ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮತದಾರರ ಒಲವೇ ಗೆಲುವ ಚಂದಿರ

ನಿಜ ನಾಯಕನನ್ನು ಯಾವ ಮತಕ್ಷೇತ್ರವೂ ಕಡೆಗಣಿಸುವುದಿಲ್ಲ. ಆದರೆ...
Last Updated 25 ಜುಲೈ 2022, 19:30 IST
ಅಕ್ಷರ ಗಾತ್ರ

ಬರುವ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಬಾರಿ ಸ್ಪರ್ಧಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೆಲುವಿನ ಖಾತರಿಗಾಗಿ ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದಾರೆ. ಕೋಲಾರ, ಹುಣಸೂರು ಸೇರಿದಂತೆ ಮೂರ್ನಾಲ್ಕು ಕಡೆಗಳಿಂದ ಸ್ಪರ್ಧಿಸುವಂತೆ ತಮಗೆ ಆಹ್ವಾನ ಬಂದಿರುವುದಾಗಿ ಅವರೇ ಹೇಳಿ ಕೊಂಡಿದ್ದಾರೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ತಮ್ಮ ಕ್ಷೇತ್ರದ ‘ಅತಿಕ್ರಮಣ’ದ ವಿರುದ್ಧ ಬಿ.ಬಿ. ಚಿಮ್ಮನಕಟ್ಟಿ ಬಹಿರಂಗವಾಗಿಯೇ ದನಿ ಎತ್ತಿದ ನಂತರ ಸಿದ್ದರಾಮಯ್ಯ ಸುರಕ್ಷಿತಹೊಸ ಕ್ಷೇತ್ರ ಹುಡುಕಲೇಬೇಕಾದ ಅಸಹಾಯಕ ಸ್ಥಿತಿ ಎದುರಿಸುತ್ತಿದ್ದಾರೆ. ಯಾಕೆಂದರೆ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಸುಳಿವು ಅರಿತೇ ಕುರುಬ ಸಮುದಾಯದ ಪ್ರಾಬಲ್ಯ ಇರುವ ಬಾದಾಮಿ ಯತ್ತಲೂ ಸಿದ್ದರಾಮಯ್ಯ ಪಾದ ಬೆಳೆಸಿದ್ದರು.

ಪ್ರಮುಖ ನಾಯಕನಿಗೇ ಒಂದು ಸುರಕ್ಷಿತ ಕ್ಷೇತ್ರ ಇಲ್ಲ ಎಂದು ಊಹಿಸುವುದೇ ಕರುಣಾಜನಕವಾಗಿದೆ.‌ ಈ ಹಿಂದೆ ಚಾಮುಂಡೇಶ್ವರಿ, ವರುಣಾ, ಬಾದಾಮಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋಲು, ಗೆಲುವುಗಳೆರಡನ್ನೂ ಕಂಡಿದ್ದ ಸಿದ್ದರಾಮಯ್ಯ ಇಂಥ ಸ್ಥಿತಿ ತಂದುಕೊಂಡಿದ್ದಾದರೂ ಯಾಕೆ? ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಬಿದ್ದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ನಂತರ 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಗೆಲುವು ಮಹತ್ವದ್ದು‌. ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಎದುರು ಜೆಡಿಎಸ್ ಕಣಕ್ಕಿಳಿಸಿದ ಲಿಂಗಾಯತ ಅಭ್ಯರ್ಥಿಯನ್ನು ಬಿಜೆಪಿ ಬೆಂಬಲಿಸಿದ ಫಲ ರಾಜ್ಯದ ಪ್ರಬಲ ಜಾತಿಗಳಾದ ಒಕ್ಕಲಿಗರು ಮತ್ತು ಲಿಂಗಾಯತರು ಒಗ್ಗೂಡಿದರು. ಆದರೂ ‘ಅಹಿಂದ’ ಮತಗಳ ನೆರವಿನಿಂದ ಸಿದ್ದರಾಮಯ್ಯ ಬರೀ 257 ಮತಗಳಿಂದ ಜಯ ಗಳಿಸಿದರು.

ಆದರೆ ಗೆಲುವಿನ ನಂತರ ಆ ಕ್ಷೇತ್ರದ ಮತದಾರರ ವಿಶ್ವಾಸ ಗಳಿಸುವ ಮಾರ್ಗ ಹುಡುಕದೇ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ವರುಣಾ ಕ್ಷೇತ್ರದ ಮಾರ್ಗ ಹುಡುಕಿದ್ದು ಸಿದ್ದರಾಮಯ್ಯ ಮಾಡಿದ ಮೊದಲ ತಪ್ಪಾಗಿತ್ತು. 2018ರಲ್ಲಿ ವರುಣಾ ಕ್ಷೇತ್ರವನ್ನು ಪುತ್ರ ಪ್ರೇಮದಿಂದ ಯತೀಂದ್ರಗೆ ಬಿಟ್ಟುಕೊಟ್ಟು ವಾಪಸ್ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದು ಎರಡನೇ ತಪ್ಪಾಗಿತ್ತು. ಈ ಹನ್ನೆರಡು ವರ್ಷಗಳಲ್ಲಿ ಸೃಷ್ಟಿಯಾದ ಹೊಸ ಲೆಕ್ಕಾಚಾರಗಳನ್ನು ಅರಿತುಕೊಳ್ಳುವಲ್ಲಿ ಸಿದ್ದರಾಮಯ್ಯ ವಿಫಲರಾದರು. ಅದರ ಬದಲಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಉಳಿದು ಅಲ್ಲಿನ ಅಹಿಂದ ಸಮುದಾಯಗಳು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡುವಂತೆ ಕೆಲಸ‌ ಮಾಡಿದ್ದರೆ ಇವತ್ತಿನ‌ ಸ್ಥಿತಿ ಖಂಡಿತ ಬರುತ್ತಿರಲಿಲ್ಲ. ಒಗ್ಗೂಡಿದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಎದುರಿಸಿ ಗೆದ್ದಿದ್ದ ಸಿದ್ದರಾಮಯ್ಯ ಅದೇ ಚಾಮುಂಡೇಶ್ವರಿ ಕ್ಷೇತ್ರವನ್ನೇ ತಮ್ಮ ರಾಜಕೀಯದ ಪುಣ್ಯ ಭೂಮಿಯಂತೆ ಕಂಡಿದ್ದರೆ ಆನಂತರದ‌ ಚುನಾವಣೆಗಳ ಫಲಿತಾಂಶವೂ ಅವರ‌ ಪಾಲಿಗೆ ಸಕಾರಾತ್ಮಕವಾಗಿರುತ್ತಿತ್ತು. ನಿಜ ನಾಯಕನ ಕೆಲಸ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಮುನ್ನಡೆಯುವುದು. ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕಣ್ಣು ಕುಕ್ಕುವಂತೆ ಮಾಡಿದ್ದರೆ ಅವರ ರಾಜಕೀಯ ಎದುರಾಳಿ ಜಿ.ಟಿ.ದೇವೇಗೌಡರು ಪ್ರತಿನಿಧಿಸಿದ ಚಾಮುಂಡೇಶ್ವರಿ ಕ್ಷೇತ್ರ ಮಂಕಾಗಿತ್ತು ಎನ್ನುವ ದೂರು ಜೋರಾಗಿಯೇ ಇತ್ತು. ಅವರು 2008ರ ನಂತರ ನಿರ್ಲಕ್ಷಿಸಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಾಪಸಾಗುವ ಜತೆ ಬಾದಾಮಿಯಿಂದಲೂ ಸ್ಪರ್ಧಿಸಿದ್ದು ಇಡೀ ರಾಜ್ಯಕ್ಕೆ ತಮ್ಮ ಅಸಹಾಯಕ ಸ್ಥಿತಿಯ ಬಗ್ಗೆ ಸಂದೇಶ ರವಾನಿಸಿದಂತಿತ್ತು. ಅದು ನಿಸ್ಸಂದೇಹವಾಗಿ ಒಟ್ಟು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು.

ಹಾಗೆಂದ ಮಾತ್ರಕ್ಕೆ ಕ್ಷೇತ್ರ ಬದಲಾವಣೆಯ ಅಸಹಾಯಕತೆ ಸಿದ್ದರಾಮಯ್ಯ ಅವರಲ್ಲಿ ಮಾತ್ರವಲ್ಲ, ‘ಇಂಡಿಯಾ ಟುಡೇ’ ನಿಯತಕಾಲಿಕದಿಂದ ದೇಶದ ನಂಬರ್ ಒನ್ ಮುಖ್ಯಮಂತ್ರಿ ಎಂದು ಕರೆಸಿಕೊಂಡಿದ್ದ ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗಲೇ ನಡೆದ 2004ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರಿನಿಂದ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ಏಕೆ ಬಂದರು? ಮದ್ದೂರಿನಲ್ಲಿ ಸೋಲಿನ ಸುಳಿವು ದೊರೆತ ಕಾರಣ ದಿಂದಲೇ ಕೃಷ್ಣ ಅವರು ಚಾಮರಾಜಪೇಟೆಗೆ ಕ್ಷೇತ್ರಾಂತರ ಮಾಡಿದರು. ನಿಜ ನಾಯಕನನ್ನು ಜನ ಅಷ್ಟು ಸುಲಭವಾಗಿ ಕೈ ಬಿಡುವುದಿಲ್ಲ. ಜನರ ಮನದಂಗಣ ದಿಂದ ದೂರವಾದ ನಾಯಕ ಮಾತ್ರ ಅಸಹಾಯಕ ನಾಗಬಹುದು. ಅಷ್ಟೇ ಏಕೆ? ದೇವೇಗೌಡರು ಸೇರಿದಂತೆ ಅವರ ಕುಟುಂಬದ ಕೆಲವು ಸದಸ್ಯರು ಕ್ಷೇತ್ರಾಂತರ ಮಾಡಿದ್ದಾರೆ. 2019ರಲ್ಲಿ ದೇವೇಗೌಡರು ಮೊಮ್ಮಗ ಪ್ರಜ್ವಲ್ ರೇವಣ್ಣ ಮೇಲಿನ ಪ್ರೀತಿಯಿಂದ ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದರು. ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಮೊದಲು ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರೆ, 2018ರ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು. ಈ ಉಪಚುನಾವಣೆಗೆ ಮುಖ್ಯ ಕಾರಣ ಕುಮಾರಸ್ವಾಮಿ. ಸಿ.ಪಿ.ಯೋಗೇಶ್ವರ್ ಅವರಿಗೆ ರಾಜಕೀಯ ನೆಲೆ ಇಲ್ಲದಂತೆ ಮಾಡುವ ಏಕೈಕ ಗುರಿಯೊಂದಿಗೆ ಡಿ.ಕೆ.ಶಿವಕುಮಾರ್ ಜತೆ ಕೈಜೋಡಿಸಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದರು. ಬಳಿಕ, ಯೋಗೇಶ್ವರ್ ಸೋತ ಚನ್ನಪಟ್ಟಣ ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಫಲ ಈ ಉಪಚುನಾವಣೆ.

ಕ್ಷೇತ್ರ ಬದಲಾವಣೆಗೆ ಕಾರಣಗಳು ಅನೇಕ ಇವೆ. ವಿಚಿತ್ರ ಎಂದರೆ ದೇವೇಗೌಡ, ಸಿದ್ದರಾಮಯ್ಯ,
ಎಸ್.ಎಂ. ಕೃಷ್ಣ ಅವರಂತೆ ಪ್ರಮುಖ ನಾಯಕರಾದ ಬಿಜೆಪಿಯ ಯಡಿಯೂರಪ್ಪ ಸೋಲು– ಗೆಲುವುಗಳ ನಡುವೆ ಒಮ್ಮೆಯೂ ತಮ್ಮ ಕಾರ್ಯಕ್ಷೇತ್ರವಾದ ಶಿಕಾರಿ ಪುರ ಬಿಟ್ಟು ಬೇರೆ ಕ್ಷೇತ್ರ ಹುಡುಕಲಿಲ್ಲ. ಲೋಕಸಭಾ ಸದಸ್ಯರಾದಾಗಲೂ ಅವರ ಆಯ್ಕೆ ಶಿವಮೊಗ್ಗವೇ ಆಗಿತ್ತು‌. ಹಾಗೇ ಎಸ್.ಬಂಗಾರಪ್ಪ 1967ರಿಂದ 1996ರವರೆಗೆ ಸೊರಬ ವಿಧಾನಸಭಾ ಕ್ಷೇತ್ರದಿಂದಲೇ ನಿರಂತರವಾಗಿ ಆಯ್ಕೆಯಾಗಿ ‘ಸೋಲಿಲ್ಲದ ಸರದಾರ’ ಎನಿಸಿಕೊಂಡಿದ್ದರು. ಲೋಕಸಭೆಗೆ ಅವರ ಆಯ್ಕೆಯೂ ಶಿವಮೊಗ್ಗವೇ ಆಗಿತ್ತು.

ಇವೆಲ್ಲವನ್ನೂ ನೋಡುವಾಗ ನನಗೆ ನೆನಪಾಗುವುದು ಜಾರ್ಜ್ ಫರ್ನಾಂಡಿಸ್. ಕರ್ನಾಟಕದ ಜಾರ್ಜ್ ಮುಂಬೈಗೆ ತೆರಳಿ ರಾಮಮನೋಹರ ಲೋಹಿಯಾ ಪ್ರಭಾವದಿಂದ ಸಮಾಜವಾದಿಯಾದವರು. ರೈಲ್ವೆ ಕಾರ್ಮಿಕರನ್ನು ಸಂಘಟಿಸಿ ಜನಸಮುದಾಯವನ್ನು ಆಕರ್ಷಿಸಿ ನಾಯಕರಾಗಿ ರೂಪುಗೊಂಡವರು. 1967ರಲ್ಲಿ ಬಾಂಬೆ ದಕ್ಷಿಣ ಕ್ಷೇತ್ರ ಸೇರಿದಂತೆ ಬಿಹಾರದ ಮುಜಪ್ಫರ್‌ಪುರ ಮತ್ತು ನಳಂದದಿಂದ ಒಟ್ಟು ಒಂಬತ್ತು ಸಲ ಲೋಕಸಭೆಗೆ ಮತ್ತು ಒಮ್ಮೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜಾರ್ಜ್ ಫರ್ನಾಂಡಿಸ್ ಒಕ್ಕೂಟ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿ, ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದವರು. ಅವರು ಯಾವ ರಾಜ್ಯಕ್ಕೆ ಸೇರಿದವರು, ಯಾವ ಧರ್ಮಕ್ಕೆ ಸೇರಿದವರು, ಯಾವ ಜಾತಿಗೆ ಸೇರಿದವರು ಎಂದು ಯಾರೂ ಕೇಳಲಿಲ್ಲ. ಅವರ ಗೆಲುವುಗಳ ಧಾರಾವಾಹಿಗೆ ಜನಪರ ಕ್ರಿಯಾಶೀಲ ವ್ಯಕ್ತಿತ್ವ ಕಾರಣವಾಗಿದ್ದರೆ, ರಾಷ್ಟ್ರಮಟ್ಟದ ರಾಜಕೀಯ ಲೆಕ್ಕಾಚಾರಗಳು ಬದಲಾಗಿದ್ದು ಸೋಲುಗಳಿಗೆ ಕಾರಣ ವಾಗಿತ್ತು. ಕರ್ನಾಟಕದ ಹೊರಗೆ ತಮ್ಮ ಸಂಘಟನಾ ಚಾತುರ್ಯ, ಕ್ರಿಯಾಶೀಲತೆ, ಕಾರ್ಯಕ್ಷಮತೆ, ದಕ್ಷತೆ, ಪ್ರಾಮಾಣಿಕತೆ, ಸರಳತೆಯಿಂದಲೇ ಜನಪ್ರಿಯ ನಾಯಕ ರಾಗಿದ್ದ ಜಾರ್ಜ್ ಫರ್ನಾಂಡಿಸ್ 1984ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದರೆ

ವಿಶ್ಲೇಷಣೆ: ಮತದಾರರ ಒಲವೇ ಗೆಲುವ ಚಂದಿರ

ಕರ್ನಾಟಕವೇನೂ ಕಣ್ಣೀರಿಡಲಿಲ್ಲ. ಅಂದಹಾಗೆ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಒಕ್ಕಲಿಗ ಪ್ರಾಬಲ್ಯದ ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರು ಅಂಬರೀಷ್ ನಿಧನದ ಅನುಕಂಪದ ಅಲೆಯಿಂದ ಮಾತ್ರ ಗೆದ್ದರೆಂದು ಹೇಳಲಾಗದು. ಅದು‌ ಕೂಡ ಬದಲಾವಣೆ ಬಯಸಿದ್ದ ಜಾತ್ಯತೀತ ನಿಲುವಿನ‌ ಗೆಲುವಾಗಿತ್ತು.

ನಿಜ ನಾಯಕನನ್ನು ಯಾವ ಮತಕ್ಷೇತ್ರವೂ ಕಡೆಗಣಿಸುವುದಿಲ್ಲ. ಆದರೆ ಕ್ಷೇತ್ರವನ್ನು ಕಡೆಗಣಿಸಿ ಜನರಿಂದ ದೂರವಾದ ಜನಪ್ರತಿನಿಧಿಯು ಅಧಿಕಾರ ರಾಜಕಾರಣದಲ್ಲಿ ದುರ್ಬಲನಾಗುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT