ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಒಲಿಂಪಿಕ್ ಪದಕದ ತುಡಿತ–ಮಿಡಿತ

ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳ ಸಾಧನೆಯು ದೇಶದ ಕ್ರೀಡಾಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ
Last Updated 12 ಜುಲೈ 2021, 19:31 IST
ಅಕ್ಷರ ಗಾತ್ರ

ತಮಿಳುನಾಡಿನ ಮದುರೆ ಸಮೀಪದ ಸಕಿಮಂಗಳಂ ಎಂಬ ಗ್ರಾಮದಲ್ಲಿ ಹೆಣ್ಣುಮಕ್ಕಳಿಗೆ ಹದಿನೆಂಟು ತುಂಬುವ ಮುನ್ನವೇ ಮದುವೆ ಮಾಡಿಬಿಡುವ ಸಂಪ್ರದಾಯವಿದೆ. ಹುಡುಗಿಯರಿಗೆ ವಿದ್ಯಾಭ್ಯಾಸ, ಆಟೋಟಗಳು ಏಕೆ ಎಂಬ ಧೋರಣೆ ಆಧುನಿಕ ಯುಗದಲ್ಲಿಯೂ ಇದೆ. ಈ ಎಲ್ಲ ಸಾಮಾಜಿಕ ವೈರುಧ್ಯಗಳನ್ನು ಹಿಮ್ಮೆಟ್ಟಿಸಿ ಓಡಿದ ರೇವತಿ ವೀರಮಣಿ ಈಗ ಟೋಕಿಯೊ ಒಲಿಂಪಿಕ್ಸ್‌ಗೆ ಹೊರಟು ನಿಂತಿದ್ದಾರೆ.

ಬಾಲ್ಯದಲ್ಲಿಯೇ ಅಪ್ಪ, ಅಮ್ಮನನ್ನು ಕಳೆದುಕೊಂಡ ರೇವತಿಗೆ ಓಟಗಾರ್ತಿಯಾಗುವ ಹುಚ್ಚು. ಹೊಟ್ಟೆ ತುಂಬ ಊಟವಿರದಿದ್ದರೂ, ಬೂಟುಗಳೇ ಇಲ್ಲದಿದ್ದರೂ ಬರಿಗಾಲಿನಲ್ಲಿ ಓಡಿದರು. ಅಜ್ಜಿಯ ಪೋಷಣೆಯಲ್ಲಿ ರೇವತಿ ಬೆಳೆದರು. ಅಜ್ಜಿ ತೋರಿದ ದಿಟ್ಟತನದಿಂದಾಗಿ ಅಥ್ಲೀಟ್‌ ಆಗಿ ಬೆಳೆದರು. 23 ವರ್ಷದ ರೇವತಿ ಒಲಿಂಪಿಕ್ಸ್‌ನಲ್ಲಿ 4X400 ಮೀಟರ್ಸ್ ಮಿಶ್ರ ರಿಲೆಯಲ್ಲಿ ಸ್ಪರ್ಧಿಸುವರು.

‘ಟೀಶರ್ಟ್‌ ಮತ್ತು ಹಾಫ್‌ಪ್ಯಾಂಟ್ ಧರಿಸಿ ಹಳ್ಳಿಯಲ್ಲಿ ಓಡಾಡಲು ನಿನಗೆ ನಾಚಿಕೆಯಾಗಲ್ವಾ’ ಎಂದು ಕೆಂಗಣ್ಣು ಬೀರಿ, ಅವಾಚ್ಯ ಪದಗಳನ್ನು ಬಳಸಿದವರೆಲ್ಲರೂ ಈಗ ಮೌನವಾಗಿದ್ದಾರೆ. ಇದು ರೇವತಿಗೆ ಚಿನ್ನದ ಪದಕಕ್ಕಿಂತಲೂ ದೊಡ್ಡ ಪ್ರಶಸ್ತಿಯೇ ಸರಿ. ಅಲ್ಲದೆ ಸಾಮಾಜಿಕ, ಕೌಟುಂಬಿಕ ಕಟ್ಟಲೆಗಳ ನಡುವೆ ಕಮರಿಹೋಗುವ ಬಾಲೆಯರಿಗೂ ಸ್ಫೂರ್ತಿಯ ಕಥೆ.

ಭಾರತ ಮಹಿಳಾ ಹಾಕಿ ತಂಡದಲ್ಲಿರುವ ಸಲೀಮಾ ಟೆಟೆಗೆ ಈಗ 19 ವರ್ಷವಷ್ಟೇ. ತಂಡದಲ್ಲಿರುವ ಅತ್ಯಂತ ಕಿರಿಯ ಆಟಗಾರ್ತಿ. ಜಾರ್ಖಂಡ್‌ನ ಸಿಮ್ಡೇಗಾ ಜಿಲ್ಲೆಯ ಕುಗ್ರಾಮದ ಹುಡುಗಿ. ನಕ್ಸಲ್‌ಪೀಡಿತ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಲೀಮಾ ಬಾಲ್ಯದಲ್ಲಿಯೇ ಹಾಕಿ ಸ್ಟಿಕ್‌ ಹಿಡಿದವರು. ತಮ್ಮ ಮನೆ ಸಮೀಪದ ಮೈದಾನವನ್ನು ತನ್ನ ಓರಗೆಯ ಮಕ್ಕಳೊಂದಿಗೆ ಒಪ್ಪಗೊಳಿಸಿ ಆಡಲು ಆರಂಭಿಸಿದವರು.

ಡಿಫೆಂಡರ್ ಆಗಿ ತಾವು ಆಡಿದ ತಂಡಗಳಲ್ಲಿ ಜಿಗುಟುತನ ತೋರಿದ ಸಲೀಮಾ ಭಾರತ ತಂಡದವರೆಗೂ ಬೆಳೆದರು. ಬಡರೈತನ ಮಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ತೋರಿದ ದಿಟ್ಟ ಆಟದಿಂದ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿದ್ದಾರೆ.

ಇವರಷ್ಟೇ ಅಲ್ಲ, ಒಟ್ಟು 18 ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 126 ಕ್ರೀಡಾಪಟುಗಳದ್ದೂ ಇಂತಹದ್ದೇ ಒಂದೊಂದು ಕತೆ. ಅವರೆಲ್ಲರಿಗೂ ಪದಕ ಜಯಿಸಿ ‘ದಂತಕಥೆ’ಯಾಗುವ ಹಂಬಲವೂ ಇದೆ. ಕ್ರೀಡಾ ಜೀವನಕ್ಕೆ ವಿದಾಯ ಹೇಳುವ ಹಂತದಲ್ಲಿರುವ ಬಾಕ್ಸರ್ ಮೇರಿ ಕೋಮ್‌ಗೆ ಮತ್ತೊಂದು ಒಲಿಂಪಿಕ್ಸ್ ಪದಕ ಗೆಲ್ಲುವಾಸೆ. 40 ವರ್ಷಗಳಿಂದ ಸಾಧ್ಯವಾಗದ ಪದಕ ಗಳಿಕೆಯ ಸಾಧನೆಯನ್ನು ಮಾಡುವತ್ತ ಹಾಕಿ ತಂಡದ ಚಿತ್ತ. ಮಹಿಳಾ ಕುಸ್ತಿಗೆ ಹೊಸ ಭಾಷ್ಯ ಬರೆದ ಪೋಗಟ್ ಕುಟುಂಬದ ಪ್ರಶಸ್ತಿಗಳ ಸಂಗ್ರಹಕ್ಕೆ ಒಲಿಂಪಿಕ್ಸ್
ಪದಕದ ಕಿರೀಟ ತೊಡಿಸುವತ್ತ ವಿನೇಶ ಛಲತೊಟ್ಟು ನಿಂತಿದ್ದಾರೆ.

ಆದರೆ ಇವರೆಲ್ಲರ ಕನಸುಗಳು ಈಡೇರಲು ಸಾಧ್ಯವೇ? ಕೊರೊನಾ ಕಾಲದ ಬಿಕ್ಕಟ್ಟಿನ ಸಂದರ್ಭದಲ್ಲಿ ಆಗಿರುವ ಸಿದ್ಧತೆಗಳು ತೃಪ್ತಿಕರವಾಗಿವೆಯೇ? ಹಾಗಿದ್ದರೆ, ಈ ಬಾರಿ ದೇಶಕ್ಕೆ ಎಷ್ಟು ಪದಕಗಳು ಒಲಿಯಬಹುದು ಎಂಬ ಚರ್ಚೆಗಳು ಈಗ ಮುನ್ನೆಲೆಗೆ ಬರುತ್ತಿವೆ. ಯಾವುದೇ ಕ್ರೀಡೆಯಾಗಲಿ ನಾವು ನಿರೀಕ್ಷೆ ಮಾಡಿದಂತೆ ಫಲಿತಾಂಶ ಬರುವುದು ತೀರಾ ಅಪರೂಪ. ಶ್ರೇಷ್ಠರು ನೆಲಕಚ್ಚುವ, ಕಪ್ಪುಕುದುರೆಗಳು ವಿಜಯವೇದಿಕೆ ಏರಿದ ಉದಾಹರಣೆಗಳು ನಮ್ಮ ಮುಂದಿವೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತವು ಮೂರು ಪದಕ ಜಯಿಸಿತ್ತು. ಅದರ ನಂತರ ಲಂಡನ್‌ನಲ್ಲಿ (2012) ಆರು ಪದಕಗಳನ್ನು ಗೆದ್ದಿತ್ತು. ಅದರಿಂದಾಗಿ ಹೋದ ಬಾರಿ ರಿಯೊ ಒಲಿಂಪಿಕ್ಸ್‌ನಲ್ಲಿ ಹತ್ತಕ್ಕೂ ಹೆಚ್ಚು ಪದಕಗಳನ್ನು ಜಯಿಸುವ ನಿರೀಕ್ಷೆ ಗರಿಗೆದರಿತ್ತು. ಆದರೆ ಶೂಟಿಂಗ್, ಬಾಕ್ಸಿಂಗ್, ಪುರುಷರ ಕುಸ್ತಿ ವಿಭಾಗಗಳ ಕ್ರೀಡಾಪಟುಗಳು ನಿರಾಶೆ ಮೂಡಿಸಿದ್ದರು. ಶೂನ್ಯದತ್ತ ದೃಷ್ಟಿನೆಟ್ಟಿದ್ದಾಗ ಇಬ್ಬರು ಮಹಿಳೆಯರು ಸಂತಸದ ಹೊನಲು ಹರಿಸಿದರು. ಮಹಿಳಾ ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ ಸಾಕ್ಷಿ ಮಲಿಕ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಇತಿಹಾಸ ನಿರ್ಮಿಸಿದರು.

ಈ ಬಾರಿಯೂ ಅರ್ಧ ಡಜನ್‌ಗಿಂತಲೂ ಹೆಚ್ಚು ಪದಕ ಗಳಿಕೆಯ ನಿರೀಕ್ಷೆಯಲ್ಲಿ ಭಾರತವಿದೆ. ಸಿಂಧು ಚಿನ್ನ ಗೆಲ್ಲುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ ಬ್ಯಾಡ್ಮಿಂಟನ್ ತಂಡದಲ್ಲಿ ಈ ಬಾರಿ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್, ಅಶ್ವಿನಿಪೊನ್ನಪ್ಪ–ಸಿಕ್ಕಿ ರೆಡ್ಡಿ ಅವರಿಲ್ಲ. ಪುರುಷರ ವಿಭಾಗದಲ್ಲಿ ಸಾಯಿ ಪ್ರಣೀತ್ ಮತ್ತು ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ– ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಇದ್ದಾರೆ. ಸೈನಾ ಮತ್ತು ಸಿಂಧು ಯಶಸ್ಸಿಗೆ ಕಾರಣರಾದ ಕೋಚ್ ಪಿ. ಗೋಪಿಚಂದ್ ಕೂಡ ತಂಡದೊಂದಿಗೆ ಹೋಗುತ್ತಿಲ್ಲ. ಸಾಯಿ ಪ್ರಣೀತ್ ಅವರ ಸಿಂಗಲ್ಸ್‌ ಬ್ಯಾಡ್ಮಿಂಟನ್ ಟ್ರೇನರ್, ಇಂಡೊನೇಷ್ಯಾದ ಏಗಸ್ ದ್ವಿ ಸಂತೊಸಾಗೆ ತಂಡದೊಂದಿಗೆ ತೆರಳಲು ಅನುವಾಗಿಸಲು ಗೋಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಾರಿ ಬ್ಯಾಡ್ಮಿಂಟನ್ ತಂಡದೊಂದಿಗೆ ತೆರಳಲು ನೆರವು ಸಿಬ್ಬಂದಿಯಲ್ಲಿ ಐದು ಜನರಿಗೆ ಮಾತ್ರ ಅವಕಾಶ ನೀಡಲು ಐಒಎ ನಿರ್ಧರಿಸಿದೆ. ಅದರಿಂದಾಗಿ ತಂಡದಲ್ಲಿ ಮೂವರು ಕೋಚ್ ಮತ್ತು ಇಬ್ಬರು ಫಿಸಿಯೊ ಇದ್ದಾರೆ.

ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅಡಚಣೆಯುಂಟಾಗಿದೆ. ಇದರಿಂದಾಗಿ ಕ್ರೀಡಾ ಪಟುಗಳು ಮಾನಸಿಕ ಕ್ಷೋಭೆಗೂ ಒಳಗಾಗಿದ್ದಾರೆ. ಆದ್ದರಿಂದ ಗೋಪಿಯಂತಹ ಅನುಭವಿ ಕೋಚ್ ತಂಡ ದೊಂದಿಗೆ ಇದ್ದಿದ್ದರೆ ಆಟಗಾರರ ಮನೋಬಲ ವೃದ್ಧಿಸುತ್ತಿತ್ತು.

ಅಥ್ಲೆಟಿಕ್ಸ್‌ನಲ್ಲಿ ಮೊದಲ ಪದಕ ಜಯಿಸುವ ಭರವಸೆ ಯನ್ನು ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಮೂಡಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್, ಅಮಿತ್ ಪಂಘಾಲ್, ಶೂಟಿಂಗ್‌ನಲ್ಲಿ ಮನು ಭಾಕರ್, ಸೌರಭ್ ಚೌಧರಿ, ಕುಸ್ತಿಯಲ್ಲಿ ಬಜರಂಗ್ ಪೂನಿಯಾ, ಆರ್ಚರಿಯಲ್ಲಿ ದೀಪಿಕಾ ಕುಮಾರಿ ಅವರಿಂದ ವೈಯಕ್ತಿಕ ಪದಕಗಳ ಸಾಧ್ಯತೆಗಳಿವೆ. ದೀಪಿಕಾ ಈಚೆಗೆ ವಿಶ್ವಕಪ್ ಆರ್ಚರಿಯಲ್ಲಿ ಮೂರು ವಿಭಾಗಗಳಲ್ಲಿ ಚಿನ್ನ ಜಯಿಸಿದ್ದಾರೆ. ಮನಪ್ರೀತ್ ಸಿಂಗ್ ನಾಯಕತ್ವದ ಹಾಕಿ ತಂಡವು ಪದಕ ಜಯಿಸುವ ಭರವಸೆ ಚಿಗುರಿಸಿದೆ.

ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಟೇಬಲ್ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ ಅವರಿಂದ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೊರೊನಾ ಸಂಕಷ್ಟದ ನಡುವೆಯೂ ಸಿಂಧು, ಚೋಪ್ರಾ, ಮೀರಾಬಾಯಿ ಮತ್ತು ಶೂಟರ್‌ಗಳು ವಿದೇಶಕ್ಕೆ ಹೋಗಿ ತರಬೇತಿ ಪಡೆದು ಬಂದಿರುವುದು ಭರವಸೆ ಗರಿಗೆದರಲು ಕಾರಣವಾಗಿದೆ.

ಇದೆಲ್ಲವನ್ನೂ ಮೀರಿ ಭಾರತದ ಬಳಗದ ಮುಂದೆ ಇನ್ನೊಂದು ದೊಡ್ಡ ಸವಾಲಿದೆ. ಕೊರೊನಾ ತುರ್ತು ಪರಿ ಸ್ಥಿತಿ ಇರುವ ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ತಂಡದ ಪದಕ ಸಾಧನೆಯಷ್ಟೇ ಮುಖ್ಯವಾದುದು ಸುರಕ್ಷತೆ. ಈ ವಿಷಯದಲ್ಲಿ ತಂಡದೊಂದಿಗೆ ತೆರಳಲಿರುವ ಅಧಿಕಾರಿ ವರ್ಗದ ಸತ್ವಪರೀಕ್ಷೆಯೂ ನಡೆಯಲಿದೆ. ಕ್ರೀಡಾಪಟುಗಳ ಆರೋಗ್ಯ ರಕ್ಷಣೆ, ಒಲಿಂಪಿಕ್ಸ್ ಗ್ರಾಮದ ಕೋವಿಡ್ ಶಿಷ್ಟಾಚಾರ ಪಾಲನೆ, ವಿದೇಶಾಂಗ ನಿಯಮಾವಳಿಗಳ ಪಾಲನೆಯಲ್ಲಿ ಕ್ರೀಡಾಪಟುಗಳನ್ನು ಮುನ್ನಡೆಸುವ ಹೊಣೆ ಅಧಿಕಾರಿ ವರ್ಗಕ್ಕೆ ಇದೆ. ಅದಕ್ಕಾಗಿ ಅರ್ಹ ವೈದ್ಯರು, ಅಧಿಕಾರಿಗಳನ್ನು ತಂಡದೊಂದಿಗೆ ಕಳಿಸಬೇಕಿದೆ. ಈ ಹಿಂದೆ ಆದಂತೆ ಸ್ವಜನಪಕ್ಷಪಾತ, ಶಿಫಾರಸುಗಳ ಆಧಾರದಲ್ಲಿ ಅನರ್ಹ ಅಧಿಕಾರಿಗಳು ‘ಪ್ರವಾಸ’ಕ್ಕೆ ಹೊರಟರೆ, ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹರಾಜಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT