ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯ ತಾಯಿಬೇರು ಪೋಷಿಸುವುದೆಂತು?

ಬೇಸಾಯ ಹಸನಾಗಿಸುವ ನೆಲ
Last Updated 4 ಫೆಬ್ರುವರಿ 2021, 20:28 IST
ಅಕ್ಷರ ಗಾತ್ರ

ಕೇಂದ್ರ ಮುಂಗಡಪತ್ರ ಮಂಡನೆಯಾದ ಮರುದಿನ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಅರೆಮಲೆನಾಡು ಪ್ರದೇಶದ ರೈತರೊಂದಿಗೆ ಸಮಾಲೋಚಿಸುವ ಸಂದರ್ಭ ಬಂತು. ಊರಿನ ಒಣಗಿರುವ ಕೆರೆ ಹಾಗೂ ಶುಂಠಿ ಬೆಳೆದು ಮಣ್ಣಿನಸಾರ ಕಳೆದುಕೊಂಡ ಚಿಂತೆಯಲ್ಲಿದ್ದ ಆ ರೈತರು, ಈ ಬಜೆಟ್ಟಿನಿಂದ ತಮಗೆ ಸಹಾಯವಾದೀತೆಂಬ ನಿರೀಕ್ಷೆಯನ್ನೇ ತೋರಲಿಲ್ಲ. ಕೃಷಿಕ್ಷೇತ್ರವನ್ನು ಬಜೆಟ್ ನಿರ್ವಹಿಸಿದ ಬಗೆಯನ್ನು ರೈತರ ನೆಲೆಯಲ್ಲಿ ಹೇಗೆ ಅರ್ಥೈಸಿ ಕೊಳ್ಳುವುದೆಂದು ಗೊಂದಲವೇ ಮೂಡಿತಾಗ.

ರೈತರ ದೃಷ್ಟಿಕೋನ ಮುಖ್ಯವೇಕೆಂದರೆ, ದೇಶದ ಒಟ್ಟೂ ಆರ್ಥಿಕ ಉತ್ಪಾದನೆಯಲ್ಲಿ ಕೃಷಿಯ ಪಾಲು ಶೇ 20ರಷ್ಟಾದರೂ ಅದು ಶೇ 70ರಷ್ಟು ಜನರ ಜೀವನೋಪಾಯವಾಗಿದೆ. ಈ ಕ್ಷೇತ್ರವು ಬೆಳವಣಿಗೆ ಸಾಧಿಸಿದರೆ ಮಾತ್ರ, ರೈತರ ಆದಾಯವನ್ನು ದುಪ್ಪಟ್ಟಾಗಿಸುವ ಮತ್ತು ಕೃಷಿ ಉತ್ಪಾದನೆ ಹೆಚ್ಚಿಸುವ ಕನಸು ನನಸಾಗಲು ಸಾಧ್ಯ. ಆದರೆ, ಒಟ್ಟೂ ಬೆಳೆ ವೈವಿಧ್ಯಗಳ ವಾರ್ಷಿಕ ಅಭಿವೃದ್ಧಿ ದರ ಸದ್ಯ ಶೇ 3 ಅನ್ನೂ ದಾಟುತ್ತಿಲ್ಲ. ಕೃಷಿ ಉತ್ಪಾದನೆಯ ಅಂಗಗಳಾದ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಯ ಬೆಳವಣಿಗೆ ದರದಲ್ಲೂ ಹೆಚ್ಚಳವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಂಪನ್ಮೂಲ ವ್ಯಯನೀತಿಯನ್ನು ವಿಶ್ಲೇಷಿಸಬೇಕಿದೆ. ಮೂಲಭೂತ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅದರಲ್ಲಿ ನ್ಯೂನತೆಗಳಿದ್ದರೆ, ರಾಜ್ಯ ಸರ್ಕಾರವಾದರೂ ತನ್ನ ಬಜೆಟ್ಟಿನಲ್ಲಿ ಅವುಗಳನ್ನು ನಿರ್ವಹಿಸುವಂತೆ ಹಕ್ಕೊತ್ತಾಯ ಮಾಡಬೇಕಾದ ಅವಶ್ಯಕತೆಯೂ ಇದೆ.

ಮಣ್ಣಿನ ಸಾರ, ಹವಾಮಾನ, ನೀರಿನ ಲಭ್ಯತೆ, ಬೆಳೆಯ ಆಯ್ಕೆ, ಬೇಸಾಯಕ್ರಮ, ರೈತರ ಕೌಶಲ- ಇವೆಲ್ಲವುಗಳ ಭಿನ್ನತೆಯಿಂದಾಗಿ, ಪ್ರದೇಶದಿಂದ ಪ್ರದೇಶಕ್ಕೆ ಕೃಷಿಯ ಸ್ವರೂಪವು ಬದಲಾಗುತ್ತದೆ. ಇವನ್ನೆಲ್ಲ ತಳಮಟ್ಟದಲ್ಲಿ ಗಮನಿಸಿ, ಸೂಕ್ತ ನೀತಿಗಳನ್ನು ಕೈಗೊಳ್ಳಲು ಅನುಕೂಲವಾಗಲೆಂದೇ ಕೃಷಿ ವಿಷಯವನ್ನು ಸಂವಿಧಾನವು ರಾಜ್ಯಪಟ್ಟಿಯಲ್ಲಿ ಇರಿಸಿದೆ. ಇವಕ್ಕೂ ಮೀರಿದ, ಕೃಷಿ ಕ್ಷೇತ್ರವು ಎದುರಿಸುವ ಸಾಮೂಹಿಕ ಸವಾಲುಗಳನ್ನು ಕೇಂದ್ರ ಸರ್ಕಾರವು ನಿರ್ವಹಿಸಬೇಕೆನ್ನುವುದು ಆಶಯ. ಈ ದಿಸೆಯಲ್ಲಿ ಅದು ಮುಖ್ಯವಾಗಿ ಐದು ಬಗೆಯಲ್ಲಿ ಹಣವನ್ನು ತೊಡಗಿಸುತ್ತಿದೆ. ಒಂದು, ಹೊಲದ ಅವಶ್ಯ ಒಳಸುರಿಗಳಾದ ಬೀಜ, ಗೊಬ್ಬರ, ವಿದ್ಯುತ್, ಆರ್ಥಿಕ ಸಂಪನ್ಮೂಲ ಇತ್ಯಾದಿಗಳಿಗೆ ಸಹಾಯಧನ ಹಾಗೂ ಸುಲಭಸಾಲದ ಸಹಾಯಹಸ್ತ ಚಾಚುವುದು. ಎರಡು, ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವುದು. ಈಗ ಚರ್ಚೆಯಲ್ಲಿರುವ ಬೆಂಬಲ ಬೆಲೆಯು ಅಂಥ ಒಂದು ಪಾರಂಪರಿಕ ಮಾರ್ಗ.

ಮೂರು, ಬೆಳೆಯುವ ಹಾಗೂ ಕೊಳ್ಳುವ ಎಲ್ಲರಿಗೂ ನ್ಯಾಯಯುತ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು. ನಾಲ್ಕು, ಆಂತರಿಕ ಬೇಡಿಕೆಯನ್ನು ಪೂರೈಸಿದ ನಂತರ, ಕೃಷಿ ಉತ್ಪನ್ನಗಳು ರಫ್ತಾಗಿ ವಿದೇಶಿ ವಿನಿಮಯ ಗಳಿಸಲು ತೊಡಗುವಂಥ ಅವಕಾಶ ಸೃಷ್ಟಿಸುವುದು. ಕೊನೆಯದು, ಸದಾ ಅವಶ್ಯವಿರುವ ಕೃಷಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲ ಒದಗಿಸುವ ಕೃಷಿಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಹಮ್ಮಿಕೊಳ್ಳುವುದು.

ರೈತರ ಪ್ರತಿಭಟನೆಯೇ ಸುದ್ದಿಕೇಂದ್ರವಾಗಿರುವ ಈ ಸಂದರ್ಭದಲ್ಲಿ, ಮುಂಗಡಪತ್ರದ ವಿಶ್ಲೇಷಣೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಸಾಧ್ಯತೆಯೇ ಹೆಚ್ಚು. ಈ ಒತ್ತಡಕ್ಕೆ ಮಣಿಯದೆ ಗಮನಿಸಿದರೆ, ಮೇಲೆ ಚರ್ಚಿಸಿದ ಎಲ್ಲ ಮಜಲುಗಳಲ್ಲಿ ಹಣ ವಿನಿಯೋಗಿಸಲು ಪ್ರಸ್ತಾಪಿಸಿರುವುದು ಗೋಚರಿಸುತ್ತದೆ. ಈಗ ಜಾರಿಯಲ್ಲಿರುವ ವಿವಿಧ ಒಳಸುರಿ ಸಹಾಯಧನಗಳ ಜೊತೆಗೆ, ನಬಾರ್ಡ್ ಮೂಲಕ ನೀಡುವ ಸುಲಭಸಾಲದ ಪ್ರಮಾಣವನ್ನೂ ಹಿಗ್ಗಿಸಲಾಗಿದೆ. ನೈಸರ್ಗಿಕ ವಿಕೋಪಗಳ ನಷ್ಟವನ್ನು ಭರಿಸುವ ವಿಮಾ ಯೋಜನೆಯನ್ನು ಸರಳಗೊಳಿಸಲಾಗುತ್ತಿದೆ. ಬಂಗಾರ, ಪೆಟ್ರೋಲಿಯಂ ಉತ್ಪನ್ನ, ಆಲ್ಕೊಹಾಲ್ ಇತ್ಯಾದಿಗಳಿಗೆ ಪ್ರತ್ಯೇಕ ಸುಂಕ ವಿಧಿಸಿ, ಆ ಹಣವನ್ನು ಎ.ಪಿ.ಎಂ.ಸಿ.ಗಳ ಆಧುನೀಕರಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಹುಟ್ಟುವಳಿ ಸಂಗ್ರಹಣೆ–ಸಾಗಣೆಯ ಸೌಕರ್ಯವೃದ್ಧಿಗೆ ಬಳಸಲು ಹೊಸ ‘ಕೃಷಿ- ಸೆಸ್’ ಯೋಜನೆ ಜಾರಿ ಮಾಡಲಾಗುತ್ತಿದೆ. ರೈತರಿಗೆ ಕನಿಷ್ಠ ಹಣಕಾಸಿನ ನೆರವನ್ನು ನೇರವಾಗಿ ಒದಗಿಸುವ ‘ಕಿಸಾನ್ ಸಮ್ಮಾನನಿಧಿ’ ಯೋಜನೆಯಂತೂ ಮುಂದುವರಿದಿದೆ. ಆ ಮಟ್ಟಿಗೆ, ಕೃಷಿ ಕ್ಷೇತ್ರದ ಆದ್ಯತೆಗಳನ್ನು ಗಮನಿಸಲಾಗಿದೆ ಎಂದು ಹೇಳಬಹುದು. ಆದರೆ, ಎರಡು-ಮೂರು ದಶಕಗಳಿಂದ ಸರ್ಕಾರಗಳು ನಿರ್ವಹಿಸುವಲ್ಲಿ ಸೋತಿರುವ ಕೃಷಿಯ ಮೂಲಭೂತ ಆಯಾಮವೊಂದನ್ನು, ಈ ವರ್ಷವೂ ಸ್ಪರ್ಶಿಸದಿರುವುದು ವಿಷಾದದ ವಿಷಯ. ಅದುವೇ, ಸುಸ್ಥಿರ ಕೃಷಿಯ ಮೂಲಾಧಾರವಾದ ನೆಲ–ಜಲಮೂಲಗಳ ಗುಣಮಟ್ಟದ ನಿರ್ವಹಣೆ.

ಮಣ್ಣಿನ ಫಲವತ್ತತೆ ಹಾಗೂ ನೀರಿನ ಆಕರಗಳನ್ನು ಕಾಪಾಡಿಕೊಳ್ಳುವುದು, ಹೈನುಗಾರಿಕೆಗೆ ಹಸಿರುಮೇವು ಪೂರೈಸುವುದು, ಒಳನಾಡು ಹಾಗೂ ಸಮುದ್ರದ ಮೀನುಗಾರಿಕೆ ಸುಸ್ಥಿರವಾಗಿರಲು ನೀರಿನ ಗುಣಮಟ್ಟ ಕಾಪಾಡಿಕೊಳ್ಳುವುದು- ಇವೆಲ್ಲ ಕೃಷಿ ಉತ್ಪಾದನೆಯು ನಿರಂತರವಾಗಿರಲು ಅಗತ್ಯವಿರುವ ಮೂಲಭೂತ ಅಂಶಗಳು. ಆದರೆ, ರಾಜ್ಯದಲ್ಲಿ ನೈಸರ್ಗಿಕ ಸಂಪತ್ತಿನ ಈ ನೆಲೆಗಟ್ಟೇ ಶಿಥಿಲವಾಗುತ್ತಿದೆ. ಅವೈಜ್ಞಾನಿಕ ಕೃಷಿ ವಿಸ್ತರಣೆ ಹಾಗೂ ಕೃತಕ ರಾಸಾಯನಿಕ ಒಳಸುರಿಗಳ ಅತಿಬಳಕೆಯು ಭೂಫಲವತ್ತತೆಯನ್ನು ನಾಶಪಡಿಸುತ್ತಿವೆ. ಮಿತಿಮೀರಿದ ಅಂತರ್ಜಲ ಬಳಕೆ, ಕೆರೆಗಳ ಅತಿಕ್ರಮಣ ಹಾಗೂ ಹೂಳು ತುಂಬುವಿಕೆ, ನದಿ-ತೊರೆಗಳ ಬತ್ತುವಿಕೆ ಇತ್ಯಾದಿಗಳಿಂದಾಗಿ ಹಲವೆಡೆ ಕನಿಷ್ಠ ನೀರಾವರಿಯೂ ಸಾಧ್ಯವಾಗುತ್ತಿಲ್ಲ. ಗೋಮಾಳ ನಾಶವಾಗಿ, ಹಸಿರುಮೇವು ಇಲ್ಲದಾಗಿ, ಅಮೂಲ್ಯ ಉಪ ಕಸುಬಾಗಿದ್ದ ಹೈನುಗಾರಿಕೆಯನ್ನು ಕೃಷಿಕರು ಕೈಬಿಡುತ್ತಿದ್ದಾರೆ. ನದಿ-ತೊರೆ, ಕೆರೆಗಳ ಮಾಲಿನ್ಯದಿಂದಾಗಿ, ಒಳನಾಡು ಮೀನುಗಾರಿಕೆ ಇಳುವರಿಯು ಕುಸಿಯುತ್ತಿದೆ. ಮಲೆನಾಡಿನ ನದಿಗಳು ಮಳೆಗಾಲದ ನಂತರ ಕನಿಷ್ಠ ಪ್ರಮಾಣದ ನೀರು ಹಾಗೂ ಲವಣಾಂಶಗಳನ್ನು ಸಮುದ್ರಕ್ಕೊಯ್ಯಲು ವಿಫಲವಾಗುತ್ತಿರುವುದರಿಂದ, ಸಮುದ್ರ ತೀರದಲ್ಲಿ ಮೀನುಸಂಕುಲಗಳ ವಂಶಾಭಿವೃದ್ಧಿಯೇ ಕುಸಿಯುತ್ತಿದೆ. ರಾಜ್ಯದ ಸಮುದ್ರದಲ್ಲೂ ಮತ್ಸ್ಯಕ್ಷಾಮ ತಲೆದೋರುತ್ತಿರುವುದು ಇದಕ್ಕಾಗಿ!

ಕೃಷಿಯ ತಳಹದಿಯಾದ ಈ ಎಲ್ಲ ನೈಸರ್ಗಿಕ ಸಂಪತ್ತಿನ ನಿರ್ವಹಣೆಗೆ, ಕೃಷಿ ಆಯವ್ಯಯ ನೀತಿಯು ಪ್ರಯತ್ನಿಸಬೇಕಿತ್ತು. ಆದರೆ, ಈ ಮಾರ್ಗೋಪಾಯಗಳನ್ನು ಜಾರಿಗೆ ತರುವಲ್ಲಿ ಸರ್ಕಾರಗಳು ಸೋಲುತ್ತಿರುವುದು, ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಬೇರುಗಳನ್ನೇ ಪೋಷಿಸದೆ, ಗಿಡವೊಂದು ಫಸಲು ನೀಡೀತೇ?

ಕೇಂದ್ರ ಮುಂಗಡಪತ್ರದ ಈ ಮಿತಿಯನ್ನು, ಮುಂಬರುವ ರಾಜ್ಯ ಆಯವ್ಯಯದಲ್ಲಾದರೂ ಸರಿಪಡಿಸಬೇಕಿದೆ. ಕೃಷಿ-ಅರಣ್ಯ ಕಾರ್ಯಕ್ರಮ, ಕೃಷಿ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿಸುವುದು, ಅಂತರ್ಜಲ ಮರುಪೂರಣ, ಜಲಾನಯನ ಅಭಿವೃದ್ಧಿಯಾಧಾರಿತ ನೀರಿನ ಸಂರಕ್ಷಣೆ ಹಾಗೂ ಬಳಕೆ- ಇವನ್ನೆಲ್ಲ ಉತ್ತೇಜಿಸಬೇಕಿದೆ. ನೀರಿನ ಲಭ್ಯತೆಯಿರದೆ ಸೊರಗುತ್ತಿರುವ ಹನಿ ನೀರಾವರಿ ಯೋಜನೆ, ಜನಸಹಭಾಗಿತ್ವವಿಲ್ಲದೆ ಸೋಲುತ್ತಿರುವ ಬಿದಿರು ಬೇಸಾಯದ ‘ಬ್ಯಾಂಬೂ ಮಿಶನ್’ ಯೋಜನೆ, ಜೇನುಸಾಕಣೆ ಅವಕಾಶಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ಗೋಮಾಳ ಹಾಗೂ ಗ್ರಾಮೀಣ ಕೆರೆಗಳ ರಕ್ಷಣೆಯು ಕೃಷಿಗೆ ಬೇಕಿರುವ ಮೂಲಭೂತ ಸೌಕರ್ಯದ ನಿರ್ಮಾಣವೆಂಬುದನ್ನು ಸರ್ಕಾರ ಒಪ್ಪಬೇಕಿದೆ. ಸಮುದ್ರಕ್ಕೆ ಕನಿಷ್ಠ ನೀರನ್ನಾದರೂ ಸಾಗಿಸುವಷ್ಟು ಮಲೆನಾಡಿನ ನದಿಗಳು ಹಾಗೂ ಕರಾವಳಿಯ ತೊರೆ, ಅಳಿವೆ, ಹಿನ್ನೀರು ಪ್ರದೇಶಗಳನ್ನು ನಿರ್ವಹಿಸಬೇಕಿದೆ. ಇವು ಸಾಧ್ಯವಾದರೆ ಮಾತ್ರ, ಕೃಷಿ ಇಳುವರಿಯು ನಿರಂತರವಾಗಿರಲು ಸಾಧ್ಯವಾದೀತು.

ಎರಡೂವರೆ ದಶಕಗಳ ಹಿಂದೆ ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯಲ್ಲಿ ನಾನು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಲೇ, ನೈಸರ್ಗಿಕ ಸಂಪತ್ತಿನ ಮೌಲ್ಯಮಾಪನ ಹಾಗೂ ಸೂಕ್ತ ನಿರ್ವಹಣೆಯು ಕೃಷಿನೀತಿಯ ಅಂತಃಸತ್ವವಾಗಬೇಕೆಂದು, ಸಂಸ್ಥೆಯ ಮುಖ್ಯಸ್ಥರಾಗಿದ್ದ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಆಗ್ರಹಿಸುತ್ತಿದ್ದುದು ನೆನಪಾಗುತ್ತಿದೆ. ಕಾಡು, ಗೋಮಾಳ, ನದಿ, ಕೆರೆ, ಅಳಿವೆ, ಸಮುದ್ರ, ಮಳೆಚಕ್ರ- ಇವನ್ನೆಲ್ಲ ಪ್ರತ್ಯೇಕಿಸಿ ಕೃಷಿಕ್ಷೇತ್ರವನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಆ ಕಾಣ್ಕೆ ಇನ್ನೂ ಜಾರಿಯಾಗಬೇಕಾಗಿದೆ.

ರಾಜ್ಯ ಸರ್ಕಾರದ ಮುಂಬರುವ ಮುಂಗಡಪತ್ರವಾದರೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಡುವ ಜರೂರತ್ತಿದೆ. ಮುಂಡಗೋಡಿನ ರೈತರೂ ಸೇರಿದಂತೆ, ನಾಡಿನ ಕೋಟ್ಯಂತರ ಕೃಷಿಕರ ಮೂಲಭೂತ ಸಮಸ್ಯೆಗಳಿಗೆ ಆಗ ಪರಿಹಾರ ದೊರಕತೊಡಗೀತು; ಸರ್ಕಾರದ ಯೋಜನೆಗಳ ಕುರಿತು ರೈತರ ವಿಶ್ವಾಸವೂ ಹೆಚ್ಚೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT