ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಾರ್ವಜನಿಕ ಆರೋಗ್ಯ ಮತ್ತು ಒಕ್ಕೂಟ ವ್ಯವಸ್ಥೆ

ಆರೋಗ್ಯ ಸೇವೆ: ರಾಜ್ಯಗಳಿಗೆ ಇನ್ನಷ್ಟು ಸ್ವಾಯತ್ತತೆ ನೀಡಬೇಕಾದ ತುರ್ತಿದೆ
Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ನೀವೊಬ್ಬ ಹರೆಯದ ಹುಡುಗ. ಜಂಕ್ ಆಹಾರ ಅಂದರೆ ಪಂಚಪ್ರಾಣ. ವ್ಯಾಯಾಮ ಅಂದರೆ ಮೈಲು ದೂರ. ಹೀಗಿರುವಾಗ, ಒಂದು ದಿನ ಆರೋಗ್ಯ ಕೈ ಕೊಟ್ಟಾಗ ನೀವಂದುಕೊಳ್ಳುತ್ತೀರಿ ‘ಇಲ್ಲ, ಇನ್ನೆಂದೂ ಜಂಕ್ ತಿನ್ನಲ್ಲ, ದಿನವೂ ವ್ಯಾಯಾಮ ಮಾಡ್ತೀನಿ, ಇದೊಂದು ಸಲ ಹುಷಾರಾದ್ರೆ ಸಾಕಪ್ಪ’. ಹುಷಾರಾದ ಮೇಲೆ ಮೈಮರೆತು ಅದೇ ಹಳೆಯ ಅಭ್ಯಾಸ ಮುಂದುವರಿಸುತ್ತೀರಿ ಅಂದುಕೊಳ್ಳಿ. ಆರೋಗ್ಯದ ವಿಷಯದಲ್ಲಿ ನಿಮ್ಮದು ಅತ್ಯಂತ ಬೇಜವಾಬ್ದಾರಿಯ ನಡತೆ ಅಂತ ಯಾರೂ ಹೇಳಬಹುದು. ಆದರೆ ಆರೋಗ್ಯದ ವಿಷಯದಲ್ಲಿ ದೇಶವೊಂದರ ನಡವಳಿಕೆಯೂ ಹೀಗೆಯೇ ಇದ್ದರೆ ಏನಾಗುತ್ತದೆ ಅನ್ನುವುದನ್ನು ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಉಂಟಾದ ಅಪಾರ ಸಾವು, ನೋವಿನ ಕತೆಯಲ್ಲಿ ಕಾಣಬಹುದು.

ಗಡ್ಡಕ್ಕೆ ಬೆಂಕಿ ಬಿದ್ದಾಗಲೇ ಬಾವಿ ತೋಡುವ ಧೋರಣೆಯಿಂದ, ಆರೋಗ್ಯದ ವಿಷಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಮಾಡಬೇಕಾದಷ್ಟು ಹೂಡಿಕೆ ಮಾಡದ ಪರಿಣಾಮವನ್ನು, ಒಂದು ದೇಶವಾಗಿ ನಮ್ಮ ಜನರು ಪೀಳಿಗೆಗಳಿಂದ ಅನುಭವಿಸುತ್ತಲೇ ಬಂದಿದ್ದಾರೆ.

ಮುಂದುವರಿದ ನಾಡುಗಳಲ್ಲಿ ಗಮನಿಸಬಹುದಾದ ಸಾಮಾನ್ಯವಾದ ವಿಚಾರವೆಂದರೆ, ಜನರ ಆರೋಗ್ಯ ಮತ್ತು ಶಿಕ್ಷಣದ ಕುರಿತಂತೆ ಸರ್ಕಾರಗಳು ಮಾಡುವ ಹೂಡಿಕೆ. ಆದರೆ ಈ ಎರಡು ಮುಖ್ಯವಾದ ವಿಚಾರಗಳಲ್ಲಿ ನಾವು ಎಲ್ಲರನ್ನೂ ಒಳಗೊಳ್ಳುವ ಬದಲು ಉಳ್ಳವರಿಗೊಂದು, ಇಲ್ಲದವರಿಗೊಂದು ಏರ್ಪಾಡು ಅನ್ನುವತ್ತ ಹೋಗುತ್ತಿದ್ದೇವೆ. ಹಾಗಿದ್ದರೆ ಎಪ್ಪತ್ತು ವರ್ಷಗಳಲ್ಲಿ ಇಂತಹದ್ದೊಂದು ‘ಕೆಟ್ಟು ನಿಂತ’ ಹಂತಕ್ಕೆ ಯಾಕೆ ತಲುಪಿದ್ದೇವೆ?

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದ ಶೇ 65-70ರಷ್ಟು ಜನರು ಬಡತನದ ರೇಖೆಯ ಕೆಳಗಿದ್ದರು. ಸರಾಸರಿ ಜೀವಿತಾವಧಿ ಬರೀ 41 ವರ್ಷಗಳಷ್ಟಿತ್ತು. ಜನ ಬಡವರಾಗಿದ್ದಾಗ ಸರ್ಕಾರ ಇನ್ನೂ ಬಡವಾಗಿರುತ್ತದೆ. ಯಾಕೆಂದರೆ ಜನರು ಚೆನ್ನಾಗಿ ಗಳಿಸಿ, ತೆರಿಗೆ ಕಟ್ಟಿದಾಗಲಷ್ಟೇ ಸರ್ಕಾರಕ್ಕೂ ಜನರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವ ಆರ್ಥಿಕ ಶಕ್ತಿ, ಅನುಷ್ಠಾನದ ಶಕ್ತಿ ದೊರಕುವುದು. ಸ್ವತಂತ್ರ ಭಾರತದ ಮೊದಲ ನಲವತ್ತು ವರ್ಷಗಳ ಆಳ್ವಿಕೆಯಲ್ಲಿ ಆರ್ಥಿಕತೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುವ ‘ಲೈಸೆನ್ಸ್‌ರಾಜ್ ವ್ಯವಸ್ಥೆ’ಯು ಜನರು ಆರ್ಥಿಕವಾಗಿ ಸಬಲರಾಗಲು ಬೇಕಾದ ವ್ಯವಸ್ಥೆಯನ್ನು ಕಟ್ಟಿಕೊಡುವಲ್ಲಿ ಸೋತಿತು.

ತೊಂಬತ್ತೊಂದರ ಆರ್ಥಿಕ ಸುಧಾರಣೆ ಹಲವು ರೀತಿಯಲ್ಲಿ ಜನರನ್ನು ಬಡತನದ ರೇಖೆಯಿಂದ ಹೊರತರಲು ನೆರವಾಗುವುದರ ಜೊತೆಗೆ ಸರ್ಕಾರಗಳ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಹರಿಸಲು ನೆರವಾಯಿತು. ಜಾಗತೀಕರಣವು ಆರ್ಥಿಕ ಅಸಮಾನತೆ ಇನ್ನಷ್ಟು ಹೆಚ್ಚಲು ಕಾರಣವಾಗಿದೆ ಅನ್ನುವ ಮಾತು ನಿಜವಾದರೂ ತೊಂಬತ್ತರ ಮುಂಚಿನ ಮತ್ತು ನಂತರದ ಭಾರತದ ಸ್ಥಿತಿಯನ್ನು ಹೋಲಿಸಿದಾಗ ಖಂಡಿತವಾಗಿಯೂ ಹೆಚ್ಚು ಒಳಿತಾಗಿದೆ ಅನ್ನಬಹುದು. ಆದರೆ ಸರ್ಕಾರ ಬಡವಾಗಿದ್ದಾಗ ಆಗಲೀ ತಕ್ಕಮಟ್ಟಿಗೆ ಸಿರಿವಂತವಾದಾಗ ಆಗಲೀ ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಯ ವಿಷಯದಲ್ಲಿ ಅದು ಜಂಕ್‌ಫುಡ್‌ಪ್ರಿಯ ಯುವಕನ ಉದಾಹರಣೆಯಂತೆಯೇ ನಡೆದುಕೊಂಡಿದೆ.

ಇಲ್ಲಿ ಎರಡು ಮುಖ್ಯವಾದ ತೊಂದರೆಗಳಿವೆ. ಮೊದಲನೆಯದು, ಕಾಯಿಲೆ ಬರದಂತೆ ತಡೆಯುವ ವ್ಯವಸ್ಥೆಯ ಬದಲು ಗುಣಪಡಿಸುವ ವ್ಯವಸ್ಥೆಯತ್ತಲೇ ಗಮನ ಹರಿಸಿದ್ದು. ತೃತೀಯ ಜಗತ್ತಿನ ಬಹುತೇಕ ದೇಶಗಳಲ್ಲಿ ಆರೋಗ್ಯದ ಬಹುಪಾಲು ಸಮಸ್ಯೆಗಳು ಅಶುದ್ಧ ನೀರು, ಕಲುಷಿತ ಗಾಳಿಯಿಂದ ಬರುತ್ತವೆ. ಕುಡಿಯಲು ಶುದ್ಧ ನೀರು, ಕೆರೆ-ನದಿಗಳನ್ನು ಕಾಪಿಟ್ಟುಕೊಳ್ಳುವತ್ತ ಗಮನ ಕೊಟ್ಟರೆ ನೀರಿನಿಂದ ಹರಡುವ ಕಾಯಿಲೆಗಳನ್ನೂ, ಸಾರ್ವಜನಿಕ ಸಾರಿಗೆಗೆ ಬೇಕಾದ ಹೂಡಿಕೆ, ದೂಳಿನ ಸಮಸ್ಯೆ ಕಡಿಮೆಯಾಗಿಸುವಂತೆ ರಸ್ತೆಗಳ ನಿರ್ಮಾಣ, ಕಾರ್ಖಾನೆಗಳು ಮಿತಿಯೊಳಗೆ ಹೊಗೆಯುಗುಳು
ವಂತಹ ಹೆಜ್ಜೆಗಳನ್ನು ಸಮರ್ಥವಾಗಿ ಇರಿಸಿದರೆ, ಅಶುದ್ಧ ಗಾಳಿಯಿಂದ ಬರುವ ಕಾಯಿಲೆಗಳನ್ನೂ ತಡೆಯಬಹುದು. ಆದರೆ ಇಂತಹ ದೂರಗಾಮಿಯಾದ, ಚುನಾವಣಾ ರಾಜಕೀಯದಲ್ಲಿ ಅಷ್ಟು ಮಹತ್ವ ಪಡೆಯದ ರೋಗತಡೆ ಏರ್ಪಾಡುಗಳ ಬದಲು ಲಾಗಾಯ್ತಿನಿಂದಲೂ ದೊಡ್ಡ ಆಸ್ಪತ್ರೆಯಂತಹ ‘ಕಣ್ಣಿಗೆ ಕಾಣಿಸುವ’ ಗುಣಪಡಿಸುವ ವ್ಯವಸ್ಥೆಗಳಿಗೇ ಆದ್ಯತೆ ಕೊಟ್ಟ ಪರಿಣಾಮವಾಗಿ, ದೇಶದ ಶೇ 65ರಷ್ಟು ಆರೋಗ್ಯ ಸಂಬಂಧಿ ಖರ್ಚು ಜನರ ವೈಯಕ್ತಿಕ ಹಣದಿಂದ ಆಗುತ್ತಿದೆ.

ಇದರ ನಡುವೆ ಗುಣಪಡಿಸುವ ವ್ಯವಸ್ಥೆಯಲ್ಲೂ ಸರಿಯಾದ ಮೂಲಸೌಕರ್ಯಗಳನ್ನು ಕಲ್ಪಿಸದಿರುವುದು, ವೈದ್ಯಕೀಯ ಶಿಕ್ಷಣವೊಂದು ಲಾಭದಾಯಕ ಉದ್ಯಮವಾಗುವ ವ್ಯವಸ್ಥೆ ಕಟ್ಟಿದ್ದು ಆರೋಗ್ಯ ವ್ಯವಸ್ಥೆ ಶಿಥಿಲವಾಗಲು ಕಾರಣವಾಯಿತು. ಇದರ ಮೇಲೆ ಈಗ ‘ನೀಟ್’ ಬಗೆಯ ಪರೀಕ್ಷಾ ವ್ಯವಸ್ಥೆಯ ಮೂಲಕ ಪಟ್ಟಣಗಳಲ್ಲಿನ, ಕೋಚಿಂಗ್ ವ್ಯವಸ್ಥೆಯ ಲಾಭ ಪಡೆದುಕೊಳ್ಳುವ ಮಕ್ಕಳೇ ವೈದ್ಯರಾಗುವ ಏರ್ಪಾಡು ಕಟ್ಟಿರುವುದರಿಂದ ಹಳ್ಳಿ, ಚಿಕ್ಕ ಪಟ್ಟಣಗಳಲ್ಲಿನ ಆರೋಗ್ಯ ವ್ಯವಸ್ಥೆ ಇನ್ನಷ್ಟು ತೊಂದರೆಯತ್ತಲೇ ಸಾಗುತ್ತಿದೆ.

ಎರಡನೆಯದು, ಆರೋಗ್ಯ ಸೇವೆಗಳು ಸಂವಿಧಾನದ ಪ್ರಕಾರ ರಾಜ್ಯದ ಪಟ್ಟಿಯಲ್ಲಿದ್ದರೂ ಅಲ್ಲಿನ ನೀತಿ-ನಿಯಮ ರೂಪಿಸುವಿಕೆಯಲ್ಲಿ, ಅದಕ್ಕೆ ಬೇಕಾದ ಸಂಪನ್ಮೂಲವನ್ನು ಹೊಂದಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರಗಳಿಗೆ ಸರಿಯಾದ ಸ್ವಾಯತ್ತತೆ ಇಲ್ಲದಿರುವುದು. ಇದರಿಂದ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹೆಚ್ಚು ತಾರತಮ್ಯದ ವ್ಯವಸ್ಥೆಯತ್ತ ಸಾಗಿದೆ ಅನ್ನಬಹುದು.

ಭಾರತದ ತೆರಿಗೆ ವ್ಯವಸ್ಥೆ ಸ್ವಾತಂತ್ರ್ಯ ಬಂದಾಗಿ ನಿಂದಲೂ ಒಕ್ಕೂಟ ಸರ್ಕಾರದ ಕಡೆಗೆ ವಾಲಿದೆ. ಈಗಲೂ ಅದು ಇನ್ನಷ್ಟು ಕೇಂದ್ರೀಕೃತ ಆಗುತ್ತಿರುವುದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ ಜಿಎಸ್‌ಟಿ. ರಾಜ್ಯ ಸರ್ಕಾರಗಳಿಗೆ ಒಂದು ಸಾರ್ವಭೌಮತ್ವ, ಅಸ್ತಿತ್ವ ಅನ್ನುವುದು ಒದಗುವುದೇ ಅವುಗಳಿಗೆ ತಮ್ಮ ಅಗತ್ಯಗಳಿಗೆ ತಕ್ಕಂತೆ ತೆರಿಗೆ ಹೆಚ್ಚಿಸುವ, ತಗ್ಗಿಸುವ ಸ್ವಾಯತ್ತತೆ ಇದ್ದಾಗ. ಕೂಲಿಗಾಗಿ ಕಾಳು, ಬಿಸಿಯೂಟದಂತಹ ಯೋಜನೆಗಳು ಮೊದಲು ರಾಜ್ಯಗಳಲ್ಲಿ ಹುಟ್ಟಿ, ಯಶಸ್ಸು ಕಂಡು ನಂತರ ದೇಶದ ಮಟ್ಟಕ್ಕೆ ಹರಡಿದ್ದರೆ, ರಾಜ್ಯಗಳಲ್ಲಿ ಅದನ್ನು ಸಾಧ್ಯವಾಗಿಸಿದ್ದು ತೆರಿಗೆ ವಿಷಯದಲ್ಲಿ ರಾಜ್ಯಗಳಿಗಿದ್ದ ತಕ್ಕಮಟ್ಟಿಗಿನ ಸ್ವಾಯತ್ತತೆ. ಜಿಎಸ್‌ಟಿ ಅದನ್ನು ರಾಜ್ಯಗಳಿಂದ ಬಹುಪಾಲು ಕಿತ್ತುಕೊಂಡಿದೆ. ಅದರ ವ್ಯಾಪ್ತಿಗೆ ಈಗ ಪೆಟ್ರೋಲಿಯಂ ಉತ್ಪನ್ನಗಳನ್ನೂ ತಂದರೆ ಅಲ್ಲಿಗೆ ಎಲ್ಲದಕ್ಕೂ ದೆಹಲಿಯತ್ತ ಮುಖ ಮಾಡಿ ಕೈಯೊಡ್ಡಿ ನಿಲ್ಲುವ ಸ್ಥಿತಿ ಬರಲಿದೆ.

ತೆರಿಗೆಯ ಪ್ರಮಾಣವನ್ನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ರಾಜ್ಯಗಳೇ ನಿರ್ಣಯಿಸುತ್ತವೆ ಅಂತ ಏನೇ ಹೇಳಿದರೂ ಅಲ್ಲಿನ ನಿರ್ಧಾರಗಳು ಬದಲಾಗಲು ಬೇಕಾದ ಶೇ 75ರಷ್ಟು ಮತ ಪಡೆಯಲು ಒಕ್ಕೂಟ ಸರ್ಕಾರದ ಶೇ 33ರಷ್ಟು ಮತವಿಲ್ಲದೇ ಸಾಧ್ಯವಿಲ್ಲ. ದೆಹಲಿಯಲ್ಲಿ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಬಹುತೇಕ ರಾಜ್ಯಗಳಲ್ಲಿ ಅದರದ್ದೇ ಆಳ್ವಿಕೆ ಇರುವಾಗ, ಹೈಕಮಾಂಡ್ ರಾಜಕಾರಣಕ್ಕೆ ಹೆದರಿ, ರಾಜ್ಯಗಳ ಪರ ಧ್ವನಿ ಎತ್ತುವ ಸಾಧ್ಯತೆಗಳು ಇಲ್ಲ. ಇವೆಲ್ಲವೂ ರಾಜ್ಯಗಳ ಆರೋಗ್ಯ ಸೇವೆಯ ಹೂಡಿಕೆ ಮೇಲೆ ಪ್ರಭಾವ ಬೀರುತ್ತಿವೆ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ವ್ಯಾಕ್ಸಿನ್, ಆಕ್ಸಿಜನ್, ರೆಮ್‌ಡಿಸಿವಿರ್ ಇತ್ಯಾದಿಗಳ ಕುರಿತ ನೀತಿಯಲ್ಲೂ ಅತಿಯಾದ ಕೇಂದ್ರೀಕೃತ ನಿರ್ಧಾರ ವ್ಯವಸ್ಥೆಯಿಂದ ರಾಜ್ಯಗಳಲ್ಲಿ ಆರೋಗ್ಯದ ವಿಷಯದಲ್ಲಿ ದೊಡ್ಡ ಮಟ್ಟದ ತೊಂದರೆಗಳಾದದ್ದನ್ನು ಇಲ್ಲಿ ನೆನೆಯಬಹುದು.

ಕೋವಿಡ್ ತರಹದ ಆರೋಗ್ಯ ತುರ್ತು ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಪಾಠ ಕಲಿಸುತ್ತಿದೆ. ಯುನೈಟೆಡ್ ಕಿಂಗ್ಡಂ ಹಾಗೂ ಜರ್ಮನಿ ಪಕ್ಕ ಪಕ್ಕದ ನಾಡುಗಳಾದರೂ ಯುಕೆ ಹೋಲಿಕೆಯಲ್ಲಿ ಜರ್ಮನಿಯ ವಿಕೇಂದ್ರೀಕೃತ
ವಾದ, ರಾಜ್ಯ-ರಾಜ್ಯಗಳ ಹಾಗೂ ರಾಜ್ಯ-ಒಕ್ಕೂಟ ಸರ್ಕಾರದ ನಡುವೆ ಹತ್ತಿರದ ಸಮನ್ವಯದ ವ್ಯವಸ್ಥೆ ಕೋವಿಡ್ ನಿಯಂತ್ರಿಸುವಲ್ಲಿ, ಸಾವು, ನೋವು ಕಡಿಮೆ ಮಾಡಿಕೊಳ್ಳುವಲ್ಲಿ ಬಹಳ ಯಶಸ್ವಿಯಾಯಿತು.

ಇಂತಹ ಹಲವು ಅಧ್ಯಯನಗಳನ್ನು ಆಧರಿಸಿ ಹೇಳುವುದಾದರೆ, ರಾಜ್ಯಗಳಿಗೆ ಆರೋಗ್ಯ ಸೇವೆಯತ್ತ ಇನ್ನಷ್ಟು ಸಂಪನ್ಮೂಲ ಮತ್ತು ತನ್ನ ನಿರ್ಧಾರಗಳನ್ನು ತಾನೇ ಕೈಗೊಳ್ಳಲು ಮತ್ತಷ್ಟು ಸ್ವಾಯತ್ತತೆ ನೀಡುವುದೇ ಇನ್ನೊಂದು ಆರೋಗ್ಯ ತುರ್ತನ್ನು ಸಮರ್ಥವಾಗಿ ಎದುರಿಸುವ ದಾರಿಯೆನ್ನಬಹುದು. ಆದರೆ ಇದು ಸಾಧ್ಯವಾಗಲು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸು
ವಂತಹ ಗಟ್ಟಿಯಾದ ಸಂಕಥನವೊಂದು ನಮ್ಮ ಯೋಚನೆಯ ಮುನ್ನೆಲೆಗೆ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT