ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಭರವಸೆ ಹುಟ್ಟಿಸಿದ ಕೆಲವು ಗೆಲುವು

ಇಂದಿನ ಪ್ರವಾಹದ ವಿರುದ್ಧದ ಪ್ರಾಮಾಣಿಕ ಗೆಲುವುಗಳು ನಾಳಿನ ಕಲಾಕೃತಿಗಳೆಂಬ ಚೈತನ್ಯದ ಬುಗ್ಗೆಗಳಾಗುತ್ತವೆ
Last Updated 24 ನವೆಂಬರ್ 2021, 20:58 IST
ಅಕ್ಷರ ಗಾತ್ರ

ಕೆಲವು ಸಂಗತಿಗಳು ವಿಶೇಷ ಉಸಿರ್ತಾಣಗಳಂತೆ ಕೆಲಸ ಮಾಡುತ್ತವೆ. ಅಸಾಧ್ಯವೆನಿಸಿದ್ದೂ ಸಾಧ್ಯವಾದ ಕಥನಗಳು ಯಾವಾಗಲೂ ಭರವಸೆ ಕಳೆದುಕೊಂಡ ನಿರ್ಜೀವತೆಗೆ ಜೀವ ಕೊಡುತ್ತವೆ. ಎಲ್ಲೆಲ್ಲಾ ಸಂಪತ್ತಿನ ಮೂಲ ಇದೆ ಎಂದು ಗೊತ್ತಾಗುತ್ತದೋ ಅಲ್ಲೆಲ್ಲಾ ಸಾಮ್ರಾಜ್ಯ ವಿಸ್ತರಿಸುವವರು ಇದ್ದೇ ಇರುತ್ತಾರೆ ಮಾತ್ರವಲ್ಲ, ಅದನ್ನು ಅವರು ಬದಲಾವಣೆಯ ಹರಿಕಾರರ ವೇಷ ಧರಿಸಿ, ನಂಬಿಸಿ, ಅದಕ್ಕಾಗಿ ಜನರನ್ನು ತಲುಪುವ ಎಲ್ಲಾ ಮಾರ್ಗಗಳನ್ನು ಕೈವಶ ಮಾಡಿಕೊಂಡೇ ಮಾಡಿರುತ್ತಾರೆ.

ಮಾನವನ ಆಧುನಿಕ ಚರಿತ್ರೆಯುದ್ದಕ್ಕೂ ಈ ಕಥನಗಳಿವೆ. ಇದನ್ನು ಸಾಧಿಸಿಕೊಂಡವರು ಸಾಧನೆಯ ಚರಿತ್ರೆಯನ್ನಾಗಿ ಬಿಂಬಿಸಿ ನೂರಾರು ವರ್ಷಗಳ ಕಾಲ ಅದೇ ಕತೆಯನ್ನು ರಾಷ್ಟ್ರೀಯ ಹೆಮ್ಮೆ ಎಂಬಂತೆ ಜನರಲ್ಲಿ ರಕ್ತಗತಗೊಳಿಸಿರುತ್ತಾರೆ– ಯಾಕೆಂದರೆ ಅದು ಅವರ ಚಿಂತನೆಗಳೇ ಆಕ್ರಮಿಸಿಕೊಂಡ ರಾಷ್ಟ್ರವಾಗಿರುತ್ತದೆ.

ಆದರೆ ಎಲ್ಲೋ ಒಂದು ಚಿಕ್ಕ ಕಿಂಡಿಯಿಂದ ಬಂದ ಭಿನ್ನ ದಿಕ್ಕಿನ ಬೆಳಕು ಮುಚ್ಚಿಹೋಗಿದ್ದ ಇತರ ಸತ್ಯಗಳನ್ನೂ ಕಾಣಿಸಿ ಸೋತವರ ಮುಖದಲ್ಲೂ ಒಂದು ಪುಟ್ಟದಾದರೂ ನಗುವನ್ನೂ ಹುಮ್ಮಸ್ಸನ್ನೂ ಹುಟ್ಟಿಸುತ್ತದೆ. ಮೊದಲು ಇದು ದೇಶಗಳ ಮೇಲೆ ಅನ್ಯ ದೇಶಗಳ ದಾಳಿಯಾಗಿದ್ದರೆ, ಇಂದು ನಾವು ಬದುಕುತ್ತಿರುವ ಕಾಲದಲ್ಲಿ ದೇಶದೊಳಗೇ ಇರುವ ಸಂಪತ್ತಿನ ಮೇಲೆ ಅಧಿಕಾರ ಚಲಾಯಿಸಲು ದೇಶೀಯರ ಮೇಲೇ ನಡೆಸುತ್ತಿರುವ ‘ಬದಲಾವಣೆ, ಅಭಿವೃದ್ಧಿ, ಅದ್ಭುತ ಭವಿಷ್ಯ’ ಇನ್ನೂ ಮೊದಲಾದ ಆಕರ್ಷಕ ಪದಗಳಲ್ಲಿ ದಾಳಿಗಳಾಗಿ ಬದಲಾಗಿದೆ.

ಯುರೋಪಿಯನ್ನರು ಕರಿಯರನ್ನು ಆಫ್ರಿಕಾದ ಕಾಡುಗಳಿಂದ ಅಪಹರಿಸಿ, ಬತ್ತಲುಗೊಳಿಸಿ, ಹಡಗುಗಳಲ್ಲಿ ನಾಯಿ ನರಿಗಳಂತೆ ತುರುಕಿ, ಅದರೊಳಗೇ ಇರುವ ಹೆಂಗಸರ ಮೇಲೆ ಅತ್ಯಾಚಾರ ಮಾಡಿ, ಅಲ್ಲಿ ತುಂಬಿ ತುಳುಕುವ ಕೊಳಕುಗಳಿಂದ ಹುಣ್ಣು ಕಾಯಿಲೆಗೆ ಒಳಗಾದವರ ಮೇಲೆ ಬ್ಲೀಚಿಂಗ್ ಪೌಡರ್ ಹಾಕಿ ನೆಲ ಉಜ್ಜುವ ಬ್ರಷ್‍ಗಳಿಂದ ಉಜ್ಜಿ- ಹಾಗೂ ಬದುಕುಳಿದವರನ್ನು ತಂದು ತಮ್ಮ ಸೇವೆ ಮಾಡಿಸಿಕೊಳ್ಳುವ ಸ್ಲೇವ್ಸ್‌ಗಳನ್ನಾಗಿಸಿಕೊಂಡರು. ತಮ್ಮ ಬರ್ಬರತೆಯನ್ನು ಮರೆಮಾಚಿ ತಾವೇ ನಾಗರಿಕರು ಎಂಬಂತೆ ಜಗತ್ತನ್ನು ನಂಬಿಸಿದರು. ಇದನ್ನು ಆಫ್ರಿಕನ್ ಅಮೆರಿಕನ್ ಅಲೆಕ್ಸ್ ಹ್ಯಾಲಿ ತಮ್ಮ ಕಾದಂಬರಿ ‘ರೂಟ್ಸ್’ಲ್ಲಿ ಬರೆದಾಗ ಅದು ಜಗತ್ತನ್ನೇ ಪ್ರಭಾವಿಸಿತು (ಕನ್ನಡದಲ್ಲಿ ಇದನ್ನು ‘ತಲೆಮಾರು’ ಎಂಬ ಹೆಸರಿನಲ್ಲಿ ಬಂಜಗೆರೆ ಜಯಪ್ರಕಾಶ್ ಅನುವಾದಿಸಿದ್ದಾರೆ).

ಅಲೆಕ್ಸ್‌ನ ಏಳು ತಲೆಮಾರುಗಳ ಹಿಂದಿನ ಪೂರ್ವಜ ಕಿಂಟಾ ಕುಂಟೆಯನ್ನು ಅಪಹರಿಸಿದ್ದು ಮಾತ್ರವಲ್ಲ, ನಾಲ್ಕು ಬಾರಿ ತಪ್ಪಿಸಿಕೊಳ್ಳಲು ಹೊರಟ ಆತನ ಬಲಪಾದವನ್ನು ಅರ್ಧಕ್ಕೆ ಕತ್ತರಿಸಿ ಮತ್ತೆ ತಪ್ಪಿಸಿಕೊಳ್ಳದಂತೆ ಮಾಡಲಾಗಿತ್ತು. ಈ ಕ್ರೌರ್ಯಗಳ ಅರಿವಿದ್ದರೆ ಮಾತ್ರ ನೆಲ್ಸನ್ ಮಂಡೇಲಾ ಅವರ ಗೆಲುವು ನಮ್ಮೊಳಗೆ ಪುಳಕ ಹುಟ್ಟಿಸಲು ಸಾಧ್ಯ.

ನಮ್ಮದೇ ನೆಲದಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲೂ ಎಂತೆಂತಹ ಹಿಂಸಾಚಾರಗಳಾಗಿವೆ ಎಂಬುದನ್ನು ಕಥಿಸಿದ ಅಸಂಖ್ಯ ಕಲಾಕೃತಿಗಳು ನಮ್ಮ ನಡುವೆ ಇವೆ. ಆದರೆ ಅಜ್ಞಾನಿಗಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಫಲ ‘ಭಿಕ್ಷೆ’ಯಾಗಿ ಕಾಣುತ್ತದೆಯೇ ಹೊರತು ತಮ್ಮ ಪ್ರಶಸ್ತಿಗಳು ನಿಜವಾದ ಭಿಕ್ಷೆ ಎಂಬುದು ತಲೆಗೇ ಹೋಗುವುದಿಲ್ಲವೇ? ಈ ಎಲ್ಲವುಗಳ ನೆಪದಲ್ಲಿ ಎಂತಹ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ, ಎಂತಹ ವಿಚಾರಗಳನ್ನು ಮೂಲೆಗೆ ಸರಿಸಲಾಗುತ್ತಿದೆ ಎನ್ನುವುದನ್ನು ಮಾತ್ರ ಸೂಕ್ಷ್ಮವಾಗಿ ಅವಲೋಕಿಸುತ್ತಲೇ ಇರಬೇಕು. ಯಾಕೆಂದರೆ, ಸಾಧಾರಣವಾಗಿ ಅಧಿಕಾರಶಾಹಿಯನ್ನು ಹೇರಿಕೆ ಮಾಡಲು ನೆಲ ಹದ ಮಾಡಿಕೊಳ್ಳಲು ಬೇಕಾದ ಸಂಗತಿಗಳನ್ನೇ ಮುನ್ನೆಲೆಗೆ ತರುವುದು. ಹೀಗೆ ಮಾಡಿ ಮನಸ್ಸುಗಳನ್ನು, ಮನುಷ್ಯರನ್ನು ವಿಭಜಿಸಿ ಅವರವರೇ ಹೊಡೆದಾಡಿಕೊಳ್ಳುವಂತೆ ಮಾಡುವ ತಂತ್ರ ಪುರಾತನವಾದುದು. ಹೀಗಾಗಿಯೇ ಯಾವುದೇ ಚಳವಳಿ ಅಥವಾ ಹೋರಾಟವನ್ನು ಸಾಂಫಿಕವಾಗಿ ಕಟ್ಟಲು ವಿಪರೀತ ಶ್ರಮ ಹಾಕಬೇಕಾಗುತ್ತದೆ.

ಬಿಳಿಯರ ವಿರುದ್ಧದ ಕರಿಯರ ಹೋರಾಟವನ್ನು ಕತೆಯಾಗಿ ಉಳ್ಳ ‘ಡಿ ಜಾಂಗೋ’ ಎಂಬ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ. ಇಬ್ಬರು ಕರಿಯ ಗುಲಾಮರನ್ನು ಕುಸ್ತಿಗೆ ಇಳಿಸಿ ಬಿಳಿಯರು ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಇಬ್ಬರಲ್ಲಿ ಒಬ್ಬರು ಇನ್ನೊಬ್ಬನನ್ನು ಸಾಯಿಸುವ ತನಕವೂ ಕುಸ್ತಿ ನಿಲ್ಲಿಸಲು ಬಿಡುವುದೇ ಇಲ್ಲ. ಯಾರು ಸತ್ತರೂ ನಷ್ಟ ಕರಿಯರಿಗೇ. ಸಾಯಿಸಿದವನ ಹೆಸರು ದಾಖಲು ಆಗುವುದೂ ಕರಿಯನದೇ. ಅದೇ ಸಿನಿಮಾದಲ್ಲಿ ಇನ್ನೊಂದೆಡೆ, ಕರಿಯನೊಬ್ಬ ಬಿಳಿಯನ ಪ್ರೀತಿಪಾತ್ರನಾಗಿ ತಾನೇ ಒಂದು ಅಧಿಕಾರ ಕೇಂದ್ರವಾಗಿ ಕರಿಯರ ಮೇಲೆ ಬಿಳಿಯರ ಜೊತೆಗೂಡಿ ಹಿಂಸಿಸುತ್ತಾನೆ. ಇದು ದೂರದ ಕತೆಯಂತೆ ಕಾಣಬಹುದು. ಆದರೆ ಸ್ವಲ್ಪ ಎಚ್ಚರದಿಂದ ನೋಡಿದರೂ ಇದು ನಮ್ಮದೇ ಕಾಲಬುಡದ ಕತ್ತಲೆಯಾಗಿ ಕಾಣಿಸುತ್ತದೆ. ಈ ತಂತ್ರ ತಿಳಿಯದೇ, ಶೋಷಿತರು ಒಗ್ಗೂಡದೇ ಗೆಲುವು ಸಾಧ್ಯವಿಲ್ಲ.

ಒಂದು ವರ್ಷ ಕಾಲ ರೈತರು ದೆಹಲಿಯಲ್ಲಿ ಹೋರಾಟ ಮಾಡಿ, ಮಾಧ್ಯಮಗಳ ಬೆಂಬಲವಿಲ್ಲದೇ, ಎಲ್ಲಾ ಅಪಪ್ರಚಾರಗಳನ್ನು ಮೀರಿ ಒಂದು ಹಂತದ ಗೆಲುವು ಸಾಧಿಸಿದ್ದಾರೆ. ಆಂಧ್ರಪ್ರದೇಶದ ರೈತರೂ ಏಳ್ನೂರು ದಿನಗಳ ಹೋರಾಟದಿಂದ ಸರ್ಕಾರದ ನಿರ್ಧಾರ ಬದಲಿಸುವಂತೆ ಮಾಡಿದ್ದಾರೆ. ಈಚೆಗೆ ಎಲ್ಲರ ಮನ ಗೆದ್ದಿರುವ ‘ಜೈಭೀಮ್’ ಸಿನಿಮಾದಲ್ಲಿ ಬುಡಕಟ್ಟು ಜನರ ಹಕ್ಕುಗಳಿಗಾಗಿ ವಕೀಲನೊಬ್ಬ ಅಚಲವಾಗಿ ಹೋರಾಡಿದ, ಸಂವಿಧಾನದ ಶಕ್ತಿಯನ್ನು ಎತ್ತಿಹಿಡಿದ, ಅಷ್ಟೇ ಅಚಲವಾಗಿ ಯಾವ ಆಮಿಷಕ್ಕೂ ಒಳಗಾಗದೆ ಛಲ ಮೆರೆದ ಹೆಣ್ಣುಮಗಳ ಸಶಕ್ತ ಚಿತ್ರಣವಿದೆ. ಈ ಸಿನಿಮಾ ನಿಜ ಕತೆಯನ್ನೇ ಆಧರಿಸಿರುವಂತಹದು. ತೊಂಬತ್ತರ ದಶಕದ ಈ ಕತೆ ಇಂದು ನಮ್ಮಲ್ಲಿ ಹೊಸ ಉತ್ಸಾಹ ಹುಟ್ಟಿಸುತ್ತದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಎಲ್ಲಾ ಹೋರಾಟದ ಹಿಂದೆ ಒಂದು ವ್ಯವಸ್ಥಿತವಾದ, ಸಾಮುದಾಯಿಕತೆಯಿರುವ, ಪ್ರಾಮಾಣಿಕತೆ ಇರುವ, ತಾವು ಪ್ರತಿನಿಧಿಸುತ್ತಿರುವ ಸಂಗತಿಗಳ ಕುರಿತು ಖಚಿತ ಜ್ಞಾನ ಇರುವ ನಡೆಯಾಗಿ ಇವೆಲ್ಲವೂ ಮುನ್ನಡೆದಿವೆ. ಮತ್ತು ಈ ಎಲ್ಲಾ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಹೋರಾಡಲಾಗಿದೆ. ಜೀವ ಕಳೆದುಕೊಂಡವರ ದೊಡ್ಡ ಯಾದಿ ಇದೆ. ಇಂದಿಗೂ ಹೀಗೆ ತಮ್ಮನ್ನೇ ಸಾಮಾಜಿಕ ಸಮಾನತೆಯ ಹೋರಾಟಕ್ಕಾಗಿ ಮುಡಿಪಾಗಿ ಇಟ್ಟುಕೊಂಡವರ ದೊಡ್ಡ ಪಟ್ಟಿ ಇದೆ. ಆದರೆ ಎಲ್ಲೋ ಬೆರಳೆಣಿಕೆಯಲ್ಲಿ ಬಿಟ್ಟು ಉಳಿದವರ‍್ಯಾರೂ ನಮಗೆ ನಾಯಕ–ನಾಯಕಿಯರಾಗಿ ಕಾಣಿಸುವುದಿಲ್ಲ.

ಜೈಭೀಮ್‌ ಸಿನಿಮಾದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಜಾತಿ, ಧರ್ಮದ ಕಾರಣಕ್ಕಾಗಿ ಅಮಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲು ಪೊಲೀಸರೇ ಯತ್ನಿಸಿದ್ದ ಹಲವು ಪ್ರಕರಣಗಳು ಕರ್ನಾಟಕ ಸೇರಿದಂತೆ ದೇಶದ ಬೇರೆ ಬೇರೆ ಕಡೆ ನಡೆದಿರುವ ಮಾಹಿತಿ ಹೊರಬರಲಾರಂಭಿಸಿದೆ. ವಿಠಲ ಮಲೆಕುಡಿಯ ಎಂಬ ಬುಡಕಟ್ಟು ಹುಡುಗನಿಗೆ ನಕ್ಸಲ್‌ ಹಣೆಪಟ್ಟಿ ಅಂಟಿಸಲಾಗಿತ್ತು. ಇದೀಗ ಆತ ನಿರಪರಾಧಿ ಎಂದು ಕೋರ್ಟ್ ತೀರ್ಪಿತ್ತಿದೆ. ಇವರಿಗೆ ಊರುಗೋಲಾದವರು ದಿನೇಶ್‍ ಹೆಗ್ಡೆ ಉಳೆಪಾಡಿ ಎಂಬ ವಕೀಲ.

ಇದಲ್ಲದೆ, ದಾಖಲೆಗೆ ಸಿಗದ ಇಂತಹ ಸಾವಿರಾರು ಪ್ರಕರಣಗಳು, ಹಿಂಸಾಚಾರಗಳು ನಡೆಯುತ್ತಲೇ ಇರುತ್ತವೆ. ಆದರೆ ಇದ್ಯಾವುದೂ ನಮ್ಮಲ್ಲಿ ಏನನ್ನೂ ಹುಟ್ಟಿಸುವುದಿಲ್ಲ. ಇವರುಗಳ ಕತೆ ಕಲಾಕೃತಿಯೋ ಸಿನಿಮಾವೋ ಆದಾಗ ಮಾತ್ರ ಇವರು ನಮಗೆ ನಾಯಕರೆನಿಸಿ ಪುಳಕ ಹುಟ್ಟಿಸುವ ಈ ವೈಚಿತ್ರ್ಯದ ನಡುವೆಯೂ ಈ ಕಲಾಕೃತಿಗಳು, ನಮ್ಮ ಸುತ್ತಿನ ಹೋರಾಟಗಳು ನಮ್ಮೊಳಗೂ ಕಿಚ್ಚು, ಕೆಚ್ಚು ಉಳಿಸಲು ಸ್ಫೂರ್ತಿ ತುಂಬುತ್ತವಾದ್ದರಿಂದ ಅವು ಅವಶ್ಯಕವೂ ಹೌದು, ಭರವಸೆಗಳೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT