ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರನ್ನು ‘ಬುಡಕಟ್ಟು’ ಎಂದು ಪರಿಗಣಿಸಬೇಕೇ?

Last Updated 23 ಫೆಬ್ರುವರಿ 2021, 19:52 IST
ಅಕ್ಷರ ಗಾತ್ರ

ಮೀಸಲಾತಿ ಪಟ್ಟಿಯಿಂದ ಹೊರಗೆ ಉಳಿದಿರುವ ಮತ್ತು ನಿರ್ದಿಷ್ಟ ವರ್ಗದಲ್ಲಿ ಸೇರಿರುವ ಕೆಲವು ಉಪಪಂಗಡಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂಬುದು ಒಂದು ಬೇಡಿಕೆ; ಮೀಸಲಾತಿ ಪಡೆಯಲು ಸ್ಪರ್ಧೆ ಕಡಿಮೆ ಇರುವ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳೋಣ ಎಂಬುದು ಇದರ ಹಿಂದಿನ ಚಿಂತನೆ ಆಗಿರಬಹುದು. ಆದರೆ, ಇದು ವಿಶ್ಲೇಷಣೆಯ ಆಧಾರದಲ್ಲಿ ಮುಂದಿಟ್ಟ ಚಿಂತನೆ ಅಲ್ಲ, ಬದಲಿಗೆ ಅಂದಾಜು ಮಾತ್ರ ಎಂಬುದನ್ನು ಇಲ್ಲಿ ನೆನ‍ಪಿನಲ್ಲಿ ಇರಿಸಿಕೊಳ್ಳಬೇಕು. ಇಂತಹ ಸರಣಿ ಬೇಡಿಕೆಗಳ ಪಟ್ಟಿಗೆ ಹೊಸ ಸೇರ್ಪಡೆ ಕುರುಬ ಸಮುದಾಯ. ಇಡೀ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಬುಡಕಟ್ಟು) ಸೇರಿಸಬೇಕು ಎಂಬುದು ಬೇಡಿಕೆ. ಈ ಬೇಡಿಕೆಗೆ ಸಂಬಂಧಿಸಿ ವಿಶ್ಲೇಷಣೆ ನಡೆಸಬೇಕಾದ ಅಗತ್ಯ ಇದೆ.

ಮೊದಲನೆಯದಾಗಿ, ‘ಬುಡಕಟ್ಟು’ ಎಂಬ ಕಲ್ಪನೆಯಲ್ಲಿಯೇ ಸ್ಪಷ್ಟತೆ ಇಲ್ಲ. ಒಂದು ಸಮುದಾಯವನ್ನು ‘ಬುಡಕಟ್ಟು’ ಎಂದು ಪರಿಗಣಿಸಲು ಇರುವ ಮಾನದಂಡಗಳನ್ನು ಮಾನವಶಾಸ್ತ್ರಜ್ಞರು ಬದಲಿಸುತ್ತಾ ಬಂದಿದ್ದಾರೆ. ಅದರ ಹೊರತಾಗಿಯೂ ಈ ಪರಿಕಲ್ಪನೆಯಲ್ಲಿ ಈಗಲೂ ಖಚಿತತೆ ಇಲ್ಲ. ನಿಶ್ಚಿತ ವ್ಯಾಖ್ಯಾನ ಇಲ್ಲದಿದ್ದರೂ, ಕೆಲವು ಜಾತಿಗಳ ಉಪಪಂಗಡಗಳಲ್ಲಿ ಬುಡಕಟ್ಟು ಸಮುದಾಯದ ಲಕ್ಷಣಗಳು ಇರಬಹುದು. ಕೆಲವು ಉಪಪಂಗಡಗಳಲ್ಲಿ ಇಂತಹ ಲಕ್ಷಣಗಳು ಇಲ್ಲದೇ ಇರಬಹುದು. ಹಾಗಿದ್ದರೂ ಇಂಥವರನ್ನು ಬುಡಕಟ್ಟು ಎಂದು ಪರಿಗಣಿಸಲು ಸಾಧ್ಯವಿಲ್ಲ. ಕುರುಬ ಸಮುದಾಯದ ವಿಚಾರದಲ್ಲಿ ಇದು ಸತ್ಯವಾಗಿದೆ. ಅತ್ಯಂತ ಹಿಂದುಳಿದ, ಶೋಚನೀಯವಾಗಿ ಬದುಕು ಸಾಗಿಸುತ್ತಾ ಬುಡಕಟ್ಟು ಎನಿಸಿಕೊಳ್ಳಲು ಅರ್ಹತೆ ಇರುವ ಕೆಲವು ಉಪಪಂಗಡಗಳಿವೆ ಎಂಬುದು ನಿಜ. ಆದರೆ, ಇಡೀ ಸಮುದಾಯಕ್ಕೆ ಅದನ್ನು ಅನ್ವಯಿಸಲಾಗದು.

ಕುರುಬ ಸಮುದಾಯವನ್ನು ಬುಡಕಟ್ಟು ಎಂದು ಪರಿಗಣಿಸಿದರೆ, ಆ ಸಮುದಾಯದವರಿಗೆ ಆಗುವ ಒಂದು ಲಾಭವೆಂದರೆ, ರಾಜ್ಯದಲ್ಲಿ ಬುಡಕಟ್ಟು ಸಮುದಾಯದವರಿಗೆ ಮೀಸಲಿಟ್ಟಿರುವ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು 15 ವಿಧಾನಸಭಾ ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸಬಹುದು. ‘ತುಲನಾತ್ಮಕವಾಗಿ ನೋಡುವುದಾದರೆ, ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಕುರುಬ ಸಮುದಾಯದವರು ಪ್ರಾಬಲ್ಯ ಸಾಧಿಸಬಲ್ಲರು’ ಎಂದು ಸಮಾಜಶಾಸ್ತ್ರಜ್ಞ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಪಾಣಿನಿ ಅವರು ಅನೌಪಚಾರಿಕ ಮಾತುಕತೆಯ ಸಂದರ್ಭದಲ್ಲಿ ಹೇಳಿದ್ದರು.

ಇದನ್ನು ಬಿಟ್ಟರೆ, ಮೀಸಲಾತಿಯಿಂದ ಈ ಸಮುದಾಯಕ್ಕೆ ಬೇರೆ ಯಾವುದೇ ನಿರ್ದಿಷ್ಟ ಲಾಭ ಗೋಚರಿಸುವುದಿಲ್ಲ. ಬುಡಕಟ್ಟು ಸಮುದಾಯಕ್ಕೆ ಹಂಚಿಕೆ ಮಾಡಿರುವ, ವೆಚ್ಚವಾಗದೆ ಉಳಿದ ಸಂಪನ್ಮೂಲಗಳ ಬಳಕೆಗೂ ಈ ಸಮುದಾಯ ಅರ್ಹತೆ ಗಳಿಸುತ್ತದೆ. ಬುಡಕಟ್ಟು ಸಮುದಾಯದ ಅಭಿವೃದ್ಧಿ ಹೊಂದಿರದ ಇತರ ಉಪಪಂಗಡಗಳಿಗೆ ಹೋಲಿಸಿದರೆ, ಈ ಸಮುದಾಯವು ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಲ್ಲದು ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇಂದು ಮೀಸಲಾತಿಯ ಹೋರಾಟವು ‘ಪ್ರಾತಿನಿಧ್ಯದ’ ಹೋರಾಟ ಎಂಬುದು ಒಂದು ಭಾಗವಾದರೆ, ಇಂಥ ಹೋರಾಟವು ಒಂದು ಸಮುದಾಯವನ್ನು ಒಗ್ಗಟ್ಟಿನಲ್ಲಿಡುವ ಉಪಾಯವೂ ಆಗಿರುತ್ತದೆ ಎಂಬುದು ಇನ್ನೊಂದು ಅಂಶವಾಗಿದೆ.

ಅದೇನೇ ಇರಲಿ, ‘ಬುಡಕಟ್ಟು’ ಸ್ಥಾನಮಾನ ಪಡೆಯುವ ಪ್ರಕ್ರಿಯೆಯು ಅತ್ಯಂತ ಕ್ಲಿಷ್ಟಕರವಾದದ್ದು. ಅದಕ್ಕೆ ಸಂಸತ್ತಿನ ಅನುಮೋದನೆ ಬೇಕಾಗುತ್ತದೆ. ಒಂದು ಸಮುದಾಯಕ್ಕೆ ಈ ಸ್ಥಾನಮಾನ ನೀಡಿದರೆ, ದೇಶದ ಬೇರೆಬೇರೆ ಭಾಗಗಳ ವಿವಿಧ ಸಮುದಾಯಗಳಿಂದ ಇಂಥದ್ದೇ ಬೇಡಿಕೆಗಳು ಬರುತ್ತವೆ ಎಂಬುದೂ ಖಚಿತ. ಯಾವುದೇ ಸಮುದಾಯದಿಂದ ಬಂದ ಇಂಥ ಬೇಡಿಕೆಯನ್ನು ಪರಿಗಣಿಸುವಾಗ ಕೇಂದ್ರ ಸರ್ಕಾರವು ಇವೆಲ್ಲವುಗಳನ್ನೂ ಚಿಂತಿಸದೆ ಇರುವುದಿಲ್ಲ.

ಸಂಖ್ಯೆಯಲ್ಲಿ ಕಡಿಮೆ ಇರುವ ಸಮುದಾಯಗಳ ಮೇಲೆ ಕುರುಬ ಸಮುದಾಯವು ‘ದೊಡ್ಡಣ್ಣನಂತೆ’ ವರ್ತಿಸುವ ಪ್ರವೃತ್ತಿಯನ್ನು ಹೊಂದಿದೆ ಎಂಬ ಭಾವನೆಯೂ ಇದೆ. ಚುನಾವಣಾ ಫಲಿತಾಂಶಗಳ ವಿವರವಾದ ವಿಶ್ಲೇಷಣೆಯಿಂದ ಇದರ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕಾಗಿದೆ. ಖಚಿತವಾಗಿಯೂ ಈ ನಿಟ್ಟಿನಲ್ಲಿ ಅಧ್ಯಯನ ಆಗಬೇಕಾಗಿದೆ.

ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಬೇಕಾದ ಅಗತ್ಯ ಇದೆ. ಕುರುಬ ಸಮುದಾಯದ ಸಾಮಾಜಿಕ ಸ್ಥಾನಮಾನವನ್ನು ಗುರುತಿಸಲು ಸಮೀಕ್ಷೆ ನಡೆಸಬೇಕಾದ ಅಗತ್ಯ ಇದೆ. ಇಂತಹ ಪ್ರಕ್ರಿಯೆಯಲ್ಲಿ, ಸಂಖ್ಯೆಯನ್ನು ಹೆಚ್ಚಿಸಿ ಹೇಳುವಂತಹ ಸಮಸ್ಯೆ ಎದುರಾಗಬಹುದು. ಜನಸಂಖ್ಯೆಯು ಈಗಿನ ಅಂದಾಜಿಗಿಂತ ಬಹಳ ಕಡಿಮೆ ಇದೆ ಎಂದು ಕಂಡುಬಂದರೆ, ಸಂಭಾವ್ಯ ಫಲಾನುಭವಿಗಳು (ಇಲ್ಲಿ ಕುರುಬರು) ಆ ಸಂಖ್ಯೆಯನ್ನು ಪ್ರಶ್ನಿಸಬಹುದು. ಜನಸಂಖ್ಯೆಯು ಬಹಳ ಹೆಚ್ಚು ಎಂದು ಕಂಡು ಬಂದರೆ, ಇತರ ಸಮುದಾಯಗಳು ಪ್ರತಿಭಟನೆ ನಡೆಸಬಹುದು.

ಅಂತಿಮವಾದ ಒಂದು ಅವಲೋಕನ ಹೀಗಿದೆ: ಕೊಟ್ಟ ಕೊನೆಗೆ, ತಮ್ಮ ಕನಿಷ್ಠ ನಿರೀಕ್ಷೆ ಏನು ಎಂಬ ಅಂದಾಜು ಯಾವುದೇ ಚಳವಳಿಯ ನಾಯಕರಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ನಾಯಕರು ಹೊಂದಿರುವ ಕನಿಷ್ಠ ನಿರೀಕ್ಷೆ ಏನು?

-ವಿ.ಕೆ. ನಟರಾಜ್‌,ಬ್ರಿಟನ್‌ನ ಯಾರ್ಕ್‌ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪ‍ಕ

***

ಅರ್ಹರಲ್ಲದವರಿಗೆ ಮೀಸಲಾತಿ ಬೇಡ

ರಾಜ್ಯ ಸರ್ಕಾರವು ಮೀಸಲಾತಿ ಘೋಷಿಸುವ ಮುನ್ನ ಆಯಾ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಮತ್ತು ಸಂವಿಧಾನಾತ್ಮಕ ಸಾಧಕ–ಬಾಧಕಗಳನ್ನು ಪರಿಶೀಲಿಸಬೇಕು. ಪ್ರಬಲ ಮತ್ತು ಮೇಲ್ವರ್ಗದ ಜಾತಿಯವರಿಗಿಂತ ಹಿಂದುಳಿದ ಮತ್ತು ತಳ ಸಮುದಾಯದವರಿಗೆ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕು. ಅರ್ಹರಲ್ಲದವರಿಗೆ ಮೀಸಲಾತಿ ಕೊಡಲಾಗದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು.

ಪ್ರವರ್ಗ 2ಎದಲ್ಲಿ ಈಗಾಗಲೇ 102 ಜಾತಿಗಳಿವೆ. ಪ್ರಬಲ ಜಾತಿಯವರು ಕೂಡ ಅದೇ ಪ್ರವರ್ಗದಲ್ಲಿ ಮೀಸಲಾತಿ ಕೇಳಿದರೆ, ಅಲ್ಲಿರುವ ಇತರೆ ಜಾತಿ, ಸಮುದಾಯದವರು ಎಲ್ಲಿ ಹೋಗಬೇಕು? ಅವರಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ನೇಕಾರರ ಸಮುದಾಯದಲ್ಲೇ 32 ಉಪಪಂಗಡಗಳು ಇವೆ. ಅವರಿಗೆ ನ್ಯಾಯಯುತವಾಗಿ ಮೀಸಲಾತಿ ಪಡೆಯಲು ಸಾಧ್ಯವಾಗುವುದೇ?

ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಸ್ವಾಮೀಜಿಗಳು ಎಲ್ಲರ ಒಳಿತಿಗೆ ಶ್ರಮಿಸಬೇಕೆ ಹೊರತು ಕುಲಕ್ಕೊಬ್ಬ ಗುರುಗಳಂತೆ ಸರ್ಕಾರವನ್ನು ಅಂಜಿಸುವುದು ಅಥವಾ ಒತ್ತಡ ಹೇರುವುದು ಸರಿಯಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರವು ವೈಜ್ಞಾನಿಕ ಅಧ್ಯಯನ ಮಾಡುವುದು ಕೂಡ ಅವಶ್ಯವಿದೆ. ಅರ್ಹರಿದ್ದವರಿಗೆ ಮೀಸಲಾತಿ ಸೌಲಭ್ಯ ದೊರೆಯುವಂತೆ ಮಾಡಬೇಕು.

ಛತ್ತೀಸಗಡ ಮತ್ತು ಆಂಧ್ರಪ್ರದೇಶದಲ್ಲಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ.

-ರಮೇಶ ಮಾಲಾ, ದೇವಾಂಗ ಸಮುದಾಯದ ಪ್ರಮುಖ, ಕಲಬುರ್ಗಿ

***

ಪ್ರತ್ಯೇಕ ಧರ್ಮದ ಮಾನ್ಯತೆ ದೊರಕಿದ್ದರೆ ಮೀಸಲಾತಿ ಸಮಸ್ಯೆ ಇರುತ್ತಿರಲಿಲ್ಲ

ಮೀಸಲಾತಿ ಹೋರಾಟದ ಹೆಸರಿನಲ್ಲಿ ಧರ್ಮ ವಿಭಜಿಸಲಾಗುತ್ತಿದೆ ಎಂದು ಅನಿಸುವುದಿಲ್ಲ. ಲಿಂಗಾಯತ ಧರ್ಮದಲ್ಲಿ ನೂರಾರು ಪಂಗಡ, ಒಳಪಂಗಡಗಳಿವೆ. ಅವುಗಳಲ್ಲಿ ಅನೇಕ ಪಂಗಡಗಳು ಈ ಮೊದಲೇ ತಮಗೆ ಬೇಕಾದ ಮೀಸಲಾತಿ ಪಡೆದುಕೊಂಡಿವೆ. ಆಗ ಧರ್ಮ ಹೋಳಾಯ್ತು ಎಂದು ಭಾವಿಸದ ನಾವು, ಈಗ ಏಕೆ ಭಾವಿಸಬೇಕು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವನ್ನು ಧರ್ಮ ಒಡೆಯುವ ಕೆಲಸ ಎಂದು ಭಾವಿಸಿದವರು ಅಜ್ಞಾನಿಗಳು. ಪ್ರತ್ಯೇಕ ಧರ್ಮದ ಸ್ಥಾನಮಾನ ಹೊಂದಿದರೆ ಲಿಂಗಾಯತದ ನೂರಾರು ಪಂಗಡಗಳಲ್ಲಿ ಸಾಮರಸ್ಯ ಉಂಟಾಗಿ ಧರ್ಮ ಗಟ್ಟಿಗೊಳ್ಳುತ್ತದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರಕಿದ್ದರೆ ಮೀಸಲಾತಿಯ ಸಮಸ್ಯೆ ಇರುತ್ತಿರಲಿಲ್ಲ. ಈಗಿರುವ ಪ್ರತ್ಯೇಕ ಧರ್ಮಗಳ ಪಂಗಡಗಳಲ್ಲಿ ಮೀಸಲಾತಿಗಾಗಿ ಹೋರಾಟ ನಡೆದ ಉದಾಹರಣೆಗಳು ಇಲ್ಲ.

ಉದಾಹರಣೆಗೆ ಕ್ರೈಸ್ತ ಧರ್ಮದಲ್ಲಿ ಪ್ರೊಟೆಸ್ಟೆಂಟ್‌, ಕ್ಯಾಥೋಲಿಕ್‌, ಇಸ್ಲಾಂ ಧರ್ಮದಲ್ಲಿ ಶಿಯಾ, ಸುನ್ನಿ, ಜೈನ ಧರ್ಮದಲ್ಲಿ ಶ್ವೇತಾಂಬರ, ದಿಗಂಬರ, ಬೌದ್ಧ ಧರ್ಮದಲ್ಲಿ ಹೀನಯಾನ, ಮಹಾಯಾನ ಪಂಥಗಳಿವೆ. ಇವರೆಲ್ಲರೂ ಅಲ್ಪಸಂಖ್ಯತಾರು ಎಂಬ ವಿಶೇಷ ಸೌಲಭ್ಯ ಪಡೆಯುತ್ತಿದ್ದಾರೆ. ಮೃಷ್ಟಾನ್ನ ಬಿಟ್ಟು ತಂಗಳೂಟಕ್ಕೆ ಹೋಗಬಹುದೇ?

-ಸಿದ್ಧರಾಮ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠ

***

ಸಿಎಂ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಲಿ

ಪ್ರವರ್ಗ 1ರಲ್ಲೇ ಉಳಿದಿರುವ ಉಪ್ಪಾರ ಸಮುದಾಯವು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮುಂಚೆಯೇ ಸೇರಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ವಿಧಾನಸಭೆಯಲ್ಲಿ ಆಯಾ ಜಾತಿಯ ಇಬ್ಬರು ಅಥವಾ ಮೂವರು ಶಾಸಕರು ಇರುತ್ತಾರೆ. ಆದರೆ, ನಮ್ಮ ಸಮುದಾಯದಿಂದ ಒಬ್ಬ ಶಾಸಕರಿದ್ದರೆ ದೊಡ್ಡದು. ಉಪ್ಪಾರರು ಉಪ್ಪು ಮಾಡುವ, ಸುಣ್ಣ ಸುಡುವ ಮತ್ತು ಶವ ಹೂಳುವ ಕಾಯಕ ಮಾಡುತ್ತಾರೆ. ತುಂಬಾ ಹಿಂದುಳಿದಿದ್ದಾರೆ.

ಉಪ್ಪಾರ ಸಮುದಾಯದ ಕುರಿತು ರಾಜ್ಯವ್ಯಾಪಿ ಕುಲಶಾಸ್ತ್ರೀಯ ಅಧ್ಯಯನ 6 ತಿಂಗಳಿನಿಂದ ನಡೆಯುತ್ತಿದೆ. ಅದರ ವರದಿಯೂ ಸರ್ಕಾರಕ್ಕೆ ಮಾರ್ಚ್ ತಿಂಗಳಲ್ಲಿ ಸಲ್ಲಿಕೆಯಾಗಲಿದೆ. ಅಧ್ಯಯನದ ಅಂಕಿ ಅಂಶ, ವಾಸ್ತವಾಂಶಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಲಾಗುವುದು. ಅದರ ಆಧಾರದ ಮೇಲೆ ಸೌಲಭ್ಯ ಮತ್ತು ಬೇಡಿಕೆ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು.

ಮೀಸಲಾತಿ ನೀಡುವಂತೆ ಎಲ್ಲಾ ವರ್ಗ, ಸಮುದಾಯದವರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಒತ್ತಡ ಹೇರಬಹುದು. ಆದರೆ, ಮೀಸಲಾತಿ ಕಲ್ಪಿಸುವಾಗ ಸರ್ಕಾರವು ಆಯಾ ಸಮುದಾಯಗಳ ಜನಸಂಖ್ಯೆ, ಸ್ಥಿತಿಗತಿ ಸೇರಿದಂತೆ ಎಲ್ಲವನ್ನೂ ಪರಿಶೀಲಿಸಬೇಕು. ಮುಖ್ಯಮಂತ್ರಿಯವರು ವಿವೇಚನೆಯಿಂದ ಕಾರ್ಯನಿರ್ವರ್ಹಿಸಿ, ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು.

-ಗುರುಬಸವ ರಾಜಗುರು,ನಿಜಾನಂದ ಯೋಗಾಶ್ರಮ, ಮಲದಕಲ್, ರಾಯಚೂರು ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT