ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪಾಂಡಾ ಪೇರೆಂಟಿಂಗ್, ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸಿ...

Last Updated 12 ಸೆಪ್ಟೆಂಬರ್ 2020, 7:06 IST
ಅಕ್ಷರ ಗಾತ್ರ

ಮಕ್ಕಳು ಧೈರ್ಯವಂತರಾಗಿ, ಸ್ವಾವಲಂಬಿಗಳಾಗಿ ಹಾಗೂ ಸ್ವತಂತ್ರ್ಯವಾಗಿ ಬದುಕಬೇಕು ಎಂಬುದು ಇಂದಿನ ಅನೇಕ ಯುವ ಪೋಷಕರ ಕನಸು. ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಸ್ವಾತಂತ್ರ್ಯರನ್ನಾಗಿಸುವುದು ಸರಿಯಲ್ಲ ಎನ್ನುತ್ತದೆ ಸಾಂಪ್ರದಾಯಿಕ ಪೇರೆಂಟಿಂಗ್ ಪದ್ಧತಿ. ಆ ಕಾರಣಕ್ಕೆ ತಂದೆ–ತಾಯಿ ಮಕ್ಕಳ ಸಂಪೂರ್ಣ ಜವಾಬ್ದಾರಿ ಹೊರುತ್ತಾರೆ.ಆದರೆ ಬಾಲ್ಯದಿಂದಲೇ ಮಕ್ಕಳು ಬೇರೆಯವರ ಹಂಗಿಲ್ಲದೆ, ಸ್ವತಂತ್ರ್ಯವಾಗಿ ಬೆಳೆಯುವುದರಿಂದ ಸ್ವಾವಲಂಬಿಗಳಾಗುತ್ತಾರೆ ಹಾಗೂ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎನ್ನುತ್ತದೆ ‘ಪಾಂಡಾ ಪೇರೆಂಟಿಂಗ್’ ಪದ್ಧತಿ. ಈ ವಿಧಾನ ಈಗ ಹೆಚ್ಚು ಪ್ರಚಲಿತದಲ್ಲಿದೆ.

ಏನಿದು ಪಾಂಡಾ ಪೇರೆಂಟಿಂಗ್‌?

‘ಪಾಂಡಾ ಪೇರೆಂಟಿಂಗ್’ ಎಂದರೆ ಪಾಂಡಾ ಪ್ರಾಣಿಯಂತೆ ಮಕ್ಕಳನ್ನು ಬೆಳೆಸುವುದು. ಆ ಪ್ರಾಣಿಯು ಮಕ್ಕಳು ಹುಟ್ಟಿದ ಮೇಲೆ ಅವುಗಳಲ್ಲಿ ಧೈರ್ಯ ಮೂಡಲಿ ಎಂಬ ಕಾರಣಕ್ಕೆ ಸ್ವಾತಂತ್ರ್ಯವಾಗಿ ತಿರುಗಾಡಲು ಬಿಡುತ್ತದೆ. ಮಕ್ಕಳಿಗೆ ತನ್ನ ಅವಶ್ಯಕತೆ ಇದ್ದಾಗ ಮಾತ್ರ ಅವುಗಳ ಬಳಿ ಧಾವಿಸುತ್ತದೆ. ಈ ಪಾಂಡಾ ಪ್ರಾಣಿಯ ಪೇರೆಂಟಿಂಗ್ ಕ್ರಮವನ್ನು ಈಗ ಮನುಷ್ಯರು ಅನುಸರಿಸುತ್ತಿದ್ದಾರೆ. ಎಸ್ತರ್ ವೋಜ್ಸಿಕಿ ಎಂಬ ಲೇಖಕಿ ಈ ಪದವನ್ನು ಹುಟ್ಟುಹಾಕಿದ್ದರು. ‘ಪಾಂಡಾ ಪೇರೆಂಟಿಂಗ್ ಕ್ರಮದಿಂದ ಅತೀ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಜವಾಬ್ದಾರಿಯನ್ನು ಕಲಿಯುತ್ತಾರೆ. ಅಲ್ಲದೇ ಇದರಿಂದ ಹೆಚ್ಚು ಸ್ವತಂತ್ರ್ಯರಾಗುತ್ತಾರೆ’ ಎನ್ನುವುದು ವೋಜ್ಸಿಕಿ ಅವರ ಅಭಿಪ್ರಾಯ.

ಪಾಂಡಾ ಪೇರೆಂಟಿಂಗ್ ವಿಧಾನದಿಂದ ಮಕ್ಕಳಿಗಾಗುವ ಅನುಕೂಲಗಳು ಹಲವು. ಅಲ್ಲದೇ ಇಂದಿನ ಯುಗಕ್ಕೆ ಅವು ಅವಶ್ಯವೂ ಕೂಡ. ಹಾಗಾದರೆ ಪಾಂಡಾ ಪೇರೆಂಟಿಂಗ್ ವಿಧಾನವನ್ನು ಪೋಷಕರು ಅಳವಡಿಸಿಕೊಳ್ಳುವುದು ಹೇಗೆ?

ನಂಬಿಕೆ ಇರಿಸಿ

ಇತ್ತೀಚಿನ ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಇರಿಸಿಕೊಂಡಿರುತ್ತಾರೆ. ಆದರೆ ನಿರೀಕ್ಷೆಗೆ ತಕ್ಕಂತೆ ನಂಬಿಕೆ ಇರಿಸಿಕೊಳ್ಳುವುದು ಅಷ್ಟೇ ಮುಖ್ಯ. ಪೋಷಕರು ಹಾಗೂ ಮಕ್ಕಳ ನಡುವಿನ ಸಂಬಂಧ ಸದಾ ಹಸಿರಾಗಿರುವಂತೆ ಮಾಡಲು ನಂಬಿಕೆ ತುಂಬಾ ಮುಖ್ಯ. ಮಕ್ಕಳಿಗೆ ತೀರಾ ಅವಶ್ಯಕತೆ ಇದ್ದಾಗಲಷ್ಟೇ ಪೋಷಕರು ಮಧ್ಯೆ ಪ್ರವೇಶಿಸಬೇಕು.

ಬೇರೆಲ್ಲಾ ಪೇರೆಂಟಿಂಗ್ ವಿಧಾನಕ್ಕಿಂತ ಈ ವಿಧಾನ ಭಿನ್ನವಾಗಿ ನಿಲ್ಲುತ್ತದೆ. ಇದರಲ್ಲಿ ಮಕ್ಕಳ ಅಭಿವೃದ್ಧಿ ಹಾಗೂ ಬೆಳವಣಿಗೆಯ ಮೇಲೆ ಹಸ್ತಕ್ಷೇಪ ಮಾಡದೇ ಕೇವಲ ಅವರು ಸುರಕ್ಷಿತವಾಗಿದ್ದಾರೆಯೇ ಎಂಬುದನ್ನಷ್ಟೇ ಖಚಿತ ಪಡಿಸಿಕೊಳ್ಳಬೇಕು. ಇದರಿಂದ ಮಕ್ಕಳು ಅವರ ಆಸಕ್ತಿ ಹಾಗೂ ಒಲವಿನ ವಿಷಯದಲ್ಲಿ ಮುಂದುವರಿಯಲು ನೆರವಾಗುತ್ತದೆ.

ಮಕ್ಕಳ ಇಚ್ಛೆಯನ್ನು ಗೌರವಿಸಿ

ಮಕ್ಕಳು ಇಚ್ಛಿಸಿದ್ದನ್ನು ಮಾಡಲು ಬಿಡಿ. ಪ್ರಶ್ನೆಗಳು ಕೇಳುವುದು, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು, ಅಪಾಯಗಳನ್ನು ಎದುರಿಸುವುದು, ನಿಯಮಗಳನ್ನು ಮುರಿಯುವುದು, ತಪ್ಪು ಮಾಡುವುದು ಹಾಗೂ ಎಂಜಾಯ್ ಮಾಡುವುದಕ್ಕೆ ಮಕ್ಕಳಿಗೆ ಅವಕಾಶ ನೀಡಿ. ಅದರಲ್ಲೂ ಮುಖ್ಯವಾಗಿ ಮಕ್ಕಳು ಸರಿಯಾದುದನ್ನೇ ಮಾಡಬೇಕು ಎಂಬ ಹಟ ಬೇಡ. ತಪ್ಪುಗಳಿಂದ ಮಕ್ಕಳು ಅನೇಕ ವಿಷಯಗಳನ್ನು ಕಲಿಯುತ್ತವೆ. ಅಲ್ಲದೇ ಸೋಲಿನಿಂದ ಹೊರ ಬರಲು ತಮ್ಮದೇ ದಾರಿಯನ್ನು ಹುಡುಕಿಕೊಳ್ಳುತ್ತವೆ. ಆ ಮೂಲಕ ಅವರಲ್ಲಿ ಬೆಳವಣಿಗೆಯ ಸಾಮರ್ಥ್ಯವು ಹೆಚ್ಚುತ್ತದೆ. ಇದರಿಂದ ಮಕ್ಕಳಲ್ಲಿ ಸ್ವಾತಂತ್ರ್ಯ ಭಾವ ಮೂಡುವುದಲ್ಲದೇ ಜವಾಬ್ದಾರಿ ಪ್ರಜ್ಞೆ ಬೆಳೆಯಲು ನೆರವಾಗುತ್ತದೆ. ಮಕ್ಕಳು ತಮ್ಮ ಆಯ್ಕೆಯ ಕುರಿತು ಮಾತನಾಡುತ್ತಿದ್ದಾರೆ ಎಂದರೆ ಅವರು ಸ್ವತಂತ್ರ್ಯರಾಗಿ ಬೆಳೆಯುತ್ತಿದ್ದಾರೆ ಎಂದರ್ಥ. ‌

ಸಮತೋಲನ ಮುಖ್ಯ

ಸಂಪೂರ್ಣ ಸ್ವಾತಂತ್ರ್ಯ ಎಂದ ಕೂಡಲೇ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಡುವುದು ಎಂದರ್ಥವಲ್ಲ. ಪಾಂಡಾ ಪೇರೆಂಟಿಂಗ್‌ನಲ್ಲೂ ಮಕ್ಕಳಿಗೆ ಕೆಲವೊಂದು ಮೂಲನಿಯಮಗಳನ್ನು ಹೇರುವುದು ಹಾಗೂ ಗಡಿರೇಖೆಗಳನ್ನು ರೂಪಿಸುವ ಅವಶ್ಯಕತೆ ಇದೆ. ಆ ನಿಯಮಗಳು ‘ಹೋಮ್‌ ವರ್ಕ್’‌, ‘ಆಟದ ಸಮಯ’ ಹಾಗೂ ‘ಸ್ಕ್ರೀನ್ ಟೈಂ’ ವಿಷಯದ ಮೇಲೆ ಅವಲಂಬಿತವಾಗಿದೆ. ಈ ವಿಷಯಗಳಲ್ಲಿ ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳು ಅವರನ್ನು ಅವರು ಕಾಪಾಡಿಕೊಳ್ಳಲು ಹಾಗೂ ಸುರಕ್ಷಿತರನ್ನಾಗಿಸಿಕೊಳ್ಳಲು ಕೆಲವೊಂದು ಕೌಶಲಗಳನ್ನು ಪೋಷಕರು ರೂಢಿಸಬೇಕು.

ಮಾರ್ಗದರ್ಶನವಿರಲಿ

ಬೆಳೆಯುವ ವಯಸ್ಸಿನಲ್ಲಿ ಮಕ್ಕಳು ಇಡುವ ಪ್ರತಿ ಹೆಜ್ಜೆಯಲ್ಲೂ ಅವರು ಆಶ್ಚರ್ಯ ಹಾಗೂ ಹೊಸತನವನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಎಷ್ಟೇ ಸ್ವಾತಂತ್ರ್ಯ ನೀಡಿದರು ಅವರು ವಯಸ್ಸಿಗೆ ತಕ್ಕಂತೆ ವರ್ತಿಸುತ್ತಾರೆ, ಅಲ್ಲದೇ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡಿ ಸರಿ ದಾರಿಯಲ್ಲಿ ಹೋಗುವಂತೆ ಮಾಡುವುದು ಅತೀ ಅಗತ್ಯ. ಮಕ್ಕಳಿಗೆ ಶಿಸ್ತುಕ್ರಮ ಕಲಿಸುವಾಗ ಅವರನ್ನು ಬೆದರಿಸುವುದು, ಬಯ್ಯುವುದು ಮಾಡುವುದು ತರವಲ್ಲ. ಪಾಂಡಾ ಪೇರೆಂಟಿಂಗ್‌ನಲ್ಲಿ ಪೋಷಕರು ತಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅತೀ ಅಗತ್ಯ. ಸದಾ ಶಾಂತವಾಗಿರಲು ಹಾಗೂ ಮಕ್ಕಳೊಂದಿಗೆ ಮಕ್ಕಳಂತಿರಲು ಪ್ರಯತ್ನಿಸಬೇಕು. ‌

ಮುಕ್ತವಾಗಿ ಮಾತನಾಡಿ

ಯಾವುದೇ ವಿಷಯವಾಗಲಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಹಾಗೂ ಅವರ ಹೇಳುವುದನ್ನು ಬೇಸರವಿಲ್ಲದೆ ಕೇಳಿಸಿಕೊಳ್ಳಿ. ಆಗ ಮಕ್ಕಳು ಹಾಗೂ ನಿಮ್ಮ ನಡುವೆ ಸೌಹಾರ್ದತೆ ಹೆಚ್ಚುತ್ತದೆ. ಸ್ವತಂತ್ರ್ಯರಾಗಿ ಬಿಟ್ಟಿದ್ದೇವೆ ಎಂಬ ಕಾರಣಕ್ಕೆ ಪ್ರೀತಿ ತೋರದೆ ಇರುವುದಲ್ಲ.ಮಕ್ಕಳ ಮೇಲೆ ಪ್ರೀತಿ ತೋರುವುದು ಅವರ ಭಾವನೆಗಳನ್ನು ಗೌರವಿಸುವುದು ಮಾಡುವುದರಿಂದ ಅವರಲ್ಲಿ ಪೋಷಕರ ಮೇಲೆ ನಂಬಿಕೆಯೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT