ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಭಾರತ ಟಿ20 : ವಿರಾಟ್ ಪರ್ವದ ಹೊಸ ಆರಂಭ?

ಭಾರತ ಟಿ20 ತಂಡದ ನಾಯಕತ್ವಕ್ಕೆ ಕೊಹ್ಲಿ ವಿದಾಯದ ಸುತ್ತಮುತ್ತ
Last Updated 18 ಅಕ್ಟೋಬರ್ 2021, 3:03 IST
ಅಕ್ಷರ ಗಾತ್ರ

ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಮಾರ್ಗದರ್ಶಕರಾಗಿ ಮಹೇಂದ್ರಸಿಂಗ್ ಧೋನಿ ಕಾರ್ಯನಿರ್ವಹಿಸಲಿದ್ದಾರೆ. ಟೂರ್ನಿಯ ನಂತರ ತಂಡಕ್ಕೆ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ ಆಗಲಿದ್ದಾರೆ.

ಇದೇ ಹೊತ್ತಿಗೆ ಭಾರತ ಟಿ20 ತಂಡದ ನಾಯಕತ್ವಕ್ಕೆ ವಿದಾಯ ಹೇಳಲಿರುವ ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಮುನ್ನಡೆಸಲಿದ್ದಾರೆ. ಬಿಡಿಬಿಡಿಯಾಗಿ ಕಾಣಿಸುವ ಈ ಮೂರು ಎಳೆಗಳನ್ನು ಹೊಸೆದು ಹಗ್ಗ ಮಾಡಿದರೆ ವಿರಾಟ್ ಕೊಹ್ಲಿ ಮತ್ತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವರ್ಚಸ್ಸು ಉಳಿಸುವ ಬಂಧವಾಗಿ ಕಾಣಿಸುತ್ತದೆ. ಇದು ‘ವಿರಾಟ್ ಪರ್ವ’ದ ಹೊಸ ಆರಂಭದಂತೆ ಕಾಣುತ್ತಿದೆ.

2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಧೋನಿ ವಿದಾಯ ಹೇಳಿದ್ದರು. ಆಗ ಕೊಹ್ಲಿ ನಾಯಕತ್ವ ವಹಿಸಿಕೊಂಡರು. 2017ರಲ್ಲಿ ಧೋನಿ ಸೀಮಿತ ಓವರ್‌ಗಳ ನಾಯಕತ್ವ ವನ್ನೂ ಕೊಹ್ಲಿಗೆ ವರ್ಗಾಯಿಸಿದ್ದರು. ಆದರೆ, ‘ರನ್‌ ಯಂತ್ರ’ ಖ್ಯಾತಿಯ ವಿರಾಟ್ ಇದುವರೆಗೂ ಐಸಿಸಿಯ ಟ್ರೋಫಿಗಳನ್ನು(ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್) ಜಯಿಸಿಲ್ಲ. ಇತ್ತೀಚೆಗಷ್ಟೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ತಂಡವಾಗಿಯೂ ಭಾರತವು ನ್ಯೂಜಿಲೆಂಡ್ ಎದುರು ಸೋತಿತ್ತು. ಆಗಲೂ ವಿರಾಟ್ ನಾಯಕತ್ವದ ಕುರಿತು ಅಪಸ್ವರಗಳು ಎದ್ದಿದ್ದವು. ಅಂತಿಮ ಹನ್ನೊಂದರ ಬಳಗದ ಆಯ್ಕೆ ಮತ್ತು ನಿರ್ವಹಣೆ ಯಲ್ಲಿ ಅವರು ಎಡವಿದ್ದು ಸ್ಪಷ್ಟವಾಗಿತ್ತು.

ಅಲ್ಲದೇ ಹೋದ ಡಿಸೆಂಬರ್‌–ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋತಿತ್ತು. ಆ ಸಂದರ್ಭದಲ್ಲಿ ತಮ್ಮ ಪಿತೃತ್ವ ರಜೆಯ ನಿರ್ಧಾರವನ್ನು ವಿರಾಟ್ ಬದಲಿಸಿ ರಲಿಲ್ಲ. ಆ ವಿಷಯವೂ ಸಾಮಾಜಿಕ ಜಾಲತಾಣ
ಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಅದೇ ಸರಣಿಯ ಉಳಿದ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಸರಣಿ ಗೆದ್ದು ಇತಿಹಾಸ ಬರೆದಿತ್ತು. ವಿರಾಟ್ ಇಲ್ಲದೆಯೂ ತಂಡ ಜಯಿಸಿದ್ದು ಕ್ರಿಕೆಟ್‌ ಜಗತ್ತಿಗೆ ವಿಭಿನ್ನ ಸಂದೇಶ ರವಾನಿಸಿದ್ದು ಸುಳ್ಳಲ್ಲ!

ಆಗಿನಿಂದಲೂ ವಿರಾಟ್ ನಾಯಕತ್ವದ ಕುರಿತು ಕೆಲವು ದಿಗ್ಗಜ ಕ್ರಿಕೆಟಿಗರು ಮಾತನಾಡಲಾರಂಭಿಸಿದ್ದರು. ಧೋನಿ ನಾಯಕತ್ವದ ಛಾಯೆಯಿಂದ ತಂಡವನ್ನು ಹೊರತಂದು ಹೊಸ ಛಾಪು ಮೂಡಿಸುವಲ್ಲಿ ಕೊಹ್ಲಿ ವಿಫಲರಾಗಿದ್ದಾ ರೆಂಬ ಗುಸುಗುಸು ಕೂಡ ಬಿಸಿಸಿಐ ವಲಯದಲ್ಲಿ ನಡೆ ಯುತ್ತಲೇ ಇತ್ತು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ್ದ ಸೌರವ್ ಗಂಗೂಲಿ ಹೆಣೆದಿರುವ ಯೋಜನೆ ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಭಾರತದ ಕ್ರಿಕೆಟ್‌ಗೆ ವಿರಾಟ್ ನಾಯಕತ್ವಕ್ಕಿಂತಲೂ ಅವರ ಬ್ಯಾಟಿಂಗ್ ಪ್ರತಿಭೆ ಮತ್ತು ಬ್ರ್ಯಾಂಡ್ ಮೌಲ್ಯದ ಅವಶ್ಯಕತೆಯನ್ನು ಮಂಡಳಿ ಮನ ಗಂಡಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಒಟ್ಟು 23 ಸಾವಿರಕ್ಕೂ ಹೆಚ್ಚು ರನ್‌ ಗಳಿಸಿರುವ ವಿರಾಟ್ ಸದ್ಯದ ಕ್ರಿಕೆಟ್‌ನಲ್ಲಿ ದೊಡ್ಡ ತಾರೆ. ಫಿಟ್‌ನೆಸ್‌, ತಾಂತ್ರಿಕ ಕೌಶಲಗಳಲ್ಲಿ ವಿರಾಟ್ ಅವರನ್ನು ಮೀರಿಸುವವರು ಭಾರತ ತಂಡದಲ್ಲಿ ಸದ್ಯದ ಮಟ್ಟಿಗೆ ಕಾಣುತ್ತಿಲ್ಲ. ದಶಕಗಳ ಹಿಂದೆ ಕಪಿಲ್‌ ದೇವ್ ನಾಯಕರಾಗಿದ್ದಾಗ ತಂಡದಲ್ಲಿ ಸುನೀಲ್ ಗಾವಸ್ಕರ್, ದಿಲೀಪ್ ವೆಂಗಸರ್ಕಾರ್, ಕೃಷ್ಣಮಾಚಾರಿ ಶ್ರೀಕಾಂತ್, ರೋಜರ್ ಬಿನ್ನಿ, ಸೈಯದ್ ಕಿರ್ಮಾನಿ ಅವರಂತಹ ದಿಗ್ಗಜರಿದ್ದರು. ಗಂಗೂಲಿ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಂತಹ ತಾರಾವರ್ಚಸ್ಸಿನ ಆಟಗಾರರು ಇದ್ದರು. ಬೇರೆ ಬೇರೆ ದೇಶಗಳ ತಂಡಗಳಲ್ಲಿ ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಕುಮಾರ ಸಂಗಕ್ಕಾರ, ಮಹೇಲಾ ಜಯವರ್ಧನೆ, ಶಾಹೀದ್ ಅಫ್ರಿದಿ ಅವರಂತಹ ಆಟಗಾರರೂ ಇದ್ದರು. ಧೋನಿ ನಾಯಕರಾಗಿದ್ದಾಗಲೂ ವೀರೇಂದ್ರ ಸೆಹ್ವಾಗ್, ಸಚಿನ್, ರಾಹುಲ್, ಹರಭಜನ್ ಸಿಂಗ್, ಜಹೀರ್ ಖಾನ್ ಮತ್ತಿತರರು ಇದ್ದರು.

ಆದರೆ ಈ ಕಾಲದಲ್ಲಿ ರೋಹಿತ್ ಶರ್ಮಾ ಒಬ್ಬರನ್ನು ಬಿಟ್ಟರೆ ವಿರಾಟ್‌ಗೆ ಪೈಪೋಟಿ ಒಡ್ಡುವವರು ಕಾಣುತ್ತಿಲ್ಲ. ಆದರೆ ರೋಹಿತ್ ಫಿಟ್‌ನೆಸ್ ಮಟ್ಟವು ವಿರಾಟ್ ಅವರಷ್ಟು ಉತ್ಕೃಷ್ಟವಾಗಿಲ್ಲ ಎನ್ನುವುದೂ ಸತ್ಯ. ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಅವರು ಬೆಂಚ್‌ ಶಕ್ತಿಯ ಪೈಪೋಟಿಯನ್ನು ಸಂಪೂರ್ಣವಾಗಿ ಮೀರಿ ನಿಲ್ಲಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ವಿರಾಟ್ ಅವರನ್ನು ಏಕಾಏಕಿ ಬಿಟ್ಟುಕೊಡಲು ಬಿಸಿಸಿಐಗೂ ಸಾಧ್ಯವಿಲ್ಲ. ತಾವೇ ಒಂದು ಬ್ರ್ಯಾಂಡ್ ಆಗಿ ಬೆಳೆದಿರುವ ವಿರಾಟ್, ಭಾರತದ ಕ್ರಿಕೆಟ್‌ ಬೆಳವಣಿಗೆಗೆ ಕೊಟ್ಟಿರುವ ಕಾಣಿಕೆಯನ್ನೂ ನಿರ್ಲಕ್ಷಿಸುವಂತಿಲ್ಲ. ಆದ್ದರಿಂದ ಅವರ ನಾಯಕತ್ವದ ಲೋಪಗಳನ್ನು ಸರಿಪಡಿಸುವುದರ ಜೊತೆಗೆ ಬ್ಯಾಟಿಂಗ್ ಪ್ರತಿಭೆಯನ್ನು ಬಳಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.‌

ಅದಕ್ಕಾಗಿಯೇ ಪಂದ್ಯದ ಅನುಕ್ಷಣವೂ ಯೋಜನೆ ಗಳನ್ನು ಹೆಣೆಯುವ ಅನಿವಾರ್ಯ ಒತ್ತಡವಿರುವ ಟಿ20 ಮಾದರಿಯ ನಾಯಕತ್ವದ ಒತ್ತಡದಿಂದ ಅವರನ್ನು ಮುಕ್ತ ಮಾಡಲಾಗುತ್ತಿದೆ. ಇದರಿಂದ ಏಕದಿನ ಮತ್ತು ಟೆಸ್ಟ್ ತಂಡಗಳ ಮುಂದಾಳತ್ವವನ್ನೂ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಬಹುದು. ಅಲ್ಲದೇ ಬ್ಯಾಟಿಂಗ್ ಕೂಡ ಸುಧಾರಿಸಬಹುದು. ಆದರೆ, ಅವರ ಆಕ್ರಮಣಕಾರಿ ಶೈಲಿಯನ್ನು ನಿಯಂತ್ರಿಸಲು ಮತ್ತು ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ಆಗುತ್ತಿರುವ ಎಡವಟ್ಟುಗಳನ್ನು ತಪ್ಪಿಸಲು ಧೋನಿ ಮತ್ತು ದ್ರಾವಿಡ್ ಅವರನ್ನು ಮುನ್ನೆಲೆಗೆ ತರಲಾಗುತ್ತಿದೆ ಎನ್ನುವ ಮಾತುಗಳೂ ಇವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗಿ ಒಂದೂವರೆ ವರ್ಷವಾದರೂ ನಾಯಕತ್ವದ ಗುಣಗಳನ್ನು ಬಿಟ್ಟುಕೊಡದ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೋದ ಸಲ ಪ್ಲೇ ಆಫ್ ಕೂಡ ಪ್ರವೇಶಿಸದ ತಂಡಕ್ಕೆ ಕಿರೀಟ ತೊಡಿಸಿದ್ದಾರೆ. ಯುವ ಮತ್ತು ಅನುಭವಿ ಆಟಗಾರರನ್ನು ಸಮರ್ಥವಾಗಿ ಬಳಸಿಕೊಳ್ಳುವ ಪರಿಯನ್ನು ಧೋನಿ ತೋರಿಸಿಕೊಟ್ಟಿ
ದ್ದಾರೆ. ಅವರ ಈ ಗುಣವೇ ಟಿ20 ವಿಶ್ವಕಪ್ ಗೆಲುವಿಗೆ ನಾಂದಿಯಾಗಬಹುದು. ಇದರಿಂದಾಗಿ ಐಸಿಸಿ ಕಪ್ ಗೆದ್ದ ನಾಯಕರಲ್ಲಿ ವಿರಾಟ್ ಕೂಡ ಒಬ್ಬರಾಗಬಹುದು.

ನವೆಂಬರ್‌ನಲ್ಲಿ ರವಿಶಾಸ್ತ್ರಿ ನಿರ್ಗಮನದ ನಂತರ ದ್ರಾವಿಡ್ ಕೋಚ್ ಆಗಲಿದ್ದಾರೆ. 2023ರಲ್ಲಿ ಭಾರತ ಆಯೋಜಿಸಲಿರುವ ಏಕದಿನ ವಿಶ್ವಕಪ್ ವಿಜಯದ ಪೂರ್ವಸಿದ್ಧತೆಯ ಪ್ರಮುಖ ಭಾಗ ಇದಾಗಲಿದೆ. ಆಲ್ಲದೇ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಜಯದ ಮೇಲೂ ಕಣ್ಣಿಟ್ಟಿರುವ ಭಾರತಕ್ಕೆ ‘ಗೋಡೆ’ ಖ್ಯಾತಿಯ ದ್ರಾವಿಡ್ ಮಾರ್ಗದರ್ಶನ ಫಲಪ್ರದವಾಗುವ ನಿರೀಕ್ಷೆ ಇದೆ.

ಆದರೆ, ಬೆಂಕಿಚೆಂಡಿನಂತೆ ಪುಟಿಯುವ ವಿರಾಟ್ ಮತ್ತು ಹಿಮಗೋಡೆಯಂತಹ ತಣ್ಣನೆಯ ಸ್ವಭಾವದ ದ್ರಾವಿಡ್ ಅವರ ನಡುವಿನ ಹೊಂದಾಣಿಕೆ ಹೇಗಿರುವುದೋ ಎಂಬ ಕುತೂಹಲವೂ ಕ್ರಿಕೆಟ್‌ ವಲಯ ದಲ್ಲಿ ಗರಿಗೆದರಿದೆ. ನಾಲ್ಕು ವರ್ಷಗಳ ಹಿಂದೆ ಅನಿಲ್ ಕುಂಬ್ಳೆ ಕೋಚ್ ಹುದ್ದೆಯನ್ನು ಬಿಟ್ಟು ಹೊರಬಂದಾಗ ವರದಿಯಾಗಿದ್ದ ಹಲವು ಸಂಗತಿಗಳನ್ನು ಕ್ರಿಕೆಟ್‌ ಪ್ರೇಮಿಗಳು ಈಗಲೂ ಮರೆತಿಲ್ಲ. ಇವತ್ತು ಭಾರತ ತಂಡದ ಬೆಂಚ್‌ನಲ್ಲಿ ಯುವಪ್ರತಿಭೆಗಳ ದೊಡ್ಡ ದಂಡು ಕಾಣಲು ದ್ರಾವಿಡ್ ಕಾರಣ. ಭಾರತ ‘ಎ’ ಮತ್ತು 19 ವರ್ಷದೊಳಗಿ ನವರ ತಂಡಗಳಿಗೆ ಅವರು ಕೋಚ್ ಆಗಿದ್ದಾಗ ನೀಡಿದ ಕಾಣಿಕೆ ಫಲ ಅದು.

ಆದರೆ ಯುವ ಮತ್ತು ಸೀನಿಯರ್ ತಂಡಗಳ ಡ್ರೆಸ್ಸಿಂಗ್ ರೂಮ್ ವಾತಾವರಣದಲ್ಲಿ ವ್ಯತ್ಯಾಸವಿದೆ. ದ್ರಾವಿಡ್ ಅಲ್ಲಿ ಭವಿಷ್ಯದ ಆಟಗಾರರನ್ನು ರೂಪಿಸಿದ್ದರು. ಆದರೆ ಸೀನಿಯರ್ ತಂಡದಲ್ಲಿರುವ ತಾರೆಗಳನ್ನು ಭಾರತ ಕ್ರಿಕೆಟ್‌ನ ಉಜ್ವಲ ಭವಿಷ್ಯ ಬೆಳಗುವ ಆಟಗಾರರನ್ನಾಗಿ ಮಾಡುವ ಸವಾಲು ದ್ರಾವಿಡ್ ಮುಂದಿದೆ. ಅದರಲ್ಲೂ ವಿರಾಟ್ ನಾಯಕತ್ವದೊಂದಿಗೆ ಅವರು ಹೇಗೆ ಸಮನ್ವಯ ಸಾಧಿಸುತ್ತಾರೆಂಬುದನ್ನು ಮುಂಬರುವ ಕಾಲವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT