ಮಂಗಳವಾರ, ಜನವರಿ 19, 2021
21 °C
‘ದುರಂತಗಳ ವರ್ಷ’ದಲ್ಲಿ ಸದ್ದಿಲ್ಲದೆ ಕೆಲಸ ಮಾಡಿದವರೇ ನಿಜವಾದ ಸ್ಫೂರ್ತಿ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಲೇಖನ: ತೆರೆಮರೆ ಹೀರೊಗಳಿಗೆ ಪ್ರಣಾಮ

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ವರ್ಷದ ವ್ಯಕ್ತಿಯನ್ನು ಹೆಸರಿಸುವುದು ಪ್ರತೀ ವರ್ಷದ ರೂಢಿ. ಆದರೆ, ಇತ್ತೀಚೆಗಷ್ಟೇ ಪೂರ್ಣಗೊಂಡ ವರ್ಷವು ಒಂದು ವ್ಯಕ್ತಿಗೆ (ಹೀರೊ ಅಥವಾ ಹೀರೊಯಿನ್‌) ಸೀಮಿತವಾದದ್ದಲ್ಲ. ಕೆಲವು ಮಾಧ್ಯಮ ಸಂಸ್ಥೆಗಳು ವರ್ಷದ ವ್ಯಕ್ತಿಗಳನ್ನು ಗುರುತಿಸಿ, ಅದನ್ನು ಜನರ ಮೇಲೆ ಹೇರುವ ಕೆಲಸವನ್ನು ಒಂದು ಪದ್ಧತಿಯ ರೀತಿಯಲ್ಲಿ ಮಾಡುತ್ತವೆ. ಆದರೆ, 2020 ದೊಡ್ಡ ಸಾಧಕರು ಅಥವಾ ಪ್ರಭಾವ ಬೀರಿದವರು ಮತ್ತು ಪ್ರಖ್ಯಾತರನ್ನು ಗುರುತಿಸುವಂತಹ ವರ್ಷ ಆಗಿರಲಿಲ್ಲ. ಸಮಾಜವನ್ನು ಪರಿವರ್ತಿಸಿದ ರಾಜಕಾರಣಿ, ಮತ್ತಷ್ಟು ಶ್ರೀಮಂತರಾದ ಉದ್ಯಮಿಗಳು, ನಮ್ಮ ಬದುಕಿನ ರೀತಿಯನ್ನೇ ಬದಲಾಯಿಸಿದ ತಂತ್ರಜ್ಞಾನ ಉದ್ಯಮಿ, ಸಾಧನೆಯ ಮೂಲಕ ನಮ್ಮೆಲ್ಲರಲ್ಲಿಯೂ
ಸ್ಫೂರ್ತಿ ತುಂಬಿದ ಕ್ರೀಡಾಪಟು, ಪ್ರತಿಭಟನೆಗೆ ನೇತೃತ್ವ ಕೊಟ್ಟ ಸಾಮಾಜಿಕ ಕಾರ್ಯಕರ್ತ, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ ನಟ– ಈ ಯಾರೂ ಶ್ಲಾಘನೆಗೆ ಅರ್ಹರಾಗಲಿಲ್ಲ; ದುರಂತಗಳ ವರ್ಷವೆಂದೇ ಹಲವರು ಬಣ್ಣಿಸಿದ 2020ರಲ್ಲಿ ಈ ಯಾರಿಗೂ ನಿಜವಾದ ಮಹತ್ವ ಇರಲೇ ಇಲ್ಲ. 

ಜಾಗತಿಕ ಮಟ್ಟದಲ್ಲಿ ಎರಡು ಹೆಸರು ಮನಸ್ಸಿಗೆ ಬರುತ್ತವೆ. ಅವರೇ ವಿಜ್ಞಾನಿ ದಂಪತಿಯಾದ ಡಾ. ಊರ್‌ ಶಾಹಿನ್‌ ಮತ್ತು ಅವರ ಹೆಂಡತಿ ಡಾ. ಓಸ್ಲೆಂ ಟ್ಯುರೆಸಿ. ಜರ್ಮನಿಗೆ ವಲಸೆ ಹೋದ ಟರ್ಕಿ ಮುಸ್ಲಿಮರಿಗೆ ಜನಿಸಿರುವ ಇವರು ಕೋವಿಡ್‌ಗೆ ಲಸಿಕೆ ಅಭಿವೃದ್ಧಿಪಡಿಸಲು ಎಲ್ಲರಿಗಿಂತ ಮೊದಲೇ ಮುಂದಾದ ಬಯೊಎನ್‌ಟೆಕ್‌ ಮತ್ತು ಫೈಝರ್‌ ಲ್ಯಾಬೊರೇಟರೀಸ್‌ನ ವಿಜ್ಞಾನಿಗಳ ತಂಡದ ಜತೆಗೆ ಸದ್ದಿಲ್ಲದೆ ಕೆಲಸ ಮಾಡಿದ್ದಾರೆ. ಅಮೆರಿಕ ಮತ್ತು ಇತರ ಕೆಲವು ದೇಶಗಳು ಈ ಲಸಿಕೆಗೆ ಅನುಮೋದನೆ ನೀಡಿವೆ. ಸಿದ್ಧಾಂತ, ಜನಾಂಗ, ಬಣ್ಣ, ಧರ್ಮಾಂಧತೆ, ವಿಭಜನೆ, ಹಿಂಸೆ ಮತ್ತು ಹತ್ಯೆಗಳೆಲ್ಲವನ್ನೂ ಮೀರಿ ಜನರನ್ನು ಒಟ್ಟಾಗಿ ಇರಿಸಲು ಮತ್ತು ಮಾನವಕುಲವನ್ನು ಉಳಿಸಲು ವಿಜ್ಞಾನ ಮತ್ತು ಪ್ರೀತಿಗೆ ಸಾಧ್ಯ ಎಂಬುದಕ್ಕೆ ಎಂತಹ ಶ್ರೇಷ್ಠವಾದ ನಿದರ್ಶನ ಇದು. ಮಾನವ ಕುಲವನ್ನು ಉಳಿಸಬೇಕು ಎಂಬ ಏಕಾಗ್ರ ಶ್ರದ್ಧೆಯಿಂದ, ಯಾವ ಪ್ರಚಾರವನ್ನೂ ಬಯಸದೆ ನಿರಂತರವಾಗಿ ಕೆಲಸ ಮಾಡಿದ ಈ ಇಬ್ಬರು ಸಂಶೋಧಕರಿಗಿಂತ ಮಾದರಿಯಾಗಿ ಇರಿಸಬಹುದಾದ ಬೇರೊಬ್ಬರು ಇರಲು ಸಾಧ್ಯವಿಲ್ಲ. 

ಭಾರತದಲ್ಲಿ ಕಳೆದ ವರ್ಷದ ನಿಜವಾದ ಹೀರೊಗಳೆಂದರೆ ಬೇರು ಕಳಚಿಕೊಂಡು ಬಂದು ನಗರಗಳಲ್ಲಿ ನೆಲೆಯಾದ ಧ್ವನಿಯೇ ಇಲ್ಲದ ವಲಸಿಗರು; ಸಣ್ಣ ಅಂಗಡಿಗಳನ್ನು ನಡೆಸುತ್ತಿರುವ ಅಸಂಖ್ಯ ಜನರು, ರಸ್ತೆ ಬದಿಯಲ್ಲಿ ವಿವಿಧ ವಸ್ತು ಮತ್ತು ಸೇವೆಗಳನ್ನು ಕೊಟ್ಟವರು, ಬಡಗಿಗಳು, ಮೇಸ್ತ್ರಿಗಳು, ಎಲೆಕ್ಟ್ರೀಷಿಯನ್‌ಗಳು, ಮೆಕ್ಯಾನಿಕ್‌ಗಳು, ಅಡುಗೆಯವರು, ಭದ್ರತಾ ಸಿಬ್ಬಂದಿ, ಟ್ಯಾಕ್ಸಿ ಚಾಲಕರು, ಸಲೂನ್‌ ಮತ್ತು ಸ್ಪಾಗಳನ್ನು ನಡೆಸುವವರು, ಹಣ್ಣು–ತರಕಾರಿ–ಹೂ ಮಾರುವವರು, ತಳ್ಳು ಗಾಡಿಯಲ್ಲಿ ಚಹಾ ಕೊಟ್ಟವರು– ಹೀಗೆ, ಇಂತಹ ಅಸಂಖ್ಯ ಜನರು ನಗರ ನಿವಾಸಿಗಳಿಗೆ ಯಾವುದೇ ಕೊರತೆ ಆಗದಂತೆ ಪೊರೆದರು. ಇವರ ಜತೆಗೆ, ಮಾಸ್ಕ್‌ನಿಂದ ಮುಖ ಮುಚ್ಚಿಕೊಂಡು ಮುಖವೇ ಇಲ್ಲದೆ ಆರೋಗ್ಯ ಸೇವೆ ಒದಗಿಸಿದ ಲಕ್ಷಾಂತರ ಆರೋಗ್ಯ ಕಾರ್ಯಕರ್ತರನ್ನು ಮರೆಯಲು ಸಾಧ್ಯವೇ? ಸ್ವಚ್ಛತಾ ಕಾರ್ಮಿಕರಿಂದ ಹಿಡಿದು ನರ್ಸ್‌ಗಳು ಮತ್ತು ವೈದ್ಯರವರೆಗೆ ಹಲವರು ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿ, ದಿಗಿಲುಗೊಳಿಸುವ ಸವಾಲುಗಳು ಮತ್ತು ಸಂಪನ್ಮೂಲಗಳ ತೀವ್ರ ಕೊರತೆಯ ನಡುವೆಯೂ ಕೆಲಸ ಮಾಡಿದ್ದಾರೆ. ಇವರೊಂದಿಗೆ, ಗಟ್ಟಿ ಜೀವದ, ಎಂದಿಗೂ ಎದೆಗುಂದದ, ದೊಡ್ಡ ಮನಸ್ಸಿನ, ಈಗ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮರೆಯುವುದು ಹೇಗೆ? ಅನಿಶ್ಚಿತ ಮುಂಗಾರು ಋತು ಮತ್ತು ಇತರ ಎಲ್ಲ ಪ್ರಕೃತಿ ವಿಕೋಪಗಳ ನಡುವೆಯೂ ಉತ್ತು ಬಿತ್ತಿ ನಮಗೆ ವರ್ಷವಿಡೀ ಧಾನ್ಯ, ಹಾಲು, ಮಾಂಸ, ಹಣ್ಣು ಮತ್ತು ತರಕಾರಿ, ನಮ್ಮ ದಿರಿಸಿಗಾಗಿ ಹತ್ತಿ ಮತ್ತು ರೇಷ್ಮೆಯನ್ನು ಅವರು ಪೂರೈಸಿದ್ದಾರೆ.


ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ಎಂದೂ ಕುಗ್ಗದೆ, ನೇಪಥ್ಯದಲ್ಲಿಯೇ ಉಳಿದು ಕೆಲಸ ಮಾಡುವ ಈ ಲಕ್ಷಾಂತರ ಮಂದಿಯೇ ನಮ್ಮ ಸಮಾಜದ ಅಡಿಪಾಯ. ಉದ್ಯೋಗ ಮತ್ತು ಅವಕಾಶಗಳನ್ನು ಅರಸಿ ದೊಡ್ಡ ಸಂಖ್ಯೆಯ ಜನರು ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಾರೆ. ಈ ವಲಸೆ ವಿದ್ಯಮಾನವು ವೈದ್ಯರು, ಎಂಜಿನಿಯರ್‌ಗಳು, ಇತರ ವೃತ್ತಿಪರರು ಮತ್ತು ಉದ್ಯಮಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗಕ್ಕೂ ಅನ್ವಯ. ನಮ್ಮದು ಸ್ಪಂದನಶೀಲ ಅರ್ಥವ್ಯವಸ್ಥೆ ಮತ್ತು ಬಹುಜನಾಂಗೀಯ ಹಾಗೂ ವೈವಿಧ್ಯಮಯ ಸಮಾಜ ಎಂಬುದರ ನಿಜವಾದ ದೃಢೀಕರಣವೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ದೇಶವ್ಯಾಪಿಯಾಗಿ ಸಾಗುವ ಈ ಜನರು. ಇವರೇ ನಮ್ಮ ದೇಶದ ನೈಜ ಸ್ಫೂರ್ತಿ ಮತ್ತು ಹೃದಯ ಮಿಡಿತ. ನಮ್ಮೆಲ್ಲ ಅವ್ಯವಸ್ಥೆ, ಗೊಂದಲ ಹಾಗೂ ಹುಚ್ಚು ಅಸ್ತವ್ಯಸ್ತತೆಯ ಆಳದಲ್ಲಿ ಚಲನಶೀಲವಾದ ಛಾಯಾ ಅರ್ಥವ್ಯವಸ್ಥೆಯೂ ಇದೆ. ಇದು ಪವಾಡಸದೃಶವಾಗಿ ಸದಾ ಝೇಂಕರಿಸುತ್ತಾ, ಮುನ್ನುಗ್ಗುತ್ತಾ ಇರುತ್ತದೆ. ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ ನಮ್ಮ ಬೇಸಾಯವು ವಲಸೆ ಕಾರ್ಮಿಕರ ಮೇಲೆ ಅವಲಂಬಿತ. ಈ ಎಲ್ಲವೂ ವ್ಯವಸ್ಥಿತ ಅರ್ಥವ್ಯವಸ್ಥೆಯ ಸ್ನಾಯು ಮತ್ತು ಬೆನ್ನೆಲುಬು. ಇವು ಇಲ್ಲದೇ ಇದ್ದರೆ ಗ್ರಾಮೀಣ ಮತ್ತು ನಗರದ ಅರ್ಥವ್ಯವಸ್ಥೆ ಕುಸಿದು ಬೀಳುತ್ತದೆ.

ಇವರೆಲ್ಲರೂ ನಮ್ಮ ತೆರೆಮರೆಯ ಹೀರೊಗಳು. ಹೊಸ ವರ್ಷದ ನೆಪದಲ್ಲಿ ಪೊಳ್ಳು ಸಂಭ್ರಮದ ಸಂದರ್ಭವಲ್ಲ ಇದು. ನಾವು ಮರೆತ, ನೇಪಥ್ಯದಲ್ಲಿಯೇ ಉಳಿಯುವ ಹೀರೊಗಳ ಬಗ್ಗೆ ಸಂಭ್ರಮಿಸಬೇಕಾದ, ಅವರನ್ನು ಹಾಡಿ ಹೊಗಳಬೇಕಾದ, ಪ್ರಣಾಮಗಳನ್ನು ಸಲ್ಲಿಸಬೇಕಾದ ಸಮಯ. ಕೋವಿಡ್‌–19ರಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು, ಪಿಡುಗಿನಿಂದಾಗಿ ಉದ್ಯೋಗ, ಜೀವನೋಪಾಯದ ತೊಂದರೆಗೆ ಒಳಗಾದವರು ಮತ್ತು ಹೇಗೋ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವವರನ್ನು ನೆನಪಿಸಿಕೊಳ್ಳಬೇಕಾದ ಸಂದರ್ಭ. ಸಂಗೀತ (ಶಾಸ್ತ್ರೀಯ, ಲಘು ಮತ್ತು ಜನಪದ), ಸಿನಿಮಾ, ಮನರಂಜನೆ, ಮಾಧ್ಯಮ ಉದ್ಯಮದಲ್ಲಿದ್ದ ಹಲವರಿಗೆ ಜೀವನೋಪಾಯ ನಷ್ಟವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ದ್ವಾರಕಾದಿಂದ ದಿಮಾಪುರದವರೆಗೆ, ಅತ್ಯಂತ ಧ್ರುವೀಕೃತವಾಗಿರುವ ಸಮಾಜವನ್ನು ಒಟ್ಟಾಗಿಸುವ ಮತ್ತು ಗಾಯವನ್ನು ಮಾಯಿಸುವ ಬಗ್ಗೆ, ದೇಶದಿಂದ ಪ್ರತ್ಯೇಕಿತರಾಗಿದ್ದೇವೆ ಎಂಬ ಭಾವಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ಈಗ ಯೋಚಿಸಬೇಕಿದೆ.

ಯುವಜನರು, ದಲಿತರು, ಅಲ್ಪಸಂಖ್ಯಾತರು, ಸಾಮಾಜಿಕ ಕಾರ್ಯಕರ್ತರು, ಎಡಪಂಥೀಯ ಒಲವಿನ ಚಿಂತಕರು, ಧೀರ ಪತ್ರಕರ್ತರು ಮತ್ತು ಪ್ರಾಧ್ಯಾಪಕರು ರಾಜಕೀಯ, ಧಾರ್ಮಿಕ ಮತ್ತು ಸೈದ್ಧಾಂತಿಕ ಭಿನ್ನತೆಗಳಿಂದಾಗಿ ‘ಸರ್ಕಾರಗಳ ದಮನಕಾರಿ’ ನಡೆಗಳನ್ನು ಖಂಡಿಸಿ ಸರ್ಕಾರಗಳ ಜತೆಗೆ ಆಗಾಗ ಸಂಘರ್ಷಕ್ಕೆ ಇಳಿಯುತ್ತಿದ್ದಾರೆ. ಭಿನ್ನಮತೀಯರ ಮೇಲೆ ದೇಶದ್ರೋಹದ ‍ಪ್ರಕರಣ ದಾಖಲಿಸಿ ಸರ್ಕಾರಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಇವರು ಆರೋಪಿಸುತ್ತಿದ್ದಾರೆ. ಹಲವು ಮಂದಿ ವಿಚಾರಣೆಯೇ ಇಲ್ಲದೆ ಸೆರೆಮನೆಯಲ್ಲಿದ್ದಾರೆ. ಕಾಶ್ಮೀರದ ಜನರು ಸಂತಸದಿಂದಿಲ್ಲ. ಅವರನ್ನು ಮನವೊಲಿಸಿ ಮುಖ್ಯವಾಹಿನಿಗೆ ತರುವ ಮೂಲಕ ನೆತ್ತರು ಹರಿಯುವುದನ್ನು ತಡೆದು, ಶಾಂತಿಗೆ ಮೇಲುಗೈ ಆಗುವಂತೆ ಮಾಡಬೇಕು. ನೆರೆಯ ಎರಡು ದೇಶಗಳು ನಮ್ಮ ಮೇಲೆ ಹಗೆ ಭಾವ ಹೊಂದಿವೆ; ಈ ದೇಶಗಳು ನಮ್ಮ ಆಂತರಿಕ ವಿಚಾರಗಳನ್ನು ಅದರಲ್ಲೂ ಮುಖ್ಯವಾಗಿ ಗಡಿ ರಾಜ್ಯಗಳ ಸ್ಥಿತಿಯನ್ನು ಗಮನಿಸುತ್ತಲೇ ಇವೆ. ನಮ್ಮ ಅಂತರರಾಷ್ಟ್ರೀಯ ಗಡಿಗಳು ಕಟ್ಟೆಚ್ಚರದಲ್ಲಿವೆ. ಇದು ಒಟ್ಟಾಗಬೇಕಾದ ಕಾಲ. ‘ಒಳಗಿಂದಲೇ ವಿಭಜಿತವಾದ ಮನೆಯು ಸ್ಥಿರವಾಗಿರಲು ಸಾಧ್ಯವಿಲ್ಲ’.

2021ರಲ್ಲಿ ಸಂತಸದ ದಿನಗಳು ಬರಲಿವೆ ಎಂಬ ವಿಶ್ವಾಸ ನಮ್ಮಲ್ಲಿರಬೇಕು– ಒಳ್ಳೆಯ ದಿನಗಳಿಂದಾಗಿ ಪ್ರವಾಸ, ಸ್ಪರ್ಶ, ಅಪ್ಪುಗೆ, ಚುಂಬನ, ಸೌಹಾರ್ದ, ಸಂತಸ, ನಗು ಮತ್ತು ಒಗ್ಗಟ್ಟು ಸಾಧ್ಯವಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ‘ಭರವಸೆ’ ಬೇಕು, ಇದುವೇ ಅರ್ಥವ್ಯವಸ್ಥೆಯ ಅಗೋಚರ ಶಕ್ತಿ; ಜೀವನದ ಪುಷ್ಟಿ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಎಲ್ಲರೂ ಒಗ್ಗಟ್ಟಾಗಿ ಇದ್ದರೆ ಮಾತ್ರ ಆ ಉದ್ಯೋಗಗಳು ಮತ್ತು ಉತ್ತಮ ದಿನಗಳು ಮರಳಿ ಬರಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು