ಶನಿವಾರ, ಡಿಸೆಂಬರ್ 5, 2020
24 °C
ಇಂದು ವಿಶ್ವ ಮಕ್ಕಳ ದಿನಾಚರಣೆ: ಶಸ್ತ್ರಾಸ್ತ್ರ ಬಿಕ್ಕಟ್ಟುಗಳಲ್ಲಿ ನಲುಗುತ್ತಿರುವ ಮಕ್ಕಳು..

PV Web Exclusive | ನಾವು ಮಕ್ಕಳು ಸಾರ್‌, ಸೈನಿಕರಲ್ಲ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ವಿಶ್ವ ಮಕ್ಕಳ ದಿನಕ್ಕೆ ಯೂನಿಸೆಫ್‌ ಬಿಡುಗಡೆ ಮಾಡಿರುವ ಪೋಸ್ಟರ್

ಜಗತ್ತಿನ ಹಲವು ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಬಿಕ್ಕಟ್ಟುಗಳಲ್ಲಿ ನಲುಗುವವರ ಪೈಕಿ ಮಕ್ಕಳೂ ಇದ್ದಾರೆ ಎಂಬುದು ಬಹಳ ಮಂದಿಗೆ ನೆನಪಾಗುವುದಿಲ್ಲ. ಗಡಿ, ಧರ್ಮ, ಅಧಿಕಾರ ಕೇಂದ್ರಿತವಾದ ಸಂಘರ್ಷ ಮತ್ತು ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ಸೈನಿಕರಷ್ಟೇ ಸಾವು–ನೋವಿಗೆ ಈಡಾಗುವುದಿಲ್ಲ. ಅದು ಸಾಮಾನ್ಯ ಜನರ ಬದುಕನ್ನೂ ಬರ್ಬರಗೊಳಿಸುತ್ತದೆ. ಅವರ ಕನಸುಗಳಂತಿರುವ ಅಮಾಯಕ ಮಕ್ಕಳನ್ನೂ ಬಿಕ್ಕಟ್ಟಿನ ವಿಷಮುಳ್ಳುಗಳು ಚುಚ್ಚುತ್ತಲೇ ಇವೆ.

ಮಕ್ಕಳ ದಿನಾಚರಣೆ ಬಳಿಕ ಮತ್ತೆ ಯಾಕೆ ಮಕ್ಕಳ ಮಾತು ಎಂದು ನೀವು ಕೇಳಬಹುದು. ಆದರೆ ಇದು ಭಾರತಾಂಬೆಯ ಮಕ್ಕಳ ಮಾತಷ್ಟೇ ಅಲ್ಲ. ಭೂದೇವಿಯ ಮಡಿಲಲ್ಲಿರುವ ಎಲ್ಲ ಮಕ್ಕಳನ್ನು ಕುರಿತ ಮಾತು.

ಮಕ್ಕಳು ಎಲ್ಲಿದ್ದರೂ ಮಕ್ಕಳೇ. ಮಕ್ಕಳನ್ನು ಪ್ರೀತಿಸುವವರಿಗೆ ಎಲ್ಲ ದಿನವೂ ಮಕ್ಕಳ ದಿನವೇ. ಆದರೆ ಸಹಜ ಪ್ರೀತಿ ವಂಚಿತ ಮಕ್ಕಳೂ ಈ ಭೂಮಿ ಮೇಲಿದ್ದಾರೆ. ಅವರ ಬಗ್ಗೆಯೂ ನಾವು ಮಾತಾಡಲೇಬೇಕು.

ಜಗತ್ತಿನ ಹಲವು ರಾಷ್ಟ್ರಗಳ ನಡುವಿನ ಶಸ್ತ್ರಾಸ್ತ್ರ ಬಿಕ್ಕಟ್ಟುಗಳಲ್ಲಿ ನಲುಗುವವರ ಪೈಕಿ ಮಕ್ಕಳೂ ಇದ್ದಾರೆ ಎಂಬುದು ಬಹಳ ಮಂದಿಗೆ ನೆನಪಾಗುವುದಿಲ್ಲ.

ಗಡಿ, ಧರ್ಮ, ಅಧಿಕಾರ ಕೇಂದ್ರಿತವಾದ ಸಂಘರ್ಷ ಮತ್ತು ಬಿಕ್ಕಟ್ಟುಗಳ ಸಂದರ್ಭಗಳಲ್ಲಿ ಸೈನಿಕರಷ್ಟೇ ಸಾವು–ನೋವಿಗೆ ಈಡಾಗುವುದಿಲ್ಲ. ಅದು ಸಾಮಾನ್ಯ ಜನರ ಬದುಕನ್ನೂ ಬರ್ಬರಗೊಳಿಸುತ್ತದೆ. ಅವರ ಕನಸುಗಳಂತಿರುವ ಅಮಾಯಕ ಮಕ್ಕಳನ್ನೂ ಬಿಕ್ಕಟ್ಟಿನ ವಿಷಮುಳ್ಳುಗಳು ಚುಚ್ಚುತ್ತಲೇ ಇವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ, ಶಸ್ತ್ರಾಸ್ತ್ರ ಬಿಕ್ಕಟ್ಟುಗಳ ಸಂದರ್ಭದಲ್ಲಿ ಮಕ್ಕಳನ್ನೂ ಬಳಕೆ ಮಾಡಿಕೊಳ್ಳುವ ವಿರುದ್ಧ ರಾಷ್ಟ್ರಗಳು ಒಂದಾಗಿ ದನಿ ಎತ್ತಿದ ಬಳಿಕ, ವಿಶ್ವಸಂಸ್ಥೆಯ ರಕ್ಷಣಾ ಮಂಡಳಿಯ ಸ್ಪಷ್ಟ ಸೂಚನೆಗಳ ಅನ್ವಯ ಸನ್ನಿವೇಶ ಬದಲಾಗಿದೆ. ಸೈನ್ಯಗಳಿಗೆ ಮಕ್ಕಳನ್ನು ನಿಯೋಜಿಸುವ ಅನಿಷ್ಠ ಪದ್ಧತಿ ನಿಂತಿದೆ.

‘ಹಾಗೆಂದು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ನೆಮ್ಮದಿಯಾಗಿರುವಂತಿಲ್ಲ. ಬಿಕ್ಕಟ್ಟುಗಳಿಂದ ತೊಂದರೆಗೆ ಒಳಗಾಗುವ ಮಕ್ಕಳ ರಕ್ಷಣೆಯು ಇಂದಿಗೂ ಸವಾಲಾಗಿಯೇ ಉಳಿದಿದೆ’ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಸದ್ಯ ಇಂಥ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ಸುಮಾರು 25 ಕೋಟಿ ಮಕ್ಕಳಿದ್ದಾರೆ. ಅರಬ್‌ ಗಣರಾಜ್ಯವಾದ ಸಿರಿಯಾದಲ್ಲಿ 9 ವರ್ಷಗಳ ಸಂಘರ್ಷದ ಪರಿಣಾಮವಾಗಿ 4 ಲಕ್ಷ ಜನ ಮೃತಪಟ್ಟರು. 7 ಸಾವಿರ ಮಕ್ಕಳಲ್ಲಿ ಹಲವರು ಕೊಲ್ಲಲ್ಪಟ್ಟರು, ಹಲವರು ಶಾಶ್ವತ ಅಂಗವಿಕಲರಾದರು.

2019ರ ಮೊದಲ ಆರು ತಿಂಗಳಲ್ಲಿ ಆಫ್ಘನಿಸ್ತಾನದಲ್ಲಿ ಸತ್ತವರ ಮೂರನೇ ಒಂದು ಭಾಗದಷ್ಟು ಮಕ್ಕಳೇ ಇದ್ದರು. ಆ ಅವಧಿಯಲ್ಲಿ 327 ಮಂದಿ ಮೃತಪಟ್ಟರೆ, 880 ಮಂದಿ ಗಾಯಗೊಂಡಿದ್ದರು.

ಮೂರು ದಶಕದಿಂದ ತೀವ್ರತರವಾದ ಹವಾಮಾನ ಬದಲಾವಣೆ, ಹಿಂಸೆಯಿಂದ ನರಳುತ್ತಿರುವ ಸೊಮಾಲಿಯಾದಲ್ಲಿ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವವರು ಮಕ್ಕಳೇ. 2018ರಲ್ಲಿ ಅಲ್ಲಿ 5,200 ಮಕ್ಕಳು ಅತಿಯಾದ ಹಿಂಸೆಯಿಂದ ಬಾಧಿತರಾಗಿದ್ದಾರೆ. ಇದು ವರದಿಯಾದ ಪ್ರಕರಣಗಳ ಅಂಕಿ ಅಂಶ. ವರದಿಯ ವ್ಯಾಪ್ತಿಯಾಚೆ ಉಳಿದ ಮಕ್ಕಳು ಅದೆಷ್ಟೋ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

(ಮಕ್ಕಳ ಮೇಲಿನ ಅತಿಯಾದ ಹಿಂಸೆಗೆ ಕಾರಣವಾಗುವ ಹಕ್ಕುಗಳ ಉಲ್ಲಂಘನೆಗಳನ್ನು ವಿಶ್ವಸಂಸ್ಥೆಯು grave violations ಎಂದು ಕರೆದು ಆರು ಬಗೆಯ ಉಲ್ಲಂಘನೆಗಳ ಪಟ್ಟಿಯನ್ನೂ ರೂಪಿಸಿದೆ. 1. ಮಕ್ಕಳನ್ನು ಕೊಲ್ಲುವುದು,ಗಾಯಗೊಳಿಸುವುದು, 2.ಸೈನ್ಯಕ್ಕೆ ನಿಯೋಜಿಸುವುದು, 3. ಲೈಂಗಿಕ ದೌರ್ಜನ್ಯ ಎಸಗುವುದು, 4. ಅಪಹರಿಸುವುದು, 5. ಶಾಲೆ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸುವುದು, 6. ಆಹಾರ, ನೀರು ಮತ್ತು ಔಷಧ ಸಿಗದಂತೆ ಮಾಡುವುದು).

ಅಲ್ಲಿ 2019ರಲ್ಲಿ 30 ಲಕ್ಷಕ್ಕಿಂತ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದರು. ಲಕ್ಷಾಂತರ ಮಕ್ಕಳು ಅಪೌಷ್ಠಿಕತೆಯಿಂದ ಬಳಲಿದ್ದರು. ಶಸ್ತ್ರಾಸ್ತ್ರ ಬಿಕ್ಕಟ್ಟುಗಳ ಪರಿಣಾಮವು ಲಕ್ಷಾಂತರ ಮಕ್ಕಳನ್ನು ಅವರ  ಕುಟುಂಬಗಳಿಂದ ದೂರ ಎಸೆದಿದೆ. ಅನಾಥರನ್ನಾಗಿ ಮಾಡಿದೆ.

ನಿರಾಶ್ರಿತರ ಶಿಬಿರದೊಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಂತ್ರರಾಗಿ ಅಲೆದಾಡುವ ಇಂಥ ಮಕ್ಕಳೇ ಹೆಚ್ಚು ಕೊಲ್ಲಲ್ಪಡುತ್ತಾರೆ. ಗಾಯಗೊಳ್ಳುತ್ತಾರೆ. ಲೈಂಗಿಕ ದೌರ್ಜನ್ಯಕ್ಕೆ ಈಡಾಗುತ್ತಾರೆ. ಆಹಾರ, ನೀರು, ಔಷಧ ಸಿಗದೆ ಅಪೌಷ್ಟಿಕತೆ ಮತ್ತು ತೀವ್ರ ಅನಾರೋಗ್ಯದಿಂದ ಬಳಲುತ್ತಾರೆ.

ಇಂಥ ಸನ್ನಿವೇಶಗಳಲ್ಲಿ, ಸದಸ್ಯ ರಾಷ್ಟ್ರಗಳು ಮಕ್ಕಳ ಪರವಾಗಿ ನಿಲ್ಲಬೇಕು. ಅವರಿಗೆ ಬೇಕಾದ ರಕ್ಷಣೆ, ಆರೈಕೆಯನ್ನು ನೀಡಬೇಕು ಎಂದು ವಿಶ್ವಸಂಸ್ಥೆ ಪ್ರತಿಪಾದಿಸುತ್ತಿದೆ.

ಮಕ್ಕಳಿಗೇಕೆ ಹಿಂಸೆ?

ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಹಲವು ದಶಕಗಳಿಂದ ಪ್ರತಿಪಾದಿಸುತ್ತ ಬಂದಿದ್ದರೂ, ಇವತ್ತಿಗೂ ಪ್ರತಿ ವರ್ಷ 100 ಕೋಟಿ ಮಕ್ಕಳು ಒಂದಲ್ಲಾ ಒಂದು ಬಗೆಯ ಮಾನಸಿಕ, ದೈಹಿಕ ಅಥವಾ ಲೈಂಗಿಕ ಹಿಂಸೆಗೆ ಒಳಗಾಗುತ್ತಲೇ ಇದ್ದಾರೆ. ಈ ಹಿಂಸೆಗೆ ವಿದ್ಯೆ, ಸಂಸ್ಕೃತಿ, ಭಾಷೆ, ದೇಶದ ಹಂಗಿಲ್ಲ. ಎಲ್ಲ ಕಡೆಯೂ ಹಿಂಸೆ ವಿಜೃಂಭಿಸುತ್ತದೆ. ಸೈಬರ್‌ ಲೋಕದಲ್ಲೂ ಮಕ್ಕಳ ಮೇಲಿನ ಹಿಂಸೆ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ.

ಈ ಹಿಂಸೆಯ ಅರಿವಿರದ ಮಕ್ಕಳು ತಮ್ಮನ್ನು ಕಾಡುವ ಆತಂಕ, ಭಯ, ಏಕಾಕಿತನದ ಭಾವನೆಗಳ ಕಾರಣಕ್ಕೆ, ಹತ್ತಿರದವರಿಂದಲೇ ಶೋಷಣೆಗೆ ಒಳಗಾಗುವ ಸಂದರ್ಭಗಳಲ್ಲಿ ಅದನ್ನು ಯಾರಿಗೆ ಹೇಳಬೇಕು? ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೇ ಈ ಹಿಂಸೆಯ ಸುಳಿಯಲ್ಲಿ ಸಿಲುಕುತ್ತಾರೆ.

ಯೂನಿಸೆಫ್‌ ಪ್ರಕಾರ, ಮಕ್ಕಳ ಮೇಲಿನ ಹಿಂಸೆ, ಅವರ ಹಕ್ಕುಗಳ ಉಲ್ಲಂಘನೆಯನ್ನು ಈಗಿನಿಂದಲೇ ತಡೆಯದೇ ಹೋದರೆ, 2030ರ ವೇಳೆಗೆ, 16.70 ಕೋಟಿ ಮಕ್ಕಳು ತೀವ್ರ ಬಡತನದಲ್ಲಿರಬೇಕಾಗುತ್ತದೆ. 5 ವರ್ಷದೊಳಗಿನ 5.20 ಕೋಟಿ ಮಕ್ಕಳು ಅಕಾಲ ಸಾವಿಗೀಡಾಗುತ್ತಾರೆ. ಪ್ರಾಥಮಿಕ ಶಾಲೆಗೆ ಸೇರಬೇಕಾದ ವಯಸ್ಸಿನ 6 ಕೋಟಿ ಮಕ್ಕಳು ಶಾಲೆಯಿಂದ ಹೊರಗೇ ಉಳಿಯುತ್ತಾರೆ.

ಮಕ್ಕಳ ಅಮೂಲ್ಯ ಬಾಲ್ಯ, ಆರೋಗ್ಯ, ಆಯುಷ್ಯವನ್ನು ಕಸಿದುಕೊಳ್ಳುವ ಇಂಥ ಹಿಂಸೆಗಳನ್ನು ತಡೆಯಬೇಕೆಂಬ ಪ್ರತಿಪಾದನೆಯ ನಡುವೆಯೇ ಮತ್ತೊಂದು ಜಾಗತಿಕ ಮಕ್ಕಳ ದಿನ ಬಂದಿದೆ; ಮಕ್ಕಳನ್ನು ಪ್ರೀತಿಸುವವರೆಲ್ಲರೂ ಅವರ ಹಕ್ಕುಗಳನ್ನೂ ಪ್ರೀತಿಸಬೇಕೆಂಬ ಪಾಠದೊಂದಿಗೆ...

(ಪೂರಕ ಮಾಹಿತಿ: ವಿಶ್ವಸಂಸ್ಥೆ, ಯೂನಿಸೆಫ್‌)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು