ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನಿವೃತ್ತಿ ಘೋಷಣೆ: ಯಾವುದು ಸಕಾಲ?

ನಿವೃತ್ತಿ ಎನ್ನುವುದು ಅಲ್ಪವಿರಾಮವಷ್ಟೇ, ಪೂರ್ಣವಿರಾಮವಲ್ಲ
Last Updated 13 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ 56 ವರ್ಷಗಳನ್ನು ಪೂರ್ಣಗೊಳಿಸಿದ ನನ್ನ ಆತ್ಮೀಯ ಮಿತ್ರರೊಬ್ಬರು ನೌಕಾಪಡೆಯಲ್ಲಿ 35 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಿ ಪಡೆದರು. ‘ರಿಟೈರ್‌ಮೆಂಟ್‌ ಅಹೋಯ್‌’ ಎನ್ನುವ ಶೀರ್ಷಿಕೆಯ ಟಿಪ್ಪಣಿಯನ್ನು ಬರೆಯುವ ಮೂಲಕ ಈ ಪ್ರಮುಖ ಗಳಿಗೆಯನ್ನು ಸಂಭ್ರಮಿಸಲು ನಿರ್ಧರಿಸಿದರು. ಇದೇ ವೇಳೆ, ತಮ್ಮ ಮೂರನೇ ನವೋದ್ಯಮದ ಷೇರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿರುವ 79ರ ಹರೆಯದ ಯಶಸ್ವಿ ಮತ್ತು ನಿರ್ಭೀತ ಉದ್ಯಮಿಯೊಬ್ಬರ ಕುರಿತು ಓದಲು ನನಗೆ ಅವಕಾಶ ಸಿಕ್ಕಿತು. ಇದು, ಡಾಟ್‌ಕಾಮ್‌ ಉತ್ತುಂಗದಲ್ಲಿದ್ದ ಸಮಯದಲ್ಲಿ ನಾನು ನೋಡಿದ್ದ ‘ಮೂವತ್ತರ ಹರೆಯದಲ್ಲೇ ನಿಮಗೆ ನಿವೃತ್ತಿಯಾಗಬೇಕೆ? ಹಾಗಾದರೆ, ಅರ್ಜಿ ಸಲ್ಲಿಸಿ’ ಎಂಬ ಉದ್ಯೋಗ ನೇಮಕಾತಿ ಜಾಹೀರಾತನ್ನು ನೆನಪಿಸಿತು. ಈ ಮೂರು ನಿವೃತ್ತಿಗಳು ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದವು. ನಿವೃತ್ತಿ ಘೋಷಿಸಲು ಸೂಕ್ತ ಸಮಯ ಎನ್ನುವುದು ಇದೆಯೇ?

ಉದ್ಯೋಗದಲ್ಲಿ ಉತ್ತುಂಗದಲ್ಲಿರುವಾಗ ವಿರಾಮ ತೆಗೆದುಕೊಳ್ಳುವುದನ್ನು ಕೆಲವರು ಸೂಕ್ತವಾದ ನಿರ್ಧಾರ ಎಂದು ಪರಿಗಣಿಸುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಆಷ್ಲೆ ಬಾರ್ಟಿ. ಅದ್ಭುತ ಪ್ರತಿಭೆಯ ಟೆನಿಸ್‌ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಹಾಗೂ ಮೂರು ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದ ಇವರು 25ನೇ ವಯಸ್ಸಿನಲ್ಲಿಯೇ ನಿವೃತ್ತರಾದರು. ನಿವೃತ್ತರಾಗುವ ಸಮಯದಲ್ಲಿ ಅವರು ಹೀಗೆ ಹೇಳಿದ್ದರು: ‘ವಿಂಬಲ್ಡನ್‌ ಗೆಲ್ಲುವುದು ಎಂದರೆ ಕನಸಿನ ಪರಾಕಾಷ್ಠೆಯನ್ನು ತಲುಪುವುದು ಎಂದರ್ಥ. ನನಗೆ ಭಾರಿ ಸಂತಸವಾಗಿದೆ ಮತ್ತು ನಿವೃತ್ತಿಗೆ ನಾನು ಸಿದ್ಧಳಾಗಿದ್ದೇನೆ, ಅಲ್ಲದೆ ನಿವೃತ್ತಿಯಾಗಲು ಇದು ಸರಿಯಾದ ಸಮಯ ಎನ್ನುವುದು ನನ್ನ ಹೃದಯದ ಮಾತಾಗಿದೆ’.

ಈ ತಲೆಮಾರಿನ ಅತ್ಯುನ್ನತ ರಿಟೇಲರ್‌ ಹಾಗೂ ಟೆಸ್ಕೊ ಸಂಸ್ಥೆಯ ಸಿಇಒ ಆಗಿದ್ದ ಸರ್‌ ಟೆರಿ ಲೀಹಿ ಅವರು, ತಮ್ಮ ಸಂಸ್ಥೆಯು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ರಿಟೇಲ್‌ ಕಂಪನಿಯಾಗಿ ಗುರುತಿಸಿಕೊಂಡಿದ್ದ ಸಂದರ್ಭದಲ್ಲೇ ತಮ್ಮ 56ನೇ ವರ್ಷದಲ್ಲಿ ನಿವೃತ್ತಿ ಘೋಷಿಸಿಕೊಂಡರು. ಸಂಬಂಧಿತ ವ್ಯಕ್ತಿಗೆ ನಿವೃತ್ತಿಯ ಸಮಯವು ಸಂತಸ ತಂದರೂ, ಆ ವ್ಯಕ್ತಿಯು ಇನ್ನಷ್ಟು ಕಾಲ ಮುಂದುವರಿದು ಇನ್ನೂ ಒಂದಷ್ಟು ಸಾಧನೆ ಮಾಡಬೇಕಿತ್ತು ಎಂದು ಇತರರು ಭಾವಿಸುವುದು ಸಹಜವೇ. ಆದರೆ ಸಂಪೂರ್ಣವಾಗಿ ವೈಯಕ್ತಿಕವಾಗಿರುವ ಈ ಆಯ್ಕೆಯನ್ನು ನಾವು ಗೌರವಿಸಬೇಕು.

ಸಾಧ್ಯವಿರುವಷ್ಟು ಮಟ್ಟಿಗೆ ಮುಂದುವರಿಯುವುದು ಕೆಲವರ ಇಚ್ಛೆ. ಅಮೆರಿಕದ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ತಮ್ಮ 90ರ ಹರೆಯದಲ್ಲಿಯೂ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗುವುದು ಅಚ್ಚರಿಯ ವಿಷಯವೇನಲ್ಲ. ಟೆಕ್ಸಾಸ್‌ ವಿಶ್ವವಿದ್ಯಾಲಯದ ಜಾನ್‌ ಬಿ ಗುಡ್‌ ಇನಫ್‌ ಮತ್ತು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಸ್ಯುಕುರೊ ಮನಾಬೆ ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್‌ ಪ್ರಶಸ್ತಿಯೂ ದೊರೆತಿದೆ. ಪ್ರಸಿದ್ಧ ಕನ್ನಡ ನಿಘಂಟುಕಾರ ಮತ್ತು ಶತಾಯುಷಿಜಿ.ವೆಂಕಟಸುಬ್ಬಯ್ಯ ಅವರು 90ನೇ ಇಳಿ
ವಯಸ್ಸಿನಲ್ಲಿಯೂ ಸಂಶೋಧನೆ ನಡೆಸಿ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಕಲೆ, ಸಂಗೀತ, ವಿಜ್ಞಾನದಂತಹ ಪಾಂಡಿತ್ಯ ಕ್ಷೇತ್ರಗಳಲ್ಲಿನ ವೃತ್ತಿಯ ದೀರ್ಘಾಯುಷ್ಯವು ಮುಂದಿನ ತಲೆಮಾರುಗಳಿಗೆ ಸೃಜನಶೀಲತೆಯನ್ನು ಒದಗಿಸುವುದಲ್ಲದೆ ಅಮೂಲ್ಯ ತರಬೇತಿಯನ್ನೂ ನೀಡುತ್ತದೆ.

ಕೆಲವರು ನಿವೃತ್ತಿಯಾಗುವುದೇ ಇಲ್ಲ, ಏಕೆಂದರೆ ಅವರು ಬೇರೆ ಏನನ್ನೂ ಯೋಚಿಸಲಾರರು. ಇದು ಕೆಲವು ಸನ್ನಿವೇಶಗಳಲ್ಲಿ ವೈಫಲ್ಯ ಎನಿಸುತ್ತದೆ ಹಾಗೂ ಕೆಲವು ಸಂಸ್ಕೃತಿಗಳಲ್ಲಿ ಇದು ಎದ್ದು ಕಾಣುತ್ತದೆ. ಭಾರತದ ಪ್ರಸಿದ್ಧ ಶಿಕ್ಷಣ ತಜ್ಞ ಎನಿಸಿರುವ ಹಾಗೂ ಸರ್ಕಾರದಲ್ಲಿ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಂತರ ತಳಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ವಯಂಸೇವಾ ಸಂಸ್ಥೆಯೊಂದನ್ನು (ಎನ್‌ಜಿಒ) ಸ್ಥಾಪಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಪರಿಶುದ್ಧ ಹಿಂದಿ ಭಾಷೆಯಲ್ಲಿ ಹೀಗೆ ಹೇಳಿದ್ದರು: ‘ಜಿಸ್ಕೊ ಬಿಸ್ತರ್‌ ಪಕಡ್ನಾ ಹೈ, ವೋ ಅಭೀ ಭೀ ಕುರ್ಸಿ ಪಕ್ಡೆ ಹುವೆ ಹೈಂ’ (ಯಾರು ಹಾಸಿಗೆ ಹಿಡಿಯಬೇಕೋ ಅವರು ಕುರ್ಚಿ ಹಿಡಿದುಕೊಂಡು ಕೂತಿದ್ದಾರೆ). ಅವರು ಹೇಳಿದ ಈ ಮಾತನ್ನು ಭಾಷಾಂತರಿಸಿದರೆ ಅದು ಅಷ್ಟೊಂದು ಪರಿಣಾಮಕಾರಿ ಎನಿಸದು. ಆದರೆ ಸಮಯ ಮೀರಿದ ನಂತರವೂ ಜನರು ಕುರ್ಚಿಗೆ ಅಂಟಿಕೊಂಡರೆ ಆಗುವ ಅಡ್ಡಪರಿಣಾಮಗಳನ್ನು ಇದು ಸೂಚಿಸುತ್ತದೆ. ಕುತೂಹಲಕಾರಿ ವಿಷಯವೆಂದರೆ, ಅವಕಾಶ ಸಿಕ್ಕ ಕಡೆ ಇನ್ನೂ ಹೆಚ್ಚಿನ ಅವಧಿಯ ತನಕ ಉಳಿದುಕೊಳ್ಳುವ ಜನರು, ‘ಬಿಟ್ಟುಹೋಗಲು ಸಂಸ್ಥೆಯು ನನ್ನನ್ನು ಬಿಡುತ್ತಿಲ್ಲ’ ಎಂಬ ತರ್ಕವನ್ನು ಮುಂದಿಡುತ್ತಾರೆ. ಮಾರುಕಟ್ಟೆಗಳು, ಜನರ ವರ್ತನೆ, ತಂತ್ರಜ್ಞಾನದ ಸಮಕಾಲೀನ ಹಾಗೂ ಆಳವಾದ ಅರಿವು ಬೇಕಿರುವಲ್ಲಿ ಆಡಳಿತಾತ್ಮಕ ಹಾಗೂ ಕಾರ್ಯಾಚರಣೆ ಹುದ್ದೆಗಳಿಂದ ಹಳಬರು ಗೌರವಯುತವಾಗಿ ಹಿಂದೆ ಸರಿಯಬೇಕು. ಅಲ್ಲಿ ಅವರು ಸಲಹೆಗಾರ ಅಥವಾ ಮೇಲ್ವಿಚಾರಣೆಯ ಹುದ್ದೆಗಳಿಗೆ ಸೀಮಿತರಾಗಬೇಕು.

ಕೆಲವರು ನಿಗದಿತ ಉದ್ದೇಶದ ಬಗ್ಗೆ, ಸಂಸ್ಥೆ ಅಥವಾ ಕಚೇರಿಯೊಂದಿಗೆ ಎಷ್ಟು ಆಳವಾದ ಬಂಧವನ್ನು ಹೊಂದಿರುತ್ತಾರೆ ಎಂದರೆ, ಅದನ್ನು ತ್ಯಜಿಸಲು ಅವರಿಗೆ ವಿಪರೀತ ಹೆದರಿಕೆಯಾಗುತ್ತದೆ. ‘ವಾಟ್‌ ಟು ಎಕ್ಸ್‌ಪೆಕ್ಟ್‌ ವೆನ್‌ ಯು ಆರ್‌ ರಿಟೈರಿಂಗ್‌’ ಎಂಬ ಪುಸ್ತಕವನ್ನು ಬರೆದಿರುವ ಕೆನಡಾ ಮೂಲದ ಲೇಖಕ ರಿಲಿ ಮೋಯ್ನೆಸ್‌ ನಷ್ಟದ ಭೀತಿಯನ್ನು ಐದು ಪ್ರಕಾರಗಳಾಗಿ ವರ್ಗೀಕರಿಸಿದ್ದಾರೆ. ಅವೆಂದರೆ, ದಿನಚರಿ, ಅಸ್ಮಿತೆ, ಉದ್ದೇಶ, ಅಧಿಕಾರ ಮತ್ತು ಸಂಬಂಧಗಳು. ನಿವೃತ್ತಿ ಎಂದರೆ ಕೆಲವರಿಗೆ ತಮ್ಮ ದಿನಚರಿಯಿಂದ ಹಠಾತ್‌ ಆಗಿ ನಿರ್ಗಮಿಸಿದಂತೆ ಭಾಸವಾಗಬಹುದು. ಮುಕ್ತ ಹಾಗೂ ಮೇಲ್ವಿಚಾರಣೆ ಇಲ್ಲದ ಕಾಲದ ಹೊಳಪು ಬೇಗನೇ ಹೊರಟುಹೋಗಿ ಮಂಕುತನ ಆವರಿಸುತ್ತದೆ, ತಮ್ಮ ಯೋಗ್ಯತೆಯ ಪ್ರಶ್ನೆ ಉದ್ಭವಿಸುತ್ತದೆ. ಕೆಲಸ ಮತ್ತು ಕಚೇರಿಯು ಜನರಿಗೆ ಅಸ್ಮಿತೆ, ಉದ್ದೇಶ, ಅಧಿಕಾರ ಮತ್ತು ಸಂಬಂಧಗಳನ್ನು ಒದಗಿಸುತ್ತದೆ. ಅಲ್ಲದೆ ಯಾವುದೇ ವ್ಯಕ್ತಿಯು ಇತರ ಆಸಕ್ತಿಗಳು ಹಾಗೂ ಒಡನಾಟಗಳನ್ನು ಬೆಳೆಸಿಕೊಳ್ಳದೇ ಹೋದಲ್ಲಿ ನಿವೃತ್ತಿಯು ಆತಂಕಕಾರಿ ಎನಿಸಬಹುದು.

ನಿವೃತ್ತಿ ಎನ್ನುವುದು ಅಲ್ಪವಿರಾಮವಷ್ಟೇ, ಪೂರ್ಣವಿರಾಮವಲ್ಲ. ನಿವೃತ್ತಿಯಿಂದ ಒಂದು ಯೋಜಿತ ಪರಿವರ್ತನೆ ಸಂಭವಿಸಿದಲ್ಲಿ ಅದು ಪ್ರಯೋಜನಕಾರಿ ಎನಿಸಬಲ್ಲದು. ಕೆಲವು ಸಂದರ್ಭಗಳಲ್ಲಿ ಇಂತಹ ಪರಿವರ್ತನೆಗೆ ಅವಕಾಶವಿದೆ. ಉದಾಹರಣೆಗೆ, ಸಕ್ರಿಯ ರಾಜಕಾರಣದಿಂದ ದೂರವಾದವರನ್ನು ರಾಜ್ಯಪಾಲರನ್ನಾಗಿ ನೇಮಿಸುವುದು ಸರ್ವೇ ಸಾಮಾನ್ಯ. ಶೈಕ್ಷಣಿಕ ವಲಯದಲ್ಲಿ ವಿಶ್ರಾಂತ ಮತ್ತು ಅತಿಥಿ ಉಪನ್ಯಾಸಕರ ಸ್ಥಾನಗಳಿವೆ. ಹಿರಿಯ ಅಧಿಕಾರಿಗಳು ಚಿಂತಕರ ಚಾವಡಿಯಲ್ಲಿ ಇರುವ ಸ್ಥಾನಗಳನ್ನು ಅಲಂಕರಿಸುತ್ತಾರೆ. ಕಾರ್ಪೊರೇಟ್‌ ವಲಯದ ಎಕ್ಸಿಕ್ಯುಟಿವ್‌ಗಳು ಆಡಳಿತ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಆಡಳಿತ ನಿರ್ವಹಣೆಯ ಪಾತ್ರವನ್ನು ವಹಿಸುತ್ತಾರೆ.

ಆದರೆ, ಕೆಲವು ವ್ಯಕ್ತಿಗಳು ನಿವೃತ್ತಿಯ ನಂತರ ಬೇರೆಯೇ ಬದುಕನ್ನು ಸಾಗಿಸಲು ಬಹಳ ಎಚ್ಚರದಿಂದ ಪೂರ್ವಸಿದ್ಧತೆ ನಡೆಸಿಕೊಳ್ಳುತ್ತಾರೆ. ಅನೇಕ ಯಶಸ್ವಿ ಅಧಿಕಾರಿಗಳು ಮತ್ತು ಕಾರ್ಪೊರೇಟ್‌ ಸಂಸ್ಥೆಗಳಎಕ್ಸಿಕ್ಯುಟಿವ್‌ಗಳು ಸಂಸ್ಥೆಗಳು ಮತ್ತು ಸಮಾಜದ ಒಳಿತಿಗಾಗಿ ಸೇವೆ ನೀಡುವ ಮೂಲಕ ಸಂತಸ, ಆತ್ಮತೃಪ್ತಿಯ ಬದುಕು ಸಾಗಿಸುವುದಿದೆ. ಹಣಕಾಸು ಕಾರ್ಯದರ್ಶಿಯಂತಹ ಗೌರವಯುತ ಹುದ್ದೆಯನ್ನು ಅಲಂಕರಿಸಿದ್ದ ಹಸ್ಮುಕ್‌ ಅಧಿಯಾ ಅವರು ನಿವೃತ್ತಿಯ ನಂತರ ಸರ್ಕಾರದ ಪ್ರಮುಖ ಹುದ್ದೆಯನ್ನು ನಿರಾಕರಿಸಿದರು ಹಾಗೂ ಅದರ ಬದಲಿಗೆ ಆಧ್ಯಾತ್ಮಿಕತೆ ಮತ್ತು ತಮ್ಮ ಮಗನ ಆರೈಕೆಗೆ ಸಮಯ ಮೀಸಲಿಡಲು ನಿರ್ಧರಿಸಿದರು.

ಜೀವಿತಾವಧಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಜನರು ತಮ್ಮ ಬದುಕಿನ ಮೂರನೇ ಒಂದರಷ್ಟು ಸಮಯವನ್ನು ನಿವೃತ್ತಿಯ ನಂತರ ಕಳೆಯುತ್ತಾರೆ. ನಿವೃತ್ತಿ ಎನ್ನುವುದು ನಮ್ಮ ಬದುಕಿನ ದೊಡ್ಡ ಸಾಹಸವಾಗಿದೆ. ಇದಕ್ಕಾಗಿ ಮನಸ್ಸನ್ನು ಸನ್ನದ್ಧಗೊಳಿಸಲು ಅಗತ್ಯವಾದ ಸಮಯ ವ್ಯಯಿಸುವುದಕ್ಕೆ ಇದು ಸಕಾಲ.

ಲೇಖಕ: ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಮುಖ್ಯ ಸಂವಹನ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT