ಮಂಗಳವಾರ, ಅಕ್ಟೋಬರ್ 26, 2021
20 °C
ಕರ್ನಾಟಕದಲ್ಲಿ ಮತಾಂತರ ತಡೆ ಕಾಯ್ದೆಯ ಅಗತ್ಯ ಇದೆಯೇ?

ಎಸ್‌.ಜಿ ಸಿದ್ದರಾಮಯ್ಯ ಲೇಖನ| ಮತಾಂತರವು ಬಿಡುಗಡೆಯ ದಾರಿಯಲ್ಲವೇ?

ಎಸ್‌. ಜಿ. ಸಿದ್ಧರಾಮಯ್ಯ Updated:

ಅಕ್ಷರ ಗಾತ್ರ : | |

ವಿಚಾರ ಮಾಡಲೊಲ್ಲದವನು ಮತಾಂಧ

ವಿಚಾರ ಮಾಡಲರಿಯದವನು ಮೂರ್ಖ

ವಿಚಾರ ಮಾಡಲಂಜುವವನು ಗುಲಾಮ

ತತ್ವಜ್ಞಾನಿ ಎಚ್‌. ಡ್ರಮಂಡ್‌ ಅವರ ಈ ಮಾತು ಸಾರ್ವಕಾಲಿಕ ಸತ್ಯ. ಎಲ್ಲಿ ಸ್ವತಂತ್ರವಾದ ವಿಚಾರಶೀಲತೆ ಇರುವುದಿಲ್ಲವೋ ಅಲ್ಲಿ ಈ ರೀತಿಯ ಮೂರು ವರ್ಗದ ಜನರಿಂದ ಸಾಮಾಜಿಕ ವಾತಾವರಣ ಹಾಳಾಗಿರುತ್ತದೆ. ಇವರ ಬಲ ಅಧಿಕವಾಗಿರುವಾಗ ಅದೇ ಆಳುವವರಿಗೆ ನಿರ್ದೇಶನ ನೀಡುವ ಸೂತ್ರವಾಗಿರುತ್ತದೆ. ರಾಜ ಮಹಾರಾಜರುಗಳ ಕಾಲದಲ್ಲಿ ಆದದ್ದೂ ಇದೇ. ಆದರೆ ಇದು ಪ್ರಜಾಪ್ರಭುತ್ವದ ಕಾಲ. ಪ್ರಶ್ನೆ ಮಾಡದೇ ಯಾವುದನ್ನೂ ಒಪ್ಪಿಕೊಳ್ಳದಿರುವ ಕಾಲ. ರಾಷ್ಟ್ರಕ್ಕೆ ಸಂವಿಧಾನವೇ ಬದುಕಿನ ಧರ್ಮ. ಇಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಕೇವಲ ಹಕ್ಕಾಗಿ ಅಲ್ಲ, ಬಾಧ್ಯತೆಯ ಕರ್ತವ್ಯವಾಗಿ ನೀಡಲಾಗಿದೆ. ಹಕ್ಕು ಮತ್ತು ಕರ್ತವ್ಯಗಳು ಸ್ವಾತಂತ್ರ್ಯವೆಂಬ ಒಂದು ನಾಣ್ಯದ ಎರಡು ಮುಖಗಳು; ಅವು ಪರಸ್ಪರ ಪೂರಕವಾಗಿ ಇರುವಂಥವು. 

ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬರೆ ಎಳೆಯುವ ರೀತಿಯಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿದೆ. ಆ ಮುನ್ನ ಸರ್ಕಾರ ಈ ದೇಶದ ಚಾರಿತ್ರಿಕ ಸತ್ಯಗಳನ್ನು ಅವಲೋಕಿಸುತ್ತಾ ವರ್ತಮಾನದ ಉರಿಯುವ ಸಂಗತಿಗಳಿಗೆ ಆತ್ಮಾವಲೋಕನ ಮಾಡಿಕೊಂಡು ಉತ್ತರ ಕೊಟ್ಟುಕೊಳ್ಳಬೇಕಾಗಿದೆ.

‘ಭಾರತದ ಹಿಂದೂ ಧರ್ಮವು ಮೂಲಭೂತವಾಗಿ ಪುರಾತನವಾದದ್ದು. ಕಾಲ ಮತ್ತು ನಾಗರಿಕತೆಯಲ್ಲಿ ಪ್ರಗತಿಯಾಗಿದ್ದೂ ಅದರ ಪ್ರಾಚೀನ ನಿಯಮಗಳು ತಮ್ಮೆಲ್ಲ ಆದಿಮ ಸ್ಥಿತಿಯ ಕ್ರೌರ್ಯದಲ್ಲಿ ಇಂದಿಗೂ ಜಾರಿಯಲ್ಲಿವೆ’ ಎಂದು ಅಂಬೇಡ್ಕರ್‌ ಅವರೇ ಭಾರತದ ಜಾತಿವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯ ಹಿಂದೂ ಧರ್ಮದಲ್ಲಿ ದಲಿತರನ್ನು, ತಳಸಮುದಾಯಗಳನ್ನು, ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿ ಈಗಲೂ ತೀರ ಅಮಾನವೀಯವಾಗಿದೆ. ದೇವಾಲಯಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಹಳ್ಳಿಗಳ ಕಡೆ ಈಗಲೂ ದಲಿತರಿಗೆ ಕೆರೆಬಾವಿಗಳ ನೀರನ್ನು ಮುಟ್ಟಲೂ ಬಿಡುತ್ತಿಲ್ಲ. ಹೋಟೆಲ್‌ಗಳಲ್ಲಿ ತಟ್ಟೆ ಲೋಟಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ದಲಿತರಿಗೆ ಕ್ಷೌರ ಮಾಡದಿರುವ ಸ್ಥಿತಿಯಿದೆ. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಲಿತರ ಮೇಲಿನ ದಬ್ಬಾಳಿಕೆ, ಕ್ರೌರ್ಯಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿವೆ. ಹೀಗಿದ್ದೂ ನಾವು ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ‘ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಧರ್ಮ, ಸಹನಾವವತು ಸಹನೌಭುನಕ್ತು, ಹಿಂದೂ ಎಂದೆಂದೂ ಒಂದು’– ಈ ಇತ್ಯಾದಿ ತಾತ್ವಿಕ ಆದರ್ಶಗಳ ಪ್ರತಿಪಾದನೆಯನ್ನು ಮಾಡುತ್ತೇವೆ. ಇದನ್ನು ಕೇಳಿದಾಗ ‘ತನ್ನೊಳಗೆ ಭವ್ಯತೆಯೇ ಇರದ ಭವ್ಯವಾದ ಹೆಸರು’ ಎಂದ ಮ್ಯಾಥ್ಯೂ ಅರ್ನಾಲ್ಡ್‌ ಅವರ ಮಾತು ನೆನಪಾಗುತ್ತದೆ. ಹಿಂದೂ ಧರ್ಮ ಅಸಮಾನತೆಯ ಆಗರವಾಗಿದೆ. ಮೇಲು ಕೀಳಿನ ಶ್ರೇಷ್ಠ–ಕನಿಷ್ಠದ ತಾರತಮ್ಯದ ಬೀಡಾಗಿದೆ. ಈ ಕಾರಣದಿಂದಲೂ ಹಿಂದೂ ಧರ್ಮದ ವಿರುದ್ಧವಾಗಿ ಈ ದೇಶದಲ್ಲಿ ಹಲವು ಪರ್ಯಾಯ ಧರ್ಮಗಳು ಹುಟ್ಟಿವೆ. ಭಗವಾನ್‌ ಬುದ್ಧ, ಮಹಾವೀರ, ಬಸವಣ್ಣ, ಗುರುನಾನಕ್‌ ಇವರು ಸಮಾನತೆಯ ಆಶಯದೊಂದಿಗೆ ಪರ್ಯಾಯ ಧರ್ಮಗಳ ಹುಟ್ಟು, ಬೆಳವಣಿಗೆಗೆ ಕಾರಣರಾಗಿದ್ದಾರೆ. ಇಂಥ ಪರ್ಯಾಯ ಧರ್ಮಗಳಿಗೆ ಕೋಟ್ಯಂತರ ಹಿಂದೂಗಳು ಮತಾಂತರ ಹೊಂದಿದ್ದು ಚಾರಿತ್ರಿಕ ಸತ್ಯ.

ಬಸವಣ್ಣನವರು ತಾವು ಹುಟ್ಟಿದ ಧರ್ಮ ಮೂಲವನ್ನು ಕುರಿತು ‘ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟದ ಹೊರೆಯ ಹೊರಿಸದಿರಯ್ಯ’ ಎಂದು ಆತ್ಮಾವಲೋಕನ ಮಾಡಿಕೊಂಡರು. ಕರ್ಮಲತೆಯಂತಿದ್ದ ಜನಿವಾರವನ್ನು ಕಿತ್ತು ಬಿಸುಟು ಹೊರಬಂದರು. ಅಸ್ಪೃಶ್ಯತೆ ಮೂಲದಲ್ಲಿ ತಮ್ಮ ಹುಟ್ಟನ್ನು ಅಪವರ್ಣೀಕರಣದ ಮೂಲಕ ಪವಿತ್ರೀಕರಿಸಿಕೊಂಡರು. ಇವರ ಪ್ರಭಾವಕ್ಕೆ ಒಳಗಾದಂತೆ ನೀಚರೆನಿಸಿಕೊಂಡಿದ್ದ ಹಲವು ಜಾತಿಗಳ ಮೂಲದ ಜನರು ಲಿಂಗಾಯತರಾದರು. ಹೀಗೆ ಬಸವಣ್ಣನಿಂದ ಲಿಂಗ ದೀಕ್ಷೆ ಪಡೆದ ಅಸ್ಪೃಶ್ಯ ಡೋಹರ ಕಕ್ಕಯ್ಯನ ಮಾತುಗಳು ಇಲ್ಲಿ ಮನನೀಯವಾಗಿವೆ:

ಎನ್ನ ಕಷ್ಟಕುಲದಲ್ಲಿ ಹುಟ್ಟಿದೆನೆಂಬ
ಕರ್ಮವ ಕಳೆದು

ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ

ಆ ಲಿಂಗ ಬಂದು ಸೋಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ

ಎಂದು ನರಕದಿಂದ ಬಿಡುಗಡೆ ಹೊಂದಿದ ಭಾವದಲ್ಲಿ ಧನ್ಯತೆಯ ಮಾತನಾಡಿದ್ದಾನೆ. ಹೀಗೆ ಸನಾತನ ಕರ್ಮಸಿದ್ಧಾಂತದ ಕೂಪದಿಂದ ಬಿಡುಗಡೆ ಹೊಂದಿ ಪರ್ಯಾಯ ಧರ್ಮಗಳ ಕಡೆ ಮತಾಂತರ ಹೊಂದಿದವರ ದೊಡ್ಡ ಚರಿತ್ರೆಯೇ ಈ ದೇಶದ ಚರಿತ್ರೆಯಾಗಿದೆ.

ಮತಾಂತರದ ಬಗ್ಗೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಎಸ್‌.ಎನ್‌. ಗೋಯೆಂಕಾ ಅವರು ಹೇಳಿರುವ ಮಾತುಗಳು ಇಲ್ಲಿ ಉಲ್ಲೇಖನೀಯ: ‘ಧರ್ಮ ಎನ್ನುವುದು ಧರ್ಮವಾಗುವುದು ಯಾವಾಗೆಂದರೆ ಅದು ಎಲ್ಲರನ್ನೂ ಒಳಗೊಂಡಾಗ. ಧರ್ಮ ಎನ್ನುವುದು ಅಧರ್ಮವಾಗುವುದು ಯಾವಾಗೆಂದರೆ ಅದು ಭೇದಭಾವದಲ್ಲಿ ಒಡೆದಾಳಿದಾಗ. ಮತಾಂತರವೆಂಬುದು ಒಂದು ಸಂಘಟನೆಯಿಂದ ಮತ್ತೊಂದು ಸಂಘಟನೆಗೆ ಬಲಿಹೋಗುವುದಲ್ಲ. ನೋವಿನ ಯಾತನೆಯಿಂದ ಸುಖದ ಸಂತೋಷದ ಕಡೆಗೆ ಚಲಿಸುವುದು. ಅವಮಾನದ ಬಂಧನದಿಂದ ಗೌರವದ ಬಿಡುಗಡೆಯ ಕಡೆಗೆ  ಪಯಣಿಸುವುದು. ಕ್ರೌರ್ಯದ ನರಕದಿಂದ ಸಮಾನತೆಯ ಸ್ವರ್ಗದ ಕಡೆಗೆ ನಡೆಯುವುದು.   ಇಂಥ ಮತಾಂತರ ಇಂದಿನ ಅಗತ್ಯವಾಗಿದೆ. ನಾನು ಮತಾಂತರದ ಪರವಾಗಿ ಇದ್ದೇನೆ; ಮತಾಂತರದ ವಿರೋಧಿಯಾಗಿ ಅಲ್ಲ’.

ಈ ಎಲ್ಲ ಕಾರಣಗಳಿಂದ ಮತಾಂತರ ವೆಂಬುದು ಜಾತಿವ್ಯವಸ್ಥೆಯ ಅವಮಾನ, ಹಿಂಸೆ, ಕ್ರೌರ್ಯ, ದಬ್ಬಾಳಿಕೆಗಳಲ್ಲಿ ನರಳುತ್ತಿರುವ ಸಮುದಾಯಗಳ ಜನರಿಗೆ ಸಂವಿಧಾನದತ್ತ ಹಕ್ಕು. ಆದ್ದರಿಂದಲೇ ತಮ್ಮ ಬಾಳ ಕೊನೆ ದಿನಗಳಲ್ಲಿ ಅಂಬೇಡ್ಕರ್‌ ಅವರು ‘ನಾನು ಹಿಂದೂವಾಗಿ ಸಾಯಲಾರೆ’ ಎಂದು ಬೌದ್ಧಧರ್ಮ ಸ್ವೀಕರಿಸಿದರು.
ಅವರನ್ನು ಅನುಸರಿಸಿದಂತೆ ಲಕ್ಷಾಂತರ ಜನ ಬೌದ್ಧಧರ್ಮಕ್ಕೆ ಮತಾಂತರವಾದರು.

ಡಾ. ಬಿ. ಆರ್‌. ಅಂಬೇಡ್ಕರ್‌ ಹಾಗೂ ಎಸ್‌. ಎನ್‌. ಗೋಯೆಂಕಾ ಅಂಥ ಮೇಧಾವಿಗಳು ಮತಾಂತರದ ಪರವಾಗಿ ಮಾತನಾಡುವುದರ ಹಿಂದೆ ದೇಶದ ಅವಮಾನಿತರ ನೋವಿನ ಚರಿತ್ರೆಯೇ ಇದೆ. ಸರ್ಕಾರ ಕಾನೂನು ಕಟ್ಟಳೆಗಳ ರಕ್ಷಣೆಯನ್ನು ಬಳಸಿ ಹಿಂದೂ ಧರ್ಮದ ತಾರತಮ್ಯ ನೀತಿಯನ್ನು ಬದಲಿಸಲು ಸಾಧ್ಯವಾಗಿದೆಯೇ? ಹೋಗಲಿ ಶಿಕ್ಷಣದ ಮುಖೇನವಾದರೂ ಈ ಜಾತಿ ನರಕದಿಂದ ಸಮಾಜವನ್ನು ಮುಕ್ತಗೊಳಿಸಲು ಸಾಧ್ಯವಾಗಿದೆಯೇ? ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆಯಿಂದ ನೊಂದವರ ಹಕ್ಕುಗಳನ್ನು ಕಸಿದುಕೊಂಡಂತಾಗುವುದಿಲ್ಲವೇ? ಸರ್ಕಾರ ಆತ್ಮಾವಲೋಕನದಲ್ಲಿ ಉತ್ತರ ಕಂಡುಕೊಳ್ಳಲಿ. ಮತಾಂತರ ಕಾಯ್ದೆ ಎಂಬುದು ಅಂತರ ಜಾತೀಯ ವಿವಾಹಗಳಿಗೆ ಮಾರಕವಲ್ಲವೇ? ಜಾತಿ–ಧರ್ಮಗಳ ನಡುವಿನ ವೈಷಮ್ಯಗಳು ಕಡಿಮೆಯಾಗಲು ತರತಮಗಳು ನಿವಾರಣೆಯಾಗಲು ಅಂತರ ಜಾತೀಯ ಅಂತರ ಧರ್ಮೀಯ ವಿವಾಹಗಳು ಅನಿವಾರ್ಯವಲ್ಲವೇ? ಮೂಲಭೂತವಾದಿಗಳ ಮನಸ್ಸು ಪರಿವರ್ತನೆಯಾಗದೇ ಯಾವ ಕಾನೂನು ಏನೂ ಮಾಡಲಾಗದು. ಕಾನೂನುಗಳು ದುರ್ಬಳಕೆಗೆ ಬಲಿಹೋಗುವುದು ನಡೆದೇ ಇದೆ.

ಲೇಖಕ: ಚಿಂತಕ, ಸಾಹಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು