ಮಂಗಳವಾರ, ಜೂನ್ 28, 2022
27 °C

PV Web Exclusive: ಹಿರಿಯರ ಸಮಸ್ಯೆ ನೂರು... ಕೇಳೋರು ಯಾರು..?

ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸತ್ಯನಾರಾಯಣ ಹಾಗೂ ಪೂರ್ಣಿಮಾ ದಂಪತಿ ಅವರದ್ದು ಯಶಸ್ವಿ ಬದುಕು. ಇಬ್ಬರು ಮಕ್ಕಳು. ಮಗಳು ಮದುವೆಯಾಗಿ ಅಮೆರಿಕದಲ್ಲಿ ನೆಲೆಸಿದ್ದಾಳೆ. ಮಗ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ನಾಲ್ಕು ಜನ ಮೊಮ್ಮಕ್ಕಳು. ಪೂರ್ಣಿಮಾ ಅವರಿಗೆ ಅಮೆರಿಕದಲ್ಲಿರುವ ಮಗಳು ಹಾಗೂ ಅವರ ಮಕ್ಕಳೊಂದಿಗೆ ಮಾತನಾಡುವಾಸೆ. ಸತ್ಯನಾರಾಯಣ ಅವರಿಗೆ ಕೋವಿಡ್ ಕಾಲದಲ್ಲಿ ಹೊರಹೋಗಲಾರದೆ, ಮೊಬೈಲ್‌ನಲ್ಲೇ ಬ್ಯಾಂಕ್‌ ಹಾಗೂ ಇನ್ನಿತರ ಹೂಡಿಕೆಗಳ ಕುರಿತು ತಿಳಿದುಕೊಳ್ಳುವ ಚಡಪಡಿಕೆ. ಪಾಲಕರಿಗೆ ಮಕ್ಕಳು ಸ್ಮಾರ್ಟ್‌ಫೋನ್ ಕೊಡಿಸಿದ್ದಾರೆ. ಆದರೆ ಅದನ್ನು ಬಳಸಲು ಯಾರದ್ದಾದರೂ ಸಹಾಯ ಬೇಕಿವರಿಗೆ.

ಕೆಲವೊಮ್ಮೆ ಪೂರ್ಣಿಮಾ ಅವರು ಮೊಮ್ಮಕ್ಕಳಿಗೆ ಚಾಕೊಲೇಟ್ ಬೇಡಿಕೆ ಇಟ್ಟು, ಮಗಳು ಕಳುಹಿಸಿದ ಚಿತ್ರಗಳನ್ನು ಡೌನ್‌ಲೋಡ್ ಮಾಡಿಸಿಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ವಿಡಿಯೊ ಕಾಲ್ ಮಾಡುವುದನ್ನು ಹೇಳಿಸಿಕೊಳ್ಳುತ್ತಾರೆ. ಸತ್ಯನಾರಾಯಣ ಅವರದ್ದೂ ಹೆಚ್ಚುಕಡಿಮೆ ಇಂಥದ್ದೇ ಸ್ಥಿತಿ.

ಆರಂಭದಲ್ಲಿ ಉತ್ತಮವಾಗಿ ಹೇಳಿಕೊಡುತ್ತಿದ್ದ ಮೊಮ್ಮಕ್ಕಳು ನಂತರ, ‘ಹೋಗಜ್ಜಿ, ದಿನಾ ನಿಂದು ಇದೇ ಆಯ್ತು...’ ಎಂದು ಗೊಣಗಿ ಓಡಿಹೋಗುತ್ತಾರೆ. ಮಗ ಮನೆಯಿಂದಲೇ ಕೆಲಸ ಮಾಡುತ್ತಿದ್ದರೂ, ಕೊಠಡಿಯೊಂದರಲ್ಲಿ ಲ್ಯಾಪ್‌ಟಾಪ್ ಹಿಡಿದು ಕೂತಿರುತ್ತಾನೆ. ಒತ್ತಡದಿಂದ ಕೂತಿರುವ ಆತನ ಮುಖ ನೋಡಿದರೆ ಸಹಾಯ ಕೇಳಲು ಇವರಿಗೆ ಭಯ. ‘ಛೇ... ಯಾಕಾದರೂ ಈ ಫೋನ್ ಕೊಡಿಸಿದ್ದಾರೋ. ಹಾಳಾದ್ದು’ ಎಂದು ಗೊಣಗುತ್ತಲೇ ಕನ್ನಡಕ ಸರಿಪಡಿಸಿಕೊಂಡು ಮತ್ತೊಮ್ಮೆ ಮೊಬೈಲ್ ಪರದೆ ಮೇಲೆ ಬೆರಳಾಡಿಸುತ್ತಾರೆ ಈ ಇಳಿವಯಸ್ಸಿನ ದಂಪತಿ.

ಇದೊಂದು ಕುಟುಂಬದ ಕಥೆಯಾದರೂ, ಭಾರತ ಸೇರಿದಂತೆ ಜಗತ್ತಿನ ಬಹಳಷ್ಟು ಮನೆಯಲ್ಲಿನ ಹಿರಿಯರದ್ದೂ ಇದೇ ಪರಿಸ್ಥಿತಿ. ತಂತ್ರಜ್ಞಾನ ಇಂದು ಎಲ್ಲವನ್ನೂ ನೀಡಬಲ್ಲಷ್ಟು ಮುಂದುವರಿದಿದೆ. ಆದರೆ ಹಿರಿಯರನ್ನು ಮಾತ್ರ ಹಿಂದೆಯೇ ಉಳಿಸಿದೆ.

ಭಾರತದ ಯುವಕರ ರಾಷ್ಟ್ರ ಎಂದು ಎದೆಯುಬ್ಬಿಸಿ ಹೇಳುವ ಸಂದರ್ಭದಲ್ಲಿ ‘ನ್ಯೂ ಜನರೇಷನ್‌...’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಹುತೇಕ ಉತ್ಪನ್ನಗಳು ಇಂದು ಮಾರುಕಟ್ಟೆಗೆ ದಾಂಗುಡಿ ಇಡುತ್ತವೆ. ಆದರೆ 130 ಕೋಟಿಯಲ್ಲಿ 10.4ಕೋಟಿಯಷ್ಟಿರುವ ಹಿರಿಯರತ್ತ ತಯಾರಿಕಾ ಕಂಪನಿಗಳು ಕಣ್ಣೆತ್ತಿಯೂ ನೋಡದಷ್ಟು ಇವರು ನಿರ್ಲಕ್ಷಿತರು.

ಹಿರಿಯರ ಸಮಸ್ಯೆ ನೂರು

ಹಿರಿಯರ ಸಮಸ್ಯೆ ಭಾರತದ್ದು ಮಾತ್ರವಲ್ಲ, ಅಮೆರಿಕಾ, ಯುರೋಪ್, ಜಪಾನ್ ಸೇರಿದಂತೆ ಬಹಳಷ್ಟು ಮುಂದುವರಿದ ರಾಷ್ಟ್ರಗಳಲ್ಲೂ ಇದೆ. ವಯಸ್ಸಾದಂತೆ ನರದೌರ್ಬಲ್ಯ, ಪಾರ್ಕಿನ್ಸನ್ ಸಮಸ್ಯೆ, ದೃಷ್ಟಿ ದೋಷ, ನಿಧಾನವಾಗಿ ಪ್ರತಿಕ್ರಿಯಿಸುವಿಕೆ ಸೇರಿದಂತೆ ವಯೋಸಹಜ ಸಮಸ್ಯೆಗಳು ಹಿರಿಯರಲ್ಲಿ ಸಾಮಾನ್ಯ. ಆದರೆ ಇಂಥ ಯಾವ ಸಮಸ್ಯೆಗೂ ಆಧುನಿಕ ಮೊಬೈಲ್‌ಗಳಲ್ಲಿ ಪರಿಹಾರಗಳೇ ಇಲ್ಲವಾಗಿವೆ.

ಪ್ರಮುಖವಾಗಿ ಯುರೋಪ್, ಅಮೆರಿಕ, ಚೀನಾ ಹಾಗೂ ಜಪಾನ್‌ನಲ್ಲಿ ಹಿರಿಯರಿಗೆ ನೆರವಾಗುವ ದೃಷ್ಟಿಯಿಂದ ಒಂದಷ್ಟು ಕಂಪನಿಗಳು ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಉದಾಹರಣೆಗಳು ಇವೆ. ಆದರೆ ಭಾರತದಲ್ಲಿ ಮಾತ್ರ ಹಳೆಯ ತಂತ್ರಜ್ಞಾನದ ಕೀಪ್ಯಾಡ್ ಮೊಬೈಲ್‌ಗಳೇ ಗತಿ ಎಂಬಂತಾಗಿದೆ.

ಮೊಬೈಲ್ ಅಂಗಡಿಗಳಲ್ಲೂ, ‘ವಯಸ್ಸಾದವರಿಗಾದರೇ ಇದನ್ನು ತಗೊಳ್ಳಿ’ ಎಂದು ನೇರವಾಗಿ ಹಳೆಯ ಕೀಪ್ಯಾಡ್ ಹೊಂದಿರುವ ಮೊಬೈಲ್ ತೋರಿಸಲಾಗುತ್ತದೆ. ಹೀಗಾಗಿ ಹಿರಿಯರು ಎಂದರೆ ಸ್ಮಾರ್ಟ್‌ ಪೋನ್‌ ಅಗತ್ಯವಿಲ್ಲ ಎಂಬ ‘ಸಿದ್ಧಸೂತ್ರ’ ಹಲವರದ್ದು. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಲವರು ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಯುವಕರಿಗೂ ಪೈಪೋಟಿ ನೀಡುವುದೂ ಉಂಟು. ಆದರೆ ಇಂಥವರ ಸಂಖ್ಯೆ ವಿರಳ.

ವಿದೇಶದಲ್ಲಿರುವುದಾದರೆ ಭಾರತದಲ್ಲಿಲ್ಲ ಏಕೆ?

ಯುರೋಪ್‌ನ ಎಂಪೋರಿಯಾ ಫೋನ್‌ ಹಾಗೂ ವೋನ್ ಫೋನ್‌, ಚೀನಾದ ಗ್ಲುಟ್ ಮುಂತಾದ ಕೆಲವೇ ಫೋನ್‌ಗಳು ಜಗತ್ತಿನಲ್ಲಿ ಹಿರಿಯರಿಗಾಗಿ ಅಂತಲೇ ಅಭಿವೃದ್ಧಿಪಡಿಸಲಾಗಿದೆ. ದೊಡ್ಡ ಐಕಾನ್‌ಗಳು, ತುಸು ಹೆಚ್ಚು ಎನಿಸುವಷ್ಟು ಲೌಡ್‌ಸ್ಪೀಕರ್‌ನ ಧ್ವನಿ, ಕೇಳುವ ಸಾಮರ್ಥ್ಯ ಹೆಚ್ಚಿಸುವ ಇಯರಿಂಗ್‌ ಏಡ್‌ಗೂ ಸಂಪರ್ಕ ಕಲ್ಪಿಸುವ ತಂತ್ರಜ್ಞಾನ, ದೀರ್ಘ ಕಾಲ ಬ್ಯಾಟರಿ ಮುಂತಾದವು ಇವುಗಳ ವೈಶಿಷ್ಠ್ಯ.

ಹಿರಿಯರಿಗಾಗಿಯೇ ಮೊಬೈಲ್ ಫೋನ್ ಅಭಿವೃದ್ಧಿಪಡಿಸುವ ಎಂಪೋರಿಯಾ ಫೋನ್‌ಗಳು ಯುರೋಪ್‌ನಲ್ಲಿ ಲಭ್ಯ. ಸ್ಮಾರ್ಟ್‌ಟಚ್ ಎಂಬ ಹೆಸರಿನ ಫೋನ್‌ಗಳು ಹಿರಿಯರಿಗಾಗಿ ಅತ್ಯಂತ ಸರಳ, ದೊಡ್ಡ ಅಕ್ಷರಗಳು ಹಾಗೂ ಐಕಾನ್‌ಗಳು, ಸ್ಮಾರ್ಟ್‌ಫೋನ್‌ನ ಎಲ್ಲಾ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಪ್ರತಿಕ್ರಿಯೆ ಸಮಯವನ್ನೂ ವಿಳಂಬಗೊಳಿಸಿ ಹಿರಿಯರಿಗೆ ಹೆಚ್ಚು ಕಷ್ಟವಾಗದಂತಿದೆ. ಆದರೆ ಇಂಥ ಸೌಲಭ್ಯವುಳ್ಳ ಫೋನ್‌ಗಳು ಭಾರತದಲ್ಲಿ ಸಿಗದು ಎಂಬ ಅಸಮಾಧಾನ ಹಿರಿಯ ನಾಗರಿಕರದ್ದು.

ಯಾರಿಗೂ ಇಲ್ಲ ನಮ್ಮ ಕಾಳಜಿ

ಮೊಬೈಲ್ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಹಿರಿಯರನ್ನು ಕಡೆಗಣಿಸಿದ್ದು ಒಂದು ಸಮಸ್ಯೆಯಾದರೆ, ಮನೆಯಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುವುದರಿಂದ ಹಾಗೂ ಅದರೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ತಮ್ಮತ್ತ ಯಾರೂ ಗಮನ ನೀಡುತ್ತಿಲ್ಲ ಎಂಬ ಅಸಮಾಧಾನವೂ ಹಿರಿಯ ನಾಗರಿಕರದ್ದು.

ಹೆಲ್ಪ್‌ಏಜ್ ಇಂಡಿಯಾ ಸಂಸ್ಥೆ ಕೆಲ ತಿಂಗಳುಗಳ ಹಿಂದೆ ನಡೆಸಿದ ಸಮೀಕ್ಷೆ ಅನ್ವಯ, ಸ್ಮಾರ್ಟ್‌ ಫೋನ್ ಮತ್ತು ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ನಿರ್ಲಕ್ಷಕ್ಕೊಳಗಾಗಿದ್ದಾರೆ ಎಂದು ಹೇಳಿದೆ. ಇದಕ್ಕಾಗಿ 23 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡು ಸುಮಾರು ಐದು ಸಾವಿರಕ್ಕೂ ಅಧಿಕ ಹಿರಿಯರಲ್ಲಿ ಫೋನ್ ಮತ್ತು ಕಂಪ್ಯೂಟರ್‌ ಬಳಕೆಯಿಂದಾಗಿ ತಮ್ಮತ್ತ ಯುವಸಮುದಾಯ ಗಮನ ನೀಡುತ್ತಿಲ್ಲ ಎಂದು ಶೇ 65ರಷ್ಟು ಜನ ಹೇಳಿದ್ದಾರೆ. ಶೇ 73ರಷ್ಟು ಹಿರಿಯರ ಮನೆಯಲ್ಲಿರುವ ಕಿರಿಯರು ಮನೆಯಲ್ಲೇ ಇದ್ದರೂ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ ಎಂದು. ಸಾಮಾಜಿಕ ಜಾಲತಾಣವು ಕೌಟುಂಬಿಕ ಬಾಂಧವ್ಯದ ಅಂತರವನ್ನು ಹೆಚ್ಚಿಸಿದೆ ಎಂದು ಶೇ 78 ರಷ್ಟು ಹಿರಿಯರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಮೊಬೈಲ್ ಫೋನ್ ಬಳಕೆಯಿಂದಾಗಿ ಹಿರಿಯರು ಅನುಭವಿಸುವ ಒಂದಷ್ಟು ಯಾತನೆಗಳ ಪಟ್ಟಿ ಹೀಗಿದೆ. ಅಗೌರವ (ಶೇ 56), ಹೀಯಾಳಿಕೆ (ಶೇ 49), ನಿರ್ಲಕ್ಷ್ಯತನ (ಶೇ 33), ಆರ್ಥಿಕ ದೌರ್ಜನ್ಯ (ಶೇ 22), ದೈಹಿಕ ಹಲ್ಲೆ (ಶೇ 12), ಇದರಲ್ಲಿ ಗಂಡುಮಕ್ಕಳಿಂದ ಆಗುತ್ತಿರುವ ಸಮಸ್ಯೆಯನ್ನು ಶೇ 52ರಷ್ಟು ಎಂದು ಹಿರಿಯರು ಹೇಳಿದರೆ, ಹೆಣ್ಣುಮಕ್ಕಳ ಪಾಲು ಶೇ 34ರಷ್ಟು.

ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದರುವ ಪಾಲಕರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2007 ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ತಂತ್ರಜ್ಞಾನ ಹೆಚ್ಚಿಸಿದ ಸೌಕರ್ಯ

ಈ ಎಲ್ಲಾ ಸಮಸ್ಯೆಗಳ ನಡುವೆ ತಂತ್ರಜ್ಞಾನದಿಂದ ಇಳಿವಯಸ್ಸಿನ ಸಾಕಷ್ಟು ಕಷ್ಟಗಳು ನಿವಾರಣೆಯಾಗಿವೆ. ಹೊರಗೆ ಓಡಾಡಲು ಸಾಧ್ಯವಾಗದ್ದು, ಕುಳಿತಲ್ಲೇ ಮೊಬೈಲ್‌ನಿಂದ ಆಗಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ದೇಶದಲ್ಲಿರುವ ಒಟ್ಟು ಹಿರಿಯರಲ್ಲಿ ಅಂತರ್ಜಾಲವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿರುವವರ ಸಂಖ್ಯೆ ಶೇ 4. ಇವರಲ್ಲಿ ಶೇ 70ರಷ್ಟು ಹಿರಿಯರು, ಸ್ಮಾರ್ಟ್‌ಫೋನ್ ಬಳಕೆಯಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸಾಕಷ್ಟು ಪರಿಹಾರ ದೊರೆತಿದೆ. ಇಳಿವಯಸ್ಸಿನ ಏಕತಾನತೆಯನ್ನು ಸಾಮಾಜಿಕ ಜಾಲತಾಣಗಳು ಹೋಗಲಾಡಿಸಿವೆ. ದೂರದಲ್ಲಿರುವ ಕುಟಂಬದ ಸದಸ್ಯರು, ಸಂಬಂಧಿಕರೊಂದಿಗೆ ಸಂವಹನ ನಡೆಸಲು ನೆರವಾಗಿದೆ ಎಂದಿದ್ದಾರೆ. ಇಂಟರ್ನೆಟ್ ಬಳಸುವ ಶೇ 90ರಷ್ಟು ಹಿರಿಯರಲ್ಲಿ ಶೇ 61ರಷ್ಟು ಮಂದಿ ಫೇಸ್‌ಬುಕ್ ಅನ್ನು ಶೇ 56ರಷ್ಟು ವಾಟ್ಸ್‌ಆ್ಯಪ್ ಹಾಗೂ ಶೇ 40ರಷ್ಟು ಯುಟ್ಯೂಬ್‌ ಬಳಸುತ್ತಿದ್ದಾರೆ.

ಹೀಗಿದ್ದರೂ ಮೊಬೈಲ್ ಬಳಸುವ ಬಹುತೇಕ ಹಿರಿಯರು ಇಂದಿಗೂ ತಮ್ಮ ಕೆಲಸಗಳಿಗೆ ಕಿರಿಯರನ್ನೇ ನೆಚ್ಚಿಕೊಂಡಿದ್ದಾರೆ. ಜತೆಗೆ ಸೈಬರ್‌ ಕ್ರೈಂನಲ್ಲಿ ಅತಿ ಹೆಚ್ಚು ತೊಂದರೆಗೆ ಸಿಲುಕಿರುವವರಲ್ಲಿ ಹಿರಿಯರೇ ಹೆಚ್ಚು. 2026ರ ಹೊತ್ತಿಗೆ ಹಿರಿಯರ ಸಂಖ್ಯೆ 17ಕೋಟಿಗೆ ಏರಲಿದೆ. ಮುಂದಿನ 15 ವರ್ಷಗಳಲ್ಲಿ ಈಗಿರುವ ಕಿರಿಯರಲ್ಲಿ ಬಹುತೇಕ ಮಂದಿ ಹಿರಿಯರ ವ್ಯಾಪ್ತಿಗೆ ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.  ಸ್ಟಾರ್ಟ್‌ಅಪ್‌ ಮೂಲಕ ಸಾಕಷ್ಟು ಕಂಪನಿಗಳು ಆರಂಭಗೊಂಡರೂ, ಹಿರಿಯರಿಗಾಗಿ ಮೊಬೈಲ್ ಬಳಕೆ ಸುಲಭಗೊಳಿಸುವ ಯಾವೊಂದು ತಂತ್ರಜ್ಞಾನ ಅಭಿವೃದ್ಧಿಯೂ ಇವರಿಗೆ ಸಿಗದರೆ ಈಗಲೂ ಅವರಿವರಲ್ಲಿ ನೆರವಿಗಾಗಿ ಕೋರಿಕೊಳ್ಳುತ್ತಿದ್ದಾರೆ ಹಿರಿಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು