ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮತಾಂತರ ನಿಷೇಧದ ಧರ್ಮಸೂಕ್ಷ್ಮ

ಧರ್ಮ ತೊರೆವುದಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಆತ್ಮಸಾಕ್ಷಿ ಮಾತ್ರ ಉತ್ತರಿಸಬಲ್ಲದು
Last Updated 5 ಜನವರಿ 2021, 19:11 IST
ಅಕ್ಷರ ಗಾತ್ರ

ಮತಾಂತರಕ್ಕೆ ಸಂಬಂಧಿಸಿದ ಕಾನೂನುಗಳು, ಮತಾಂತರದ ಹಿಂದೆ ಹಣದ ಆಮಿಷ ಇದೆಯೇ ಎಂಬಂತಹ ಸರಳ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಬಲ್ಲವು. ಆದರೆ, ದಲಿತನೊಬ್ಬ ಬೇರೆ ಧರ್ಮಕ್ಕೆ ಮತಾಂತರವಾದಾಗ, ‘ತಿರಸ್ಕೃತ ದಲಿತ’ನಾಗಿ ಹಿಂದೂ ಧರ್ಮದಲ್ಲಿ ಉಳಿದುಕೊಂಡಿದ್ದಿದ್ದರೆ ಪಡೆಯುವುದಕ್ಕಿಂತ ಹೆಚ್ಚಿನದನ್ನು ಪಡೆಯುತ್ತಾನೆಯೇ ಎಂಬ ಸಂಕೀರ್ಣ ಪ್ರಶ್ನೆಗೆ ಆತ್ಮಸಾಕ್ಷಿ ಮಾತ್ರವೇ ಉತ್ತರಿಸಬಲ್ಲದು.

ಹಿಂದೂ, ಜೈನ, ಬೌದ್ಧ ಹಾಗೂ ಸಿಖ್ ಧರ್ಮಗಳಿಗೆ ಜನ್ಮನೀಡಿದ ದೇಶ ಭಾರತ. ಬ್ರಿಟಿಷರ ಆಡಳಿತ ಅವಧಿಯಲ್ಲಿ, 1930ರ ಮಧ್ಯಭಾಗದವರೆಗೆ ಭಾರತದಲ್ಲಿ ಮತಾಂತರ ನಿರ್ಬಂಧಿಸುವ ಅಥವಾ ನಿಷೇಧಿಸುವ ಕಾನೂನು ಇರಲಿಲ್ಲ. 1930ರ ಮಧ್ಯಭಾಗದಲ್ಲಿ ದೇಶದ ಹಲವೆಡೆ ನಡೆದ ತೀವ್ರ ಧಾರ್ಮಿಕ ಸಂಘರ್ಷಗಳು ನಂತರದ ವರ್ಷಗಳಲ್ಲಿ ಬ್ರಿಟಿಷ್ ಭಾರತದ ರಾಜಕೀಯ ಹಾಗೂ ಕಾನೂನಿನ ಮೇಲೆ ಆಳವಾದ ಪ್ರಭಾವ ಬೀರಿದವು.

ಭಾರತದಲ್ಲಿ ದೊಡ್ಡ ಪ್ರಾಂತ್ಯವಾಗಿದ್ದ ಬರ್ಮಾವನ್ನು 1937ರಲ್ಲಿ ಪ್ರತ್ಯೇಕಗೊಳಿಸಲು ಬ್ರಿಟಿಷರು ತೀರ್ಮಾನಿಸಿದಾಗ, ಆ ಪ್ರಾಂತ್ಯದ ಶೇಕಡ 85ರಷ್ಟು ಜನ ಬೌದ್ಧರು, ಭಾರತದ ಇತರ ಬಹುತೇಕ ಪ್ರಾಂತ್ಯಗಳಲ್ಲಿ ಬೌದ್ಧರ ಪ್ರಮಾಣ ತೀರಾ ಕಡಿಮೆ ಎಂಬ ಅಂಶವೂ ಬ್ರಿಟಿಷರ ಮನಸ್ಸಿನಲ್ಲಿತ್ತು. ಇದಾದ ಹತ್ತು ವರ್ಷಗಳ ನಂತರ ದೇಶವನ್ನು ಭಾರತ ಮತ್ತು ಪಾಕಿಸ್ತಾನ ಎಂದು ಇಬ್ಭಾಗ ಮಾಡುವಾಗಲೂ ಧರ್ಮವನ್ನು ನಿರ್ಣಾಯಕ ಅಂಶವನ್ನಾಗಿ ಪರಿಗಣಿಸಲಾಯಿತು. ದೇಶದ ವಿಭಜನೆಯು ಮುಸ್ಲಿಂ ತೀವ್ರವಾದಿಗಳಿಗೆ ಹಾಗೂ ಹಿಂದೂ ಮೂಲಭೂತವಾದಿಗಳಿಗೆ ಸಮಾಧಾನ ತಂದಿರಲಿಲ್ಲ– ಹಿಂದೂಗಳೆಲ್ಲ ಭಾರತದಲ್ಲಿ, ಮುಸ್ಲಿಮರೆಲ್ಲ ಪಾಕಿಸ್ತಾನದಲ್ಲಿ ನೆಲೆಯಾಗಬೇಕು ಎಂದು ಅವರು ಬಯಸಿದ್ದರು. ಧಾರ್ಮಿಕ ಸಂಘರ್ಷವು ಭಾರತದಲ್ಲಿ ಇಂದಿಗೂ ರಾಜಕೀಯ ಹಾಗೂ ಕಾನೂನಿನ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತಿರುವುದರಲ್ಲಿ ಆಶ್ಚರ್ಯಪಡುವಂಥದ್ದು ಏನೂ ಇಲ್ಲ.

ಸಾರ್ವಜನಿಕರ ಶಾಂತಿಗೆ ಭಂಗ ತಾರದೆ ತನ್ನ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಾಗೂ ಅದನ್ನು ಪ್ರಚಾರ ಮಾಡುವ ಹಕ್ಕನ್ನು ದೇಶದ ಸಂವಿಧಾನವು ಎಲ್ಲ ವ್ಯಕ್ತಿಗಳಿಗೂ ನೀಡಿದೆ. ಆದರೆ, ಪಶ್ಚಿಮದ ಬಹುತೇಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಇಲ್ಲದ ಒಂದು ಕಾನೂನು ಭಾರತದಲ್ಲಿ ಇದೆ. ಧಾರ್ಮಿಕ ಬೋಧನೆಯ ಸಂದರ್ಭದಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ಭಾರತದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದರೆ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅನುಸಾರ ಕ್ರಿಮಿನಲ್ ಕ್ರಮ ಜರುಗಿಸಬಹುದು.

ಹಾಗಾದರೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವ ಸಂವಿಧಾನವು ಒಂದು ಧರ್ಮಕ್ಕೆ ಸೇರಿದ ವ್ಯಕ್ತಿ ಇನ್ನೊಂದು ಧರ್ಮಕ್ಕೆ ಸೇರಿದವನನ್ನು ತನ್ನ ಧರ್ಮಕ್ಕೆ ಮತಾಂತರಿಸಲು ಅವಕಾಶ ನೀಡುತ್ತದೆಯೇ? ಧರ್ಮವನ್ನು ಪ್ರಚಾರ ಮಾಡುವ ಹಕ್ಕು, ಆ ಪ್ರಚಾರ ಕಾರ್ಯವನ್ನು ಇತರ ಧರ್ಮೀಯರ ನಡುವೆಯೂ ನಾಸ್ತಿಕರ ನಡುವೆಯೂ ನಡೆಸಬಹುದು ಎನ್ನುತ್ತದೆ. ಇದನ್ನು ಸಂವಿಧಾನ ತಜ್ಞರು ಅಲ್ಲಗಳೆಯುತ್ತಿಲ್ಲ. ಆದರೆ, ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ತನ್ನ ಧರ್ಮಕ್ಕೆ ಮತಾಂತರ ಮಾಡಲು ಹಣ ಅಥವಾ ಇತರ ಆಮಿಷಗಳನ್ನು ಒಡ್ಡಿದರೆ? 1960ರ ದಶಕದ ಉತ್ತರಾರ್ಧದಲ್ಲಿ ಮಧ್ಯಪ್ರದೇಶ, ಒಡಿಶಾದಲ್ಲಿ ಸಾಮೂಹಿಕ ಮತಾಂತರಗಳು ನಡೆದವು. ಹಣದ ಆಮಿಷ, ದೇವರ ಕೋಪಕ್ಕೆ ಗುರಿಯಾಗುವಿರಿ ಎಂಬ ಭೀತಿಯ ಸೃಷ್ಟಿ, ಪವಾಡ ನಡೆದು ಕಾಯಿಲೆಯೊಂದು ವಾಸಿಯಾಗುತ್ತದೆ ಎಂಬ ವಂಚನೆಯನ್ನು ಬಳಸಿ ಮತಾಂತರಗಳು ನಡೆದಾಗ, ಅಂತಹ ಮತಾಂತರಗಳನ್ನು ತಡೆಯಲು ಕಾನೂನು ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಆ ರಾಜ್ಯಗಳು ವಾದಿಸಿದವು. ಈ ಬಗೆಯ ಮತಾಂತರಗಳನ್ನು ಶಿಕ್ಷಾರ್ಹ ಆಗಿಸುವ ಕಾನೂನಿಗೆ 1967ರಲ್ಲಿ ಒಡಿಶಾ ವಿಧಾನಸಭೆ ಅನುಮೋದನೆ ನೀಡಿತು. ಇದೇ ಬಗೆಯ ಕಾನೂನನ್ನು ಮಧ್ಯಪ್ರದೇಶ ಶಾಸನಸಭೆ 1967ರಲ್ಲಿ ಅನುಮೋದಿಸಿತು.

ಇನ್ನೊಂದು ಧರ್ಮದಲ್ಲಿ ಹೆಚ್ಚಿನ ಆಧ್ಯಾತ್ಮಿಕ ಫಲ ಸಿಗುತ್ತದೆ ಎಂಬುದನ್ನು ಕಂಡುಕೊಂಡ ವ್ಯಕ್ತಿಯೊಬ್ಬ ಆ ಧರ್ಮಕ್ಕೆ ಮತಾಂತರವಾಗಲು ಬಯಸಬಹುದು ಎಂದು ಸಂವಿಧಾನ ತಜ್ಞರು ಹಾಗೂ ತತ್ವಶಾಸ್ತ್ರಜ್ಞರು ಹೇಳಬಹುದು. ಆದರೆ, ಕೆಲವು ರಾಜ್ಯ ಸರ್ಕಾರಗಳು 1960ರ ದಶಕದಲ್ಲಿ ನೇಮಿಸಿದ ಹಲವು ಸಮಿತಿಗಳು ಬೇರೆಯದನ್ನು ಹೇಳುತ್ತಿದ್ದವು. ಆಲೋಚನೆಯಲ್ಲಿ ಬದಲಾವಣೆ ಆದ ಕಾರಣದಿಂದಾಗಿ ಮತಾಂತರ ಆಗುತ್ತಿರುವುದಕ್ಕಿಂತಲೂ ದೇವರ ಕೋಪಕ್ಕೆ ಗುರಿಯಾಗುವ ಭೀತಿಯಿಂದ, ಹಣದ ಆಸೆಯಿಂದ, ರೋಗ ಶಮನವಾಗುತ್ತದೆ ಎಂಬ ನಂಬಿಕೆಯಿಂದ ಮತಾಂತರ ನಡೆಯುತ್ತಿದೆ ಎಂದು ಆ ಸಮಿತಿಗಳು ಹೇಳಿದವು. ಇಂತಹ ವಾದವನ್ನು ಸುಪ್ರೀಂ ಕೋರ್ಟ್‌ ಕೂಡ ಒಪ್ಪಿಕೊಂಡಿತು. ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಗುರಿಯೊಂದಿಗೆ, ಮಧ್ಯಪ್ರದೇಶ ಹೇಳಿದ ರೀತಿಯ ಮತಾಂತರಗಳನ್ನು ರಾಜ್ಯಗಳು ನಿಷೇಧಿಸಬಹುದು ಎಂದು ಸುಪ್ರೀಂ ಕೋರ್ಟ್‌ 1977ರಲ್ಲಿ ಹೇಳಿತು. ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಹೊಣೆ ರಾಜ್ಯಗಳ ಮೇಲಿರುವ ಕಾರಣ, ಮತಾಂತರದ ಮೇಲೆ ನಿಷೇಧ ಅಥವಾ ನಿರ್ಬಂಧ ಹೇರುವ ಅಧಿಕಾರ ರಾಜ್ಯಗಳ ಶಾಸನಸಭೆಗಳಿಗೆ ಮಾತ್ರವೇ ಇದೆ.

ಕೆ.ವಿ.ಧನಂಜಯ
ಕೆ.ವಿ.ಧನಂಜಯ

ದೇಶದ 28 ರಾಜ್ಯಗಳ ಪೈಕಿ ಒಂಬತ್ತು ರಾಜ್ಯಗಳಲ್ಲಿ ಮತಾಂತರವನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ನಿರ್ಬಂಧಿಸುವ ಅಥವಾ ನಿಷೇಧಿಸುವ ಕಾನೂನು ಇದೆ. ಮತಾಂತರ ಆದ ವ್ಯಕ್ತಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ, ಮಹಿಳೆ ಆಗಿದ್ದರೆ, ವಯಸ್ಕ ಆಗಿಲ್ಲದಿದ್ದರೆ ಕೆಲವು ರಾಜ್ಯಗಳು ಹೆಚ್ಚಿನ ಪ್ರಮಾಣದ ಶಿಕ್ಷೆ ವಿಧಿಸುತ್ತವೆ. ಸದ್ಯಕ್ಕೆ ದಕ್ಷಿಣದ ಐದು ರಾಜ್ಯಗಳಲ್ಲಿ ಯಾವ ರಾಜ್ಯವೂ ಇಂಥದ್ದೊಂದು ಕಾನೂನು ಹೊಂದಿಲ್ಲ. ತಮಿಳುನಾಡಿನಲ್ಲಿ ಒಂದು ಕಾನೂನು ಇತ್ತಾದರೂ ಅದನ್ನು 2006ರಲ್ಲಿ ರದ್ದು ಮಾಡಲಾಯಿತು.

ಇಂತಹ ಎಲ್ಲ ಕಾನೂನುಗಳ ಪೈಕಿ ಅತ್ಯಂತ ಕಠಿಣವಾಗಿರುವುದು ಉತ್ತರ ಪ್ರದೇಶ ಈಚೆಗೆ ಜಾರಿಗೊಳಿಸಿದ ‘ಲವ್ ಜಿಹಾದ್ ಕಾನೂನು’. ಆ ಕಾನೂನಿನಲ್ಲಿ ‘ಲವ್ ಜಿಹಾದ್’ ಎಂಬ ಪದವೇ ಇಲ್ಲವೆಂಬುದು ನಿಜ. ಆ ಕಾನೂನು ಮತಾಂತರ ಆಗಲು ಬಯಸುವ ಯಾವುದೇ ವ್ಯಕ್ತಿಯನ್ನು ಅನುಮಾನದಿಂದ ಕಾಣುತ್ತದೆ. ಪ್ರಸ್ತಾವಿತ ಮತಾಂತರದ ಬಗ್ಗೆ ವ್ಯಕ್ತಿಯು ಸರ್ಕಾರಕ್ಕೆ ಮೊದಲೇ ತಿಳಿಸಬೇಕು ಎಂದು ಈ ಕಾನೂನು ಹೇಳುತ್ತದೆ. ಇನ್ನೊಬ್ಬರನ್ನು ಮತಾಂತರಿಸಲು ಬಯಸುವ ವ್ಯಕ್ತಿಯೂ ಆ ಬಗ್ಗೆ ಸರ್ಕಾರಕ್ಕೆ ಮೊದಲೇ ತಿಳಿಸಬೇಕು. ಆಗ ಸರ್ಕಾರವು ಆ ಮತಾಂತರದ ಹಿಂದಿನ ನೈಜ ಉದ್ದೇಶವನ್ನು ತಿಳಿಯಲು ಪೊಲೀಸ್ ವಿಚಾರಣೆ ನಡೆಸುತ್ತದೆ. ಮತಾಂತರ ಆದ ನಂತರ, ಮತಾಂತರಗೊಂಡ ವ್ಯಕ್ತಿ ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕು. ಮತಾಂತರದಿಂದ ತೊಂದರೆಗೆ ಒಳಗಾಗುವ ವ್ಯಕ್ತಿಯು ಮತಾಂತರಕ್ಕೆ ಅಡ್ಡಿ ಉಂಟುಮಾಡಬಹುದು. ಮದುವೆಗಾಗಿ ಆಗುವ ಮತಾಂತರ ನಿಯಮಾನುಸಾರ ನಡೆಯದಿದ್ದರೆ ಅನೂರ್ಜಿತವಾಗುತ್ತದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಇನ್ನೊಬ್ಬನನ್ನು ತನ್ನ ಧರ್ಮಕ್ಕೆ ಮತಾಂತರ ಆಗುವಂತೆ ಹೇಳುವುದೂ ಸೇರಿದೆ ಎಂಬ ಒಮ್ಮತ ಸಂವಿಧಾನ ರಚನಾ ಸಭೆಯಲ್ಲಿ ಮೂಡಿತ್ತು. ಆದರೆ, ಈ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್‌ 1977ರಲ್ಲಿ ತಿರಸ್ಕರಿಸಿದೆ. ಹಿಂದೂ ಧರ್ಮವು ತನ್ನ ಒಂದು ವರ್ಗವನ್ನು ತಿರಸ್ಕೃತ ರೀತಿಯಲ್ಲಿ ಕಾಣುವುದಾದರೆ, ತಿರಸ್ಕಾರಕ್ಕೆ ಗುರಿಯಾದವರು ಇನ್ನೊಂದು ಧರ್ಮವನ್ನು ಅನುಮೋದಿಸುವುದರಲ್ಲಿ ತಪ್ಪೇನಿದೆ? ದಲಿತರು ಹಿಂದೂ ಧರ್ಮವನ್ನು ತೊರೆದು, ಬೇರೆ ಧರ್ಮಗಳನ್ನು ಅಪ್ಪಿಕೊಳ್ಳುವ ಮೂಲಕ ವಿಮೋಚನೆ ಪಡೆಯಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಮತಾಂತರಕ್ಕೆ ಸಂಬಂಧಿಸಿದ ಕಾನೂನುಗಳು, ಮತಾಂತರದ ಹಿಂದೆ ಹಣದ ಆಮಿಷ ಇದೆಯೇ ಎಂಬಂತಹ ಸರಳ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಬಲ್ಲವು. ಆದರೆ, ದಲಿತನೊಬ್ಬ ಬೇರೆ ಧರ್ಮಕ್ಕೆ ಮತಾಂತರವಾದಾಗ, ‘ತಿರಸ್ಕೃತ ದಲಿತ’ನಾಗಿ ಹಿಂದೂ ಧರ್ಮದಲ್ಲಿ ಉಳಿದುಕೊಂಡಿದ್ದಿದ್ದರೆ ಪಡೆಯುವುದಕ್ಕಿಂತ ಹೆಚ್ಚಿನದನ್ನು ಪಡೆಯುತ್ತಾನೆಯೇ ಎಂಬ ಸಂಕೀರ್ಣ ಪ್ರಶ್ನೆಗೆ ಆತ್ಮಸಾಕ್ಷಿ ಮಾತ್ರವೇ ಉತ್ತರಿಸಬಲ್ಲದು.

ಈ ನೈತಿಕ ಗೊಂದಲದ ಕಾರಣದಿಂದಾಗಿಯೇ, 19 ರಾಜ್ಯಗಳು ಇದುವರೆಗೆ ಮತಾಂತರ ನಿರ್ಬಂಧಿಸುವ ಕಾನೂನು ಜಾರಿಗೊಳಿಸಿಲ್ಲ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ. ಉತ್ತರ ಪ್ರದೇಶದ ಕಾನೂನು ದೋಷಪೂರಿತವಾಗಿದೆ. ಏಕೆಂದರೆ, ಮದುವೆಯ ಉದ್ದೇಶಕ್ಕಾಗಿ ಧರ್ಮ ಬದಲಾಯಿಸುವವನನ್ನು ಅದು ಸಹಿಸುವುದಿಲ್ಲ. ಮತಾಂತರಕ್ಕೆ ಸಂಘಟಿತ ಯತ್ನ ಇಲ್ಲ ಎಂದಾದರೆ, ಮದುವೆಗಾಗಿ ಆಗುವ ಮತಾಂತರವು ಭಾವುಕವಾದ, ವೈಯಕ್ತಿಕವಾದ ಅಥವಾ ದಂಪತಿಯ ಪಾಲಿಗೆ ಅತ್ಯಂತ ಸೂಕ್ತವೂ ಆದ ತೀರ್ಮಾನ ಎಂಬುದನ್ನು ಕೂಡ ಈ ಕಾನೂನು ಗುರುತಿಸುವುದಿಲ್ಲ. ಪ್ರಜೆಗಳ ಮದುವೆಯ ಆಯ್ಕೆಯನ್ನು ಅತಾರ್ಕಿಕವಾಗಿ ಹತ್ತಿಕ್ಕುವ ಈ ಕಾನೂನಿನ ಹಲವು ಅಂಶಗಳು ಅನೂರ್ಜಿತವಾಗುತ್ತವೆ.

ಲೇಖಕ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT