ಸೋಮವಾರ, ಮಾರ್ಚ್ 27, 2023
33 °C
ಅಕ್ರಮ ಹಂಚಿಕೆ ಹಾಗೂ ಅತಿಕ್ರಮಣಕ್ಕೆ ಬಲಿಯಾಗುತ್ತಿರುವ ‘ಗ್ರಾಮ ಸಾಮೂಹಿಕ ಭೂಮಿ’

ವಿಶ್ಲೇಷಣೆ: ಮಲೆನಾಡಿನ ಮಾಯಾಮೃಗ ಶಿಕಾರಿ!

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

PV Photo

ಕೊರೊನಾ ವೈರಸ್ ಶ್ವಾಸಕೋಶವನ್ನೆಲ್ಲ ಆಕ್ರಮಿಸಿ, ಆರೋಗ್ಯ ವ್ಯವಸ್ಥೆಯನ್ನೇ ಉಸಿರುಗಟ್ಟಿಸುತ್ತಿದೆಯಲ್ಲವೇ? ನೈಸರ್ಗಿಕ ಸಂಪನ್ಮೂಲಗಳನ್ನು ಅವೈಜ್ಞಾನಿಕವಾಗಿ ನಿರ್ವಹಿಸುವ ಅವಿವೇಕವೆಂಬ ವೈರಸ್, ನಾಡಿನ ಪುಪ್ಪುಸದಂತಿರುವ ಮಲೆನಾಡನ್ನು ನಾಶ ಮಾಡಿ ಸೃಷ್ಟಿಸುತ್ತಿರುವ ಅನಾರೋಗ್ಯದ ಲಕ್ಷಣಗಳೂ ಢಾಳಾಗಿ ಗೋಚರಿಸುತ್ತಿವೆ!

ಈ ಅವಸ್ಥೆಯನ್ನು ನೋಡಲು ಮಸೂರವೇನೂ ಬೇಕಿಲ್ಲ. ಪರಿಸರದ ಹದದಲ್ಲಿದ್ದ ಲಯ ತಪ್ಪಿ, ಮಲೆನಾಡಿನ ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಜೇನುಕೃಷಿ, ಒಳನೀರು ಮೀನುಗಾರಿಕೆಗಳ ಉತ್ಪಾದಕತೆ ಕುಸಿಯುತ್ತಿರುವುದನ್ನು ಅಧ್ಯಯನಗಳು ತೋರಿಸುತ್ತಿವೆ. ಪಶ್ಚಿಮಕ್ಕೆ ಹರಿಯುವ ನದಿತೊರೆಗಳಲ್ಲಿ ವರ್ಷದ ಹೆಚ್ಚಿನ ಸಮಯ ನೀರಿರದೆ, ಪೋಷಕಾಂಶಯುಕ್ತ ಸಿಹಿನೀರು ಸಮುದ್ರ ಸೇರದೆ ಮೀನುಗಳ ಸಂತತಿ ಕುಸಿದು, ಮತ್ಸ್ಯಕ್ಷಾಮ ತಲೆದೋರುತ್ತಿದೆ. ಕರಾವಳಿಯ ಒಳಪ್ರದೇಶದ ಜಮೀನುಗಳಿಗೆ ಸಾಗರದ ಉಪ್ಪುನೀರು ನುಗ್ಗಿ, ಭತ್ತ ಹಾಗೂ ತರಕಾರಿಗಳ ಪಾರಂಪರಿಕ ಕೃಷಿ ಕಣ್ಮರೆಯಾಗುತ್ತಿದೆ.

ಇತ್ತ, ಪೂರ್ವಕ್ಕೆ ಹರಿಯುವ ಸಹ್ಯಾದ್ರಿಮೂಲದ ನದಿಗಳೆಲ್ಲ ಬತ್ತಿ, ಬಯಲುನಾಡಿನ ಜಲಮೂಲಗಳೆಲ್ಲ ಒಣಗಿ, ಜೀವಪೋಷಕ ಒಕ್ಕಲುತನ ಹಾಗೂ ಹೈನುಗಾರಿಕೆ ಅಧ್ವಾನವಾಗುತ್ತಿವೆ. ನಾಡಿನ ಜಲ ಮತ್ತು ಹವಾಮಾನ ಸುರಕ್ಷತೆಯ ಆಧಾರಸ್ತಂಭವಾಗಿರುವ ಮಲೆನಾಡಿನ ಸೂಕ್ಷ್ಮಪರಿಸರ ನಾಶವಾಗುತ್ತಿರುವುದರ ಪರಿಣಾಮವಿದು.

ನೆಲ-ಜಲ, ಕಾಡಿನ ರಕ್ಷಣೆಗೆಂದು ಇರುವ ಎಷ್ಟೆಲ್ಲ ಕಾನೂನುಗಳು, ಸರ್ಕಾರಿ ಇಲಾಖೆಗಳು, ಭಾರಿ ಅನುದಾನದ ಯೋಜನೆಗಳು, ಮಾರ್ಗದರ್ಶನಕ್ಕೆಂದೇ ಇರುವ ತಜ್ಞರು, ಸಂಶೋಧನಾ ಸಂಸ್ಥೆಗಳು-ಎಲ್ಲ ಇದ್ದೂ ಹೀಗೇಕಾಗುತ್ತಿದೆ? ಈ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಪರಿಶೀಲಿಸಿದರೆ, ಅಂತಿಮವಾಗಿ ದೊರಕುವ ಮೂಲಭೂತ ಕಾರಣವೊಂದೇ- ರಾಜ್ಯದಲ್ಲಿ ವೈಜ್ಞಾನಿಕ ಭೂಬಳಕೆ ನೀತಿಯೇ ಇರದಿರುವುದು!

ಪ್ರದೇಶವೊಂದರ ಮಣ್ಣಿನ ರಚನೆ, ಭೂಮೇಲ್ಮೈ ಪರಿಸರ, ಹಸಿರಿನ ಹೊದಿಕೆ, ಜೀವವೈವಿಧ್ಯದ ಹರವು, ನೀರಿನ ಲಭ್ಯತೆ, ಹವಾಗುಣ, ಕೃಷಿ ಸಂಸ್ಕೃತಿ- ಇವನ್ನೆಲ್ಲ ಆಧರಿಸಿ, ಭೂಸಂಪತ್ತನ್ನು ಸೂಕ್ತವಾಗಿ ನಿರ್ವಹಿಸುವ ನಿಖರ ಆಡಳಿತ ಸೂತ್ರಗಳಿರಬೇಕಿತ್ತು. ಕೃಷಿಭೂಮಿ, ನದಿ-ತೊರೆ, ಬೆಟ್ಟ-ಗುಡ್ಡ, ಕೆರೆ-ಗೋಮಾಳ, ಕಾಡು-ಕಣಿವೆಗಳ ವ್ಯವಸ್ಥಿತ ನಿರ್ವಹಣೆ ಆಗ ಸಾಧ್ಯವಾಗುತ್ತಿತ್ತು. ನೆಲಬಳಕೆಗೆ ಅಂಥ ಸ್ಪಷ್ಟ ನೀತಿಯೇ ಇಲ್ಲದಾಗಿ, ನಿಸರ್ಗದ ರಕ್ಷಣೆಯ ಬದಲು ಲೂಟಿಯಾಗುತ್ತಿದೆ. ಎಲ್ಲೆ ಮೀರಿರುವ ಈ ದುರಂತಕ್ಕೆ, ಸರ್ಕಾರಿ ನೀತಿಯೇ ಮೂಲಕಾರಣ ಆಗಿರುವುದು ನೋವಿನ ಸಂಗತಿಯಲ್ಲವೇ?

ಗ್ರಾಮಗಳಲ್ಲಿರುವ ‘ಸಾಮೂಹಿಕಭೂಮಿ’ಯ ಇಂದಿನ ಪರಿಸ್ಥಿತಿ ಇದಕ್ಕೆ ಉತ್ತಮ ನಿದರ್ಶನ ಆಗಬಲ್ಲದು. ರಾಜ್ಯದ ಇತರೆಡೆಯ ಹಾಗೆ ಮಲೆನಾಡಿನಲ್ಲೂ ವಿಸ್ತಾರವಾದ ಸಾಮೂಹಿಕ ಭೂಮಿಯಿದೆ. ಕೃಷಿಭೂಮಿ ಹಾಗೂ ಕಾಡಿಗಿಂತ ಭಿನ್ನವಾದ, ಸಮುದಾಯದ ಬಳಕೆಗೆ ಮೀಸಲಿರುವ ಸಮೃದ್ಧ ನೈಸರ್ಗಿಕ ಪ್ರದೇಶವಿದು. ಅವು ಗೋಮಾಳ, ಕುರುಚಲು ಕಾಡು, ಕಾನು ಇತ್ಯಾದಿ ಸ್ವರೂಪದಲ್ಲಿವೆ. ಜಾನುವಾರುಗಳ ಮೇವು, ಉರುವಲು, ಕಾಡಿನ ಹಣ್ಣುಹಂಪಲುಗಳು, ಜೇನು ಇತ್ಯಾದಿ ನಿಸರ್ಗದ ಉತ್ಪನ್ನ ಹಾಗೂ ಸೇವೆಗಳನ್ನೆಲ್ಲ ಒದಗಿಸಿ, ಹಳ್ಳಿಗರನ್ನು ಸಲಹುವ ರಕ್ಷಣಾಪೊರೆಯದು. ಅರಣ್ಯದಿಂದ ಹೊಲಕ್ಕೆ ಕಾಡುಪ್ರಾಣಿಗಳ ದಾಳಿ ತಡೆಯುವ ‘ಹಸಿರುಬೇಲಿ’ಯೂ ಹೌದು. ತನ್ನೊಡಲಿನ ಅಸಂಖ್ಯ ಹೊಳೆ-ಕೆರೆಗಳಿಂದ ನೀರು ಒದಗಿಸುವ ಜಲಮೂಲ ಸಹ. ಹೀಗಾಗಿಯೇ, ಈ ಸಮುದಾಯ ಸಂಪತ್ತಿನ ರಕ್ಷಣೆಗೆ ಮಹತ್ವವಿರುವುದು.

ಕೃಷಿಭೂಮಿಯು ಖಾಸಗಿ ಸ್ವತ್ತಾದರೆ, ಕಾಡು ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ದೇಶದ ಸಂಪತ್ತು. ಇವುಗಳ ನಡುವಿನ ಹಸಿರುವಲಯವಾದ ಈ ಸಾಮೂಹಿಕಭೂಮಿಯ ಮಾಲೀಕತ್ವ ಕಂದಾಯ ಇಲಾಖೆಯದ್ದು. ಆದರೆ, ದೂರದೃಷ್ಟಿಯಿರದ ನಿರ್ವಹಣಾ ನೀತಿಗೆ, ಆಡಳಿತದ ಭ್ರಷ್ಟಾಚಾರವೂ ಜೊತೆಯಾಗಿ, ಕಳೆದ ಮೂರು ದಶಕಗಳಿಂದ ಇದು ಕರಗುತ್ತಲೇ ಇದೆ. ಆ ಮೂಲಕ, ನೆರೆ ಹಾಗೂ ಬರಗಳ ವಿಷಚಕ್ರಕ್ಕೆ ನಾಡು ಸಿಲುಕಿಕೊಳ್ಳುವ ‘ಪರಿಸರ ತುರ್ತುಪರಿಸ್ಥಿತಿ’ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರಗಳು ಎಸಗುತ್ತಿರುವ ಎರಡು ಪ್ರಮುಖ ಪ್ರಮಾದಗಳನ್ನು ಗಮನಿಸಬೇಕಿದೆ.

ಮೊದಲಿನದು, ಉದ್ಯಮ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಾಮೂಹಿಕಭೂಮಿಯನ್ನು ಸರ್ಕಾರವು ವಿವೇಕವಿಲ್ಲದೆ ನೀಡುತ್ತಿರುವುದು. ಗಣಿಗಾರಿಕೆ, ಏಕಸಸ್ಯ ನೆಡುತೋಪು, ಕೈಗಾರಿಕೆ, ವಾಣಿಜ್ಯ ಬಡಾವಣೆ- ಹೀಗೆ ಸಾಗುತ್ತದೆ ಈ ಪಟ್ಟಿ. ಅರಣ್ಯ ಪ್ರದೇಶಗಳ ಜೊತೆಗೆ, ಈ ಸಮುದಾಯಭೂಮಿಯ ಹಸಿರೂ ಕಣ್ಮರೆಯಾಗುತ್ತಿರುವುದರಿಂದ, ನೀರಿನ ಕೊರತೆ ಹಾಗೂ ಮಾನವ- ಕಾಡುಪ್ರಾಣಿ ಸಂಘರ್ಷಗಳು ಹೆಚ್ಚುತ್ತಿರುವುದನ್ನು ಸಂಶೋಧನೆಗಳು ದಾಖಲಿಸುತ್ತಿವೆ. ಹಲವು ತಜ್ಞ ಸಮಿತಿಗಳು, ವಿಜ್ಞಾನಿಗಳು ಹಾಗೂ ರೈತ ಸಂಘಟನೆಗಳವರು ಈ ಕುರಿತು ಎಚ್ಚರಿಸುತ್ತಲೂ ಇದ್ದಾರೆ. ಕೈಗಾರಿಕೆ, ಹೆದ್ದಾರಿ ವಿಸ್ತರಣೆ, ಹೊಸ ರೈಲು ಅಥವಾ ವಿದ್ಯುತ್‌ ಮಾರ್ಗಗಳಂಥ ಕಾಡು ಸೀಳುವ ಯೋಜನೆಗಳ ಅನುಷ್ಠಾನಕ್ಕಾಗಿ, ವಿಸ್ತಾರವಾದ ವನ್ಯಪ್ರದೇಶಗಳನ್ನು ಮಿತಿಮೀರಿ ಬಳಸುತ್ತಿರುವ ಅಪಾಯದ ಕುರಿತು, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ‘ಉನ್ನತಾಧಿಕಾರ ಸಮಿತಿ’ (ಸಿ.ಇ.ಸಿ.) ವಿಷಾದ ವ್ಯಕ್ತಪಡಿಸಿದೆ. ಇಷ್ಟಾಗ್ಯೂ ಸರ್ಕಾರಿ ನೀತಿ ಬದಲಾಗುತ್ತಿಲ್ಲ. ಬದಲಾಗಿ, ಈವರೆಗೂ ಗುತ್ತಿಗೆ ಆಧಾರದಲ್ಲಿ ನೀಡುತ್ತಿದ್ದ ಭೂಮಿಯನ್ನು, ಇದೀಗ ಉದ್ದಿಮೆಗಳಿಗೇ ಮಾರಿಬಿಡುವ ಅಪಾಯಕಾರಿ ನಿಲುವಿಗೆ ಸರ್ಕಾರ ಬಂದು ತಲುಪಿದೆ!

ಎರಡನೆಯದು, ಸಾಮೂಹಿಕ ಸಂಪತ್ತನ್ನು ಖಾಸಗಿ ಆಸ್ತಿಯನ್ನಾಗಿಸಿಕೊಳ್ಳಲು ಹಲವರಿಗೆ ಸರ್ಕಾರವೇ ಅನುವು ಮಾಡಿಕೊಡುತ್ತಿರುವ ಸಂಗತಿ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ ಜಿಲ್ಲೆಗಳಲ್ಲೆಲ್ಲ ರಾತ್ರೋರಾತ್ರಿ ಹತ್ತಿಪ್ಪತ್ತು ಎಕರೆ ನೆಲಸವರಿ, ಬೇಲಿ ಹಾಕಿ, ಲಾಗಾಯ್ತಿನಿಂದ ಉಳುಮೆ ಮಾಡುತ್ತಿರುವಂತೆ ಅಥವಾ ಸ್ವಾತಂತ್ರ್ಯಪೂರ್ವದ ಆಡಳಿತ ನೀಡಿದ್ದ ಕೆಲವು ಸವಲತ್ತುಗಳನ್ನೇ ಹಕ್ಕೆಂದು ತಿದ್ದಿ ಸುಳ್ಳುದಾಖಲೆ ಸೃಷ್ಟಿಸಿ, ಹಕ್ಕುಪತ್ರ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಲೆಮಾರುಗಳಿಂದ ಉಳುಮೆ ಮಾಡಿಯೂ ಭೂ-ಒಡೆತನ ಇರದ ಬಡವರಿಗಾಗಿ ರೂಪಿಸಿರುವ ‘ಬಗರ್‌ಹುಕುಂ’ ಕಾಯ್ದೆಯನ್ನು ದುರುಪಯೋಗ ಮಾಡಿ, ಬಲಾಢ್ಯರೂ ನೂರಾರು ಎಕರೆ ಸರ್ಕಾರಿ ಕಂದಾಯಭೂಮಿಯನ್ನು ಆಕ್ರಮಿಸುತ್ತಿರುವುದು ನಿತ್ಯಸಂಗತಿಯಾಗುತ್ತಿದೆ. ಅಧಿಕಾರ ರಾಜಕಾರಣ ಹಾಗೂ ಆಡಳಿತದ ಭ್ರಷ್ಟಾಚಾರದ ನೆರವಿಲ್ಲದೆ ಇದು ಸಾಧ್ಯವೇ?

ಆದರೆ, ಸರ್ಕಾರದ ಸ್ಪಂದನೆಯಾದರೂ ಏನು? ಕಂದಾಯ ಇಲಾಖೆಯು ‘ಸಿ’ ಮತ್ತು ‘ಡಿ’ ಎಂದು ವರ್ಗೀಕರಿಸುವ ಸಾಮೂಹಿಕಭೂಮಿಗಳನ್ನು ಉದ್ಯಮ ಗಳಿಗೆ ಬಿಟ್ಟುಕೊಡುತ್ತಿದೆ. ‘ಬಗರ್‌ಹುಕುಂ’ ಅರ್ಜಿ ಸಲ್ಲಿಸುವ ಗಡುವನ್ನೇ ಪದೇಪದೇ ವಿಸ್ತರಿಸುತ್ತಿರುವುದರಿಂದ, ಹೊಸದಾಗಿ ಒತ್ತುವರಿಗಳಾಗುತ್ತಿವೆ. ಸಾರ್ವಜನಿಕ ಭೂಮಿಯ ರಕ್ಷಣೆಗೆಂದೇ 2014ರಲ್ಲಿ ಜಾರಿಗೆ ಬಂದ ‘ಕರ್ನಾಟಕ ಭೂಕಬಳಿಕೆ ನಿಯಂತ್ರಣ ಕಾಯ್ದೆ’ಯನ್ನು ನಿಶ್ಶಕ್ತಗೊಳಿಸಲು ರಾಜಕಾರಣವೆಲ್ಲ ಪಕ್ಷಮೀರಿ ಒಂದಾಗುತ್ತಿದೆ!

ಇನ್ನು ಬೆಟ್ಟ, ಕುಮ್ಕಿ, ಕಾವಲ್, ಬಾಣೆ, ಕಾಣೆ, ಪೈಸಾರಿ, ಜಮ್ಮಾ ಇತ್ಯಾದಿ ಹೆಸರಿನಡಿ, ಸ್ವಾತಂತ್ರ್ಯಪೂರ್ವದ ಆಡಳಿತಗಳು ರೈತರಿಗೆ ಕೆಲವು ಸವಲತ್ತುಗಳನ್ನು ನೀಡಿರುವ ಸರ್ಕಾರಿ ಕಂದಾಯಭೂಮಿಗಳಿವೆ. ಈ ಸಾಮೂಹಿಕಭೂಮಿ ಅರಣ್ಯಗಳಲ್ಲೂ ಹಲವರು ಈಗ ಮಾಲೀಕತ್ವ ಸಾಧಿಸುತ್ತಿದ್ದಾರೆ! ಸುಪ್ರೀಂ ಕೋರ್ಟೇನೋ ಅವನ್ನು ‘ಪರಿಭಾವಿತ ಅರಣ್ಯ’ (ಡೀಮ್ಡ್) ತತ್ವದಡಿ ರಕ್ಷಿಸಲು ಪ್ರಯತ್ನಿಸುತ್ತಿದೆ. ಆದರೆ, ರಾಜ್ಯದಲ್ಲಿ 2010ರಲ್ಲಿದ್ದ ಸುಮಾರು ಹತ್ತು ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವನ್ನು, 2017ರಲ್ಲಿ ಸರ್ಕಾರ 3.30 ಲಕ್ಷ ಹೆಕ್ಟೇರಿಗೆ ಇಳಿಸಿತು. ಇದೀಗ ನ್ಯಾಯಾಲಯಕ್ಕೆ ಸಲ್ಲಿಸಬೇಕಿರುವ ಅಂತಿಮ ಪರಿಷ್ಕೃತ ಪಟ್ಟಿಯಲ್ಲಿ, ಅಳಿದುಳಿದಿರುವ ಈ ಸಾಮೂಹಿಕಭೂಮಿ ಪ್ರಕಾರಗಳನ್ನೇ ಕೈಬಿಡಲು ಮುಂದಾಗಿದೆ! ದುರಂತದೆಡೆಗೆ ಒಯ್ಯುವ ನಿರ್ಧಾರವಿದು.

ಕಾಡು ಹಾಗೂ ಸಾಮೂಹಿಕಭೂಮಿಯು ಜನಜೀವನ ಕಾಯುವ ರಕ್ಷಣಾ ಕವಚವಲ್ಲವೇ? ಅವು ನಾಶವಾದರೆ, ಉಳಿಯುವುದು ಅಧಿಕಾರ ರಾಜಕಾರಣವು ಸೃಷ್ಟಿಸುತ್ತಿರುವ ‘ಅಭಿವೃದ್ಧಿ ಮಾಯಾಮೃಗ’ದ ಹಿಂದಿನ ಓಟ ಮಾತ್ರ! ಇದು ಮುಂದೆ ಕೊರೊನಾಕ್ಕೂ ಮಿಗಿಲಾದ ಸಂಕಷ್ಟಗಳನ್ನು ತಂದೀತು.


ಕೇಶವ ಎಚ್. ಕೊರ್ಸೆ

 

 

 

 

 

 

 

 

 

 

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು