ಮಂಗಳವಾರ, ಮೇ 17, 2022
29 °C
ಹೊಸ ವ್ಯಾಕರಣದ ಸಿನಿಮಾ ಬಯಸುವವರಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಕುತೂಹಲ ಹುಟ್ಟಿಸುತ್ತದೆ

‘ಹಗಲು ವೇಷ’ಕ್ಕೆ ನಾನಾ ಅರ್ಥ

ಕೃಷ್ಣಮೂರ್ತಿ ಹನೂರು Updated:

ಅಕ್ಷರ ಗಾತ್ರ : | |

Prajavani

‘ಹಗಲು ವೇಷದ ಯಜಮಾನ’ ಎಂಬ ಪದವನ್ನು ಹೇಗೆ ಬೇಕಾದರೂ ಬಳಸಬಹುದು. ಜನಪದ ಜಗತ್ತಿನಲ್ಲಿ ಇದೊಂದು ಹಗಲು ನಾಟಕ ಆಡುವ ತಂಡ. ಈ ಬಗೆಯ ಜನಪದ ಪ್ರಕಾರ ಸಂಗತಿಯಲ್ಲದೆ ಸಾಂಸಾರಿಕ ಸಮಸ್ಯೆಯಿಂದ ಹಿಡಿದು ಸಾಮಾಜಿಕ, ರಾಜಕಾರಣ ಕಡೆಗೆ ಧಾರ್ಮಿಕ ಜಗತ್ತಿನವರೆಗೆ ಈ ಹಗಲು ವೇಷಕ್ಕೆ ಬೇರೆ ಬೇರೆಯ ಅರ್ಥವ್ಯಾಪ್ತಿ ಇದೆ. ಅದರಿಂದಲೇ ಕವಯಿತ್ರಿ ವೈದೇಹಿಯವರು ತಮ್ಮ ‘ಅಡುಗೆ ಮನೆಯ ಹುಡುಗಿ’ ಎಂಬ ಪ್ರಸಿದ್ಧ ಪದ್ಯದಲ್ಲಿ ‘ಹಗಲು ವೇಷದ ಯಜಮಾನ’ ಎಂಬ ಪದ ಪ್ರಯೋಗಿಸಿದ್ದಾರೆ. ಅಡುಗೆ ಮನೆಯೊಳಗೆ ಕೊಳೆ ತೊಳೆಯುವ ಹುಡುಗಿಯು ಆಕಾಶದಲ್ಲಿ ಹಾರುವ ವಿಮಾನದ ಸದ್ದು, ಹಕ್ಕಿಪಕ್ಷಿಯ ದನಿ ಕೇಳಿ ಹೊರಗೆ ಇಣುಕುವ ಬಯಕೆ ಇದ್ದರೂ ಅದಾಗದೆ ತೊಳಲಾಡುತ್ತಾಳೆ. ಈ ಪಡಿಪಾಟಲ ಅವಧಿ ಎಷ್ಟೆಂದರೆ, ಅಲ್ಲಿಯೇ ವೈದೇಹಿಯವರು ‘ಕ್ರಿ.ಪೂ. ಅಡುಗೆ ಮನೆಯ ಹುಡುಗಿ’ ಎಂಬ ಶತಮಾನ ವ್ಯಾಖ್ಯಾನದರ್ಥದ ಪದಗಳನ್ನು ತಂದಿದ್ದಾರೆ.

ಇಲ್ಲಿ ಈ ಬಗೆಯ ಪೀಠಿಕೆ ಯಾಕೆಂದರೆ, ತೀರಾ ಈಚೆಗೆ ಕಳೆದ ಜನವರಿ ಎರಡನೇ ವಾರ ಮಲಯಾಳಂ ಭಾಷೆಯಲ್ಲಿ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಎಂಬ ಚಲನಚಿತ್ರ ಬಿಡುಗಡೆಯಾಗಿದೆ. ಇದು ಯಾವ ಬಗೆಯ ವ್ಯಾಪಾರಿ ಮೇರುನಟರ ನಟನೆಯಿಲ್ಲದೆ ಮತ್ತು ಇಡೀ ಚಿತ್ರ ಅಡುಗೆ ಮನೆ, ಗಂಡ– ಹೆಂಡಿರ ನಡುವಣ ಮಾತುಕತೆಯಷ್ಟರಲ್ಲೇ ಮುಗಿಯುವಂಥದ್ದು. ಹಾಗೆ ನೋಡಿಕೊಂಡರೆ ಮಲಯಾಳಂ ಚಿತ್ರ ಮಾತ್ರವಲ್ಲದೆ, ಇತ್ತೀಚೆಗೆ ಭಾರತೀಯ ಮತ್ತು ಪಾಶ್ಚಾತ್ಯ ಸಿನಿ ಜಗತ್ತಿನಲ್ಲಿ, ಅದ್ಧೂರಿ ತಾರಾಗಣಗಳ ವ್ಯಾಪಾರಿ ಚಿತ್ರದ ದೃಶ್ಯ ಗದ್ದಲವನ್ನು ನಾಚಿಸುವಂತೆ ಸರಳ ಸಹಜ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಇದು, ಸಿನಿಮಾ ನೋಡುವ ನಮ್ಮ ಯುವಕರ ಆಸಕ್ತಿಯನ್ನು ವ್ಯಾಪಾರೀ ನಟರ ಪರಿಪ್ರೇಕ್ಷ್ಯದಿಂದ ಗಂಭೀರ ಚಿಂತನೆಯ ಕಡೆಗೆ ಕರೆದೊಯ್ಯಬಹುದಾದ ಪ್ರಯತ್ನವೇನೋ ಎನಿಸುತ್ತದೆ.

ಇದೀಗ ಮುಖ್ಯವಾಗಿ ಹೇಳಬೇಕಾದ ಸಂಗತಿಯೆಂದರೆ, ...ಇಂಡಿಯನ್ ಕಿಚನ್ ಕೂಡ ಪುರುಷ ಪಾರಮ್ಯದ ಕುಟುಂಬದೊಳಗಿನ ಅಡುಗೆ ಮನೆಯಲ್ಲಿ ದುಡಿಯುವ ಹುಡುಗಿಯನ್ನು ಕುರಿತಾದ ಶತಮಾನಗಳ ಹಳೆಯ ಸಮಸ್ಯೆಯನ್ನೇ ಹೇಳುವ ಹೊಸ ಚಿತ್ರ. ಇದರಲ್ಲಿ ಅಡುಗೆ ಮನೆಯ ದೃಶ್ಯಗಳೇ ಅದ್ಭುತ ರೂಪಕಗಳಾಗಿಬಿಟ್ಟಿವೆ. ಸಾಮಾನ್ಯವಾಗಿ ಅಕ್ಷರಕ್ಕಿಂತಲೂ ಹೆಣ್ಣುಮಕ್ಕಳ ಬಾಲ್ಯ ತೊಡಗುವುದು ಕುಣಿಯುವ, ಹಾಡುವ, ಇನ್ನಿತರ ಆಟಗಳ ಮೂಲಕವೇ. ಆಶ್ಚರ್ಯವೆಂದರೆ ಸಿನಿಮಾದ ಆರಂಭವೇ ‘ಹಾಡನ್ನು, ಸೌಂದರ್ಯವನ್ನು ಕಳ್ಳತನ’ ಮಾಡುವ ರಾಗ ಸಂಗತಿಯ ಗುನುಗಾಟದಿಂದ ತೊಡಗುತ್ತದೆ. ಅಲ್ಲಿಂದ ನಿರ್ದೇಶಕ ಜೋ ಬೇಬಿ, ಹೆಣ್ಣುಮಕ್ಕಳ ಒಂದು ಗುಂಪು ನೃತ್ಯದಿಂದ ಚಿತ್ರವನ್ನು ಆರಂಭಿಸುತ್ತಾರೆ. ಆ ಸಮೂಹದ ನಾಯಕಿ ನಿಮಿಷಾ ಸುಜಯನ್ ನೃತ್ಯಗೈಯುವಲ್ಲಿಯೇ, ಅದರ ಮುಂದಿನ ದೃಶ್ಯ ಅವಳ ವಿವಾಹ.

ಈ ಸಿನಿಮಾದ ವಸ್ತು ಸಂಗತಿಯೆಲ್ಲ ಸಾಧಾರಣ ಅನ್ನಿಸಿದರೂ ಅಸಾಧಾರಣ. ಯಾವ ಸಂಭಾಷಣೆಯೂ ದೃಶ್ಯವೂ ದೀರ್ಘವಲ್ಲ. ಹಾಗೆಂದು ಹೇಳಿ, ಇದೇನು ಈ ಚಿತ್ರ ಇಷ್ಟು ವೇಗವಾಗಿ ಸಾಗುತ್ತಿದೆಯಲ್ಲ ಅಂತ ಅನಿಸುವುದಿಲ್ಲ. ಯಾಕೆಂದರೆ ಇಲ್ಲಿ ಎಲ್ಲ ದೃಶ್ಯಕ್ಕೂ ಸಾವಯವ ಸಂಬಂಧವಿದೆ. ಪ್ರತಿಯೊಂದು ಸನ್ನಿವೇಶವೂ ಕಿರಿದಾಗಿದ್ದು, ಮಾತು ಸಹ ಕಡಿಮೆ. ಅಂದರೆ ದೃಶ್ಯ ಹಿನ್ನೆಲೆಯ ವಸ್ತು ಸಂಗತಿಯೇ ಚಿತ್ರ ಹೇಳಬೇಕಾದದ್ದನ್ನು ನಿರೂಪಿಸುತ್ತದೆ.

ಚಿತ್ರದ ನಾಯಕ ನಟ ಸುರಾಜ್ ವೆನ್ನಿಯಾರ್ ಮತ್ತು ಅವನನ್ನು ಆಗ ತಾನೇ ವಿವಾಹವಾಗಿ ಬಂದ ನಾಯಕಿ ನಿಮಿಷಾ ಆ ಸಂಪ್ರದಾಯಸ್ಥರ ಅಡುಗೆ ಮನೆ ಮತ್ತು ಅಲ್ಲೇ ಪಕ್ಕದ ಸಿಂಕ್‍ನ ಬಳಿ ಎಂಜಲು ಪಾತ್ರೆ ತೊಳೆಯುವ ಕೆಲಸದಿಂದ ಚಿತ್ರದ ದೃಶ್ಯ ಮುಂದುವರಿಯುತ್ತದೆ. ಅದಾಗಿ ಒಮ್ಮೆ ಈ ಪತಿ-ಪತ್ನಿಯರು ಹೋಟೆಲಿಗೆ ಹೋದಾಗ ಹೆಂಡತಿ ಕೇಳುವ ಒಂದು ಪ್ರಶ್ನೆ: ನೀವು ಮನೆಯಲ್ಲಿ ತಿಂದು ಉಳಿದ ಮಾಂಸದ ಶಿಲ್ಕನ್ನು ಡೈನಿಂಗ್‌ ಟೇಬಲ್‌ನಲ್ಲಿ ತಟ್ಟೆಯ ಪಕ್ಕ ಉಗಿಯುತ್ತೀರಿ; ಈ ಹೋಟೆಲಿನಲ್ಲಿ ಮಾತ್ರ ಡೀಸೆಂಟಾಗಿ ಪ್ಲೇಟಲ್ಲಿ ಉಗಿಯುತ್ತಿದ್ದೀರಲ್ಲ ಎಂಬ ಟೇಬಲ್ ಮ್ಯಾನರ್ಸ್‌ನಿಂದ ಅವರ ಜಗಳ ಆರಂಭವಾಗುತ್ತದೆ. ಅದೇ ರಾತ್ರಿ ಉಂಡು ಮಲಗುವಲ್ಲಿ ಗಂಡ ಕಾಲು ಅಲ್ಲಾಡಿಸುತ್ತ ‘ನೀನು ಹೋಟೆಲಿನಲ್ಲಿ ಕೇಳಿದ ಪ್ರಶ್ನೆಗೆ ಕ್ಷಮೆ ಕೇಳು’ ಎನ್ನುತ್ತಾನೆ. ಆ ಮುಂದೆ ಗಂಡ ಹೆಂಡತಿಯರ ಸಂಲಗ್ನದಲ್ಲಿ ಗಂಡನ ಮುಖವೇ ಕಾಣದೆ, ಹೆಂಡತಿಯ ಜಗ್ಗಾಟದ ದೃಶ್ಯ ಮಾತ್ರ ಬೇರಾವ ಚಿತ್ರದಲ್ಲೂ ಕಂಡಂತಿಲ್ಲ. ಹೀಗಾಗಿ ಸಿನಿಮಾದ ಒಂದೊಂದು ಚಲನವಲನವು ಆಯಾಯ ಪಾತ್ರಗಳ ಅಂತರಂಗವನ್ನು ಪ್ರಕಟಿಸುತ್ತದೆ.

ಚಿತ್ರದ ಇನ್ನೊಂದೇ ಮುಖ್ಯ ಪಾತ್ರ ನಾಯಕಿಯ ಮಾವ. ಸಾಂಪ್ರದಾಯಿಕ ಘನತೆಯಿಂದ ಯಾವಾಗಲೂ ಪತ್ರಿಕೆ ಓದುತ್ತಾ ಕೂರುವ ಈ ವ್ಯಕ್ತಿ, ಒಮ್ಮೊಮ್ಮೆ ಹೊರಗೆ ಹೋಗುವಾಗ ಸೊಸೆ ಚಪ್ಪಲಿಯನ್ನು ತಂದು ಅಂಗಳದಲ್ಲಿ ಇಡಬೇಕು. ಚಿತ್ರದಲ್ಲಿ ಆಗಾಗ ಪುನರಾವರ್ತನೆ
ಆಗುವ ಊಟದ ಸಂದರ್ಭ ಮತ್ತು ನಾಯಕಿ ಸಿಂಕ್‍ನಲ್ಲಿ ಎಂಜಲು ಪಾತ್ರೆ ತೊಳೆಯುವ ದೃಶ್ಯಗಳು ಅ-ಸಹ್ಯ. ಅದೇ ಊಟದ ವೇಳೆಯಲ್ಲಿ ಮಾವನ ಸಂಭಾಷಣೆಯೆಂದರೆ, ಈ ಮಿಕ್ಸಿಯ ಚಟ್ನಿಗಿಂತ ಒರಳಲ್ಲಿ ರುಬ್ಬಿದ ಚಟ್ನಿಯೇ ರುಚಿ, ಕುಕ್ಕರ್‌ಗಿಂತ ಸೌದೆ ಒಲೆಯಲ್ಲಿ ಬೆಂದ ಅನ್ನವೇ ಚೆಂದ ಎಂಬ ಹಳೆಯ ರುಚಿಪ್ರಜ್ಞೆಯ ಸಂಭಾಷಣೆ ಹೊಡೆದರೆ, ಹೌದು ಈಗ ಹೆಂಗಸರು ಸುಲಭದ ದಾರಿ
ಹಿಡಿದಿರುವರೆಂಬಂತೆ ಮಗ ತಲೆಯಾಡಿಸುತ್ತಾನೆ.

ಮನೆಗೆ ಬಂದ ಅತಿಥಿ ಅಭ್ಯಾಗತರ ಮಾತುಕತೆಯೇ ಬೇರೆ. ಒಬ್ಬನಿಗೆ ಬ್ಲ್ಯಾಕ್ ಟೀ, ಮತ್ತೊಬ್ಬನಿಗೆ ಹಾಲು ಹಾಕಿದ ಟೀ. ಆಮೇಲೂ ಸಾಗುವ ಮಾತುಕತೆ ಎಂದರೆ, ಒಂದಿಷ್ಟು ಏಲಕ್ಕಿ ಮಸಾಲೆ ಹಾಕಿದರೆ ಈ ಟೀ ಎಷ್ಟು ಮಜಾ ಬರುತ್ತದೆ ಗೊತ್ತಾ ಎಂಬ ಮಾತಿನ ಲಹರಿ. ಆಗ ನಾಯಕಿ ಬಂದ ಅತಿಥಿಗಳು ಉಂಡ ತಟ್ಟೆ, ಲೋಟ, ಚಮಚೆ, ಅನ್ನ ಸಾಂಬಾರಿನ ಪಾತ್ರೆ ಇವು ಸಿಂಕ್ ಪೂರಾ ತುಂಬಿ ಈಚೆ ಬಿದ್ದವನ್ನು ತೊಳೆಯುವಲ್ಲೇ, ಅದರ ಕೆಳಗೆ ಎಷ್ಟೋ ದಿನದಿಂದ ಸಿಂಕ್‍ನ ಪೈಪು ಸಡಿಲವಾಗಿ ನೀರು ಸೋರುತ್ತಿರುತ್ತದೆ. ಅಲ್ಲಿಗೆ ಗೋಣಿಚೀಲದ ತಾಟು ತಂದು ಹಾಕಬೇಕು. ರಿಪೇರಿಗೆ ಹೇಳಿದರೆ ಗಂಡನಿಗೆ ಕಾಲೇಜಿಗೆ ಹೋಗುವ ಆತುರ. ಮಹಿಳಾ ಕಾಲೇಜಿನಲ್ಲಿರುವ ಗಂಡ ತೊಡಗುವ ಪಾಠವೆಂದರೆ, ‘ಸಮಾಜದಲ್ಲಿಯ ಪ್ರಾಥಮಿಕ ಘಟಕ ಯಾವುದು ಗೊತ್ತೇ? ಅದು ಕುಟುಂಬ. ಆ ಕುಟುಂಬವೆಂದರೆ, ಗಂಡ– ಹೆಂಡತಿಯರ ನಡುವೆ ಇರಬಹುದಾದ ಅರ್ಥಪೂರ್ಣ ಸಾಮರಸ್ಯ...’ ಹೀಗೆ ಸಾಗುತ್ತದೆ ಪಠ್ಯ ಬೋಧನೆ.

ಚಿತ್ರ ಕೊನೆಯಾಗುವುದು ಒಂದು ಧಾರ್ಮಿಕ ಸಂಗತಿಯಿಂದ. ಅದು ಅಯ್ಯಪ್ಪನ ಹೆಸರಲ್ಲಿ ದೀಕ್ಷೆ ತೆಗೆದುಕೊಳ್ಳುವ ಮತ್ತು ಯಾತ್ರೆಗೆ ಹೋಗುವ ದೃಶ್ಯ. ದೇಹ ಸಂಪರ್ಕವಿಲ್ಲದೆ, ಕಪ್ಪು ವಸ್ತ್ರ ಧರಿಸಿ, ಭಜನೆಗೆ ಕೂತ ಗಂಡ ತನ್ನಿಂದ ದೂರವಾಗುತ್ತಲೇ ಹೋಗುತ್ತ, ಕೌಟುಂಬಿಕ ಸಮಸ್ಯೆ ಇನ್ನಷ್ಟು ಬಿಗಡಾಯಿಸಿ ಆ ಸಂಸಾರದಿಂದ ಸಿಡಿಯುವ ನಾಯಕಿ, ಕುಟುಂಬ ಘಟಕದಿಂದ ಹೊರ ನಡೆಯುತ್ತಾಳೆ. ಅಂತ್ಯದಲ್ಲಿ ನಾಯಕಿ ವಿದ್ಯಾರ್ಥಿನಿಯರಿಗೆ ನೃತ್ಯ ಕಲಿಸುವ ಮತ್ತು ಕತ್ತಿ ಹಿಡಿದು ನಾಟಕವೊಂದರ ಸಂಭಾಷಣೆ ಬಿತ್ತರಿಸುವ ದೃಶ್ಯವಿದ್ದು, ಅದು ನಿರ್ದೇಶಕರು ಉದ್ದೇಶಪೂರ್ವಕ ತಂದಿರಿಸಿದ ನಾಟಕದಂತಿದೆ.

1970ರ ದಶಕದಲ್ಲೇ ಮಲಯಾಳಂ ಭಾಷೆಯಲ್ಲಿ ರಾಮು ಕಾರಿಯತ್ ಅವರು, ಸುಪ್ರಸಿದ್ಧ ಕಾದಂಬರಿಕಾರ ತಗಳಿ ಶಿವಶಂಕರಂ ಪಿಳ್ಳೆ ಅವರ ‘ಚೆಮ್ಮೀನ್’ ಕಾದಂಬರಿಯನ್ನು ಅತಿ ವಾಸ್ತವ ಧಾಟಿಯಲ್ಲಿ ಚಿತ್ರವಾಗಿಸಿ ಭಾರತದಾದ್ಯಂತ ದೊಡ್ಡ ಸುದ್ದಿ ಮಾಡಿದ್ದರು. ಅದೇ ಮಲಯಾಳಂ ಚಿತ್ರ ಪರಂಪರೆ ಈಗಲೂ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಮೂಲಕ ಕ್ರಿ.ಪೂ. ಅಡುಗೆ ಮನೆಯ ಹುಡುಗಿಗೆ ಸಂಬಂಧಿಸಿದ ವಾಸ್ತವವಾದಿ ಚಿತ್ರವನ್ನು ತೆರೆಗೆ ತಂದು, ಹೊಸ ವ್ಯಾಕರಣದ ಸಿನಿಮಾ ಬಯಸುವವರ ನಡುವೆ ನಿರ್ದೇಶಕ ಜೋ ಬೇಬಿ ಕುತೂಹಲ ಹುಟ್ಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು