ಬುಧವಾರ, ಸೆಪ್ಟೆಂಬರ್ 22, 2021
23 °C

PV Web Exclusive: ಹೊಸ ಸಂಪುಟದಲ್ಲಿ ‘ಕಲ್ಯಾಣ’ ಯಾರಿಗೆ?

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಬಿ.ಎಸ್‌. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಒಂದೆಡೆಯಾದರೆ, ಹೊಸ ಸಂಪುಟದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕೀತೇ ಎಂಬ ಚರ್ಚೆ ಜೋರಾಗಿದೆ. 

‘ಇವರು ಸಚಿವರಾಗುವುದು ಗ್ಯಾರಂಟಿ. ಇವರಿಗೆ ಇದೇ ಖಾತೆ ಕೊಡುತ್ತಾರೆ...’ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. 

ಯಡಿಯೂರಪ್ಪ ಅವರ ಸಂಪುಟದಲ್ಲಿ ಬೀದರ್‌ ಜಿಲ್ಲೆಯ ಪ್ರ‌ಭು ಚವಾಣ್‌ ಮಾತ್ರ ಸಚಿವರಾಗಿದ್ದರು. ಬಳ್ಳಾರಿಯ ಶ್ರೀರಾಮುಲು ಸಚಿವರಾಗಿದ್ದರೂ ಅವರು ಗೆದಿದ್ದಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ. ಹೀಗಾಗಿ ಅವರನ್ನು ‘ಕಲ್ಯಾಣ ಕರ್ನಾಟಕದ ಸಚಿವರು’ ಎನ್ನಲು ಇಲ್ಲಿಯ ರಾಜಕಾರಣಿಗಳು ಸಿದ್ಧರಿರಲಿಲ್ಲ. ಕೆಲ ತಿಂಗಳ ಹಿಂದೆ ವಿಜಯನಗರ ಕ್ಷೇತ್ರದ ಆನಂದ ಸಿಂಗ್‌ ಸಹ ಸಂಪುಟ ಸೇರಿದ್ದರು. ಕಲ್ಯಾಣ ಕರ್ನಾಟಕದಿಂದ ಸಚಿವರಾಗಿದ್ದವರು ಚವಾಣ್ ಮತ್ತು ಆನಂದ ಸಿಂಗ್‌ ಮಾತ್ರ.

ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ (ದಾವಣಗೆರೆ ಜಿಲ್ಲೆ ಹರಪನಹಳ್ಳಿ ಕ್ಷೇತ್ರವೂ ಸೇರಿ) ಈಗ ಬಿಜೆಪಿ ಶಾಸಕರ ಸಂಖ್ಯೆ 20.

ಕಲಬುರ್ಗಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ಕಲಬುರ್ಗಿ ದಕ್ಷಿಣದಲ್ಲಿ ದತ್ತಾತ್ರೇಯ ಪಾಟೀಲ ರೇವೂರ, ಸೇಡಂ ಕ್ಷೇತ್ರದ ರಾಜಕುಮಾರ ಪಾಟೀಲ ತೆಲ್ಕೂರ, ಆಳಂದದ ಸುಭಾಷ ಗುತ್ತೇದಾರ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಸತತ ಎರಡು ಬಾರಿ ಗೆದ್ದಿರುವ ದತ್ತಾತ್ರೇಯ ಪಾಟೀಲ ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಸುಮ್ಮನಾಗಿಸಲಾಯಿತು. ತೆಲ್ಕೂರ ಅವರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನದ ಜೊತೆಗೆ ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ದಕ್ಕುವಂತೆ ನೋಡಿಕೊಳ್ಳಲಾಯಿತು. ಈ ಇಬ್ಬರಿಗಿಂತಲೂ ಹಿರಿಯರಾದ ಸುಭಾಷ ಗುತ್ತೇದಾರ ಅವರಿಗೆ ಯಾವುದೇ ಹುದ್ದೆ ನೀಡಲಿಲ್ಲ. ಇದೇ ಮೊದಲ ಬಾರಿಗೆ ಗೆದ್ದಿರುವ ಚಿಂಚೋಳಿಯ ಡಾ.ಅವಿನಾಶ್‌ ಜಾಧವ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ‘ನಾವು ಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲ’ ಎಂದು ಹೇಳುತ್ತಿದ್ದರು. ಈಗ ಸಚಿವ ಸ್ಥಾನ ಕೊಟ್ಟರೆ ನಾವೂ ಸೈ ಎನ್ನುತ್ತಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಶಶೀಲ್‌ ಜಿ. ನಮೋಶಿ, ಬಿ.ಜಿ. ಪಾಟೀಲ ಸಹ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಬೀದರ್‌ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಔರಾದ್‌ ಶಾಸಕ ಪ್ರಭು ಚವಾಣ್‌ ಅವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು. ಇವರು ಈ ಜಿಲ್ಲೆಯಿಂದ ಗೆದ್ದಿದ್ದ ಏಕೈಕ ಬಿಜೆಪಿ ಶಾಸಕರಾಗಿದ್ದರು. ಅವರಿಗೆ ಅದೃಷ್ಟ ಖುಲಾಯಿಸಿತ್ತು. ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಶರಣು ಸಲಗರ ಗೆಲುವು ಸಾಧಿಸಿದ್ದು, ಈಗ ಈ ಜಿಲ್ಲೆಯಲ್ಲಿ ಬಿಜೆಪಿ ವಿಧಾನಸಭೆ ಸದಸ್ಯರ ಬಲ ಎರಡಕ್ಕೇರಿದೆ. ಇನ್ನೊಂದು ವಿಶೇಷ ಎಂದರೆ ಇದೇ ಜಿಲ್ಲೆಯ ಸಂಸದ ಭಗವಂತ ಖೂಬಾ ಅವರು ಈಗ ಕೇಂದ್ರ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದಾರೆ. ಹೀಗಾಗಿ ಈ ಬಾರಿ ಬೀದರ್‌ ಜಿಲ್ಲೆಗೆ ರಾಜ್ಯದ ಸಂಪುಟದಲ್ಲಿ  ಪ್ರಾತಿನಿಧ್ಯ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.


ಕಲ್ಯಾಣ ಕರ್ನಾಟಕ ನಕ್ಷೆ

ಯಾದಗಿರಿ ಜಿಲ್ಲೆಯ ನಾಲ್ವರು ಶಾಸಕರಲ್ಲಿ ಸುರಪುರ ಶಾಸಕ ರಾಜೂಗೌಡ ಅವರು ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಒಡ್ಡಿದ್ದರು. ‘ಹಿರಿಯರನ್ನು ಪಕ್ಷ ಸಂಘಟನೆಯಲ್ಲಿ ತೊಗಡಿಸಿ, ಯುವಕರಿಗೆ ಅವಕಾಶ ನೀಡಬೇಕು’ ಎಂದು ಬಹಿರಂಗವಾಗಿಯೇ ಹೇಳಿದ್ದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಸುಮ್ಮನಾಗಿಸಲಾಗಿತ್ತು. ಹೊಸ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿದೆ.

ಕೊಪ್ಪಳ ಜಿಲ್ಲೆಯ ಐವರು ಶಾಸಕರ ಪೈಕಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌, ಗಂಗಾವತಿಯ ಪರಣ್ಣ ಮುನವಳ್ಳಿ ಅವರಲ್ಲಿ ಒಬ್ಬರಿಗೆ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ವೇಳೆ ಸ್ಥಾನ ನೀಡುತ್ತಾರೆ ಎಂದೇ ಬಿಂಬಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರು ಅವಕಾಶ ವಂಚಿತರಾದರು. ಹೊಸ ಮುಖ್ಯಮಂತ್ರಿ ತಮ್ಮನ್ನು ಪರಿಗಣಿಸಬಹುದು ಎಂಬ ಬಲವಾದ ನಂಬಿಕೆ ಅವರದ್ದು. ಗಂಗಾವತಿಯ ಪರಣ್ಣ ಮುನವಳ್ಳಿ ಅವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಾಗೂ ಕನಕಗಿರಿ ಶಾಸಕ ಬಸವರಾಜ ದಢೇಸುಗೂರ ಅವರನ್ನು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಬೆಳಿಗ್ಗೆ ಹೊರಡಿಸಿದ್ದ ಆದೇಶವನ್ನು ಸಂಜೆ ವಾಪಸ್‌ ಪಡೆಯಲಾಗಿತ್ತು!

ರಾಯಚೂರು ಜಿಲ್ಲೆ ದೇವದುರ್ಗದ ಕೆ.ಶಿವನಗೌಡ ನಾಯಕ್ ಮತ್ತು ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇವರು ಪೈಪೋಟಿ ನಡೆಸಿದ್ದರು. ಆದರೆ, ಅವಕಾಶ ಸಿಗಲಿಲ್ಲ. ಶಿವನಗೌಡ ನಾಯಕ್‌ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ಶಿವರಾಜ ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು