ಭಾನುವಾರ, ಏಪ್ರಿಲ್ 18, 2021
26 °C

ಅನುಭವ ಮಂಟಪ: ಹಿಂದುಳಿದವರ ಪಟ್ಟಿಗೆ ಸೇರಲು ನೂಕುನುಗ್ಗಲು

ಪ್ರೊ. ರವಿವರ್ಮ ಕುಮಾರ್‌ Updated:

ಅಕ್ಷರ ಗಾತ್ರ : | |

ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಇಡೀ ಪ್ರಪಂಚಕ್ಕೆ ಮೊದಲಿಗರಾಗಿದ್ದು ಮೈಸೂರು ಸಂಸ್ಥಾನದ ದೊರೆಗಳು. 1874ರಲ್ಲೇ ಮೀಸಲಾತಿಯನ್ನು ಜಾರಿಗೆ ತಂದು ಸರ್ಕಾರಿ ಸೇವೆಯಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ಕಡಿಮೆ ಮಾಡುವ ಒಂದು ಪ್ರಯತ್ನವಾಗಿ ಕಳೆದ 150 ವರ್ಷಗಳ ಇತಿಹಾಸವನ್ನು ಪ್ರಪಂಚಕ್ಕೆ ಕೊಟ್ಟಿದೆ. 1918ನೇ ಇಸವಿಯಲ್ಲಿ ಮುಖ್ಯ ನ್ಯಾಯಮೂರ್ತಿ ಮಿಲ್ಲರ್ ಸಮಿತಿಯ ವರದಿಯ ಆಧಾರದ ಮೇಲೆ ಒಂದು ವೈಜ್ಞಾನಿಕ ಸ್ವರೂಪವನ್ನು ಕೊಟ್ಟಿದ್ದು ಮೈಸೂರು ಸಂಸ್ಥಾನ.


ರವಿವರ್ಮ ಕುಮಾರ್‌

ಭಾರತದ ಸಂವಿಧಾನ ಮತ್ತು ಹಿಂದುಳಿದ ವರ್ಗಗಳು: 1950ರ ಜನವರಿ 26ರಂದು ಜಾರಿಗೊಂಡ ಭಾರತದ ಸಂವಿಧಾನದ ಅಡಿಯಲ್ಲಿ 16ನೇ ಪರಿಚ್ಛೇದದಲ್ಲಿ ಸರ್ಕಾರಿ ಸೇವೆಯಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದ ಹಿಂದುಳಿದ ವರ್ಗಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಲಾಗಿದೆ. 340ನೇ ಪರಿಚ್ಛೇದದಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಸಲಹೆಗಳನ್ನು ನೀಡಲು ಒಂದು ಆಯೋಗ ರಚನೆಯ ಬಗ್ಗೆಯೂ ಹೇಳಲಾಗಿದೆ. ಈ ಪರಿಚ್ಛೇದದಲ್ಲಿ ಹಿಂದುಳಿದಿರುವಿಕೆಯ ಮಾನದಂಡವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಮಾತ್ರ ಪ್ರಸ್ತಾಪ ಮಾಡಲಾಗಿದೆಯೇ ಹೊರತು ಆರ್ಥಿಕ ಹಿಂದುಳಿದಿರುವಿಕೆಯನ್ನು ಹೇಳಿಲ್ಲ. ತದನಂತರ 1951ರಲ್ಲಿ ಶಿಕ್ಷಣ ಸಂಸ್ಥೆ ಮತ್ತಿತರ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವ  ವಿಚಾರದಲ್ಲಿ ಮತ್ತೆ ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಬಗ್ಗೆ ಹೇಳಲಾಗಿದೆಯೇ ಹೊರತು ಆರ್ಥಿಕ ಹಿಂದುಳಿದಿರುವಿಕೆಯ ಬಗ್ಗೆ ಹೇಳಿಲ್ಲ. ಪರಿಶಿಷ್ಟ ಜಾತಿಗಳಿಗೆ ಪರಿಚ್ಛೇದ 341 ಮತ್ತು ಪರಿಶಿಷ್ಟ ಪಂಗಡಗಳಿಗೆ ಪರಿಚ್ಛೇದ 342ರಲ್ಲಿ ವರ್ಗೀಕರಣದ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಲಾಗಿದೆ. ಹಾಗಾಗಿ 2019ನೇ ಇಸವಿಯ ಸಂವಿಧಾನದ 103ನೇ ತಿದ್ದುಪಡಿ ತನಕ ಯಾವುದೇ ಮೀಸಲಾತಿಯನ್ನು ಆರ್ಥಿಕ ಮಾನದಂಡದ ಮೇಲೆ ಕೊಡಲು ಬರುವುದಿಲ್ಲ ಮತ್ತು ಮೀಸಲಾತಿಯ ಮಾನದಂಡವು ವೈಯಕ್ತಿಕ ಅಥವಾ ಕೌಟುಂಬಿಕ ಆಧಾರದ ಮೇಲೆ ಕೊಡುವುದಕ್ಕೆ ಬದಲಾಗಿ ಒಂದು ವರ್ಗ, ಸಮೂಹ, ಜಾತಿ ಅಥವಾ ಬುಡಕಟ್ಟುಗಳಿಗೆ ಮಾತ್ರ ನೀಡಬಹುದಾಗಿದೆ.

ಕಾಲೇಲ್‌ಕರ್ ಆಯೋಗ: ಈ ಹಿನ್ನೆಲೆಯಲ್ಲಿ ರಾಷ್ಟದ ಪ್ರಪ್ರಥಮ ಹಿಂದುಳಿದ ವರ್ಗಗಳ ಆಯೋಗ ಆಚಾರ್ಯ ಕಾಕಾ ಕಾಲೇಲ್‌ಕರ್ ಅವರ ಅಧ್ಯಕ್ಷತೆಯಲ್ಲಿ 1955ನೇ ಇಸವಿಯಲ್ಲೇ ವರದಿ ನೀಡಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದ ಜಾತಿಗಳ ಪಟ್ಟಿಯನ್ನು ವರ್ಗೀಕರಿಸಿ ಶೇ 70ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಲಿಲ್ಲ.

ನಾಗನಗೌಡ ವರದಿ: ಕರ್ನಾಟಕ ಏಕೀಕರಣದ ನಂತರ ವಿಶಾಲ ಮೈಸೂರು ರಾಜ್ಯಕ್ಕೆ 5 ವಿವಿಧ ರಾಜ್ಯಗಳಿದ್ದ ಪ್ರದೇಶಗಳು ಸೇರ್ಪಡೆಯಾದ ಪ್ರಯುಕ್ತ ಇಡೀ ರಾಜ್ಯಕ್ಕೆ ಒಂದು ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿ ವರ್ಗೀಕರಣಗೊಳಿಸಲು ಡಾ. ಆರ್. ನಾಗನಗೌಡ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಸರ್ಕಾರ ರಚನೆ ಮಾಡಿತು. 1960ರ ಫೆಬ್ರುವರಿ 19ರಂದು ಈ ಸಮಿತಿ ಒಂದು ಮಧ್ಯಂತರ ವರದಿ ಸಲ್ಲಿಸಿತು. ಈ ವರದಿಯಲ್ಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲಿಲ್ಲ. ಈ ವರದಿ 1960ರ ಮಾರ್ಚ್‌ 1ರಂದು ಜಾರಿಗೊಂಡು ಬ್ರಾಹ್ಮಣರು ಮತ್ತು ಲಿಂಗಾಯತರನ್ನು ಬಿಟ್ಟು ಉಳಿದ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ನೀಡಲಾಯಿತು.

ತದನಂತರ ನಾಗನಗೌಡ ಸಮಿತಿಯು ಅಂತಿಮ ವರದಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಶೇ 50 ಮೀಸಲಾತಿಯನ್ನು ಶಿಫಾರಸು ಮಾಡಿತು. ಈ ವರದಿಯಲ್ಲೂ ಲಿಂಗಾಯತರನ್ನು ಮುಂದುವರಿದವೆಂದು ಪರಿಗಣಿಸಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲಿಲ್ಲ. ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗುರುತಿಸುವಲ್ಲಿ ಹೈಸ್ಕೂಲಿನ ಮೂರು ತರಗತಿಗಳಲ್ಲಿ ಓದುತ್ತಿರುವ ಆ ಜಾತಿಯ ವಿದ್ಯಾರ್ಥಿಗಳ ಜನಸಂಖ್ಯೆ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಗುರುತಿಸಲಾಗಿತ್ತು. ರಾಜ್ಯದ ಸರಾಸರಿ ಒಂದು ಸಾವಿರ ಜನಸಂಖ್ಯೆಗೆ 6.9 ಇರುವುದನ್ನು ಗಮನಿಸಿ ಆ ವಿದ್ಯಾಮಟ್ಟಕ್ಕಿಂತ ಜಾಸ್ತಿ  ವಿದ್ಯಾಮಟ್ಟದಿಂದ ಸತಾನಿ, ನಾಯರ್ ಮತ್ತು ಪಾರ್ಸಿ ಜಾತಿಗಳನ್ನು ಹಾಗೂ 7.1 ಸರಾಸರಿಯಿಂದ ಲಿಂಗಾಯತ ಸಮುದಾಯವನ್ನು ಮುಂದುವರಿದವರೆಂದು ವರ್ಗೀಕರಿಸಿತು.

ಈ ವರದಿಯು ಜಾರಿಗೊಳ್ಳುವ ಮೊದಲೇ ಎಸ್.ನಿಜಲಿಂಗಪ್ಪನವರ ಸರ್ಕಾರ 1962ರ ಜೂನ್ 21ರಂದು ಅಧಿಕಾರಕ್ಕೆ ಬಂತು. ವರದಿಯನ್ನು ಜಾರಿಗೊಳಿಸುವ ಸಮಯದಲ್ಲಿ ಒಂದು ಕೈಚಳಕದ ಮೂಲಕ ಈ ವರ್ಗೀಕರಣವನ್ನು ಮಾರ್ಪಡಿಸಿತು. ರಾಜ್ಯದ ಸರಾಸರಿ 6.9 ಇದ್ದುದನ್ನು ಹತ್ತಿರದ ಪೂರ್ಣ ಅಂಕೆ 7ಕ್ಕೆ ತಂದು ನಿಲ್ಲಿಸಿತು. ಅದೇ ರೀತಿ 7.1 ಸರಾಸರಿ ವಿದ್ಯಾಮಟ್ಟವಿದ್ದ ಲಿಂಗಾಯತ ಸಮುದಾಯದ ವಿದ್ಯಾಮಟ್ಟವನ್ನು ಸಹ ಹಿಂದಕ್ಕೆ ಎಳೆದು 7ರ ಪೂರ್ಣಾಂಕಕ್ಕೆ ನಿಗದಿ ಮಾಡಿ ಲಿಂಗಾಯತರನ್ನೂ ಹಿಂದುಳಿದವರೆಂದು ಘೋಷಿಸಲಾಯಿತು.

ಬಾಲಾಜಿ ಮೊಕದ್ದಮೆ: 1962ರ ಜುಲೈ 31ರಂದು ಹೊರಡಿಸಿದ ಈ ಸರ್ಕಾರಿ ಆದೇಶವನ್ನು ಎರಡೇ ತಿಂಗಳೊಳಗಾಗಿ (28.09.1962) ಅನೂರ್ಜಿತಗೊಳಿಸಿ ಈ ಕ್ರಮವನ್ನು ಫ್ರಾಡ್ ಆನ್‌ ಕಾನ್‌ಸ್ಟಿಟ್ಯೂಷನಲ್‌ ಪವರ್ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನದ ಪೀಠ ತೀರ್ಪಿತ್ತಿತ್ತು. ಇದೇ ಅವಕಾಶಕ್ಕೆ ಕಾಯುತ್ತಿತ್ತೇನೋ ಎನ್ನುವಂತೆ ನಿಜಲಿಂಗಪ್ಪನವರ ಸರ್ಕಾರ ಎಲ್ಲಾ ಹಿಂದುಳಿದ ಜಾತಿಗಳಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಬಿಟ್ಟು) ಮೀಸಲಾತಿಯನ್ನು ರದ್ದು ಮಾಡಿತು. ಬದಲಾಗಿ 1963ರಲ್ಲಿ ತಾತ್ಕಾಲಿಕ ಎಂದು ಬಣ್ಣಿಸಿ ಹೊಸ ವರ್ಗೀಕರಣ ಮಾಡಿ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಬಿಟ್ಟು ಕೇವಲ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯನ್ನು ಕೊಡಲಾಯಿತು. ಇದು ತಾತ್ಕಾಲಿಕ ಎಂದು ಬಣ್ಣಿಸಿದರೂ ಸರ್ಕಾರ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸದೆ ಎಲ್ಲಾ ಹಿಂದುಳಿದ ಜಾತಿಗಳಿಗೂ ಸಾಮಾಜಿಕ ನ್ಯಾಯದ ವಂಚನೆಯನ್ನು ಮಾಡಿ ದೇವರಾಜ ಅರಸು ಅಧಿಕಾರಕ್ಕೆ ಬರುವ ತನಕ ಸುಮಾರು 15 ವರ್ಷಗಳ ವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಬಿಟ್ಟು ಇತರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕೊಡಲಿಲ್ಲ.

ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡುವ ಆಶ್ವಾಸನೆಯ ಮೇಲೆ 1972ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ದೇವರಾಜ ಅರಸು ಸರ್ಕಾರವು ಕರ್ನಾಟಕದ ಪ್ರಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಆಯೋಗದ ಶಿಫಾರಸಿನಂತೆ ಹಿಂದುಳಿದ ವರ್ಗಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಿ, ಹಿಂದುಳಿದ ಸಮುದಾಯಗಳು (ಶೇ 20), ಹಿಂದುಳಿದ ಜಾತಿಗಳು(ಶೇ 10) ಮತ್ತು ಹಿಂದುಳಿದ ಬುಡಕಟ್ಟುಗಳಿಗೆ (ಶೇ 4) ಮೀಸಲಾತಿ ಕೊಟ್ಟು ಸಾಮಾಜಿಕ ಹಿಂದುಳಿದ ವರ್ಗಗಳಿಗೆ ನ್ಯಾಯವನ್ನು ಪುನರ್ ಸ್ಥಾಪಿಸಿತು.

ಹಾವನೂರು ಆಯೋಗ: ಹಾವನೂರು ಆಯೋಗದ ಈ ವರದಿಯನ್ನು ವಸಂತಕುಮಾರ್ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವುದಷ್ಟೇ ಅಲ್ಲದೇ, ಹಾವನೂರು ಆಯೋಗದ ವೈಜ್ಞಾನಿಕ ಮಾನದಂಡಗಳನ್ನು ಮತ್ತು ಆ ಮಾನದಂಡಗಳ ಗುರುತಿಸುವಿಕೆಯಲ್ಲಿ ಅನುಸರಿಸಿರುವ ವಿಧಾನವನ್ನು ಮುಕ್ತಕಂಠದಿಂದ ಶ್ಲಾಘಿಸಿತು.

ವೆಂಕಟಸ್ವಾಮಿ ಆಯೋಗ: ರಾಮಕೃಷ್ಣ ಹೆಗಡೆ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೂಡಲೇ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ ಹೊಸ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪಡೆಯಲಾಯಿತು. ಆದರೆ, ವರದಿಯನ್ನು ತಿರಸ್ಕರಿಸಿ ರಾಮಕೃಷ್ಣ ಹೆಗಡೆ ಅವರ ಸರ್ಕಾರ 1986ರ ಅಕ್ಟೋಬರ್ 13ರಂದು ಹೊಸ ಹಿಂದುಳಿದ ವರ್ಗಗಳ ಆಯೋಗ ರಚಿಸುವ ಆಶ್ವಾಸನೆಯನ್ನು ನೀಡಿ ಮತ್ತೊಂದು ಕೈಚಳಕದ ಮೂಲಕ ಲಿಂಗಾಯತ, ಮರಾಠ, ಕ್ಷತ್ರಿಯ ಮುಂತಾದ 15 ಜಾತಿಗಳಿಗೆ ಮೀಸಲಾತಿಯನ್ನು ಘೋಷಿಸಿತು. 1986ರ ಅಕ್ಟೋಬರ್ 13ರ ಈ ಆದೇಶದಲ್ಲಿ ಕೆಳಗಿನಂತೆ ಹೇಳಲಾಗಿದೆ: ‘The State Government has also taken into consideration the grievances of various sections of society, particularly those of the members of 15 communities including Lingayat, Maratha, Kshatriya, etc.,... the State Governmet as found it necessary and desirable that, pending finalization of the report of the new Commission, 12 communities should also be treated as part of the backward community for purposes of Article 15(4) and 15 communities for purposes of Article 16(4) of the Constitution of India'.

ಈ ರೀತಿಯ ಯಾವುದೇ ಆಯೋಗ ಹಿಂದುಳಿದವರೆಂದು ಗುರುತಿಸದೆಯೂ, ಅದಕ್ಕೆ ತದ್ವಿರುದ್ಧವಾಗಿ ಹಿಂದಿನ ಎಲ್ಲಾ ಆಯೋಗಗಳು ಮುಂದುವರಿದವರೆಂದು ಗುರುತಿಸಿದ್ದರೂ ಲಿಂಗಾಯತ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳ್ಳಲು 1986ರ ಅಕ್ಟೋಬರ್ 13ರಿಂದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿಯನ್ನು ಪಡೆಯುತ್ತಾ ಬಂದಿದೆ. ತದ ನಂತರ ನ್ಯಾಯಮೂರ್ತಿ
ಚಿನ್ನಪ್ಪರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಹಿಂದುಳಿದ ವರ್ಗಗಳ ಆಯೋಗವು ಲಿಂಗಾಯತ ಸಮುದಾಯವನ್ನು ಮುಂದುವರಿದವರು ಎಂದು ಘೋಷಿಸಿದರೂ ಇಂದಿಗೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು ಮೀಸಲಾತಿಯನ್ನು ಪಡೆಯುತ್ತಾ ಬಂದಿದೆ.

(ಲೇಖಕ: ಹೈಕೋರ್ಟ್‌ನ ಹಿರಿಯ ವಕೀಲ)

ನಿರೂಪಣೆ: ವಿಜಯಕುಮಾರ್‌ ಎಸ್‌.ಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು