ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ರವೀಂದ್ರ ಬರಹ: ಒಗ್ಗೂಡಿಸುವ ಶಕ್ತಿಯಾಗಿ ಧರ್ಮ?

ಸಾಮಾಜಿಕ ಸೌಹಾರ್ದ ಬಲಪಡಿಸಲು ವಿಶ್ವಾಸಾರ್ಹ ಧಾರ್ಮಿಕ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು
Last Updated 20 ಜನವರಿ 2022, 18:53 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ದಿವ್ಯಕಾಶಿ–ಭವ್ಯಕಾಶಿ ಯೋಜನೆಯನ್ನು ಉದ್ಘಾಟಿಸಿದ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿತ್ತು. ವಿಶ್ವದ ಅತ್ಯಂತ ಪುರಾತನ ನಗರಗಳಲ್ಲಿ ಒಂದಾಗಿರುವ ಕಾಶಿಯನ್ನು ಕೊಳಕು, ಇಕ್ಕಟ್ಟಿನ ಸ್ಥಿತಿಯಿಂದ ಆಧುನಿಕ ನಗರವನ್ನಾಗಿ ಪರಿವರ್ತಿಸಿ, ಅದರ ಮೂಲ ಪರಂಪರೆಯನ್ನು ಉಳಿಸಿಕೊಳ್ಳುವ ಯೋಜನೆಯು ಗಮನಾರ್ಹ. ₹ 900 ಕೋಟಿ ವೆಚ್ಚದ ಕಾಶಿ ವಿಶ್ವನಾಥಧಾಮ ಯೋಜನೆಯು ನಗರದಾದ್ಯಂತ ಸಂಚಾರವನ್ನು ಸುಗಮಗೊಳಿಸುವ ಕಾರಿಡಾರ್ ನಿರ್ಮಾಣ, ದೇವಸ್ಥಾನದ ಸುತ್ತಲಿನ ಜಾಗಗಳನ್ನು ಸ್ವಚ್ಛಗೊಳಿಸುವುದು, ಘಾಟ್‌ಗಳ ಪುನರುಜ್ಜೀವನ ಮತ್ತು ದೇವಸ್ಥಾನ–ಘಾಟ್‌ಗಳ ನಡುವೆ ಮಾರ್ಗ ನಿರ್ಮಾಣ, ವಸ್ತುಸಂಗ್ರಹಾಲಯ ಮತ್ತು ಮಾರುಕಟ್ಟೆ ನಿರ್ಮಾಣದಂತಹ ಕಾರ್ಯಗಳನ್ನು ಒಳಗೊಂಡಿದೆ.

ಧರ್ಮ ಮತ್ತು ರಾಜಕೀಯವನ್ನು ಪರಸ್ಪರ ಬೆರೆಸಿದ್ದರ ಬಗ್ಗೆ, ಪ್ರಧಾನಿಯವರು ಧಾರ್ಮಿಕ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕಣ್ಣಿಗೆ ರಾಚುವಂತೆ ಪಾಲ್ಗೊಂಡಿದ್ದರ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು. ಆದರೆ, ವಾರಾಣಸಿಯ ಹೊಸ ನೋಟವು ಹಿಂದೂಗಳಲ್ಲಿ ಹಲವರಲ್ಲಿ ರೋಮಾಂಚನ ಉಂಟುಮಾಡಿದೆ. ಭಾರತದಲ್ಲಿ ಬಹುತೇಕರು ಧಾರ್ಮಿಕ ಮನಸ್ಸಿನವರಾಗಿರುವ ಕಾರಣ, ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಧರ್ಮ ಮತ್ತು ಧರ್ಮದ ಕುರಿತ ಧೋರಣೆಗೆ ಸಂಬಂಧಿಸಿದಂತೆ ಅಮೆರಿಕ ಮೂಲದ ಪ್ಯೂ ರಿಸರ್ಚ್‌ ಸಂಸ್ಥೆಯವರು 2019ರಿಂದ 2020ರ ನಡುವೆ ಸಂಶೋಧನೆಯೊಂದನ್ನು ನಡೆಸಿದ್ದರು. ಭಾರತೀಯರು ಯಾವ ಧರ್ಮಕ್ಕೇ ಸೇರಿರಲಿ, ಅವರು ಆಹಾರ ಪದ್ಧತಿ, ಮದುವೆ, ಧಾರ್ಮಿಕ ನಂಬಿಕೆಗಳು ಇಂತಹ ವಿಚಾರಗಳಲ್ಲಿ ಬಹಳ ಸಂಪ್ರದಾಯವಾದಿಗಳು ಎಂಬುದನ್ನು ಈ ಅಧ್ಯಯನವು ಕಂಡುಕೊಂಡಿದೆ. ಭಾರತದಲ್ಲಿ ಶೇಕಡ 3ರಷ್ಟು ಜನ ಮಾತ್ರ ದೇವರನ್ನು ನಂಬುವುದಿಲ್ಲ. ಹಿಂದೂಗಳ ಪೈಕಿ ಶೇ 2ರಷ್ಟು ಮಂದಿ ಮಾತ್ರ ನಾಸ್ತಿಕರು. ಮುಸ್ಲಿಮರಲ್ಲಿ ಶೇ 6ರಷ್ಟು ಜನ ನಾಸ್ತಿಕರು.

ಎಲ್ಲ ಧರ್ಮಗಳಲ್ಲಿಯೂ ಇರುವ ಸಮಾನ ಮೌಲ್ಯಗಳಾದ ಪ್ರೀತಿ, ಕರುಣೆ, ದಾನ, ಸೇವಾ ಮನೋಭಾವವನ್ನು ಹೆಚ್ಚಿಸಲು ಧರ್ಮವನ್ನು ಏಕೆ ಬಳಸಿಕೊಳ್ಳಬಾರದು ಎಂಬ ಪ್ರಶ್ನೆ ಮೂಡುತ್ತದೆ. ಅಸಹಿಷ್ಣುತೆ, ದ್ವೇಷ ಭಾಷಣ ಮತ್ತು ಧ್ರುವೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದು ಪ್ರಾಯೋಗಿಕವಾಗಿ ಕಾರ್ಯಸಾಧುವಲ್ಲ ಎಂದು ಅನ್ನಿಸಬಹುದು. ವಾಸ್ತವದಲ್ಲಿ, ಇಂತಹ ವಿಭಜನಕಾರಿ ಕಾರ್ಯಗಳಲ್ಲಿ ತೊಡಗಿರುವವರು ಸ್ವಾರ್ಥಿ ರಾಜಕಾರಣಿಗಳು, ಧಾರ್ಮಿಕ ನಾಯಕರು ಮತ್ತು ಕೆಲವು ಕಿಡಿಗೇಡಿಗಳು – ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಎಲ್ಲ ಧರ್ಮಗಳಲ್ಲಿನ ಬಹುಸಂಖ್ಯೆಯ ಜನರು ಶಾಂತಿ ಮತ್ತು ಸೌಹಾರ್ದವನ್ನು ಬಯಸುತ್ತಿದ್ದಾರೆ.

ನೈಜ ಭಾರತೀಯ ಆಗಬೇಕಾದರೆ ಎಲ್ಲ ಧರ್ಮಗಳನ್ನು ಗೌರವಿಸಬೇಕಾಗಿರುವುದು ಮುಖ್ಯ ಎಂದು ಶೇ 80ಕ್ಕಿಂತ ಹೆಚ್ಚಿನವರು ನಂಬಿದ್ದಾರೆ, ಎಲ್ಲ ಧರ್ಮಗಳನ್ನು ಗೌರವಿಸುವುದು ತಮ್ಮ ಧಾರ್ಮಿಕ ಅಸ್ಮಿತೆಯ ಮುಖ್ಯ ಅಂಶ ಎಂದೂ ಅವರು ನಂಬಿದ್ದಾರೆ ಎಂದು ಅಧ್ಯಯನವು ಹೇಳಿದೆ. ಅಂದರೆ, ನಾವು ಎದುರಿಸಬೇಕಿರುವುದು ಬಹಳ ಸಣ್ಣದಾದ ಆದರೆ ಗಂಟಲು ಗಟ್ಟಿಯಿರುವ ಒಂದು ಸಮುದಾಯವನ್ನು. ಧರ್ಮದ ನಿಜ ಆಶಯವು ಬಿಕ್ಕಟ್ಟುಗಳನ್ನು ಸೃಷ್ಟಿಸುವ ಉದ್ದೇಶದ ರಾಜಕಾರಣಕ್ಕೆ ಅತ್ಯುತ್ತಮ ಔಷಧವಿದ್ದಂತೆ. ಕೆಲಸ ಸುಲಭವಲ್ಲ; ಆದರೆ ನನ್ನ ಕೆಲವು ಸಲಹೆಗಳು ಇಲ್ಲಿವೆ:

l ಎರಡು ಕಾರಣಗಳಿಗಾಗಿ, ಸರ್ಕಾರವು ಕಾಶಿ ಮಾದರಿಯ ಯೋಜನೆಯನ್ನು ದೇಶದ ಇತರ ಕಡೆಗಳಲ್ಲಿಯೂ ಜಾರಿಗೊಳಿಸಬೇಕು. ಮೊದಲ ಕಾರಣ: ಇದು ಬಹಳ ಚೆನ್ನಾಗಿ ಆಲೋಚಿಸಿ ರೂಪಿಸಿ, ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಿದ ಯೋಜನೆ. ಇತರ ನಗರಗಳ ಪುನರುತ್ಥಾನಕ್ಕೆ, ಅದರಲ್ಲೂ ಮುಖ್ಯವಾಗಿ ದೇವಳಗಳ ನಗರಗಳಿಗೆ, ಮೇಲ್ಪಂಕ್ತಿಯನ್ನು ಹಾಕಿಕೊಡಬಹುದಾದ ಯೋಜನೆ ಇದು. ಎರಡನೆಯ ಕಾರಣ: ಮೋದಿ ಮತ್ತು ಆಡಳಿತ ಪಕ್ಷವು ಉತ್ತರ ಭಾರತದ ಕಡೆ ಹೆಚ್ಚು ಒಲವು ಹೊಂದಿದೆ, ಹಿಂದುತ್ವಕ್ಕೆ ಮಾತ್ರ ಆದ್ಯತೆ ಎಂದು ಭಾವಿಸಿದವರಲ್ಲಿ ಇದು ವಿಶ್ವಾಸ ಮರುಸ್ಥಾಪಿಸಬಲ್ಲದು. ಆದರೆ, ಇದರಲ್ಲಿ ಸರ್ಕಾರದ ಪಾತ್ರವು ಮೂಲಸೌಕರ್ಯ ನಿರ್ಮಾಣಕ್ಕೆ ಸೀಮಿತವಾಗಬೇಕು. ದೇವಸ್ಥಾನಗಳ ಸುಧಾರಣೆಯನ್ನು ಅಲ್ಲಿನ ಪ್ರಾಧಿಕಾರಗಳಿಗೆ ಬಿಟ್ಟುಬಿಡಬೇಕು.

ಈ ಕೆಲಸವನ್ನು ದಕ್ಷಿಣ ಭಾರತದಿಂದ ಆರಂಭಿಸುವುದು ಸೂಕ್ತ. ರಾಜ್ಯದ ಹಂಪಿಯನ್ನು ದಕ್ಷಿಣದ ಕಾಶಿಯನ್ನಾಗಿ ಪರಿವರ್ತಿಸಬಹುದು. ಹಂಪಿಯು ವಿರೂಪಾಕ್ಷನ ನೆಲೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು ಇದು. ಯುನೆಸ್ಕೊ ವಿಶ್ವ ಪಾರಂಪರಿಕ ತಾಣವೂ ಹೌದು. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ದೊಡ್ಡದು. ಆದರೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳು, ಮೂಲಸೌಕರ್ಯ ಇಲ್ಲಿಲ್ಲ. ವಾರಾಣಸಿಯ ಮಾದರಿಯಲ್ಲಿ ಹೊಸ ರೂಪ ಪಡೆಯಲು ಹಂಪಿ ಕಾಯುತ್ತಿದೆ.

l ದಕ್ಷಿಣ ಭಾರತ ಮತ್ತು ಇತರ ಪ್ರದೇಶಗಳಲ್ಲಿ ಹಲವು ದೇವಸ್ಥಾನಗಳು ಆಳುವವರ ಗಮನ ಸೆಳೆಯಲು ಹೆಣಗುತ್ತಿವೆ. ರಾಮನಾಥಸ್ವಾಮಿ ದೇವಸ್ಥಾನ ಇರುವ ತಮಿಳುನಾಡಿನ ರಾಮೇಶ್ವರದಲ್ಲಿ ವಿಶ್ವದ ಅತ್ಯಂತ ಉದ್ದನೆಯ ಕಾರಿಡಾರ್‌ಗಳು ಇವೆ. ಇವುಗಳನ್ನು ನೋಡುವುದೇ ಒಂದು ಆನಂದ. ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯರ ಕಟ್ಟಿಗೆಯ ಮೂರ್ತಿಗಳು ಇರುವ ಪುರಿಯ ಜಗನ್ನಾಥ ದೇವಸ್ಥಾನವು ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತದೆ. ಅಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಗೋವರ್ಧನಪೀಠ ಕೂಡ ಇದೆ. ಆಂಧ್ರ
ಪ್ರದೇಶದಲ್ಲಿ ತಿರುಮಲ ದೇವಸ್ಥಾನ ಇದೆ. ಇದು ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನ. ಪ್ರತಿದಿನವೂ ಇಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.

ಇಂತಹ ಎಲ್ಲ ದೇವಳ ನಗರಿಗಳಿಗೂ ಬದಲಾವಣೆಯ ಅಗತ್ಯವಿದೆ. ಇವು ಧಾರ್ಮಿಕವಾಗಿ ಮಹತ್ವವಾಗಿರುವ ನಗರಗಳು ಎಂಬ ಕಾರಣಕ್ಕೆ ಮಾತ್ರವೇ ಅಲ್ಲ. ಬದಲಿಗೆ, ಈ ನಗರಗಳು ಅರ್ಥ ವ್ಯವಸ್ಥೆ ಹಾಗೂ ಸಮಾಜಕ್ಕೆ ನೀಡುವ ಕೊಡುಗೆಯ ಕಾರಣದಿಂದಾಗಿಯೂ ಬದಲಾವಣೆ ತರಬೇಕಾದ ಅಗತ್ಯವಿದೆ. ಭಾರತದ ದೇವಸ್ಥಾನ ಕೇಂದ್ರಿತ ಅರ್ಥ ವ್ಯವಸ್ಥೆಯ ಪೂರ್ಣ ತಾಕತ್ತನ್ನು ಇನ್ನಷ್ಟೇ ಕಂಡುಕೊಳ್ಳಬೇಕಿದೆ.

ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ ಎಂಬ ತತ್ವದ ಹೆಸರಿನಲ್ಲಿ ಪ್ರಮಾಣ ಮಾಡುವ ಪ್ರಧಾನಿಯವರು, ಪುನರುಜ್ಜೀವನದ ಯೋಜನೆಗಳ ಪಟ್ಟಿಯಲ್ಲಿ ಎಲ್ಲ ಧರ್ಮಗಳ ಶ್ರದ್ಧಾ ಕೇಂದ್ರಗಳನ್ನು ಸೇರಿಸಿ, ಆ ಮಾತಿಗೆ ಕ್ರಿಯಾರೂಪ ನೀಡಬೇಕು. ಆರಂಭಿಕ ಹೆಜ್ಜೆಯಾಗಿ, ಚಾರ್ ಧಾಮ್ ಮಾದರಿಯಲ್ಲಿ ಪಂಚಧಾಮದ ಬಗ್ಗೆ ಗಮನ ನೀಡಬೇಕು. ತಮಿಳುನಾಡಿನ ಕ್ಯಾಥೊಲಿಕ್ ಚರ್ಚ್‌ ವೇಲಾಂಕಣಿ, ಪುಣೆ ಸಮೀಪದ ಶಿರಡಿ ಸಾಯಿಬಾಬಾ ಕೇಂದ್ರ, ರಾಜಸ್ಥಾನದ ಅಜ್ಮೇರ್ ದರ್ಗಾ, ಸಿಖ್ಖರ ಪವಿತ್ರ ಸ್ಥಳವಾದ ಅಮೃತಸರ, ಬೌದ್ಧರ ಪವಿತ್ರ ಕೇಂದ್ರವಾದ ಸಾರಾನಾಥವನ್ನು ಜೋಡಿಸಬೇಕು. ಇವೆಲ್ಲವೂ ಬೇರೆ ಬೇರೆ ಧರ್ಮಗಳ ಜನರನ್ನು ಆಕರ್ಷಿಸುತ್ತವೆ. ಬೇರೆ ಬೇರೆ ಧರ್ಮಗಳ ನಡುವಿನ ಏಕತೆಯ ಮಾದರಿಯಾಗಿ ನಿಂತಿವೆ ಇವು.

ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಪ್ರಸರಣದಲ್ಲಿ ತೊಡಗಿಸಿಕೊಂಡಿರುವ, ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿರುವ ವಿಶ್ವಾಸಾರ್ಹ ಸಂಸ್ಥೆಗಳಾದ ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಸಿದ್ಧಗಂಗಾ ಮಠ, ಮದರ್ ತೆರೇಸಾ ಸ್ಥಾಪಿಸಿದ ಮಿಷನರೀಸ್ ಆಫ್ ಚ್ಯಾರಿಟಿಯಂತಹ ಬೇರೆ ಬೇರೆ ಸಂಸ್ಥೆಗಳನ್ನು ಕೋಮುವಾದ ಮತ್ತು ಜಾತಿವಾದವನ್ನು ಹತ್ತಿಕ್ಕಲು, ಬೇರೆ ಬೇರೆ ಧರ್ಮಗಳ ನಡುವೆ ಒಗ್ಗಟ್ಟನ್ನು ಹೆಚ್ಚಿಸಲು ಹಾಗೂ ಸಾಮಾಜಿಕ ಸೌಹಾರ್ದ ಬಲಪಡಿಸಲು ಬಳಸಿಕೊಳ್ಳಬೇಕು.

ಭಾರತೀಯರಿಗೆ ರಾಜಕೀಯ ಮುಖಂಡರು ಅಥವಾ ಬೇರೆ ಯಾವುದೇ ಮುಖಂಡರಿಗಿಂತ ಧಾರ್ಮಿಕ ನಾಯಕರಲ್ಲಿ ನಂಬಿಕೆ ಹೆಚ್ಚು. ಅವರು ಹೇಳಿದ್ದನ್ನು ಕೇಳಿ ಪ್ರಭಾವಿತರಾಗುವ ಸಾಧ್ಯತೆಯೂ ಇರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಪಾವಿತ್ರ್ಯ, ಪರಿಶುದ್ಧತೆ ಮತ್ತು ದಯೆಯಂತಹ ಮೌಲ್ಯಗಳು ಯಾವುದೇ ಚರ್ಚ್‌ನ ಸ್ವಾಧೀನಕ್ಕೆ ಸೇರಿದವು ಅಲ್ಲ. ಪ್ರತಿಯೊಂದು ವ್ಯವಸ್ಥೆಯೂ ಅತ್ಯುನ್ನತ ವ್ಯಕ್ತಿತ್ವದ ಸ್ತ್ರೀ, ಪುರುಷರಿಗೆ ಜನ್ಮ ನೀಡಿದೆ’.

ಮತಾಂತರವನ್ನು ನಿಷೇಧಿಸುವ ಕಾನೂನಿಗಿಂತಲೂ ಮಿಗಿಲಾಗಿ, ತಮ್ಮ ನಂಬಿಕೆಗಳನ್ನು ಪಾಲಿಸುತ್ತಲೇ ಇನ್ನೊಬ್ಬರ ನಂಬಿಕೆಗಳನ್ನು ಗೌರವಿಸುವ ಮಾರ್ಗಕ್ಕೆ ಹೃದಯಗಳನ್ನು ಪರಿವರ್ತಿಸುವುದು ಇಂದಿನ ಅಗತ್ಯ.

ಲೇಖಕ: ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT