ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಉಕ್ರೇನ್: ಯುದ್ಧದ ಸುತ್ತಮುತ್ತ

ಸೈಬರ್ ಯುದ್ಧ ಮುಂದಿನ ದಿನಗಳಲ್ಲಿ ಯುದ್ಧ ತಂತ್ರಗಾರಿಕೆಯ ಬಹುದೊಡ್ಡ ಆಯುಧವೇ ಆಗಲಿದೆ
Last Updated 17 ಮಾರ್ಚ್ 2022, 22:17 IST
ಅಕ್ಷರ ಗಾತ್ರ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಉಕ್ರೇನಿನ ಮೇಲೆ ಯುದ್ಧ ಸಾರಿ ಮೂರು ವಾರಗಳಾಗುತ್ತಿವೆ. ಮೂರು ದಿನಗಳೊಳಗೆ ಉಕ್ರೇನ್ ಅನ್ನು ಮಣಿಸಿ ತನ್ನ ಕೈಗೊಂಬೆಯೊಬ್ಬನನ್ನು ಅಧ್ಯಕ್ಷನನ್ನಾಗಿ ಕೂರಿಸಿ, ಪಕ್ಕದ ಬೆಲರೂಸ್‍ನಂತೆ ಪರೋಕ್ಷವಾಗಿ ತನ್ನ ಹಿಡಿತಕ್ಕೆ ತಂದುಕೊಳ್ಳುವ ಉಮೇದಿನಲ್ಲಿದ್ದ ಪುಟಿನ್‌ ಅವರಿಗೆ ಅಚ್ಚರಿ ಎನಿಸುವಂತೆ ಉಕ್ರೇನಿಯನ್ನರು ಹೋರಾಟ ಮಾಡುತ್ತಿದ್ದಾರೆ. ಉಕ್ರೇನಿನ ಪೂರ್ವ ಭಾಗದಲ್ಲಿ ಅಲ್ಪಸಂಖ್ಯಾತ ರಷ್ಯನ್ ಭಾಷಿಕರ ನರಮೇಧ ನಡೆಯುತ್ತಿದೆ ಮತ್ತು ಅದನ್ನು ತಡೆಯಲು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದೇವೆ ಅನ್ನುವ ನೆಪವೊಡ್ಡಿ ಶುರುವಾದ ಈ ಯುದ್ಧದಲ್ಲಿ ರಷ್ಯನ್ ಭಾಷಿಕರೇಹೆಚ್ಚಿರುವ ನಗರಗಳನ್ನೂ ರಷ್ಯನ್ ಸೇನೆ ಕುಟ್ಟಿ ಪುಡಿಮಾಡುತ್ತಿದೆ. ಇದನ್ನು ಗಮನಿಸಿದರೆ, ಈಯುದ್ಧದ ನಿಜ ಉದ್ದೇಶ ಅಳಿದುಹೋದ ಸೋವಿಯತ್ ರಷ್ಯಾ (ಯುಎಸ್ಎಸ್‌ಆರ್) ಅನ್ನುವ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಬೇಕು ಅನ್ನುವ ವ್ಯಕ್ತಿಯೊಬ್ಬನ ಸಾಮ್ರಾಜ್ಯಶಾಹಿ ಕನಸನ್ನು ಈಡೇರಿಸುವ ಪ್ರಯತ್ನ ಅನ್ನುವುದು ಸ್ಪಷ್ಟವಾಗುತ್ತದೆ.

ಬಹುಬೇಗ ಯುದ್ಧ ಗೆಲ್ಲಲಾಗದ್ದಕ್ಕೆ ಹಾಗೂ ಅಪಾರ ಪ್ರಮಾಣದ ಸಾವು, ನೋವು ತನ್ನ ಸೇನೆಯಲ್ಲೂ ಆದ ಕಾರಣಕ್ಕೆ ಇನ್ನಷ್ಟು ಕಿರಿಕಿರಿಗೊಂಡಿರುವ ರಷ್ಯಾ ಸೇನೆಯು ಉಕ್ರೇನ್ ಅನ್ನು ಮಾನಸಿಕವಾಗಿ ಕುಗ್ಗಿಸಲೆಂದೇ ಮಿಲಿಟರಿ ಗುರಿಗಳಿಗಿಂತ ಹೆಚ್ಚಾಗಿ ನಾಗರಿಕರ ನೆಲೆಗಳ ಮೇಲೆ ಬಾಂಬು ಸುರಿಯುತ್ತಿದೆ. ದೊಡ್ಡ ಪ್ರಮಾಣದ ಸಾವು, ನೋವಿನ ಮೂಲಕ ಎರಡನೆಯ ಮಹಾಯುದ್ಧದ ನಂತರ ಯುರೋಪಿನಲ್ಲಿ ದೊಡ್ಡ ಮಟ್ಟದ ಯುದ್ಧ ಅಪರಾಧಗಳಿಗೆ ಕಾರಣವಾಗಿದೆ. ಯುದ್ಧದ ಕೊನೆಯಲ್ಲಿ ಚೆಚೆನ್ಯಾ ಮತ್ತು ಸಿರಿಯಾದಲ್ಲಿ ರಷ್ಯಾ ಸೇನೆ ಮಾಡಿದ್ದನ್ನು ಕಂಡರೆ ಮುಂದಿನ ದಿನಗಳು ಉಕ್ರೇನ್ ಪಾಲಿಗೆ ಇನ್ನಷ್ಟು ಸಂಕಟದ್ದಾಗಿ ಇರಲಿವೆ ಅನ್ನಬಹುದು. 70 ವರ್ಷಗಳ ಕಾಲ ತಕ್ಕಮಟ್ಟಿಗೆ ಶಾಂತಿ ನೆಲೆಸಿದ್ದ ಜಗತ್ತಿನಲ್ಲಿ ಈ ಯುದ್ಧ ಮುಂದಿನ ದಿನಗಳ ಕುರಿತು ಅನಿಶ್ಚಿತತೆಯನ್ನು, ಜಾಗತೀಕರಣ, ದೇಶ– ದೇಶಗಳ ನಡುವಿನ ಅಧಿಕಾರದ ಸಂಬಂಧವೆಲ್ಲವನ್ನೂಮತ್ತೊಮ್ಮೆ ಅವಲೋಕಿಸುವ ಸಂದರ್ಭವನ್ನು ನಮ್ಮೆದುರು ತಂದಿದೆ. ಇಲ್ಲಿಯವರೆಗಿನ ಈಯುದ್ಧದಿಂದ ಕೆಲವು ಸಂದೇಶಗಳು ಹೊರಹೊಮ್ಮುತ್ತಿವೆ.

ಉಕ್ರೇನಿನ ಮೇಲೆ 300 ವರ್ಷಗಳ ಕಾಲ ರಷ್ಯನ್ ಭಾಷೆ ಮತ್ತು ಸಂಸ್ಕೃತಿಯನ್ನು ಹೇರಿ, 1930ರ ಹೊತ್ತಲ್ಲಿ ಒಂದು ಭೀಕರ ಬರಗಾಲ ಸೃಷ್ಟಿಸಿ 40 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರನ್ನು ಕೊಂದು, ಅವರ ಜಾಗಕ್ಕೆ ರಷ್ಯನ್ ಭಾಷಿಕರ ವಲಸೆಗೆ ನೆರವು ನೀಡಿದ ಇತಿಹಾಸದ ಹೊರತಾಗಿಯೂ ಉಕ್ರೇನಿಯನ್ನರ ರಾಷ್ಟ್ರೀಯತೆಯನ್ನು ಮಣಿಸಲು ರಷ್ಯಾಗೆ ಸಾಧ್ಯವಾಗಿರಲಿಲ್ಲ. ಈ ಬಾರಿಯ ಯುದ್ಧದಲ್ಲಿ ಸಾಮಾನ್ಯ ಉಕ್ರೇನಿಯನ್ನರು ತೋರುತ್ತಿರುವ ಪ್ರತಿರೋಧ ಗಮನಿಸಿದಾಗ, ರಷ್ಯಾವು ಯುದ್ಧ ಗೆದ್ದರೂ ಹೆಚ್ಚು ದಿನ ಉಕ್ರೇನ್ ಅನ್ನು ತನ್ನ ಅಂಕೆಯಲ್ಲಿ ಇಟ್ಟುಕೊಳ್ಳುವುದು ಅಸಾಧ್ಯ ಎಂದು ತೋರುತ್ತಿದೆ.

ಸೋವಿಯತ್ ರಷ್ಯಾದಿಂದ ಪ್ರತ್ಯೇಕವಾದಾಗ ಉಕ್ರೇನಿನ ಬಳಿ 300ಕ್ಕೂ ಹೆಚ್ಚು ಅಣ್ವಸ್ತ್ರದ ಸಿಡಿತಲೆಗಳಿದ್ದವು. ತನಗೆ ಭದ್ರತೆ ನೀಡುವ ರಷ್ಯಾದ ಮಾತು ನಂಬಿ ಉಕ್ರೇನ್ ಅವುಗಳೆಲ್ಲವನ್ನೂ ರಷ್ಯಾದ ಹಿಡಿತಕ್ಕೆ ಒಪ್ಪಿಸಿತು. ಒಂದು ವೇಳೆ ಉಕ್ರೇನಿನ ಬಳಿ ಈ ಅಸ್ತ್ರಗಳಿದ್ದಿದ್ದರೆ ಅದರ ಮೇಲೆ ದಾಳಿ ಮಾಡುವ ಮುನ್ನ ರಷ್ಯಾ ಹತ್ತು ಬಾರಿ ಯೋಚಿಸುತ್ತಿತ್ತು. ಉಕ್ರೇನಿನಂತಹ ಸಾರ್ವಭೌಮ ದೇಶವೊಂದು ತನ್ನ ಅಣ್ವಸ್ತ್ರಗಳನ್ನು ಹೀಗೆ ಬಿಟ್ಟುಕೊಡಬಾರದಿತ್ತು ಅನ್ನುವ ಪಾಠ ಕಲಿಯುವಷ್ಟರ ಹೊತ್ತಿಗೆ ರಷ್ಯಾದ ಬಾಂಬುಗಳ ಮಳೆಗೆ ಅರ್ಧ ದೇಶ ನಾಶವಾಗಿದೆ. ದೇಶವೊಂದರ ರಕ್ಷಣೆಗೆ ಅಣ್ವಸ್ತ್ರಕ್ಕಿಂತ ದೊಡ್ಡ ಸಾಧನವಿಲ್ಲ. ಭಾರತವೂ ಸೇರಿದಂತೆ ಅಣ್ವಸ್ತ್ರ ಹೊಂದಿರುವ ದೇಶಗಳಿಗೆ ಇದೊಂದು ಪಾಠ. ಅಣ್ವಸ್ತ್ರ ಪ್ರಸರಣ ತಡೆಯುವ ಉದ್ದೇಶಕ್ಕೂ ಯುದ್ಧದಿಂದ ಹಿನ್ನಡೆಯಾಗಿದೆ.

ಇಪ್ಪತ್ತನೆಯ ಶತಮಾನದುದ್ದಕ್ಕೂ ಅಮೆರಿಕ ದೊಂದಿಗೆ ವಿಶ್ವದ ದೊಡ್ಡಣ್ಣನಾಗಲು ಸೆಣಸಿದ ರಷ್ಯಾ ಆ ದಿನಗಳಿಗೆ ಹೋಲಿಸಿದರೆ ಈಗ ಒಂದು ಕಳೆಗುಂದಿದ ಪ್ರತಿರೂಪದಂತೆ ಕಾಣುತ್ತಿದೆ. ದೊಡ್ಡ ಸೈನ್ಯ, ಮದ್ದುಗುಂಡುಗಳಿದ್ದರೂ ಉಕ್ರೇನಿನಂತಹ ಚಿಕ್ಕ ದೇಶದ ಪ್ರತಿರೋಧವನ್ನು ಗೆಲ್ಲಲಾಗದೆ ಯುದ್ಧವನ್ನು ಎಳೆದಾಡುತ್ತ ಜಗತ್ತಿನ ಕಣ್ಣಿನಲ್ಲಿ ಏಕಾಂಗಿಯಾಗುತ್ತಿದೆ. ಅದರ ಮಿಲಿಟರಿ ಶಕ್ತಿ, ಆಯುಧಗಳೆಲ್ಲವೂ ಸೋವಿಯತ್ ದಿನಗಳ ಮಟ್ಟದಲ್ಲೇ ಉಳಿದಿವೆ ಅನ್ನುವುದು ಸಾಬೀತಾಗುತ್ತಿದೆ. ಇಂತಹ ಆಯುಧಗಳನ್ನು ಆಮದು ಮಾಡಿಕೊಳ್ಳುವ ದೇಶಗಳೂ ಶಸ್ತ್ರಾಸ್ತ್ರಗಳ ವಿಷಯದಲ್ಲಿ ಸ್ವಾವಲಂಬಿಯಾಗುವುದರತ್ತ ಗಮನಹರಿಸುವುದು ಈಗಿನ ತುರ್ತು ಅಂದರೆ ತಪ್ಪಾಗದು.

ಪಶ್ಚಿಮದ ಯಜಮಾನಿಕೆಯನ್ನು ಮೆಟ್ಟಿ ತನ್ನದೇ ಆದ ಪ್ರಭಾವಲಯ ಸೃಷ್ಟಿಸಿಕೊಳ್ಳಬೇಕು ಅನ್ನುವ ಆತುರದಲ್ಲಿರುವ ಚೀನಾ ಈಗ ರಷ್ಯಾದ ಅಚ್ಚುಮೆಚ್ಚಿನ ಮಿತ್ರರಾಷ್ಟ್ರವಾಗಿದೆ. ಅಮೆರಿಕ ಮತ್ತು ಪಶ್ಚಿಮದ ದೇಶಗಳು ವಿಧಿಸಿರುವ ಆರ್ಥಿಕ ನಿರ್ಬಂಧಗಳಿಂದ ತತ್ತರಿಸಿರುವ ರಷ್ಯಾಗೆ ಈಗ ಚೀನಾ ಆಸರೆಯಾಗಿದೆ. ಈ ಸಂದರ್ಭವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಹೊರಟ ಚೀನಾವು ರಷ್ಯಾದ ಪರವಾಗಿ ನಿಂತಿದ್ದರೂ ಪಶ್ಚಿಮದೊಂದಿಗೆ ಗಾಢವಾದ ವ್ಯಾಪಾರ ಸಂಬಂಧ ಹೊಂದಿರುವ ಚೀನಾಗೆ ಯುದ್ಧ ಮುಂದುವರಿದಷ್ಟೂ ರಷ್ಯಾದ ಜೊತೆಗಿನ ಗೆಳೆತನ ದುಬಾರಿಯಾಗಬಹುದು ಅನ್ನುವ ಆತಂಕ ತೋರುತ್ತಿದೆ. ಆರ್ಥಿಕ ನಿರ್ಬಂಧಗಳು ರಷ್ಯಾಗೆ ನೀಡುತ್ತಿರುವ ಹೊಡೆತ ನೋಡಿದ ಚೀನಾವು ತೈವಾನ್ ಮೇಲೆ ದಂಡೆತ್ತಿ ಹೋಗುವ ತನ್ನ ನಿರ್ಧಾರದಿಂದ ತಕ್ಷಣಕ್ಕಂತೂ ಹಿಂದೆ ಸರಿಯುತ್ತದೆ ಎಂದು ಊಹಿಸಬಹುದು.

ಆಪತ್ಕಾಲದಲ್ಲಿ ಭಾರತದೊಂದಿಗೆ ನಿಂತ ಗೆಳೆಯನೆಂದು, ಭಾರತದ ಮಿಲಿಟರಿ ಅಗತ್ಯಗಳನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ದೇಶವೆಂದು ಭಾರತವು ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಮತ ಚಲಾಯಿಸದೇ ಹೊರಗುಳಿದಿದೆ. ಅಮೆರಿಕ- ರಷ್ಯಾದ ಈ ಸಂಘರ್ಷದಲ್ಲಿ ಸುಮ್ಮನೆ ಸಿಲುಕಿಕೊಳ್ಳುವ ಅಗತ್ಯವಿಲ್ಲ ಅನ್ನುವ ಕಾರಣಕ್ಕೆ ಇದು ಸರಿಯಾದ ನಿರ್ಧಾರ ಎಂದುಕೊಂಡರೂ ಈ ಹೊತ್ತಿನಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಉಕ್ರೇನಿನ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಕೆಲ ಮಾತುಗಳನ್ನಾದರೂ ಭಾರತ ಆಡಬೇಕಿತ್ತು ಅನ್ನುವ ಮಾತಿನಲ್ಲಿ ಸತ್ಯವಿದೆ. ಅಲಿಪ್ತ ನೀತಿಗೆ ಒಂದು ಗಟ್ಟಿಯಾದ ನೈತಿಕ ಆಯಾಮವೂ ಇತ್ತು ಅನ್ನುವುದನ್ನು ಮರೆಯಬಾರದು. ರಷ್ಯಾದ ಜೊತೆಗಿನ ನಮ್ಮ ಸ್ನೇಹದ ಇತಿಹಾಸ ಏನೇ ಇದ್ದರೂ ಇಂದು ಅದು ಬಲಹೀನವಾಗಿ ಚೀನಾದ ತೆಕ್ಕೆಗೆ ಜಾರುತ್ತಿರುವ ವೇಗವನ್ನು ನೋಡಿದರೆ, ನಾಳೆ ಚೀನಾದ ಜೊತೆ ಭಾರತಕ್ಕೆ ಯಾವುದೇ ಮಿಲಿಟರಿ ಸಂಘರ್ಷ ಏರ್ಪಟ್ಟಲ್ಲಿ ರಷ್ಯಾ ನಮ್ಮ ನೆರವಿಗೆ ಎಷ್ಟರ ಮಟ್ಟಿಗೆ ಬರಬಹುದು ಅನ್ನುವ ಆತಂಕ ಭಾರತದ ಅನೇಕ ವಿದೇಶಾಂಗ ನೀತಿಯ ವಿಶ್ಲೇಷಕರಲ್ಲಿದೆ.

ಇದು ಕ್ಯಾಪಿಟಲಿಸಂ ಕಾಲ. ಮುಕ್ತ ಮಾರುಕಟ್ಟೆಯ ಪರಿಕಲ್ಪನೆಯಲ್ಲಿ ಸರ್ಕಾರಗಳಿಗೆ ಹೆಚ್ಚು ಪಾತ್ರವಿಲ್ಲ ಅನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ರಷ್ಯಾದ ವಿರುದ್ಧ ಪಶ್ಚಿಮದ ದೇಶಗಳು ನಿರ್ಬಂಧ ವಿಧಿಸಿದ ಮೂರ್ನಾಲ್ಕು ದಿನಗಳಲ್ಲೇ ರಷ್ಯಾದಲ್ಲಿ ವ್ಯಾಪಾರ ಮಾಡುತ್ತಿದ್ದ ಪಶ್ಚಿಮದ ದೇಶಗಳ ಇನ್ನೂರಕ್ಕೂ ಹೆಚ್ಚು ಕಂಪನಿಗಳು ರಾತ್ರೋರಾತ್ರಿ ರಷ್ಯಾ ತೊರೆದಿದ್ದನ್ನು ನೋಡಿದಾಗ ಮುಕ್ತ ಮಾರುಕಟ್ಟೆ, ಸರ್ಕಾರಗಳ ನಿಯಂತ್ರಣವಿಲ್ಲ ಅನ್ನುವುದೆಲ್ಲ ಸುಳ್ಳು, ಸಂದರ್ಭ ಬಂದರೆ ಬಹುರಾಷ್ಟ್ರೀಯ ಸಂಸ್ಥೆಗಳು ತಮ್ಮ ಸರ್ಕಾರಗಳ ಆಣತಿಯಂತೆ ನಡೆದುಕೊಳ್ಳುತ್ತವೆ ಎಂದು ಸಾಬೀತಾಗುತ್ತಿದೆ. ಹೊರಗಡೆಯ ಬಂಡವಾಳವನ್ನು ಸೆಳೆಯುವುದೇ ದೇಶವನ್ನು ಮುನ್ನಡೆಸುವ ದಾರಿ ಎಂದು ನಂಬಿರುವ ನಮ್ಮ ರಾಜಕಾರಣಿಗಳು ಒಮ್ಮೆ ಈ ಬೆಳವಣಿಗೆಯನ್ನು ಸರಿಯಾಗಿ ಗಮನಿಸಬೇಕಿದೆ.

ಈ ಯುದ್ಧದ ಇನ್ನೊಂದು ಆಯಾಮವೆಂದರೆ, ಇದು ಸೋಷಿಯಲ್ ಮೀಡಿಯಾದ ಕಾಲದಲ್ಲಿ ನಡೆಯುತ್ತಿರುವ ಮೊದಲ ದೊಡ್ಡ ಸಂಘರ್ಷ. ಹೀಗಾಗಿ ಮಿಲಿಟರಿ ಕಾರ್ಯಾಚರಣೆಯಷ್ಟೇ ಪ್ರಾಮುಖ್ಯತೆ ಸೋಷಿಯಲ್ ಮೀಡಿಯಾದ ಮೂಲಕ ಸುಳ್ಳು ಸುದ್ದಿ, ಪ್ರಚಾರಾಂದೋಲನಕ್ಕೂ ಬಂದಿದೆ. ತನ್ನ ಜನರನ್ನು ಯುದ್ಧಕ್ಕೆ ಒಪ್ಪಿಸಲು ಇದನ್ನು ರಷ್ಯಾ ಬಳಸಿದಷ್ಟೇ ಚೆನ್ನಾಗಿ ರಷ್ಯನ್ ಯುದ್ಧಾಪರಾಧವನ್ನು ಜಗತ್ತಿನ ಮುಂದಿಡಲು ಉಕ್ರೇನ್ ಕೂಡಬಳಸಿಕೊಳ್ಳುತ್ತಿದೆ.

ಪಾಶ್ಚಾತ್ಯ ದೇಶಗಳು ಮತ್ತು ರಷ್ಯಾದ ನಡುವಿನ ಈ ತಿಕ್ಕಾಟ ಹೇಗೆ ಕೊನೆಯಾಗಬಹುದು ಅನ್ನುವುದನ್ನು ಯಾರೂ ಊಹಿಸಲಾರರು. ಆದರೆ ಹರಕೆಯ ಕುರಿಯಂತೆ ಬಲಿಯಾದದ್ದು ಮಾತ್ರ ಉಕ್ರೇನ್ ಮತ್ತು ಅದರ ಸಾಮಾನ್ಯ ಜನರು. ಕೊನೆಗೆ ಎಲ್ಲ ಯುದ್ಧಗಳ ಕತೆಯೂ ಇದೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT