ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಪಾಲಿಗಾಗಿ ಪೈಪೋಟಿ

ಮೀಸಲಾತಿಯು ನಿಜಕ್ಕೂ ಚರ್ಚೆಗೆ ಅರ್ಹವಾದ ವಿಷಯ, ಪರಿಷ್ಕರಣೆಗೂ ಯೋಗ್ಯ!
Last Updated 25 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಮೀಸಲಾತಿಯನ್ನು ಇದುವರೆಗೂ ವಿರೋಧಿಸಿಕೊಂಡು ಬಂದಿದ್ದ ಹಲವರು ಇದೀಗ ಮೀಸಲಾತಿಯ ಸೌಲಭ್ಯ ಪಡೆಯಲು ಮತ್ತು ಮೀಸಲಾತಿಯ ಪ್ರಯೋಜನವನ್ನು ಪಡೆದಿರುವ ಕೆಲವರು ಅದರ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಬೇಡಿಕೆ ಮಂಡಿಸುತ್ತಿರುವ ವಿಚಿತ್ರವೂ ವಿಪರ್ಯಾಸಕರವೂ ಆದ ಸಮಕಾಲೀನ ಸಂದರ್ಭಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಈಗೇನಿದ್ದರೂ ಎಲ್ಲರೂ ಮೀಸಲಾತಿ ಪರ! ಅದರಲ್ಲಿ ತಮಗೆ ಅತಿಹೆಚ್ಚು ಪಾಲು ಸಿಗಬೇಕಷ್ಟೇ. ಅದಕ್ಕಾಗಿ ಹೋರಾಟಕ್ಕೆ ನಾ ಮುಂದು ತಾ ಮುಂದು ಎಂದು ಒಂದಾಗುತ್ತಿದ್ದಾರೆ.

‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರವು ಬೆಳಗಾವಿಯಲ್ಲಿ ಡಿಸೆಂಬರ್ 19ರಂದು ಪ್ರಾರಂಭವಾಗುವ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ವರದಿ ಪಡೆಯಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿದ್ದಾರೆ. ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇಕಡ 4ರಿಂದ ಶೇ 12ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಈಡೇರಿಕೆಗೆ ಹೋರಾಟ ರೂಪಿಸಲು ಸಜ್ಜಾಗಿರುವ ಒಕ್ಕಲಿಗರ ಸಂಘ ಮತ್ತು ಮೀಸಲಾತಿ ಹೋರಾಟ ಸಮಿತಿಯು ಸಮುದಾಯದ ಸ್ವಾಮೀಜಿಗಳು ಮತ್ತು ರಾಜಕಾರಣಿಗಳ ಸಭೆ ಕರೆದಿವೆ. ಸುಪ್ರೀಂ ಕೋರ್ಟ್‌ ತೀರ್ಪು ಅನ್ವಯಿಸಿ ಕರ್ನಾಟಕ ಸರ್ಕಾರವೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ 10ರಷ್ಟು ಮೀಸಲಾತಿಯನ್ನು ಶೀಘ್ರ ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರಂತೆ.

ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿರುವ ವೀರಶೈವ ಜಂಗಮ ಸಮುದಾಯ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದೆ. ವಕೀಲ ಬಿ.ಡಿ.ಹಿರೇಮಠ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ‘ಸ್ವಲ್ಪ ಸಮಯ ಕೊಡಿ, ಕಾನೂನು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಒಂದು ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ, ಸರ್ಕಾರಕ್ಕೆ ಎಲ್ಲರ ಹಿತವೂ ಮುಖ್ಯ’ ಎಂಬ ಆಶ್ವಾಸನೆ ಸಿಕ್ಕಿದೆಯಂತೆ. ಕುರುಬ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಾಲುಮತ ಮಹಾಸಭಾ ಮತ್ತು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಎಸ್.ಟಿ. ಮೀಸಲಾತಿಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಿತು. ಈ ಸಮುದಾಯದ ಮುಖಂಡರು ಪಾದಯಾತ್ರೆ, ಹಕ್ಕೊತ್ತಾಯಗಳ ನಂತರ ಇದೀಗ ಗಂಭೀರ ಸ್ವರೂಪದ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇನ್ನು, ಹಾಲಿ ಇದ್ದ ಪರಿಶಿಷ್ಟ ಜಾತಿಯ ಶೇ 15 ಹಾಗೂ ಪರಿಶಿಷ್ಟ ಪಂಗಡದ ಶೇ 3ರಷ್ಟು ಮೀಸಲಾತಿಯನ್ನು ಅನುಕ್ರಮವಾಗಿ ಶೇ 17 ಮತ್ತು ಶೇ 7ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಒಟ್ಟು ಮೀಸಲಾತಿ ಪ್ರಮಾಣವು ನಿಗದಿತ ಶೇ 50 ಮೀರಿ ಶೇ 56 ತಲುಪಿರುವುದರಿಂದ ಇದಕ್ಕೆ ಎದುರಾಗ
ಬಹುದಾದ ಸಾಂವಿಧಾನಿಕ ಮನ್ನಣೆಯ ತೊಡಕು ನಿವಾರಿಸಿಕೊಳ್ಳುವ ಹೊಣೆ ಸರ್ಕಾರದ ಮೇಲಿದೆ. ಈ ಮಧ್ಯೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡ ಆಡಳಿತ ಪಕ್ಷವು ಈ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ತನ್ನ ಐತಿಹಾಸಿಕ ನಿರ್ಧಾರ ಎಂದು ಜನಸಂಕಲ್ಪ ಯಾತ್ರೆಯುದ್ದಕ್ಕೂ ಕಹಳೆ ಊದುತ್ತಿದೆ. ಬಹುಶಃ ಆಡಳಿತಾರೂಢರ ಇಂತಹ ರಾಜಕೀಯ ಲೆಕ್ಕಾಚಾರದ ನಡೆನುಡಿಗಳು ಮತ್ತು ಚುನಾವಣೆ ಸಂದರ್ಭವು ಮೀಸಲಾತಿ ಲಾಭಾಕಾಂಕ್ಷೆಯ ಸಮುದಾಯಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದಂತೆ ಕಾಣುತ್ತದೆ.

ಮೀಸಲಾತಿಗೆ ಬೇಡಿಕೆ ಮಂಡಿಸುತ್ತಿರುವ ಪ್ರಬಲ ಜಾತಿಗಳು ವಿರೋಧ ಪಕ್ಷಗಳ ಕಣ್ಣಿಗೆ ಕೂಡ ಬರೀ ‘ಮತದಾರ ಸಮುದಾಯ’ಗಳಾಗಿ ಕಾಣುತ್ತಿವೆ. ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಮೀಸಲಾತಿ ವಿವಾದದಲ್ಲಿ ತಲೆಹಾಕದಂತೆ ಹೈಕಮಾಂಡ್ ನಿಯಂತ್ರಣ ಹೇರಿರುವ ವರದಿಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವಿಷಯದಲ್ಲಿ ಕೈಸುಟ್ಟುಕೊಂಡ ಕಹಿ ಅನುಭವದ ಬುತ್ತಿ ಆ ಪಕ್ಷದ ತಲೆಯ ಮೇಲಿದೆ. ಹಾಗಾಗಿ ಚುನಾವಣೆಯ ಹಿನ್ನೆಲೆಯಲ್ಲಿ ಮೀಸಲಾತಿ ವಿಷಯ ರಾಜಕೀಯ ಪಕ್ಷಗಳಿಗೆ ನುಂಗಲಾಗದ ಬಿಸಿತುಪ್ಪವೇ ಸರಿ.

ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣದ ಹೆಚ್ಚಳದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವಾಲ್ಮೀಕಿ ಸಮುದಾಯದ ಒಲವು ಗಳಿಸಿದ ಉಮೇದಿನಲ್ಲಿ ಬೀಗುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು ಕಿತ್ತೂರು ಕರ್ನಾಟಕದ ಪಂಚಮಸಾಲಿ, ಹಳೆಯ ಮೈಸೂರು ಪ್ರಾಂತ್ಯದ ಒಕ್ಕಲಿಗರು ಹಾಗೂ ಸಮಗ್ರ ಕರ್ನಾಟಕದಲ್ಲಿ ಹಂಚಿರುವ ಕುರುಬ ಸಮುದಾಯಗಳ ಮೀಸಲಾತಿ ಬೇಡಿಕೆ ಈಡೇರಿಸುವ ಅಡಕತ್ತರಿಯಲ್ಲಿ ಸಿಲುಕಿದೆ. ಅದರಲ್ಲೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಪಂಚಮಸಾಲಿ ಸಮಾಜದ ಒತ್ತಡವನ್ನು ಬಸವರಾಜ ಬೊಮ್ಮಾಯಿ ಹೇಗೆ ನಿರ್ವಹಿಸುತ್ತಾರೆ ಎಂಬುದು ಕುತೂಹಲಕಾರಿ.

ಇವೆಲ್ಲದರ ಮಧ್ಯೆ ಮೀಸಲಾತಿ ಸೌಲಭ್ಯ ಪಡೆಯಲು ಮುಗಿಬಿದ್ದಿರುವ ಪ್ರಬಲ ಸಮುದಾಯಗಳು ಮರೆತಿರುವುದು ಅಥವಾ ಮರೆಮಾಚುತ್ತಿರುವುದು ಮೀಸಲಾತಿಯ ಮೂಲ ಉದ್ದೇಶ ಮತ್ತು ಪರಿಕಲ್ಪನೆಯನ್ನು. ಸಂವಿಧಾನದಲ್ಲಿ ಅವಕಾಶ ಕಲ್ಪಿಸಿರುವ ಮೀಸಲಾತಿಯ ಮೂಲ ಆಶಯ ಸಾಮಾಜಿಕ ನ್ಯಾಯ. ಬಹುಮುಖ್ಯವಾಗಿ ಮೀಸಲಾತಿ ಎನ್ನುವುದು ಬಡತನ ನಿರ್ಮೂಲನೆ ಕಾರ್ಯಕ್ರಮವಲ್ಲ, ಸಮುದಾಯಗಳ ಆರ್ಥಿಕ ಅಭಿವೃದ್ಧಿಯ ಯೋಜನೆಯಲ್ಲ, ಜಾತಿ ವಿನಾಶದ ಉದ್ದೇಶವೂ ಇದಕ್ಕಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ. ಐತಿಹಾಸಿಕವಾಗಿ ಅವಕಾಶವಂಚಿತ ಸಮುದಾಯಗಳಿಗೆ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಪಾಲ್ಗೊಳ್ಳುವಿಕೆ ಸಾಧ್ಯವಾಗಿಸುವ ವಿಧಾನವಾಗಿ ಜಾರಿಗೆ ಬರಬೇಕಾದ ಮೀಸಲಾತಿಯು ರಾಜಕಾರಣದ ಆಡುಂಬೊಲ ಆಗಿರುವುದರ ದ್ಯೋತಕವೇ ಈಗಿನ ಮೀಸಲಾತಿ ಪೈಪೋಟಿ.

ಹಾಗೆ ನೋಡಿದರೆ ಮೀಸಲಾತಿಯು ನಿಜಕ್ಕೂ ಚರ್ಚೆಗೆ ಅರ್ಹವಾದ ವಿಷಯ, ಪರಿಷ್ಕರಣೆಗೂ ಯೋಗ್ಯ. ಇದರ ಆಶಯ ಮತ್ತು ಅನುಷ್ಠಾನದ ನಡುವಿನ ಅಂತರ ಬಹುಶಿಸ್ತೀಯ ಅಧ್ಯಯನಕ್ಕೆ ಸಾಮಗ್ರಿ.

ಕಳೆದ ಏಳು ದಶಕಗಳಿಂದ ಜಾರಿಯಲ್ಲಿರುವ ಮೀಸಲಾತಿಯು ಕಟ್ಟಕಡೆಯ ಅರ್ಹರನ್ನು ತಲುಪುವಲ್ಲಿ ಏಕೆ ಸಫಲವಾಗಿಲ್ಲ? ಅವರನ್ನು ಮುಟ್ಟುವುದು ಹೇಗೆ? ಮೀಸಲಾತಿಯ ದುರುಪಯೋಗದಂತಹ ಬಹುದೊಡ್ಡ ಪಿಡುಗನ್ನು ನಿಯಂತ್ರಿಸುವುದು ಹೇಗೆ? ಒಳಮೀಸಲಾತಿಯ ಬೇಡಿಕೆ- ವರದಿ ನನೆಗುದಿಗೆ ಬೀಳಲು ಯಾರು ಕಾರಣ? ಒಳಮೀಸಲಾತಿಗೆ ವಿರೋಧವು ವಿಶಾಲಾರ್ಥದಲ್ಲಿ ಮೀಸಲಾತಿಯ ವಿರೋಧವಲ್ಲವೇ? ಖಾಸಗೀಕರಣ ಮತ್ತು ಜಾಗತೀಕರಣದ ಸನ್ನಿವೇಶದಲ್ಲಿ ಸರ್ಕಾರಿ ವಲಯದ ಉದ್ಯೋಗ-ಶಿಕ್ಷಣ ಅವಕಾಶಗಳಲ್ಲಿ ವಿಪರೀತ ಕಡಿತವಾಗಿದೆ. ಸರ್ಕಾರ ಕೂಡ ಗುತ್ತಿಗೆ ಆಧಾರದ ಕಾಮಗಾರಿ ಮತ್ತು ಬಾಹ್ಯ ಏಜೆನ್ಸಿಗಳನ್ನು ಅವಲಂಬಿಸುವುದರಿಂದ ನೇಮಕಾತಿ ಅವಕಾಶ ಗಣನೀಯವಾಗಿ ತಗ್ಗಿದೆ. ಹೀಗಿರುವಾಗ ಮೀಸಲಾತಿಗೇನು ಅರ್ಥ? ಮೀಸಲಾತಿ ಇನ್ನೆಷ್ಟು ದಿನ ಎಂಬ ಅಸಹನೆಗೆ ದಾರಿಯಾಗದಂತೆ ತ್ವರಿತಗತಿಯಲ್ಲಿ ಮೀಸಲಾತಿಯ ಉದ್ದೇಶ ಈಡೇರಿಸುವುದು ಮತ್ತು ಗುರಿ ಮುಟ್ಟುವುದು ಹೇಗೆ? ಯೋಚಿಸಲು, ಚರ್ಚಿಸಲು, ನಿರ್ಧರಿಸಲು, ಬದಲಿಸಲು, ಜಾರಿಗೊಳಿಸಲು ಇಂತಹ ಎಷ್ಟೊಂದು ಸವಾಲುಗಳು ನಮ್ಮ ಮುಂದಿವೆ.

ಒಟ್ಟಾರೆ ಸಾಮಾಜಿಕ ನ್ಯಾಯ ಪರಿಕಲ್ಪನೆಯೇ ಅಪ್ರಸ್ತುತ ಎಂಬ ಭ್ರಮೆ ಹುಟ್ಟಿಸುವ ಅಪಾಯಕಾರಿ ಘಟ್ಟದಲ್ಲಿ ನಿಂತಿದ್ದೇವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT