ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ. ಸಂದೀಪ್ ಶಾಸ್ತ್ರಿ ಅವರ ಜನರಾಜಕಾರಣ: ಸಮೀಕ್ಷೆ ಮತ್ತು ರಾಜಕೀಯ ಗಾಳಿಯ ದಿಕ್ಕು

ರಾಷ್ಟ್ರ ರಾಜಕಾರಣಕ್ಕೆ ಮುಂದಿನ ದಿಕ್ಕು ತೋರಲಿರುವ ಫಲಿತಾಂಶ
Last Updated 8 ಮಾರ್ಚ್ 2022, 19:16 IST
ಅಕ್ಷರ ಗಾತ್ರ

ಬಿರುಸಿನ ಚುನಾವಣಾ ಪ್ರಚಾರಗಳ ನಂತರ, ಈ ತಿಂಗಳ 7ರ ಸಂಜೆ, ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ
ಗಳನ್ನು ಬಿತ್ತರಿಸುತ್ತಿದ್ದ ಟಿ.ವಿ. ಸುದ್ದಿವಾಹಿನಿಗಳ ಪರದೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಬಹುತೇಕ ಎಲ್ಲ ಸಮೀಕ್ಷೆ
ಗಳೂ ಒಂದೇ ನಮೂನೆ ಇರುವಂತಿದ್ದವು. ಆದರೆ ಅಧಿಕಾರ ಹಿಡಿಯಬಹುದಾದ ಪಕ್ಷ ಪಡೆಯಬಹುದೆಂದು ಬಿಂಬಿಸ
ಲಾದ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸಗಳಿದ್ದವು.

ಈ ಅಂದಾಜುಗಳಲ್ಲಿ ಮೂರು ಅಂಶಗಳು ಎದ್ದು ಕಾಣಿಸುವಂತಿದ್ದವು. ಮೊದಲನೆಯದು, ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿಯು ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಮಣಿಪುರದಲ್ಲೂ ಅದಕ್ಕೆ ಸ್ಥಿತಿ ಅನುಕೂಲಕರವಾಗಿದೆ. ಗೋವಾದಲ್ಲಿ ಪೈಪೋಟಿ ತೀವ್ರತರವಾಗಿರುವಂತಿದೆ. ಎರಡನೆಯದು, ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬರಲು ಸಜ್ಜಾದಂತಿದೆ. ಮೂರನೆಯದು, ಚುನಾವಣೆ ನಡೆದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್‌ಗೆ ಭಾರಿ ಸವಾಲುಗಳಿದ್ದವು.

ಮತದಾನೋತ್ತರ ಸಮೀಕ್ಷೆಗಳ ನಿಖರತೆ ಈ ತಿಂಗಳ 10ರಂದು ನಡೆಯುವ ಮತ ಎಣಿಕೆಯಲ್ಲಿ ಬಯಲಾಗಲಿದೆ. ಏನೇ ಆಗಲಿ, 2024ರ ಸಾರ್ವತ್ರಿಕ ಚುನಾವಣೆಗೆ ರಾಷ್ಟ್ರ ರಾಜಕಾರಣದ ಗತಿಯನ್ನು ಈ ಫಲಿತಾಂಶ ನಿರ್ಧರಿಸಲಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಸೂಚನೆಯು ವ್ಯಾಪಕ ರಾಜಕೀಯ ಅಂತರಾರ್ಥಗಳನ್ನು ಹೊಂದಿದೆ. ದೀರ್ಘಕಾಲದ ನಂತರ, ಆಡಳಿತ ಪಕ್ಷವೇ ಅಧಿಕಾರಕ್ಕೆ ಮರಳಿ ಬರುವಂತಹದ್ದು ಇದು. ಬಿಜೆಪಿ ಪಡೆದುಕೊಳ್ಳಬಹುದಾದ ಬಹುಮತದ ಪ್ರಮಾಣದ ಬಗ್ಗೆ ಈ ಸಮೀಕ್ಷೆಗಳಲ್ಲಿ ವ್ಯತ್ಯಾಸಗಳಿದ್ದರೂ ಈ ಸಮೀಕ್ಷೆಗಳನ್ನು ನಂಬಬಹುದಾದಲ್ಲಿ ಅದು ಅಧಿಕಾರಕ್ಕೆ ಮರಳಿ ಬರುವುದು ಖಚಿತವೆಂದು ತೋರುತ್ತಿದೆ. ಬಿಜೆಪಿಗೆ ದೊರೆಯಬಹುದಾದ ಬಹುಮತವು ಕಡಿಮೆ ಪ್ರಮಾಣ
ದ್ದಾಗಿರುತ್ತದೆ ಎಂದು ಬಿಂಬಿಸುತ್ತಿರುವವರು, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಮಧ್ಯೆ ತೀವ್ರ ಹಣಾಹಣಿ ಇದೆ ಎನ್ನುತ್ತಿದ್ದಾರೆ. ಆದರೆ ಬಿಜೆಪಿಗೆ ಹೆಚ್ಚಿನ ಬಹುಮತ ಸಿಗುತ್ತದೆ ಎಂದು ಬಿಂಬಿಸುತ್ತಿರುವವರು, ಎಲ್ಲ ಪ್ರದೇಶಗಳಲ್ಲೂ ತನ್ನ ಪ್ರತಿಸ್ಪರ್ಧಿಗಿಂತ ಬಿಜೆಪಿ ಬಹಳ ಮುಂದಿದೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಕುರಿತಂತೆ ಇರಬಹುದಾದ ಮೇಲ್ನೋಟದ ಗ್ರಹಿಕೆಯು ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿರಬಹುದು. ತಮ್ಮ ಪಕ್ಷದ ಪರವಾಗಿ ಪ್ರಧಾನಿಯವರ ಪ್ರಚಾರಸಭೆಗಳ ಪರಿಣಾಮವನ್ನೂ ಕಡೆಗಣಿಸಲಾಗದು. ಚುನಾವಣೆಯ ಪ್ರತೀ ಹಂತದಲ್ಲೂ ಪ್ರಧಾನಿ ಹಾಜರಿ ಹಾಗೂ ಅಸಂಖ್ಯ ರೋಡ್ ಷೋಗಳಿರುವಂತೆ ಪ್ರಚಾರ ಸಭೆಗಳನ್ನು ಸಂಯೋಜಿಸಲಾಗಿತ್ತು.

ಲೋಕಸಭೆಗೆ ತಾವು ಆರಿಸಿಬಂದಿರುವಂತಹ ಈ ರಾಜ್ಯದ ಚುನಾವಣೆಯನ್ನು ಗೆಲ್ಲುವುದು ಪ್ರಧಾನಿಗೆ ಮುಖ್ಯವಾಗಿರುವಂತೆಯೇ ಮುಂದಿನ ಲೋಕಸಭೆ ಚುನಾವಣೆಯ ಎಲ್ಲ ಲೆಕ್ಕಾಚಾರಗಳಿಗೂ ಇದು ಬಿಜೆಪಿಗೆ ಮಹತ್ವದ್ದಾಗಿದೆ. ಈ ಚುನಾವಣೆಯು ಎರಡು ಪಕ್ಷಗಳ ನಡುವಿನ ಸ್ಪರ್ಧೆಯಾಗಿದ್ದು ಬಿಎಸ್‌ಪಿ ಹಾಗೂ ಕಾಂಗ್ರೆಸ್ ಅಂಚಿನಲ್ಲಿವೆ ಎಂಬ ವಿಚಾರವನ್ನು ಈ ಸಮೀಕ್ಷೆಗಳು ಒಪ್ಪಿಕೊಂಡಂತಿವೆ. ಈ ಎರಡೂ ಪಕ್ಷಗಳ ಗೆಲುವಿನ ಪ್ರಮಾಣ ಏಕಸಂಖ್ಯೆಯಲ್ಲಿರುತ್ತದೆ ಎಂಬುದಾಗಿ ಬಹುತೇಕ ಸಮೀಕ್ಷೆಗಳು ಹೇಳಿವೆ. ಬರಲಿರುವ ದಿನಗಳಲ್ಲಿ ಉತ್ತರಪ್ರದೇಶ ಹಾಗೂ ರಾಷ್ಟ್ರ ಮಟ್ಟದಲ್ಲಿ ಇದು ಮತ್ತೆ ಮುಖ್ಯ ಸೂಚ್ಯಾರ್ಥಗಳನ್ನು ಹೊಂದಿರಲಿದೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಅನಾಯಾಸವಾಗಿ ಗೆಲುವು ಸಾಧಿಸುವಂತಿದೆ. ಇಲ್ಲೂ ಎಎಪಿ ಪಡೆದುಕೊಳ್ಳಬಹುದಾದ ಬಹುಮತದ ಪ್ರಮಾಣದ ಬಗ್ಗೆ ಸಮೀಕ್ಷೆಗಳಲ್ಲಿ ಭಿನ್ನತೆಗಳಿವೆ. ಆಡಳಿತ ಕಾಂಗ್ರೆಸ್ ಪಕ್ಷವು ನೆಲೆ ಕಳೆದುಕೊಂಡಂತಿದೆ. ಕಡೇ ಗಳಿಗೆಯಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದ್ದು ಹಾಗೂ ಪಕ್ಷದೊಳಗೆ ಮುಂದುವರಿದ ಆಂತರಿಕ ಕಚ್ಚಾಟವು ಪಕ್ಷದ ವರ್ಚಸ್ಸನ್ನು ಖಂಡಿತವಾಗಿ ಕುಂದಿಸಿದೆ. ದಲಿತರೊಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದು ಕಾಂಗ್ರೆಸ್‌ಗೆ ಒಂದಷ್ಟು ಅನುಕೂಲ ತಂದಿರಬಹುದಾದರೂ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವಷ್ಟು ಸಾಮರ್ಥ್ಯ ಅದೊಂದೇ ಅಂಶಕ್ಕೆ ಇದ್ದಂತೆ ಕಾಣುತ್ತಿಲ್ಲ. ಕೃಷಿ ಕಾನೂನುಗಳ ಬಗ್ಗೆ ತ್ವರಿತವಾಗಿ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸಾಧ್ಯವಾಗದಿದ್ದಕ್ಕಾಗಿ ಶಿರೋಮಣಿ ಅಕಾಲಿ ದಳ ನೇತೃತ್ವದ ಮೈತ್ರಿಕೂಟವು ಬೆಲೆ ತೆರುವಂತಿದೆ. ಪ್ರಭಾವಿ ಜಾಟ್ ಸಿಖ್ಖರ ಬೆಂಬಲವು ಗಣನೀಯವಾಗಿ ಕಡಿಮೆಯಾಗಿರುವಂತೆ ಭಾಸವಾಗುತ್ತದೆ. ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೂ ಹೆಚ್ಚಿನ ಬೆಂಬಲ ಸಿಕ್ಕಿದಂತಿಲ್ಲ. ಪಂಜಾಬ್‌ನಲ್ಲಿ ಬಿಜೆಪಿಯು ತನ್ನ ಸ್ಥಿತಿ ಸುಧಾರಿಸಿಕೊಳ್ಳಲಿದೆ ಮತ್ತು ಇತರ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಉನ್ನತ ನಾಯಕತ್ವವೂ ಇದನ್ನು ಒಪ್ಪಿಕೊಂಡಂತಾಗಿದೆ.

ಪಂಜಾಬ್‌ಗೆ ಸಂಬಂಧಿಸಿದ ಮತದಾನೋತ್ತರ ಸಮೀಕ್ಷೆಯ ಈ ಅಂದಾಜುಗಳು ನಿಖರವಾಗಿದ್ದಲ್ಲಿ ಇಲ್ಲೂ ಹಲವು ಸೂಚ್ಯಾರ್ಥಗಳಿವೆ. ದೆಹಲಿ ಆಚೆಗೂ ತನ್ನ ರಾಜಕೀಯ ಹಾಜರಿಯನ್ನು ಪ್ರಸ್ತುತಪಡಿಸಿ ಲೋಕಸಭೆ ಚುನಾವಣೆಗೆ ಮುಂಚೆ ನಡೆಯುವಂತಹ ಇತರ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸವಾಲು ಹಾಕುವ ಪಕ್ಷವಾಗಿ ಉದಯವಾಗಲು ಎಎಪಿ ಸಜ್ಜಾಗಬಹುದು. ಎಎಪಿಯ ಯಾವುದೇ ಗಳಿಕೆಯು ಕಾಂಗ್ರೆಸ್‌ಗೆ ನಷ್ಟಕರವೆಂಬುದನ್ನು ಒತ್ತಿಹೇಳಬೇಕಾದುದು ಇಲ್ಲಿ ಮುಖ್ಯ.

ಉತ್ತರಾಖಂಡದಲ್ಲಿ ತೀವ್ರ ಪೈಪೋಟಿ ಇರುವಂತೆ ಕಂಡರೂ ಬಿಜೆಪಿಗೆ ಅನುಕೂಲ ಇರುವಂತೆ ಸಮೀಕ್ಷೆಗಳು ಬಿಂಬಿಸಿವೆ. ಇಲ್ಲಿ ಎರಡು ಅಂಶಗಳನ್ನು ಒತ್ತಿ ಹೇಳುವುದು ಅಗತ್ಯ. ಮೊದಲನೆಯದು, ಆಡಳಿತ ಪಕ್ಷವೇ ಅಧಿಕಾರಕ್ಕೆ ಮರಳುವಂತಹದ್ದು ಮೊದಲ ಬಾರಿಯದಾಗಿರುತ್ತದೆ. ಇಲ್ಲೂ ಪ್ರಧಾನಿ ನೇತೃತ್ವದ ಪ್ರಚಾರದ ಪರಿಣಾಮಗಳದ್ದು ಮಹತ್ವದ ಅಂಶ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿಯನ್ನು ಆಡಳಿತ ಪಕ್ಷವು ಮೂರು ಬಾರಿ ಬದಲಾಯಿಸಿದಂತಹ ವಿದ್ಯಮಾನದ ಬೆಳಕಿನಲ್ಲಿ ಇದನ್ನು ವಿಶೇಷವಾಗಿ ಒತ್ತಿಹೇಳುವುದು ಅಗತ್ಯವಾಗುತ್ತದೆ. ಎರಡನೆಯದಾಗಿ, ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಹಾಗೂ ಹರೀಶ್ ರಾವತ್ ಅವರ ಕೈ ಬಲಪಡಿಸುವಲ್ಲಿ ಪಕ್ಷದ ಅಸಾಮರ್ಥ್ಯದ ಸ್ಪಷ್ಟ ಪರಿಣಾಮ ಇದು. ರಾವತ್ ಅವರು ತಮ್ಮದೇ ಪಕ್ಷದೊಳಗೆ ಹಾಗೂ ಹೊರಗೆ ಬಿಜೆಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದಂತಿತ್ತು. ಈ ಸಮೀಕ್ಷೆಗಳು ನಿಖರವಾಗಿದ್ದಲ್ಲಿ, ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಸವಾಲು ಹಾಕುವ ಅವಕಾಶವನ್ನು ಕಾಂಗ್ರೆಸ್ ಮತ್ತೊಂದು ಬಾರಿಗೆ ಕಳೆದುಕೊಂಡಂತಾಗುತ್ತದೆ.

ಮಣಿಪುರದಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಮರಳುವಂತಿದೆ. ಫಲಿತಾಂಶ ಬಂದಾಗ ಇದು ನಿಜ ಎಂದಾದಲ್ಲಿ ಈಶಾನ್ಯ ಭಾಗದಲ್ಲಿ ಪಕ್ಷದ ದೃಢ ಉಪಸ್ಥಿತಿಗೆ ಸೂಚಕವಾಗುತ್ತದೆ. ಈ ಭಾಗದಲ್ಲಿ ರಾಜಕೀಯ ವಿಸ್ತರಣೆಗೆ ಚೆನ್ನಾಗಿ ಯೋಜಿಸಿದ ಕಾರ್ಯತಂತ್ರವೂ ಫಲ ನೀಡಿದಂತಾಗುತ್ತದೆ.

ಗೋವಾದಲ್ಲಿ ಅನಿಶ್ಚಯವೇ ಕಂಡುಬರುವಂತಿದ್ದುಕಳೆದ ಬಾರಿಯಂತೆಯೇ ಸರ್ಕಾರವನ್ನು ರಾಜ್ಯದಲ್ಲಿ ಯಾರು ರಚಿಸುತ್ತಾರೆ ಎಂಬುದನ್ನು ಫಲಿತಾಂಶಗಳು ನಿರ್ಧರಿಸದೇ ಹೋಗಬಹುದು! ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನಿಕಟ ಸ್ಪರ್ಧೆ ಏರ್ಪಡುವುದನ್ನು ಸಮೀಕ್ಷೆಗಳು ಸೂಚಿಸಿದ್ದು ಎಂಜಿಪಿ, ಟಿಎಂಸಿ ಹಾಗೂ ಎಎಪಿಯಂತಹ ಪಕ್ಷಗಳು ಪ್ರಮುಖ ಪಾತ್ರಧಾರಿಗಳಾಗಿರಬಹುದು. ಬಿಜೆಪಿ ಹಾಗೂ ಕಾಂಗ್ರೆಸ್ ಎಷ್ಟರಮಟ್ಟಿಗೆ ಸಣ್ಣ ಪಕ್ಷಗಳೊಂದಿಗೆ ಹಾಗೂ ಆ ಪಕ್ಷಗಳ ಶಾಸಕರೊಂದಿಗೆ ಒಪ್ಪಂದ ಮಾಡಿಕೊಂಡು ಬಹುಮತ ಸಾಧಿಸಬಲ್ಲವು ಎಂಬುದನ್ನು ಗೋವಾದಲ್ಲಿ ನೋಡಬೇಕಾಗಿದೆ.

ಮತದಾನೋತ್ತರ ಸಮೀಕ್ಷೆಗಳ ಸಂದೇಶ ಸ್ಪಷ್ಟವಾಗಿದೆ. ಪಂಜಾಬ್‌ನಲ್ಲಿ ಹೊಸ ಪಕ್ಷವು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಯಥಾಸ್ಥಿತಿಯ ಮುಂದುವರಿಕೆ. ಚುನಾವಣಾ ಫಲಿತಾಂಶಗಳಲ್ಲಿ ಇವೇ ಪ್ರತಿಬಿಂಬಿತವಾದಲ್ಲಿ ಇದು ಸ್ಪಷ್ಟವಾಗಿ ಬಿಜೆಪಿಗೆ ಅನುಕೂಲಕರ ಹಾಗೂ ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಸವಾಲು ಹಾಕುವವರಲ್ಲಿ ಪ್ರಮುಖ ನೆಲೆ ಪ್ರತಿಪಾದಿಸಿಕೊಳ್ಳಲು ಎಎಪಿಗೊಂದು ವರದಾನ.

ಗಂಭೀರವಾದ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿರುವ ಪಕ್ಷವೆಂದರೆ ಕಾಂಗ್ರೆಸ್. ಒಂದಾದ ಮೇಲೆ ಒಂದು ರಾಜ್ಯವನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಿದ್ದು,ಎಲ್ಲೆಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯಲ್ಲಿದೆಯೋ ಅಲ್ಲೆಲ್ಲಾ ಅದನ್ನು ಕೆಳಗಿಳಿಸುವ ಸವಾಲನ್ನೂ ಸೂಕ್ತವಾಗಿ ಕಾಂಗ್ರೆಸ್‌ಗೆ ಎದುರಿಸಲಾಗುತ್ತಿಲ್ಲ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT