ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ | ಜಿಎಸ್‌ಟಿ ಹೇರಿಕೆ– ಹಣಕಾಸಿನ ಆರೋಗ್ಯ, ಜನಹಿತ ಎರಡೂ ಮುಖ್ಯ

Last Updated 22 ಜುಲೈ 2022, 19:15 IST
ಅಕ್ಷರ ಗಾತ್ರ

ಜಿಎಸ್‌ಟಿ ಹೇರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಆತ್ಮದ್ರೋಹ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಧಾನ್ಯಗಳು, ಮೊಸರಿಗೆ ಜಿಎಸ್‌ಟಿ ವಿಧಿಸಲು ನಿರ್ಧರಿಸಿದ ಸಭೆಯಲ್ಲಿ ತೆಲಂಗಾಣದ ಟಿಆರ್‌ಎಸ್, ಕೇರಳದ ಎಡರಂಗ, ಪಶ್ಚಿಮ ಬಂಗಾಳದ ಟಿಎಂಸಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲಿ ಅವರೇಕೆ ವಿರೋಧ ಮಾಡಲಿಲ್ಲ...

***

ಅಕ್ಕಿ, ಮೊಸರು, ಧಾನ್ಯಕ್ಕೆ ಜಿಎಸ್‌ಟಿ ವಿಧಿಸಿದ್ದನ್ನು ವಿರೋಧಿಸುವವರು ಅಕ್ಕಪಕ್ಕದ ಶ್ರೀಲಂಕಾ, ಪಾಕಿಸ್ತಾನ, ಮಾಲ್ದೀವ್ಸ್‌ನಂತಹ ದೇಶಗಳ ಆರ್ಥಿಕ ಸ್ಥಿತಿಗತಿ ಗಮನಿಸಲಿ. ಆಗ ಸರ್ಕಾರದ ನಿಲುವು ಅರ್ಥವಾಗುತ್ತದೆ. ಬರೀ ರಾಜಕೀಯದ ಉದ್ದೇಶಕ್ಕಾಗಿ ಟೀಕಿಸುವುದು ಸರಿಯಲ್ಲ. ಜಿಎಸ್‌ಟಿ ಸಂಗ್ರಹಗೊಂಡರೆ ಮಾತ್ರ ಸರ್ಕಾರಕ್ಕೆ ಆದಾಯ. ದೇಶ ಆರ್ಥಿಕವಾಗಿ ಸುಭದ್ರವಾಗಿದ್ದರೆ ಅದೇ ಹಣ ಮತ್ತೆ ಜನರ ಅವಶ್ಯಕತೆಗಳಿಗೆ ಬಳಕೆಯಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.

ಜಿಎಸ್‌ಟಿಯಿಂದ ಮೊಸರು, ಧಾನ್ಯದ ದರ ಹೆಚ್ಚಾದರೆ ಅದರಿಂದ ಬರುವ ಆದಾಯ ಉತ್ಪಾದಕರಿಗೆ (ರೈತರಿಗೆ) ಸಹಾಯಧನದ ರೂಪದಲ್ಲಿ ಕೊಡಲು ಬಳಕೆಯಾಗುತ್ತದೆ. ಇದರಿಂದ ಅವರಿಗೂ ಅನುಕೂಲವಾಗುತ್ತದೆ. ಇವೆಲ್ಲಾ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಕ್ರಿಯೆ. ಆದರೆ ಟೀಕೆ ಮಾಡುವವರು ಇಂತಹದ್ದನ್ನೆಲ್ಲ ಗಮನಿಸುವುದಿಲ್ಲ.

ಸತತ ಮೂರು ವರ್ಷ ಕೋವಿಡ್‌ ಸಾಂಕ್ರಾಮಿಕ ಜಗತ್ತನ್ನು ಕಾಡಿದೆ. ಇದರಿಂದ ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕತೆ ಹೊಂದಿದ್ದ ದೇಶಗಳು ತತ್ತರಿಸಿ ಹೋಗಿವೆ. ಏಷ್ಯಾ, ಆಫ್ರಿಕಾ, ಯೂರೋಪ್‌ನ ಹಲವು ರಾಷ್ಟ್ರಗಳ ಆರ್ಥಿಕತೆಯನ್ನುಕೋವಿಡ್‌ ಸಾಂಕ್ರಾಮಿಕವು ಈಗ ದಿವಾಳಿ ಅಂಚಿಗೆ ನೂಕಿದೆ. ಅಲ್ಲಲ್ಲಿ ರಾಜಕೀಯ ಕ್ಷೋಭೆಯನ್ನೂ ಸೃಷ್ಟಿಸಿದೆ. ಈ ಹೊತ್ತಿನಲ್ಲಿ ದೇಶದ ಆರ್ಥಿಕತೆಗೆ ಜಿಎಸ್‌ಟಿ ಆದಾಯವೇ ಬಲ ತುಂಬಿದೆ. ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಂಡು ಸದೃಢವಾಗಲು ನೆರವಾಗಿದೆ.

ಈಗ ಜಿಎಸ್‌ಟಿ ಜಾರಿ ವಿಚಾರದಲ್ಲಿ ವಿರೋಧ ಪಕ್ಷಗಳು ಆತ್ಮದ್ರೋಹ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬರೀ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಹಣಕಾಸು ಮಂತ್ರಿಗಳು ಮಾತ್ರ ಭಾಗಿಯಾಗಿರುವುದಿಲ್ಲ.ದೇಶದ ಅಷ್ಟೂ ರಾಜ್ಯದವರು ಇರುತ್ತಾರೆ. ಅಕ್ಕಿ, ಮೊಸರಿಗೆ ಜಿಎಸ್‌ಟಿ ವಿಧಿಸಲು ನಿರ್ಧರಿಸಿದ ಸಭೆಯಲ್ಲಿ ತೆಲಂಗಾಣದ ಟಿಆರ್‌ಎಸ್, ಕೇರಳದ ಎಡರಂಗ, ಪಶ್ಚಿಮ ಬಂಗಾಳದ ಟಿಎಂಸಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲಿ ಅವರೇಕೆ ವಿರೋಧ ಮಾಡಲಿಲ್ಲ. ಜಿಎಸ್‌ಟಿ ಮಂಡಳಿಯ ನಿರ್ಧಾರಕ್ಕೆ ಒಮ್ಮತವಿರದಿದ್ದರೆ ಅವರು ಸಭೆಯಿಂದ ಎದ್ದು ಹೊರಬರಬೇಕಿತ್ತು. ತಮ್ಮ ವಿರೋಧ ದಾಖಲಿಸಬೇಕಿತ್ತು. ಆದರೆ ಅಲ್ಲಿ ಸುಮ್ಮನಿದ್ದರು. ಒಪ್ಪಿಗೆ ಕೂಡ ಸೂಚಿಸಿದ್ದಾರೆ. ಈಗ ಮಾಧ್ಯಮಗಳ ಮುಂದೆ ವಿರೋಧಿಸುತ್ತಿದ್ದಾರೆ. ಇದು ಆಗಬಾರದು.ಹೀಗೆ ಸಂಗ್ರಹಿಸಲಾದ ಆದಾಯದಲ್ಲಿ ಶೇ 80ರಷ್ಟು ವಾಪಸ್ ಆ ರಾಜ್ಯಕ್ಕೆ ಬರುತ್ತದೆ ಎಂಬುದು ಗಮನಾರ್ಹ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕುಳಿತಾಗ ತಮಗೆ ಬರುವ ಆದಾಯ ಮಾತ್ರ ನೋಡುತ್ತಾರೆ. ಇದು ಇಬ್ಬಂದಿತನವಲ್ಲವೇ?

ದೇಶದಲ್ಲಿ ಈ ಮೊದಲು ಪರ್ಯಾಯ ಆರ್ಥಿಕತೆ ಜಾರಿಯಲ್ಲಿತ್ತು. ತೆರಿಗೆ ವಂಚನೆಯೇ ಇದರ ಮೂಲವಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನೆಲ್ಲ ತೆಗೆದು ಅರ್ಥಿಕತೆಯನ್ನು ಒಂದೇ ಹಾದಿಗೆ ತರಲಾಗಿದೆ. ಅರ್ಹರು ನ್ಯಾಯಯುತವಾಗಿ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಯಾಗಿದೆ. ಅದರ ಫಲವಾಗಿಯೇ ಜಿಎಸ್‌ಟಿ ಸಂಗ್ರಹ ಪ್ರಮಾಣ ಈ ಮೊದಲು ಮಾಸಿಕ ₹80 ಸಾವಿರ ಕೋಟಿಯಿಂದ ₹90 ಸಾವಿರ ಕೋಟಿ ಇದ್ದದ್ದು ಈಗ ₹1.42 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ತೆರಿಗೆ ಸಂಗ್ರಹಣೆಯಲ್ಲಿ ಸೋರಿಕೆ ತಡೆಗಟ್ಟಿದ ಪರಿಣಾಮ ₹60 ಸಾವಿರ ಕೋಟಿಯಷ್ಟು ಆದಾಯ ಏರಿಕೆಯಾಗಿದೆ. ಯುಪಿಎ ಸರ್ಕಾರದ ಆಳ್ವಿಕೆಯ ಅವಧಿಯಲ್ಲಿ ದೇಶದಲ್ಲಿ 2.80 ಕೋಟಿ ಆದಾಯ ತೆರಿಗೆ ಪಾವತಿದಾರರು ಇದ್ದರು. ಈಗ ಅವರ ಸಂಖ್ಯೆ 5.78 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸರ್ಕಾರಕ್ಕೆ ನೇರ ಮತ್ತು ಪರೋಕ್ಷ ಆದಾಯದಲ್ಲಿನ ಇಲ್ಲಿಯವರೆಗಿನ ವ್ಯತ್ಯಾಸ ಒಂದು ಹಂತದಲ್ಲಿ ಸರಿಯಾಗಿದೆ. ಮುಂದಿನ ದಿನಗಳಲ್ಲಿ ಆದಾಯ, ಜಿಎಸ್‌ಟಿ ಸಂಗ್ರಹ ಕ್ರಮಬದ್ಧಗೊಂಡು ಸರಿಯಾದ ವ್ಯಾಪಾರ ಮುನ್ನೆಲೆಗೆ ಬರಲಿದೆ. ಹೆಚ್ಚಳಗೊಂಡಿರುವಅಗತ್ಯವಸ್ತುಗಳ ದರ ಕಡಿಮೆ ಆಗಿ ಈಗ ಜನರಿಗೆ ಆಗುತ್ತಿರುವ ಆರ್ಥಿಕ ಹೊರೆಯೂ ನಿವಾರಣೆಯಾಗಲಿದೆ.

ಈಗಿನ ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರ್ಕಾರವು ಮಧ್ಯಮ ವರ್ಗದ ಸ್ನೇಹಿಯಾಗಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ ಮಾಡಿದೆ. ಇದರಿಂದ ಇಲ್ಲಿಯವರೆಗೂ ಮಧ್ಯಮ ವರ್ಗದವರಿಗೆ ಆಗುತ್ತಿದ್ದ ಆರ್ಥಿಕ ಹೊರೆ ಕಡಿಮೆ ಆಗಿದೆ. ಈ ಹಿಂದೆ ಆದಾಯ ತೆರಿಗೆ ಪಾವತಿಸುವುದು ನಷ್ಟದ ಬಾಬ್ತು ಎಂದೇ ಹಲವರು ಭಾವಿಸಿದ್ದರು. ಹೀಗಾಗಿ ತೆರಿಗೆ ತಪ್ಪಿಸುವುದು ಸಾಮಾನ್ಯವಾಗಿತ್ತು. ಆದಾಯ ತೆರಿಗೆ ಇಲಾಖೆ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯವೂ ಸದಾ ಅವರನ್ನು ಕಾಡುತ್ತಿತ್ತು. ಇದು ಆದಾಯ ತೆರಿಗೆ ಇಲಾಖೆ ಹಾಗೂ ಜನರ ನಡುವೆ ಬಹಳ ಅಂತರ ಸೃಷ್ಟಿಸಿತ್ತು. ಆ ಹೆದರಿಕೆ ಈಗ ತಪ್ಪಿದೆ. ಆದಾಯ ತೆರಿಗೆ ಸರಿಯಾಗಿ ಪಾವತಿಸಿದರೆ ಬ್ಯಾಂಕ್‌ನಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ, ಪ್ರೊತ್ಸಾಹಧನ ಸೇರಿದಂತೆ ಬೇರೆ ಬೇರೆ ಸವಲತ್ತು, ವಹಿವಾಟು ವಿಸ್ತರಣೆಗೆ ನೆರವು ಸೇರಿದಂತೆ ವಿವಿಧ ಉತ್ತೇಜನಕಾರಿ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಈ ರೀತಿ ತೆರಿಗೆ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲಾಗಿದೆ.

ಇಲ್ಲಿಯವರೆಗೂ ಉಚಿತ ಕೊಡುಗೆಗಳು ದೇಶದ ಆರ್ಥಿಕತೆಗೆ ಹೊರೆಯಾಗಿದ್ದವು. ಇಂತಹ ಕೊಡುಗೆಗಳು ನಿಜವಾದ ಫಲಾನುಭವಿಗಳಿಗೆ ಸಿಗದೆ ಸಿರಿವಂತರು ಹಾಗೂ ಉಳ್ಳವರ ಪಾಲಾಗುತ್ತಿದ್ದವು. ಅದನ್ನು ತಪ್ಪಿಸಿ ಅರ್ಹರು ಮಾತ್ರ ಇವುಗಳ ಪ್ರಯೋಜನಪಡೆಯುವಂತೆ ಮಾಡಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಅದರ ಫಲವಾಗಿ ಬಿಪಿಎಲ್‌ ಕಾರ್ಡ್‌ಗೆ ಕೆವೈಸಿ ಮಾಡುವುದು, ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಇದರಿಂದ ಉಚಿತ ಕೊಡುಗೆಗಳು ಮಾತ್ರವಲ್ಲ ಸಾಲ ಮನ್ನಾದಂತಹ ಯೋಜನೆ ದುರುಪಯೋಗವಾಗುವುದಕ್ಕೂ ತಡೆಹಾಕಿದಂತಾಗಿದೆ. ಇದು ಸಂಪೂರ್ಣವಾಗಿ ಫಲಪ್ರದವಾಗಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೀಗೆಯೇ ಮುಂದುವರಿಯುವುದಿಲ್ಲ. ಜಿಎಸ್‌ಟಿ ಮಂಡಳಿ ಪ್ರತಿ ತಿಂಗಳು ಸಭೆ ಸೇರುತ್ತದೆ. ಅಲ್ಲಿ ಬೆಲೆ ಯಾವುದಕ್ಕೆ ಜಾಸ್ತಿ, ಕಡಿಮೆ ಮಾಡಬೇಕು, ಜನರಿಗೆ ಏನು ಹೊರೆಯಾಗಿದೆ ಎಂಬುದರ ಬಗ್ಗೆ ವಿಸ್ತೃತ ಚರ್ಚೆ ಆಗುತ್ತದೆ. ಹೀಗಾಗಿ ಹೆಚ್ಚಳಗೊಂಡಿರುವ ಅಗತ್ಯ ವಸ್ತುಗಳ ಬೆಲೆ ಮುಂದಿನ ಆರು ತಿಂಗಳಲ್ಲಿ ಕಡಿಮೆ ಆಗಬಹುದು.

ಇನ್ನೊಂದು ಮಾತು...ಚುನಾವಣೆ ಹತ್ತಿರ ಬಂದಾಗ ಮಾತ್ರಸರ್ಕಾರವು ಡೀಸೆಲ್, ಪೆಟ್ರೋಲ್, ಅನಿಲ ಸಿಲಿಂಡರ್‌ನಂತಹ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತದೆ. ನಂತರ ಏರಿಕೆ ಮಾಡುತ್ತದೆ ಎಂದು ವಿರೋಧಿಗಳು ದೂರುತ್ತಾರೆ. ಆದರೆ ಅದು ಹಾಗೆ ಅಲ್ಲ. ಕರ್ನಾಟಕದಲ್ಲಿಯೇ ಇನ್ನೆರಡು ತಿಂಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆಯಲಿದೆ. ಮುಂದಿನ ಆರು ತಿಂಗಳಲ್ಲಿ ವಿಧಾನಸಭೆಗೂ ಚುನಾವಣೆ ಘೋಷಣೆಯಾಗಲಿದೆ. ಇನ್ನು ದೇಶದಲ್ಲಿ ಪ್ರತೀ ಮೂರು ಇಲ್ಲವೇ ಆರು ತಿಂಗಳಿಗೊಮ್ಮೆ ಯಾವುದಾದರೂ ಚುನಾವಣೆ ನಡೆಯುತ್ತಲೇ ಇರುತ್ತವೆ. ಹೀಗಾಗಿ ಬೆಲೆ ಏರಿಕೆ ಅಥವಾ ಇಳಿಕೆಗೆ ಚುನಾವಣೆ ಜತೆಗೆ ಸಂಬಂಧವಿಲ್ಲ. ಬದಲಿಗೆ ಅಂತರರಾಷ್ಟ್ರೀಯ ವಿದ್ಯಮಾನಗಳು, ಮಾರುಕಟ್ಟೆ ಯಲ್ಲಿನ ಸ್ಥಿತ್ಯಂತರಗಳು, ಹವಾಮಾನ ವೈಪರೀತ್ಯ, ಸಾಂಕ್ರಾಮಿಕಗಳು ಕೂಡ ಕೆಲವೊಮ್ಮೆ ದೇಶದ ಆರ್ಥಿಕತೆಯ ಸ್ಥಿತಿಗತಿ ನಿರ್ಧರಿಸುತ್ತವೆ. ಇಲ್ಲಿ ಸರ್ಕಾರಕ್ಕೆ ಚುನಾವಣೆಗಳಿಗಿಂತ ದೇಶದ ಹಣಕಾಸು ಸ್ಥಿತಿಯ ಆರೋಗ್ಯ, ಸಾಮಾನ್ಯ ಜನರ ಹಿತ ಬಹಳ ಮುಖ್ಯ.

ಲೇಖಕ: ವಿಧಾನಪರಿಷತ್‌ನ ಬಿಜೆಪಿ ಸದಸ್ಯ

ನಿರೂಪಣೆ: ವೆಂಕಟೇಶ ಜಿ.ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT