ಶುಕ್ರವಾರ, ಡಿಸೆಂಬರ್ 3, 2021
25 °C

ಪ್ರಜಾವಾಣಿ ಚರ್ಚೆ: ಸಿಬಿಐಗೆ ರಾಜ್ಯವು ಅವಕಾಶ ಕೊಡದಿದ್ದರೆ ತನಿಖೆಗೆ ಅಡ್ಡಿ

ಶಾಂತಿ ಭೂಷಣ್ ಎಚ್. Updated:

ಅಕ್ಷರ ಗಾತ್ರ : | |

ಯಾವುದೇ ತನಿಖಾ ಸಂಸ್ಥೆಯು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಳ್ಳುವುದು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 154 (1)ರ ಪ್ರಕಾರ. ಸಂಜ್ಞೇಯ ಅಪರಾಧಗಳಿಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತವೆ. ತನಿಖಾ ಪ್ರಕ್ರಿಯೆಯನ್ನು ಯಾವುದೇ ತನಿಖಾ ಸಂಸ್ಥೆಯು ನಡೆಸುತ್ತಿದ್ದರೂ ಅದು ಸಿಆರ್‌ಪಿಸಿಯಲ್ಲಿ ವಿವರಿಸಿರುವ ಪ್ರಕಾರವೇ ನಡೆಯಬೇಕು. ಇದು ಕಡ್ಡಾಯ. ಬೇರೆ ಯಾವುದೇ ಪ್ರಕ್ರಿಯೆಯನ್ನು ಅನುಸರಿಸಿ ತನಿಖೆ ಮಾಡಲು ಅವಕಾಶ ಇಲ್ಲ.

ಸಿಆರ್‌ಪಿಸಿಯ ಐದನೆಯ ಅಧ್ಯಾಯದಲ್ಲಿ ಹೇಳಿರುವ ಪ್ರಕಾರ, ತನಿಖಾ ಸಂಸ್ಥೆಯು ತನಿಖೆಗಾಗಿ ಯಾವುದೇ ವ್ಯಕ್ತಿಗೆ ನೋಟಿಸ್ ನೀಡಬಹುದು ಮತ್ತು ಆತನನ್ನು ದಸ್ತಗಿರಿ ಮಾಡಬಹುದು. ಅಧ್ಯಾಯ 13ರ (ಇದು ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿದ ನ್ಯಾಯಾಲಯಗಳ ವ್ಯಾಪ್ತಿ ಮತ್ತು ವಿಚಾರಣಾ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿದೆ) ಅನ್ವಯ, ಅಪರಾಧವು ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ನಡೆದಿದ್ದರೆ, ಅಲ್ಲಿಗೆ ಹೋಗಿ ತನಿಖೆ ನಡೆಸುವ ಅಧಿಕಾರ ಇರುತ್ತದೆ.

ಇದರಲ್ಲಿನ ಸೆಕ್ಷನ್ 178(ಸಿ) ತನಿಖೆಯ ಸ್ಥಳದ ಬಗ್ಗೆ ಕೆಲವು ವಿವರಗಳನ್ನು ನೀಡುತ್ತದೆ. ತನಿಖೆ ನಡೆಸಬೇಕಾದ ಸ್ಥಳವು ಬೇರೆ ಯಾವುದೋ ರಾಜ್ಯ ಆಗಿದ್ದಲ್ಲಿ, ಅಲ್ಲಿನ ರಾಜ್ಯ ಸರ್ಕಾರ ಆ ನಿರ್ದಿಷ್ಟ ಅಪರಾಧದ ಬಗ್ಗೆ ತನಿಖೆ ನಡೆಸಲು ತಾನು ಅನುಮತಿ ನೀಡುವುದಿಲ್ಲ ಎಂದು ಹೇಳಲಾಗದು. ದೆಹಲಿ ವಿಶೇಷ ಪೊಲೀಸ್ ಕಾಯ್ದೆಯ (ಡಿಎಸ್‌ಪಿಇ ಕಾಯ್ದೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದ್ದರೆ, ತನಿಖೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳುವುದು ತನಿಖೆಯ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದಂತೆ ಆಗುತ್ತದೆ.

ಪೊಲೀಸರು ಅಥವಾ ಇತರ ಯಾವುದೇ ವಿಶೇಷ ತನಿಖಾ ದಳ (ಸಿಬಿಐ, ಎನ್‌ಐಎ, ಇ.ಡಿ. ಇತ್ಯಾದಿ) ಸಿಆರ್‌ಪಿಸಿ ಅಡಿಯಲ್ಲಿಯೇ ತನಿಖೆಯನ್ನು ಕೈಗೊಂಡು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯದ ವ್ಯಾಪ್ತಿಯಲ್ಲಿ ಸಲ್ಲಿಸಬೇಕು. ಯಾವುದೇ ತನಿಖಾದಳದ ಕೆಲಸವು ಸೂಕ್ತವಾದ ಸಾಕ್ಷ್ಯವನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದೆ ಇರಿಸುವುದಾಗಿರುತ್ತದೆ. ತನಿಖೆಗೆ ಅನುಮತಿ ನಿರಾಕರಿಸುವುದರಿಂದ ಸಾಕ್ಷ್ಯ ಸಂಗ್ರಹಿಸಲು, ದಾಖಲೆಗಳನ್ನು ಸಂಗ್ರಹಿಸಲು, ಅವುಗಳನ್ನು ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ಹಾಜರುಪಡಿಸಲು ಅಡ್ಡಿ ಉಂಟಾಗುತ್ತದೆ. ತನಿಖೆಯನ್ನು ಹತ್ತಿಕ್ಕುವುದಕ್ಕೆ ಸಮ ಅದು. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವೇ ಸಿಬಿಐ ತನಿಖೆಗೆ ಆದೇಶ ನೀಡುವುದಿದೆ. ಅಂತಹ ಸಂದರ್ಭಗಳಲ್ಲಿಯಂತೂ ಯಾರಿಗೂ ಅವರಿಗೆ ಅನುಮತಿ ನಿರಾಕರಿಸಲು ಆಗದು. ಡಿಎಸ್‌ಪಿಇ ಕಾಯ್ದೆಯು, ಅಪರಾಧ ಎಲ್ಲಿಯೇ ನಡೆದಿದ್ದರೂ ತನಿಖೆ ನಡೆಸಬೇಕು ಎನ್ನುತ್ತದೆ.

ಕೆಲವು ಪ್ರಕರಣಗಳ ತನಿಖೆಗೆ ಅವಕಾಶ ಕೊಡುತ್ತೇವೆ, ಇನ್ನು ಕೆಲವು ಪ್ರಕರಣಗಳ ತನಿಖೆಗೆ ಅವಕಾಶ ಕೊಡಲಾಗದು ಎಂಬ ನಿಲುವು ಕಾನೂನಿನ ಉಲ್ಲಂಘನೆಯೇ ಆಗುತ್ತದೆ.

ಸಂವಿಧಾನದ ಏಳನೆಯ ಪರಿಚ್ಛೇದದಲ್ಲಿ ಇರುವ ಕೆಲವು ವಿವರಣೆಗಳ ಬಗ್ಗೆಯೂ ಇಲ್ಲಿ ಉಲ್ಲೇಖಿಸಬಹುದು. ರಾಜ್ಯ ಸರ್ಕಾರಗಳು ಹಾಗೂ ಅವುಗಳ ಅಧೀನದ ತನಿಖಾ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಮೀರಿದ ವಿಷಯಗಳ ಬಗ್ಗೆ ತನಿಖೆ ನಡೆಸುವ ವಿಶೇಷ ಅಧಿಕಾರವನ್ನು ಸಿಬಿಐಗೆ ನೀಡಲಾಗಿದೆ. 

ಎಂ. ಬಾಲಕೃಷ್ಣ ರೆಡ್ಡಿ ಮತ್ತು ಸಿಬಿಐ ನಡುವಿನ ಪ್ರಕರಣವು ಇಲ್ಲಿ ಸ್ಮರಣೀಯ. ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್‌ 5 ಹಾಗೂ 6ರ ಅನ್ವಯ, ‘ಕೇಂದ್ರಾಡಳಿತ ಪ್ರದೇಶಗಳು ಹಾಗೂ ರೈಲ್ವೆಗೆ ಸಂಬಂಧಿಸಿದ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯಗಳ ವ್ಯಾಪ್ತಿಯಲ್ಲಿ ಸಿಬಿಐ ಕಾರ್ಯ ನಿರ್ವಹಿಸಬೇಕು ಎಂದಾದರೆ ರಾಜ್ಯ ಸರ್ಕಾರಗಳ ಅನುಮತಿ ಅಗತ್ಯ’. ಆದರೆ, ರಾಜ್ಯವೊಂದರಲ್ಲಿ ತನಿಖೆ ನಡೆಸಲು ಅಲ್ಲಿನ ಸರ್ಕಾರವು ಅನುಮತಿಯನ್ನು ಹಿಂದಕ್ಕೆ ಪಡೆದರೂ, ಡಿಎಸ್‌ಪಿಇ ಕಾಯ್ದೆಯ ಅಡಿಯಲ್ಲಿ ರೈಲ್ವೆಗೆ ಸಂಬಂಧಿಸಿದ ಪ್ರದೇಶಗಳಲ್ಲಿ ತನಿಖೆ ನಡೆಸುವ ಅಧಿಕಾರವು ಸಿಬಿಐ ಬಳಿಯಲ್ಲಿ ಉಳಿದಿರುತ್ತದೆ. ಸಿಬಿಐ ಅಧಿಕಾರ ವ್ಯಾಪ್ತಿಯಲ್ಲಿ ‘ರೈಲ್ವೆಗೆ ಸಂಬಂಧಿಸಿದ ಪ್ರದೇಶ’ಗಳನ್ನು ಸೇರಿಸಿದ್ದರ ಹಿಂದೆ ಕಾರಣ ಇದೆ. ಈ ಪ್ರದೇಶಗಳು ದೇಶದ ಉದ್ದಗಲಕ್ಕೂ ಹರಡಿಕೊಂಡಿವೆ. ಬೇರೆ ಬೇರೆ ರಾಜ್ಯಗಳ ಪ್ರದೇಶಗಳ ಒಳಗೆಯೂ ಇವು ಚಾಚಿಕೊಂಡಿವೆ. ಹಾಗಾಗಿ, ಪ್ರಕರಣಗಳ ತನಿಖೆಯ ಮೊದಲು ಸಿಬಿಐ ಪ್ರತಿ ರಾಜ್ಯ ಸರ್ಕಾರದಿಂದಲೂ ಅನುಮತಿ ಕೋರಬೇಕು ಎನ್ನುವುದು ಡಿಎಸ್‌ಪಿಇ ಕಾಯ್ದೆಯ ಮೂಲ ಆಶಯವನ್ನು ಹಾಳುಗೆಡವಿದಂತೆ.

ರಾಜ್ಯಗಳ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಮೊದಲು ಸಿಬಿಐ ರಾಜ್ಯ ಸರ್ಕಾರಗಳ ಅನುಮತಿ ಪಡೆದುಕೊಂಡಿರಬೇಕು ಎಂದು ಡಿಎಸ್‌ಪಿಇ ಕಾಯ್ದೆಯ ಸೆಕ್ಷನ್‌ 6ರಲ್ಲಿ ಹೇಳಿರುವ ಮಾತು, ಕಡ್ಡಾಯ ಸ್ವರೂಪದ್ದಲ್ಲ. ಅದು ಒಂದು ನಿರ್ದೇಶನದ ಸ್ವರೂಪದ್ದು, ಅಷ್ಟೇ.


ಶಾಂತಿ ಭೂಷಣ್ ಎಚ್.

ದೇಶದ ಇತರ ಎಲ್ಲ ತನಿಖಾ ಸಂಸ್ಥೆಗಳಿಗಿಂತಲೂ ಸಿಬಿಐ ಭಿನ್ನವಾಗಿ ನಿಲ್ಲುತ್ತದೆ. ತನಿಖೆಯ ಪ್ರತಿ ಆಯಾಮಕ್ಕೆ ಅನ್ವಯ ಆಗುವಂತೆ ಸಿಬಿಐ ನಿರ್ದಿಷ್ಟ ಕಾರ್ಯಾಚರಣೆ ಪ್ರಕ್ರಿಯೆಗಳನ್ನು (ಎಸ್‌ಒಪಿ) ರೂಪಿಸಿಕೊಂಡಿದೆ. ಈ ಎಸ್‌ಒಪಿಗಳು, ತನಿಖೆಯನ್ನು ನಡೆಸುವ ಬಗೆಯು ನ್ಯಾಯಬದ್ಧವಾಗಿ ಇರುವಂತೆ ನೋಡಿಕೊಳ್ಳುತ್ತವೆ. ಸಿಬಿಐ ನಡೆಸುವ ತನಿಖೆಯ ಮೇಲ್ವಿಚಾರಣೆಗೆ ಬಹುಹಂತಗಳ ವ್ಯವಸ್ಥೆಯೊಂದು ಇದೆ. ಸಿಬಿಐನ ಒಟ್ಟು ಕಾರ್ಯವೈಖರಿಯ ಮೇಲ್ವಿಚಾರಣೆಗೆ ಕೂಡ ಒಂದು ವ್ಯವಸ್ಥೆ ಇದೆ. ಇದು ತನಿಖೆಯಲ್ಲಿ ಗರಿಷ್ಠ ಪ್ರಮಾಣದ ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಾತರಿಪಡಿಸುತ್ತದೆ.‌

ಲೇಖಕ: ಕರ್ನಾಟಕ ಹೈಕೋರ್ಟ್‌ನಲ್ಲಿ ಸಹಾಯಕ ಸಾಲಿಸಿಟರ್ ಜನರಲ್

ನಿರೂಪಣೆ: ವಿಜಯ್‌ ಜೋಷಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು