಾನಸಿಕ ದೃಢತೆಯನ್ನು ಉಳಿಸಿ ಕೊಳ್ಳಬೇಕು. ಈ ಅವಧಿಯಲ್ಲಿ ಅವರ ಕ್ಷೇತ್ರದಲ್ಲಿ ಆದ ಸ್ಪರ್ಧಾತ್ಮಕ ಬದಲಾವಣೆಗಳಿಗೂ ಸ್ಪಂದಿಸುತ್ತ ಮರಳಿ ಕಣಕ್ಕಿಳಿಯುವ ಸವಾಲು ಇನ್ನೊಂದೆಡೆ ಇರುತ್ತದೆ. ಮುಖ್ಯವಾಗಿ ಪ್ರಾಯೋಜಕರು ಹಾಗೂ ಕೋಚ್‌ಗಳನ್ನು ಕಾಯ್ದುಕೊಳ್ಳುವುದು ಕಷ್ಟ. ‘ಗೆಲ್ಲುವ ಕುದುರೆ’ ಮೇಲಷ್ಟೇ ಅಲ್ಲವೇ ಪ್ರಾಯೋಜಕರು ದುಡ್ಡು ಹೂಡಲು ಮನಸ್ಸು ಮಾಡುವುದು? 

ಕೆಲವು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ಇದಕ್ಕೆ ಸಾಕ್ಷಿ. ಖ್ಯಾತನಾಮ ಮಹಿಳಾ ಅಥ್ಲೀಟ್‌ಗಳು ಗರ್ಭಿಣಿಯರಾದ ಕಾರಣಕ್ಕೆ, ಅವರಿಗೆ ನೀಡುತ್ತಿದ್ದ
ಪ್ರಾಯೋಜಕತ್ವವನ್ನು ಪ್ರತಿಷ್ಠಿತ ಕಂಪನಿಯೊಂದು ನಿಲ್ಲಿಸಿತ್ತು. ಆ ಸಂದರ್ಭದಲ್ಲಿ ಇದಕ್ಕೆ ವಿಶ್ವ ಚಾಂಪಿಯನ್‌ ಷಿಪ್ ಪದಕ ವಿಜೇತ ಅಥ್ಲೀಟ್‌ ಅಲೈಸಿಯಾ ಮಾಂಟೆನೊ, ಒಲಿಂಪಿಯನ್ ಕ್ಯಾರಾ ಗೌಶರ್ ಮತ್ತು ಅಲಿಸನ್ ಫೆಲಿಕ್ಸ್‌ ತಿರುಗೇಟು ನೀಡಿದ್ದರು. ಮಾಧ್ಯಮಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಇದರಿಂದಾಗಿ ಕಂಪನಿಯು ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಈ ಕುರಿತು 2019ರಲ್ಲಿ ‘ನ್ಯೂಯಾರ್ಕ್ ಟೈಮ್ಸ್‌’ ಪತ್ರಿಕೆಯಲ್ಲಿ ಫೆಲಿಕ್ಸ್‌ ದೀರ್ಘ ಲೇಖನ ಬರೆದಿದ್ದರು.

ಇನ್ನು ತಾಯ್ತನದ ನಂತರ ಕ್ರೀಡೆಗೆ ಮರಳಿದ ಸಂದರ್ಭದಲ್ಲಿ ಅಲ್ಲಿಯ ವ್ಯವಸ್ಥೆಯೊಂದಿಗೆ ಮತ್ತೊಂದು ಸಂಘರ್ಷಕ್ಕೆ ಇಳಿಯುವ ಅನಿವಾರ್ಯ ಎದುರಾಗುತ್ತದೆ. ಈ ಹಿಂದೆ ಕಲಿಸಿದ್ದ ಕೋಚ್‌ಗಳು, ಸಹಪಾಠಿಗಳು ಮತ್ತು ಫೆಡರೇಷನ್ ಅಧಿಕಾರಿಗಳ ವಿಶ್ವಾಸ ಗಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಇದೆಲ್ಲವನ್ನೂ ಮೀರಿ ಅಭ್ಯಾಸ ಆರಂಭಿಸಿದಾಗ ದೇಹ ಮತ್ತು ಮನಸ್ಸು ಮಾತು ಕೇಳುವುದಿಲ್ಲ.

‘ಅಭ್ಯಾಸ ಮಾಡುವಾಗ ಕಷ್ಟವಾಗುತ್ತಿತ್ತು. ತಾಯಿ ಯಾದ ನಂತರ ಇಷ್ಟು ಬೇಗ ಕ್ರೀಡೆಗೆ ಮರಳಿದ್ದರಿಂದ ಪಶ್ಚಾತ್ತಾಪವಾಗುತ್ತಿದೆಯೇ ಎಂದು ನನ್ನ ಸುತ್ತಮುತ್ತಲಿ ನವರು ಹಲವು ಬಾರಿ ಕೇಳಿದ್ದರು. ಆಗೆಲ್ಲ ಅವರಿಗೆ ‘ಖಂಡಿತಾ ಇಲ್ಲ, ನನ್ನ ವೃತ್ತಿಯನ್ನು ಪ್ರೀತಿಸುತ್ತೇನೆ’ ಎಂದು ಹೇಳಿದ್ದೆ ಎಂದು ವಾಲಿಬಾಲ್ ತಾರೆ ವಾಲ್ಶ್ ಜೆನಿಂಗ್ಸ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇಂತಹ ಕೆಲವು ತಾರಾ ಅಥ್ಲೀಟ್‌ಗಳು ತೋರಿದ ಧೈರ್ಯ ಮತ್ತು ತ್ಯಾಗ ದಿಂದಾಗಿ ಪರಿಸ್ಥಿತಿ ಬದಲಾಗುತ್ತಿದೆ. ‘ಸೂಪರ್‌ ಮಾಮ್‌’ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ.

ಇತ್ತೀಚೆಗಷ್ಟೇ ನ್ಯೂಜಿಲೆಂಡ್‌ನಲ್ಲಿ ಮುಕ್ತಾಯವಾದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬೇರೆ ಬೇರೆ ತಂಡಗಳಲ್ಲಿ ಒಟ್ಟು ಎಂಟು ಮಂದಿ ಅಮ್ಮಂದಿರು ಆಡಿದ್ದರು. ಡ್ರೆಸಿಂಗ್‌ ರೂಮ್‌ನಲ್ಲಿ ಸಹ ಆಟಗಾರ್ತಿಗೆ ಮಗುವಿನ ಹೊಣೆ ವಹಿಸಿ ಕಣಕ್ಕಿಳಿದು ತಂಡವನ್ನು ಮುನ್ನಡೆಸಿದ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಅವರು ಮನಗೆದ್ದರು. ಅವರು ಬಲಿಷ್ಠ ಆಸ್ಟ್ರೇಲಿಯಾದ ಎದುರು ಹೊಡೆದ ಅರ್ಧಶತಕ ಬಹು ಕಾಲ ಕ್ರಿಕೆಟ್‌ಪ್ರೇಮಿಗಳ ನೆನಪಿನಲ್ಲಿ ಉಳಿಯುವಂತಹದ್ದು. ಅವರಷ್ಟೇ ಅಲ್ಲ, ನ್ಯೂಜಿಲೆಂಡ್‌ನ ಅಮಿ ಸೆಟರ್ಥ್‌ವೇಟ್, ಲೀ ತಹುವು, ಪ‍್ರಶಸ್ತಿ ಜಯಿಸಿದ ಆಸ್ಟ್ರೇಲಿಯಾದ ಮೆಗನ್ ಶೂಟ್, ರಚೆಲ್ ಹೇಯ್ನ್ಸ್, ದಕ್ಷಿಣ ಆಫ್ರಿಕಾದ ಲಿಜಿಲ್ ಲೀ, ಮಸಾಬತ್ ಕ್ಲಾಸ್ ಹಾಗೂ ವೆಸ್ಟ್ ಇಂಡೀಸ್‌ನ ಅಫೈ ಫ್ಲೆಚರ್ ಆಡಿದ್ದರು.

ಇದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಡಳಿತದಲ್ಲಿಯೂ ಸಂಚಲನ ಮೂಡಿಸಿದೆ. ಅಂತರ ರಾಷ್ಟ್ರೀಯ ಟೂರ್ನಿಗಳು ಮತ್ತು ವಿಶ್ವದರ್ಜೆಯ ಟೂರ್ನಿ ಗಳಲ್ಲಿ ಆಡಲು ಬರುವ ಅಮ್ಮಂದಿರಿಗಾಗಿ ಅದು ವಿಶೇಷ ವಸತಿ ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಮಾಡಲು ಮುಂದಾಗಿದೆ.

‘ಮಹಿಳೆಯರು ತಮ್ಮ ಕೌಟುಂಬಿಕ ಜೀವನದೊಂದಿಗೆ ಕ್ರಿಕೆಟ್‌ನಲ್ಲಿಯೂ ಮಿಂಚುತ್ತಿರುವುದು ಪ್ರೇರಣಾದಾಯಿ ಯಾಗಿದೆ. ಅವರಿಗಾಗಿ ವಿಶೇಷ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸುತ್ತೇವೆ. ತಾಯಂದಿರು ಮಗು ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿ ಸುತ್ತಿರುವುದನ್ನು ನೋಡಿದ್ದೇವೆ. ಟೂರ್ನಿಗಳಲ್ಲಿ ಅವರು ಆಡುವಾಗ ವಿಶೇಷವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ. ಅವರಿಗೆ ಸಂಪೂರ್ಣ ಸುರಕ್ಷತೆಯನ್ನೂ ನೀಡಲು ಬದ್ಧರಾಗಿದ್ದೇವೆ. ಇದರಿಂದ ಆಟಗಾರ್ತಿಯರು ನಿಶ್ಚಿಂತೆಯಿಂದ ಆಡಬಹುದಾಗಿದೆ’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಅಲಾರ್ಡಿಸ್ ಇತ್ತೀಚೆಗೆ ಹೇಳಿದ್ದಾರೆ.

ಅಷ್ಟೇ ಅಲ್ಲ, ಬಹುದಿನಗಳ ಬೇಡಿಕೆಯಾಗಿರುವ ನಗದು ಪ್ರಶಸ್ತಿ ತಾರತಮ್ಯವನ್ನು ನಿವಾರಿಸಲೂ ಐಸಿಸಿ ಮುಂದಾಗಿದೆ. 2024ರಿಂದ 2031ರ ಅವಧಿಗೆ ಸಿದ್ಧಪಡಿಸಲಾಗುತ್ತಿರುವ ಐಸಿಸಿಯ ಬಜೆಟ್‌ ಮಂಡನೆಯಲ್ಲಿ ಇದು ಪ್ರಮುಖ ವಿಷಯವಾಗಲಿದೆ.

ಆದರೆ ಮಹಿಳಾ ಕ್ರಿಕೆಟ್ ಮೊದಲ ಟೆಸ್ಟ್ ಪಂದ್ಯ ನಡೆದು ಸುಮಾರು ಒಂಬತ್ತು ದಶಕಗಳು ಕಳೆದರೂ ತಾರತಮ್ಯ ನಿವಾರಿಸುವತ್ತ ಈಗಷ್ಟೇ ಮನಸ್ಸು ಮಾಡು ತ್ತಿರುವುದು ಸೋಜಿಗ. ಪುರುಷರಿಗೆ ಸಮನಾಗಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಮಹಿಳಾ ತಂಡ ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಸಾಧನೆ ಉನ್ನತ ಮಟ್ಟದಲ್ಲಿದೆ. ಕಳೆದೆರಡು ದಶಕಗಳಲ್ಲಿ ಭಾರತದ ವನಿತೆಯರ ಸಾಧನೆಯೂ ಗಮನಾರ್ಹ.  ‘ತೊಟ್ಟಿಲು ತೂಗುವ ಕೈಗಳು ಜಗತ್ತನ್ನೂ ಮುನ್ನಡೆಸಬಲ್ಲವು’ ಎಂಬು ದನ್ನು ಕ್ರೀಡಾ ಆಡಳಿತಗಳು ಮನಗಾಣಲು ಇದು ಸೂಕ್ತ ಸಮಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು